ವೃತ್ತಿಯಲ್ಲಿ ನಾನು ಬೇಂಕ್ ಸ್ಟಾಫು. ಆದರೂ ಹುಡುಗು ಪ್ರಾಯದಿಂದಲೂ ಕಥೆ, ಕಾದಂಬರಿ, ಹಾಸ್ಯ ಅಥವಾ ಚುಟುಕು ಗಳನ್ನು ಓದುವ ಹವ್ಯಾಸವಿತ್ತು. ನಮ್ಮ ಅಮ್ಮ ಮತ್ತು ಸುಬ್ರಾಯಣ್ಣನ ಪ್ರೋತ್ಸಾಹದಿಂದ ಕತೆ ಓದುವ ಉಮೇದು. ಚಿಕ್ಕವನಿರುವಾಗ ಆಗ ಪ್ರಸಿದ್ಧಿ ಹೊಂದಿದ್ದ 'ಚಂದಮಾಮ' ಓದುವುದಿತ್ತು. ಹೈಸ್ಕೂಲು ಮುಟ್ಟಿದಾಗ ಊರಿನ ಸಮಾಜ ಮಂದಿರದ ಬಳಿಯಿದ್ದ ಲೈಬ್ರೇರಿಯಲ್ಲಿನ ಬುಕ್ಕು ಓದುವುದು ಸ್ಟಾರ್ಟ್ ಆಯಿತು. ರಾಮಣ್ಣ ಹೆಬ್ಬಾರ ಮಾಸ್ಟ್ರು ಅದನ್ನು ನೋಡಿ ಕೊಳ್ಳೂದಿತ್ತು.
ಸಮಾಜಮಂದಿರದ ಹೊಯಿಗೆಯಲ್ಲಿ ಕಬಡ್ಡಿ , ಗುಡುಗುಡೇ ಪಕ್ಷಿ ಅದು ಇದು ಆಡುವುದು, ಕಬಡ್ಡಿಯಲ್ಲಿ ನಾಗಪ್ಪ ಹೆಗ್ಡೆ , ವಿವೇಕಣ್ಣ ಇವರೆಲ್ಲ ಹೀರೋಗಳು, ನಮ್ಮಂತಾ ಚಿಕಣಿಗಳನ್ನೆಲ್ಲ ಎಳೆದೆಳೆದು ಹೊರಹಾಕ್ತಿದ್ದರು. ಇವರ ಕೈಲಿ ಆಗುದಲ್ಲ ಹೋಗೂದಲ್ಲ ಎಂದು ಮೆಲ್ಲನೇ ಲೈಬ್ರೇರಿಯತ್ತ ಕಾಲುಹಾಕಿ ರಾಮಣ ಹೆಬ್ಬಾರ ಮಾಸ್ಟ್ರ ಕೃಪಾಕಟಾಕ್ಷದ ನಿರೀಕ್ಷೆ ಮಾಡುತ್ತಿದ್ದೆವು.
'ಹೌದನಾ, ಮೂರು ದಿನದ ಹಿಂದೆ ತಕೊಂಡು ಹೋದ ಪುಸ್ತಕ ವಾಪಾಸು ಬರಲಿಲ್ಲ , ಈಗ ಪುನಃ ಬಂದಿದೀಯ! ಅವನ ಧೈರ್ಯ ನೋಡು! ನನ್ನ ಬೆತ್ತ ಎಲ್ಲಿ ಹೋಯ್ತು? ಪುಸ್ತಕ ಅಂತೆ ಪುಸ್ತಕ!' ಎಂದು ಗುರುಕಾಯಿಸಿದರೂ ಕೊನೆಗೆ ನಾವು ಕೇಳಿದ ಪುಸ್ತಕ ಕೊಡುತ್ತಿದ್ದರು. ನಾನು ಮತ್ತಿತರ ಒಂದಿಬ್ಬರು ಮಕ್ಕಳ ಮೇಲೆ ಅವರಿಗೆ ವಿಶೇಷ ಪ್ರೀತಿ. ಆ ಸಮಯದಲ್ಲಿ ಹೆಚ್ಚಿನ ಪುಸ್ತಕಗಳು ಲಭ್ಯವಿರುತ್ತಿದ್ದಿಲ್ಲ. ಊರೂ ಸಣ್ಣದು, ಅನುದಾನವೂ ಕಮ್ಮಿ, ಆದರೂ ಅವರಿಗೆ ಸ್ವತಃ ಓದುವ ಹವ್ಯಾಸ ವಿದ್ದುದರಿಂದ ತಕ್ಕಮಟ್ಟಿನ ಸ್ಟಾಕು ಇರುತ್ತಿತ್ತು. 'ಪತ್ತೇದಾರ ಪುರುಷೋತ್ತಮನ ಸಾಹಸಗಳು' ನಮ್ಮ ಆಗಿನ ಪ್ರಮುಖ ಆಕರ್ಷಣೆ. 'ಚೆನ್ನಾಗಿ ಓದ್ಬೇಕು ಮಗಾ' ಎಂದವರು ಆಗಾಗ ಮೋಕೆಯಿಂದ ಬೆನ್ನು ತಟ್ಟುತ್ತಿದ್ದುದು ನೆನಪಿದೆ....
ಈ ನೊವೆಲ್ಸ್ ಓದುವ ಹವ್ಯಾಸದಿಂದ ಅನೇಕರು ಗೆಳೆಯರಾದರು, ಹೃದಯಕ್ಕೆ ಹತ್ತಿರವಾದರು. ಗೆಳೆಯ ದಾಮೋದರ ನಾಯಕರು (ಹರಿಮಾಮ್ ಮಗ) ದೆಹಲಿಯಿಂದ ಬಂದಾಗ 'The Godfather' ತಂದು ಕೊಟ್ಟರು. 'ನೋಡು ಇವತ್ತು ಶುಕ್ರವಾರ, ನಾಡದ್ದು ಮಂಗಳವಾರ ನಮ್ಮದು ಡೆಲ್ಲಿ ಟಿಕೇಟು, ಆದ್ರಿಂದ ಸೋಮವಾರ ಪುಸ್ತಕ ವಾಪಸು ಬೇಕೇ ಬೇಕು, ನಂದು ಪೂರ್ತಿ ಓದಿ ಆಗಲಿಲ್ಲ , ನಾನು ರೈಲಲ್ಲಿ ಓದ್ತೇನೆ.'
'ಇಷ್ಟು ದಪ್ಪದ ಬುಕ್ಕು ಓದಲು ನನಗೆ ಒಂದು ತಿಂಗಳು ಬೇಕು!'
'ನೀನು ಒಮ್ಮೆ ಓದಲು ಸುರು ಮಾಡು, ಊಟ ತಿಂಡಿ ಮರೆತು ಹೋಗ್ತದೆ, ಅಷ್ಟು ಚೆನ್ನಾಗಿದೆ!'
ಮೊದಲ ಸಲ ಒಂದು ಇಂಗ್ಲೀಷ್ ಥ್ರಿಲರನ್ನು ನಾನು ಅವರಂದಂತೆ ಊಟ ತಿಂಡಿ ಮರೆತು ಓದಿದ್ದು-The Godfather' ಪೆರಿಮೇಸನ್ ನ ಸಸ್ಪೆನ್ಸಿಗಿಂತ ಹೆಚ್ಚಿನ ಅದ್ಭುತ ನೋವೆಲ್ಸ್ ಗಳ ಪರಿಚಯ ಗಾಡ್ ಫಾದರ್ ಕಾದಂಬರಿಯಿಂದಾಯಿತು. ನಾಯಕರು ಮೊದಲೇ ನಮ್ಮ ಬಂಧುಗಳು. ಈ ಪುಸ್ತಕದ ನಿಮಿತ್ತ ಇನ್ನೂ ಹತ್ತಿರವಾದರು..
ಹೆಬ್ರಿ ತಾಲೋಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನ ತಾ.22-02-2019ರಲ್ಲಿ ಆತ್ಮೀಯರಾದ ಶ್ರೀ ಬಿ.ಸಿ.ರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೊಂದು ಸಂಭ್ರಮದ ಘಳಿಗೆ. ಕೆಲವೊಂದು ಅಗತ್ಯದ ಕೆಲಸದ ಕಾರಣ ಸಮ್ಮೇಳನದ ಸಭಾಂಗಣಕ್ಕೆ ತಲಪುವಾಗ ಅಧ್ಯಕ್ಷರ ಭಾಷಣ ನಡೆಯುತ್ತಿತ್ತು. ಒಂದೆರಡು ಫೋಟೋ ತೆಗೆಯೋಣ ಎಂದು ಎದುರಿನ ಸಾಲಿನತ್ತ ಹೊರಟೆ. ಮೂರನೇ ಸಾಲಿನಲ್ಲಿ ಆತ್ಮೀಯರಾದ ಬೆಳಗೋಡು ರಮೇಶ ಭಟ್ ಕೂತಿದ್ದರು. ನನ್ನ ಆನಂದಕ್ಕೆ ಪಾರವೇ ಇಲ್ಲ. ಶ್ರೀಯುತರು ಪ್ರಖ್ಯಾತ ಸಾಹಿತಿಗಳು, ನಮ್ಮ ಬೇಂಕಿನ ಎಕ್ಸಿಕ್ಯುಟಿವ್. ಕೆಲವು ವರ್ಷಗಳ ಹಿಂದೆ ಇವರದೊಂದು ಕಥೆಯನ್ನು ವಾರಪತ್ರಿಕೆಯೊಂದರಲ್ಲಿ ಓದಿದ್ದೆ. ಅರೇ!! ಎಷ್ಟು ಚಂದದ ಕಥೆ ಬರೀತಾರೆ! ಬೇಂಕಿನ ಸ್ಟಾಫು ಅಂದರೆ ಸಾಮಾನ್ಯವಾಗಿ ಡೆಬಿಟು, ಕ್ರೆಡಿಟು, ಸ್ಟೇಟಮೆಂಟು, ಟಾರ್ಗೇಟು ಅಂತ ಮಂಡೆ ಹನ್ನೆರಡಾಣೆ ಮಾಡಿಕೊಂಡಿರುವವರೇ ಜಾಸ್ತಿ. ಅದರಲ್ಲೂ ಉನ್ನತ ಪೊಜಿ಼ಷನ್ ನಲ್ಲಿ ಇರುವವರ ಸಮಸ್ಯೆ ಇನ್ನೂ ಹೆಚ್ಚಿನದು... ಹಾಗಿರುವ ಕಾಲದಲ್ಲಿ ಇಷ್ಟೊಂದು ಚಂದ ಕಥೆ ಬರೀತಾರಲ್ಲ! ಆಗಬಹುದು ಇವರು! ಇವರ ದೋಸ್ತಿ ಮಾಡಬೇಕು ಎಂಬ ಬಯಕೆ ಹಿಂದೇನೇ ಹುಟ್ಟಿತ್ತು.
ನನಗೆ ಆಶೆ ಹುಟ್ಟಿತು ಅಂದರೆ, ಹಾಗೆಲ್ಲ ಬೇಕಾಬಿಟ್ಟಿ ಒಬ್ಬರಿಗೆ ಕರೆ ಮಾಡಿ ತೊಂದರೆ ಕೊಡಲಾದೀತೇ?... ಈಗಿನ ಸೋಷಿಯಲ್ ಮೀಡಿಯಾದ ಉತ್ತಮ ಉಪಕಾರವೆಂದರೆ ಸದಭಿಪ್ರಾಯದ ಗೆಳೆಯರ ಸಂಪಾದನೆ. ಫೇಸ್ ಬುಕ್ಕಲ್ಲಿ ಇವರ ಪರಿಚಯ ಸ್ನೇಹವಾಯಿತು.
'ನಮಸ್ಕಾರ, ನಾನು ಕೇಶವ ನಾಯಕ......' ಪರಿಚಯ ಹೇಳಿಕೊಳ್ಳುತ್ತ ಕೈ ಚಾಚಿದೆ.
ಸಮ್ಮೇಳನಕ್ಕೆ ಬಂದಿದ್ದೀರಾ? ಅಂತ ನಿಮಗೆ ಈಗ ತಾನೇ ಮೆಸೇಜು ಕಳಿಸಿದ್ದೆ , ನೀವು ಇಲ್ಲಿ ಸಿಕ್ಕಿದ್ದು ಭಾsಳ ಖುಷಿಯಾಯಿತು, ಬನ್ನಿ.' ಭಟ್ಟರು ಕರೆದರು. ಕಂಡಕೂಡಲೇ ಮನ ಸೆಳೆಯುವ ವ್ಯಕ್ತಿತ್ವದ ಜನ. ಆಕರ್ಷಕ ಮಾತುಗಳು! ಅದು ಇದು ಮಾತು ಆದ ನಂತರ 'ಮನೆ ಇಲ್ಲೇ ಹತ್ರ ಇದೆ, ಹೋಗೋಣ'. ಪ್ರೀತಿಯಿಂದ ಮನೆಗೆ ಬಂದು ನನ್ನ ಸಣ್ಣದೊಂದು ಪುಸ್ತಕದ ಸಂಗ್ರಹ ನೋಡಿ ಪ್ರಶಂಸೆ ವ್ಯಕ್ತ ಪಡಿಸಿದರು. ಈಗ ತಾನೇ ಮೊದಲ ಬಾರಿ ಭೇಟಿಯಾದ ಗೆಳೆಯ! ಇಷ್ಟು ನಿರಾಳ ಮತ್ತು ಕಾಲಾಂತರದ ದೋಸ್ತಿ ಗಳಂತೆ ನಮ್ಮ ಮಾತುಕತೆ ಸಾಗಿತ್ತು. 'ನನ್ನ ನಾಲಿಗೆ ಒಂಚೂರು ಉದ್ದ ಮಾರ್‍ರೇ, ಎದುರು ಇದ್ದವರಿಗೆ ಬೋರ್ ಮಾಡುವುದರಲ್ಲಿ ನಿಸ್ಸೀಮ ನಾನು' ಅಂದೆ.....
ಮಹಾಭಾರತದಲ್ಲಿ ಒಂದು ಎಪಿಸೋಡು ಬರುತ್ತದೆ- ಭಕ್ತನೋರ್ವ ಭಗವಂತನ ಬಾಗಿಲಿಗೆ ಹೋಗುತ್ತಾನೆ, ಕುಚೇಲ ಮತ್ತು ಶ್ರೀಕೃಷ್ಣ.
ಇಲ್ಲಿ ಅದೇ ಕಥೆ, ಸ್ವಲ್ಪ ವ್ಯತ್ಯಾಸ- ಭಗವಂತನೇ ಭಕ್ತನ ಮನೆಗೆ ದಯಮಾಡಿಸುತ್ತಾನೆ!!🙏🙏🙏
ಫೇಸ್ ಬುಕ್ ನಲ್ಲಿ ಪ್ರಕಟಿತ ದಿ.28-02-2019

No comments:
Post a Comment