ಟೀನೇಜು ದಾಟಿ ಯುವಾವಸ್ಥೆಗೆ ಬಂದ ಕಾಲದಲ್ಲಿ ಸಿಂಡಿಕೇಟು ಬೇಂಕು ಪಿ ಎಮ್ ಡಿ ಯಲ್ಲಿ ನೌಕರಿಯಾಯಿತು. ಶ್ರೀಯುತ ಕೇ. ಸೀ. ಪೈಯವರು ನಮ್ಮ ಬಾಸು. ಅವರನ್ನು ತಂಪು ಹೊತ್ತಿನಲ್ಲಿ ನೆನೆಯಬೇಕು. ಅತ್ಯಂತ ಹೃದಯವಂತ ಹಿರಿಯರು. ಕೆಲಸ ತೆಗೆಸಿಕೊಳ್ಳುವ ವಿಚಾರ ಬೇರೆ.
ಆಗಿನ ಸಮಯದಲ್ಲಿ ರಾಜೇಶ್ ಖನ್ನಾ ಸುಪರ್ ಸ್ಟಾರ್ ಮತ್ತು ಯುವಕರ ಆದರ್ಶ. ಯುವತಿಯರ ವಿಚಾರ ಇಲ್ಲಿ ಬರಿಯೂದಿಲ್ಲ. ನಾವೆಲ್ಲ ರಾ.ಖನ್ನಾ ಸ್ಟೈಲಿನ ದಪ್ಪ ಕಾಲರಿನ ಬುಷ್ ಶರಟು, ಕಾಲಿಗೆ 'ಟಕ್ ಟಕ್' ಎಂದು ಟಂಕಿಸುವ ಶೂಸು... ಆದಷ್ಟು ಮಟ್ಟಿಗೆ ರಾಜೇಶ ಖನ್ನಾ ಇಂಪ್ರೆಶನ್ ಬೆಳೆಸಿಕೊಳ್ಳಲು ಹೆಣಗುತ್ತಿದ್ದೆವು.. ಸಂಜೆ ಹೊತ್ತಿಗೆ ಆಫೀಸಿನಲ್ಲಿ ಹಿರಿಯರ ಲೇವಡಿ ತಮಾಷೆಗಳಿಗೆ ನಾವು ಹುಡುಗರು ಗ್ರಾಸವಾಗುತ್ತಿದ್ದೆವು. ನಮ್ಮಷ್ಟಕ್ಕೆ ನಾವು ಎಷ್ಟೇ ಫ್ಯಾಷನ್ ಮಾಡಿಕೊಂಡರೂ ಮೂಲತಃ ಹಳ್ಳಿ ಗಮಾರರೇ ಆಗಿದ್ದೆವು (ನಮಗೆ ಅದರ ಅರಿವಿರುತ್ತಿದ್ದಿಲ್ಲ)
ಆಫೀಸಿನ ಕ್ರಮದಂತೆ ನಮ್ಮ ಡ್ಯೂಟಿ ರೊಟೇಷನ್ ಆಗಿ ನನ್ನ ಕೆಲಸವು ಬದಲಾಯಿತು. ಡ್ಯೂಟಿ ವಿಚಾರದಲ್ಲಿ ಸಮಯಪಾಲನೆಯಲ್ಲಿ ಬಾಸು ಏಕ್ ದಮ್ ಕಟ್ಟುನಿಟ್ಟು. ಸ್ವತಃ ತಾವೇ ಕ್ಲಪ್ತ ಸಮಯಕ್ಕೆ ಹಾಜರಾಗಿ ಕಾರ್ಯನಿರತ ರಾಗುತ್ತಿದ್ದರು. ಇಡೀ ಹಾಲ್ ನಲ್ಲಿ ನಮ್ಮ ಡಿಪಾರ್ಟ್ ಮೆಂಟು ಸಮಯಪಾಲನೆಗೆ ಹೆಸರುವಾಸಿ. ಯಾವುದೇ ತರಹದ ಉದಾಸೀನ ಪ್ರವೃತ್ತಿಗೆ ಅವಕಾಶವಿದ್ದಿಲ್ಲ.. ಆಗಿನ ನನ್ನ ಸಹೋದ್ಯೋಗಿಗಳ ಬಗ್ಗೆ ನನಗೆ ಇಂದಿಗೂ ಪ್ರೀತಿ, ಗೌರವ ಮತ್ತು ಹೆಮ್ಮೆಯಿದೆ !!
ಸರ್ವೇಸಾಮಾನ್ಯ ಆಫೀಸುಗಳಲ್ಲಿ ಬೆಳಗಿನ ಒಂದೆರಡು ಘಂಟೆಗಳ ತನಕ ಎಲ್ಲರೂ ತಮ್ಮತಮ್ಮ ಡ್ಯೂಟಿಯಲ್ಲಿ ಮಗ್ನರಾಗಿರುತ್ತಿದ್ದು, ಇಡೀ ಹಾಲ್ ನಲ್ಲಿ ಒಂದು ರೀತಿಯ ಲೈಬ್ರೇರಿಯಂತಹ ವಾತಾವರಣ ಇರುತ್ತದೆ. ಹತ್ತೂವರೆಯ ಚಾ ಸಪ್ಲೈ ಆದ ನಂತರ ರಿಲ್ಯಾಕ್ಸ್ ಮೂಡು ಬರುತ್ತದೆ.
ಇಂತಿರುವ ಒಂದು ದಿನ ಹೆಬ್ರಿ ಕೇಶವ ನಾಯಕನಿಗೆ ಹೆಬ್ರಿಯಿಂದ ಮಣಿಪಾಲದ ಬಸ್ಸು ಮಿಸ್ಸಾಯಿತು! 1973ರಲ್ಲಿ ಬಸ್ಸುಗಳ ಫ್ರಿಕ್ವೆನ್ಸಿ ತುಂಬ ವಿರಳ. ನೆಕ್ಸ್ಟ್ ಬಸ್ಸಲ್ಲಿ ಹೊರಟೆ. ಆಫೀಸಿಗೆ ತಡವಾಗಿ ಹಾಜರಾಗುವ ಕಾರಣ ಏನೆಂದು ಹೇಳಬಹುದು? ಅನೇಕ ಸಬೂಬುಗಳು ನೆನಪಿಗೆ ಬಂದವು, ಆದರೆ ಇವು ಯಾವುವೂ ಸ್ಥಿರವಾದುದಲ್ಲ ಮತ್ತು ಸುಮ್ಮನೆ ನಗೆಪಾಟಲಾಗುವ ವಿಲೆವಾರಿ ಆಗಬಹುದು...
ಮಣಿಪಾಲ ಬರುವ ಹೊತ್ತಿಗೆ ತಲೆ ಹನ್ನೆರಡಾಣೆ ಆಗಿತ್ತು.
ನಮ್ಮ ಸೆಕ್ಷನ್ನು ಹಾಲ್ ನ ಕೊನೆಯಲ್ಲಿತ್ತು. ಮೊದಲೇ ಹೇಳಿದಂತೆ ಲೈಬ್ರೇರಿಯಂತಹ ಗಂಭೀರ ವಾತಾವರಣ.! ಕಾಲಿಗೆ ಹೈ ಹೀಲ್ಡ್ ಲೆದರ್ ಶೂ! ಎಂಟ್ರೇನ್ಸಿನಿಂದ ನಮ್ಮ ಸೆಕ್ಷನ್ ತಲಪುವ ವರೆಗೆ ವೆಸ್ಟರ್ನ್ ಕೌಬಾಯ್ ಪಿಕ್ಚರಿನಲ್ಲಿ ವಿಲನ್ನಿನ ಕುದುರೆ ಖುರಪುಟದಂತೆ ಟಕಾಟಕ್ ಟಕಾಟಕ್ ಸೌಂಡು ಇಡೀ ಹಾಲ್ ನಲ್ಲಿ ಪ್ರತಿಧ್ವನಿಸಿತು.. ಒಬ್ಬಿಬ್ಬ ಟೈಪಿಣಿಯವರ ಕಿಸಿಕಿಸಿ ನಗು ಪಿಸಿಪಿಸಿ ಕುಹಕಗಳು ನನ್ನ ಮುಜುಗರವನ್ನು ಹೆಚ್ಚಿಸಿದವು.
'ಗುಡ್ ಮಾರ್ನಿಂಗ್ ಸರ್' ನನ್ನ ಮಾತು ನನಗೇ ಕೇಳಿಸಲಿಲ್ಲ.
'ವ್ಹಾಟ್ ಗುಡ್ ಮಾರ್ನಿಂಗ್? ವಾಟೀಸ್ ದ ಟೈಮ್ ನೌ?' ಬಾಸ್ ಸ್ವಲ್ಪ ಗರಮ್ ಆದಂತೆ ಭಾಸವಾಯಿತು.
'ತೇಂ ಫಸ್ಟ್ ಬಸ್ಸs ಮಿಸ್ ಜಾಲ್ಲೆಂ, ತಶ್ಶಿ ಜಾವ್ನು ಚಿಕೇ ಲೇಟ ಜಾಲ್ಲೆಂ' ಸತ್ಯವನ್ನೇ ನುಡಿದೆ, ಅವರ ಮುಖ ಸಡಲಿಸಲಿಲ್ಲ.
'ಫಸ್ಟ ಬಸ್ಸು ಮಿಸ್ ಆಯ್ತವನಿಗೆ, ಹೆದರಿಕೆ ಇಲ್ಲ , ಟೈಮ ಕಿತ್ಲೆರೇ? ಲೇಟ ಆಯ್ತಂತೆ...'
ನನಗೆ ಪೂರಾ ಹೆದರಿಕೆಯಾಯ್ತು. ಹೊರಗೆ ಗೆಳೆಯರು ನನ್ನ ಅವಸ್ಥೆಯ ಪೂರಾ ಮಜ ನೋಡುತ್ತಿದ್ದುದು ಅನುಭವಕ್ಕೆ ಬರುತ್ತಿತ್ತು.
'ಇನ್ನು ಮೇಲೆ ಟೈಮಿಗೆ ಸರಿಯಾಗಿ ಬರ್ತೇನೆ, ಖಂಡಿತಾ ತಪ್ಪೂದಿಲ್ಲ. ಇದರ ಮೊದಲು ನಾನು ಲೇಟಾಗಿ ಬಂದದ್ದೇ ಇಲ್ಲ.'
'ಟೈಮಿಗೆ ಸರಿಯಾಗಿ ಬರ್ತಾನೆ!! ಇವತ್ತು ಈಗದ್ದು ಎಂಥದು? ಎಷ್ಟು ಟೈಮ್ ಈಗ?' ಮುಖ ಇನ್ನೂ ಬಿಗಿಯಾಗೇ ಇತ್ತು.
'ಟೈಮು ಒಂಭತ್ತೂ ಮುವತ್ತೇಳು, ನಾನು ಹೇಳಿದೆ ಅಲ್ಲವ , ಇನ್ನು ಮೇಲೆ ಪ್ರಾಂಪ್ಟ್ ಆಗಿ ಬರ್ತೇನೆ..'
'ಒಂಭತ್ತೂ ಮುವತ್ತೇಳು ಹ್ಞುಂ.' ಎಂದವರೇ ತಮ್ಮ ಕಿಸೆಯಿಂದ ಮೂರೂ ಮುಕ್ಕಾಲಕ್ಕೆ ನಿಂತು ಹೋಗಿದ್ದ ವಾಚನ್ನು ತೆಗೆದು ಕೀ ಕೊಟ್ಟು ಟೈಮ್ ಸರಿ ಮಾಡಿ ಕೈಗೆ ಕಟ್ಟಿಕೊಂಡು ನನ್ನನ್ನು ನೋಡಿ ಘೊಳ್ಳನೇ ನಕ್ಕರು..
"ತುಗ್ಗೆಲೇ ಟೈಮ್ ಕಿತ್ಲೆ ಮ್ಹೊಣು ನಿಮ್ಮಿಲೇರಿ ಗಾಂವಾ ನಾತ್ತಿಲೆ ಪೂರಾ ಕಾಣಿ ಸೂರು ಕೆಲ್ಲ್ ಮುರೇ.. ವ್ಹಸ ಕಾಮ್ ಪಳೇ..' ಇನ್ನೂ ನಗುತ್ತಲೇ ಇದ್ದರು.
ನಾನು ಬಾಯಿಗೊಂದು ಕೈ ಇನ್ನೊಂದೆಡೆ ಇನ್ನೊಂದು ಕೈ ಇಟ್ಟು ಮಂಗನಂತೆ ಹೊರಬಂದೆ....
Very interesting.....share more such stories....
ReplyDelete