keshavu
Thursday, September 4, 2025
ಸಂಬಂಧಗಳು....
Wednesday, September 3, 2025
ತಾಜಾ ಬೆಣ್ಣಿ...
Thursday, November 14, 2024
ಕೆಮರಾ ಆಸೆ
Monday, September 9, 2024
ಎಂಭತ್ತನಾಲಕ್ಕರ ಬ್ಯಾಚು...
ಗುರುಗಳು ಕ್ಲಾಸುರೂಮನ್ನು ಪ್ರವೇಶಿಸಿದರು,
"ನಮಸ್ತೇ ಸರ್" ವಿದ್ಯಾರ್ಥಿಗಳು ಎದ್ದು ಒಕ್ಕೊರಳಲ್ಲಿ ವಂದಿಸಿದರು.
"ನಮಸ್ತೇ, ಎಲ್ಲರೂ ಕೂತುಕೊಳ್ಳಿ, ಎಲ್ಲ ಸ್ಟೂಡೆಂಟ್ಸ್ ಬಂದಿದ್ದೀರಾ? ಅದು ಯಾರಂವ ಓಡಿ ಬರತಾ ಇದ್ದಾನೆ! ಕರುಣಾಕರನಾ? ಛೇ! ಇವನ ಕೈಯ್ಯಲ್ಲಿ ಆಗೂದಿಲ್ಲಪ್ಪ! ಒಂದು ದಿನ ಆದರೂ ಸಮಯಕ್ಕೆ ಸರಿಯಾಗಿ ಬಂದದ್ದುಂಟಾ! ಆಯಿತು ಮಾರಾಯಾ, ಬಾ ಕೂತುಕೋ. ಎಲ್ಲರೂ ಬೆಳಗ್ಗೆ ಬೇಗನೇ ಎದ್ದು ಸರಿಯಾಗಿ ಹಲ್ಲುಜ್ಜಿ ಮುಖ ತೊಳೆದು ಸ್ನಾನ ಮಾಡಿ ಬಂದಿದ್ದೀರಾ?
ಅಥವಾ ಸಂಜೆ ನೋಡುವ ಅಂತ ಬಾಕಿ ಇಟ್ಟಿದ್ದೀರಾ, ಓಕೇ, ಓಕೇ. ಎಲ್ಲಿ ಕೈ ನೋಡುವಾ, ಯಾರೆಲ್ಲಾ ಉಗುರು ಕತ್ತರಿಸದೇ ಬಂದಿದಾರೆ?
"ಹ್ಞಾ ಯಾರವಳು ಕಿಸಿಪಿಸಿ ಮಾತಾಡೂದು? ರೇಖಾನಾ!, ಇವಳಿಗೆ ಯಾವಾಗ ಬುದ್ಧಿ ಬರೂದು!? ದೇವರೇ ಬಲ್ಲ!......"
ಹೆಬ್ರಿ ಹೈಸ್ಕೂಲಿಗೆ - ಈಗ ಪದವಿಪೂರ್ವ ಕಾಲೇಜಾದರೂ ನನಗದು ಪ್ರೀತಿಯ ಹೈಸ್ಕೂಲೇ – ‘ನಮ್ಮ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ರೂಮು ಶುರುವಾಗುತ್ತಿದೆ. ನಾಡಿದು ಅದರ ಓಪನಿಂಗ್ ಇದೆ. ನೀವು ದಯವಿಟ್ಟು ಬರಬೇಕು’ ಎಂದು ಉಪ ಪ್ರಾಂಶುಪಾಲ ಆತ್ಮೀಯರಾದ ದಿವಾಕರರು ಒತ್ತಾಯಿಸಿ ಆಮಂತ್ರಿಸಿದಂತೆ ಹೋದಾಗ ಸಂಭ್ರಮದ ವಾತಾವರಣವಿತ್ತು. ಅವರ ಕಛೇರಿಯಲ್ಲಿ ಜನವೋ ಜನ. ಶ್ರೀಯುತರಾದ ರಘುರಾಮ ಸೋಮಯಾಜಿಯವರು ಮತ್ತಿತರ ಗಣ್ಯ ವ್ಯಕ್ತಿಗಳು ಆಸೀನರಾಗಿದ್ದರು.”ಬನ್ನಿ ನಾಯಕರೆ, ನೀವು ಬಂದದ್ದು ಭಾಳ ಖುಷಿ ಆಯಿತು. ಕೂತುಕೊಳ್ಳಿ’ ಅವರ ಸ್ವಾಗತ....
ಹೊರಗೆ ಸುಮಾರು ಮುವ್ವತ್ತು ಮೀರಿ ಆಗಂತುಕರು ಭಾರೀ ಹುಮ್ಮಸ್ಸು ಹಾಗೂ ಸಂತಸದಿಂದ ಒಬ್ಬರನ್ನೊಬ್ಬರು ಕರೆಯುತ್ತ, ಹಸ್ತಲಾಘವ ನೀಡುತ್ತ ಹಬ್ಬದ ಮೂಡಿನಲ್ಲಿದ್ದರು. ಅನೇಕ ಮಹಿಳಾಮಣಿಗಳಂತೂ ಸೋಮಯಾಜಿಯವರ ಬಳಿ ಉತ್ಸಾಹ, ಭಕ್ತಿ, ಪ್ರೀತಿ ವಿಶ್ವಾಸಗಳಿಂದ ಬಂದು ಬಂದು ಮಾತನಾಡಿಸಿ ಹೋಗುತ್ತಿದ್ದರು. ಏನಿದು ಹರ್ಷೋಲ್ಲಾಸದ ಕಾರಣ? …….
ನಮ್ಮ ಹೈಸ್ಕೂಲು - ಈಗಿನ ಕಟ್ಟಡ - ಸಾವಿರದಾ ಓಂಭೈನೂರಾ ಅರುವತ್ತೊಂದರಲ್ಲಿ ಸ್ಥಾಪಿತವಾಯಿತು. ಸುಮಾರು ಅರುವತ್ತೆರಡು ಮಳೆಗಾಲ ಮುಗಿದವು. ಸಹಜವಾಗಿ ಬಿಲ್ಡಿಂಗು ಶಿಥಿಲವಾಗಿತ್ತು. ಇತ್ತೀಚೆ ಊರಿನ ಕೆಲವು ಸಹೃದಯೀ ಯುವ ಉದ್ಯಮಿಗಳಿಗೆ ’ತಾವು ಈ ಹೈಸ್ಕೂಲಿನಲ್ಲಿ ಕಲಿತು ಜೀವನದಲ್ಲಿ ಉತ್ಕರ್ಷ ಮತ್ತು ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆದು ಒಳ್ಳೆಯ ಬದುಕು ಬಾಳುತ್ತಿದ್ದೇವೆ. ಇದಕ್ಕಾಗಿ ಏನಾದರೂ ಮಾಡಬೇಕು, ನಮ್ಮ ಪಾಲಿನ ಕಿಂಚಿತ್ ಸೇವೆ ಸಲ್ಲಿಸಿ ಋಣ ಸಂದಾಯ ಮಾಡಬೇಕು.’ ಎಂಬ ಆಸಕ್ತಿ ಆಲೋಚನೆ ಹುಟ್ಟಿತು. ತಕ್ಷಣ ವಿಳಂಬ ಮಾಡದೇ ಕಾರ್ಯೋನ್ಮುಖರಾದರು. ಹಳೇ ವಿದ್ಯಾರ್ಥಿಗಳೆಲ್ಲ ಕೂಡಿ ಮೀಟಿಂಗ್ ಮಾಡಿ ಟ್ರಸ್ಟ್ ರಚನೆಯೂ ಆಯಿತು. ಊರು ಊರುಗಳಲ್ಲಿ, ದೇಶ ವಿದೇಶಗಳಲ್ಲಿ ನೆಲಸಿರುವ ಹೆಚ್ಚಿನ ಸಂಖ್ಯೆಯ ಹಳೇವಿದ್ಯಾರ್ಥಿಗಳು ಸಂತೋಷದಿಂದ ಸದಸ್ಯರಾದರು. ಟ್ರಸ್ಟಿನ ಸದಸ್ಯರಲ್ಲಿ ನಾನೂ ಒಬ್ಬ ಮೆಂಬರು.
ಇದೇ ಬೇಸಿಗೆಯ ಒಂದು ದಿನ ಹಾಗೇ ಒಂದು ರೌಂಡು ಹೈಸ್ಕೂಲಿನತ್ತ ತಿರುಗಾಡಿ ಬರುವ ಎಂದು ಹೋದೆ. ಮಕ್ಕಳ ರಜಾ ದಿನಗಳು, ನೋಡಿದಾಗ ಆಶ್ಚರ್ಯವಾಯಿತು, ಅರ್ಧಾಂಶಕ್ಕಿಂತಲೂ ಹೆಚ್ಚಿನ ಕೊಠಡಿಗಳ ರಿಪೇರಿ ಕೆಲಸ ಪ್ರಗತಿಯಲ್ಲಿತ್ತು. ಆಫೀಸು ರೂಮಲ್ಲಿ ಒಬ್ಬಿಬ್ಬರು ಸ್ಟಾಫು ಇದ್ದರು. ಶಾಲೆಯ ಹೆಚ್ಚಿನ ದಾರಂದ, ಬಾಗಿಲು,ಕಿಟಿಕಿ, ಮಾಡು, ಹಂಚುಗಳು ಎಲ್ಲವೂ ಹೊಸ ರೂಪ ಪಡೆಯುತ್ತಿದ್ದವು, ಉದ್ಯಮಿ ರಾಜೇಶ ನಾಯಕರ ಉಮೇದಿನಿಂದ ಈ ಕಾಮಗಾರಿ ನಡೆಯುತ್ತಿದೆ, ಸ್ಕೂಲು ರೀಓಪನಿಂಗ್ ಮೊದಲೇ ಕೆಲಸ ಮುಗಿಸಬೇಕೆಂಬ ಇರಾದೆ ಇದೆ ಎಂಬ ಮಾಹಿತಿ ಸಿಕ್ಕಿತು. ಹುಡುಗನಿಗೆ ಉತ್ಸಾಹ ತುಂಬ ಇದೆ, ಪ್ರತೀ ನಿತ್ಯವೆಂಬಂತೆ ಬಂದು ಖುದ್ದು ನಿಂತು ಪ್ರಗತಿ ಪರಿಶೀಲನೆ ಮಾಡಿ ಹೋಗುತ್ತಾರೆ ಎಂದು ಅರಿತು ಭಾರೀ ಹೆಮ್ಮೆ ಎನಿಸಿತು. ನಾನೂ ಸಹ ಇದೆ ಸಂಸ್ಥೆಯಲ್ಲಿ ಕಲಿತವ, ಈ ಪ್ರೌಢಶಾಲೆಯ ಮೇಲೆ ನನಗೆ ಅತಿ ಎಂಬಂತೆ ಭಕ್ತಿಭಾವವಿದೆ, ನನಗೇಕೆ ಇಂತಹ ಯೋಚನೆ, ಯೋಜನೆ ಆಲೋಚನೆಗಳು ಹುಟ್ಟಲಿಲ್ಲ!! ನನ್ನಿಂದ ಆಗ್ತದೋ ಹೋಗ್ತದೋ ಅದು ಬೇರೆ ವಿಚಾರ, ಕನಿಷ್ಠ ಪಕ್ಷ ಆ ನಿಟ್ಟಿನಲ್ಲಿ ಯೋಚಿಸಲೂ ಇಲ್ಲವಲ್ಲ ಎಂಬ ಖತಿ ಹುಟ್ಟಿತು. ಇರಲಿ ಅದೀಗ ಪ್ರಸ್ತುತವಲ್ಲ....
ಇನ್ನೊಂದೆಡೆ ಇದೇ ತೆರನ ಉತ್ಸಾಹೀ ಹಳೇ ವಿದ್ಯಾರ್ಥಿಗಳು - 1984-85 ರ ಬ್ಯಾಚಿನವರು - ತಮ್ಮದೇ ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡರು. ಕಲಿತ ಶಾಲೆಗಾಗಿ ಏನಾದರೂ ಮಾಡಬೇಕೆಂಬ ಹುರುಪು. ಈ ಹುರುಪಿನ ಫಲಶ್ರುತಿಯೇ ಇಂದು ಉದ್ಘಾಟನೆಗೊಂಡ ಡಿಜಿಟಲ್ ಕ್ಲಾಸ್ ರೂಮು. ಡಿಜಿಟಲ್ ಕ್ಲಾಸು, ಅಂತೆಯೇ ಹಳೇ ಲಡ್ಡಾದ ಬೆಂಚು ಡೆಸ್ಕುಗಳ ಬದಲಿಗೆ ಹೊಸಾ ಡೆಸ್ಕು ಬೆಂಚುಗಳು.! ವ್ಹಾ ರೆ ವ್ಹಾ! ನನಗೇ ಬಹಳ ಖುಷಿಯಾಯಿತು, ಇನ್ನು ಇದನ್ನು ಸಾಧಿಸಿದ 84 ರ ಬ್ಯಾಚಿನವರಿಗೆ ಎಷ್ಟು ಸಂತಸವಾಗಿರಬೇಕು.! ಎಲ್ಲರೂ ರೋಮಾಂಚಿತರಾಗಿದ್ದರು. ಒಂದೆಡೆ ಶಾಲೆಗಾಗಿ ಕೆಲಸ ಮಾಡಿದ ಸಂತೃಪ್ತಿ ಅದರೊಟ್ಟಿಗೆ ಪೂರಾ ನಲವತ್ತು ವರ್ಷಗಳ ಬಳಿಕ ಒಟ್ಟು ಮೇಳೈಸಿದ ಗೆಳೆಯ ಗೆಳತಿಯರ ಮಿಲನದ ಸಂಭ್ರಮ! ಒಬ್ಬರು ಮುಂಬಯಿಯಿಂದ ಬಂದರೆ, ಮತ್ತೊಬ್ಬ ದುಬೈಯಿಂದ, ಆದರೆ ಕಬ್ಬಿನಾಲೆಯಿಂದ ವೆಂಕಪ್ಪ ಹೆಬ್ಬಾರರ ಮಗಳು ನಯನ ಇನ್ನೂ ಬಂದಿಲ್ಲವಲ್ಲ!! ಅಗೋ ಬಂದ್ರು ಬಂದೇ ಬಿಟ್ಟರು, ಇನ್ನು ಶುರು ಮಾಡಿ. ಏನು ಇಷ್ಟು ತಡ ಮಾರಾಯಿತಿ!!
ಬೆಳಗ್ಗೆ ಶಾಸ್ತ್ರೋಕ್ತವಾಗಿ ಗಣಹೋಮವನ್ನು ವರಂಗದ ಉದ್ಯಮಿ ಶ್ರೀ ಅನಂತ ಮಲ್ಯಾ ಅವರು ನಡೆಸಿಕೊಟ್ಟರು. ಅವರೂ ಸಹ 84 ರ ಬ್ಯಾಚ್ ಮೆಂಬರು. ಎಲ್ಲಾ ಸಹಪಾಠಿಗಳ ಆಗಮನಾ ನಂತರ ರಿಬ್ಬನ್ ಕಟಿಂಗ್ ಮೂಲಕ ಡಿಜಿಟಲ್ ಕ್ಲಾಸ್ ರೂಮ್ ಉದ್ಘಾಟನೆ ನಡೆಯಿತು. ನಂತರ ಕಾಲೇಜಿನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ. ಈ 84 ರ ಬ್ಯಾಚಿನಲ್ಲಿ ಹೆಚ್ಚಿನವರು ಅಧ್ಯಾಪಕ ವೃತ್ತಿಯವರೋ ಎಂಬ ಭಾಸವಾಯಿತು. ಸಭಾ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆಯಿತು, ಅದರ ಕುರಿತು ನನ್ನ ಯಾವುದೇ ಹೆಚ್ಚಿನ ವ್ಯಾಖ್ಯಾನವಿಲ್ಲ. ಆದರೆ ಸ್ವಾಗತ ಭಾಷಣ ಮಾಡಿದ ರೇಖಾ ಮೇಡಮ್ ನ ಮಾತುಗಳೋ ಮನಸೂರೆಗೊಂಡವು. ಯಾವುದೇ ಗೇರು ಬ್ರೇಕುಗಳಿಲ್ಲದ ಸುಲಲಿತ ಸರಾಗ ಹಾಗೂ ಆಕರ್ಷಕ ಮಾತುಗಳು ಮುದ ನೀಡಿದವು. ಕ್ಲಾಸಿನಲ್ಲಿ ತನ್ನ ಮಾತುಗಾರಿಕೆಯಿಂದ ಬಹಳ ಫೇಮಸ್ ಆಗಿದ್ದ ರೇಖಾ ಮೇಡಮ್ ನ ವ್ಯಕ್ತಿತ್ವವೂ ಅವರ ಮಾತುಗಳಂತೆ ಅತ್ಯಂತ ಆಕರ್ಷಕ. ಗಣಿತದ ಕ್ಲಾಸನ್ನು ತರಗತಿಯ ಹೊರಗೇ ಕಲಿತ ಆಕೆಗೆ ಮುಂದಿನ ದಿನಗಳಲ್ಲಿ ತಾನು ಗಣಿತದ ಟೀಚರ್ ಆಗುವೆನು ಎಂಬ ಕಲ್ಪನೆ ಇರಲಿಲ್ಲ. ಈಗಂತೂ ಅವರು ತಾನು ಸರ್ವಿಸ್ ಮಾಡುತ್ತಿರುವ ಶಾಲೆಯ ಪ್ರಿನ್ಸಿಪಲ್. ಸೋಮಯಾಜಿ ಸರ್ ಮೇಲೆ ತಿಳಿಸಿದ ಕಿಸಿಪಿಸಿ ಮಾತಾಡುತ್ತಿದ್ದ ರೇಖಾ ಟೀಚರ್ ಇವರೇ....
ಶಾಲಾ ಜೀವನದ ನೆನಪುಗಳ ಮೆಲುಕಾಟ, ಅಪರೂಪದ ಫಾಸ್ಟ್ ಫ್ರೆಂಡ್ ಗಳ ಪುನಃ ಭೇಟಿ, ತಾವು ಕಲಿತ ಶಾಲೆ, ಕೂತು ಓದಿದ ಬೇಂಚು, ಲೆಕ್ಕದ ಕ್ಲಾಸಲ್ಲಿ ಕೈವಾರದ ಕಡ್ಡಿಯಿಂದ ತೂತು ಮಾಡಿದ ಡೆಸ್ಕ್ … ಒಂದೇ ಎರಡೇ ಅನೇಕ ನೆನಪುಗಳಿವೆ. ಅದರ ರೋಮಾಂಚನವೇ ಬೇರೆ, ಅನುಭವಿಸಬೇಕು, ಧನ್ಯರಾಗಬೇಕು.......
08-09-2024
Monday, July 29, 2024
ಸ್ನೇಹದ ಮಾಧುರ್ಯ
"ನಾಯಕ್ ಸರ್ ಮೆನೇಜರ್ ಕರೀತಾರ."
"ಗೆಳೆಯರೇ, ನಿಮಗೆಲ್ಲ ತಿಳಿದಿರುವಂತೆ ಬ್ರಾಂಚಿನಲ್ಲಿ ಕಂಪ್ಯೂಟರ್ ಗಳು ಬಂದಿದಾವೆ. ಸೇವಿಂಗ್ಸ್ ಬ್ಯಾಂಕ್ ಹಾಗೂ ಕರಂಟ್ ಅಕೌಂಟ್ ಗಳನ್ನು ಫೀಡ್ ಮಾಡಿ ಲೈವ್ ಮಾಡಬೇಕು ಎಂಬ ಹುಕುಮು ಇದೆ, ಕಂಪ್ಯೂಟರ್ ನಲ್ಲಿ ಖಾತೆಗಳ ವಿವರಗಳನ್ನು ಫೀಡ್ ಮಾಡಲು, ಕಂಪ್ಯೂಟರ್ ನ ಕೆಲಸ ಕಲಿಯಲು ಲೀಜರ್ ಟೈಮಲ್ಲಿ ಬಂದು ಕಲಿಯಬಹುದು, ನನ್ನ ಅಸಿಸ್ಟೆನ್ಸ್ ಯಾವಾಗಲೂ ಇದೆ. ಪ್ರತಿಯೋರ್ವನಿಗೂ ಅವಕಾಶ ಹಾಗೂ ಸ್ವಾಗತವಿದೆ.
ನಾನು ಊಹಿಸಿಕೊಂಡಂತೆ ಮಹಿಳಾಮಣಿಗಳಿಂದ ಹೆಚ್ಚಿನ ಸಹಕಾರವಿತ್ತು. 'ಸರ್, ನನಗೆ ಒಂದೆರಡು ದಿನ ಎಕೌಂಟ್ ಮಾಹಿತಿ ಫೀಡ್ ಮಾಡೂದನ್ನು ಹೇಳಿಕೊಡಬೇಕು ಪ್ಲೀಸ್.'
"ನಿಮಗೆ ಎಷ್ಟು ಗೊತ್ತಿದೋ ನನಗೂ ಅಷ್ಟೇ ಗೊತ್ತಿರೋದು, ಬನ್ನಿ ಕಂಪ್ಯೂಟರ್ ಎದುರು ಕೂತು 'ಓಂ ಶ್ರೀ ಗಣೇಶ' ಮಾಡಿಬಿಡಿ."
ಹೆಚ್ಚಿನವರು ತುಂಬ ಉಮೇದಿನಿಂದ ಮುಂದೆ ಬಂದರು.
"ನಾಯಕರೇ ಕೆಲಸದ ಚುರುಕು ಸಾಲದು ಅಂತ ಅನಿಸುತ್ತದೆ." ಮೆನೆಜರರ ಆತಂಕ.....
"ವಿದ್ಯಾ ಮೇಡಮ್ ಹೇಗಿದ್ದೀರಿ? ಯಜಮಾನರು ಮಕ್ಕಳು ಸೌಖ್ಯವೇ?"
"ಏನು! ರಾಯರಿಗೆ ಇವತ್ತು ನನ್ನ ಮೇಲೆ ಭಾರಿ ಕಕ್ಕುಲಾತಿ ಹುಟ್ಟಿದೆ!"
"ನಮ್ಮ ಸ್ಟಾಫ್ ನವರ ಯೋಗಕ್ಷೇಮ ನೋಡ್ಕೋ ಬೇಕು ತಾನೇ! ನೀವೆಲ್ಲ ಬೇಕಾದವರು, ನಿಮ್ಮ ಖುಷಿ ನನ್ನ ಪ್ರಯೋರಿಟಿ. ಅದಕ್ಕೇ ಆಗಾಗ ಬಂದು ಸುಖ ಕಷ್ಟ ವಿಚಾರಿಸುತ್ತ ಇರೂದು."
"ಸಾಹೇಬರು ಬಲೆ ಬೀಸಿದ್ದಾರೆ, ಖದೀಮರಿದ್ದಾರೆ, ಜಾಗ್ರತೆಯಾಗಿರು." ಗೆಳತಿಯ ಸಲಹೆ.....
00೦00
ಬೇಂಕಿನಿಂದ ನಿವೃತ್ತನಾದ ಬಳಿಕ ನಮ್ಮದು ಬೆಂಗಳೂರು ವಾಸ. ಮಕ್ಕಳ ದೇಖಬಾಲ್ ನೋಡಲು ಅಪ್ಪ ಅಮ್ಮ ತಮ್ಮೊಟ್ಟಿಗೆ ಇದ್ದಾರೆ ಎಂದು ಮಗ ಸೊಸೆ ಎಂದುಕೊಂಡಿದ್ದಾರೆ. ಆದರೆ ಮುಖ್ಯವಾಗಿ ನಮಗೆ ಮೊಮ್ಮಕ್ಕಳ ಸಹವಾಸದ ಸೆಳೆತ - ಮೋಹ ವೆಂದರೂ ಸೈ- ಎಳೆಯುತ್ತಿತ್ತು. ಆ ಕಾರಣ ಬೆಂಗಳೂರು ವಾಸ. ಒಂದು ದಿನ ಮೊಬೈಲ್ ಗುಣುಗುಣಿಸಿತು.
"ಹರಿ ಓಂ"
"ನಮಸ್ಕಾರ, ನಾನು ವಿದ್ಯಾ." ಮಧುರವಾದ ಕರೆ.....
"ನಮಸ್ಕಾರ ನಮಸ್ಕಾರ, ಬಹಳ ದಿನಗಳ ನಂತರ ನೆನಪಾಯಿತು,! ಏನು ಸಮಾಚಾರ?"
ಮಗನ ಮದುವೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲು ವಿದ್ಯಾಧರಿಯ ಕರೆಯಿತ್ತು......
ಮದುವೆ ಅಟೆಂಡ್ ಮಾಡಲು ಆಗಲಿಲ್ಲ, ನಮ್ಮಲ್ಲೂ ಅದೇ ದಿನ ಮದುವೆ ಫಂಕ್ಷನ್ ಇತ್ತು. ಆದರೆ ಅದೆಷ್ಟು ಮಧುರ ನೆನಪುಗಳು ಸಮುದ್ರದ ಅಲೆಗಳು ಒಂದರ ಹಿಂದೆ ಒಂದರಂತೆ ದಡಕ್ಕಪ್ಪಳಿಸಿದ ತೆರದಲ್ಲಿ ಅಲೆಯಲೆಯಾಗಿ ಮರುಕಳಿಸಿದವು.....!
ಹುಬ್ಬಳ್ಳಿ ಶಹರದ ಸುಪರ್ ಮಾರ್ಕೆಟ್ ಬ್ರಾಂಚಿಗೆ ಕೊಲ್ಲೂರಿನಿಂದ ವರ್ಗಾವಣೆಯಾಗಿ ಸೇರಿದೆನೋ, ಅಂದಿನಿಂದ ನಮ್ಮ ಒಳ್ಳೆಯ ದಿನಗಳು ಪುನಃ ಶುರುವಾದವೆಂದು ನನ್ನ ಖಚಿತ ನಂಬಿಗೆ. ಮಕ್ಕಳಿಬ್ಬರ ಶಿಕ್ಷಣದ ಮುಖ್ಯ ಘಟ್ಟ, ಅದಕ್ಕೆ ಸರಿಯಾಗಿ ಉತ್ತಮ ಶಿಕ್ಷಣ ವ್ಯವಸ್ಥೆ, ಒಳ್ಳೆಯ ಓನರ್ ಹಾಗೂ ಮನೆ, ಮುಖ್ಯವಾಗಿ ಸಹೃದಯಿ ಮೆನೇಜರ್ ಮತ್ತು ಸಹೋದ್ಯೋಗಿಗಳು, ಗ್ರಾಹಕರೂ ಸಹ ಸ್ನೇಹಜೀವಿಗಳು. ಇನ್ನೇನು ಬೇಕು!!
'ಪೆನ್ ಶನ್ ಸೆಕ್ಷನ್ ನೋಡ್ಕೊಳ್ಳಿ ಸರ' ಎಂದರು ಮೆನೇಜರ್ ಸಾಹೇಬರು. ಆಫೀಸರಿಗೆ ಮೆನೇಜರರು ಸರ್ ಎಂದುದು ಕೇಳಿ ನನಗೆ ಆಶ್ಚರ್ಯವೂ ಮುಜುಗರವೂ ಆದವು. ಅದೊಂದು ಮಾತನಾಡುವ ಧಾಟಿ, ಆ ಮೇಲೆ ತಿಳಿಯಿತು.
ಹೆಸರು ಮಾತ್ರ ಪೆನ್ಶನ್ ಡಿಪಾರ್ಟ್ಮೆಂಟ್., ಸೇವಿಂಗ್ಸ್, ಕರೆಂಟ್, ಲೋನ್ಸ್ , ನಗದು ಮತ್ತು ಬಿಲ್ಸ್ ಬಿಟ್ಟು ಬ್ರಾಂಚಿನ ಉಳಿದ ಸಕಲ - (everything under the blue sky) - ಕೆಲಸಗಳಿಗೆ ನಾನು ಸಾಹೇಬ!!
ಬ್ರಾಂಚಿನ ಸಕಲ ಸಹೋದ್ಯೋಗಿಗಳೊಡನೆ ಘನವಾದ ಇಂಟರಾಕ್ಷನ್ ಇರಿಸಿಕೊಳ್ಳಲು ಇದು ಅನುಕೂಲವಾಯಿತು.
ಲಂಚ್ ಅವರ್ ನಲ್ಲಿ ನನ್ನ ಟೇಬಲ್ ನ ಹಿಂದುಗಡೆ ಮೂವರು ಗೆಳತಿಯರ ಊಟ -ವಿದ್ಯಾಧರಿ, ಸಬಿತಾ ಮತ್ತು ವಿಜಯಲಕ್ಷ್ಮಿ. ಮೂರನೇಯವರು ಈ ಕೂಟದ ಛೀಫು. ಅದೂ ಇದೂ ಮಾತಾಡುತ್ತಾ ತಾವು ತಂದ ಸಣ್ಣ ಸಣ್ಣ ಕರಡಿಗೆಯಂತಹ ಊಟದ ಡಬ್ಬಿಯಿಂದ ಏನು ತಿನ್ನುತ್ತಿದ್ದರೋ!! ಇಡೀ ಬ್ರಾಂಚಿನವರ ಲಂಚು ಮುಗಿದು ಶೇಟು ಸಿಗರೇಟು ಮುಗಿಸಿ ಬಂದರೂ ಇವರ ಊಟ-ಮಾತು ಮುಗಿಯುತ್ತಿರಲಿಲ್ಲ. ಅವರೆದುರು ನನ್ನ ಮೂರಂಕಣದ ಊಟದ ಬುತ್ತಿಯನ್ನು ತೆರೆಯಲು ಕೆಲಕಾಲ ನನಗೆ ಮುಜುಗರವಾಗುತ್ತಿತ್ತು....
ಇಡೀ ಬ್ರಾಂಚಿನಲ್ಲಿ ನನಗೆ ವಿದ್ಯಾಧರಿಯಷ್ಟು ಸ್ನೇಹಮಯಿ, ಶಾಲೀನ ಮಾತುಗಳ ಹಾಗೂ ಹಸನ್ಮುಖಿ ಭಾವದ ದೋಸ್ತ್ ಕಂಡು ಬರಲಿಲ್ಲ. ಹಾಗಾಗಿ ನನಗೆ ಅವರಲ್ಲಿ ಒಂದು ಮುಷ್ಟಿ ಜಾಸ್ತಿ ವಿಶ್ವಾಸ. ಅವರೊಡನೆ ನನ್ನ ಇಂಡಲ್ಜನ್ಸ್ ಕೊಂಚ ಹೆಚ್ಚೇ ಇತ್ತೇನೋ ಎಂಬ ಭಾವ ಬರುತ್ತಿದೆ.
ಬೆಳಿಗ್ಗೆ ಆಫೀಸಿಗೆ ಬರುವಾಗ ಸಾಮಾನ್ಯವಾಗಿ ಕರೆನ್ಸಿ ಚೆಸ್ಟಿನ ಟೀ ಆರ್ ಕಿಣಿಯರು ಜತೆಯಾಗುತ್ತಿದ್ದರು. ಆದರೆ ಸಂಜೆಯ ಟೈಮಲ್ಲಿ ಸ್ಕೂಟರಿನ ಹಿಂದಿನ ಸೀಟು ವಿದ್ಯಾಧರಿಯ ಹೆಸರಿಗೆ ರಿಜಿಸ್ತ್ರಿ ಆಗಿತ್ತು. ನನ್ನ ಮನೆಯ ದಾರಿಯಲ್ಲಿ ಅವರ ಮನೆ ಇತ್ತು.
'ಬನ್ನಿ ಸರ್, ಕಾಫಿ ಮಾಡ್ತೇನೆ..'
ಸ್ಕೂಟರ್ ಪಾರ್ಕ್ ಮಾಡಿದೆ. ಮನೆಗೆ ಸ್ವಾಗತ ಹಾಗೂ ಕಾಫಿ ಪರಿಮಳ ಚನ್ನಾಗಿತ್ತು.ಮೇಡಮ್ ಗೆ ಇಬ್ಬರು ಮಕ್ಕಳು, ಅಕ್ಕ ಮತ್ತು ತಮ್ಮ. ಮರುದಿನ ಪುನಃ ಕಾಫಿಯ ಆಮಂತ್ರಣ..
''ನೋಡಿ ವಿದ್ಯಾ ನಿಮ್ಮ ಯಜಮಾನರು ಡ್ಯೂಟಿಯಿಂದ ಬಂದಿಲ್ಲ ತಾನೇ, ನಾನು ಹೊರಡುತ್ತೇನೆ."
"ಸರಿ, ಹಾಗಾದರೆ ನಾನು ಇಲ್ಲೇ ಇಳೀತೇನೆ." ಮನೆಯಿಂದ ಅರ್ಧ ಫರ್ಲಾಂಗ್ ಹಿಂದೆ ಇಳಿದರು. ನಾನು ಮುಂದೆ ಸಾಗಿದೆ...
ಒಂದು ಶನಿವಾರ ಮಧ್ಯಾಹ್ನ ಸ್ಕೂಟರು ನಿಗದಿತ ಸ್ಥಳದಲ್ಲಿ ನಿಲ್ಲದೇ ಸೀದಾ ಮುಂದೆ ಓಡಿತು, 'ನಿಲ್ಲಿಸಿ ಮಹರಾಯರೇ' ಎಂದರೂ ಕೇಳದೇ ಸ್ಕೂಟರು ನಮ್ಮ ಮನೆಯ ಮುಂದೆ ನಿಂತಿತು.
ಮನೆಯಲ್ಲಿ ಯಜಮಾನಿ ಒಡನೆ ತುಂಬ ಸಮಯ ಸಲ್ಲಾಪ ನಡೆದ ನಂತರ ವಾಪಸು ಬಿಟ್ಟು ಬಂದೆ...
"ನಮ್ಮಲ್ಲಿ ಭೀಮನ ಅಮವಾಸ್ಯೆ ವೃತಕಥೆ ಉಂಟು, ನೀವು ಅತ್ತಿಗೆಯವರನ್ನು ಕರಕೊಂಡು ಬರಬೇಕು." ವಿದ್ಯಾಧರಿಯ ಆಮಂತ್ರಣ ಬಂತು.
"ಅದೇನು ವೃತ?"
"ಗಂಡನಿಗೆ ದೀರ್ಘಾಯುಷ್ಯ ಸಿಗಲಿ ಎಂದು ಪತಿವ್ರತಾ ಸ್ತ್ರೀಯರು ಈ ವೃತಾಚರಣೆ ಮಾಡುತ್ತಾರೆ. ನಾನೂ ಈ ವೃತ ಆಚರಿಸುತ್ತೇನೆ. ನೀವು ಬನ್ನಿ ಸರ್." ಅದರಂತೆ ಸಂಜೆಯ ಹೊತ್ತು ಅವರಲ್ಲಿ ಹೋದೆವು. ಪೂಜಾವಿಧಿ ನಮಗೆ ಹೊಸದು.......
ನಾಲ್ಕು ವರ್ಷಗಳ ಸುಪರ್ ಮಾರ್ಕೆಟ್ ಬ್ರಾಂಚ್ ಸರ್ವೀಸಲ್ಲಿ ವಿದ್ಯಾ ನನ್ನ ಸೆಕ್ಷನ್ ನಲ್ಲಿ ಡ್ಯೂಟಿ ಮಾಡಿಲ್ಲ. ಆದರೆ ಅನಿವಾರ್ಯ, ಅಗತ್ಯ ಸಂದರ್ಭಗಳಲ್ಲಿ ನನ್ನ ವಿನಂತಿಯನ್ನು ತಿರಸ್ಕರಿಸದೇ ಖುಷಿಯಿಂದ ಮಾಡಿ ಕೊಟ್ಟಿದ್ದಾರೆ, ಬೇಂಕಿನ ನನ್ನ ಅನುಭವದಲ್ಲಿ ಇದು ತುಂಬ ಅಪರೂಪ. ತನ್ನ ಸೆಕ್ಷನ್ ಅಲ್ಲ, ತಾನೇಕೆ ಮಾಡಬೇಕು ಎಂಬ ಧೋರಣೆ ಜಾಸ್ತಿ ಇದ್ದ ಕಾಲವದು....
೦೦೦೦೦
"ವಿದ್ಯಾ, ಒಂದು ರಿಕ್ವೆಸ್ಟ್ ಉಂಟು, ದಯವಿಟ್ಟು ಒಪ್ಪಿಕೊಳ್ಳಬೇಕು, ನೀವು ಹಾಂ ಎನ್ನುತ್ತೀರಾ ಎಂಬ ಭರವಸೆಯಿಂದಲೇ ಕೇಳುತ್ತಿದ್ದೇನೆ..."
"ಏನು ಹೇಳಿ ಮಹರಾಯರೇ, ಬರೀ ಪೀಠಿಕೆಯಲ್ಲೇ ಇದೀರಾ."
"ಆಯಿತು, ನೇರ ವಿಷಯಕ್ಕೆ ಬರುತ್ತೇನೆ, ಗೋಲು ಗೋಲು ತಿರುಗಿಸುವುದಿಲ್ಲ. ನಾಡಿದು ಆದಿತ್ಯವಾರ ಮಧ್ಯಾಹ್ನ A L P M ನಲ್ಲಿ ಎಕೌಂಟ್ ಫೀಡಿಂಗ್ ಮಾಡಲು ಬರುತ್ತೀರಾ? ಏನಾದರೂ ಪ್ರಯರ್ ಫಂಕ್ಷನ್ ಇದ್ದರೆ ಬೇಡ."
"ಆಯಿತು ಮಹರಾಯರೇ ಅಷ್ಟೇ ತಾನೇ.."
"ಮತ್ತೆ ನಾಳೆ ಶನಿವಾರ ಮಧ್ಯಾಹ್ನ ಸ್ವಲ್ಪ ಹೊತ್ತು ವರ್ಕ್ ಮಾಡೋಣವೇ."
"ಬೆರಳು ತೋರಿಸಿದರೆ ಹಸ್ತ ನುಂಗುವ ಗಾದೆ ಆಯ್ತಲ್ಲ.!"
"ಬೇಸರ ಮಾಡಬಾರದು ನೀವು."
"ಆಗಲಿ ನಾಯಕರೇ, ನಿಮ್ಮ ಮಾತು ತಳ್ಳಿ ಹಾಕಲಾಗುತ್ತದೆಯೇ."
ಅಂತೆಯೇ ಶನಿವಾರ ಹಾಗೂ ನೆಕ್ಸ್ಟ್ ಆದಿತ್ಯವಾರ ಮಧ್ಯಾಹ್ನ ವಿದ್ಯಾಧರಿ ಎಕೌಂಟ್ ಫೀಡಿಂಗ್ ಕೆಲಸ ಮಾಡಲು ಬಂದರು. ನಾನು ಡೀಟೇಲ್ಸ್ ಓದಿ ಹೇಳೂದು, ಆಕೆ ಸರಸರನೇ ಟಂಕಿಸುವುದು... ಕೆಲಸ ಸಾಗಿತು...
"ವಿದ್ಯಾ, ನಮ್ಮ ಗುರುಗಳ ಬಳಿ ಕೇಳಿಕೊಂಡು ನಿಮ್ಮನ್ನು ನಮ್ಮ ಜಾತಿಗೆ ಸೇರಿಸಿಕೊಳ್ಳುವಾ ಎಂಬ ಖಯಾಲು ಬರುತಾ ಇದೆ ನನಗೆ."
"ಏಕೋ!"
"ನಿಮ್ಮನ್ನು ತಂಗಿ ಎಂದು ಒಪ್ಪಿಕೊಂಡಾಗಿದೆ ತಾನೆ, ಹಾಗಾಗಿ ನಮ್ಮ ಜಾತಿ ಸೇರಿಬಿಡಿ."
"........"
"ಇರಲಿ ಬಿಡಿ, ನಮಗೆ ಒಡಹುಟ್ಟಿದ ತಂಗಿ ಒಬ್ಬಳೇ, ನೀವು ಇನ್ನು ನನ್ನ ಹೊಸಾ ತಂಗಿ, ಹೇಗೆ?''
"ಅದಾದರೆ ಮಾತು.!"
"ನಾಯಕರೇ, ಮೆನೆಜರು ಬಂದಿದಾರೆ.!" ಅದುವರೆಗೆ ಆಕೆಗೆ ಮೆನೆಜರು ಒಳಗೆ ಕೇಬಿನ್ ನಲ್ಲಿ ಕೂತಿರುವುದು ಗಮನಕ್ಕೆ ಬಂದಿರಲಿಲ್ಲ.
"ಹೌದು, ನಾನೇ ಬರಬೇಕೆಂದು ರಿಕ್ವೆಸ್ಟ್ ಮಾಡಿದ್ದೆ."
"ಸುಮ್ಮನೆ ಅವರಿಗೆ ತೊಂದರೆ ಕೊಟ್ಟಿರಿ."
"ಇರಲಿ ಬಿಡಿ, ಬೇಂಕಿನಲ್ಲಿ ನಿಷ್ಠೆಯಿಂದ ಡ್ಯೂಟಿ ಮಾಡುವವರಲ್ಲಿ ನೀವು ಮೊದಲಿಗರು ಎಂದು ಅವರಿಗೂ ತಿಳೀಲಿ."
"ಓಹೋಹೋ, ಬೆಣ್ಣೆ ಚೆನ್ನಾಗಿಯೇ ಹಚ್ಚತೀರಿ, ಶಾಣ್ಯಾ ಇದೀರಿ. ಮುಂದಿನ ಡೀಟೇಲ್ಸ್ ಹೇಳಿ ಮತ್ತೆ..." ಕೆಲಸ ಮುಂದುವರೆಯಿತು....
oooOooo
"ನಾಯಕ್ ಮಾಮ್, ನಿಮ್ಮ ಬ್ರಾಂಚಲ್ಲಿ ಎಕೌಂಟ್ ಫೀಡಿಂಗ್, ಟ್ಯಾಲಿ, ಡೋರ್ಮೆಂಟ್-ನಾನ್ ಆಪರೇಟಿವ್ ಎಕೌಂಟ್ ಶಿಫ್ಟಿಂಗ್ ಎಲ್ಲ ಮುಗಿಯಿತಾ?" ದುರ್ಗದ ಬೈಲ್ ಬ್ರಾಂಚಿನ ನನ್ನ ಗೆಳೆಯ ವಿಚಾರಿಸಿದರು.
"ಮುಗಿಯಿತಾ ಅಂದರೆ ಎಂತದು ಮಹರಾಯ, ನಮ್ಮಲ್ಲಿ A L P M ಲೈವ್ ಮಾಡಿಯಾಯಿತು. ಈಗ ಸ್ವಲ್ಪ ದಿನ ಪ್ಯಾರಲಲ್ ಎಂಟ್ರಿ ಮಾಡುತ್ತಿದ್ದೇವೆ. ನಾಡಿದ್ದು ಸೋಮವಾರದಿಂದ A L P M only."
"ಹೌದಾ? ಇದೆಲ್ಲ ಹೇಗೆ ಮಾಡಿಸಿದಿರಿ? ಓವರ್ ಟೈಮ್ ಏನಾದರೂ ಕೊಟ್ಟಿದೀರಾ ಹೇಗೆ?"
"ಓವರ್ ಟೈಮ್ ಗೀವರ್ ಟೈಮ್ ಏನೂ ಇಲ್ಲ, ಎಲ್ಲ ರೆಗ್ಯುಲರ್ ಟೈಮ್."
"ಹೌದಾ, ನಮ್ಮಲ್ಲಿ ಮಾರ್ರೇ ದೊಡ್ಡ ಗಲಾಟೆ ಆಗಿದೆ, ಯೂನಿಯನ್ ಇಶ್ಶೂ ಆಗಿ ರಣ ರಂಪಾಟ ಆಗಿದೆ. ನೀವು ಹೇಗೆ ಮಾಡಿಸಿದಿರಿ..!" ಅವರಿಗೆ ಅಚ್ಚರಿ.
"ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡಿಸ್ತೇವೆ ಎಂಬ ಅಹಂ ತೋರಿಸಿ ನಡೆದರೆ ಕಷ್ಟ ಮಾರಾಯ್ರೆ. ದೋ ಪ್ಯಾರ್ ಭರೀ ಬಾತೇಂ ಬೋಲೋ ಭಾಯೀ......."
ಅವರು ಒಪ್ಪಿ ಮೆಚ್ಚುಗೆ ಸೂಚಿಸಿದರು...
ಹುಬ್ಬಳ್ಳಿಯ ಸ್ನೇಹಿತರಲ್ಲಿ ವಿದ್ಯಾ ನನ್ನ ಅಚ್ಚುಮೆಚ್ಚಿನವರು. ತೊಂಭತ್ತರ ದಶಕದ ಸ್ನೇಹ. ಅದನ್ನು ನೆನಪಿನಲ್ಲಿಟ್ಟುಕೊಂಡು ಮಗನ ಮದುವೆಗೆ ಆಮಂತ್ರಣ ಕಳಿಸಿದರು. ಇತ್ತೀಚೆಗೆ ಮುವ್ವತ್ತು ವರ್ಷಗಳ ನಂತರ ನಾವು ದಂಪತಿಗಳು ಮೈಸೂರಿನ ಅವರ ಮನೆಗೆ ಭೇಟಿ ಕೊಟ್ಟಾಗ ಅವರು ಮಾಡಿದ ಸಂಭ್ರಮದ, ಪ್ರೀತಿ ಭರಿತ ಸತ್ಕಾರ ಮರೆಯಲುಂಟೇ..... 🙏🙏🙏🙏🙏
Sunday, April 14, 2024
ಸ್ಮರಣೆ-ನರಸಿಂಹ ಮಲ್ಯರು..
ಮೊದಲ ಕಂತು.
ಹದಿಹರೆಯದವರ ಮನಸ್ಸು ಒದ್ದೆ ಮಣ್ಣಿನ ಗೋಡೆಯಂತೆ ಇರುತ್ತದೆ. ಯಾವುದೇ ವಿಚಾರವನ್ನು ಇವರಿಗೆ ತಿಳಿಹೇಳಿದರೆ ಅದನ್ನು ಟಪಕ್ಕೆಂದು ಒತ್ತಿಕೊಳ್ಳುತ್ತದೆ. ಒಳ್ಳೆಯ ಸದ್ವಿಚಾರಗಳನ್ನು, ಉತ್ತಮ ಸಂಗತಿಗಳನ್ನು ಹದಿಹರೆಯದಲ್ಲೇ ಬೆಳೆಸಿ ಕೊಳ್ಳುವಂತೆ ಪ್ರೇರೇಪಿಸಿದರೆ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆ ಸಿಗುತ್ತಾನೆ. ಅಂತೆಯೇ ಇದಕ್ಕೆ ವಿರುದ್ಧವಾದ, ವಿಪರೀತವಾದ ಸಂಗತಿ ನಡೆದರೆ ಒಬ್ಬಾತ ಸತ್ಪ್ರಜೆಯಾಗಿ ಬೆಳೆಯುವುದು ಡೌಟು. ನನ್ನ ಮಟ್ಟಿಗೆ ಹೇಳೂದಾದರೆ ನಾನು ಸಾಕಷ್ಟು ಭಾಗ್ಯಶಾಲಿ ಯೆಂದೇ ಹೇಳಬಹುದು.
ಹದಿಹರೆಯದ ನಿಜವಾದ ಅರ್ಥದಲ್ಲಿ ಅಂದರೆ ನನ್ನ ಹದಿಮೂರನೇ ವಯಸ್ಸಿನಲ್ಲೇ ನನಗೆ ಸಂಘದ ಸಂಪರ್ಕವಾಯಿತು. ಹಸೀಗೋಡೆ - ಆ ಹಸಿ ಗೋಡೆಯ ಮೇಲೆ ಸಂಘಮುಖೇನ ಅನೇಕ ಸಮಾಜಮುಖಿ ವಿಚಾರಗಳು, ದೇಶಕ್ಕಾಗಿ ಬದುಕು ನಡೆಸುವ ಇಚ್ಛಾಶಕ್ತಿ, ಉತ್ತಮ ನಡವಳಿಕೆ ಇತ್ಯಾದಿ ಇತ್ಯಾದಿ.. ಪ್ರಾಪ್ತವಾದವು. ನನ್ನಂತೆಯೇ ಇನ್ನೂ ಅನೇಕ ಹಸೀಗೋಡೆಗಳು ಅಂದಿನ ಕಾಲದಲ್ಲಿ ಸಂಘಸಂಪರ್ಕಕ್ಕೆ ಬಂದು ಇಂದು ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ಬದುಕು ಬಾಳುತ್ತಿದ್ದಾರೆ.
ನರಸಿಂಹ ಮಲ್ಯ:- ನಮ್ಮ ಮಾಮ (ಅಂಕಲ್) ನರಸಿಂಹ ಮಲ್ಯರನ್ನು ತಂಪು ಹೊತ್ತಿನಲ್ಲಿ ನೆನೆಯಬೇಕು. ನಮಗೆ ಮಾಮ ನಾದರೂ ನಮ್ಮ ಗೆಳೆಯನಂತೆ ಇದ್ದರು. ಯಾರೊಡನೆಯೂ ಜಗಳವಿಲ್ಲದೇ, ಎಲ್ಲರೊಡನೆ ಸ್ನೇಹದಿಂದ ಇರುವ ಕಲೆ ಅವರಿಂದ ಕಲಿಯಬೇಕು. ಸದಾ ಹಸನ್ಮುಖಿ. ಧಾರಾಳ ಮಾತು. ಒಮ್ಮೆ 'ಬಾ ಮಹರಾಯ, ವರಂಗಕ್ಕೆ ಹೋಗಿ ಬರೋಣ,' ಎಂದು ಕರಕೊಂಡು ಹೋದರು. ಅಲ್ಲಿ ನಮ್ಮ ಸಂಬಂಧಿಗಳ ಮನೆಯಲ್ಲಿ ಒಳಗೆ ಅಡಿಗೆ ಮನೆಯಲ್ಲಿ ಕೂತು ಮನೆಯ ಹೆಂಗಸರೊಡನೆ ಇವರ ಮಾತುಕತೆ ಮುಂದುವರೆಯಿತು. ನನಗೆ ಅವರಲ್ಲಿ ಹೆಚ್ಚಿನ ಹೊಕ್ಕುಬಳಕೆ ಇಲ್ಲದ ಕಾರಣ ಬೇಸರ ಹತ್ತಿತು. ಕೂತಲ್ಲೇ ತೂಕಡಿಕೆ ಬರಲಾರಂಭಿಸಿತು. ನನ್ನ ಸಮವಯಸ್ಕರಾರೂ ಇದ್ದ ನೆನಪಿಲ್ಲ. ಕೊನೆಗೂ ಅವರ ಮಾತುಕತೆ ಎಲ್ಲ ಮುಗಿದು 'ಇನ್ನು ಬರುತ್ತೇನೆ, ತುssoಬಾ ಮಾತಾಡ್ಲಿಕ್ಕೆ ಉಂಟು, ಇನ್ನೊಮ್ಮೆ ಸಿಗುತ್ತೇನೆ.. ಯೋರೆ ಉಟ್ರೆ' ಎಂದು ನನ್ನನ್ನೆಬ್ಬಿಸಿದರು. 'ಅದೆಲ್ಲ ಆಗೂದಿಲ್ಲ ನೀವಿಬ್ರೂ ಇವತ್ತು ಇಲ್ಲಿ ಊಟ ಮಾಡಿಯೇ ಹೋಗಬೇಕು. ಹೋ ಮುಕ್ತಾಲೋ ಮ್ಹಾಲ್ಗಡೊ ನ್ಹಂವೇ ಹ್ಞಾಂಣೆ ಎವಚೇ ಊಣೆ.' ಎಂದವರು ಪ್ರೀತಿಯಿಂದ ಒತ್ತಾಯ ಮಾಡಿ ಊಟದ ನಂತರವೇ ನಮ್ಮನ್ನು ಬೀಳ್ಕೊಟ್ಟರು. ಹೊರಬರುವಾಗ ಅವರ ಕಣ್ಣಲ್ಲಿ ಪ್ರೀತಿಯ ಹನಿಯೊಂದು ತುಳುಕಿದುದು ಕಂಡೆನೇ.... ಈಗ ನೆನಪಿಗೆ ಬರೂದಿಲ್ಲ.
'ಅಲ್ಲ ನರ್ಶಿಮ್ಮ ಮಾಮ, ನಿನಗೆ ಹೆಬ್ರಿಯಲ್ಲಿ ಕಂಡಾಪಟ್ಟೆ ಕೆಲಸ ಉಂಟು, ತುರಿಸಿಕೊಳ್ಳಲು ಪುರಸೋತಿಲ್ಲ ಎಂದು ಪಿರಿಪಿರಿ ಮಾಡಿದಂವ ಇಲ್ಲಿ ವರಂಗದವರಲ್ಲಿ ಅದು ಇದು ಚೈಂ ಚೈಂ ಎಂತದು ಪರಂಗಾವಣೆ ಮಾಡುತ್ತಿದ್ದೆ?' ಸಣ್ಣಗೆ ಆಕ್ಷೇಪಿಸಿದೆ.
'ನೋಡು ಇವನೇ, ನಿನಗೆ ಕೆಲವು ಸೂಕ್ಷ್ಮ ತಿಳಿಸುತ್ತೇನೆ. ಅವರು ನಮ್ಮ ತೀರಾ ಹತ್ತಿರದ ಬಳಗ. ನಾವು ಹೆಬ್ರಿ - ಶೀಮೋಗಾ ಅಂತ ದೊಡ್ಡ ಊರುಗಳಲ್ಲಿರುವವರು. ನಮ್ಮನಮ್ಮ ತಲೆಬಿಸಿ ನಮಗೆ, ಅವರಿಗೆ ಅದೆಲ್ಲ ತಿಳಿಯೂದಿಲ್ಲ. ನಾವು ಸಮಯ ಮಾಡಿ ಕೊಂಡು ಅವರಲ್ಲಿ ಹೋದ್ರಿಂದ ಅವರಿಗೆ ಎಷ್ಟು ಖುಷಿಯಾಯ್ತು ನೀನೇ ನೋಡಿದಿಯಲ್ಲ! ಮನೆಯ ಎಲ್ಲ ಮಂದಿ ಬಂದು ಕಷ್ಟ ಸುಖ ಹಳೇ ನೆನಪುಗಳನ್ನೆಲ್ಲ ಕೆದಕಿ ಕೆದಕಿ ಸಂತೋಷಪಟ್ಟರು ಹೌದೋ ಅಲ್ವೋ ... 'ಅಂವ ಶಿಮೋಗ ಅಂತ ದೊಡ್ಡ ಪೇಟೆಯಲ್ಲಿ ದೊಡ್ಡ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದಾನೆ! ಅಷ್ಟೆಲ್ಲ ಗಡಿಬಿಡಿ ಇದ್ದರೂ ನೆನssಪಿನಲ್ಲಿ ನಮ್ಮಲ್ಲಿ ಬಂದು ಎಷ್ಟೆಲ್ಲ ಮಾತನಾಡಿ ಹೋದ ನೋಡಿ, ಒಂಚೂರೂ ಜಂಬ ಇಲ್ಲ , ಹಾಂಕಾರ ಇಲ್ಲ. ಆ ಮುಕ್ತಾಳ ಹಿರಿಯಂವ ಸಹ ಕಲಿಯಲು ಭಾರೀ ಬುದ್ಧಿವಂತ ಎಂದು ಕೇಳಿದ್ದೇವೆ.' ಎಂದು ಇನ್ನವರು ಆರು ತಿಂಗಳ ವರೆಗೆ ಮೆಲಕು ಹಾಕಿಕೊಂಡು ಖುಷಿಪಡುತ್ತಾರೆ. ನಮ್ಮಿಂದ ಪಾವಾಣೆ ಖರ್ಚಿಲ್ಲದೆ ಒಬ್ಬರಿಗೆ ಕಿಂಚಿತ್ ಆದರೂ ಸಂತೋಷ ಆದರೆ ನಮಗೇ ಒಳ್ಳೇದು, ಏನಂತೀ?' ಸಣ್ಣ ಲೆಕ್ಚರ್ ಆದರೂ ತುಂಬ ಮೌಲ್ಯಯುತ ಮಾತು ಹೇಳಿದರು. ಆದಿನ ಅವರ ಮಾತಿನ ಮಹತ್ವ ತಿಳಿದಿರಲಿಲ್ಲ, ಮುಂದಿನ ದಿನಗಳಲ್ಲಿ ಅರ್ಥವಾಗಲಾರಂಭಿಸಿತು. ಆದಷ್ಟು ಮಟ್ಟಿಗೆ ನಯವಿನಯದ ನುಡಿಗಳು, ಸಕಾರಾತ್ಮಕ ಮಾತುಗಳು, ಬೇಂಕಿನಲ್ಲಿ ನಗುಮುಖದ ಸೇವೆ, ಇತರರನ್ನು ಗೌರವಿಸುವ ಪರಿ ಇವೆಲ್ಲವನ್ನು ನಾನು ನಮ್ಮ ನರ್ಶಿಮ್ಮಮಾಮನ ಸಂಗದಿಂದಲೇ ಕಲಿತದ್ದು. ಗೆಳೆಯ ಪರಿಚಿತರೊಡನೆ ಹಾಸ್ಯ ಕುಷಾಲು ಮಾಡುವುದಿದ್ದರೂ ಆದಷ್ಟು ಮಟ್ಟಿಗೆ ಮನ ನೋಯಿಸದ ಹಿತಕರ ಆರೋಗ್ಯಕರ ತಮಾಷೆಗಳನ್ನೆಲ್ಲ ನಾನು ಅವರಿಂದಲೇ ಕಲಿತದ್ದು...
ಒಂದು ಎಪಿಸೋಡು:-ಊರಿಗೆ-ಹೆಬ್ರಿಗೆ-ಬಂದರೆ ಅವರ ಊಟ ತಿಂಡಿ ದಿನಚರಿ ಎಲ್ಲ ನಮ್ಮ ಮನೆಯಲ್ಲೇ, ಇದು ನಡಕೊಂಡು ಬಂದ ವ್ಯವಸ್ಥೆ. ಒಮ್ಮೆ ರಾತ್ರಿ ಎಲ್ಲರೂ ಊಟಕ್ಕೆ ಲೈನಾಗಿ ಕೂತಿದ್ದು, ಅಮ್ಮ ಬಡಿಸುತ್ತಿದ್ದರು. ನರಸಿಂಮ ಬಂದಿದ್ದಾನೆ, ಅವನಿಗೆ ಪ್ರೀತಿ ಅಂತ ಖಾರ ಉದ್ದಿನ ಹಪ್ಪಳ ಕರಿದು ಇಟ್ಟಿದ್ದರು. ಕಿರಿಯ ತಮ್ಮನ ಮೇಲೆ ಒಂದು ಮುಷ್ಟಿ ಮೋಕೆ ಜಾಸ್ತಿ...
'ಅಕ್ಕಾ , ಇವತ್ತು ಒಂದು ಕತೆ ಆಯ್ತಲ್ಲಾ..?' ಮಾಮ ಮಾತಿಗೆ ಸುರುವಿಟ್ಟರು.
'ಎಂಥದು?'
'ಬೆಳಗ್ಗೆ ಹೆಬ್ರಿಗೇ ಅಂತಾ ಮಿನಿಬಸ್ಸಲ್ಲಿ ಬರ್ತಿದ್ನಾ! ಎದೂರಿನ ಸೀಟು. ಆಗುಂಬೆ ಘಾಟಿಯ ಏಳನೇದ್ದೋ ಆರನೇದ್ದೋ ಕರ್ವಲ್ಲಿ ... ಎಂಥಾ ಹೇಳೂದು? ಈಷ್ಟುದ್ದ ಹೆಬ್ಬಾವು! ಅಬಬಬಬ!'
'ಈಷ್ಟುದ್ದ ಅಂದ್ರೆ ಎಷ್ಟುದ್ದ?'
'ಎಷ್ಟು ಉದ್ದವಾ!! ನೋಡು ಇಲ್ಲಿ ನಾನು ಕೂತಿದ್ದೇನಲ್ವಾ, ಇಲ್ಲಿಂದ ಓ ಅಲ್ಲಿ ನೀನು ಹಪ್ಪಳ ಸುಟ್ಟು ಇಟ್ಟಿದ್ದೀಯಲ್ಲಾ ಅಲ್ಲೀ ವರೆಗೆ ... ಅssಷ್ಟೂದ್ದ!!'
'ಅಯ್ಯೋ ದೇವರೇ! ನಿಮಗೆ ಹಪ್ಪಳ ಬಡಿಸಲೇ ಇಲ್ಲವಲ್ಲಾ! ನನ್ನ ನೆನಪಿಗಿಷ್ಟು ಬೆಂಕಿ ಹಾಕ! ಛೇ ಎಂತಾ ಕೆಲಸ ಆಯಿತು, ನಿಮ್ಮ ಊಟ ಮುಗೀಲಿಕ್ಕಾಯಿತು!!' ಅಮ್ಮ ತರಾತುರಿಯಿಂದ ಹಪ್ಪಳ ಬಡಿಸಿದರು.
'ಅಲ್ಲ ಮಹರಾಯ! ಹಪ್ಪಳ ಬಡಿಸು ಅಕ್ಕಾ , ಎಂದು ನೇರ ಹೇಳೂದು ಬಿಟ್ಟು ನಿಂದು ಇದೆಲ್ಲ ನಾಟಕ ಎಂಥದು?'
'ಅಲ್ಲ, ಹಪ್ಪಳ ಸುಟ್ಟು ಚಂದಕ್ಕೆ ಇಟ್ಟದ್ದಾ? ಬಡಿಸಬೇಕಂತ ಪುನಃ ಹೇಳ್ಬೇಕಾ? ಅದಕ್ಕೇ ಕತೆ ಕಟ್ಟಿದ್ದು.' ಇವರು ಕಣ್ಣು ಮಿಟುಕಿಸಿದರು. ಘೊಳ್ಳನೆಯ ನಗು ಅಡುಗೆ ಮನೆಯಲ್ಲಿ ಮೊಳಗಿತು.