ಮೊದಲ್ನೇಯವಳು ಪುಟ್ಟಿ, ಎರಡ್ನೇಯಂವ.......
ಲೇಖನ ಒಂಚೂರು ಉದ್ದ ಉಂಟು. ಸಾವಕಾಶ ಓದಿರಿ:
1984ರಲ್ಲಿ ದೆಹಲಿಗೆ ವರ್ಗವಾಯಿತು. ಪ್ರತೀ ಎರಡು ವರ್ಷಗಳಿಗೆ ಬೇಂಕಿನ ಖರ್ಚಿನಲ್ಲಿ ಫಸ್ಟ್ ಕ್ಲಾಸಲ್ಲಿ ಊರಿಗೆ ರಜ ಹಾಕಿ ಬರುವುದು. ನಮ್ಮದೇ ದುಡ್ಡಲ್ಲಿ ಬರಬೇಕಾದಾಗ ಸೆಕೆಂಡ್ ಕ್ಲಾಸಲ್ಲಿ ಪಯಣ. ಫಸ್ಟ್ ಕ್ಲಾಸಿಗಿಂತ ಸೆಕೆಂಡ್ ಕ್ಲಾಸಿನ ಪಯಣಗಳೇ ಜಾಸ್ತಿ ಖುಷಿ ಕೊಡುತ್ತಿದ್ದವು. ಫಸ್ಟ್ ಕ್ಲಾಸಿನಲ್ಲಿನ ಸಹಪ್ರಯಾಣಿಕರು 'ದೊಡ್ಡ ಮನುಷ್ಯರು' ಸಾಮಾನ್ಯವಾಗಿ ಒಬ್ಬರೊಡನೆ ಒಬ್ಬರು ಬೆರೆಯುತ್ತಿರಲಿಲ್ಲ. ಸೆಕೆಂಡು ಕ್ಲಾಸು-ಅದೊಂದು ಮಿನಿ ಭಾರತವೇ ಸರಿ. ಆಸೇತು ಹಿಮಾಚಲದ ಜನರು ಸಿಗುತ್ತಿದ್ದರು. ಇಡೀ ರೈಲು ತಿರುಗಿ ಆನಂದ ಪಡೆಯುತ್ತಿದ್ದೆವು. ಸ್ವಲ್ಪ ಬಾತ್ ರೂಮಿನ ಪರಿಮಳ ಸಹಿಸಿಕೊಳ್ಳಬೇಕು ಅಷ್ಟೆ..
ಇಂತಹುದೇ ಒಂದು ಪಯಣ. ಇಸವಿ ಸರಿಯಾಗಿ ನೆನಪಿಲ್ಲ, ಬಿಡಿ, ಇಸವಿ ದೊಡ್ಡ ವಿಶೇಷವಲ್ಲ. ನಮಗೆ ರಿಸರ್ವೇಶನ್ ಆಗಿದ್ದ ಸೀಟು ಹುಡುಕಿ ಕೆಳಗೆ ಬೇಗುಗಳನ್ನು ಕ್ರಮಪ್ರಕಾರ ಇಟ್ಟು ಬಾತ್ ರೂಮಿಗೆಲ್ಲ ಹೋಗಿ ಬಂದು ಸೆಟಲ್ ಆಗಿ ಎದುರು ನೋಡುವಾಗ ಸರಿಸುಮಾರು ನನ್ನದೇ ವಯಸ್ಸಿನವರೊಬ್ಬರು ತಮ್ಮ ಪಯಣದ ವ್ಯವಸ್ಥೆ ಮಾಡುತ್ತಿದ್ದರು.
'ಬನ್ನಿ ಯಜಮಾನರೇ, ಆರಾಮಾಗಿ ಲಗೇಜು ಇಡಿ, ದೂರ, ಮಂಗಳೂರಿಗಾ?' ಬಂದವರನ್ನು ಸ್ವಾಗತಿಸಿದೆ.
'ಅರೇ, ನಾವು ಮಂಗ್ಳೂರ್ ಬದಿಯವರು ಅಂತ ನಿಮಗೆ ಹೇಗ್ ಗೊತ್ತಾಯ್ತೆ? ಇರ್ಲೀ ಮೊದssಲು ಈ ಲಗೇಜಿದೊಂದು ವಿಲೆವಾರಿ ಮಾಡ್ಕಂತೆ' ಅವರ ಲಗೇಜು ಸ್ವಲ್ಪ ಹೆಚ್ಚು ಇತ್ತು. ಸರಿಯಾಗಿ ನೋಡಿದರೆ ಸಾಮಾನು ಸರಂಜಾಮು ನಮ್ಮಷ್ಟೇ, ಆದರೆ ಪೇಕಿಂಗ್ ಸಮಕಟ್ಟು ಇಲ್ಲದ ಕಾರಣ ಬಿಡ್ಕಿ ಬಜಾರು ಜಾಸ್ತಿ ತೋರುತ್ತಿತ್ತು. ನಡುನಡುವೆ ತನ್ನ ಮನೆಯವರಿಗೆ ಗದರಿಸುತ್ತಲೂ ಇದ್ದರು.
'ನಿಮಗೆಲ್ಲಾಯ್ತು?'
'ನಾನು ಸಿಂಡಿಕೇಟು, ನೀವು?'
'ಓಹೋ, ಬೇಂಕೋ, ನೀವು ಗಟ್ಟಿ ಜನ ಮಾರಾಯ್ರೇ, ನಮ್ಮದು ಬೇರೆ.'
'ಬೇರೆ ಅಂದರೆ?'
'ಹೋಟ್ಲು'
'ಹೋಟೆಲಾದರೆ ಎಂತದು, ಕಮ್ಮಿ ಕೆಲಸವಾ? ಸ್ವಂತ ಉದ್ಯೋಗ ನಮ್ಮ ನೌಕರಿಗಿಂತ ಉತ್ತಮ.' ಎಂದೆ.
'ಸ್ವಂತ ಅಲ್ದೇ, ನೌಕರಿಯೇ, ನಾನು ತಾಜ್ ಹೋಟೆಲ್ ನಲ್ಲಿ ಡ್ಯೂಟಿ ಮಾಡೂದೇ. ಹಾಗಂತ ಜುಜಬಿ ಏನಲ್ಲ, ಒಳ್ಳೇ ಕೆಲಸವೇ' ವಿವರಣೆ ಕೊಟ್ಟರು.
'ಅದೇ, ಸ್ವಲ್ಪ ಸಮಯದ ಹಿಂದೆ ಗವರ್ನ್ ಮೆಂಟು ಹೋಟೆಲಿನಿಂದ ಮ್ಯುಜಿಷಿಯನ್ ಝುಬಿನ್ ಮೆಹತಾ ತಮ್ಮ ಇಡೀ ಗ್ರೂಪ್ ಸಮೇತ ಶಿಫ್ಟ್ ಆದರಲ್ಲ, ಅದೇಯಾ?'
'ಹೌದು ಹೌದು.'
ಕೊಂಚ ಸಮಯದ ಹಿಂದೆ ಖ್ಯಾತ ಸಂಗೀತಗಾರ ಝುಬೀನ್ ಮೆಹತಾ ಅವರ ಸಂಗೀತ ಕಾರ್ಯಕ್ರಮ ದೆಹಲಿಯಲ್ಲಿ ಆಯೋಜಿಸಲಾಗಿತ್ತು, ಮತ್ತವರ ಪ್ರೋಗ್ರಾಮಿನ ಲೈವ್ ರಿಲೇ ಟೀ ವಿಯಲ್ಲಿ ಪ್ರಸಾರವಾಗಿತ್ತು. ಅವರಿಗೆ ಉಳಕೊಳ್ಳಲು ಸರಕಾರದ ವತಿಯಿಂದ ಸರಕಾರೀ ಹೋಟೆಲಲ್ಲಿ (ಅಶೋಕಾ ಹೋಟೆಲ್ ಇರಬೇಕು ಸರಿಯಾಗಿ ನೆನಪಿಲ್ಲ, ಕ್ಷಮಿಸಿ) ವ್ಯವಸ್ಥೆಯಾಗಿತ್ತು. ಆದರೆ ಸದರಿ ಹೋಟ್ಳಲ್ಲಿ ವ್ಯವಸ್ಥೆ ಚನ್ನಾಗಿರಲಿಲ್ಲ. ಚನ್ನಾಗಿರಲಿಲ್ಲ ಅನ್ನುವುದು ಸರಿಯಾದ ವಿವರಣೆಯಲ್ಲ, ಎಲ್ಲವೂ ಅಧ್ವಾನ ವಾಗಿತ್ತು. ರೂಮುಗಳಲ್ಲಿ ಜಿರಳೆಗಳು ಹಾರಾಡುತ್ತಿದ್ದವು, ಬಾತರೂಮಿನಲ್ಲಿ ನಳ್ಳಿಗಳು ಸೋರುತ್ತಿದ್ದವು, ಏರ್ ಕಂಡೀಷನಿಂಗ್ ವರ್ಕ್ ಆಗುತ್ತಿರಲಿಲ್ಲ...ಇತ್ಯಾದಿ ಇತ್ಯಾದಿ... ಮೆಹತಾ ಅವರಿಗೆ ಕಂಡಾಪಟ್ಟೆ ಸಿಟ್ಟು ಬಂದು ಅವರು ತಮ್ಮ ಇಡೀ ಟ್ರೂಪನ್ನು ಅಲ್ಲಿಂದ ಬೇರೆ ಹೋಟೆಲಿಗೆ ಶಿಫ್ಟ್ ಆದರು ಎಂಬ ಸುದ್ದಿಯೂ ಟೀವಿಯಲ್ಲಿ ಬಂದಿತ್ತು. ಆಗಿನ ಪ್ರಧಾನಿ ಶ್ರೀ ರಾಜೀವ ಗಾಂಧಿಯವರು ಕಂಡಾಪಟ್ಟೆ ಸಿಟ್ಟಾಗಿದ್ದರು ಎಂದೂ ವರದಿಯಾಗಿತ್ತು.
ಹೌದೇ, ನೀವು ಹೇಳಿದ್ದು ಸಮ. ನೋಡಿ ಈ ಗೌರ್ಮೆಂಟಿನ ಸ್ಟಾಫಿಗೆಲ್ಲ ಜಬಾದಾರಿ ಇಲ್ಲ. ತಿಂಗ್ಳು ತಿಂಗ್ಳೂ ಸಂಬ್ಳ ಬತತ್ ಕಾಣೀ. ಗಿರಾಕಿ ಕಂಡ್ರೆ ಒಂಚೂರು ಸಸಾರ. ನಮ್ಮ ತಾಜ್ ನಲ್ಲಿ ಹಾಗೆಲ್ಲ ಇಲ್ಲ. ಫಾರಿನರ್ಸ್ ಮೊದಲೇ ಬುಕಿಂಗ್ ಮಾಡಿ ಇರ್ತಾರೆ. ಅವರಿಗೆ ದುಡ್ಡಿನ ಲೆಕ್ಕವೇ ಇಲ್ಲ. ಏರ್ ಪೋರ್ಟಿನಿಂದ ಅವರನ್ನು ನಮ್ಮದೇ ಕಾರಲ್ಲಿ ಕರ್ಕೊಂಡು ತಂದು, ಇಳಿಯುವಾಗ ನಾಲಕ್ಕು ಜನ ಅವರಿಗೆ ಸಲ್ಯೂಟು ಹೊಡೆಯುವ ಸ್ಟೈಲೇ ಒಂದು ಚಂದ. ಇಳ್ದು ಒಳಗೆ ಬರುವಾಗ ಥಳಥಳ ಝಗಝಗ ಸೀರೆ, ಜಡೆ ತುಂಬ ಹೂ ಮುಡಕೊಂಡು ನಾಲಕ್ಕು ಹುಡುಗೇರು ಮುಗುಳು ನಗೆ ಬೀರಿ ಅವರಿಗೆ ಆರತಿ ಮಾಡಿ ಹಣೆಗೆ ಕುಂಕುಮ ಹಚ್ಚಿ-ಬೇಕ್ ಗ್ರೌಂಡು ಮ್ಯೂಸಿಕ್ ಬೇರೆ ಉಂಟು- ವೆಲ್ ಕಮ್ ಟು ಇಂಡಿಯಾ ಎಂದು ಸ್ವಾಗತ ಮಾಡಿದರೆಂದರೆ ಕೌಂಟರ್ ತಲಪುವದರೊಳಗೆ ಆ ಫಾರಿನರ್ ಕಿಸೆಯಿಂದ ಕಮ್ಮಿ ಕಮ್ಮಿ 50-100 ಡಾಲರ್ ಖಾಲಿ. ಅದೂ ಅಂವ ಅಷ್ಟು ಖುಷಿಯಿಂದ ಕೊಡೂದು. ಗವರ್ ಮೆಂಟು ಹೋಟ್ಳಲ್ಲಿ ಅವನ ಬೇಗು ಅವನೇ ಹೊರಬೇಕು, ಈ ನಮನೆ ಅವಸ್ಥೆ. ನಮ್ಮ ಹೊಟೆಲ್ 365 ದಿನ ಸಹ ಫುಲ್ ಬುಕ್.' ಅವರ ವಿವರಣೆ ನನಗೆ ಭಾರೀ ಖುಷಿಯಾಯ್ತು. ಬಹಳ ಜಾಲಿಯಾಗಿ ಮಾತಾಡುತ್ತಿದ್ದರು. ಅವರ ಮಿಸೆಸ್ಸು ಹೆಚ್ಚು ಮಾತಾಡುವವರಲ್ಲ, ನನ್ನ ಮನೆಯವರಿಗೂ ಅವರಿಗೂ ಸರಿಯಾದ ಜೋಡಿ.
'ಮಕ್ಕಳು?' ಕೇಳಿದೆ.
'ನಿಮ್ ಕಣಾಂಗೆ, ಇಲ್ಲಿ ಕಾಣಿ, ಹಿರೇದು ಹೆಣ್ಣು, ಎರಡ್ನೇಯಂವ ಮಾಣಿ'
'ನಮ್ಮದು ಸ್ವಲ್ಪ ಬದಲಾವಣೆ ಉಂಟು, ಹಿರಿಯವ ಹುಡುಗ, ಎರಡನೆಯವಳು ಮಗಳು. ಮಕ್ಕಳ ಹೆಸರು?'
'ಮೊದಲನೆಯವಳು ಪುಟ್ಟಿ, ಎರಡನೆಯಂವ ಬೋಳಿಮಗ'
ನನ್ನ ಮನೆಯವಳು ತಟಕ್ಕನೆ ಅಲ್ಲಿಂದ ಎದ್ದು ಹೋದಳು. ನನಗೆ ಏನು ಹೇಳುವುದೆಂದು ತಿಳಿಯಲಿಲ್ಲ......
'ನಿಮ್ದೊಂದು ಎಂತ ಅಂತ ಇಲ್ಲ. ಎಲ್ಲಿ ಎಂತ ಮಾತಾಡಬೇಕಂತ ಗೊತ್ತಿಲ್ಲ. ಒಟ್ರಾಷೀ ಏನಾರೂ ಹರಕು ಮಾತಾಡೂದು.' ಅವರ ಹೆಂಡತಿ ಸಿಟ್ಟು ಮಾಡಿಕೊಂಡರು.
'ಅಲ್ದೇ, ಅದು ಕುಷಾಲೀಗೆ ಕರಿಯೂದು. ಹೆಸರು ಕರೆಕ್ಟು ದೇವರದ್ದೇ ಇಟ್ಟೀತ್. ನೀನೊಬ್ಬಳು ಬೇಜಾರು ಮಾಡ್ಕಂಬೇಡ,' ನನಗೆ ಸಮಜಾಯಿಷಿ ಹೇಳಿ, ಹೆಂಡತಿಗೂ ಸಮಾಧಾನ ಮಾಡತೊಡಗಿದರು. ಮುಂದಿನ ಪಯಣ ಒಟ್ಟು ಎರಡೂವರೆ ದಿನ ಭಾರೀ ಖುಷಿಯಲ್ಲೇ ಸಾಗಿತು.
ಮುಂದೆ ಒಂದೆರಡು ವರ್ಷಗಳ ನಂತರ ಶಂಕರ್ ರೋಡಲ್ಲಿ ಯಾವದೋ ಸಮಾರಂಭದ ಕಾರಣ ನಡಕೊಂಡು ಹೋಗುತ್ತಿದ್ದೆವು. ಧಡಕ್ಕನೆ ಒಬ್ಬ ಸ್ಕೂಟರ್ ಸವಾರ ಎದುರು ಬ್ರೇಕು ಹಾಕಿ 'ಹೋಯ್ ನಮಸ್ಕಾರ, ಬೇಂಕಿನವರಿಗೆ ಗುರ್ತ ಸಿಕ್ತಾ?' ಎಂದರು.
'ಓಹೋ, ತಾಜ್ ಹೋಟೆಲಿನವರು! ಗುರುತು ಸಿಗದೆ? ಆರಾಮಿದ್ದೀರಾ?'
ಒಂದೈದು ನಿಮಿಷ ಸುಖಕಷ್ಟ ಮಾತಾಡಿ ಸ್ಕೂಟರ್ ಚಾಲೂ ಮಾಡಿದರು.
ಸುಮಾರು ಮುವತ್ತನಾಲಕ್ಕು ಮಳೆಗಾಲ ಕಳೆದವು. ಜೀವನದ ಪಯಣದಲ್ಲಿ ಅಲ್ಲಲ್ಲಿ ಎದುರಾದವರ ನೆನಪು ಮೆಮೊರಿ ಚಿಪ್ ನಲ್ಲಿ ಸ್ಟೋರ್ ಆಗಿದ್ದು, ಇವತ್ತು ಬಟನ್ ಒತ್ತಿದಾಗ ಒಬ್ಬರ ಕಥೆ ಓಪನ್ ಆಯಿತು.
No comments:
Post a Comment