Saturday, July 25, 2020

ಭಕ್ತಿ ಶೃದ್ಧೆ ಮತ್ತು ನಂಬಿಕೆ.💐💐💐

ಭಕ್ತಿ, ನಂಬಿಕೆ ಮತ್ತು ಶರಣಾಗತಿ-

     ಒಂದು ಊರಲ್ಲಿ ಭಯಂಕರ ಕ್ಷಾಮದ ಸಂಕಟ ಬಿತ್ತು. ವರುಷಗಳಿಂದ ಮಳೆ ಬಾರದೇ ಜನರು ನಾನಾ ಕಷ್ಟ ಕೋಟಲೆಗಳಿಗೀಡಾದರು. ಅನೇಕರು ತಮ್ಮ ಗದ್ದೆ ಬೇಸಾಯಗಳನ್ನು ತೊರೆದು ಇತರ ಊರುಗಳಿಗೆ ಗುಳೇ ಹೋದರು. ಊರಲ್ಲಿ ಇನ್ನೂ ಯಾವುದೋ ಆಸೆಯ ಆಧಾರದಲ್ಲಿ ಉಳಕೊಂಡವರೂ ತಲೆಯ ಮೇಲೆ ಕೈಯಿಟ್ಟು ಆಕಾಶದತ್ತ ಕುತ್ತಿಗೆ ಉದ್ದ ಮಾಡಿ ನೋಡುತ್ತ ನಿಟ್ಟುಸಿರು ಬಿಡತೊಡಗಿದರು. ಕೊನೆಯಲ್ಲಿ ಎಲ್ಲರೂ ಸಮಾಲೋಚನೆ ಮಾಡಿ ಊರ ಹೊರಗಿನ ಗುಡ್ಡದ ಮೇಲೆ ಅಖಂಡ ಭಜನಾ ಕಾರ್ಯಕ್ರಮ ಮಾಡುವುದು, ದೇವರು ಭಕ್ತವತ್ಸಲ, ದಯಾಮಯಿ ತನ್ನ ಭಕ್ತರ ಅಭೀಷ್ಟೆಯನ್ನು ತಪ್ಪದೇ ನೆರವೇರಿಸುತ್ತಾನೆ ಎಂಬ ಮಹನೀಯರೊಬ್ಬರ ಸಲಹೆಯನ್ನು ಒಪ್ಪಿ ಗುಡ್ಡ ಏರಲು ಹೊರಟರು.

ಎಲ್ಲರೊಡನೆ ಆ ಊರಿನ ವಿಧವೆಯೋರ್ವಳ ಚಿಕ್ಕ ಮಗನೂ ಹೊರಟ. ಅವನು ಮತ್ತು ತಾಯಿ ಇಬ್ಬರೂ ತೀರ ಬಡವರಾಗಿದ್ದು ಅವಿದ್ಯಾವಂತರಾಗಿದ್ದು ಊರವರ ತಾತ್ಸಾರಕ್ಕೊಳಪಟ್ಟಿದ್ದರು. ಈ ಹುಡುಗನು ಈ ಬುದ್ಧಿವಂತ ಮಹನೀಯರ ಮಾತುಗಳನ್ನು ನೂರಕ್ಕೆ ನೂರೂ ನಂಬಿ ಭಜನಾಕಾರ್ಯಕ್ರಮಕ್ಕೆ ಹೊರಟ. ಮೇಲ್ಗಡೆ ಝಗಝಗನೆ ಝಳಪಿಸುವ ಸೂರ್ಯ. ಈ ಹುಡುಗ ತನ್ನೊಡನೆ ಒಂದು ಹಳೇ ಕೊಡೆಯನ್ನೂ ಹಿಡಿದುಕೊಂಡು ಹೊರಟಿದ್ದ. ಅವನ ಈ ಚರ್ಯೆಯನ್ನು  ನೋಡಿ ಎಲ್ಲರೂ ಗಹಗಹಿಸಿ ನಕ್ಕರು. ಏಕೆ ನಗುತ್ತೀರಿ? ಎಂದು ಮಹನೀಯರು ಕೇಳಿದರು...

'ಅಲ್ಲ ಸ್ವಾಮೀ, ಮೇಲೆ ಈ ನಮೂನೆ ಬಿಸಿಲುಂಟು, ಈ ಹುಂಬ ಹುಡುಗ ಕೊಡೆ ಹಿಡಕೊಂಡು ಬಂದಿದ್ದಾನೆ. ಹ್ಹ ಹ್ಹ' ಎಂದು ಉತ್ತರ ಬಂತು.

'ನಿಜವಾದ ಹುಂಬರು ಯಾರು? ಖಂಡಿತ ಮಳೆ ಬರೂದಿಲ್ಲ ಎಂದು ತಿಳಿದೂ ಭಜನೆಗೆಂದು ಹೊರಟ ನಾವೋ, ನನ್ನ ಮಾತಿನ ಮೇಲೆ ಅಚಲ ವಿಶ್ವಾಸವಿಟ್ಟು ಭಜನೆ ಮಾಡಿದರೆ ಮಳೆ ಖಂಡಿತಾ ಬರುತ್ತದೆ, ಬಂದಾಗ ನೆನೆಯಬಾರದಲ್ಲ ಎಂಬ ಮುಂದಾಲೋಚನೆಯ ಈ ಹುಡುಗನೋ?'

ಕ್ಷಣಕಾಲ ಊರವರು ಸಂದಿಗ್ಧಕ್ಕೊಳಗಾದರು...

ನಮ್ಮ ಅಮ್ಮ ಹೇಳಿದ ಕತೆ. ಅವರ ನೆನಪಿನ ಖಜಾನೆಯಲ್ಲಿ ಇಂತಹ ನೂರಾರು ರತ್ನಗಳಿದ್ದವು. ನನ್ನ ನಿರೂಪಣೆ ಅಷ್ಟು ಸ್ವಾರಸ್ಯವಾಗಿಲ್ಲ. ಆದರೆ ಕತೆಯ ಭಾವ ಮನದಟ್ಟು ಮಾಡಿಸಲು ಶಕ್ತನಾಗಿದ್ದೇನೆಂಬ ನಂಬಿಕೆ ಇದೆ.

Thursday, July 23, 2020

ಕೋಪ ತಾಪ, ಸಿಟ್ಟು ಸೆಡವು, ರಾಗ ದ್ವೇಷ...

ದೋಸ್ತಿ ಹಾಗೂ ವ್ಯವಹಾರಗಳಲ್ಲಿ ಸಹನೆ * ಅಸಹನೆ
 
     01: ದಿಲ್ಲಿಯ ಕರೋಲ್ ಬಾಗ್ ಏರಿಯಾದಲ್ಲಿ ನಮ್ಮ ಬ್ರಾಂಚು-'ರಾಣೀ ಝಾನ್ಸೀ ರೋಡ್ ಬ್ರಾಂಚ್'- ಬಹಳ ಫೇಮಸ್ಸು. ಪ್ರತಿಯೊಬ್ಬ ಸ್ಟಾಫೂ ಒಬ್ಬನಿಗಿಂತ ಒಬ್ಬ ಮಾಹೇರು! ಯಾವುದರಲ್ಲಿ! ಅಧಿಕ ಪ್ರಸಂಗ ಹರಕತ್ತುಗಳಲ್ಲಿ.. ಇವರ ಕೂಟಕ್ಕೆ ಗುಪ್ತಾ ಲೀಡರು. ಚಾತುರ್ಕಾಯಿ-ಬುದ್ಧಿವಂತಿಕೆ-ಮಾತು! ಇತರರ ಲೇವಡಿ ಮಾಡುವವರ ಟ್ರೇನಿಂಗ್ ಸ್ಕೂಲಿಗೆ ಈತ ಪ್ರಿನ್ಸಿಪಾಲು! ಎಲ್ಲರ ಬಳಿಯೂ ಮಾತನಾಡುವಾಗ ಒಂದಲ್ಲ ಒಂದು ಚಾಟೂಕ್ತಿ, ಸಣ್ಣ ವ್ಯಂಗ್ಯ ಇವೆಲ್ಲ ಇದ್ದದ್ದೇ. ಅನೇಕ ಸಲ ಸಣ್ಣಪುಟ್ಟ ರಸಕಸಿಗಳೂ ಆದದ್ದಿದೆ. ಇಂತಹ ಗ್ರೂಪಲ್ಲಿ ನಾನೊಬ್ಬ ಸಜ್ಜನ! ಸೇರಿಕೊಂಡೆ. ಎಲ್ಲಾ ಪ್ರಸಂಗಗಳಲ್ಲೂ ಕುಟುಕು ಮಾತಾಡಿ ನಗುವ ಪ್ರವೃತ್ತಿ ನನ್ನದಿರಲಿಲ್ಲ. ಒಂದೆರಡು ಬಾರಿ ಆಕ್ಷೇಪಿಸಿದ್ದೂ ಆಗಿತ್ತು. "ಜಿ಼ಂದಗೀ ಮೇ ಮಜೇ಼ ಸೇ ರೆಹನಾ ಭೇಣ್....ದ್" ಎಂದು ತೇಲಿಸಿಬಿಟ್ಟಿದ್ದ....

      "ಗುಪ್ತಾಜೀ, ಮೆನೆಜರ್ ಸಾಬ್ ನೇ ಏಕ್ ಸ್ಟೇಟ್ ಮೆಂಟ್ ಮಂಗ್ವಾಯಾ ಥಾ, ಹೋಗಯಾ ಕ್ಯಾ? ಪೂಛ್ ರಹೇ ಹೈಂ" ಅವನ ಟೇಬಲ್ ಬಳಿ ಹೋಗಿ ಕೇಳಿದೆ.

     "ತೂ ಕ್ಯಾ ಯಹಾಂ ಕಾ ಗವರ್ನರ್ ಲಗತಾ ಹೈ? ಬಡಾ ಆಯಾ ಸ್ಟೇಟ್ ಮೆಂಟ್ ಪೂಛನೇ..." ತೆಗೆದ ಮಾತಿಗೆ ಘಟ್ಟಿಯಾಗಿ ವದರಿದ, ಎಡಗೈ ತನ್ನ ಮೀಸೆಯನ್ನು ತಿರುವುತ್ತಿತ್ತು. ಇಡೀ ಬ್ರಾಂಚು ಅವನ ಬೊಬ್ಬೆಗೆ ಚಕಿತವಾಯಿತು, ಸ್ತಬ್ಧವಾಯಿತು. ಪಿನ್ ಡ್ರಾಪ್ ಸೈಲೆನ್ಸ್!!.

     "ಮೇ ಯಹಾಂ ಕಾ ಗವರ್ನರ್ ಲಗತಾ ಹೂಂ, ತೂ ಉಸಕಾ ಚಪರಾಸೀ ಲಗತಾ ಹೈ ಕ್ಯಾ?" ಅವನಿಗಿಂತ ಒಂದು ಮುಷ್ಟಿ ಹೆಚ್ಚು ಗರಮ್ ಹಾಗೂ ಸಿಟ್ಟಿನಲ್ಲಿ ನಾನೂ ವದರಿದೆ. ನನಗೆ ಆ ದಿನ ಕೊಂಚ ಕಿರಿಕಿರಿಯೂ ಇತ್ತು.

     "ಹೋ" ಎಂದು ಬ್ರಾಂಚಲ್ಲಿ ಬೊಬ್ಬೆ ಎದ್ದಿತು. 'ನಾಯಕ್ ಸಾಬ್ ಗುಸ್ಸೇ ಸೇ ಲಾಲ್ ಪೀಲಾ ಹೋಗಯೇ, ಮಜಾ಼ ಆಗಯಾ" ಎಲ್ಲರೂ ಗದ್ದಲ ಮಾಡಹತ್ತಿದರು.

     "ಕ್ಯಾ ಬೋಲಾ ಭೇಂ...." ಎಂದು ಕುರ್ಚಿಯಿಂದ ಎದ್ದ ಗುಪ್ತಾ...

     "ಜ್ಯಾದಾ ಶಾಣ್ ಪತ್ತೀ ದಿಖಾನಾ ಜರೂರೀ ನ್ಹಂಹೀ ಅಪನೇ ಓಕಾದ್ ಮೈ ರಹೋ." ಎಂದು ಹೇಳಿ ನನ್ನ ಟೇಬಲ್ಲಿಗೆ ಬಂದು ಕೂತೆ. ಮನಸ್ಸು ಬಹುವಾಗಿ ವ್ಯಗ್ರಗೊಂಡಿತ್ತು.

     ದಿಲ್ಲಿಯಲ್ಲಿ ಒಂದು ನಿಯಮವಿತ್ತು. ಯಾವುದೇ ಜಗಳ ಕೂಗಾಟಗಳಿರಲಿ ಹೆಚ್ಚೆಂದರೆ 2 - 3 ಘಂಟೆ. ನಂತರ ಸರಿಹೋಗುತ್ತಿತ್ತು. ಆದರೆ ನಮ್ಮಿಬ್ಬರ ಜಗಳ ಮಾತ್ರ ಸೀರಿಯಸ್ ಆಯಿತು. ಈ ಪಾಪದ ನಾಯಕ ತನಗೆ ಎದುರು ಮಾತಾಡಿದನಲ್ಲಾ ಎಂಬ ಖತಿ ಜಾಸ್ತಿಯಾಯಿತವನಿಗೆ. ನನ್ನ ಬಳಿ ಮಾತು ಬಿಟ್ಟ. ಒಳ್ಳೇದೇ ಆಯಿತು, ಸ್ವಲ್ಪ ಬುದ್ಧಿ ಬರಲಿ ಎಂದು ನಾನೂ ಮೌನ ವಹಿಸಿದೆ. ನನಗೆ ಆತನ ಸಡಿಲ ಮಾತುಗಳ ಕಿರಿಕಿರಿ ತಪ್ಪಿತು. ಸುಮಾರು ಒಂದು ವಾರವಾಯಿತು. ನನ್ನ ಬಳಿ ಮಾತು ಬಿಟ್ಟದ್ದಲ್ಲದೇ ಇತರ ಸ್ಟಾಫಿನ ಬಳಿ ಒಂದೆರಡು ದಿನ ಏನೇನೋ ವೀರಾವೇಷ ಆಡಿದ ಕಾರಣ ಹೆಚ್ಚಿನವರು ಆತನ ಹತ್ತಿರ ಮಾತು ಬಿಟ್ಟರು. 'ರೆಹತೆ ರೆಹತೇ ನಾಯಕ್ ಜೈಸೆ ಭಲೇ ಆದ್ಮೀ ಸೇ ಪಂಗಾ ಲೇ ಬೈಠಾ ಹೈ, ಉಲ್ಲೂ ಕ ಪಠ್ಠಾ' ಎಂದು ಅನೇಕರಿಗೆ ಬೇಸರವಿತ್ತು. ನಾಲ್ಕನೇ ದಿನದಿಂದ ಪೂರ್ತಿ ಮೌನವಾಗಿಬಿಟ್ಟ. ತಾನಾಯಿತು ತನ್ನ ಕೆಲಸವಾಯಿತು. ಊಟದ ಸಮಯ ಜತೆಯಾಗಿರುತ್ತಿದ್ದ, ಅದನ್ನೂ ನಿಲ್ಲಿಸಿ ತನ್ನ ಟೇಬಲ್ಲಿನಲ್ಲೇ ಉಣತೊಡಗಿದ. ಯಾವಾಗಲೂ ಮೀಸೆಯ ಮೇಲೇ ಕೈಯಿರುತ್ತಿತ್ತು, ಈಗದು ನಿಂತು ಹೋಯಿತು.

     ಎಂಟನೇ ದಿನ ಆತನ ಟೇಬಲ್ ಬಳಿ ಹೋದೆ. "ಭಾಯಿ ಗುಪ್ತಾ, ಜಿಂದಗೀ ಭರ್ ಐಸೇ ಹೀ ಮುಹ್ ಮೋಡಕೇ ರಹೋಗೆ ಕ್ಯಾ? ಗಲೇ ನ್ಹಂಹೀ ಲಗಾವೋಗೇ?"

     "ಅರೇ ನಾಯಕ್, ಯಾರ್ ಮೇರೇ ಬಡೇ ಭಾಯೀ, ಮುಝೆ ಮಾಫ್ ಕರೋ ಯಾರ್...." ಗೋಳೋ ಎಂದು ಅಳುತ್ತಾ ಖುರ್ಚಿಯಿಂದೆದ್ದು ಅಪ್ಪಿಕೊಂಡ. "ಮೇರೀ ಮತ್ ಮಾರೀ ಗಯಿ ಥೀ, ಆಪ್ ಸೇ ಝಗಡಾ ಕರಕೆ ಆಠ್ ದಿನ್ ಸೇ ಪಾಗಲ್ ಸಾ ಹುವಾ ಹೂಂ" ತಬ್ಬಿಕೊಂಡೇ ಇದ್ದ.

     "ಲೇಕಿನ್ ತೇರಾ ಅಹಮ್ ಕಾ ಕೀಡಾ ತೋ ಮರಾ ನಂಹಿ ನಾ, ಹಾಥ್ ಬಡಾಕರ್ ಮೇಂ ಹೀ ಆಯಾ, ಎನಿಹೌ ಛೋಡೋ ಇನ್ ಬಾತೋಂ ಕೋ." ನಂತರದ ದಿನಗಳಲ್ಲಿ ಅವನ ವರ್ತನೆ ತುಂಬ ಸುಧಾರಣೆ ಹೊಂದಿತು.......

     ನಾವೇಕೆ ಸಿಟ್ಟುಗೊಳ್ಳುತ್ತೇವೆ? ನಾವೇ ಬುದ್ಧಿವಂತರು, ಇತರರು ನಮ್ಮ ಮಾತು ಕೇಳಲೇ ಬೇಕು ಎಂಬಿತ್ಯಾದಿ ಹಠ ಏಕೆ ನಮ್ಮಲ್ಲಿ ಹುಟ್ಟುತ್ತದೆ? ಅದು ಒಂದು ದೌರ್ಬಲ್ಯವೇ ರೋಗವೇ?.....

     02: ಆದ್ಯತಾ ರಂಗದ ಕೆಟಗರಿಯಲ್ಲಿ ಬೇಂಕುಗಳು ನೀಡುವ ಸಾಲಗಳಿಗೆ DICGC ಯವರಿಂದ ಭದ್ರತೆ ಇತ್ತು. ಸಿಕ್ಕಾಪಟ್ಟೆ ಕಟ್ಟುಬಾಕಿಯಾದ, ವಾಪಸು ಬರುವ ಯಾವುದೇ ಸಾಧ್ಯತೆಗಳಿಲ್ಲದ ಇಂಥಾ ಸಾಲಗಳಿಗೆ ಈ ಕೊರ್ಪೋರೇಷನ್ನಿನಿಂದ ಗ್ಯಾರಂಟಿ ಲಭ್ಯವಿತ್ತು. ನನಗೆ ನೆನಪಿರುವಂತೆ 1976 ರ ಸಮಯ, ಅನ್ಯಾನ್ಯ ಕಾರಣಗಳಿಂದ ಕಟ್ಟುಬಾಕಿಯಾಗಿ - ಬೇಕೆಂತಲೇ ಓವರ್ ಡ್ಯೂ ಮಾಡಿಕೊಂಡ ಸಾಲ ಹೊರತುಪಡಿಸಿ - ಎಲ್ಲಾ ರಿಕವರಿ ಕ್ರಮಗಳ ನಂತರವೂ ವಸೂಲಾಗದ ಇಂತಹ ಸಾಲಗಳ ಬಾಬ್ತು ನಮ್ಮ ನಮ್ಮ ಬ್ರಾಂಚುಗಳ ಕ್ಲೇಮು ಕಳಿಸಬೇಕಿತ್ತು. ಎಲ್ಲಾ ಶಾಖೆಗಳ ಕ್ಲೈಮುಗಳನ್ನು ಸಂಬಂಧಪಟ್ಟ ರೀಜನಲ್ ಆಫೀಸುಗಳು ಕ್ರೋಢೀಕರಿಸಿ ಕೊರ್ಪೋರೇಷನ್ನಿಗೆ ಕಳಿಸಬೇಕಿತ್ತು. ಈ ಕ್ಲೇಮ್ ತರಿಸಿಕೊಳ್ಳುವ ಪ್ರೊಸೀಜರು ಮಾತ್ರ ಬರೀ ಕಿರಿಕಿರಿಯದ್ದಾಗಿತ್ತು. ದಿನಕ್ಕೊಂದು ಸರ್ಕುಲರ್, ಹಿಂದಿನ ಸರ್ಕುಲರ್ ಮೇಲಿನ ಪ್ರಶ್ನೆಗಳ ಸಮಜಾಯಿಷಿಗೆ ಇನ್ನಷ್ಟು ಸರ್ಕುಲರುಗಳು, ಕಳಿಸಿಕೊಟ್ಟ ಫಾರ್ಮೆಟ್ಟು ತಪ್ಪಾಗಿದೆ, ಮೂರು ಕಾಪಿ ಅಲ್ಲ ಆರು ಕಾಪಿ ಕಳಿಸಿ... ಒಂದೇ ಎರಡೇ !!!
     
     ಹೆಬ್ರಿ ಬ್ರಾಂಚಿನ ಮೆನೆಜರು ಶೆಣೈಮಾಮರು. ಬಹಳ ಒಳ್ಳೆಯ ಮನುಷ್ಯ, ಸದಾ ಚಟುವಟಿಕೆಯಿಂದ, ನಿರರ್ಗಳ ಮಾತಾಡುತ್ತ, ನಗುತ್ತ ಇರುತ್ತಿದ್ದರು. ಸ್ವಲ್ಪ ಗಡಿಬಿಡಿ ಸ್ವಭಾವ. ಅಲ್ಲದೇ ಸುರುಕ್ಕೆಂದು ಸಿಟ್ಟು ಏರುತ್ತಿತ್ತು, ಪುಸುಕ್ಕೆಂದು ಇಳಿಯುತ್ತಿತ್ತು. ನನ್ನ ಹಾಗೂ ಅವರ ಭೂತ ಒಂದೇ ಇದ್ದಿತ್ತೋ ಏನೋ, ನನಗೂ ಅವರಿಗೂ ಪದೇ ಪದೇ ಮಾತಿನ ಚಕಮಕಿ ನಡೆಯುತ್ತಿತ್ತು. ...
     
     ಅನೇಕ ಪ್ರಯತ್ನಗಳು, ಐದಾರು ಸಲ ರೀಜನಲ್ ಆಫೀಸು ಭೇಟಿ ಮತ್ತು ಲೆಕ್ಕವಿಲ್ಲದಷ್ಟು ಫೋನ್ ಕಾಲ್ ಗಳು ನಡೆದವು. 'ಈ ಸೀ ಜಿ ಸೀ ಕ್ಲೇಮಿನ ಸುದ್ದಿಯೇ ಬೇಡವಿತ್ತು ಮಾರಾಯ!! ಎಂಥಾ ಪಿರಿಪಿರಿ! ನಮ್ಮದೇ ದುಡ್ಡು ನಮಗೆ ಕೊಡೂದು, ಎಷ್ಟು ಕಷ್ಟ ಕೊಡ್ತಾರೆ ನೋಡು!' ನಾನೂ 'ಹೂಂ' ಗುಟ್ಟಿದೆ. ಆದರೆ ಒಂದು ಹೊಸಾ ನಿಯಮ ವ್ಯವಸ್ಥೆ ಶುರುವಾದರೆ ಅದು ಸರಿಯಾಗಿ ನೆಲೆಗೊಳ್ಳಬೇಕಾದರೆ ಸಾಕಷ್ಟು ಸಮಯ ತಕ್ಕೊಳ್ಳುತ್ತದೆ. ಆಗ ತಾನೇ ಋಣ ವಿಭಾಗದಲ್ಲಿ ಕೂತ ನನಗೆ ಇದರ ಅನುಭವವಿತ್ತು. 'ಅಡ್ವಾನ್ಸಸ್' ಸೆಕ್ಷನ್ ನ ಕೆಲಸಗಳ ವ್ಯಾಪ್ತಿ ವಿಸ್ತಾರ, ನನಗರ್ಥವಾಗಲು ಎರಡು ವರ್ಷ ತಗಲಿತ್ತು. ಇರಲಿ.....
     
     ಒಂದು ದಿನ-ಬುಧವಾರವಿರಬೇಕು-ರೀಜನಲ್ ಆಫೀಸಿನಿಂದ ಕ್ರೆಡಿಟ್ ವೋಚರ್-ನಾವು ಕ್ರೆಡಿಟ್ ಐಬಿಏ ಅನ್ನುತ್ತೇವೆ- ಬಂತು. ಐದೋ ಹತ್ತೋ ಸಾಲಗಳ ಕ್ಲೇಮ್ ಮಾನ್ಯ ಆದ ಬಗ್ಗೆ ಇತ್ತದು. 'ಬಂತೋ ಬಂತು ಬಂತು.' ಮೆನೆಜರರ ಸಂತಸಕ್ಕೆ ಪಾರವೇ ಇರಲಿಲ್ಲ. ಬ್ರಾಂಚಿನಲ್ಲಿ ಕುಣಿಯೂದೊಂದು ಬಾಕಿ. ಕ್ಯಾಷಿನಲ್ಲಿದ್ದ ಪ್ರಭು ಎದ್ದು ಓಡಿ ಬಂದರು. ಎಂಥದು ಬಂದದ್ದು?..
     
     'ಎಷ್ಟು ಟೈಮು ಆಯ್ತು ಮಾರಾಯಾ? ಅದು ಸರಿಯಿಲ್ಲ, ಇದು ಸರಿಯಿಲ್ಲ, ಅಲ್ಲಿ ದಸ್ಕತ್ತು ಹಾಕಿಲ್ಲ, ಇಲ್ಲಿ ಎಕೌಂಟು ಸ್ಟೇಟ್ ಮೆಂಟು ಕೊಟ್ಟಿಲ್ಲ ಅಬಬಬಬ! ಒಂದಾ ಎರಡಾ!! ಇರಲಿ ಒಂದು ಬ್ಯಾಚು ಸಾಲದ್ದು ದುಡ್ಡು ಬಂತಲ್ಲಾ!! ದೇವರೆ ದೇವರೇ...' ಅವರ ಖುಷಿಗೇ ಎಲ್ಲೆಯೇ ಇರಲಿಲ್ಲ..
     
     'ಆ ಕ್ರೆಡಿಟ್ ಐ ಬಿ ಏ ಕೊಡಿ, ಅದಕ್ಕೇನೋ ಪ್ರೊಸೀಜರ್ ಉಂಟು, ಅದರ ಪ್ರಕಾರ ಎಂಟ್ರೀ ಮಾಡಬೇಕು.' ನಾನು ಕೂತಲ್ಲಿಂದ ಎದ್ದು ಅವರ ಟೇಬಲ್ ಬಳಿ ಹೋದೆ.
     
     'ಪ್ರೊಸೀಜರ್ ಎಂತದು? ದುಡ್ಡು ಬಂದಿದೆ, ಸಾಲಕ್ಕೆ ಜಮಾ ಮಾಡೂದು, ಇಗೊಳ್ಳಿ ಇವರೇ ಈ ಎಮೌಂಟು ಸಾಲಕ್ಕೆ ಕ್ರೆಡಿಟ್ ಕೊಟ್ಟು ಕೂಡಲೇ ಚೆಕಿಂಗಿಗೆ ನನ್ಹತ್ತಿರಾನೇ ಕಳಿಸಿ.' ಅವರಿಗೆ ನಾನು ಎದ್ದು ಮಧ್ಯ ಪ್ರವೇಶಿಸಿದ್ದು ಸರಿಕಾಣಲಿಲ್ಲವೋ ಏನೋ, ವೋಚರನ್ನು ಇನ್ನೊಬ್ಬ ಕ್ಲಾರ್ಕ್ ಬಳಿ ಕೊಟ್ಟರು.
     
     'ಹೆಡ್ಡಾಫೀಸು ಸರ್ಕುಲರ್ ಹೇಗೆ ಹೇಳ್ತದೋ ಹಾಗೆ ಮಾಡಬೇಕು, ನೀವು ಹೇಳಿದಿರಿ ಅಂತ ಸಾಲಕ್ಕೆ ಕ್ರೆಡಿಟ್ ಮಾಡಿಬಿಡುದಾ?'
     
     'ಹೆಡ್ಡಾಫೀಸು ಸರ್ಕುಲರ್ ನೀನೊಬ್ಬ ಮಾತ್ರ ಓದೂದಲ್ಲ, ಹೆಡ್ಡಾಫೀಸಿನಲ್ಲಿ ನನಗೂ ತುಂಬ ಗುರ್ತ ಇದ್ದಾರೆ. ಅದೇನಾದ್ರೂ ನಾನು ನೋಡ್ಕೊಳ್ತೇನೆ, ನಿನಗೆ ಮಂಡೆಬಿಸಿ ಬೇಡ.' ಬಿಸಿಯಾದದ್ದು ಅವರಿಗೇ. ನಾನು ಮೊದಲೇ ಹೇಳಿದ್ದೇನೆ- ಸುರಕ್ಕನೇ ಏರುತ್ತದೆ ಅಂತ.
     
     ಆದರೆ ಆ ದಿನ ನನ್ನದೂ ಮಂಡೆ ಏಕೋ ಬಿಸಿ ಇತ್ತು. 'ಹೆಡ್ಡಾಫೀಸಿನವರ ಸುದ್ದಿ ತೆಗೆದದ್ದು ನಾನಲ್ಲ, ನೀವೇ. ಪ್ರೊಸೀಜರ್ ಸ್ವಲ್ಪ ಓದಲು ಟೈಮ್ ಕೊಡಿ ಅಂತ ನಾನು ಕೇಳಿದ್ದು ಅಷ್ಟೇ. ಅಷ್ಟಕ್ಕೆಲ್ಲ ಹೆಡ್ಡಾಫೀಸು, ದೋಸ್ತಿ, ಗುರ್ತ ಅಂತೆಲ್ಲ ಹೇಳಿದರೆ ಯಾರೂ ಹೆದರೂದಿಲ್ಲ, ಹೆಡ್ಡಾಫೀಸಿನಲ್ಲಿ ನನಗೂ ಮಸ್ತು ಮಂದಿ ದೋಸ್ತಿ ಇದ್ದಾರೆ....' ನನ್ನದು ಕೊಂಚ ಅಧಿಕಪ್ರಸಂಗದ ಮಾತಾಯಿತು.
     
     'ಹೋ' ಅವರ ಸಿಟ್ಟು ತಾರಕಕ್ಕೇರಿತು. 'ನಿಮ್ಮ ಎಂಟ್ರೀ ಆಯಿತಾ? ಹೇಳಿದಷ್ಟು ಕೆಲಸ ಮಾಡಲು ಏನು ಧಾಡಿ ನಿಮಗೆ?' ಲೇಡೀ ಸ್ಟಾಫ್ ಮೇಲೆ ಹರಿಹಾಯ್ದರು. ಆಕೆಗೆ ಕಕ್ಕಾಬಿಕ್ಕಿಯಾಯಿತು.
     
     'ಅವರು ಹೇಳಿದರೂ ಅಂತ ರಾಂಗ್ ಸ್ಲಿಪ್ಪು ಮಾಡಿ ಎಂಟ್ರೀ ಮಾಡಿದ್ರೇ ನೀನೇ ಜಬಾದಾರಿ, ಮತ್ತೆ ನನ್ನ ಹತ್ರ ಎಂತದೂ ಕೇಳಬೇಡ.' ನಾನೂ ಗರಮ್ಮಾಗಿ ಡೈಲಾಗು ಹೊಡೆದು ಊಟದ ಸಮಯವೆಂದು ಮನೆಗೆ ಹೊರಟೆ. ಊಟ ಆದ ಮೇಲೆ ಹೊಟ್ಟೆ ತುಂಬಿದ ನಂತರ ಮನವೂ ತಂಪಾಯಿತು. 'ಅರೇ ನಾನು ಏನು ಮಾತಾಡಿ ಬಂದೆ! ಮೆನೇಜರು ತಿಂದ ಉಪ್ಪಿನಷ್ಟು ನಾನು ಅನ್ನ ಉಣ್ಣಲಿಲ್ಲ, ಅಲ್ಲದೇ ವಯಸ್ಸಿನಲ್ಲಿ, ಲೋಕಾನುಭವಗಳಲ್ಲಿ ನನಗಿಂತ ಎಷ್ಟೋ ಹಿರಿಯರು! ಮೇಲಾಗಿ ಬಹಳ ಒಳ್ಳೆಯವರು, ನನ್ನ ಮೇಲಂತೂ ಅವರಿಗೆ ವಿಶೇಷ ಅಭಿಮಾನವಿತ್ತು! ಮೆನೆಜರು ಅಂದಾಕ್ಷಣ ಬೇಂಕಿನ ಎಲ್ಲಾ ರೂಲ್ಸು ರೆಗುಲೇಷನ್ಸು ಬಾಯಿಪಾಠ ಗೊತ್ತಿರಲೇ ಬೇಕೆಂಬ ಕಾನೂನೇನೂ ಇಲ್ಲ. ಛೇ! ಈಗ ಅವರಿಗೆ ಮುಖ ತೋರಿಸುವುದು ಹೇಗೆ?' ಚಿಂತೆ ಹತ್ತಿತು.
     
     ಮೆಲ್ಲನೇ ಮೆಟ್ಟಿಲು ಹತ್ತಿ ಬ್ರಾಂಚಿನ ಒಳ ಹೋದೆ. ಐದು ನಿಮಿಷ ಲೇಟು ಬೇರೆ. 'ಶೆಣೈ ಮಾಮು, ಹಾಂವೆ ತಾವಳಿ ಉಲ್ಲಯಿಲೇ ಮಸ್ತ ಚsಡ ಜಾಲ್ಲೆ, ಮೆಗೆಲೇ ಚೂಕಿ ಜಾಲ್ಲಿ, ಬೇಜಾರು ಕೊರೂಂ ನಜ್ಜ, ಆನಿ ಮುಕಾರೀ ಅಶ್ಶಿಂ ಉಲ್ಲಯಿನಾ....' ಇಷ್ಟು ಹೇಳುವಾಗ ಬಾಯಿ ಕಟ್ಟಿ ಹೋಯಿತು, ಇನ್ನೇನು ಕಣ್ಣಿಂದ ಒಂದು ಮಣಿ ನೀರು ಬೀಳುತ್ತದೋ ಎನ್ನುವಾಗ ಮುಖ ತಿರುಗಿಸಿ ಸುಧಾರಿಸಿಕೊಂಡೆ.
     
     'ಅರೇ, ನೀನು ಹೇಳಿದ್ದೇ ಕರೆಕ್ಟು ಮಾರಾಯಾ, ನಿನ್ನದೆಂತದೂ ಮಿಸ್ಟೀಕು ಇಲ್ಲ, ನಂದೇ ತಪ್ಪು, ಇದಕ್ಕೆಲ್ಲ ಮಾಫಿ ಗೀಫಿ ಎಂತದು! ಸರಿಯಾಗಿ ನೋಡಿ ಎಂಟ್ರೀ ಮಾಡಲು ಹೇಳಿದ್ದೇನೆ. ಅವಳು ಬೇಡ, ನೀನೇ ಆ ಎಕೌಂಟಿಂಗ್ ಮಾಡು.' ಶೆಣೈಮಾಮು ಎದ್ದು ಬೆನ್ನು ತಟ್ಟಿದರು. ಕೋಪತಾಪಗಳೆಲ್ಲಾ ಯಾವಾಗಲೋ ಠಂಡಾ ಆಗಿದ್ದವು.
     
     'ಆದರೆ ನಾನು ಮಾತಾಡಿದ್ದು ಭಾರೀ ತಪ್ಪು, ಎಲ್ಲರೆದುರು ದೊಡ್ಡ ಬುದ್ಧಿವಂತನ ಹಾಗೆ ನಿಮಗೆ ಏನೇನೋ ಹೇಳಿದೆ. ನೀವು ಬೇಜಾರು ಮಾ....'
     
     'ಬೇಜಾರೂ ಇಲ್ಲ ಈಜಾರೂ ಇಲ್ಲ..... ಎಲ್ಲಾ ಸರೀ ಉಂಟು, ನಾನು ಊಟ ಮಾಡಿ ಬರ್ತೇನೆ, ಜೋರು ಹಸಿವೆಯಾಗಿದೆ...' ಪಟಪಟನೆ ಮೆಟ್ಟಿಲಿಳಿದು ಊಟಕ್ಕೆ ನಡೆದೇಬಿಟ್ಟರು.
     
     ದೊಡ್ಡ ಯುದ್ಧ ನಡೆಯಬಹುದು ಎಂದು ಹೆದರಿದ ನನಗೆ ಅಯ್ಯಮ್ಮ ಆಯಿತು. ಶೆಣೈಮಾಮನವರ ವ್ಯಕ್ತಿತ್ವವೇ ಹಾಗೇ. ಕೂಡಲೇ ಮನ್ನಿಸಿ ಬಿಡುತ್ತಿದ್ದರು. ಪೋಸ್ಟುಮಾಸ್ಟರ್ ಸಂಜೀವಮಾಮನವರು - ನಮ್ಮ ತಂದೆಯವರ ಫ್ರೆಂಡು - ಹಿರಿಯರು ಆಗಾಗ ಸಲಹೆ, ಹಿತವಚನ ನೀಡುತ್ತಿದ್ದರು.. 'ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀ. ಮುಂದೆ ಪ್ರೊಮೋಷನ್ನು ಸಿಕ್ಕಿ ಮೆನೆಜರೂ ಆಗಬಹುದು. ಬುದ್ಧಿ ನಾಲಿಗೆಗಳ ಮೇಲೆ ಹಿಡಿತವಿಟ್ಟು ಡ್ಯೂಟಿ ಮಾಡಲು ಕಲಿ.....
     
     ಅವರ-ಸಂಜೀವಮಾಮನ-ಮಾತುಗಳನ್ನು ಆದಷ್ಟು ಮಟ್ಟಿಗೆ ಪಾಲಿಸಿಕೊಂಡು ಬಂದಿರುತ್ತೇನೆ..🙏🙏
    







Wednesday, July 15, 2020

ಪ್ರೀತಿ, ಪ್ರೇಮ, ಮುದ್ದು ಮತ್ತು ದೊಡ್ಡಮ್ಮ


     ಹಿಂದಿನ - ಸುಮಾರು ಎಪ್ಪತ್ತು ವರ್ಷಗಳಿಗಿಂತಲೂ ಹಿಂದೆ - ಕಾಲದಲ್ಲಿ ಹೆಣ್ಣು ಮಕ್ಕಳ ಮದುವೆಗಳನ್ನು ಹದಿಹರೆಯದಲ್ಲೇ ಮಾಡಿ ಪೂರಯಿಸಿ ತಂದೆ ತಾಯಿಗಳು ಧನ್ಯರಾಗುತ್ತಿದ್ದರು! 'ಅಬ್ಬಾ ಒಂದು ಹೊರೆ ಕಳಚಿತು' ಎಂಬ ಬಿಸಿಯಾದ ನಿಟ್ಟುಸಿರೂ ಬಿಡುತ್ತಿದ್ದರು! ಇರಲಿ, ಇಲ್ಲಿ ಈ ಬಾಲ್ಯವಿವಾಹದ ಕುರಿತ ಚರ್ಚೆಯಲ್ಲ.

     ನಮ್ಮ ದೊಡ್ಡಮ್ಮ-ಆಕೆ ಪುಣ್ಯವಂತೆ-ಇದೇ ಸಂಪ್ರದಾಯ - ಕ್ರಮದಂತೆ  ತನ್ನ ಹದಿಹರೆಯದಲ್ಲೇ ಮದುವೆಯಾಗಿ ಬಂದಳು. ನನ್ನ ಬಳಿ ಅನೇಕ ಸಲ ಹೇಳಿಕೊಂಡಿದ್ದಳು. 'ಅಲ್ಲ ಮಾರಾಯ! ಶಾಲೆಗೆ ಹೋಗಿ ಆಟ ಆಡಿಕೊಂಡು ಇದ್ದವಳಿಗೆ ಲಗ್ನ ಗಂಟು ಹಾಕಿ ಕಳಿಸಿಬಿಡೂದಾ? ನಂಗೆ ಎಂತ ಅಂತ ಗೊತ್ತಿಲ್ಲ , ಇಲ್ಲಿ ಕಳಿಸಿ ಬಿಟ್ರು, ಹುಡೂಗಿ ನಾನು! ಮಂಕು ಅಂದ್ರೆ ಮಂಕು! ಆದರೆ ತಲೆಯಲ್ಲಿ ಬುದ್ಧಿವಾದ ಎಲ್ಲ ತುಂಬಿ ತುಂಬಿ ಕಳಿಸಿದ್ರು ನೋಡು! ನಾನೂ ಸಹ ಹಿರಿಯರು ಹೇಳಿದ ಹಾಗೆ ನಡಕೊಳ್ತಿದ್ದೆ!!' ಮನಸ್ಸು ಆಹ್ಲಾದಕರವಾಗಿದ್ದಾಗ ಆಕೆ ತನ್ನ ರಸಮಯ ನೆನಪಿನ ಪಿಠಾರೆಯನ್ನು ಓಪನ್ ಮಾಡುತ್ತಿದ್ದಳು.

     ನನಗೆ ನೆನಪಿರುವಂತೆ ಆಕೆ ತನ್ನ ಹದಿನೈದನೇ ವಯಸ್ಸಿಗೆ ಮದುವೆಯಾಗಿ ಹೆಬ್ರಿಗೆ ಬಂದಳು. ಆಕೆಯೇ ಹೇಳಿದಂತೆ ಮಂಕು ಅಂದ್ರೆ ಮಂಕು. ಬಂದ ಎರಡು ದಿನಗಳಲ್ಲಿ ಅತ್ತೆಗೆ-ನಮ್ಮ ಅಜ್ಜಿಗೆ - ಇವಳ ಬಂಡವಾಳ ಗೊತ್ತಾಯ್ತು. ನಮ್ಮ ಅಜ್ಜಿಯನ್ನು ನಾನು ನೋಡಿಲ್ಲ, ಆಕೆ ಸಾಕ್ಷಾತ್ ದೇವತಾ ಸ್ತ್ರೀ. ಈ ಪೆದ್ದು ಹುಡುಗಿಯನ್ನು ಹೇಗೆ ಸುಧಾರಿಸೂದು ಎಂದು ಅತ್ತೆಯ ಚಿಂತೆ.

     ನಮ್ಮ ದೊಡ್ಡಮ್ಮನ ತವರು ಶೃಂಗೇರಿಯ ಹೆಸರಾಂತ ಮನೆತನ. ಸಂಪ್ರದಾಯಸ್ಥ ಮತ್ತು ದೈವಭೀರು ಮಂದಿ. ಊರಿನ ಆಢ್ಯ ವ್ಯಾಪಾರಸ್ಥ ಕುಟುಂಬ. ಮನೆಯ ಮಗಳು ಒಳ್ಳೆಯ ಘರಾಣೆಯಲ್ಲೇ ಲಗ್ನವಾಗಿ ಹೋಗಿದ್ದಾಳೆ ಎಂಬ ಸಂತೋಷವೂ ಇತ್ತು. ದೊಡ್ಡಮ್ಮ ಸಹ ಮನೆಯಲ್ಲಿ ಒಳ್ಳೆಯ ಸುಸಂಸ್ಕೃತ ನಡೆನುಡಿಗಳನ್ನು ಕಲಿತು ಬಂದವಳು, ಆದರೇನು ಮಾಡೂದು? ಸ್ವಲ್ಪ ಪೆದ್ದು. ಹುಡೂಗಿ ತಾನೇ! ಗುರುಹಿರಿಯರಿಗೆ, ಗಂಡನಿಗೆ ತಗ್ಗಿ ಬಗ್ಗಿ ನಡೆಯಬೇಕು, ಎದುರುತ್ತರ ಕೊಡಬಾರದು, ಮಾತಾಡು ದಿದ್ದರೂ ಆದಷ್ಟು ವಿನಯದಿಂದ ಮೆಲ್ಲಗೇ ಆಡಬೇಕು....... ಇತ್ಯಾದಿ ಸದ್ಗೃಹಿಣಿ ಪತಿವೃತಾ ಸ್ತ್ರೀಗೆ ಅನ್ವಯವಾಗುವ ಎಲ್ಲ ಪಾಠಗಳನ್ನು ಬಾಯಿಪಾಠ ಮಾಡಿಕೊಂಡು ಬಂದಿದ್ದಳು.

     "ಅಲ್ಲ ಮಾರಾಯ! ಪತಿಯೇ ಪರಮೇಶ್ವರ ಅಂದರೆ ಗಂಡನೇ ದೇವರು, ದಿನಾ ಅವರ ಕಾಲು ತೊಳೆದು ನೀರು ಕುಡೀಬೇಕು ಅಂತ ನನಗೆ ಹೇಳಿದ್ರು. ನಾನು ಹೇಳಿಕೊಟ್ಟ ಹಾಗೆ ಸುಮಾರು ತಿಂಗಳೊಂದೆರಡು ತಿಂಗಳಿರಬಹುದು, ಬೆಳಗ್ಗೆ ಇವರ ಕಾಲು ತೊಳೆದು ನೀರು ಕುಡಿತಿದ್ದೆ. ನಂತರ ಅತ್ತೆಯವರಿಗೆ ಈ ಸಂಗತಿ ಗೊತ್ತಾಯಿತು. ಅದು ಹಾಗಲ್ಲ ಮಗಾ, ಕಾಲು ತೊಳೆದು ನೀರು ಕುಡಿಯೂದು ಅಂದರೆ ಅದೊಂದು ಹೇಳುವ ಕ್ರಮ, ಗಂಡನ ಮೇಲೆ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಬೇಕು. ನಾಳೆಯಿಂದ ನೀರು ಕುಡಿಯೂದು ಕೈದು ಮಾಡು ಅಂತ ನಿಲ್ಸಿದ್ರು ನೋಡು, ಹಿ ಹ್ಹಿ ಹ್ಹಿ' ಎಂದು ನಕ್ಕಿದ್ದಳು.😂😂

     ಮನೆಯ ಕೆಲಸಕಾರ್ಯಗಳ ಜಬಾದಾರಿ ಅತ್ತೆಯದು, ಅವರಿಗೆ ಸಹಕಾರ ಇವಳದು. "ಒಂದು ದಿನ ಅಂಬಡೆ ಗೊಜ್ಜು ಮಾಡಲು ಅಮಟೆಕಾಯಿ ನಾಲ್ಕನ್ನು ಕಡೆಯಲು ಹೇಳಿದ್ರು ಅಂತ ಕೂತೆ ನೋಡು, ಕಡೆಯುವ ಕಲ್ಲಲ್ಲಿ ಅವು ನಿಲ್ತಾವಾ! ಗಡ ಬಡಾ ಕಟಾ ಪಟಾ ಅಂತಾ ಕಾಯಿಗಳು ಕಡೆಯುವ ಕಲ್ಲಿಂದ ಉದುರುದುರಿ ಹೊರಬೀಳೂದು ನಾನು ಪುನಾ ಅವನ್ನು ಹೆಕ್ಕಿ ಕಡೆಯಲು ಉರುಡಾಟ ಮಾಡೂದು! ಏನು ಮಾಡಿದರೂ ಅಮಟೇಕಾಯಿ ನಂಯಾ ಆಗೂದಿಲ್ಲ, ನನಗೆ ಕೇಳಲು ಹೆದರಿಕೆ. 'ಕಸ್ಸನೆ ಪುತಾ! ಆಂಬಾಡೋ ವಾಟ್ಟೀ ಮ್ಹಳೇರೀ ಬದ್ದs ವಾಟ್ಟಿತಾ ಆಸ್ಸಕೀ?' ಅತ್ತೆ ಕೇಳಿದಾಗ ಮೆಲ್ಲನೇ ಹೌದು ಅಂದೆ. 'ಹೇ ದೇವಾ! ಹೇ ಚೆಲ್ಯೇಲೆ ಜಾವ್ಚೇ ನ್ಹಂಯೀ! ಆಂಬಾಡೋ ವಾಟ್ಟೀ ಮ್ಹಳೇರೀ ಧಾಡ್ಡೋನು ಸೋಲ ಕಾಣು ಸೋಯಿ ಮಿರ್ಸಾಂಗ ಒಟ್ಟು ವಾಟ್ಟೂಚೇ, ಆಸ್ಸೊಂ ಹೆಕಡೇ ಯೋ ಹಾಂವ ಕರತಾಂ' ನನಗೆ ಆಗ ಗೊತ್ತಾದದ್ದು ನೋಡು ಅಂಬಡೇ ಗೊರಟು ನಂಯ ಆಗೂದಿಲ್ಲ ಅಂತ." ಪುನಃ ತನ್ನ ಬುದ್ಧಿವಂತಿಕೆಯ! ಎಪಿಸೋಡು ಹೇಳಿ ಕಿಸಿಕಿಸಿ ನಕ್ಕಳು.😊😀😁😂

     "ಆನೇಕ ಪಟೀ ಕಸ್ಸಲೆಂ ಜಾಲ್ಲೆಂ ಗೊತ್ತಸ್ವೇ.... ಯಾವುದೋ ಗೊಜ್ಜು ಮಾಡಲಿಕ್ಕಿತ್ತು, 'ವೈಗೋ ಹಾಂವ ನ್ಹಾವ್ಚೆ ವತ್ತಾ, ತೇ ಗೊಜ್ಜಾ ಏಕು ಲೊಸಣೇ ಕಾಂದೊ ಉಡಯಿ, ರೂಚೇಕ, ಇತೇಂ' ಅತ್ತೆಯೇನೋ ಹೇಳಿ ಹೋದರು ನನಗೆ ಸಮಸ್ಯೆಗೇ ಬಿತ್ತು. ಬೆಳ್ಳುಳ್ಳಿ ಗಡ್ಡೆ ಎಷ್ಟು ದೊಡ್ಡದು ಅಂತ ಹೇಳಲಿಲ್ಲ ಮತ್ತು ಎಷ್ಟು ದೂರ ನಿಂತು ಬಿಸಾಡಬೇಕು ಅದೂ ಹೇಳಲಿಲ್ಲ. ಆದರೂ ಅಜಮಾಯಿಷು ನೋಡಿಕೊಂಡು ಒಂದು ಬೆಳ್ಳುಳ್ಳಿ ಗಡ್ಡೆಯನ್ನು ಗೊಜ್ಜು ಮಾಡಿಟ್ಟ ಪಾತ್ರೆಯಲ್ಲಿ ಬಿಸಾಡಿದೆ.

     "ಮಧ್ಯಾಹ್ನ ಗಂಡಸರು ಊಟಕ್ಕೆ ಬಂದವರು, ಯಾವುದೇ ಕಮಕ್ ಕಿಮಕ್ ಅನ್ನದೇ ಬಾಯಿ ಮುಚ್ಚಿಕೊಂಡು ತಿಂದು ಹೋದರು! ಆದರೆ ದೇವು ಮಾತ್ರ (ನಮ್ಮ ತಂದೆ) ಒಂದು ರೀತಿ ಮುಖ ಮಾಡಿದ, ಅವನೂ ಏನೂ ಹೇಳಲಿಲ್ಲ. ಕೊನೆಗೆ ಅತ್ತೆಯವರಿಗೆ ಬಡಿಸುವಾಗ ಆ ಇಡೀ ಬೆಳ್ಳುಳ್ಳಿ ಗಡ್ಡೆ ಅವರಿಗೇ ಸಿಗಬೇಕೆ! ಒಂದು ಸಲ ನನ್ನ ಮುಖ ನೋಡಿದರು, ಏನೂ ಹೇಳಲಿಲ್ಲ ಆದರೆ ಅವರ ಮೌನವು ನೂರೆಂಟು ಮಾತುಗಳನ್ನು ಹೇಳಿದವು!" ಮುಂದಿನ ದಿನಗಳಲ್ಲಿ ಅವರೆಷ್ಟು ವಿಧಗಳಲ್ಲಿ ನನ್ನನ್ನು ಪ್ರೀತಿ ಪ್ರೇಮಗಳಿಂದ ತಿದ್ದಿದರು! ಅವರ ಸೇವೆ ಹೆಚ್ಚು ಮಾಡುವ ಯೋಗ ನನ್ನದಾಗಲಿಲ್ಲ......''

     ಮೇಲಿನವು ನಮ್ಮ ದೊಡ್ಡಮ್ಮನ ಮುಗ್ಧತೆಯ ಉದಾಹರಣೆ. ಸ್ವಲ್ಪ ನಗು ಬರುತ್ತದೆ, ಆದರೆ ನಮ್ಮ ದೊಡ್ಡಮ್ಮನಂತಹ ಮಹಿಳಾಮಣಿ, ಗೌರವಾನ್ವಿತ ಪತಿವೃತಾ ಸ್ತ್ರೀಯರು ನಾಡಲ್ಲಿ ಬಹು ವಿರಳವಾಗಿ ಸಿಗುತ್ತಾರೆ! ಹಿರಿಯರ ಮೇಲೆ ಭಕ್ತಿ ಗೌರವ, ಕಿರಿಯರಲ್ಲಿ ಪ್ರೀತಿ, ಓರಗಿತ್ತಿಯವರಲ್ಲಿ ಪ್ರೇಮ ವಾತ್ಸಲ್ಯ ಇವೆಲ್ಲವನ್ನು ಅವರಿಂದ ಕಲಿಯಬೇಕು.

      ಆಕೆ ಮತ್ತು ಅಂದಿನ ಹಿರಿಯರು ಶಾಲಾ ಶಿಕ್ಷಣ ಹೆಚ್ಚು ಹೊಂದಿರದಿದ್ದರೂ ಅವರ ಜ್ಞಾನ ಇಂದಿನ ಶಿಕ್ಷಿತ! ಜನಾಂಗಕ್ಕಿಂತ ಎಷ್ಟೋ ಪಾಲು ಹೆಚ್ಚಿನದು. ನನಗೆ ಅನೇಕ ವೇಳೆ ದೊಡ್ಡಮ್ಮನೊಡನೆ ಮಾತುಕತೆಗಳಿಗಿಂತ ಅವಳ ಸಾನ್ನಿಧ್ಯದ ಮೌನವೇ ಹೆಚ್ಚು ಪ್ರಿಯವಾಗುತ್ತಿತ್ತು ........

Sunday, July 12, 2020

ಟಾಕೂ ಟೂಕೂ, ಟಾಕೂ ಟುಕೂ, ಟಾಕೂ ಟುಕೂ


     ಸಾವಿರದ ಒಂಭೈನೂರ ಎಂಭತ್ತನಾಲ್ಕರ ಮೇ ತಿಂಗಳಲ್ಲಿ ದೆಹಲಿಗೆ ಹೊರಟೆ. ಆ ವರ್ಷ ಅತ್ಯಧಿಕ ಸೆಕೆ ಇತ್ತು ಎಂಬ ನೆನಪು, ತೀಕ್ಣವೋ ಸಾಮಾನ್ಯವೋ ಹೊಸಬನಾದ ನನಗೆ ಸಹಿಸಲಾಗದ ಶಾಖ....!!!  ಹಾಗಾಗಿ ಒಬ್ಬನೇ ಹೊರಟಿದ್ದೆ, ನಂತರ ಜುಲೈ ತಿಂಗಳ ಕೊನೆಯ ವಾರದಲ್ಲಿ ರಜ ಹಾಕಿ ಫ್ಯಾಮಿಲಿ ಶಿಫ್ಟ್ ಮಾಡಿದೆ. ಶೆಖೆಯ ರಾಪು ಕೊಂಚ ಕಡಿಮೆ ಇತ್ತು. ನಂತರದ ದಿನಗಳು ಆರಾಮದಾಯಕವಾಗಿದ್ದವು, ಕ್ರಮೇಣ ಚಳಿಯ ದಿನಗಳು.. ನಮಗೆ ಚಳಿಯ ಅನುಭವವಿಲ್ಲ, 'ಐಸೀ ಕಡಾಕೇ ಕೀ ಸರ್ದೀ ಪಡೇಗಿ ನಾಯಕ್! ತೇರೆ ಸೇ ಹೋ ನ್ಹಂಹೀ ಪಾಯೇಗಾ!' ಎಂದು ಬ್ರಾಂಚಿನ ಫ್ರೆಂಡ್ಸು ಹೆದರಿಸತೊಡಗಿದರು. ...

     ಚಳಿಗಾಲದಲ್ಲಿ ದಿನ ಚಿಕ್ಕದು, ರಾತ್ರಿ ಉದ್ದ. ಬೇಗನೆ ಕತ್ತಲಾಗುತ್ತಿತ್ತು. ಬೇಗನೇ ಊಟ ಮುಗಿಸಿ ಬೆಚ್ಚನೇ ಮಲಗುವ ಆತುರ. ಹುಡುಗನಿಗೆ ಐದೂವರೆ ಮಗಳು ಎರಡು ವರ್ಷದವಳು. ರಾತ್ರಿ ಒಂಭತ್ತರ ಸೀರಿಯಲ್ ಮುಗಿಯುತ್ತಲೇಬೆಚ್ಚಗೇ ರಜಾ಼ಯೀ ಹೊದ್ದುಕೊಂಡು ಕಥೆ ಕೇಳುತ್ತಾ ನಿದ್ರೆಗೆ ಜಾರುವ ಕ್ರಮ.....

     "ಏಕ್ ಗಾಂವಾಂತು ಏಕ ರಾನ್ ಆಸ್ಸೀಲೇ... ಆ ಕಾಡಿನಲ್ಲಿ ಅನೇಕ ಮೃಗ ಪಕ್ಷಿಗಳಿದ್ದವು. ಅವುಗಳ ರಾಜ ಸಿಂಹ..."

     "ಸಿಂವು ಮತಲಬ್?"

     "ಸಿಂಹ ಅಂದರೆ ಎಲ್ಲಾ ಪ್ರಾಣಿಗಳಿಗಿಂತ ಸ್ರ್ಟಾಂಗು, ಘ್ರಾಂ ಘ್ರಾಂ ಹಾಗಾಗಿ ಅದು ಪ್ರಾಣಿಗಳ ಲೀಡರ್, ಕಿಂಗ್.. ಒಂದು ಸಲ ಕಾಡಿನಲ್ಲಿ ವರ್ಷಾವಧಿ ಎಥ್ಲೆಟಿಕ್ಸ್ ಸುರುವಾಯಿತು. ರೇಸಿಂಗ್ ಐಟಮ್ಮಿನ ಪಾರ್ಟಿಸಿಪೆಂಟ್ಸ್ ಮೊಲ, ಆಮೆ ಅಲ್ಲದೇ ಮತ್ತು ಕೆಲವರು..

     "ಟರ್ಟಲ್ ಅಂದರೆ ಆಮೆ ನಡಿಯೂದು ಮೆಲ್ಲ ಮೆಲ್ಲಗೆ, ಅಂದರೆ ಟಾಕೂ ಟೂಕೂ, ಟಾಕೂ ಟೂಕೂ, ಟಾಕೂ ಟುಕೂ....... ಆದರೆ ರೇಬಿಟ್ ಜೋರಾಗಿ ಓಡೂದು, ಅಂದರೆ ರೊಂಯ್ ರೋಂಯ್, ರೊಂಯ್ ರೋಂಯ್......

     1960 ರ ಸಮಯ. ನಮ್ಮ ಅಜ್ಜಿ ಭವಾನಿಮಾಯಿ. ನಾವು ಅವಳ ಮಗಳ ಮಕ್ಕಳು, ನಮ್ಮ ಮೇಲೆ ಅವಳು ಹರಿಸುತ್ತಿದ್ದ ಪ್ರೀತಿ ಒಂದು ತೂಕ ಜಾಸ್ತಿ. ಅವಳು ಮೊಮ್ಮಕ್ಕಳನ್ನು ಕೂಡಿಕೊಂಡು ಹೇಳುತ್ತಿದ್ದ ಕಥೆಗಳಲ್ಲಿ 'ಆಮೆಯೂ ಮೊಲವೂ' ಕಥೆ ಸಹ ಪ್ರಮುಖವಿತ್ತು.

     ಎರಡು ಸಾವಿರದ ಹನ್ನೆರಡರ ನಂತರದ ದಿನಗಳು. ಈಗ ಹೆಬ್ರಿ ಕೇಶವ ನಾಯಕ ಅಜ್ಜ. ಇಬ್ಬರು ಪುಳ್ಳಿಗಳಿಗೆ ದಿನಾ ಕತೆ ಹೇಳುವ ಸಂಭ್ರಮ. ಕತೆ ಯಾವುದು? ಅದೇ 'ಆಮೆಯೂ ಮೊಲವೂ' ......

     "ಆಜ್ಜಾ ಟೊರ್ಟೋಯಿಸಾನ ಕಶ್ಶೀ ವಚ್ಚೆಂ? ಟಾಕೂ ಟೂಕೂ, ಟಾಕು ಟೂಕೂ, ಟಾಕು ಟುಕೂ...."

     ಇನ್ನು ಇಪ್ಪತ್ತು ವರ್ಷಗಳ ಬಳಿಕವೂ ನಮ್ಮ ಮೊಮ್ಮಕ್ಕಳೂ ಸಹ ಅವರವರ ಮಕ್ಕಳಿಗೆ ಹೇಳುವ ಕಥೆಗಳಲ್ಲಿನ ಪ್ರಾಮಿನೆಂಟ್ ಕಥೆ ಯಾವುದು! .... "ಆಮೆಯೂ ಮೊಲವೂ." ಆಮೆ ಹೇಗೆ ಚಲಿಸುತ್ತದೆ? ಟಾಕೂ ಟುಕೂ, ಟಾಕೂ ಟೂಕೂ, ಟಾಕೂ ಟುಕೂ....‌‌

     ಈ ಆಮೆ ಮತ್ತು ಮೊಲದ ಜೋಡಿಯ ವಯಸ್ಸು ಎಷ್ಟಾಗಿರಬಹುದು!!? ಕಮ್ಮಿ ಕಮ್ಮಿ ಐನೂರಕ್ಕಿಂತ ಜಾಸ್ತಿಯೇ ಇರ ಬಹುದು, ಅಥವಾ ಇನ್ನೂ ಹಿಂದಕ್ಕೆ ಹೋಗಬೇಕೋ? ನಮ್ಮ ಅಜ್ಜಿ ನಮಗೆ ಹೇಳಿದ್ದರು, ಅವರಿಗೆ ಅವರಜ್ಜಿ ಹೇಳಿರಬಹುದು, ಅವರಿಗೆ ಅವರಜ್ಜಿ....

     ಆಮೆಯು ನೂರಾರು ವರ್ಷಗಳ ತನಕ ಜೀವಿಸುತ್ತವೆ. ಹಿಂದೂ ಮಹಾಸಾಗರದಲ್ಲಿ ನಾನೂರೈವತ್ತು ವರ್ಷಗಳಿಗಿಂತ ಹಿರಿಯ ಕೂರ್ಮವೊಂದನ್ನು ಪತ್ತೆ ಹಚ್ಚಿದ್ದಾರಂತೆ.. ಆ ಆಮೆಯೇ ಮೊತ್ತ ಮೊದಲ ರೇಸಿನಲ್ಲಿ ಪಾರ್ಟಿಸಿಪೇಟ್ ಮಾಡಿ ಗೆದ್ದ ಅಭ್ಯರ್ಥಿಯಾಗಿರಬೇಕು....

     ಇಂತಹ ಸಾರ್ವಕಾಲಿಕ ಕಥೆಗಳು ಅನೇಕವಿವೆ. ಅವುಗಳು ನಿತ್ಯ ನೂತನ, ನಮ್ಮ ಅಜ್ಜಿ ಎಷ್ಟು ಚಂದವಾಗಿ ಹೇಳುತ್ತಿದ್ದರೋ ಮತ್ತೆಷ್ಟು ಆಸಕ್ತಿಯಿಂದ ನಾವು ಕೇಳುತ್ತಿದ್ದೆವೋ, ಆದೇ ತೆರದಲ್ಲಿ ನನ್ನ ಮಕ್ಕಳೂ ಕೇಳಿದ್ದರು ಮುಂದಿನ-ಈಗಿನ ಪ್ರಸಕ್ತ-ದಿನಗಳಲ್ಲಿ ಮೊಮ್ಮಕ್ಕಳೂ ಅಷ್ಟೇ ತನ್ಮಯತೆಯಿಂದ ಆಲಿಸಿದ್ದಾರೆ ಖುಷಿ ಪಟ್ಟಿದ್ದಾರೆ ಮತ್ತು ಮೆಲಕು ಹಾಕುತ್ತಿರುತ್ತಾರೆ....ಈ ಖುಷಿಯು ಅವರ ಮೊಮ್ಮಕ್ಕಳ ಸಮಯದಲ್ಲಿ ಒಂದು ಮುಷ್ಟಿ ಜಾಸ್ತಿಯೇ ಇರಬಹುದು!!

     ಆ ಕೂರ್ಮವು ಹಿಂದೂ ಮಹಾಸಾಗರದಲ್ಲಿ ಹಾಗೂ ಜಗತ್ತಿನ ಎಲ್ಲ ಜನಮಾನಸದಲ್ಲೂ ಅಮರವಾಗಿರುತ್ತದೆ ಎಂದು ನನ್ನ ಧೃಡ ವಿಶ್ವಾಸ..

Thursday, July 9, 2020

ಇಂದಿನ ದಿನ ಸುದಿನ


     ಇಂದಿನ ದಿನ ಸುದಿನ......

     ಹೆಬ್ರಿ ಕೇಶವ ನಾಯಕನಿಗೆ ದೇವರು ಹಾಗೂ ಕೆ ಕೆ ಪೈಯವರು ದಯತೋರಿಸಿದ್ದರ ಫಲವಾಗಿ ಸಿಂಡಿಕೇಟಿನಲ್ಲಿ ನೌಕರಿ ಲಭ್ಯವಾಯಿತು. ಸಾವಿರದಾ ಒಂಭೈನೂರ ಎಪ್ಪತ್ತನೇ ಇಸವಿಯ ಮಧ್ಯಭಾಗದಲ್ಲಿ ಕ್ಲೆರಿಕಲ್ ಟೆಸ್ಟ್ ನಡೆದು ಪಾಸಾಗಿ ಮುಂದೆ ಎರಡು ತಿಂಗಳ ಟ್ರೈನಿಂಗು ಎಟೆಂಡ್ ಮಾಡಿ ಊರಲ್ಲಿ ಆರ್ಡರ್ ಗಾಗಿ ಕಾಯುತ್ತಿದ್ದೆ. ಕಲಿತದ್ದು ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಕೋರ್ಸು. ಆದರೆ ಎಲ್ಲದಕ್ಕೂ ಕಾಲ, ಯೋಗ ಕೂಡಿ ಬರಬೇಕು, ದೇವರ ಕೃಪೆಯಾಗಬೇಕು ಎಂದು ಹಿರಿಯರು ಹೇಳಿರುತ್ತಿದ್ದು, ಆ ಯೋಗ ಮತ್ತು ದೇವರ ಕೃಪೆಗಾಗಿ ಕಾತರದಿಂದ ಕಾಯುತ್ತಿದ್ದೆ. ನಮ್ಮ ಬಾಬು-ವೆಂಕಟೇಶ ಕಮ್ತಿಯ ಯೋಗ ಚೆನ್ನಾಗಿತ್ತು. ನನಗಿಂತ ಬೇಗ ದೇವರ ಕೃಪಾಕಟಾಕ್ಷ ಅವನ ಮೇಲೆ ಬಿತ್ತು. ನಾನು ಅವನಿಗಿಂತ ಮೂರು ದಿನಕ್ಕೆ ಸೀನಿಯರ್, ನನಗೆ ಅವನಿಗಿಂತ ಮಾರ್ಕು ಜಾಸ್ತಿ. ಹಾಗಿದ್ದಾಗ ದೇವರ ಫೈಲಲ್ಲಿ ಅವನ ನಂಬ್ರ ಹೇಗೆ ಮೊದಲು ಬಂತು!!?? ಇರಲಿ, ಕಲಿತ ವಿದ್ಯೆಯ ದಿಕ್ಕಿನಲ್ಲೇ ಅವನಿಗೆ ಉದ್ಯೋಗ ಲಭ್ಯವಾದದ್ದು ಖುಷಿಯ ವಿಚಾರ, ನಾನು ಕಾಯುತ್ತಲೇ ಇದ್ದೆ...

     ಎಪ್ಪತ್ತೊಂದನೇ ಇಸವಿಯ ಫೆಬ್ರವರಿಯ ಒಂದು ದಿನ ಪೋಸ್ಟು ತರಲು ಪೋಸ್ಟಾಫೀಸಿಗೆ ಹೋಗಿದ್ದೆ. ದಿನಕ್ಕೆ ಕಮ್ಮಿಯೆಂದರೆ ಎಂಟು-ಹತ್ತು ಪತ್ರಗಳಾದರೂ ನಮ್ಮ ಅಂಗಡಿಯ ಹೆಸರಲ್ಲಿ ಇರುತ್ತಿದ್ದವು-ಕೊಂಚಾಡಿ ಅಪ್ಪಯ್ಯ ಶಾನುಭಾಗ್, ಪಂಚಮಾಲ್ ವಾಸು ಮಾಮ, ರೇಟು ಲಿಸ್ಟು ಇತ್ಯಾದಿ ಇತ್ತಾದಿ... ಹಾಗಾಗಿ "ವಸರೇ ಪೋಸ್ಟ್ ಹಾಡಿ" ಎಂದು ಚಿಕ್ಕಪ್ಪ ಓಡಿಸುತ್ತಿದ್ದರು. ನಮಗೂ ಸಂಜೀವ ಮಾಮರ ಮನೆಯಲ್ಲಿನ ಅಂಚೆಕಛೇರಿಗೆ ಹೋಗೂದೆಂದರೆ ಭಾರೀ ಖುಷಿ. ಯಾವುದಾದರೂ ಅಪರೂಪದ ಸ್ಟಾಂಪು ಇದ್ದರೆ ಅವುಗಳನ್ನು ತೆಗೆದಿಟ್ಟು ನಮಗೆ ಕೊಡುತ್ತಿದ್ದರು. ಆ ಸ್ಟಾಂಪುಗಳ ಆಸೆಯಿಂದಾಗಿ ಹೆಚ್ಚಾಗಿ ಪೋಸ್ಟು ತರಲು ಕೇಶವ ನಾಯಕನೇ ಓಡುತ್ತಿದ್ದ...

     ಸಂಜೀವ ಮಾಮರ ಪೋಸ್ಟು ಆಫೀಸಿನ ಕಾರ್ಯವೈಖರಿಯು ನೋಡಲು ಬಲು ಚಂದ. ಸಂಜೀವ ಮಾಮ ಪೋಸ್ಟುಮಾಸ್ಟರು, ಹಸನ್ ಸಾಹೇಬ ಪೋಸ್ಟ್ ಮೇನ್-ಸೆಂಟ್ರಲ್ ಗೋರ್ಮೆಂಟ್ ಎಂಪ್ಲೋಯೀ!- ಮತ್ತು ಇ ಡಿ ಡಿ ಏ ಮರ್ತಪ್ಪ ಇವರೆಲ್ಲ ಸ್ಟಾಫು.. ಮೇಲ್ ಬಸ್ಸಿನಲ್ಲಿ ಬರುವ ಪೋಸ್ಟ್ ಬೇಗನ್ನು ತಂದು ಸಂಜೀವ ಮಾಮರ ಸಮಕ್ಷಮ ಸೀಲು ಒಡೆದು ವಿಂಗಡಿಸಬೇಕು.
    
     ವಿಂಗಡಿಸುವುದು ಹಸನ್ ಸಾಹೇಬನ ಕೆಲಸ. ವಿಂಗಡಿಸಿದ ಪೋಸ್ಟಿನ ಮೇಲೆ ಅ ದಿನದ ಸೀಲು ಗುದ್ದುವ ಸ್ಟೈಲೇ ಬೇರೆ, ಅದೇ ಒಂದು ಚಂದ!! ತಾನು ಸೆಂಟ್ರಲ್ ಗೋರ್ಮೆಂಟು ಎಂಪ್ಲೋಯೀ ಎಂಬ ಧಿಮಾಕು ಹಸನ್ ಸಾಹೇಬನದ್ದು. ಈ ಸೆಂಟ್ರಲ್ ಗವರ್ನಮೆಂಟ್ ಜಾಬ್ ಒಂದು ದೊಡ್ಡ ಕುಂಬಳಕಾಯಿ ಅಂತ ನಾವು ಮಕ್ಕಳು ನಂಬಿ ಅವನಿಗೆ ಸಣ್ಣಗೆ ಹೆದರಿ ಮರ್ಯಾದೆ ಕೊಡುತ್ತಿದ್ದೆವು. ಅವನು ಸೀಲು ಗುದ್ದುವ ತನ್ಮಯತೆ, ಗತ್ತು ಆಹಾ ಅದರ ಚಂದವೇ ಚಂದ! ಅದರ ಸೌಂಡು ನಮಗೆ ಸಂಗೀತದಂತೆ ಕೇಳುತ್ತಿತ್ತು. ಅದರ ಮುಂದೆ ಆರ್ ಡಿ ಬರ್ಮನ್ನರ ಡ್ರಮ್ ಬೀಟ್ಸ್ ಸಹ ಏನೂ ಅಲ್ಲ, ಅವನು ಸೀಲು ಗುದ್ದುವಾಗ ಪೋಸ್ಟಾಫೀಸಿನಲ್ಲಿ ಲೈಬ್ರೇರಿಯ ಮೌನವಿರುತ್ತಿತ್ತು. ಮಧ್ಯೆ ಮಧ್ಯೆ ಯಾರಾದರೂ ಪೋಕರಿಹುಡುಗರು ಕೀಟಲೆ ಮಾಡಿದರೆ ಅವರನ್ನು ಹೊರಕಳಿಸಲಾಗುತ್ತಿತ್ತು. ಆದ್ದರಿಂದ ನಾವು ಹುಡುಗರು ಆದಷ್ಟು ಶಿಸ್ತನ್ನು ಮೇಂಟೈನ್ ಮಾಡುತ್ತಿದ್ದೆವು. ಸೀಲು ಗುದ್ದಿ ತಯಾರಾದ ಪತ್ರಗಳು ಶಿಸ್ತಾಗಿ ಜೋಡಿಸಲ್ಪಟ್ಟು ಪೋಸ್ಟುಮಾಸ್ಟರ ಟೇಬಲ್ ಮೇಲೆ ಭಕ್ತಿಯಿಂದ ಇಡಲ್ಪಡುತ್ತಿದ್ದವು. ನಾವು ಮೊದಲೇ ನಿರ್ಧರಿಸಿದ, ನಿಗದಿತಗೊಂಡ ಸರತಿ ಕ್ರಮದಲ್ಲಿ ನಿಲ್ಲುತ್ತಿದ್ದೆವು. ಮೊದಲು ಸಿಂಡಿಕೇಟು ಬೇಂಕು, ಸೀ ಏ ಬೇಂಕು, ಹೈಸ್ಕೂಲುಗಳಿಗೆ ಪ್ರಾಶಸ್ತ್ಯ. ನಂತರ ಶ್ರೀನಿವಾಸ ಮುಕುಂದ ನಾಯಕ್ ಎಂಡ್ ಬ್ರದರ್, ಪಾಂಡರಂಗ ರಮಣ ನಾಯಕ್, ನರಸಿಂಹ ನಾಗಪ್ಪ ಶೆಣೈ, ಭಟ್ ಬ್ರದರ್ಸ್, ಹರಿದಾಸ ಪೈ....ಹೀಗೆ ರೇಂಕಿಂಗ್ ಇರುತ್ತಿದ್ದವು. ಬಂದ ಪೋಸ್ಟುಗಳ ಬಟವಾಡೆಯೂ ತನ್ನದೇ ಆದ ಗಾಂಭೀರ್ಯದಿಂದ ಆಗುತ್ತಿತ್ತು.

     ಆದಿನ ಶ್ರೀನಿವಾಸ ಮುಕುಂದ ನಾಯಕ್ ಎಂಡ್ ಬ್ರದರ್ ವಿಳಾಸಕ್ಕೆ ಬಂದ ಒಂಭತ್ತು ಪತ್ರಗಳನ್ನು ಪಡಕೊಂಡು ಹೊರಡುವಾಗ "ಕೇಶವ ನಾಯಕ ಸ್ವಲ್ಪ ತಾಳು" ಎಂದು ಸಂಜೀವಮಾಮರು ಆದೇಶಿಸಿದರು. ಏನಪ್ಪಾ ಎಂದುಕೊಂಡು ನಿಂತೆ. ಅಲ್ಲಿ ಬಂದ ಎಲ್ಲರ ಪತ್ರಗಳ ಬಟವಾಡೆ ಆದ ಬಳಿಕ "ಎಚ್ ಕೇಶವ ನಾಯಕ್ ಸನ್ ಆಫ್ ಎಚ್ ದೇವಣ್ಣ ನಾಯಕ್, ಹೆಬ್ರಿ, ತಗೋ" ಎಂದು ಒಂದು ಪತ್ರವನ್ನು ಪ್ರೀತಿಯಿಂದ ಸವರಿ ನನಗೆ ಕೊಟ್ಟರು. "ದೇವರು ನಿನಗೆ ಒಳ್ಳೇದು ಮಾಡಲಿ" ಎಂದು ಹರಸಿದರು. ಪತ್ರ ತೆರೆದು ನೋಡಿದೆ. ಸಿಂಡಿಕೇಟ್ ಬೇಂಕ್ ಮಣಿಪಾಲದ ಕೇಂದ್ರ ಕಛೇರಿಯ ಪ್ರಿಮೈಸಸ್ ಡಿಪಾರ್ಟ್ ಮೆಂಟಿನಲ್ಲಿ ಕ್ಲರ್ಕ್ ಕೆಲಸ ನೀಡಿ, ಪತ್ರ ಸಿಕ್ಕಿದ ಏಳು ದಿನಗಳ ಒಳಗೆ ಹಾಜರಾಗಬೇಕು ಎಂಬ ಆದೇಶ ಹೊತ್ತ ಪತ್ರವಾಗಿತ್ತು.

     ಆ ಸಮಯದಲ್ಲಿ ಹೆಬ್ರಿ ಸಣ್ಣ ಊರಾಗಿತ್ತು. ಬಹುತೇಕ ಮಂದಿ ಬಡವರಾಗಿದ್ದರು. ಆದರೆ ಯಾರೂ ಪ್ರೀತಿಯಲ್ಲಿ ಸಣ್ಣವ ರಾಗಿರಲಿಲ್ಲ, ಹೃದಯವಂತಿಕೆಯಲ್ಲಿ ಎಲ್ಲರೂ ಶ್ರೀಮಂತರಾಗಿದ್ದರು. ಯಾರಿಗೋ ಕಷ್ಟವೊದಗಿತು ಅಂದರೆ ನಾಲ್ಕು ಜನ ಹೋಗಿ ಸಾಂತ್ವನ ಹೇಳಿ ಬರುತ್ತಿದ್ದರು. ಅವರ ಕಷ್ಟ ಪರಿಹಾರ ಮಾಡುತ್ತಿದ್ದರು ಎಂದೇನೂ ಅಲ್ಲ. ಆದರೂ ಪರರ ಕಷ್ಟಕ್ಕೆ ಸ್ಪಂದಿಸು ತ್ತಿದ್ದರು. ಒಬ್ಬನಿಗೆ ವ್ಯಾಪಾರದಲ್ಲಿ ನಾಲಕ್ಕು ರುಪಾಯಿ ಲಾಭವಾಯ್ತು ಅಂದರೆ ಉಳಿದ ವರ್ತಕರಿಗೆ ಆನಂದವಾಗುತ್ತಿತ್ತೇ ವಿನಃ ಮತ್ಸರವಿರುತ್ತಿದ್ದಿಲ್ಲ. ತನಗೂ ವ್ಯವಹಾರದಲ್ಲಿ ವೃದ್ಧಿಯಾಗಲೀ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರೇ ವಿನಃ ಹೊಟ್ಟೆಕಿಚ್ಚು ಪಡುತ್ತಿರಲಿಲ್ಲ. ಇದು ನಮ್ಮ ಊರಿನ ಸ್ಪೆಷಾಲಿಟಿ. ಈ ಬಾಂಧವ್ಯವನ್ನು ಇಂದಿಗೂ ಕಾಯ್ದುಕೊಂಡು ಬಂದಿದ್ದೇವೆ.

     "ಸಾನ್ ದೇವೂಲೆ ಪುತ್ತಾಕ ಕಾಮ ದಾಲ್ಲೆ ಖೈಂ" ಶುಭಸುದ್ದಿ ಅರ್ಧ ಘಂಟೆಯೊಳಗೆ ಊರೆಲ್ಲ ಹಬ್ಬಿತು. ಎಲ್ಲರಿಗೂ ಸಂತಸ. "ಆಗಲಿ, ದೇವರು ದೇವರಾಯರ ಮೇಲೆ ಕಣ್ಣು ತೆರೆದ, ಇನ್ನು ಅವರ ಒಳ್ಳೆಯ ಕಾಲ ಸುರುವಾಯ್ತು." ಅನೇಕರು ಖುಷಿಗೊಂಡರು. ನನಗೂ ತಂದೆಯವರಿಗೂ ಅಭಿನಂದನೆಗಳಾದವು.

     ಮೂರುಘಂಟೆಯ ಹೊತ್ತಿಗೆ ನರಸಿಂಹ ಶೆಣೈಯವರು ಕರೆದರು. "ಹೌದನಾ ನಿನಗೆ ಸಿಂಡಿಕೇಟಿನಲ್ಲಿ ಜೋಬ್ ಆಯ್ತಂತಲ್ಲಾ. ಸುದ್ದಿ ಕೇಳಿದೆ, ಒಳ್ಳೇದಾಯ್ತು."

     "ಹೌದು."

     "ಯಾವಾಗ ಜೊಯಿನ್ ಆಗುತ್ತೀ?"

     "ಒಂದು ವಾರದೊಳಗೆ ಜೊಯಿನ್ ಆಗಬೇಕು ಅಂತ ಆರ್ಡರ್ ಉಂಟು. ಒಳ್ಳೇ ದಿನ ನೋಡಿ ರಿಪೋರ್ಟ್ ಮಾಡು ಅಂತ ಹೇಳಿದ್ದಾರೆ."

     "ಇನ್ನೂ ಒಳ್ಳೇ ದಿನ ಎಂತ ನೋಡೂದು? ನಿನಗೆ ಆರ್ಡರ್ ಬಂದ ದಿನವೇ ಒಳ್ಳೇದು. ಇದಕ್ಕಿಂತ ಒಳ್ಳೇ ದಿನ ಉಂಟಾ? ಆದ್ರಿಂದ ನೀನು ನಾಳೆಯೇ ಮಣಿಪಾಲಕ್ಕೆ ಹೋಗಿ ಕೆಲಸಕ್ಕೆ ಸೇರು. ನಿನ್ನ ಹತ್ತಿರ ಸರಿಯಾದ ಪ್ಯಾಂಟು ಷರ್ಟು ಉಂಟಾ? ಇಲ್ಲದಿದ್ದರೆ ಒಂದು ಜತೆ ಡ್ರೆಸ್ಸು ಹೊಲಿಸಿಕೋ. ನನ್ನ ಮಾತು ಕೇಳು. ಇವತ್ತು ಹೇಗೂ ಮಧ್ಯಾಹ್ನ ಆಯಿತು, ಆದ್ದರಿಂದ ನಾಳೆಯೇ ಜೊಯಿನ್ ಆಗು. ಈಗ ಸಿಕ್ಕಾಪಟ್ಟೆ ಎಪೊಯಿಂಟ್ ಮೆಂಟ್ ಆಗುತ್ತಾ ಉಂಟು. ಬೇಗ ಸೇರಿದಷ್ಟು ನಿನಗೇ ಒಳ್ಳೇದು. ಅಷ್ಟರಮಟ್ಟಿಗೆ ನಿನಗೆ ಸೀನಿಯಾರಿಟಿ ಸಿಗುತ್ತದೆ."

     "ಆಯ್ತು, ನೀವು ಹೇಳಿದ ಮಾತು ಸಮ. ನಾಳೆಯೇ ಕೆಲಸಕ್ಕೆ ಸೇರ್ತೇನೆ. ನಿಮ್ಮ ಆಶೀರ್ವಾದ ಬೇಕು."

     "ನಮ್ಮ ಎಲ್ಲರ ಆಶೀರ್ವಾದ ಉಂಟು. ಈಗ ನೀನು ನಾಳೆ ಮಣಿಪಾಲಕ್ಕೆ ಹೋಗುವ ವ್ಯವಸ್ಥೆ ಮಾಡು, ನಡಿ."

     ಶೆಣೈಯವರು ಆದಿನ ಹುರಿದುಂಬಿಸಿದುದರಿಂದ ನಾನು ಅದೇ ಮರುದಿನ ಬೇಂಕಿಗೆ ಹೋಗಿ ಸೇರಿದೆ. 'ಇಂದಿನ ದಿನ ಸುದಿನ ನಾಳೆಗೆ ಎಂದರೆ ಅದು ಕಠಿಣ.' ಎಂಬ ಗಾದೆಯನ್ನೂ ಅವರು ಉದಾಹರಿಸಿದ್ದರು....

     "ಗಾದೆಯ ಮಾತು ಸುಳ್ಳಲ್ಲ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಇನ್ನೊಂದು ಗಾದೆ ಇದೆ. ಮೇಲಿನ ಗಾದೆಗೆ ಸಂಬಂಧಿಸಿ ಒಂದು ಚಂದದ ಕತೆ ಉಂಟು...." ಖಾಯಿಲೆ ಬಿದ್ದು ರೆಸ್ಟು ಪಡೆಯುತ್ತಿರುವ ಸಮಯದಲ್ಲಿ ಅಮ್ಮ ಹೇಳಿದ ಕತೆ....

     'ಶ್ರೀರಾಮಚಂದ್ರ ರಾವಣಾಸುರನನ್ನು ಸಂಹರಿಸಿ ವಿಭೀಷಣಾದಿ ವಾನರಸೇನೆಯೊಡಗೂಡಿ ಅಯೋಧ್ಯೆಗೆ ಮರಳಿ ರಾಜ್ಯಭಾರವನ್ನು ಕೈಗೆತ್ತಿಕೊಳ್ಳುತ್ತಾನೆ. ಒಂದು ಶುಭದಿನದ ಶುಭಮುಹೂರ್ತದಲ್ಲಿ ಶ್ರೀರಾಮನ ಪಟ್ಟಾಭಿಷೇಕವಾಗಬೇಕಾಗಿದೆ. ಆ ಪ್ರಯುಕ್ತ ಮಹಾ ಮಹಾ ಪಂಡಿತೋತ್ತಮರಲ್ಲಿ ಶುಭಮುಹೂರ್ತ ನಿರ್ಧರಿಸಲು ಕೋರಲಾಯಿತು. ಸರಿ, ಪ್ರಭು ರಾಮಚಂದ್ರನ ಪಟ್ಟಾಭಿಷೇಕ ಎಂದರೆ ಸುಮ್ಮನಾಯಿತೇ! ಪಂಡಿತೋತ್ತಮರೆಲ್ಲ ಸೇರಿ, ಕೂಡಿ ಕಳೆದು ಏನು ಮಾಡಿದರೂ ಒಂದು ಶುಭಗಳಿಗೆಯನ್ನು ನಿರ್ಧರಿಸಲಾರದಾದರು. ಯಾವ ಘಳಿಗೆ ಸೂಚಿಸಿದರೂ ಒಂದಲ್ಲ ಒಂದು ಅಡ್ಡಿ, ಅಶುಭ, ವಿಘ್ನಗಳು ಕಾಣಲಾರಂಭಿಸಿದವು. ಪಂಡಿತರು ಒಮ್ಮತಕ್ಕೆ ಬರಲಾರದಾದರು. ಜನರೆಲ್ಲ ಚಿಂತಿತರಾದರು. ಏನು ಮಾಡಲಿ? ಯಾರಲ್ಲಿ ಕೇಳಲೀ? ಲಾಸ್ಟಿಗೆ ಯಾವುದೇ ಚ್ಯುತಿ ನ್ಯೂನತೆಗಳಿಲ್ಲದ ಮುಹೂರ್ತವನ್ನು ಸೂಚಿಸಿದವರಿಗೆ ಸೂಕ್ತ ಬಹುಮಾನ ಉಂಟು ಎಂಬ ಘೋಷಣೆಯನ್ನು ಸಾರಲಾಯಿತು. ಆ ಸಮಯದಲ್ಲಿ ಒಬ್ಬ ಕೊಂಕಣಿ-ಗೌಡ ಸಾರಸ್ವತ ಬ್ರಾಹ್ಮಣ-ಜಿ ಎಸ್ ಬಿ- ಅಲ್ಲಿಗೆ ಬಂದಿದ್ದವನು 'ನೀವೆಲ್ಲ ಏಕೆ ಚಿಂತಿತರಾಗಿದ್ದೀರಿ? ಏನು ಸಮಸ್ಯೆ?' ಎಂದು ವಿಚಾರಿಸಲಾಗಿ "ಇಂತಿಂತಾ ಪ್ರೋಬ್ಲೆಮ್ ಬಂದಿದೆ ಮಹರಾಯ! ರಾಮನ ಪಟ್ಟಾಭಿಷೇಕ ಮಾಡಬೇಕಾಗಿದೆ, ಶುಭಮುಹೂರ್ತ ಯಾವುದೆಂದು ಇನ್ನೂ ನಿಘಂಟಾಗಲಿಲ್ಲ. ನಿನ್ನ ಬಳಿ ಪರಿಹಾರವೇನಾದರೂ ಇದ್ದರೆ ಹೇಳು, ಬಹಳ ಉಪಕಾರವಾಗುತ್ತದೆ." ಎಂಬ ಬಿನ್ನಹ ಬಂತು.

     "ಹೌದೇ! ಶ್ರೀ ರಾಮಚಂದ್ರನ ಪಟ್ಟಾಭಿಷೇಕದ ಶುಭಮುಹೂರ್ತವೇ, ಈಗಲೇ, ಇದೇ ಉತ್ತಮ ಘಳಿಗೆ. ಪಟ್ಟಾಭಿಷೇಕವನ್ನು ನೆರವೇರಿಸಿಬಿಡಿ. ತಡಮಾಡಬೇಡಿ. ಕಾರ್ಯಕ್ರಮಗಳನ್ನು ಸುರು ಮಾಡಿಬಿಡಿ." ಎಂದು ಆ ಪೈಮಾಮ-ಕಿಣಿಮಾಮ-ಮಾಲ್ಲೋ-ನಾಯಕಮಾಮು-ಶೆಣೈಮಾಮು-ಯಾರೋ ಒಬ್ಬ ಮಾಮ ಆದೇಶಿಸಿದರು.

     "ನೀವು ಯಾವ ಗ್ರಂಥದ ಆಧಾರದಿಂದ ಶುಭಘಳಿಗೆಯನ್ನು ನಿರ್ಧರಿಸಿದಿರಿ?" ಪಂಡಿತರಿಗೆ ಸಂಶಯ.

     "ನೀವು ಮೊದಲು ಪಟ್ಟಾಭಿಷೇಕವನ್ನು ಆರಂಭ ಮಾಡಿ.  ಶುಭಘಳಿಗೆ ಮೀರಿ ಹೋಗುತ್ತಿದೆ. ಉಳಿದ ವಿಚಾರ ಆ ಮೇಲೆ." ಇವರು ಅವಸರಿಸಿದರು.

     ನಂತರ ಪುರುಸತ್ತಾದಾಗ ಇವರು ವಿವರಿಸಿದರು "ನೋಡಿ, ಶ್ರೀರಾಮಚಂದ್ರ ಯಾರು? ಸ್ವಯಂ ದೇವರು, ದೇವರ ಕಾರ್ಯಗಳಿಗೆ ಎಲ್ಲಾ ಕಾಲವೂ ಶುಭಘಳಿಗೆಯೇ. ಅದಕ್ಕೆ ನಾವು ಗ್ರಂಥಗಳ ಪುಟ ತಿರುಗಿಸಬೇಕಿಲ್ಲ. ಪ್ರೇರಣೆ ಆದಾಗ ಸುರುಮಾಡೂದೇ. ಒಳ್ಳೇ ಘಳಿಗೆ ಹುಡುಕಬೇಕಾದದ್ದು ಮನುಷ್ಯಮಾತ್ರದವನ ಕಾರ್ಯಕ್ರಮಗಳಿಗೆ, ತಿಳಿಯಿತೇ?"

     ಶ್ರೀ ರಾಮಚಂದ್ರನ ಪಟ್ಟಾಭಿಷೇಕಕ್ಕೂ ಹೆಬ್ರಿ ಕೇಶವ ನಾಯಕನ ಜಾಯಿನಿಂಗ್ ರಿಪೋರ್ಟಿಗೂ ಯಾವುದೇ ತಾಳೆಯಿಲ್ಲ. ಆದರೆ 'ಇಂದಿನ ದಿನ ಸುದಿನ ನಾಳೆಗೆ ಎಂದರೆ ಅದು ಕಠಿಣ....'

Monday, July 6, 2020

ವಿಠಲಾ ವಿಠಲಾ ವಿಠಲಾ

ವಿಠಲಾ  ವಿಠಲಾ  ವಿಠಲಾ

     ಒಂದು ಸಾವಿರದಾ ಒಂಭೈನೂರ ಎಂಭತ್ತೇಳರ ಇಸವಿಯಿರಬೇಕು, ಬ್ರಾಂಚಲ್ಲಿ ಯಥಾಪ್ರಕಾರ ಕೆಲಸವು ನಡೀತಿತ್ತು.. 'ಹಾಂಜೀ ಭೈಯ್ಯಾ, ಮಾತಾದೀ ಕೀ ದರ್ಶನ್ ಠೀಕ್ ಠಾಕ್ ಹೋಗಯೀ ನಾ? ಕೋಯೀ ಪರೇಶಾನೀ?' ನನ್ನ ಸ್ಟಾಫು ತನ್ನ ಗೆಳೆಯನ ಬಳಿ ವಿಚಾರಿಸಿದ.

     'ಹೌದು ದೋಸ್ತ್ ಯಾವುದೇ ಸಮಸ್ಯೆ ಆಗಿಲ್ಲ, ದೇವರ ಕೃಪೆ ದರುಶನ ಎಲ್ಲ ಸಾಂಗವಾಗಿ ನಡೆಯಿತು. ಧನ್ಯನಾದೆ, ಬಹಳ ದಿನ ಗಳಿಂದ ಕಾಯುತ್ತಿದ್ದೆವು, ಬುಲಾವಾ ತೋ ಅಬ್ ಆಯಾ...'

     'ಬುಲಾವಾ ಮತಲಬ್!! ವಹಾಂ ಸೇ ಕೋಯೀ ಚಿಟ್ಠೀ ವಗೈರಾ ಆತಾ ಹೈ ಕ್ಯಾ?' ನಾನು ಮಧ್ಯೆ ಬಾಯಿ ಹಾಕಿದೆ.

     'ಇಲ್ಲ ನಾಯಕ್ ಸಾಬ್, ಬುಲಾವಾ ಆನಾ ಹೈ ಅಂದರೆ ಮನದಲ್ಲಿ ಭಕ್ತಿ ಯಾತ್ರೆ ಹೋಗಬೇಕೆಂಬ ತುಡಿತ ಪ್ರೇರಣೆ ಹಾಗೂ ಕಾಲ ಕೂಡಿಬರುವುದು. ಸುಮ್ಮನೆ ತಿರುಗಾಟದ ಮೂಡಿನಲ್ಲಿ ಹಾರೈಸಿದರೆ ಆಗೂದಿಲ್ಲ...'

     'ಓಹೋ ಹಾಗೇನು! ನನಗೆ ಅರಿವಿದ್ದಿಲ್ಲ'

     'ನಿವೃತ್ತಿ ಬಳಿಕ ಬೆಂಗಳೂರಲ್ಲಿ ಪಾರ್ಕಲ್ಲಿ ಸಂಜೆಯ ವಾಕಿಂಗ್ ಸಮಯದಲ್ಲಿ ಮಂಗಳೂರಿನವರೊಬ್ಬರು ಖಾಸಾ ಗೆಳೆಯರಾದರು. 'ನಾಯಕರೇ ಜೀವನದಲ್ಲಿ ಒಮ್ಮೆಯಾದರೂ ಪಂಡರಾಪುರ ವಿಠಲನ ದರ್ಶನ ಪಡೆಯಬೇಕು ನೋಡಿ. ನಾವು ಇತ್ತೀಚೆಗೆ ಹೋಗಿ ಬಂದೆವು.' ತಾನು ಮಾಡಿದ ಪಂಡರಾಪುರ ಯಾತ್ರೆಯ ವಿವರಣೆಗಳನ್ನು ನೀಡಿದರು. ಜೋರಾದ ಮಳೆಯ ಕಾರಣ ಅವರಿಗೆ ಯಾತ್ರೆ ಕೊಂಚ ಕಷ್ಟವಾದರೂ ಅದರ ಯಾವುದೇ ಚಿಂತೆಯಿಲ್ಲದೇ ವಿಠಲನ ದರ್ಶನದ ಕುರಿತೇ ಅತ್ಯಂತ ಆಸಕ್ತಿ ತನ್ಮಯತೆಗಳಿಂದ ವಿವರಿಸಿದರು.

     'ನನಗೂ ಪಂಡರಾಪುರ ವಿಠಲನ ದರ್ಶನ ಪಡೆಯಬೇಕು ಎಂಬ ಆಶೆ ಇದೆ ಮಾರಾಯರೇ, ಯಾವುದಕ್ಕೂ ಬುಲಾವಾ ಬಂದಿಲ್ಲ.'

     'ಬುಲಾವಾ ಅಂದ್ರೇ?' .... ಅವರಿಗೆ ನನ್ನ ದಿಲ್ಲಿಯ ಕಥೆ ಹೇಳಿದೆ.

     'ಕಳೆದ ದಶಂಬರ ತಿಂಗಳಲ್ಲಿ ಆ ಸುಯೋಗ ಒದಗಿತು. ನಿರ್ಮಲಾ ಟ್ರಾವಲ್ಸ್ ನ ಎಂಟು ದಿನಗಳ ಟೆಂಪಲ್ ಟೂರ್ ಪ್ರೋಗ್ರಾಮು ಹಾಕಿಕೊಂಡೆವು. ಇತರ ಪ್ರಖ್ಯಾತ ದೇವಳಗಳ-ಕೊಲ್ಹಾಪುರ ಮಹಾಲಕ್ಷ್ಮಿ ಮಂದಿರ, ಶಿರಡೀ ಸಾಯಿಬಾಬಾ, ಶನಿ ದೇವಸ್ಥಾನ, ಅಜಂತಾ, ಎಲ್ಲೋರಾ- ಅಲ್ಲದೇ ಇತರ ಕ್ಷೇತ್ರಗಳ ಒಟ್ಟಿಗೆ ಪಂಡರಾಪುರ ವಿಠಲನ ದರ್ಶನ ಭಾಗ್ಯವೂ ಇತ್ತು. ಬಹು ಕಾರಣೀಕದ ಭಕ್ತವತ್ಸಲನೆಂಬೋ ಬಿರುದು ಹೊತ್ತವನ ದೇವಾಲಯ. ಅನೇಕ ಬೋಧಕ ಕಥೆಗಳಿವೆ.....

     ಚೋಖಾ ಮೇಳಾ ಎಂಬ ವಿಠಲನ ಪರಮ ಭಕ್ತನೊಬ್ಬನಿದ್ದ. ಜಾತಿಯಲ್ಲಿ ಕೊಂಚ ನಿಮ್ನ ವರ್ಗದವನು. ಸದಾ ವಿಠಲನ ನಾಮಸ್ಮರಣೆ. ವಿಠಲನ ದರ್ಶನ ಪಡೆಯಬೇಕು ಪಡೆಯಬೇಕು ಎಂಬ ಹಂಬಲ. ಕೊನೆಗೊಮ್ಮೆ ಅವಕಾಶ ಒದಗಿತು. ವಿಠಲನ ದರ್ಶನಾಕಾಂಕ್ಷಿ ವಾರಕರಿ ಗುಂಪೊಂದು ಆತನ ಊರಿನ ಮೂಲಕ ಹಾದು ಹೋಗುವಾಗ ಇವನೂ ಅದನ್ನು ಸೇರಿಕೊಂಡ. ಖುಷಿಯೋ ಖುಷಿ!! ಪರಮಾತ್ಮನ ದರ್ಶನವಾದದ್ದೇ ಆತ ತನ್ಮಯನಾದ, ತನ್ನನ್ನು ಮರೆತ... ದೇವರ ಎದುರು ಕುಳಿತು ಭಕ್ತಿಪರವಶನಾಗಿ ಸ್ತುತಿಸುತ್ತಿದ್ದ ಚೋಖಾ ಮೇಳನಿಗೆ ಸಮಯದ ಪ್ರಜ್ಞೆ ಇರಲಿಲ್ಲ...

     ದೇವಾಲಯದ ಪ್ರಧಾನ ಅರ್ಚಕರು ರಾತ್ರಿ ಪೂಜೆಗೆಂದು ಬಂದಾಗ ಚೋಖಾ ವಿಠಲನಲ್ಲೇ ಮಗ್ನನಾಗಿ ಇಹದ ಪರಿವೆಯಲ್ಲಿರಲಿಲ್ಲ. ಒಬ್ಬ ಹೀನ ಜಾತಿಯವ ಮಂದಿರದೊಳಗೆ ನುಗ್ಗುವುದೆಂದರೇನು!! ಅರ್ಚಕರಿಗೆ ನಖಶಿಖಾಂತ ಏರಿತು ಸಿಟ್ಟು, ಕೋಪಾವೇಶದಿಂದ ಚೋಖಾ ಮೇಳನ ಕಪಾಳಕ್ಕೆ ರಪ್ಪೆಂದು ಬಾರಿಸಿ, ಎಬ್ಬಿಸಿ ಬೈದು ಒದ್ದು ಹೊರಹಾಕಿದರು. 'ದೇವಾ ದೇವಾ ಏನು ಅಪಚಾರವಾಯಿತು! ನಿನ್ನ ಪಾವನ ಸನ್ನಿಧಿಗೆ ಇವನು ಅಪಚಾರ ಮಾಡಿದನೇ!!' ಎಂದು ಶುದ್ಧಾಚಾರದ ಕಾರ್ಯಗಳನ್ನು ಮಾಡಿ ಮನೆಗೆ ಹೋದರು.

     ಮರುದಿನ ಯಥಾಪ್ರಕಾರ ದೇವಳದ ಬಾಗಿಲು ತೆರೆದು ಭಕ್ತಾದಿಗಳ ದರ್ಶನಕ್ಕಾಗಿ ವಿಠಲನ ಶೃಂಗಾರ ಮಾಡುತ್ತಿರುವಾಗ ದೇವರ ಮೂರ್ತಿಯಲ್ಲಿ ಏನೋ ವ್ಯತ್ಯಾಸ ಕಂಡುಬಂತು, ಗಮನವಿಟ್ಟು ನೋಡಿದರು, ವಿಠಲನ ಎಡ ಕೆನ್ನೆ ಕೊಂಚ ಊದಿತ್ತು!! ಅರ್ಚಕರಿಗೆ ಒಮ್ಮೆಲೇ ಆಘಾತವಾಯಿತು! ಅವರೂ ಜ್ಞಾನಿಗಳೇ, ವಿಠಲನ ಅನನ್ಯ ಭಕ್ತರು, ದೇವರ ಸನ್ನಿಧಿಯಲ್ಲಿ ಬಹುಕಾಲದಿಂದ ಸೇವೆ ಸಲ್ಲಿಸುತ್ತಿದ್ದವರು, ಭಗವಂತನ ಸಾಕ್ಷಾತ್ಕಾರ ಆಗಿಲ್ಲವೇ ಎಂದು ಪರಿತಪಿಸುತ್ತಿದ್ದವರು. ಆದರೂ ರೂಢಿಗತ ಆಚರಣೆ, ನೇಮ ನಿಯಮ ಮತ್ತು ಸಂಪ್ರದಾಯಗಳಿಗೆ ಕಟ್ಟು ಬಿದ್ದ ಕಾರಣ ಹಿಂದಿನ ದಿನ ಆತ ಕಟುವಾಗಿ ವರ್ತಿಸಿದ್ದರು.

     'ಅರೇ, ಎಂತಹ ಘೋರ ಅಚಾತುರ್ಯ ನಡೆಯಿತು!! ಯಾವ ದೇವನ ಸಾಕ್ಷಾತ್ಕಾರಕ್ಕೆಂದು ಜೀವನ ಸವೆಸುತ್ತಿದ್ದ ತಾನು ಆ ದೇವರೇ ಪ್ರತ್ಯಕ್ಷನಾದಾಗ ಕುರುಡನಾದೆನಲ್ಲಾ!? ನನ್ನಂಥ ಮೂರ್ಖ, ಅಜ್ಞಾನಿ ಅಥವಾ ಪಾಪಿ ಇನ್ನಾರಾದರೂ ಇದಾರೆಯೇ! ಮನುಷ್ಯನ ಜಾತಿ ಮಾತ್ರ ನೋಡಿದೆ, ಮನುಷ್ಯನಲ್ಲಿರುವ ವಿಠಲನನ್ನು ಗುರುತಿಸದೇ ಹೋದೆನೇ! ವಿಠಲಾ ವಿಠಲಾ ವಿಠಲಾ!!' ಎಂದು ಪರಿ ಪರಿಯಾಗಿ ದುಃಖಿಸಿ ಹಿಂದಿನ ರಾತ್ರಿ ಹೊಡೆದು ಬೈದು‌ ಹೊರನೂಕಿದ ಚೋಖಾ ಮೇಳಾನನ್ನು ಹುಡುಕುತ್ತಾ ಕರೆಯುತ್ತಾ ಹುಚ್ಚರಂತೆ ಊರೆಲ್ಲ ಹುಡುಕಾಡಿದರು. ಕೊನೆಗೆ ನದೀ ತೀರದಲ್ಲಿ ವಿಠಲನ ಧ್ಯಾನದಲ್ಲಿ ಇದ್ದ ಚೋಖಾ ಮೇಳಾನನ್ನು ಹುಡುಕಿ ಆತನ ಕಾಲಿಗೆ ಬಿದ್ದು ಕ್ಷಮೆ ಕೇಳಿದರು....

     ನಮಗೆ ದೇವರ ದರ್ಶನ ಬಹಳ ಸುಲಭದಲ್ಲಿ ಆಯಿತು. ಹೆಚ್ಚಿನ ಗಡಿಬಿಡಿಯಿಲ್ಲದೇ ಸಾಂಗವಾಗಿ ನಡೆಯಿತು. ಭಕ್ತರು ಸರತಿ ಸಾಲಲ್ಲಿ ಹೋಗಲೆಂದೇ ಅಟ್ಟಳಿಗೆಯನ್ನು ಕಟ್ಟಿದ್ದಾರೆ. ದೇವರ ಬಳಿ ಬಂದಂತೆಲ್ಲ ಮನವು ಆನಂದಮಯವಾಗಿ ಭಾವುಕವಾಯಿತು. ಭಗವಂತನ ಬಳಿ ಬಂದಂತೆಲ್ಲ ಮೈಮನಗಳಲ್ಲೆಲ್ಲ ವಿಠಲನೇ ತುಂಬಿಕೊಂಡ. ವಿಠಲ ವಿಠಲ ಎಂದು ಧ್ಯಾನಿಸುತ್ತ ಬಳಿ ಸಾರಿ ಅವನ ಪಾದಗಳನ್ನು ಸ್ಪರ್ಶಿಸಿ ಬಾಗಿ ಹಣೆಯನ್ನು ತಾಗಿಸಿ ನಮಸ್ಕರಿಸುವಾಗ ಎಲ್ಲೆಡೆ ವಿಠಲನೇ ತುಂಬಿಕೊಂಡ. ಚಲಾ ಚಲಾ ಎನ್ನುವ ದೇವಳದ ತೈನಾತಿಯಾಗಲೀ ಹಿಂದೆ ಮುಂದೆ ನಿಂತಿರುವ ಭಕ್ತಾದಿ ಯಾತ್ರಾರ್ಥಿಗಳಾಗಲೀ ಯಾರೂ, ಯಾವುದೂ ಗಮನಕ್ಕೆ ಬಾರದೇ ಕೇವಲ ವಿಠಲ ಹಾಗೂ ಆತನ ನಾಮಸ್ಮರಣೆ ಮಾತ್ರ ಅನುಭವವಾಗುತ್ತಿತ್ತು. ಪರಮಾತ್ಮನ ಪಾದಗಳನ್ನು ಕೈಯಾರೆ ಮುಟ್ಟಿ ಹಣೆ ತಾಗಿಸಿ ನಮಸ್ಕರಿಸಿ ಧನ್ಯನಾಗುವ ಸುಯೋಗ, ಸುಖ ಹಾಗೂ ಆನಂದ ಕೇವಲ ಪಂಡರಾಪುರ ವಿಠಲನಲ್ಲಿ ಮಾತ್ರ ಪ್ರಾಪ್ತವಾಗುತ್ತದೆ.🙏🙏🙏

     ಜೀವನದಲ್ಲಿ ಧನ್ಯತೆಯ ಕ್ಷಣಗಳು ಅಪರೂಪವಾಗಿ ಲಭ್ಯವಾಗುತ್ತವೆ!!🙏🙏🙏



   
   

ನಿರಂತರ ಅಭ್ಯಾಸದ ಔಚಿತ್ಯ.


     ಒಮ್ಮೆ ದೇವತೆಗಳ ರಾಜನಾದ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, "ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ" ಎಂದು ಶಪಿಸಿಬಿಟ್ಟನು.

     ರೈತರು ಇಂದ್ರ ದೇವನನ್ನು ಪರಿ ಪರಿಯಾಗಿ ಬೇಡಿಕೊಂಡರು. ಆಗ ಇಂದ್ರ, ಮಹಾದೇವ ಶಿವನು ತನ್ನ ಡಮರುಗವನ್ನು ಬಾರಿಸಿದರೆ ಮಾತ್ರ ಶಾಪ ವಿಮೋಚನೆ ಆಗುವುದು ಎಂದ. ತಕ್ಷಣ ಶಿವನ ಬಳಿ ತಾನೇ ಹೋಗಿ, ರೈತರ ಬೇಡಿಕೆಗೆ ಮಣಿದು ಡಮರುಗ ಬಾರಿಸಬಾರದೆಂದು ವಿನಂತಿಸಿ, ಒಪ್ಪಿಸಿಯೂ ಬಂದು ಬಿಟ್ಟ.

     ಹಾಗಾಗಿ ರೈತರು ಶಿವನ ಬಳಿ ಹೋಗಿ, ಬೇಡಿಕೊಂಡಾಗ, ಶಿವನೂ ತನ್ನ ಅಸಹಾಯಕತೆ ವ್ಯಕ್ತಪಡಿಸಿ, ಇನ್ನು 12 ವರ್ಷಗಳ ನಂತರವೇ ಡಮರುಗ ಬಾರಿಸುವುದಾಗಿ ಹೇಳಿಬಿಟ್ಟ. ಏನು ಮಾಡಲೂ ತೋಚದ ರೈತರು 12 ವರ್ಷ ಕಾಯುವುದೆಂದು ನಿರ್ಧರಿಸಿ ಕೊಂಡು, ಸುಮ್ಮನಿದ್ದು ಬಿಟ್ಟರು.

     ಆದರೆ ಒಬ್ಬ ರೈತ ಮಾತ್ರ ಪ್ರತಿ ವರ್ಷ ತಪ್ಪದೇ ಭೂಮಿ ಉಳುತ್ತಿದ್ದ, ಬಿತ್ತನೆ ಮಾಡುತ್ತಿದ್ದ, ಗೊಬ್ಬರ ಹಾಕುತ್ತಿದ್ದ. ಬೆಳೆಯೇನೂ ಬರುತ್ತಿರಲಿಲ್ಲ ಬಿಡಿ. 3 ವರ್ಷಗಳು ಸತತವಾಗಿ ಹೀಗೇ ನಡೆದಾಗ ಉಳಿದ ರೈತರು ಇವನನ್ನು ತಮಾಷೆ ಮಾಡ ತೊಡಗಿದರು...

     ಅವನನ್ನೇ ಕೇಳಿಯೂ ಬಿಟ್ಟರು..."12 ವರ್ಷಗಳು ಮಳೆಯೂ ಬರುವುದಿಲ್ಲ, ಬೆಳೆಯೂ ಬೆಳೆಯುವುದಿಲ್ಲ ಎಂದು ಗೊತ್ತಿದ್ದರೂ ನೀನು ವ್ಯರ್ಥವಾಗಿ ಶ್ರಮವನ್ನೇಕೆ ಹಾಕುತ್ತಿದ್ದೀಯ? ಗೊಬ್ಬರ ಏಕೆ ಹಾಳು ಮಾಡುತ್ತಿದ್ದೀಯ?" ಎಂದು.

     ಅದಕ್ಕೆ ರೈತನ ಉತ್ತರ ಅತ್ಯಂತ ಮಾರ್ಮಿಕವಾಗಿತ್ತು..."12 ವರ್ಷಗಳು ಮಳೆ- ಬೆಳೆ ಬರುವುದಿಲ್ಲ ಎಂದು ನನಗೆ ಗೊತ್ತಿದೆ. ಆದರೂ ಇದನ್ನೆಲ್ಲಾ ಮಾಡುತ್ತಿರುವುದು, ಉತ್ತನೆ, ಬಿತ್ತನೆಯ   *ಅಭ್ಯಾಸ*  ಇರಲಿ ಎಂಬ ಕಾರಣಕ್ಕಾಗಿ. 12 ವರ್ಷಗಳ ನಂತರ ಮಳೆ ಬಂದು, ಎಲ್ಲ  ಸರಿಯಾದಾಗ, ನಾನು ಕೆಲಸವನ್ನೇ ಮರೆತು, ಅಭ್ಯಾಸವಿಲ್ಲದೇ ಸೋಮಾರಿಯಾಗಿ ಬಿಟ್ಟಿರಬಾರದಲ್ಲ" .

     ಇದನ್ನು ಕೇಳಿದ ದೇವಿ ಪಾರ್ವತಿಗೆ ಖುಷಿಯಾಯಿತಂತೆ.  ತಾಯಿಯೂ ಶಿವನ‌ ಬಳಿ ತೆರಳಿ "12 ವರ್ಷಗಳ ಕಾಲ ನೀನೂ ಡಮರುಗ ಬಾರಿಸದಿದ್ದರೆ, ನಿನಗೆ ಅದನ್ನು ಬಾರಿಸುವುದೂ ಮರೆತು ಬಿಟ್ಟರೆ ಗತಿಯೇನು?" ಎಂದು ಕೇಳಿದಳಂತೆ. ಅದಕ್ಕೆ ಭೋಲೇನಾಥನು ಯೋಚಿಸಿ ನೋಡಿ, ಕುತೂಹಲದಿಂದ ಕೂಡಲೇ ಡಮರುಗವನ್ನು ಬಾರಿಸಿದನಂತೆ.

     ತಕ್ಷಣ ದೇವೇಂದ್ರನ ಮಾತಿನಂತೆ ಮಳೆಯೂ ಆಯಿತು. ಈ ರೈತನೊಬ್ಬ ಮಾತ್ರ ಬಿತ್ತಿದ್ದರಿಂದ ಇವನೊಬ್ಬನಿಗೆ ಮಾತ್ರ ಬೆಳೆ ಬಂದಿತಂತೆ. ಇವನನ್ನು ನೋಡಿ ಉಳಿದ ರೈತರೆಲ್ಲರೂ ನಿರಾಶರಾಗಿ, ತಾವೂ ಉತ್ತು, ಬಿತ್ತನೆ ಮಾಡಬೇಕಿತ್ತು ಎಂದು ಪರಿತಪಿಸಿದರಂತೆ.

     ಈ ಅಭ್ಯಾಸ ಬಲವೇ ನಮ್ಮನ್ನು ಪರಿಪೂರ್ಣರನ್ನಾಗಿ ಮಾಡುವುದು.

     ಒಳ್ಳೆಯ ಬದುಕು ಬೇಕೆಂದರೆ ಅದಕ್ಕೆ ಒಳ್ಳೆಯ ಅಭ್ಯಾಸಗಳಿರಲೇ ಬೇಕು.

     ಸ್ನೇಹಿತರೇ, ಈ ಲಾಕ್ ಡೌನ್ 2 ವಾರಗಳೋ, 2 ತಿಂಗಳೋ, 2 ವರ್ಷಗಳೋ ನಮಗೆ ಗೊತ್ತಿಲ್ಲ. ಆದು ಹೇಗಾದರೂ ಇರಲಿ, ನಾವು ಮಾತ್ರ ನಮ್ಮ
     ನಮ್ಮ ಕೌಶಲ್ಯಗಳನ್ನು,
     ನಮ್ಮ ಸಾಮರ್ಥ್ಯ ಗಳನ್ನು,
     ಕೆಲಸದ ಅಭ್ಯಾಸಗಳನ್ನು,
     ವೃತ್ತಿಯ ತಿಳುವಳಿಕೆಯನ್ನು
     ಹೆಚ್ಚಿಸಿಕೊಳ್ಳುತ್ತಿರೋಣ.

     ಆ ರೈತರು 'ಮಳೆ ಬರಲಿ, ಆಮೇಲೆ ನೋಡೋಣ' ಎಂದಂತೆ, ನಾವೂ ಲಾಕ್ ಡೌನ್ ಮುಗಿಯಲಿ, ಆಮೇಲೆ ನೋಡಿದರಾಯಿತು ಎನ್ನುವುದು ಬೇಡ.

     ಇಂದಿನಿಂದಲೇ, ನಮ್ಮ ಕೌಶಲ್ಯ, ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತ, ಮುಂಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗೋಣ.

     ಆಂಗ್ಲ ಲೇಖನವೊಂದರ ಭಾಷಾಂತರ

     ಕೃಪೆ:- ಅಶೋಕ ಮಲ್ಯರ ಫೇಸ್ ಬುಕ್ ಪ್ರಬಂಧ, 03, ಮೇ, 2020

Sunday, July 5, 2020

ಓಂ ಶ್ರೀ ಗುರುಭ್ಯೋ ನಮಃ ...

      ಮಾನನೀಯ ಜಿನರಾಜ ಪಂಡಿತರು.

     ಎಪ್ಪತ್ತರ ದಶಕವಿರಬೇಕು, ನಾವು ಹೆಬ್ರಿಯ ಪೈಯವರ ಮನೆಯ ಔಟ್ ಹೌಸ್ ನಲ್ಲಿ ಬಾಡಿಗೆಗೆ ಇದ್ದೆವು. ಅವರ ದೊಡ್ಡ ಮನೆಯ ಹಿಂಬಾಗದ ಟ್ವಿನ್ ಹೌಸು. ನಾನು ಅದನ್ನು ಟ್ವಿನ್ ಹೌಸು ಎಂದು ಗೌರವ ಕೊಡೂದು ಅಷ್ಟೇ. ಈಗ ಜನಜನಿತ ವಾಗಿರುವಂತೆ ವನ್ ಬೀ.ಎಚ್. ಕೇ. ಮನೆಗಳು! ಒಂದು ಭಾಗದಲ್ಲಿ ನಮ್ಮ ಜಿನರಾಜ ಮಾಸ್ಟ್ರು ಇನ್ನೊಂದರಲ್ಲಿ ನಾವು.

     ಮಾನ್ಯ ಜಿನರಾಜರು ಇಡೀ ಊರಿಗೇ ಕನ್ನಡಪಂಡಿತರು. ಬಹು ವಿದ್ವಾನರು. ಹೈಸ್ಕೂಲಲ್ಲಿ ಅಧ್ಯಾಪಕ ಹಾಗೂ ವಿದ್ಯಾರ್ಥಿ ವೃಂದಗಳಿಗೆ ಆಪ್ತರು ಗೌರವಾನ್ವಿತರು. ಊರ ಜನರು ಯಾರೂ ಅವರ ಹೆಸರು ಎತ್ತಿ ಸಂಬೋಧಿಸುತ್ತಿರಲಿಲ್ಲ, ಕನ್ನಡಪಂಡಿತರೇ, ಪಂಡಿತರೇ ಅಥವಾ ಗುರುಗಳೇ ಎಂದು ಮರ್ಯಾದೆ ಕೊಟ್ಟು ಮಾತನಾಡಿಸುತ್ತಿದ್ದರು. ಅವರೂ ಸಹ ಪ್ರತಿಯೊಬ್ಬರ ಬಳಿ ಬಹಳ ಪ್ರೀತಿಯಿಂದ ವ್ಯವಹರಿಸುತ್ತಿದ್ದರು. ಮುಂದೆ ಜೀವನದಲ್ಲಿ ನಾನೂ ಸಹ ಅವರ ಹಾಗೆ ಕನ್ನಡ, ಹಿಂದಿ ಮತ್ತು ಸಂಸ್ಕೃತಗಳ ದೋssಡ್ಡ ಮಹಾಪಂಡಿತನಾಗಬೇಕು ಎಂಬ ಆಕಾಂಕ್ಷೆಗಳನ್ನಿಟ್ಟುಕೊಂಡಿದ್ದೆ. ನನ್ನ ಹಾಗೇ ಇತರ ಅನೇಕರು ಅವರನ್ನು ಪ್ರೀತಿ ಭಕ್ತಿಗಳಿಂದ ಆರಾಧಿಸುತ್ತಿದ್ದೆವು. ನಾನು ಅವರ ಪ್ರಿಯ ಶಿಷ್ಯಂದಿರುಗಳ ಗುಂಪಲ್ಲಿ ಒಬ್ಬನಾಗಿದ್ದೆ.

     ಒಂದು ನೆನಪು:

     ಯಾವ ತರಗತಿಯಲ್ಲೆಂದು ನೆನಪಿಲ್ಲ, ಅರ್ಧವಾರ್ಷಿಕ ಪರೀಕ್ಷೆಯ ಕನ್ನಡ ಸಬ್ಜಕ್ಟಲ್ಲಿ ಒಂದು ಪ್ರಬಂಧ ಬರೆಯುವ ಪ್ರಶ್ನೆಯಿತ್ತು. ಪೇಪರು ತಿದ್ದುವ ಮಾರ್ಕು ಕೊಡುವ ವಿಚಾರದಲ್ಲಿ ಪಂಡಿತರು ಬಹಳ ಕಟ್ಟುನಿಟ್ಟು. ಎಷ್ಟು ಶೃದ್ಧೆಯಿಂದ ಪಾಠಗಳನ್ನು ಪ್ರತಿಯೊಬ್ಬರಿಗೂ (ಹೆಡ್ಡಾನುಹೆಡ್ಡನಿಗೂ) ಕೂಡ ಮನದಟ್ಟಾಗುವಂತೆ ಹೇಳಿಕೊಡುತ್ತಿದ್ದರೋ, ತಿದ್ದಿ ಮಾರ್ಕು ನೀಡುವಾಗ ಅಷ್ಟೇ ಕಟ್ಟುನಿಟ್ಟು. ವಾಕ್ಯಗಳು ವ್ಯಾಕರಣಬದ್ಧ ಆಗಿರಬೇಕು, ಸರಿಯಾದ ಜಾಗಗಳಲ್ಲಿ ಅಲ್ಪವಿರಾಮ (ಕೊಮಾ), ಅರ್ಧವಿರಾಮ, ಪೂರ್ಣವಿರಾಮ, ಆಶ್ಚರ್ಯಜನಕ ಚಿಹ್ನೆ ಇತ್ಯಾದಿ ಇತ್ಯಾದಿಗಳನ್ನು ಹಾಕಬೇಕು. ಕೊಟ್ಟ ವಿಷಯದ ಕುರಿತು ಹೆಗ್ಗುರುತುಗಳನ್ನು ಹಾಕಿಕೊಂಡು ಅನುಕ್ರಮವಾಗಿ ಅವುಗಳನ್ನು ಬೇರೆ ಬೇರೆ ಪ್ಯಾರಾಗಳಲ್ಲಿ ಬರೆಯಬೇಕು. ಮತ್ತು ಕೊನೆಯಲ್ಲಿ ಎಲ್ಲವನ್ನು ಕ್ರೋಢೀಕರಿಸಿ ಪ್ರಬಂಧವನ್ನು ಪೂರ್ಣಗೊಳಿಸಬೇಕು.....‌.. ಎಂದು ಹೇಳಿ ಹೇಳಿ ಮನದಟ್ಟು ಮಾಡುತ್ತಿದ್ದರು.

     'ಈ ಜಿನರಾಜ ಪಂಡಿತರ ಹತ್ರ ಆಗುದಿಲ್ಲ ಮಾರಾಯ! ಪ್ರಬಂಧ ಬರಿಯೂದಕ್ಕೇ ಬರೂದಿಲ್ಲ, ಅದರ ಮೇಲೆ ಅಲ್ಪವಿರಾಮ, ಅರ್ಧವಿರಾಮ ಪೂರ್ಣವಿರಾಮ... ರಾಮ ರಾಮ! ಇನ್ನೆಂತದು ಇಲ್ವಾ?' ಎಂದು ನಮ್ಮ ದೋಸ್ತಿ  ....ಪ್ಪ ಹೆಗ್ಡೆಯ ಮಂಡೆಬಿಸಿ.

     ಇರಲಿ, ತಿದ್ದಿದ ಪೇಪರುಗಳನ್ನು ಕೊಡುವಾಗ "ಒಬ್ಬನ ಉತ್ತರಪತ್ರಿಕೆಯಿಂದ ಪ್ರಬಂಧವನ್ನು ಈಗ ಓದಿ ಹೇಳುತ್ತೇನೆ, ಗಮನವಿಟ್ಟು ಕೇಳಿ" ಎಂದು ಓದತೊಡಗಿದರು. ಪರೀಕ್ಷೆ ಮುಗಿದು ತುಂಬ ದಿನಗಳಾಗಿದ್ದವು. ಅವರು ತನ್ಮಯತೆಯಿಂದ ಓದುತ್ತ ಇದ್ದಂತೆ ನಾನೇ ಬರೆದ ಪ್ರಬಂಧ ಎಂದು ಸಂಶಯ ಬರಲಾರಂಭವಾಯಿತು. "ನಾನು ಕಲಿಸಿದ್ದಕ್ಕೆ ಇಂದು ನನಗೆ ತೃಪ್ತಿ ಆಯಿತು, ಇಷ್ಟು ಚೆನ್ನಾಗಿ ವಿಷಯ ಮಂಡನೆ ಮಾಡಿ ಕ್ರಮಬದ್ಧವಾಗಿ ಪ್ರಬಂಧ ಬರೆದ ವಿದ್ಯಾರ್ಥಿ ಎದ್ದು ನಿಲ್ಲಬೇಕು." ಎಂದು ಆದೇಶಿಸಿದರು. ಕ್ಲಾಸಲ್ಲಿ ನನಗಿಂತ ಬುದ್ಧಿವಂತ ಗೆಳೆಯರೂ ಇದ್ದರು, ಪರೀಕ್ಷೆ ನಡೆದು ತುಂಬ ದಿನಗಳಾಗಿವೆ, ನನ್ನದೇ ಪೇಪರು, ಆದರೆ ಪೂರ್ತಿ ಧೈರ್ಯವಿಲ್ಲ! ಹಾಗಾಗಿ ಸ್ವಲ್ಪ ತಳಮಳದಲ್ಲಿದ್ದೆ. "ಕೇಶವ ನಾಯಕ್ ಎದ್ದು ನಿಲ್ಲು." ಗುರುಗಳು ಪ್ರೀತಿಯಿಂದ ಕರೆದು ಪೇಪರು ಕೊಟ್ಟರು. ಇಂದಿಗೂ ಅವರ ಆ ಅಭಿಮಾನದ ಭಾವ ಮನದ ಗೋಡೆಯಲ್ಲಿ ಅಚ್ಚೊತ್ತಿದೆ.

     ಇದು ನನ್ನ ಹೆಗ್ಗಳಿಕೆ ಪ್ರದರ್ಶಿಸಲು ಪ್ರಯತ್ನಿಸಿದ್ದಲ್ಲ. ನನ್ನ ಶಾಲಾ ಪರ್ವ ಮುಗಿದು ಜೀವನದಲ್ಲಿ ಯಾವ ಯಾವುದೋ ನಾಟಕಗಳಲ್ಲಿ ನನ್ನ ಪಾತ್ರವಿತ್ತು, ಆದರೆ ಅವರು ಕೊನೆಯ ವರೆಗೂ ನನ್ನ ಮೇಲೆ ಪ್ರೀತಿ ಪ್ರೇಮವನ್ನಿರಿಸಿದ್ದರು. ನಾನದನ್ನು ಮರೆಯಲಾಗುವುದಿಲ್ಲ.

     ಅವರ ಪತ್ನಿ ಸಹ ಶಿಕ್ಷಕಿ. ಮೂರು ಮಕ್ಕಳು- ಮಾಲ ಕಿರಣ ಮತ್ತು ಕಿಶೋರ.... ಮೇಲೆ ಹೇಳಿದಂತೆ ಎಪ್ಪತ್ತರ ದಶಕದ ಸಮಯದಲ್ಲಿ ಕಿಶೋರ ಸಣ್ಣವ ನಮ್ಮ ಪನ್ನಿಯ ಪ್ರಾಯವಿರಬೇಕು. ತಂಟಲಮಾರಿ ಅಂದ್ರೆ ತಂಟಲಮಾರಿ. "ಇವನ ಹತ್ರ ಆಗೂದಿಲ್ಲಪ್ಪ , ಒಂದು ಮೂಗುದಾರ ಇದ್ರೆ ನಿಮ್ಮ ಅಂಗಡಿಯಿಂದ ತಂದುಕೊಡಿ ಮುಕ್ತಮ್ಮ..." ಎಂದು ವಿಜಯಮ್ಮ ಟೀಚರು ಅಲವತ್ತುಕೊಳ್ಳೂದು "ಇರಲಿ ವಿಜಯಮ್ಮ, ಮಕ್ಕಳು ಆಡದೆ ನಾವು ನೀವು ಆಡೂದಾ! ಮಕ್ಕಳು ತಂಟೆ ಮಾಡಿದರೆ ಅದೇ ಒಂದು ಖುಷಿ," ನಮ್ಮಮ್ಮ ಸಮಾಧಾನ ಹೇಳೂದು ಇದು ನಿತ್ಯದ ಕಾಯಕ.

     "ಮಾಮ ಮಾಮ ನಾನೊಂದು ಡಾನ್ಸ್ ಮಾಡೂದಾ?" ಮಗಳು ಮಾಲ ಬಂದು ಕುಣಿಯತೊಡಗಿದಳು. ನಾನು ಆಲಿಸ್ಟೇರ್ ಮೇಕ್ಲೀನನ ಯಾವುದೋ ಒಂದು ಥ್ರಿಲ್ಲರ್ ಓದುತ್ತಿದ್ದೆ, ಆದಿತ್ಯವಾರ ರಜಾದಿನ, ಮಧ್ಯಾಹ್ನದ ವಿಶ್ರಾಂತಿ ಸಮಯ, ಇವಳಿಗೆ ಡಾನ್ಸು ಮಾಡುವ ಉಮೇದು. "ಆಯ್ತು ಮಾರಾಯಿತಿ, ಚಂದ ಡಾನ್ಸು ಮಾಡಬೇಕು ಆಯ್ತಾ?"

     "ಚಂದ ಇದ್ದರೆ ನೀವು ಚಪ್ಪಾಳೆ ತಟ್ಟಬೇಕು ಮತ್ತೇ" ಅವಳ ತಾಕೀತು. ಪುಸ್ತಕ ಮಡಿಸಿಟ್ಟು ಅವಳತ್ತ ಗಮನ ಕೊಟ್ಟೆ, ಒಳಗಿನಿಂದ ತಾಯಿ ವಿಜಯಮ್ಮ ಇವಳಿಗೆ ತಿಳಿಯದಂತೆ ನೃತ್ಯ ನೋಡಿ ಖುಷಿ ಪಡುತ್ತಿದ್ದರು. ಒಂದರ ಹಿಂದೆ ಒಂದರಂತೆ ಸುಮಾರು ಅರ್ಧ ಘಂಟೆಯ ತನಕ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು.

     "ಮಾಮನಿಗ ತೊಂದರೆ ಕೊಡಬೇಡ, ಆಗಲಿಂದ ಕುಣೀತಾ ಇದ್ದೀ, ಸಾಕು ಮಾಡಮ್ಮ" ತಾಯಿ ಬಂದು ಕರೆದರು. "ಇವಳಿಗೆ ಪ್ರೈಜ್ ಡಿಸ್ಟ್ರಿಬ್ಯುಷನ್ ಪ್ರೋಗ್ರಾಮು ಮಾಡಬೇಕಲ್ಲ, ಎಷ್ಟು ಚಂದ ಡಾನ್ಸು ಮಾಡ್ತಾಳೆ!" ಎರಡು ಶಹಭಾಷ್ ಮಾತು ಆಡಿದೆ. ಮಾಲಳಿಗೆ ಬಹಳವೇ ಖುಷಿಯಾಯಿತು.

     ಕಾಲಚಕ್ರ ಉರುಳುತ್ತ ಇದೆ. ಜೀವನದ ಯಾತ್ರೆಯಲ್ಲಿ ನಮ್ಮ ರೈಲು ಬೇರೆ ಬೇರೆ ನಿಲ್ದಾಣಗಳನ್ನು ದಾಟಿ ಬಂದಿದೆ. ಅವರದ್ದೂ ಡೆಸ್ಟಿನೇಶನ್ನು ಬೇರೆ ಎಲ್ಲೋ ಇದೆ. ನೆನಪಿನ ಬಟನ್ನು ಒತ್ತಿದಾಗ ಒಂದೊಂದು ಎಪಿಸೋಡು ಓಪನ್ ಆಗುತ್ತದೆ.

     ಒಂದು ಬಟನ್ನು ಇವತ್ತು ಒತ್ತಿದ್ದೇನೆ.

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ..



     ವೃತ್ತಿಯಲ್ಲಿ ನಾನು ಬೇಂಕ್ ಸ್ಟಾಫು. ಆದರೂ ಹುಡುಗು ಪ್ರಾಯದಿಂದಲೂ ಕಥೆ, ಕಾದಂಬರಿ, ಹಾಸ್ಯ ಅಥವಾ ಚುಟುಕು ಗಳನ್ನು ಓದುವ ಹವ್ಯಾಸವಿತ್ತು. ನಮ್ಮ ಅಮ್ಮ ಮತ್ತು ಸುಬ್ರಾಯಣ್ಣನ ಪ್ರೋತ್ಸಾಹದಿಂದ ಕತೆ ಓದುವ ಉಮೇದು. ಚಿಕ್ಕವನಿರುವಾಗ ಆಗ ಪ್ರಸಿದ್ಧಿ ಹೊಂದಿದ್ದ 'ಚಂದಮಾಮ' ಓದುವುದಿತ್ತು. ಹೈಸ್ಕೂಲು ಮುಟ್ಟಿದಾಗ ಊರಿನ ಸಮಾಜ ಮಂದಿರದ ಬಳಿಯಿದ್ದ ಲೈಬ್ರೇರಿಯಲ್ಲಿನ ಬುಕ್ಕು ಓದುವುದು ಸ್ಟಾರ್ಟ್ ಆಯಿತು. ರಾಮಣ್ಣ ಹೆಬ್ಬಾರ ಮಾಸ್ಟ್ರು ಅದನ್ನು ನೋಡಿ ಕೊಳ್ಳೂದಿತ್ತು. 
     ಸಮಾಜಮಂದಿರದ ಹೊಯಿಗೆಯಲ್ಲಿ ಕಬಡ್ಡಿ , ಗುಡುಗುಡೇ ಪಕ್ಷಿ ಅದು ಇದು ಆಡುವುದು, ಕಬಡ್ಡಿಯಲ್ಲಿ ನಾಗಪ್ಪ ಹೆಗ್ಡೆ , ವಿವೇಕಣ್ಣ ಇವರೆಲ್ಲ ಹೀರೋಗಳು, ನಮ್ಮಂತಾ ಚಿಕಣಿಗಳನ್ನೆಲ್ಲ ಎಳೆದೆಳೆದು ಹೊರಹಾಕ್ತಿದ್ದರು. ಇವರ ಕೈಲಿ ಆಗುದಲ್ಲ ಹೋಗೂದಲ್ಲ ಎಂದು ಮೆಲ್ಲನೇ ಲೈಬ್ರೇರಿಯತ್ತ ಕಾಲುಹಾಕಿ ರಾಮಣ ಹೆಬ್ಬಾರ ಮಾಸ್ಟ್ರ ಕೃಪಾಕಟಾಕ್ಷದ ನಿರೀಕ್ಷೆ ಮಾಡುತ್ತಿದ್ದೆವು.

     'ಹೌದನಾ, ಮೂರು ದಿನದ ಹಿಂದೆ ತಕೊಂಡು ಹೋದ ಪುಸ್ತಕ ವಾಪಾಸು ಬರಲಿಲ್ಲ , ಈಗ ಪುನಃ ಬಂದಿದೀಯ! ಅವನ ಧೈರ್ಯ ನೋಡು! ನನ್ನ ಬೆತ್ತ ಎಲ್ಲಿ ಹೋಯ್ತು? ಪುಸ್ತಕ ಅಂತೆ ಪುಸ್ತಕ!' ಎಂದು ಗುರುಕಾಯಿಸಿದರೂ ಕೊನೆಗೆ ನಾವು ಕೇಳಿದ ಪುಸ್ತಕ ಕೊಡುತ್ತಿದ್ದರು. ನಾನು ಮತ್ತಿತರ ಒಂದಿಬ್ಬರು ಮಕ್ಕಳ ಮೇಲೆ ಅವರಿಗೆ ವಿಶೇಷ ಪ್ರೀತಿ. ಆ ಸಮಯದಲ್ಲಿ ಹೆಚ್ಚಿನ ಪುಸ್ತಕಗಳು ಲಭ್ಯವಿರುತ್ತಿದ್ದಿಲ್ಲ. ಊರೂ ಸಣ್ಣದು, ಅನುದಾನವೂ ಕಮ್ಮಿ, ಆದರೂ ಅವರಿಗೆ ಸ್ವತಃ ಓದುವ ಹವ್ಯಾಸ ವಿದ್ದುದರಿಂದ ತಕ್ಕಮಟ್ಟಿನ ಸ್ಟಾಕು ಇರುತ್ತಿತ್ತು. 'ಪತ್ತೇದಾರ ಪುರುಷೋತ್ತಮನ ಸಾಹಸಗಳು' ನಮ್ಮ ಆಗಿನ ಪ್ರಮುಖ ಆಕರ್ಷಣೆ. 'ಚೆನ್ನಾಗಿ ಓದ್ಬೇಕು ಮಗಾ' ಎಂದವರು ಆಗಾಗ ಮೋಕೆಯಿಂದ ಬೆನ್ನು ತಟ್ಟುತ್ತಿದ್ದುದು ನೆನಪಿದೆ....

     ಈ ನೊವೆಲ್ಸ್ ಓದುವ ಹವ್ಯಾಸದಿಂದ ಅನೇಕರು ಗೆಳೆಯರಾದರು, ಹೃದಯಕ್ಕೆ ಹತ್ತಿರವಾದರು. ಗೆಳೆಯ ದಾಮೋದರ ನಾಯಕರು (ಹರಿಮಾಮ್ ಮಗ) ದೆಹಲಿಯಿಂದ ಬಂದಾಗ 'The Godfather' ತಂದು ಕೊಟ್ಟರು. 'ನೋಡು ಇವತ್ತು ಶುಕ್ರವಾರ, ನಾಡದ್ದು ಮಂಗಳವಾರ ನಮ್ಮದು ಡೆಲ್ಲಿ ಟಿಕೇಟು, ಆದ್ರಿಂದ ಸೋಮವಾರ ಪುಸ್ತಕ ವಾಪಸು ಬೇಕೇ ಬೇಕು, ನಂದು ಪೂರ್ತಿ ಓದಿ ಆಗಲಿಲ್ಲ , ನಾನು ರೈಲಲ್ಲಿ ಓದ್ತೇನೆ.'

     'ಇಷ್ಟು ದಪ್ಪದ ಬುಕ್ಕು ಓದಲು ನನಗೆ ಒಂದು ತಿಂಗಳು ಬೇಕು!'

     'ನೀನು ಒಮ್ಮೆ ಓದಲು ಸುರು ಮಾಡು, ಊಟ ತಿಂಡಿ ಮರೆತು ಹೋಗ್ತದೆ, ಅಷ್ಟು ಚೆನ್ನಾಗಿದೆ!'

     ಮೊದಲ ಸಲ ಒಂದು ಇಂಗ್ಲೀಷ್ ಥ್ರಿಲರನ್ನು ನಾನು ಅವರಂದಂತೆ ಊಟ ತಿಂಡಿ ಮರೆತು ಓದಿದ್ದು-The Godfather' ಪೆರಿಮೇಸನ್ ನ ಸಸ್ಪೆನ್ಸಿಗಿಂತ ಹೆಚ್ಚಿನ ಅದ್ಭುತ ನೋವೆಲ್ಸ್ ಗಳ ಪರಿಚಯ ಗಾಡ್ ಫಾದರ್ ಕಾದಂಬರಿಯಿಂದಾಯಿತು. ನಾಯಕರು ಮೊದಲೇ ನಮ್ಮ ಬಂಧುಗಳು. ಈ ಪುಸ್ತಕದ ನಿಮಿತ್ತ ಇನ್ನೂ ಹತ್ತಿರವಾದರು..

     ಹೆಬ್ರಿ ತಾಲೋಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನ ತಾ.22-02-2019ರಲ್ಲಿ ಆತ್ಮೀಯರಾದ ಶ್ರೀ ಬಿ.ಸಿ.ರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೊಂದು ಸಂಭ್ರಮದ ಘಳಿಗೆ. ಕೆಲವೊಂದು ಅಗತ್ಯದ ಕೆಲಸದ ಕಾರಣ ಸಮ್ಮೇಳನದ ಸಭಾಂಗಣಕ್ಕೆ ತಲಪುವಾಗ ಅಧ್ಯಕ್ಷರ ಭಾಷಣ ನಡೆಯುತ್ತಿತ್ತು. ಒಂದೆರಡು ಫೋಟೋ ತೆಗೆಯೋಣ ಎಂದು ಎದುರಿನ ಸಾಲಿನತ್ತ ಹೊರಟೆ. ಮೂರನೇ ಸಾಲಿನಲ್ಲಿ ಆತ್ಮೀಯರಾದ ಬೆಳಗೋಡು ರಮೇಶ ಭಟ್ ಕೂತಿದ್ದರು. ನನ್ನ ಆನಂದಕ್ಕೆ ಪಾರವೇ ಇಲ್ಲ. ಶ್ರೀಯುತರು ಪ್ರಖ್ಯಾತ ಸಾಹಿತಿಗಳು, ನಮ್ಮ ಬೇಂಕಿನ ಎಕ್ಸಿಕ್ಯುಟಿವ್. ಕೆಲವು ವರ್ಷಗಳ ಹಿಂದೆ ಇವರದೊಂದು ಕಥೆಯನ್ನು ವಾರಪತ್ರಿಕೆಯೊಂದರಲ್ಲಿ ಓದಿದ್ದೆ. ಅರೇ!! ಎಷ್ಟು ಚಂದದ ಕಥೆ ಬರೀತಾರೆ! ಬೇಂಕಿನ ಸ್ಟಾಫು ಅಂದರೆ ಸಾಮಾನ್ಯವಾಗಿ ಡೆಬಿಟು, ಕ್ರೆಡಿಟು, ಸ್ಟೇಟಮೆಂಟು, ಟಾರ್ಗೇಟು ಅಂತ ಮಂಡೆ ಹನ್ನೆರಡಾಣೆ ಮಾಡಿಕೊಂಡಿರುವವರೇ ಜಾಸ್ತಿ. ಅದರಲ್ಲೂ ಉನ್ನತ ಪೊಜಿ಼ಷನ್ ನಲ್ಲಿ ಇರುವವರ ಸಮಸ್ಯೆ ಇನ್ನೂ ಹೆಚ್ಚಿನದು... ಹಾಗಿರುವ ಕಾಲದಲ್ಲಿ ಇಷ್ಟೊಂದು ಚಂದ ಕಥೆ ಬರೀತಾರಲ್ಲ! ಆಗಬಹುದು ಇವರು! ಇವರ ದೋಸ್ತಿ ಮಾಡಬೇಕು ಎಂಬ ಬಯಕೆ ಹಿಂದೇನೇ ಹುಟ್ಟಿತ್ತು.

    ನನಗೆ ಆಶೆ ಹುಟ್ಟಿತು ಅಂದರೆ, ಹಾಗೆಲ್ಲ ಬೇಕಾಬಿಟ್ಟಿ ಒಬ್ಬರಿಗೆ ಕರೆ ಮಾಡಿ ತೊಂದರೆ ಕೊಡಲಾದೀತೇ?...‌‌‌ ಈಗಿನ ಸೋಷಿಯಲ್ ಮೀಡಿಯಾದ ಉತ್ತಮ ಉಪಕಾರವೆಂದರೆ ಸದಭಿಪ್ರಾಯದ ಗೆಳೆಯರ ಸಂಪಾದನೆ. ಫೇಸ್ ಬುಕ್ಕಲ್ಲಿ ಇವರ ಪರಿಚಯ ಸ್ನೇಹವಾಯಿತು.

     'ನಮಸ್ಕಾರ, ನಾನು ಕೇಶವ ನಾಯಕ...‌‌‌...' ಪರಿಚಯ ಹೇಳಿಕೊಳ್ಳುತ್ತ ಕೈ ಚಾಚಿದೆ.

     ಸಮ್ಮೇಳನಕ್ಕೆ ಬಂದಿದ್ದೀರಾ? ಅಂತ ನಿಮಗೆ ಈಗ ತಾನೇ ಮೆಸೇಜು  ಕಳಿಸಿದ್ದೆ , ನೀವು ಇಲ್ಲಿ ಸಿಕ್ಕಿದ್ದು ಭಾsಳ ಖುಷಿಯಾಯಿತು, ಬನ್ನಿ.' ಭಟ್ಟರು ಕರೆದರು. ಕಂಡಕೂಡಲೇ ಮನ ಸೆಳೆಯುವ ವ್ಯಕ್ತಿತ್ವದ ಜನ. ಆಕರ್ಷಕ ಮಾತುಗಳು! ಅದು ಇದು ಮಾತು ಆದ ನಂತರ 'ಮನೆ ಇಲ್ಲೇ ಹತ್ರ ಇದೆ, ಹೋಗೋಣ'. ಪ್ರೀತಿಯಿಂದ ಮನೆಗೆ ಬಂದು ನನ್ನ ಸಣ್ಣದೊಂದು ಪುಸ್ತಕದ ಸಂಗ್ರಹ ನೋಡಿ ಪ್ರಶಂಸೆ ವ್ಯಕ್ತ ಪಡಿಸಿದರು. ಈಗ ತಾನೇ ಮೊದಲ ಬಾರಿ ಭೇಟಿಯಾದ ಗೆಳೆಯ! ಇಷ್ಟು ನಿರಾಳ ಮತ್ತು ಕಾಲಾಂತರದ ದೋಸ್ತಿ ಗಳಂತೆ ನಮ್ಮ ಮಾತುಕತೆ ಸಾಗಿತ್ತು. 'ನನ್ನ ನಾಲಿಗೆ ಒಂಚೂರು ಉದ್ದ ಮಾರ್‍ರೇ, ಎದುರು ಇದ್ದವರಿಗೆ ಬೋರ್ ಮಾಡುವುದರಲ್ಲಿ ನಿಸ್ಸೀಮ ನಾನು' ಅಂದೆ.....

     ಮಹಾಭಾರತದಲ್ಲಿ ಒಂದು ಎಪಿಸೋಡು ಬರುತ್ತದೆ- ಭಕ್ತನೋರ್ವ ಭಗವಂತನ ಬಾಗಿಲಿಗೆ ಹೋಗುತ್ತಾನೆ, ಕುಚೇಲ ಮತ್ತು ಶ್ರೀಕೃಷ್ಣ.

     ಇಲ್ಲಿ ಅದೇ ಕಥೆ, ಸ್ವಲ್ಪ ವ್ಯತ್ಯಾಸ- ಭಗವಂತನೇ ಭಕ್ತನ ಮನೆಗೆ ದಯಮಾಡಿಸುತ್ತಾನೆ!!🙏🙏🙏

     ಫೇಸ್ ಬುಕ್ ನಲ್ಲಿ ಪ್ರಕಟಿತ ದಿ.28-02-2019

ಧನ್ಯತೆಯ ಕ್ಷಣಗಳು.


   
ಐವತ್ತರ ದಶಕದಲ್ಲಿ ಹುಟ್ಟಿದವರು ಎಪ್ಪತ್ತರಲ್ಲಿ ಯುವಕರು. ಅವರಲ್ಲಿ ನಾನೂ ಒಬ್ಬ. ಭಾರತದಲ್ಲಿ ಸಾರ್ವಜನಿಕ ಶಿಕ್ಷಣ ಹಳ್ಳಿಗಳನ್ನು ತಕ್ಕ ಮಟ್ಟಿಗೆ ಮುಟ್ಟಿ ನನ್ನಂತ ಯುವಕರಲ್ಲಿ ಪ್ರತಿಯೊಂದು ವಿಚಾರಗಳಲ್ಲಿ ಜಿಜ್ಞಾಸೆಗಳೇ ಜಾಸ್ತಿ ಹುಟ್ಟುತ್ತಿದ್ದ ಕಾಲ. ಚಿಕ್ಕ ಮಕ್ಕಳಾಗಿದ್ದಾಗ ಹಿರಿಯರು ಹೇಳಿದ ಸಕಲವನ್ನು ತಕರಾರಿಲ್ಲದೇ ಒಪ್ಪಿಕೊಳ್ಳುತ್ತಿದ್ದ ನಾವು ಯುವ ಪ್ರಾಯದಲ್ಲಿ ಎಲ್ಲದಕ್ಕೂ ಅಭ್ಯಂತರವನ್ನು ಎತ್ತುತ್ತಿದ್ದೆವು. ರಾ ಸ್ವ ಸಂಘದ ಸ್ವಯಂಸೇವಕನಾಗಿ ಬೆಳೆದ ನಾನು ಪೂರ್ತಿ ನಾಸ್ತಿಕನಾಗದಿದ್ದರೂ ಸಂಪ್ರದಾಯದ ಅನೇಕ ಆಚರಣೆಗಳನ್ನು ಒಪ್ಪಲೂ ಆಗದೇ ನಿರಾಕರಿಸಲೂ ಆಗದೇ ತೊಳಲಾಡುತ್ತಿದ್ದ ಕಾಲ. ವೈಜ್ಞಾನಿಕ ದೃಷ್ಟಿಕೋಣ ಬೆಳೆಸಿಕೊಳ್ಳಬೇಕು ಎಂಬುದು ನಮ್ಮ ತರ್ಕ. ಈ ವೈಜ್ಞಾನಿಕ ದೃಷ್ಟಿಕೋಣ ಅಂದರೆ ನಮ್ಮ ಸಂಪ್ರದಾಯಗಳನ್ನು ಪ್ರಶ್ನಿಸುವುದು ಎಂಬ ತಪ್ಪು ಕಲ್ಪನೆಯೂ ಮನದಲ್ಲಿ ಹೂತಿತ್ತು.

     ಅತ್ತ ರೂಢಿಗತ ನೇಮ ನಿಯಮಗಳನ್ನು ಒಪ್ಪಲಾಗದ, ಇತ್ತ ಪೂರ್ತಿ ರೇಷನಲಿಸ್ಟ್ ಆಗಲೂ ಒಪ್ಪದ ಸಂದಿಗ್ಧತೆಯಲ್ಲಿ ತೊಳಲಾಡುತ್ತಿತ್ತು ಮನಸ್ಸು. ಹಾಗಾಗಿ ಅನೇಕ ಸಾಂಪ್ರದಾಯಿಕ ಆಚರಣೆಗಳನ್ನು ಒಪ್ಪಲಾಗದ ಆದರೆ ವಿಮುಖನೂ ಆಗಲಾಗದ ಪರಿಸ್ಥಿತಿ. ದೇವಾಲಯಗಳಿಗೆ ನಿತ್ಯ ಹೋಗಿ ಬರುವವರನ್ನು ಕಂಡು ಅಸೂಯೆಯೋ ಯಾವುದೋ ಒಂದು ಅಭಾವ ಪ್ರಜ್ಞೆ ಎದ್ದು ಮನ ಖತಿಗೊಳ್ಳುತ್ತಿತ್ತು.

     ಇಂತಿರುವಾಗ ಐದಾರು ವರ್ಷಗಳ ಹಿಂದೆ ತಿರುಪತಿ ದೇವರ ದರ್ಶನ ಯಾತ್ರೆಯ ಸೌಭಾಗ್ಯ ಒದಗಿತು. ವೆಂಕಟರಮಣನ ದರ್ಶನ ಅಂದರೆ ಅಷ್ಟು ಸುಲಭವಲ್ಲ, ಘಂಟೆಗಟ್ಟಳೆ ಸರತಿ ಸಾಲಿನಲ್ಲಿ ಕಾಯಬೇಕು, ಕೆಲವೊಮ್ಮೆ ಇಡೀ ದಿನ ಆಗ್ತದೆ, ಅಷ್ಟು ಹೊತ್ತು ನೂಕು ನುಗ್ಗಲಲ್ಲಿ ಹೋರಾಡಿ ದೇವರ ಹತ್ತಿರ ಹೋದರೆ ಜರಗಂಡಿ ಜರಗಂಡಿ ಎಂದು ನೂಕುತ್ತಾರೆ ಹಾಗೆ ಹೀಗೆ ಎಂದು ಹೆದರಿಕೆಯನ್ನು ಕೇಳಿಯೇ ಈ ಕಷ್ಟಕ್ಕೆ ದೇವರ ದರ್ಶನ ಮಾಡಬೇಕಾ, ದೇವರನ್ನು ಹೃದಯದಲ್ಲಿ ಕಾಣಬೇಕೇ ವಿನಾ ದೇವಸ್ಥಾನಕ್ಕೇ ಹೋಗಿ ನೋಡುವ ದರ್ದು ಏಕೆ! ಎಂಬ ಧೋರಣೆಯಿಂದ ತಿರುಪತಿ ಯಾತ್ರೆ ವಿಳಂಬವಾಗಿತ್ತು. (ದ್ರಾಕ್ಷಿ ಹುಳಿ!!) ಆದರೆ ನನ್ನ ಯಾತ್ರೆಯಲ್ಲಿ ಹಾಗೇನೂ ಅಡಚಣೆಗಳಾಗದೇ ಅನಾಯಾಸವೆಂಬಂತೆ ದರ್ಶನ ಭಾಗ್ಯ ಲಭಿಸಿತು. ನಮ್ಮ ಕ್ಯೂ ದೇವಸ್ಥಾನದ ಎದುರು ಬಂದಾಗ ನನ್ನೆದುರಿನವರು ನನಗಿಂತ ಕೊಂಚ ಗಿಡ್ಡವಾಗಿದ್ದ ಕಾರಣ ಬಾಗಿಲಿನಿಂದ ಭಗವಂತನ ಪಾದದ - ಸನಿಹದ ತನಕ ಅವನ ದಿವ್ಯ ಭವ್ಯ ರೂಪವನ್ನು ನೋಡುವ ಭಾಗ್ಯ ಸಿಕ್ಕಿತು. ಇನ್ನೇನಾಗಬೇಕು!! ಆ ಒಂದೆರಡು ನಿಮಿಷಗಳು ಸಾಕು. ಸನ್ನಿಧಿಯ ಬಳಿ ಬಂದಂತೆ ಯಾವ ಜರಗಂಡಿಯೂ ಇಲ್ಲ, ಯಾವುದೇ ಗೌಜಿಯಿಲ್ಲ, ನೂಕು ನುಗ್ಗಾಟಗಳಿಲ್ಲ, ಭಕ್ತಾದಿಗಳ 'ಗೋವಿಂದಾ ಗೋವಿಂದಾ' ಎಂಬ ಘೋಷಗಳೂ ಇಲ್ಲ..... ಕೇವಲ ಆತನ ಭವ್ಯ ದಿವ್ಯ ಮೂರ್ತಿ ಮಾತ್ರ... ಕೇವಲ ಐದಾರು ಕ್ಷಣಗಳಿರಬಹುದು,ಅಷ್ಟು ಸಾಕು ನನಗೆ... ಕಣ್ಣುಗಳಲ್ಲಿ, ಮನದಲ್ಲಿ, ಬುದ್ಧಿಯಲ್ಲಿ, ಎಲ್ಲೆಲ್ಲೂ ಆತನಿದ್ದ. ಮತ್ತಾರೂ ಇಲ್ಲ, ನಾನೂ ಇಲ್ಲ!! ಧನ್ಯನಾದೆ.🙏🙏🙏
                             




ಶಾಪ.ವಿಮೋಚನೆ.

     ಭಾಗವತದಲ್ಲಿ ಒಂದು ಎಪಿಸೋಡು ಬರುತ್ತದೆ...

     ಬಾಲ್ಯದಲ್ಲಿ ಶ್ರೀಕೃಷ್ಣನ ಬಾಲಲೀಲೆಗಳು-ಮುಖ್ಯವಾಗಿ  ಉಪಟಳಗಳು-ಊರ ಗೋಪಿಕಾ ಸ್ತ್ರೀಯರ ಮೇಲೆ ಬಹಳವಿತ್ತು. ನಮ್ಮ ಮನೆಯ ಬೆಣ್ಣೆ ಕದ್ದ, ನಮ್ಮ ಮೊಸರಿನ ಗಡಿಗೆ ಒಡೆದು ಹಾಕಿದ, ನಮ್ಮ ಅಡಿಗೆ ಮನೆಯೆಲ್ಲಾ ಹಾಲು ಬೀಳಿಸಿ ರಂಭಾಲೂಟಿ ನಡೆಸಿದ ಹಾಗೆ ಹೀಗೆ ಎಂದು ಹತ್ತು ಹಲವಾರು ತಗಾದೆಗಳನ್ನು ತಗಲಿ ಹಾಕಿಕೊಂಡು ತಾಯಿ ಯಶೋಧೆಯ ಬಳಿ ದೂರು ತರುತ್ತಿದ್ದರು. ಕೃಷ್ಣನನ್ನು ನೋಡಿ ಮುದ್ದಾಡಲೆಂಬ ಮೂಲ ಉದ್ದೇಶದಿಂದಲೇ ಇವರು ಬರುತ್ತಿದ್ದರು. ಒಮ್ಮೆಯಂತೂ ಸೀರಿಯಸ್ ಕಂಪ್ಲೇಂಟು ಹೋಯಿತು-'ಮಥುರೆಯ ಸಂತೆಗೆ ಹೋಗುವಾಗ ನಮ್ಮನ್ನು ಓಡಿಸಿಕೊಂಡು ಬಂದ, ಒಬ್ಬಳ ಸೆರಗು ಹಿಡಿದೆಳೆದ ತುಂಬಾ ತುಂಟನಾಗಿದ್ದಾನೆ ನೀನು ಇವನನ್ನು ಕಂಟ್ರೋಲು ಮಾಡಬೇಕು.'

     ಈ ಸಲ ಯಶೋಧೆಗೆ ತಡಕೊಳ್ಳಲಾಗಲಿಲ್ಲ. 'ನಿನ್ನ ತಂಟೆ ತುಂಬಾ ಮಿತಿ ಮೀರಿತು, ತಡೀ, ತಕ್ಕ ಶಾಸ್ತಿ ಮಾಡುತ್ತೇನೆ.' ಎಂದು ಒಂದು ಒರಳು ಕಲ್ಲನ್ನು ಕೃಷ್ಣನ ಸೊಂಟಕ್ಕೆ ಕಟ್ಟಿ ಎಲ್ಲೂ ಹೋಗದಂತೆ ಮಾಡಿ ತಾನು ತನ್ನ ಕೆಲಸಗಳಲ್ಲಿ ಮಗ್ನಳಾದಳು. ಅಮ್ಮ ಕಟ್ಟಿದ್ದು ಅಮ್ಮನೇ ಬಿಚ್ಚಬೇಕು ಎಂದು ಕೃಷ್ಣನ ಬಯಕೆ, ಎಷ್ಟೇ ನಾಟಕ ಮಾಡಿದರೂ ಅಮ್ಮನ ಕೋಪ ಇಳಿಯಲಿಲ್ಲ, ಕೊನೆಗೆ ಅಮ್ಮ ಮರೆತೇ ಬಿಟ್ಟಳು. ಆದ್ದರಿಂದ ಬಾಲಕೃಷ್ಣನು ಮೆಲ್ಲನೇ ಆ ಒರಳು ಕಲ್ಲನ್ನು ಎಳಕೊಂಡು ಮನೆಯ ಹಿಂದಿನ ತೋಟಕ್ಕೆ ಬಂದ. ಅಲ್ಲಿ ಎರಡು ಬೃಹತ್ ಮರಗಳು ಒಂದರ ಹತ್ತಿರ ಒಂದು ಒತ್ತಿ ಕೊಂಡಂತೆ ಬೆಳೆದು ನಿಂತಿದ್ದವು. ಹುಡುಗ ಈ ವೃಕ್ಷಗಳ ನಡುವೆ ತೂರಿ ಹೋದರೂ ಒರಳು ಕಲ್ಲು ದಾಟಿ ಬರಲಿಲ್ಲ. ಇವನು ಎಳೆದಾಡಿದ ರಭಸಕ್ಕೆ ಆ ಎರಡೂ ಮರಗಳು ಭಯಂಕರ ಶಬ್ಧದೊಡನೆ ಧಡಾರನೇ ಬೇರು ಸಹಿತ ಮುರಿದು ಬಿದ್ದವು.

     ಹಿಂದೆ ಯಾವುದೋ ಕಾಲದಲ್ಲಿ ಅಪ್ಸರೆ ರಂಭೆಯು ತನ್ನ ಪ್ರಿಯಕರನಲ್ಲಿಗೆ ಸಾಗುತ್ತಿದ್ದಳು, ತನ್ನದೇ ಭಾವಾವೇಶದಲ್ಲಿದ್ದಾಕೆಗೆ ತನ್ನನ್ನು ಕಾಮಿಸಿ ಹಿಂಬಾಲಿಸಿಕೊಂಡು ಬರುತ್ತಿರುವ ನಳ-ಕೂಬರರೆಂಬ ದೇವತೆಗಳಿಬ್ಬರ ಖಬರು ಇರಲಿಲ್ಲ. ಅವರು ಅಡ್ಡ ಹಾಕಿ ಎಷ್ಟೇ ಬೇಡಿಕೊಂಡರೂ ಅವಳನ್ನು ಅಪಹರಿಸಿಕೊಂಡು ಹೋದರು. ಭಯಂಕರ ಸಿಟ್ಟಿನಿಂದ ಭೂಲೋಕದಲ್ಲಿ ಬಿದ್ದುಕೊಂಡಿರಿ ಎಂದು ಶಪಿಸಿದಳಾಕೆ. ಭೂಲೋಕಕ್ಕೆ ಬಂದು ಬೀಳುವುದೆಂದರೆ ಅದೊಂದು ದೊಡ್ಡ ಅವಮಾನಭರಿತ ಶಿಕ್ಷೆ. ಫ್ರಾಡ್ ಮಾಡಿ ಸಿಕ್ಕಿ ಬಿದ್ದು ಡಿಸ್ ಮಿಸ್ ಆದ ನೌಕರನ ತರಹ!! ನೀನು ಕೊಟ್ಟ ಶಾಪಕ್ಕೆ ಏನಾದರೂ ಉಪಶಮನ ಹೇಳು ಎಂದು ಪರಿಪರಿಯಾಗಿ ಬೇಡಿಕೊಂಡಾಗ ಮುಂದೆ ದ್ವಾಪರಯುಗದಲ್ಲಿ ಪರಮಾತ್ಮನೇ ನಿಮ್ಮನ್ನು ಉದ್ಧರಿಸುತ್ತಾನೆಂದು ಶಾಪ ಪರಿಹಾರ ತಿಳಿಸಿದಳಾಕೆ. ಬುಡಸಹಿತ ಬಿದ್ದ ಆ ಎರಡು ಮರಗಳೇ ನಳ-ಕೂಬರರು. ಅವರು ಶಾಪವಿಮೋಚಿತರಾಗಿ ಪರಮಾತ್ಮನಿಗೆ ನಮಿಸಿ ಅಂತರ್ಧಾನರಾದರು, ತಮ್ಮ ಲೋಕಕ್ಕೆ ಮರಳಿದರು...

     ನಮ್ಮ ಮನೆಯ ವಠಾರದಲ್ಲಿ ಇಬ್ಬರು ನಳ ಕೂಬರರು ಇದ್ದರು, ಇವರು ಯಾವ ಅಪ್ಸರೆಯ ಹಿಂದೆ ಬಿದ್ದಿದ್ದರೆಂಬ ಇತಿಹಾಸ ಗೊತ್ತಿಲ್ಲ , ಆದರೆ ಪರಸ್ಪರ ಪ್ರೀತಿಯಿಂದೆಂಬಂತೆ ಒಬ್ಬರನ್ನೊಬ್ಬರು ತಗಲಿ ಹಾಕಿಕೊಂಡು ನೇರಾನೇರ ಬೆಳೆದು ಮನೆಯ ಶೋಭೆಯನ್ನು ಹೆಚ್ಚಿಸಿದ್ದರು. ಪ್ರತೀ ಮೇ ತಿಂಗಳ ಉತ್ತರಾರ್ಧದಲ್ಲಿ ಕರಾರುವಾಕ್ಕಾಗಿ ಇಬ್ಬರೂ ಮೈ ಪೂರ್ತಿ ಕೆಂಪು ಕೆಂಪು ಹೂಗಳಿಂದಾವೃತರಾಗಿ ಹಿಂದಿನ ಯುಗದಲ್ಲಿ ಯಾವ ಅಪ್ಸರೆಯ ಹಿಂದೆ ಬಿದ್ದಿದ್ದರೋ ಅವಳಿಗಿಂತ ದುಪ್ಪಟ್ಟು ಸೌಂದರ್ಯ ದಿಂದ ತಾವು ಕಂಗೊಳಿಸುವುದೂ ಅಲ್ಲದೇ ಇಡೀ ಪ್ರದೇಶದ ಹೆಮ್ಮೆಯಾಗಿದ್ದರು. ನಿಸರ್ಗದ ಈ ಸೌಂದರ್ಯದ ವೈಭವವನ್ನು ನೋಡುತ್ತಾ ವಿಸ್ಮಯ ಆನಂದಗಳನ್ನು ಹೊಂದುತ್ತಿದ್ದ ಕ್ಷಣಗಳೆಷ್ಟೋ!! 'ನಿಮ್ಮನಿ ಎದ್ರ್ ಇದ್ದ ಮರ ಭಾರೀ ಚಂದ ಮಾರ್ರೇ' ಎಂಬುದಾಗಿ ಅನೇಕರ ಪ್ರಶಂಸೆಗಳಿಗೂ ಇವುಗಳು ಪಾತ್ರವಾಗಿದ್ದವು. ಹೂಗಳು ದಿನ ಕಳೆದಂತೆ ಕೆಳಗೆ ನೆಲದ ಮೇಲೆ ಬಣ್ಣ ಬಣ್ಣದ ರಂಗೋಲಿಯ ತೆರ ಚಿತ್ತಾರಗಳನ್ನು ಚಿತ್ರಿಸುವುದೂ, ಮೇಲೆ ಮರಗಳಲ್ಲಿ ಹೊಸ ಹೊಸ ಹೂಗಳ ಆಗಮನವೂ ಚಿತ್ತಾಕರ್ಷಕ...!!

     ಎರಡು ವರ್ಷಗಳ ಹಿಂದೆ ಭಾರೀ ಗಾಳಿ ಮಳೆಯ ಅವಾಂತರದ ಒಂದು ದಿನ ಒಬ್ಬನ ಶಾಪ ವಿಮೋಚನೆ ಆಯಿತೋ ಏನೋ, ಒಂದು ಮರವು ಧರಾಶಾಯಿಯಾಯಿತು. ಮನಸ್ಸಿಗೆ ಬಹಳ ಬೇಸರವಾಯಿತು. ಒಂದೆರಡು ದಿನಗಳ ತನಕ ಸಣ್ಣ ಮಟ್ಟಿನ ಖಿನ್ನತೆಯೂ ಇತ್ತು.

     ಈಗ ಮೇ ತಿಂಗಳ ಉತ್ತರಾರ್ಧ, ತನ್ನ ಸ್ವಭಾವಕ್ಕೆ ಅನುಗುಣವಾಗಿ ಮರವು ಖುಷಿಯಿಂದ ಕೆಂಪು ತೋರಣವನ್ನು ಹರಡಿದೆ. ಹಿಂದಿನಷ್ಟು ವೈಭವವಿಲ್ಲ, ಆದರೂ ತನ್ನ ನಿಯಮದಂತೆ ಸೌಂದರ್ಯವನ್ನು ಪ್ರಕಟಿಸುತ್ತಿದೆ. ಗೆಳೆಯನ ಅಗಲಿಕೆಯ ಕ್ಷಣಗಳು ಮುಗಿದವು. ಇನ್ನು ಮುಂದಿನ ಯೋಚನೆ ಎಂಬಂತೆ ತನ್ನ ಕಂಪನ್ನು ಬೀರುತ್ತದೆ...👌👌👌👌

     ಹೆಚ್ಚಿನ ವ್ಯಾಖ್ಯಾನ ಅಥವಾ ವೇದಾಂತ ಬರೀಲಿಕ್ಕೆ ಹೋಗುವುದಿಲ್ಲ, ಆದರೂ ಯಾರೊಬ್ಬರ ಅಗಲಿಕೆಯಾಗಲೀ, ಅತ್ಯಂತ ದುಃಖದ ಗಳಿಗೆಗಳಾಗಲೀ ಕ್ರಮೇಣ ಅವುಗಳನ್ನು ಮರೆತು ನಮ್ಮ ನಮ್ಮ ಸಹಜ ಗುಣಗಳತ್ತ ಮರಳಬೇಕು, ಜೀವನವು ನಿಂತ ನೀರಾಗಬಾರದು, ಈಗ ಇರುವ ಮರವನ್ನು ನೋಡಿ, ಗೆಳೆಯನ ಅಗಲಿಕೆಯ ನಡುವೆಯೂ ನಳನಳಿಸುತ್ತಿದೆ..🙏🙏🙏


ಮುದ ನೀಡುವ ನೆನಪುಗಳು - ಪ್ರಿಯಂವದಾ

     ಪ್ರಿಯಂವದಾ

     'ಆಯಿಯೇ ಮೇಡಮ್ ಜೀ, ಆಪಕಾ ಸ್ವಾಗತ್ ಹೈ'

     'ಸರ್, ಮುಝೆ ಜೀ ಕೆಹಕೇ ನ ಪುಕಾರಿಯೇಗಾ, ಅಚ್ಛಾ ನಂಹೀ ಲಗತಾ.'

     'ಫಿರ್?'

     'ಪ್ರಿಯಾ ಕರಕೇ ಬುಲಾವೋ ನಾ, ನಾಮ್ ಸೇ'

     'ಪ್ರಿಯ ಪ್ರಾಣೇಶ್ವರೀ, ಹೃದಯೇಶ್ವರೀ, ಯದೀ ಆಪ್ ಹಮೇ ಆದೇಶ ಕರೇಂ ತೋ....'

     'ಪ್ರೇಮ ಕಾ ಹಮ್ ಶ್ರೀಗಣೇಶ ಕರೇಂ....' ಬಗಲಲ್ಲಿ ಕುಳಿತ ಅರೋಡಾ ದನಿಗೂಡಿಸಿದ.

     ಹುಡುಗಿ ಕೆಂಪು ಕೆಂಪಾದಳು....

     ಎಂಭತ್ತರ ಉತ್ತರಾರ್ಧದಲ್ಲಿ ದಿಲ್ಲಿಯಲ್ಲಿ ನನ್ನ ಡ್ಯೂಟಿ. ಹೊಸದಾಗಿ ನೇಮಕವಾದ ಕ್ಲರ್ಕುಗಳಿಗೆ ಸರ್ವೇ ಸಾಮಾನ್ಯ ಸೇವಿಂಗ್ಸ್ ಸೆಕ್ಷನ್ ನಲ್ಲಿ ಆರು ತಿಂಗಳು ಕೂರಿಸಿ ಇನೀಷಿಯೇಷನ್ ಮಾಡಿಸಿ ನಂತರ ಇತರ ಸೆಕ್ಷನ್ ಗಳಿಗೆ ಕಳಿಸುವುದು ಕ್ರಮ. ಅಂತೆಯೇ ಈಕೆ ನನ್ನ ಬಿಲ್ಸ್ ಡಿಪಾರ್ಟ್ ಮೆಂಟಿಗೆ ಬಂದಿದ್ದಳು. ಬೀ ಎಸ್ ಆರ್ ಬೀ ಮೂಲಕ ನಮ್ಮ ಬೇಂಕಿಗೆ ನಿಯುಕ್ತಿಯಾಗಿ ಬಂದ ತರುಣಿ. ಸಹಜವಾಗಿ ಬ್ರಾಂಚಿನ ಸೆಂಟರ್ ಆಫ್ ಎಟ್ರಾಕ್ಷನ್. 'ಸರ್ ಮುಝೆ ಜ಼ರಾ ಕಾಮ್ ಕೇ ಬಾರೇ ಮೇ ಬತಾ ದೇನಾ, ಏಕ್ ಬಾರ್ ಬತಾದೋ, ಆಗೇ ಮೇ ಖುದ್ ಹೀ ಸೀಖ್ ಲೂಂಗೀ.....'

     'ಆಯಿತು ಈಗಿನಿಂದಲೇ ನಿಮ್ಮ ಟ್ಯೂಷನ್ ಶುರು, ಇಲ್ಲಿ ಕೂತುಕೊಳ್ಳಿ.'

     'ಸರ್, ನೀವು-ತಾವು ಎಂದು ಕರೆದರೆ ಆಕ್ವರ್ಡ್ ಆಗುತ್ತದೆ, ಪ್ರಿಯಾ ಎಂದೇ ಕರೆಯಿರಿ.'

     'ಓ ಕೇ ಪ್ರಿಯಾ, ನನ್ನನ್ನೂ ನಾಯಕ್ ಮಾಮ್ ಎಂದು ಕರೀರಿ, ಸರ್ ಸರ್ ಬುಲಾಯಾ ತೋ ಸ್ಕೂಲ್ ಮಾಸ್ಟರ್ ಜೈಸಾ ಲಗತಾ ಹ್ಞೂಂ. ಸರಿ, ನಿನ್ನ ಹೆಸರೇ ಪ್ರಿಯಂವದಾ, ಪ್ರಿಯಂವದಾ ಎಂದರೆ ಎಲ್ಲರಿಗೂ ಪ್ರಿಯವಾಗುವಂತೆ ಮಾತನಾಡುವವಳು ಎಂದರ್ಥ. ನಮ್ಮ ಸಂಸ್ಥೆಯ ಸ್ಟಾಕ್ ಇನ್ ಟ್ರೇಡೇ ಸರ್ವೀಸ್. ಒಳ್ಳೆಯ ಮಾತು, ಕ್ಲಪ್ತ ಸೇವೆ, ನಗುಮುಖದ ವ್ಯವಹಾರ ಮತ್ತು ಬಂದ ಗ್ರಾಹಕರಿಗೆ ಸೂಕ್ತ ಗೌರವ ನೀಡುವುದು ಇವೇ ಮೊದಲಾದವುಗಳು ನಮ್ಮ ಆದ್ಯತೆಗಳಾಗಬೇಕು. ಆದಷ್ಟು ಮಟ್ಟಿಗೆ ಯಾವಾಗಲೂ ಹಸನ್ಮುಖಿಯಾಗಿ ಇರಬೇಕು.... ಹಸನ್ಮುಖಿ ಕಾ ಮತಲಬ್ ಯೇ ನಹೀಂ ಕೀ ಇಸ್ ಅರೋಡಾ ಸೇ ಜ್ಯಾದಾ ಉಲಝನಾ, ಯಹ ಬಹುತ್ ಖತರ್ ನಾಕ್ ಬಂದಾ ಹೇ' ಛೇಡಿಸಿದೆ....

     'ಅರೇ ನಾಯಕ್! ತೂನೇ ತೋ ಆತೇ ಹೀ ಮೇರಾ ನಂಬರ್ ಕಟವಾ ದಿಯಾ?' ..ಅರೋಡಾ ಕಣ್ಣು ಮಿಟುಕಿಸಿದ....

     'ಐಸಾ ಹೈ, ಹಸೀ ಮಝಾಕ್ ಏಕ್ ತರಫ್, ಡ್ಯೂಟಿ ಏಕ್ ತರಫ್,' ಅವಳಿಗೆ ಬಿಲ್ಸ್ ಸೆಕ್ಷನ್ನಿನ ಕುರಿತು ವಿವರಿಸತೊಡಗಿದೆ....

     'ಅರೇ ನಾಯಕ್ ಸಾಬ್ ಇಸ್ ಅಗರವಾಲ್ ಕೇ ಖಾತೇ ಮೇ ಕೋಯೀ ಕ್ರೆಡಿಟ್ ಹೇ ಕ್ಯಾ? ಉಸಕಾ ಚೇಕ್ ಆಯಾ ಹೇ....' ಒಂದು ದುಂಬಿ ನಮ್ಮೆಡೆಗೆ ಗುಂಯಿಗುಡುತ್ತಾ ಬಂತು....

     'ಬಾದ್ ಮೇ, ಬಾದ್ ಮೇ, ಅಭೀ ಹಮ್ ಬಿಝೀ಼ ಹೈಂ....' ಆತ ಮೂಗು ಮುರಿಯುತ್ತ ವಾಪಸಾದ. ನಮಗಿಬ್ಬರಿಗೂ ನಗು ಬಂತು.

     'ಯಾವುದೇ ಕೆಲಸ ಇರಲಿ, ಥಿಯರಿಗಿಂತ ಪ್ರಾಕ್ಟಿಕಲ್ ಆಗಿ ಮಾಡುವುದೇ ಉತ್ತಮ, ಈಗ ಈ ಕೆಲವು ಕ್ರೆಡಿಟ್ ವೋಚರ್ ತಕ್ಕೊಳ್ಳಿ, ಎಂಟ್ರೀ ಸುರು ಮಾಡಿ...' ಹುಡುಗಿ ಮಾಡರ್ನ್ ಹಾಗೂ ಸ್ಮಾರ್ಟ್, ಆಕರ್ಷಕ ವ್ಯಕ್ತಿತ್ವ, ಉಡುಗೆ ತೊಡುಗೆ ಅಲ್ಲದೇ ತುಂಬಾ ಶಾಲೀನ ಮಾತುಗಳು. ಕೆಲಸದಲ್ಲೂ ಶೀಘ್ರವಾಗಿ ಪಳಗಿದಳು...‌

     ಇಡೀ ಬ್ರಾಂಚಿನಲ್ಲಿ ಅತ್ಯಂತ ಹೆವ್ವೀ ವರ್ಕ್ ಲೋಡ್ ಇರುವ ಸೆಕ್ಷನ್ ನಂದು. ಹಿಂದಿನ ಆಫೀಸರ್ ಸ್ಟಾಫು ಎಲ್ಲರೂ ಬೈದುಕೊಂಡೇ ಕೆಲಸ ಮಾಡುತ್ತಿದ್ದರು, ಯಾವಾಗ ನೋಡಿದರೂ ಪೆಂಡಿಂಗು ಪೆಂಡಿಂಗು, ಕಸ್ಟಮರ್ ಕಂಪ್ಲೇಂಟು ಛೀ ಛೀ.. ಈ ಸಮಯದಲ್ಲಿ ನಾನಲ್ಲಿ ಅಭಿಷಿಕ್ತನಾದೆ. 'ಅಬ್ ಯಹ ನಯಾ ಬಕರಾ ಆಗಯಾ ಮರನೇ ಕೇ ಲಿಯೇ, ಹಮ್ ತೋ ನಿಕಲ್ ರಹೇಂ ಹೇಂ' ಎಂದು ಹಿಂದಿನವರು ಗಂಟುಮೂಟೆ ಕಟ್ಟಿ ಹೋಗಿದ್ದರು. ಒಂದು ಲೋಡು ಪೆಂಡಿಂಗ್ ಪೇಪರ್ಸ್ ಇಟ್ಟು ಹೋಗಿದ್ದರು. ಅಂತಹ ಸಂದಿಗ್ಧತೆಯಲ್ಲಿ ಈ ಲಲನಾಮಣಿ  'ಪ್ರಿಯಾ' ಎಂಟ್ರೀ ಕೊಟ್ಟಳು. ಅವಳಿಗೆ ಕೆಲಸ ಮಾಡುವ ಕಲಿಯುವ ಆಸಕ್ತಿ ತುಂಬ ಇದ್ದುದು ಕಂಡುಕೊಂಡೆ. ಒಂದು ವಾರದೊಳಗೆ ನುರಿತಳಾಕೆ.

     ಹದಿನೈದು ದಿನಗಳ ಬಳಿಕ ನಾಯಕ್ ಸರ್ ಜೀವಿತ ಇದ್ದಾನೋ ಏನೆಂದು ವಿಚಾರಿಸಲು ಹಿಂದಿನ ಕ್ಲರ್ಕ್ ಬಂದು ಕೂತ. 'ಹಾಂಜೀ ನಾಯಕ್, ಕ್ಯಾ ಹಾಲ್ ಚಾಲ್ ಹೇ?? ಕೋಯೀ ಮದದ್ ಚಾಹಿಯೇ?, ಪ್ರಿಯಾ ಜೀ ಕಾಮ್ ದಂಧಾ ಕೈಸೇ ಚಲ್ ರಹಾ ಹೈ?'

     'ಪ್ರಿಯಾ, ಭಾಯೀ ಸಾಬ್ ಕೋ ತುಮ್ಹಾರಾ ಪೆಂಡಿಂಗ್ ಪುಷ್ತೀ ದಿಖಾನಾ ಜ಼ರಾ..'

     'ಅಚ್ಛಾ ಬಡೇ ಭಾಯೀ' ಎಂದು ಆಕೆ ಪೆಂಡಿಂಗ್ ಪುಷ್ತೀ ತೆಗೆದು ಕೊಟ್ಟಳು. ಒಂದೇ ಒಂದು ಪೆಂಡಿಂಗ್ ಬಿಲ್ಸ್ ಇಲ್ಲ!!

     'ಮುಝೇ ಬಡೇ ಭಾಯೀ ಮತ್ ಕಹಾ ಕರೋ, ಯೇ ಕ್ಯಾ? ಪೆಂಡಿಂಗ್ ಪುಷ್ತೀ ಬೋಲಾ ಥಾ, ತುಮ್ ಖಾಲೀ ಪುಷ್ತೀ ದಿಖಾ ರಹೀ ಹೋ!!?'

     'ನಿನ್ನ ಕಾಲದಲ್ಲಿ ಈ ಪುಷ್ತಿ ತುಂಬಿರುತ್ತಿತ್ತು, ಈಗ ನೋಡು, ಇಲ್ಲಿ ಕ್ಯಾಪ್ಟನ್ ಬದಲಾಗಿದ್ದಾರೆ ಅದೇ ರೀತಿ ಮಿಲಿಟರಿ ಸಹ ಏಕದಮ್ ತಂದುರೂಸ್ತ್ ಇದಾರೆ. ಸಂಜೆ ವೇಳೆಗೆ ಪುಷ್ತಿ ಖಾಲಿ, ಪೆಂಡಿಂಗ್ ಪ್ರಶ್ನೆನೇ ಇಲ್ಲ..'

     'ಅರೇ ವಾಹ್! ಶಾಭಾಷ್' ಎಂದು ಹೊಗಳಿ ಹೋದನಾತ. ಈಕೆಗೆ ಬಹು ಸಂತಸವಾಯಿತು..

                          ...‌‌‌..೦೦.....

     ಒಂದು ಸೋಮವಾರ ಜೀನ್ಸ್ ಪ್ಯಾಂಟು ಮತ್ತದಕ್ಕೆ ಒಪ್ಪುವ ಡ್ರೆಸ್ಸು ಧರಿಸಿ ಝಗಮಗಿಸಿ ಬ್ರಾಂಚಿಗೆ ಹಾಜರಾದಳು. ಅರೆವಾಸಿ ಹುಡುಗರ ಹಾರ್ಟ್ ಬೀಟು ಆ ದಿನ ನೂರರ ಮೇಲೇರಿತ್ತು. ನಾನು ಏನೂ ಪ್ರತಿಕ್ರಿಯಿಸಲಿಲ್ಲ, ಹನ್ನೆರಡರ ಸಮಯಕ್ಕೆ ಮೆನೆಜರು ಕರೆದರು 'ನಾಯಕರೇ ನಿಮ್ಮ ಸೆಕ್ಷನಲ್ಲಿ ಏನು ನಡೀತಾ ಇದೆ? ಭಾರೀ ಸ್ಟಾಫು ಜಮಾಯಿಸಿದ್ದಾರೆ?'

     'ಏನೂ ಇಲ್ಲ ಸರ್, ನೀವು ತಲೆಬಿಸಿ ಮಾಡಬೇಡಿ.' ಆ ಕಾಲದ ಮಾಡ್ ಡ್ರೆಸ್ ಉಟ್ಟವಳು ಇತರ ಮಹಿಳಾಮಣಿಯರ ಕುಹಕ, ಪುರುಷಮಣಿಗಳ ಅಭಿಮಾನ ಮತ್ತು ಮೆನೆಜರರ ಅಸಮಾಧಾನಕ್ಕೆ ಪಾತ್ರಳಾದಳು. ನಾಯಕರಿಗೆ ನಿನ್ನ ಚರ್ಯೆ ಪಸಂದಾಗಲಿಲ್ಲ ಎಂದು ಅರೋಢಾ ಪಿಸುಮಾತಿನಲ್ಲಿ ಹೇಳಿದ್ದು ನನ್ನ ಗಮನಕ್ಕೆ ಬಂತು. ನಾಲಕ್ಕು ದಿನ ಆಕೆಯೂ ಮುಗುಮ್ಮಾಗಿದ್ದಳು.

     ಒಂದು ಮಧ್ಯಾಹ್ನ ನಾಲಕ್ಕರ ಬಳಿಕ ಸಾಮಾನ್ಯವಾಗಿ ಹೆಚ್ಚಿನವರು ಕೊಂಚ ಫ್ರೀ ಆಗ್ತಾರೆ-ನನ್ನನ್ನು ಹೊರತುಪಡಿಸಿ. ಪ್ರಿಯಾ ಜ಼ರಾ ಇಧರ್ ಆನಾ...

     'ಏಕ್ ಬಾತ್ ಪೂಛೂಂ! ಬುರಾ ತೋ ನಂಹೀ ಮಾನೇಗೀ? ನಿನ್ನ ಬಳಿ ಇಂತಹ ಆಕರ್ಷಕ ಡ್ರೆಸ್ಸು ಎಷ್ಟು ಇವೆ?'

     'ಏಕೆ ನಾಯಕ್ ಮಾಮಾ?' ಇನ್ನೂ ಸರಿಯಾಗಿ ಮಾಮ ಅನ್ನಲು ಕಲಿಯಲಿಲ್ಲ ಆಕೆ.

     'ಹೀಗೆ ಸುಮ್ಮನೆ ಕುತೂಹಲಕ್ಕೆ ಕೇಳಿದೆ, ಒಂದು ನೂರು ಪೇರ್ ಇರಬಹುದೇನೋ?'

     'ಅಷ್ಟು ಇಲ್ಲ ಸರ್, ಆದರೆ ಬೇರೆ ಬೇರೆ ಡಿಸೈನುಗಳ ಸಾಕಷ್ಟು ಡ್ರೆಸ್ ಇವೆ ನಾಯಕ್ ಮಾಮಾ.'

     'ನಾಳೆ ಝಗಝಗ ಸೀರೆ, ನಿತ್ಯಕ್ಕಿಂತ ಕೊಂಚ ದೊಡ್ಡ ಸೈಜಿನ ಬಿಂದೀ ಹಾಗೂ ಊದ್ದ ಜಡೆ ಹೆಣೆದುಕೊಂಡು ಬಾ.'

     'ಏನು ವಿಶೇಷ ಸರ್?'

     'ವಿಶೇಷ ಏನೂ ಇಲ್ಲಮ್ಮಾ, ಅದು ನಮ್ಮ ಸೌತ್ ಇಂಡಿಯನ್ ಸ್ಟೈಲು, ಹಾಗಾಗಿ ಹೇಳಿದೆ. ಅಷ್ಟೇ, ಯೂ ಲುಕ್ ಗೋರ್ಜಿಯಸ್ ಇನ್ ಇಟ್, ಬಿಲೀವ್ ಮೀ'

     ಮರುದಿನ ಕಡು ಕೆಂಪು ಬಣ್ಣದ ಸೀರೆ, ಅದಕ್ಕೊಪ್ಪುವ ಮ್ಯಾಚಿಂಗ್ ಚೋಲಿ ಮತ್ತು ಇತರೇ ಆಭರಣ ಭೂಷಿತಳಾಗಿ ಅಪ್ಸರೆ ಬ್ರಾಂಚಿಗೆ ಆಗಮಿಸಿದಳು. ಅಂದು ಎಲ್ಲರ ಅಭಿಮಾನ ಆರಾಧನಾ ಭಾವಗಳಿಗೆ ಪಾತ್ರಳಾದಳು. ಹಿಂದಿನ ಸಲ ಕುಹಕ ಆಡಿದ್ದ ಮಹಿಳಾಮಣಿಗಳೆಲ್ಲ ಬಂದು ಬಂದು ಅವಳನ್ನಪ್ಪಿ ಮುದ್ದಾಡಿ ಹೋದರು. ಹುಡುಗಿಯ ಮುಖ ಊರಗಲ ಅರಳಿತ್ತು.

     ಮಧ್ಯಾಹ್ನ ನಾಲ್ಕರ ಹೊತ್ತಿಗೆ ತನ್ನ ಎಂಟ್ರೀಗಳ ಚೆಕಿಂಗ್ ಎಂದು ಲೆಕ್ಕ ಪುಸ್ತಕಗಳನ್ನು ನನ್ನ ಟೇಬಲ್ಲಿಗೆ ತಂದಿಟ್ಟಳು. 'ಕೈಸಾ ರಹಾ ಮೇರಾ ಸಜೆಷನ್?'

     'ಥ್ಯಾಂಕ್ ಯೂ ವೆರಿ ಮಚ್ ಸರ್!! ಆಜ್ ಮೇ ಬಹೂತ್ ಖುಷ್ ಹ್ಞೂಂ, ನಿಮ್ಮ ತಲೆಗೆ ಇಂಥದ್ದೆಲ್ಲ ಹೇಗೆ ಹೊಳೀತದೆ? ಓಹ್ ಮೈ ಗಾಡ್!! ಹೌ ಹೇಪ್ಪೀ ಐ ಯಾಮ್! ನಮ್ಮ ಮನೆಯಲ್ಲೂ ಎಲ್ಲರಿಗೂ ಭಾರೀ ಖುಷಿ. ಡು ಐ ರಿಯಲೀ ಲುಕ್ ಸ್ಮಾರ್ಟ್ ಟುಡೇ!? ಸಚ್ಚೀ ಬತಾನಾ, ಝೂಟ್ ನಂಹೀ ಬೋಲನೇ ಕಾ!' ಹ್ಞಾಂ!!' ಹುಡುಗಿಯ ಕಾಲು ನೆಲದ ಮೇಲೆ ಇದ್ದಿರಲಿಲ್ಲ.

     'ನಿಜವಾದ ಸೌಂದರ್ಯ ಸರಳ ಸಿಂಪಲ್ ಡ್ರೆಸ್ಸುಗಳಲ್ಲೇ ಇರೂದು ಮೈ ಡಿಯರ್ ಗರ್ಲ್, ಒನ್ ಮಸ್ಟ್ ಸೀ ಡಿವಿನಿಟೀ ನಾಟ್ ಸ್ಮಾರ್ಟ್ ನೆಸ್. ಆಪನೇ ತೋ ಆಜ್ ಸಬಕಾ ದಿಲ್ ಜೀತ್ ಲಿಯಾ...'

     'ಓಹ್! ಥ್ಯಾಂಕ್ ಯೂ, ಥ್ಯಾಂಕ್ ಯೂ, ಬಹುತ್ ಅಚ್ಛೀ ಬಾತ್ ಕಹೀ ಆಪನೇ.....'

     'ವ್ಹೈರೇ ನಾಯಕಾ, ತುಗ್ಗೆಲೆ ಸೆಕ್ಷನಾ ಕಸಲೇಂ ಚಲತಾ ಆಸ್ಸರೇ?' ನನ್ನ ಗೆಳೆಯರ ಪ್ರಶ್ನೆ.

     'ಏನೂ ಇಲ್ಲ ಮಹರಾಯ, ಸ್ಟಾಫ್ ಮೆಂಬರ್ ಗಳನ್ನು ಆದಷ್ಟು ಖುಷಿಯಾಗಿ ಇಟ್ಟುಕೊಳ್ಳೂದು. ಅವರೂ ಖುಷ್ ನಾವೂ ಖುಷ್ ಅಷ್ಟೇ'.....


Saturday, July 4, 2020

ಭಕ್ತಿಯ ಒಂದು ಪರಿ.


     ಕುರುಡನಿಗೆ ಅವನು ಸೋಲಲಿಲ್ಲ...

     ಮಠದ ಬಾಗಿಲಲ್ಲಿ ಅಂಧನೊಬ್ಬ ನಿಂತಿದ್ದ. ಬಟ್ಟೆಗಳು ಹಳತಾಗಿ ಅಲ್ಲಲ್ಲಿ ಹರಿದಿದ್ದವು. ಗಡ್ಡ ಕ್ಷೌರವಿಲ್ಲದ ಮುಖ, ಊಟವೂ ಆಗಿದ್ದಿರಲಿಕ್ಕಿಲ್ಲ ಎಂದು ಮಠದ ಅಧಿಕಾರಿಗಳು ಆತನನ್ನು ಕರೆದು ಊಟ ನೀಡಿದರು. ಸ್ವಾಮಿಗಳ ಬಳಿ ತನ್ನದೊಂದು ಬಿನ್ನಹ ಇದೆ ಎಂದು ಅರಿಕೆ ಮಾಡಿಕೊಂಡಂತೆ ಗುರುಗಳ ಭೇಟಿಯ ಅವಕಾಶ ನೀಡಲಾಯಿತು.

     "ನಾನು ಕಾರ್ಕಳ ತಾಲೂಕಿನ ಹೆಬ್ರಿಯಿಂದ ಬರುತ್ತಿದ್ದೇನೆ. ಊರಲ್ಲಿ ಜೀವನ ನಡೆಸಲು ಬಹಳ ಕಷ್ಟವಾಗಿದೆ. ವ್ಯಾಪಾರದಲ್ಲೂ ತುಂಬ ಲಾಸ್ ಆಗಿದೆ. ಆದ್ದರಿಂದ ಮಠದ ವತಿಯಿಂದ ಏನಾದರೂ ಆರ್ಥಿಕ ಸಹಾಯ ಸಿಕ್ಕಿದರೆ ಸಣ್ಣಪುಟ್ಟ ವ್ಯಾಪಾರ ಸುರು ಮಾಡಿ ಮಠದ ಹೆಸರು ಹೇಳಿ ಒಂದು ಬಡ ಕುಟುಂಬ ಬದುಕು ಸಾಗಿಸುತ್ತದೆ." ಬಂದ ಯಾತ್ರಿಕ ಬಿನ್ನಹ ಮಾಡಿಕೊಂಡರು.

     "ಇಲ್ಲಿ ಮಠದಲ್ಲಿ ವ್ಯಾಪಾರ ವಹಿವಾಟು ಮಾಡಲಿಕ್ಕೆಲ್ಲ ಹಣ ಸಿಗೂದಿಲ್ಲ, ಶ್ರೀದೇವರಲ್ಲಿ ಭಕ್ತಿ ವಿಶ್ವಾಸ ಇಡಿ. ದೇವರು ಕೈ ಬಿಡುವುದಿಲ್ಲ." ಆ ಸಂದರ್ಭದಲ್ಲಿ ಗುರುಗಳ ಮನಸ್ಸು ಹೇಗಿತ್ತೋ ಏನೋ, ಬಂದಂತಾ ಯಾಚಕನ ನಿರೀಕ್ಷೆ, ಆಸೆ ಹುಸಿಯಾಯಿತು.

     "ದೇವರಲ್ಲಿ ಭಕ್ತಿ, ವಿಶ್ವಾಸ ಎಲ್ಲ ಇದೆ. ಆದರೆ ಈಗ ಅರ್ಜಂಟಿಗೆ ಮಠದ ಮೇಲೆ ಬಹಳ ಆಸೆ ಇಟ್ಟುಕೊಂಡು ಬಂದಿದ್ದೇನೆ. ಗುರುಗಳು ಕೃಪೆ ಮಾಡಬೇಕು." ಪುನಃ ವಿನಂತಿ ಮಾಡಿಕೊಂಡರು. ಅವರ ವೇಷ ಭೂಷೆ, ದೈನ್ಯತೆ ಇತ್ಯಾದಿಗಳನ್ನು ನೋಡಿ ಗುರುಗಳಿಗೆ ಕನಿಕರವಾದರೂ ಈ ಕುರುಡ ಏನು ತಾನೇ ವ್ಯಾಪಾರ ಮಾಡಿಯಾನು? ಎಂದೆಣಿಸಿದರೋ ಏನೋ ಇವರ ಬಿನ್ನಹಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. 'ದೇವರ ಮೇಲೆ ಭರವಸೆ ಇಡು, ಎಲ್ಲ ಸರಿಹೋಗುತ್ತದೆ ನಮ್ಮ ಆಶೀರ್ವಾದವಿದೆ.' ಎಂದು ಹರಸಿದರು. ಕುರುಡ ಯಾಚಕ ನಿರಾಸೆಗೊಂಡ.

     ಊರಲ್ಲಿ ವ್ಯಾಪಾರದಲ್ಲಿ ಭಾರೀ ಲುಕ್ಸಾನು ಆಗಿ ಮುಂದಿನ ದಿಕ್ಕು ತೋಚದಂತಹ ಪರಿಸ್ಥಿತಿ ಉಂಟಾದಾಗ ನಮ್ಮ ಅಜ್ಜ ದಾಮೋದರ ಮಲ್ಯ-ದಾಮ್ಮಲ್ಲೋ- ಏಕಾಏಕಿ ಯಾರಿಗೂ ಹೇಳದೆ ಊರು ಬಿಟ್ಟು ದೇಶಾಂತರ ಹೋಗಿ ಕೊನೆಗೆ ಕೊಚ್ಚಿಯನ್ನು ತಲಪಿ ಮಠದ ಬಾಗಿಲು ತಟ್ಟಿದ್ದರು. ಮೇಲೆ ತಿಳಿಸಿದ ಕುರುಡ ಅವರೇ-ಕುರುಡು ಮಲ್ಯರು. ಮಠದಲ್ಲಿ ಉಳಕೊಂಡಿದ್ದರು. ಮೊದಲೇ ಕುರುಡರು, ಈಗ ಯಾವುದೇ ಪರಿಹಾರ ತೋಚದೇ ಮನಸ್ಸಲ್ಲೂ ಅಂಧಕಾರ ತುಂಬಿಕೊಂಡಿತು. ಗುರುಗಳಿಂದ, ಮಠದಿಂದ ಯಾವುದೇ ಉತ್ತೇಜನ ಸಿಕ್ಕಿರಲಿಲ್ಲ. ಕೇವಲ ಆಶೀರ್ವಾದಗಳು ಲಭ್ಯವಾಗಿದ್ದವು. ಮನಸ್ಸು ಖಿನ್ನವಾಗಿತ್ತು. ಅದೇ ಸಮಯದಲ್ಲಿ ಊರಿಂದ ಬಂದವರೊಬ್ಬರು ಇವರು ಕೊಚ್ಚಿಯಲ್ಲಿರುವ ಖಬರನ್ನು  ಊರಲ್ಲಿ ತಿಳಿಸಿ ಉಪಕರಿಸಿದ ಕಾರಣ ವಾಪಸು ಮನೆ ತಲಪಿದರು. 'ದೇವರು ದೊಡ್ಡವನು, ನಂಬಿದವರ ಕೈಯ್ಯನ್ನು ಖಂಡಿತಾ ಹಿಡಿದೆತ್ತಿ ಉದ್ಧರಿಸುತ್ತಾನೆ ಎಂದು ಮಕ್ಕಳು ಬಂಧುಗಳು ಸಮಾಧಾನಪಡಿಸಿದರು. ಇವರೂ ಅಂತೆಯೇ ಒಪ್ಪಿಕೊಂಡರು. ಮಠದ ಮೇಲಿನ ಬೇಸರವನ್ನೂ ಮರೆತರು. ಭಗವಂತ ಎಂದಿಗೂ ತಮ್ಮ ಅಂದರೆ ಸಂಕಷ್ಟದಲ್ಲಿರುವ ಭಕ್ತರನ್ನು ಬಿಟ್ಟುಹಾಕುವುದಿಲ್ಲ ಎಂದವರ ಧೃಡನಂಬಿಕೆ...                                                                                                                 ....೦೦0೦೦....

     ಒಡಿಶಾದ ಮಹಾಕಾವ್ಯ ಗೀತಗೋವಿಂದ. ಅದನ್ನು ರಚಿಸಿದವರು ಶ್ರೀಕೃಷ್ಣನ ಪರಮಭಕ್ತ ಜಯದೇವ. ಪರಮಾತ್ಮನೇ ಈ ಕಾವ್ಯವನ್ನು ತಮ್ಮಿಂದ  ಬರೆಸುತ್ತಿದ್ದಾನೆ ಎಂದು ಅವರ ಪೂರಾ ನಂಬಿಕೆ. ಕಾವ್ಯರಚನೆ ಪ್ರಗತಿಯಲ್ಲಿತ್ತು.. ಒಂದೆಡೆ ರಾಧೆಯು ಪ್ರೇಮಸಲ್ಲಾಪದ ಸಮಯದಲ್ಲಿ ಹುಸಿಮುನಿಸಿನಿಂದ ತನ್ನ ಪ್ರಿಯತಮ ಕೃಷ್ಣನ ಗಲ್ಲಕ್ಕೆ ಏಟು ಕೊಡುವ ಸನ್ನಿವೇಶ ಬಂದಿತು. ಕವಿಯೋ ಶ್ರೀಕೃಷ್ಣನ ಪರಮಭಕ್ತ. ತಾನು ಭಜಿಸುವ ದೇವನಿಗೆ ಹೊಡೆಸುವುದೇ? ಛೆ!ಛೇ! ಮನಸ್ಸು ಸಂದಿಗ್ಧದಲ್ಲಿ ಬಿತ್ತು. ಇಡೀ ದಿನ ಯೋಚನೆಯಲ್ಲಿ ಬಿದ್ದ ಕವಿಯು ತಾನು ಬರೆದ ಸಾಲುಗಳನ್ನು ಕಾಟುಹೊಡೆದು ಮಲಗಿದರು. ಅವರಿಗೆ ಸರಿಯಾದ ನಿದ್ದೆಯೂ ಬರಲಿಲ್ಲ.

     ಮರುದಿನ ಬೆಳಗ್ಗೆ ಎಂದಿನಂತೆ ಎದ್ದು ನದೀತೀರಕ್ಕೆ ಪದ್ಧತಿಯಂತೆ ಹೊರಟರು. ಮನೆಯಲ್ಲಿ ಪತ್ನಿಯು ಕೆಲಸಕಾರ್ಯಗಳಲ್ಲಿ ನಿರತಳಾಗಿದ್ದಳು. ಕೊಂಚ ಸಮಯದಲ್ಲೇ ಕವಿಗಳು ವಾಪಸು ಬಂದರು. 

     "ಇದೇನು ಇವತ್ತು ಬೇಗನೆ ಬಂದಿರಿ?" ಪತ್ನಿ ಕೇಳಿದಳು.

     "ನಿನ್ನೆ ಬರೆದ ಕಾವ್ಯ ಅಪೂರ್ಣವಾಗಿತ್ತು. ಅದನ್ನು ಪೂರ್ತಿ ಮಾಡೊಣವೆಂದು ಬೇಗನೆ ವಾಪಸು ಬಂದೆ." ಕವಿಗಳು ಉತ್ತರಿಸಿ ಬೆಳಗಿನ ಫಲಾಹಾರಗಳನ್ನು ಸ್ವೀಕರಿಸಿ ಕೋಣೆಗೆ ಹೋಗಿ ಬರಹದಲ್ಲಿ ತಲ್ಲೀನರಾದರು. ಕೊಂಚ ಹೊತ್ತಿನಲ್ಲಿ ಹೊರಬಂದು 'ಒಂದು ತುರ್ತು ಕೆಲಸ ನೆನಪಾಯಿತು. ಅದನ್ನು ಮುಗಿಸಿ ಬರುತ್ತೇನೆ.' ಎಂದು ಹೊರಹೊರಟರು. ಮಡದಿ ತನ್ನ ಗೃಹಕೃತ್ಯಗಳಲ್ಲಿ ನಿರತಳಾದಳು. 

     ಸ್ವಲ್ಪ ಸಮಯದಲ್ಲಿ ಬಾಗಿಲು ತಟ್ಟಿದ ಶಬ್ದವಾಯಿತು. ಹೊರಗಿನಿಂದ ಬಂದ ಕವಿಗಳು 'ಬೇಗನೇ ಊಟ ಹಾಕು ತುಂಬಾ ಬರೆಯಲಿಕ್ಕಿದೆ.' ಎಂದು ಅವಸರಿಸಿದರು.

     "ಈಗ ತಾನೇ ಊಟ ತಿಂಡಿ ಸಾಂಗವಾಗಿ ಮುಗಿಸಿ ಹೊರಗೆ ಹೋದವರು ಪುನಃ ಊಟವೆಂದರೆ ಹೇಗೆ?" ಪತ್ನಿಗೆ ಆಶ್ಚರ್ಯ!

     "ನಾನು ಈಗ ತಾನೆ ಊಟ ಮಾಡಿದೆನೇ? ಸುಳ್ಳೇಕೆ ಹೇಳುವಿ? ನಾನು ಈಗಷ್ಟೇ ನದೀತೀರದಿಂದ ಬರುತ್ತಿದ್ದೇನೆ!"

     "ನಿಮ್ಮ ಬಳಿ ನಾನೇಕೆ ಸುಳ್ಳು ಹೇಳಲೀ! ನೀವು ಆಗಲೇ ಬಂದು ಊಟತಿಂಡಿ ಮುಗಿಸಿ ಕಾವ್ಯರಚನೆ ಮಾಡಲಿಕ್ಕಿದೆ. ಮಧ್ಯೆ ತೊಂದರೆ ಮಾಡಬೇಡವೆಂದು ಹೇಳಿ ಕೆಲಸ ಮುಗಿಸಿ ಪೇಟೆಗೆ ಹೋದವರಲ್ಲವೇ?"

     ಕವಿಗಳಿಗೆ ಆಶ್ಚರ್ಯವಾಯಿತು. ಏನೋ ಹೊಳೆದು ಒಳಗೆ ಹೋಗಿ ನೋಡಿದರು. ತಾನು ಹಿಂದಿನ ದಿನ ಅನುಮಾನದಿಂದ ಕಾಟುಹೊಡೆದಿದ್ದ ಸಾಲುಗಳನ್ನು ಪುನಃ ಬರೆಯಲಾಗಿತ್ತು. "ಇದನ್ನು ಯಾರು ಬರೆದರು?"
  
     "ನೀವೇ ತಾನೆ ಬೆಳಗ್ಗೆ ಬಂದು ಬರೆದದ್ದು." ಪತ್ನಿಯಿಂದ ಜವಾಬು ಬಂತು. 

     ಕವಿಗಳು ಭಾವಪರವಶರಾದರು "ದೇವೀ, ನೀನು ಭಾಗ್ಯವಂತಳು. ಬೆಳಗ್ಗೆ ಬಂದವನು ನಾನಲ್ಲ, ಸಾಕ್ಷಾತ್ ಭಗವಂತನು. ನಿನ್ನ ಭಾಗ್ಯ ಪುಣ್ಯ ವಿಶೇಷಗಳಿಂದಾಗಿ ನಿನಗೆ ಕೈಯಾರೆ ಅವನ ಸೇವೆ ಮಾಡುವ ಪುಣ್ಯಾವಕಾಶ ಲಭಿಸಿತು. ಅದಿರಲಿ ಈಗ ಅವನು ಎಲ್ಲಿ ಹೋದ?" ಪರಿಪರಿಯಾಗಿ ಪತ್ನಿಯನ್ನು ಪ್ರಶಂಸಿಸಿದರು ಕವಿವರ್ಯರು.
 
     ಭಗವಂತನು ಭಕ್ತಾಧೀನ. ಇದು ಒಡಿಶಾದ ಜನಪ್ರಿಯ ಕತೆ. ನಮ್ಮ ಅಮ್ಮ ನನಗೆ ಮನಮುಟ್ಟುವಂತೆ ಪ್ರೀತಿಯಿಂದ ವರ್ಣಿಸಿದ ಕತೆ.

                                ....00೦00....

     ಚೋಖಾಮೇಳಾ ಪರಿಶಿಷ್ಟ ವರ್ಗಕ್ಕೆ ಸೇರಿದವನು. ಪಾಂಡುರಂಗನ ಪರಮಭಕ್ತ. ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಪುರಂದರ ವಿಠಲನ ದರ್ಶನ ಭಾಗ್ಯ ಲಭಿಸೀತೇ ಎಂಬ ಹಂಬಲದಲ್ಲಿದ್ದವನು. ಆತನ ಬಹುದಿನಗಳ ಬಯಕೆಯಂತೆ ಸಂತರ ಟೋಳಿಯೊಂದರ ಒಟ್ಟಿಗೆ ಪಂಢರಾಪುರಕ್ಕೆ ಯಾತ್ರೆ ಹೋಗುವ ಸದವಕಾಶ ಲಭಿಸಿತು. ಪಂಢರಾಪುರ ವಿಟಲನ ದರುಶನದಿಂದ ತನ್ನ ಇಂದಿನ ಹಾಗೂ ಜನ್ಮಜನ್ಮಾಂತರದ ಕರ್ಮಗಳೆಲ್ಲ ತೀರ್ಮಾನವಾದವು ಎಂದು ಪರಮಾನಂದ ಹೊಂದಿ ನಾಮಸ್ಮರಣೆ ಯಲ್ಲಿ ತಲ್ಲೀನನಾಗಿ ಇಹದ ಪರಿವೆಯನ್ನೇ ಮರೆತಿದ್ದನು. ಮಠದ ಮುಖ್ಯ ಆಚಾರ್ಯರು ಬಂದಾಗ ಈತ ತನ್ನದೇ ಆದ ಭಾವ ಸಮಾಧಿಯಲ್ಲಿದ್ದನು. ಅರೇ! ದೇವರ ಪವಿತ್ರ ಸನ್ನಿಧಿಯಲ್ಲಿ ಒಬ್ಬ ಹೊಲೆಯ ಹೊಕ್ಕಿದ್ದಾನೆ! ಇವನ ಮದವೆಷ್ಟು! ಆಚಾರ್ಯರಿಗೆ ಬಂತು ಎಲ್ಲಿಲ್ಲದ ಕ್ರೋಧ. ಚೋಖಾಮೇಳಾನನ್ನು ಝಾಡಿಸಿ ಎಬ್ಬಿಸಿ ದವಡೆಗೆ ಬಲವಾಗಿ ಬಾರಿಸಿ ಬೈದು ಭಂಗಿಸಿ ಹೊರ ನೂಕಿದರು. ಮತ್ತು ಇಡೀ ದೇವಳವನ್ನು ಪುನಃ ಶುದ್ಧವಾಗಿ ತೊಳೆದು ಕ್ರಮವಾಗಿ ಹೊಸತಾಗಿ ಪೂಜಾವಿಧಿಗಳನ್ನು ನೆರವೇರಿಸಿ ಕ್ಷಮಾಪಣಾವಿಧಿ ಸಹ ನಡೆಸಿ ಮನೆಗೆ ಹೋದರು.

     ಮರುದಿನ ಯಥಾಪ್ರಕಾರ ದೇವಳದ ಬಾಗಿಲು ತೆರೆದು ದೇವರ ಅಭ್ಯಂಜನ ಅಲಂಕಾರ ಮುಂತಾದ ವಿಧಿಗಳನ್ನು ನೆರವೇರಿಸುವಾಗ ಅವರಿಗೆ ಮೂರ್ತಿಯ ಮುಖದಲ್ಲಿ ಏನೋ ವ್ಯತ್ಯಾಸ ಕಂಡುಬಂತು. ದಿಟ್ಟಿಸಿ ನೋಡುವಾಗ ದೇವರ ಎಡಬದಿಯ ಗಲ್ಲವು ಊದಿಕೊಂಡಿತ್ತು. ಆಚಾರ್ಯರಿಗೆ ಅದನ್ನು ನೋಡಿ ಆಘಾತವಾಯಿತು. ಅವರೂ ಜ್ಞಾನಿಗಳೇ. ಆದರೆ ವರ್ಷಾನುಗಟ್ಟಳೆಯ ಸಂಪ್ರದಾಯಗಳಿಗೆ ಜೋತುಬಿದ್ದವರಾದ್ದರಿಂದ ಹಿಂದಿನ ದಿನ ಹಾಗೆ ವರ್ತಿಸಿದ್ದರು. 
     
     ಈಗ ಜ್ಞಾನೋದಯವಾಯಿತು.'ವಿಠಲಾ, ವಿಠಲಾ ನಿನ್ನ ಮಹಿಮೆ ಅಪಾರ. ಅದನ್ನು ಅರಿಯದೇ ಮೂರ್ಖನಾದೆನಲ್ಲಾ . . .  ಎಲ್ಲೆಲ್ಲೂ ನೀನಿರುವೆ, ಆದರೆ ನಿನ್ನೆ ನಿನ್ನನ್ನು ಅರಿಯದೇ, ಗುರುತಿಸದೇ ಪತಿತನಾದೆನೇ! ದೇವ ದೇವಾ ಎಲ್ಲಿರುವೆ?' ಎಂದು ವಿಲಪಿಸುತ್ತಾ ಇಡೀ ಪಂಢರಾಪುರವನ್ನು ಹುಡುಕಿ ಕೊನೆಗೆ ಊರ ಹೊರಗೆ ವಿಠಲನ ಧ್ಯಾನದಲ್ಲಿ ಮಗ್ನನಾಗಿದ್ದ ಚೋಖಾಮೇಳಾನ ಪಾದಗಳಿಗೆ ಬಿದ್ದು ಕ್ಷಮಾಪಣೆಗಳನ್ನು ಕೇಳಿ ಆತನಿಂದ ಬೋಧನೆಗಳನ್ನು ಕೇಳಿ ಧನ್ಯರಾದರು...

     ಇದೂ ಸಹ ನಮ್ಮಮ್ಮ ಹೇಳಿದ ಕತೆಯೆಂಬ ನೆನಪು.

                                  ....00೦00....

     ಇವೆಲ್ಲ ಏಕೆ ನೆನಪಾಗುತ್ತವೆ?

     ದಿನನಿತ್ಯವೂ 'ಉದಯಕಾಲದೊಳೆದ್ದು ಗಡಗಡ ನಡುಗುತ' ಎಂಬ ಪುರಂದರದಾಸರ ಭಜನೆಯಂತೆ ದೇವರ ಪೂಜೆಯನ್ನು ಕಾಟಾಚಾರವೆಂಬಂತೆ ಅಥವಾ ತಾನೊಬ್ಬ ಮಹಾ ತಿಳಿದವನು, ಮಹಾಭಕ್ತ ಎಂದು ಲೋಕಕ್ಕೆ ತಿಳಿಯಬೇಕೆಂದು ಮಾಡುವ ಡಂಬಾಚಾರಗಳಿಗೆ ಯಾವುದೇ ಮಹತ್ವವಿಲ್ಲ, ಬದಲಿಗೆ ಸರಳ ಹಾಗೂ ಶುದ್ಧ ಭಕ್ತಿಗೆ ಭಗವಂತನು ಖಂಡಿತವಾಗಿ ಒಲಿಯುತ್ತಾನೆ ಎಂದು ತಿಳಿಸಲು ಇಂಥಾ ಕತೆಗಳನ್ನು ಹೇಳಲಾಗಿದೆ....

     ಸೀತಾನದಿಯಲ್ಲಿ ಒಂದು ಮುಳಿಮಾಡಿನಲ್ಲಿ ಹೋಟ್ಲು ತೆರೆದರು ನಮ್ಮ ಅಜ್ಜ. ಬಡವರೇ ಇರುವ ಬಡ ಊರಲ್ಲಿ ಈ ಹೊಸದಾಗಿ ಬಂದ ಬಡವರು ಬಡ ಹೋಟೆಲೊಂದನ್ನು ತೆರೆದರು. ಏನು ವ್ಯಾಪಾರವಾದೀತು! ಆದರೂ ಆಗಬಹುದಾದ ಚೂರುಪಾರು ವ್ಯವಹಾರವನ್ನು ನಂಬಿ ಬಂದಿದ್ದರು. ಕುರುಕುಟು ಜೀವನ ನಡೆಯುತ್ತಿತ್ತು, ಆರಕ್ಕೆ ಏರಲಿಲ್ಲ ಮೂರಕ್ಕೆ ಬೀಳಲಿಲ್ಲ ಎಂಬ ಗಾದೆಯಿದೆ. ಇವರು ಮಾತ್ರ ಆರಕ್ಕೆ ಏಳದಿದ್ದರೂ ಮೂರರಿಂದ ಕೆಳಕ್ಕೆ ಬಿದ್ದದ್ದೇ ಜಾಸ್ತಿ...
 
     ಜೋರು ಮಳೆಗಾಲದ ಸಮಯ. ಅರುವತ್ತು-ಎಪ್ಪತ್ತು ವರುಷಗಳ ಹಿಂದಿನ ಮಳೆಯ ಆರ್ಭಟ ವೈಭವಗಳನ್ನು ವಿವರಿಸಲು ನನ್ನ ಜ್ಞಾನ ಸಾಲದು. ಧಾರಾಕಾರ ಮಳೆ ಮೂರುದಿನಗಳಿಂದ ಸುರಿಯುತ್ತಿತ್ತು. ಇಡೀ ಸೀತಾನದಿ ನಿರ್ಜನವಾಗಿತ್ತು. ಇನ್ನು ವ್ಯಾಪಾರವೆಲ್ಲಿಯದು! ನಮ್ಮ ಅಜ್ಜಿಯವರು ತನ್ನ ಕಷ್ಟಕ್ಕೆ ಮಣಮಣಿಸದಿದ್ದರೂ ಮನೆಯಲ್ಲಿ ನಿಟ್ಟುಪವಾಸದ ಪರಿಸ್ಥಿತಿ ನಿರ್ಮಾಣವಾಗಿದ್ದುದರಿಂದ ಒಳಗಿನಿಂದ ಪಿರಿಪಿರಿ ಮಾಡುತ್ತಲಿದ್ದರು. ಅಜ್ಜ ಹೊರಗೆ ಜಗಲಿಯ ಮೇಲೆ ಮಲಗಿದ್ದರು. ಹೆಂಡತಿಯ ಗೊಣಗಾಟ ಜಾಸ್ತಿಯಾಯಿತು. 

     "ನೀನು ಇನ್ನು ಮಾತಾಡಬೇಡ, ಅವನಿಗೆ ಹನ್ನೆರಡು ಘಂಟೆಯ ಟೈಮು ಕೊಟ್ಟಿದ್ದೇನೆ. ನೋಡುವ, ನಾನೂ ಕಾಯ್ತಾ ಇದ್ದೇನೆ. ನೀನು ಸ್ವಲ್ಪ ಸುಮ್ಮನೆ ಇರು ಮಾರಾಯಿತಿ."

     "ನೀವು ಯಾರಿಗೆ ಹೇಳಿದ್ದೀರಿ? ಇಷ್ಟೊತ್ತಿಗೆ ಅವರು ಬರಬೇಕಿತ್ತಲ್ಲವೇ?"

     "ನಿನಗೆ ಅರ್ಜಂಟು, ತಾಳು ಹನ್ನೆರಡು ಘಂಟೆಯ ವಾಯಿದೆ ಕೊಟ್ಟಿದ್ದೇನೆ. ನನಗೆ ಧೈರ್ಯ ಉಂಟು, ಅಂವ ವಾಯಿದೆ ತಪ್ಪೂದಿಲ್ಲ."

     "ಎಂತದೋ ಏನೋ, ಯಾರೋ ಏನೋ, ವಾಯಿದೆ ಕೊಟ್ಟು ಕಾಯ್ತಾ ಇದ್ದಾರೆ! ನಮ್ಮ ಹಣೇಬರ ನಮ್ಮದು, ಯಾರೂ ಕೇಳುವವರಿಲ್ಲ...." ಅಜ್ಜಿಯ ಮಣಮಣ ಮುಂದುವರೆಯಿತು. ಅಜ್ಜ ಮಾತಾಡಲಿಲ್ಲ.....

     "ಮಲ್ಲೆರೇ, ಚಾ ಉಂಡೇ?" ಇಬ್ಬರು ರೈತರು-ಪೂಜಾರಿಗಳು- ಬಂದು ವಿಚಾರಿಸಿದರು.

     "ಚಾ ಉಂಟು, ಆದರೆ ಒಂದು ಸಣ್ಣ ಸಮಸ್ಯೆ ಆಗಿದೆ. ಬೆಳಗ್ಗೆ ಹಾಲು ಬರಲಿಲ್ಲವಲ್ಲ ಮಾರಾಯರೇ" ನಮ್ಮ ಗೋವಿಂದಮಾಮ ಒಂದು ಡೈಲಾಗು ಬಿಟ್ಟರು. 
     
     ನಿಜವಾದರೂ ಒಳಗೆ ಹಾಲಲ್ಲ, ಏನೂ ಇರಲಿಲ್ಲ. ಆದರೆ ಬಂದ ಗಿರಾಕಿಯ ಬಳಿ ನಾಸ್ತಿ ಏಕಾಡಬೇಕು ಅವರ ವಿಚಾರ.
ಬಂದವರು ಒಮ್ಮೆ ಸುತ್ತಲೂ ಅವಲೋಕಿಸಿದರು. ಕೂಡಲೇ ಎದ್ದರು. "ಈಗ ಬರ್ತೇವೆ, ಸಾಹುಕಾರರೇ." ಎಂದು ಹೊರಟರು.

     "ನಿಲ್ಲಿ, ನಿಲ್ಲಿ." ಗೋವಿಂದಮಾಮ ತಡೆದರು. ಬಂದ ಗಿರಾಕಿ ತಪ್ಪಿ ಹೋದಾರೋ ಎಂದು ಅವರ ಆತಂಕ.

     "ರಾಬರೇ, ಗಡಿಬಿಡಿ ಕೋರ್ನೂಕಾ." ಅಜ್ಜ ಹೇಳಿದರು.

     "ಛೇ! ಬಂದ ಗಿರಾಕಿ ಹೋಯಿತು."

     "ಹನ್ನೆರಡು ಘಂಟೆಯ ಟೈಮು ಕೊಟ್ಟಿದ್ದೇನೆ ನಾನು. ಟೈಮಾಗುತ್ತ ಬಂತು. ಅವನು ಇವತ್ತು ಗೆಲ್ತಾನೋ ಸೋಲುತ್ತಾನೋ ನಾನೂ ನೋಡೇ ಬಿಡ್ತೇನೆ." ಅಜ್ಜ ಸವಾಲು ಹಾಕಿದರು.....

     "ಯಾರೋ ಓಡುತ್ತಾ ಬರುತ್ತಾ ಇದ್ದಾರೆ." ಮಾಮ ಹೊರಗೆ ನೋಡುತ್ತ ಹೇಳಿದರು.

     "ನಾನು ಹೇಳ್ಲಿಲ್ವಾ, ಹನ್ನೆರಡು ಆಗುತ್ತ ಬಂತು, ಅದಕ್ಕೇ ಓಡಿಸ್ತಾ ಇದ್ದಾನೆ. ಇಲ್ಲದಿದ್ದರೆ ಮರ್ಯಾದೆ ಹೋಗುತ್ತದೆ. ಹೋಗಿ ಹೋಗಿ ಈ ಕುರುಡನ ಹತ್ತಿರ ಸೋಲಲು ಅವನು ತಯಾರಿಲ್ಲ." ಅಜ್ಜ ನಕ್ಕರು.

     ಅಷ್ಟರಲ್ಲಿ ಆ ಇಬ್ಬರು ರೈತರು ಒಂದು ಮುಡಿ ಅಕ್ಕಿ, ಸ್ವಲ್ಪ ತರಕಾರಿ, ಹಾಲು ಹಿಡಕೊಂಡು ಗಡಬಡಿಸಿ ಹೋಟೆಲಿಗೆ ಬಂದಿಳಿಸಿದರು. "ಸಾಹುಕಾರ್‍ರೇ, ನಿಮಗೆ ಇಷ್ಟು ಕಷ್ಟ ಉಂಟು, ಒಂದು ಮಾತು ಹೇಳಲಿಕ್ಕಿಲ್ವಾ? ನಾವೆಲ್ಲ ಇಲ್ಲವಾ. ಊರುಮಂದಿ ಅಂತ ಇರೂದ್ಯಾಕೆ. ಪರಸ್ಪರ ಕಷ್ಟಸುಖಕ್ಕೆ ಆಗದಿದ್ದರೆ ನಾವೆಲ್ಲ ಇದ್ದು ಏನು ಫಲ! ಇಗಳಿ, ಕಿಂಚಿತ್ತು ಅಕ್ಕಿ ಬೇಳೆ ತಂದಿದ್ದೇವೆ. ಆಯ್ತಲ್ಲ ಇನ್ನು ನಮಗೂ ಗರಮ್ ಚಾ ಮಾಡಿಕೊಡಿ ಕಾಂಬ."

     ಕುರುಡನಿಗೆ-ಅಜ್ಜನಿಗೆ-ಅವನು ಸೋಲಲಿಲ್ಲ.

ದಾರಿಯಲ್ಲಿ ಭೆಟ್ಟಿಯಾದ ಗೆಳೆಯ - ಒಂದು ನೆನಪು


ಮೊದಲ್ನೇಯವಳು ಪುಟ್ಟಿ, ಎರಡ್ನೇಯಂವ.......

     ಲೇಖನ ಒಂಚೂರು ಉದ್ದ ಉಂಟು. ಸಾವಕಾಶ ಓದಿರಿ:

     1984ರಲ್ಲಿ ದೆಹಲಿಗೆ ವರ್ಗವಾಯಿತು. ಪ್ರತೀ ಎರಡು ವರ್ಷಗಳಿಗೆ ಬೇಂಕಿನ ಖರ್ಚಿನಲ್ಲಿ ಫಸ್ಟ್ ಕ್ಲಾಸಲ್ಲಿ ಊರಿಗೆ ರಜ ಹಾಕಿ ಬರುವುದು. ನಮ್ಮದೇ ದುಡ್ಡಲ್ಲಿ ಬರಬೇಕಾದಾಗ ಸೆಕೆಂಡ್ ಕ್ಲಾಸಲ್ಲಿ ಪಯಣ. ಫಸ್ಟ್ ಕ್ಲಾಸಿಗಿಂತ ಸೆಕೆಂಡ್ ಕ್ಲಾಸಿನ ಪಯಣಗಳೇ ಜಾಸ್ತಿ ಖುಷಿ ಕೊಡುತ್ತಿದ್ದವು. ಫಸ್ಟ್ ಕ್ಲಾಸಿನಲ್ಲಿನ ಸಹಪ್ರಯಾಣಿಕರು 'ದೊಡ್ಡ ಮನುಷ್ಯರು' ಸಾಮಾನ್ಯವಾಗಿ ಒಬ್ಬರೊಡನೆ ಒಬ್ಬರು ಬೆರೆಯುತ್ತಿರಲಿಲ್ಲ. ಸೆಕೆಂಡು ಕ್ಲಾಸು-ಅದೊಂದು ಮಿನಿ ಭಾರತವೇ ಸರಿ. ಆಸೇತು ಹಿಮಾಚಲದ ಜನರು ಸಿಗುತ್ತಿದ್ದರು. ಇಡೀ ರೈಲು ತಿರುಗಿ ಆನಂದ ಪಡೆಯುತ್ತಿದ್ದೆವು. ಸ್ವಲ್ಪ ಬಾತ್ ರೂಮಿನ ಪರಿಮಳ ಸಹಿಸಿಕೊಳ್ಳಬೇಕು ಅಷ್ಟೆ..

     ಇಂತಹುದೇ ಒಂದು ಪಯಣ. ಇಸವಿ ಸರಿಯಾಗಿ ನೆನಪಿಲ್ಲ, ಬಿಡಿ, ಇಸವಿ ದೊಡ್ಡ ವಿಶೇಷವಲ್ಲ. ನಮಗೆ ರಿಸರ್ವೇಶನ್ ಆಗಿದ್ದ ಸೀಟು ಹುಡುಕಿ ಕೆಳಗೆ ಬೇಗುಗಳನ್ನು ಕ್ರಮಪ್ರಕಾರ ಇಟ್ಟು ಬಾತ್ ರೂಮಿಗೆಲ್ಲ ಹೋಗಿ ಬಂದು ಸೆಟಲ್ ಆಗಿ ಎದುರು ನೋಡುವಾಗ ಸರಿಸುಮಾರು ನನ್ನದೇ ವಯಸ್ಸಿನವರೊಬ್ಬರು ತಮ್ಮ ಪಯಣದ ವ್ಯವಸ್ಥೆ ಮಾಡುತ್ತಿದ್ದರು.

     'ಬನ್ನಿ ಯಜಮಾನರೇ, ಆರಾಮಾಗಿ ಲಗೇಜು ಇಡಿ, ದೂರ, ಮಂಗಳೂರಿಗಾ?' ಬಂದವರನ್ನು ಸ್ವಾಗತಿಸಿದೆ.
 
'ಅರೇ, ನಾವು ಮಂಗ್ಳೂರ್ ಬದಿಯವರು ಅಂತ ನಿಮಗೆ ಹೇಗ್ ಗೊತ್ತಾಯ್ತೆ? ಇರ್ಲೀ ಮೊದssಲು ಈ ಲಗೇಜಿದೊಂದು ವಿಲೆವಾರಿ ಮಾಡ್ಕಂತೆ' ಅವರ ಲಗೇಜು ಸ್ವಲ್ಪ ಹೆಚ್ಚು ಇತ್ತು. ಸರಿಯಾಗಿ ನೋಡಿದರೆ ಸಾಮಾನು ಸರಂಜಾಮು ನಮ್ಮಷ್ಟೇ, ಆದರೆ ಪೇಕಿಂಗ್ ಸಮಕಟ್ಟು ಇಲ್ಲದ ಕಾರಣ ಬಿಡ್ಕಿ ಬಜಾರು ಜಾಸ್ತಿ ತೋರುತ್ತಿತ್ತು. ನಡುನಡುವೆ ತನ್ನ ಮನೆಯವರಿಗೆ ಗದರಿಸುತ್ತಲೂ ಇದ್ದರು.

     'ನಿಮಗೆಲ್ಲಾಯ್ತು?'

     'ನಾನು ಸಿಂಡಿಕೇಟು, ನೀವು?'

     'ಓಹೋ, ಬೇಂಕೋ, ನೀವು ಗಟ್ಟಿ ಜನ ಮಾರಾಯ್ರೇ, ನಮ್ಮದು ಬೇರೆ.'

     'ಬೇರೆ ಅಂದರೆ?'

     'ಹೋಟ್ಲು'

     'ಹೋಟೆಲಾದರೆ ಎಂತದು, ಕಮ್ಮಿ ಕೆಲಸವಾ? ಸ್ವಂತ ಉದ್ಯೋಗ ನಮ್ಮ ನೌಕರಿಗಿಂತ ಉತ್ತಮ.' ಎಂದೆ.

     'ಸ್ವಂತ ಅಲ್ದೇ, ನೌಕರಿಯೇ, ನಾನು ತಾಜ್ ಹೋಟೆಲ್ ನಲ್ಲಿ ಡ್ಯೂಟಿ ಮಾಡೂದೇ. ಹಾಗಂತ ಜುಜಬಿ ಏನಲ್ಲ, ಒಳ್ಳೇ ಕೆಲಸವೇ' ವಿವರಣೆ ಕೊಟ್ಟರು.

     'ಅದೇ, ಸ್ವಲ್ಪ ಸಮಯದ ಹಿಂದೆ ಗವರ್ನ್ ಮೆಂಟು ಹೋಟೆಲಿನಿಂದ ಮ್ಯುಜಿಷಿಯನ್ ಝುಬಿನ್ ಮೆಹತಾ ತಮ್ಮ ಇಡೀ ಗ್ರೂಪ್ ಸಮೇತ ಶಿಫ್ಟ್ ಆದರಲ್ಲ, ಅದೇಯಾ?'

     ‌'ಹೌದು ಹೌದು.'

     ಕೊಂಚ ಸಮಯದ ಹಿಂದೆ ಖ್ಯಾತ ಸಂಗೀತಗಾರ ಝುಬೀನ್ ಮೆಹತಾ ಅವರ ಸಂಗೀತ ಕಾರ್ಯಕ್ರಮ ದೆಹಲಿಯಲ್ಲಿ ಆಯೋಜಿಸಲಾಗಿತ್ತು, ಮತ್ತವರ ಪ್ರೋಗ್ರಾಮಿನ ಲೈವ್ ರಿಲೇ ಟೀ ವಿಯಲ್ಲಿ ಪ್ರಸಾರವಾಗಿತ್ತು. ಅವರಿಗೆ ಉಳಕೊಳ್ಳಲು ಸರಕಾರದ ವತಿಯಿಂದ ಸರಕಾರೀ ಹೋಟೆಲಲ್ಲಿ (ಅಶೋಕಾ ಹೋಟೆಲ್ ಇರಬೇಕು ಸರಿಯಾಗಿ ನೆನಪಿಲ್ಲ, ಕ್ಷಮಿಸಿ) ವ್ಯವಸ್ಥೆಯಾಗಿತ್ತು. ಆದರೆ ಸದರಿ ಹೋಟ್ಳಲ್ಲಿ ವ್ಯವಸ್ಥೆ ಚನ್ನಾಗಿರಲಿಲ್ಲ. ಚನ್ನಾಗಿರಲಿಲ್ಲ ಅನ್ನುವುದು ಸರಿಯಾದ ವಿವರಣೆಯಲ್ಲ, ಎಲ್ಲವೂ ಅಧ್ವಾನ ವಾಗಿತ್ತು. ರೂಮುಗಳಲ್ಲಿ ಜಿರಳೆಗಳು ಹಾರಾಡುತ್ತಿದ್ದವು, ಬಾತರೂಮಿನಲ್ಲಿ ನಳ್ಳಿಗಳು ಸೋರುತ್ತಿದ್ದವು, ಏರ್ ಕಂಡೀಷನಿಂಗ್ ವರ್ಕ್ ಆಗುತ್ತಿರಲಿಲ್ಲ...ಇತ್ಯಾದಿ ಇತ್ಯಾದಿ...  ಮೆಹತಾ ಅವರಿಗೆ ಕಂಡಾಪಟ್ಟೆ ಸಿಟ್ಟು ಬಂದು ಅವರು ತಮ್ಮ ಇಡೀ ಟ್ರೂಪನ್ನು ಅಲ್ಲಿಂದ ಬೇರೆ ಹೋಟೆಲಿಗೆ ಶಿಫ್ಟ್ ಆದರು ಎಂಬ ಸುದ್ದಿಯೂ ಟೀವಿಯಲ್ಲಿ ಬಂದಿತ್ತು. ಆಗಿನ ಪ್ರಧಾನಿ ಶ್ರೀ ರಾಜೀವ ಗಾಂಧಿಯವರು ಕಂಡಾಪಟ್ಟೆ ಸಿಟ್ಟಾಗಿದ್ದರು ಎಂದೂ ವರದಿಯಾಗಿತ್ತು.

     ಹೌದೇ, ನೀವು ಹೇಳಿದ್ದು ಸಮ. ನೋಡಿ ಈ ಗೌರ್ಮೆಂಟಿನ ಸ್ಟಾಫಿಗೆಲ್ಲ ಜಬಾದಾರಿ ಇಲ್ಲ. ತಿಂಗ್ಳು ತಿಂಗ್ಳೂ ಸಂಬ್ಳ ಬತತ್ ಕಾಣೀ. ಗಿರಾಕಿ ಕಂಡ್ರೆ ಒಂಚೂರು ಸಸಾರ. ನಮ್ಮ ತಾಜ್ ನಲ್ಲಿ ಹಾಗೆಲ್ಲ ಇಲ್ಲ. ಫಾರಿನರ್ಸ್ ಮೊದಲೇ ಬುಕಿಂಗ್ ಮಾಡಿ ಇರ್ತಾರೆ. ಅವರಿಗೆ ದುಡ್ಡಿನ ಲೆಕ್ಕವೇ ಇಲ್ಲ. ಏರ್ ಪೋರ್ಟಿನಿಂದ ಅವರನ್ನು ನಮ್ಮದೇ ಕಾರಲ್ಲಿ ಕರ್ಕೊಂಡು ತಂದು, ಇಳಿಯುವಾಗ ನಾಲಕ್ಕು ಜನ ಅವರಿಗೆ ಸಲ್ಯೂಟು ಹೊಡೆಯುವ ಸ್ಟೈಲೇ ಒಂದು ಚಂದ. ಇಳ್ದು ಒಳಗೆ ಬರುವಾಗ ಥಳಥಳ ಝಗಝಗ ಸೀರೆ, ಜಡೆ ತುಂಬ ಹೂ ಮುಡಕೊಂಡು ನಾಲಕ್ಕು ಹುಡುಗೇರು ಮುಗುಳು ನಗೆ ಬೀರಿ ಅವರಿಗೆ ಆರತಿ ಮಾಡಿ ಹಣೆಗೆ ಕುಂಕುಮ ಹಚ್ಚಿ-ಬೇಕ್ ಗ್ರೌಂಡು ಮ್ಯೂಸಿಕ್ ಬೇರೆ ಉಂಟು- ವೆಲ್ ಕಮ್ ಟು ಇಂಡಿಯಾ ಎಂದು ಸ್ವಾಗತ ಮಾಡಿದರೆಂದರೆ ಕೌಂಟರ್ ತಲಪುವದರೊಳಗೆ ಆ ಫಾರಿನರ್ ಕಿಸೆಯಿಂದ ಕಮ್ಮಿ ಕಮ್ಮಿ 50-100 ಡಾಲರ್ ಖಾಲಿ. ಅದೂ ಅಂವ ಅಷ್ಟು ಖುಷಿಯಿಂದ ಕೊಡೂದು. ಗವರ್ ಮೆಂಟು ಹೋಟ್ಳಲ್ಲಿ ಅವನ ಬೇಗು ಅವನೇ ಹೊರಬೇಕು, ಈ ನಮನೆ ಅವಸ್ಥೆ. ನಮ್ಮ ಹೊಟೆಲ್ 365 ದಿನ ಸಹ ಫುಲ್ ಬುಕ್.' ಅವರ ವಿವರಣೆ ನನಗೆ ಭಾರೀ ಖುಷಿಯಾಯ್ತು. ಬಹಳ ಜಾಲಿಯಾಗಿ ಮಾತಾಡುತ್ತಿದ್ದರು. ಅವರ ಮಿಸೆಸ್ಸು ಹೆಚ್ಚು ಮಾತಾಡುವವರಲ್ಲ, ನನ್ನ ಮನೆಯವರಿಗೂ ಅವರಿಗೂ ಸರಿಯಾದ ಜೋಡಿ.

     'ಮಕ್ಕಳು?' ಕೇಳಿದೆ.

     'ನಿಮ್ ಕಣಾಂಗೆ, ಇಲ್ಲಿ ಕಾಣಿ, ಹಿರೇದು ಹೆಣ್ಣು, ಎರಡ್ನೇಯಂವ ಮಾಣಿ'

     'ನಮ್ಮದು ಸ್ವಲ್ಪ ಬದಲಾವಣೆ ಉಂಟು, ಹಿರಿಯವ ಹುಡುಗ, ಎರಡನೆಯವಳು ಮಗಳು. ಮಕ್ಕಳ ಹೆಸರು?'

     'ಮೊದಲನೆಯವಳು ಪುಟ್ಟಿ, ಎರಡನೆಯಂವ ಬೋಳಿಮಗ'

     ನನ್ನ ಮನೆಯವಳು ತಟಕ್ಕನೆ ಅಲ್ಲಿಂದ ಎದ್ದು ಹೋದಳು. ನನಗೆ ಏನು ಹೇಳುವುದೆಂದು ತಿಳಿಯಲಿಲ್ಲ......

     'ನಿಮ್ದೊಂದು ಎಂತ ಅಂತ ಇಲ್ಲ. ಎಲ್ಲಿ ಎಂತ ಮಾತಾಡಬೇಕಂತ ಗೊತ್ತಿಲ್ಲ. ಒಟ್ರಾಷೀ ಏನಾರೂ ಹರಕು ಮಾತಾಡೂದು.' ಅವರ ಹೆಂಡತಿ ಸಿಟ್ಟು ಮಾಡಿಕೊಂಡರು.

     'ಅಲ್ದೇ, ಅದು ಕುಷಾಲೀಗೆ ಕರಿಯೂದು. ಹೆಸರು ಕರೆಕ್ಟು ದೇವರದ್ದೇ ಇಟ್ಟೀತ್. ನೀನೊಬ್ಬಳು ಬೇಜಾರು ಮಾಡ್ಕಂಬೇಡ,' ನನಗೆ ಸಮಜಾಯಿಷಿ ಹೇಳಿ, ಹೆಂಡತಿಗೂ ಸಮಾಧಾನ ಮಾಡತೊಡಗಿದರು. ಮುಂದಿನ ಪಯಣ ಒಟ್ಟು ಎರಡೂವರೆ ದಿನ ಭಾರೀ ಖುಷಿಯಲ್ಲೇ ಸಾಗಿತು.

     ಮುಂದೆ ಒಂದೆರಡು ವರ್ಷಗಳ ನಂತರ ಶಂಕರ್ ರೋಡಲ್ಲಿ ಯಾವದೋ ಸಮಾರಂಭದ ಕಾರಣ ನಡಕೊಂಡು ಹೋಗುತ್ತಿದ್ದೆವು. ಧಡಕ್ಕನೆ ಒಬ್ಬ ಸ್ಕೂಟರ್ ಸವಾರ ಎದುರು ಬ್ರೇಕು ಹಾಕಿ 'ಹೋಯ್ ನಮಸ್ಕಾರ, ಬೇಂಕಿನವರಿಗೆ ಗುರ್ತ ಸಿಕ್ತಾ?' ಎಂದರು.

     'ಓಹೋ, ತಾಜ್ ಹೋಟೆಲಿನವರು! ಗುರುತು ಸಿಗದೆ? ಆರಾಮಿದ್ದೀರಾ?'

     ಒಂದೈದು ನಿಮಿಷ ಸುಖಕಷ್ಟ ಮಾತಾಡಿ ಸ್ಕೂಟರ್ ಚಾಲೂ ಮಾಡಿದರು.

     ಸುಮಾರು ಮುವತ್ತನಾಲಕ್ಕು ಮಳೆಗಾಲ ಕಳೆದವು. ಜೀವನದ ಪಯಣದಲ್ಲಿ ಅಲ್ಲಲ್ಲಿ ಎದುರಾದವರ ನೆನಪು ಮೆಮೊರಿ ಚಿಪ್ ನಲ್ಲಿ ಸ್ಟೋರ್ ಆಗಿದ್ದು, ಇವತ್ತು ಬಟನ್ ಒತ್ತಿದಾಗ ಒಬ್ಬರ ಕಥೆ ಓಪನ್ ಆಯಿತು.

ವೃತ್ತಿಯ ಮೇಲಿನ ಗೌರವ-Dignity of labor.

     ಸರ್ವೇ ಸಾಮಾನ್ಯ ಸಣ್ಣಸಣ್ಣ ಪ್ರಬಂಧ ಬರಿಯೂದು ನಾನು. ಇದು ಒಂಚೂರು ಉದ್ದವುಂಟು, ಪುರಸತ್ತು ಮಾಡಿಕೊಂಡು ಓದಬೇಕಾಗಿ ಅರಿಕೆ....

     ಅರುವತ್ತೊಂಭತ್ತರ ಇಸವಿಯಂದು ಹದಿನಾಲ್ಕು ಬೇಂಕುಗಳ ರಾಷ್ಟ್ರೀಕರಣವಾಯಿತು. ಅಂತೆಯೇ ದೇಶದಲ್ಲಿ ಬೇಂಕುಗಳ ಜಾಲ ಬಹುಬೇಗನೇ ವಿಸ್ತಾರಗೊಳ್ಳಲು ಶುರುವಾಯಿತು. ರಾಷ್ಟ್ರೀಕರಣದ ರಾಜಕೀಯ ಏನೇ ಇರಲಿ, ಒಂದು ಎಕ್ಸ್ ಕ್ಲೂಸಿವ್ ವರ್ಗಕ್ಕೆ ಸೀಮಿತವಾದ ಬೇಂಕಿಂಗ್ ಸೌಲಭ್ಯವು ಜನಸಾಮಾನ್ಯರಿಗೂ ತಲುಪಲಾರಂಭಿಸಿತು.👌👌ಸರಕಾರದ ಸಾಮಾಜಿಕ ನ್ಯಾಯವ್ಯವಸ್ಥೆ ಒಂದು ಅಂಗವಾಗಿಯೂ-ಸೋಷಿಯಲ್ ಜಸ್ಟಿಸ್ ಸಿಸ್ಟಮ್- ಇದನ್ನು ಪರಿಗಣಿಸಬಹುದು, ಹೀಗೆಂದು ನಮ್ಮ ಟ್ರೇನಿಂಗ್ ಸಮಯದಲ್ಲಿ ಕೇಳಿದ ನೆನಪು.

     ಸಿಂಡಿಕೇಟ್ ಬೇಂಕು ಎಲ್ಲರಿಗೂ ತಿಳಿದಿರುವಂತೆ ಆದ್ಯತಾರಂಗ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಪರಿಕಲ್ಪಿಸಿ ಅನುಷ್ಠಾನಕ್ಕೆ ತರುವಲ್ಲಿ ಮುಂಚೂಣಿಯಲ್ಲಿದ್ದ ಬೇಂಕು. ಕೃಷಿಗೆ ಪ್ರಾಧಾನ್ಯತೆ ನೀಡಿದ ಮೊದಲ ವಾಣಿಜ್ಯ ಬೇಂಕು ನಮ್ಮದು.... ಇರಲಿ, ದೇಶದಲ್ಲಿ ಬೇಂಕಿಂಗ್ ಜಾಲ ಹಬ್ಬಿದಂತೆ ಮಣಿಪಾಲ ಹೆಡ್ ಆಫೀಸಿನಲ್ಲೂ ಕೆಲಸ ಕಾರ್ಯಗಳ ಒತ್ತಡ ಬಲವಾಯಿತು, ಡಿಪಾರ್ಟುಮೆಂಟುಗಳು ಹೆಚ್ಚಿದವು ಅಂತೆಯೇ ಸಿಬಂದಿವರ್ಗವೂ ಹೆಚ್ಚಿತು.

     ಆ ಸಮಯದಲ್ಲಿ ದೇವರ ಹಾಗೂ ಕೇ ಕೇ ಪೈಯವರ ಕೃಪೆಯಿಂದ ನನಗೂ ಬೇಂಕ್ ಜೋಬ್ ಆಯಿತು. ಪ್ರಿಮೈಸಸ್ ಡಿಪಾರ್ಟ್ ಮೆಂಟಿನಲ್ಲಿ ಹೆಡ್ ಆಫೀಸಿನ ಮೇಂಟೆನೆನ್ಸ್ ನನ್ನ ಜಬಾದಾರಿ. 'ನಮ್ಮ ಸೆಕ್ಷನ್ನಿನಲ್ಲಿ ಇಬ್ಬರ ನೇಮಕಾತಿಯಾಗಿದೆ, ಕೂಡಲೇ ನಮಗೆ ಎರಡು ಮೇಜು+ಕುರ್ಚಿ+ಒಂದು ಕಪಾಟುಗಳನ್ನು ಕೂಡಲೇ ಸಪ್ಲೈ ಮಾಡಿರಿ' ಎಂಬ ರಿಕ್ವೆಸ್ಟ್ ಒಂದು ಆಫೀಸಿನಿಂದ ಬಂದಿತು. ಮೇಜು ಖುರ್ಚಿಗಳ ವ್ಯವಸ್ಥೆಯಾಯಿತು, ಕಬ್ಬಿಣದ ಕಪಾಟು ಎಲ್ಲಿ ಇಡಿಸಲಿ? ಎಂದು ಅದರ ಮುಖ್ಯಸ್ಥರ ಬಳಿ ಹೋಗಿ ವಿನಯದಿಂದ ಕೇಳಿದೆ. ಅವರು ಸ್ವಲ್ಪ ಕುಶಾಲು-ಹಾಸ್ಯಪ್ರವೃತ್ತಿಯ ಎಕ್ಸಿಕ್ಯೂಟಿವ್, 'ಪಳೇ ಚೆರ್ಡಾ, ಓ ಹಾಂಗಾ ಥೊಡೋ ಖಾಲಿ ಜಾಗೊ ಆಸ್ಸ, ಹಾಣು ದವರಿ' ತನ್ನ ಬೋಳು ತಲೆಯನ್ನು ಸವರಿಕೊಳ್ಳುತ್ತ ನಕ್ಕರು. ನಾನು ನೌಕರಿಗೆ ಸೇರಿ ಹೆಚ್ಚು ಸಮಯವಾಗಿರಲಿಲ್ಲ, ಏನು ಜವಾಬು ನೀಡಲೆಂದು ತಡಕಾಡಲಾರಂಭಿಸಿದೆ....

     ಆದರೆ ಈ ಕಪಾಟು ಸಪ್ಲೈ ವಿಚಾರ ತುಸು ಗಂಭೀರವಾಯಿತು. ಕೆಲಸದ ಪ್ರಮಾಣ ದ್ವಿಗುಣವಾಯಿತು, ಕಪಾಟು ಕೊಡಿ ಕಪಾಟು ಕೊಡಿ ಎಂಬ ಇಂಡೆಂಟುಗಳು ಹೆಚ್ಚಾದವು. ಕಪಾಟು ಇಡಲು ಸ್ಥಳಾವಕಾಶವಿಲ್ಲದ ಸಮಸ್ಯೆ ಎದುರಾಯಿತು.

     ತುಂಬಾ ಹಳತಾದ, ಅವಶ್ಯವಲ್ಲದ ಕಾಗದಪತ್ರಗಳನ್ನು ವಿಂಗಡಿಸಿ ಅವುಗಳಿಗೆಂದೇ ನಿಯುಕ್ತಿಗೊಳಿಸಿದ ರೆಕಾರ್ಡ್ ಸೆಕ್ಷನ್ ಗಳಲ್ಲಿ ಒಯ್ದು ಕ್ರಮ ಪ್ರಕಾರ ಪ್ರತೀ ಫೈಲು, ರಿಕಾರ್ಡು ಅಥವಾ ಲೆಡ್ಜರುಗಳಲ್ಲಿನ ವ್ಯವಹಾರ ಮುಗಿದ ಇಂತಿಷ್ಟು ವರ್ಷಗಳ ತನಕ ರೆಕಾರ್ಡು ರೂಮಲ್ಲಿ ಇಡಬೇಕು. ಆ ರೀತಿ ರೆಕಾರ್ಡ್ಸ್ ಮೇಂಟೈನ್ ಮಾಡಲು ಸೂಕ್ತ ನಿಯಮಗಳೂ ಇವೆ, ಮತ್ತದಕ್ಕೆ ಅದರದ್ದೇ ಮಹತ್ವವಿದೆ.

     ಇಂತಹ ಕೆಲಸಗಳನ್ನು ಆಫೀಸುಗಳಲ್ಲಿ ಅಥವಾ ಬ್ರಾಂಚುಗಳಲ್ಲಿ ಉಪೇಕ್ಷೆ ಮಾಡುವುದೇ ಜಾಸ್ತಿ. ಯಾವುದೇ ಮಜ ಇಲ್ಲ, ಮೈ ಕೈ ಬಟ್ಟೆ ಕೊಳಕಾಗುತ್ತದೆ, ನಮಗೆ ಹೇಳಿಸಿದ ಜಾಬ್ ಅಲ್ಲ ಇತ್ಯಾದಿ ಇತ್ಯಾದಿ ಅನೇಕ ಸಬೂಬುಗಳಿಂದಾಗಿ ಇದು ಬಾಕಿಯಾಗಿರುತ್ತದೆ.

     ನಮ್ಮ ಪೀ ಎಮ್ ಡೀ ಯವರ ಒತ್ತಡ ಮತ್ತು ಒತ್ತಾಸೆಗಳಿಂದ ಮೊದಮೊದಲು ವಿರೋಧ ಇದ್ದರೂ ಹೆಡ್ ಆಫೀಸಿನ ಎಲ್ಲಾ ಡಿಪಾರ್ಟ್ ಮೆಂಟುಗಳಿಂದ ಅನುಪಯುಕ್ತ, ಹಳೆಯ ಫೈಲುಗಳ ರಾಶಿ ರಾಶಿ ಹೊರ ಬಿದ್ದವು. 'ಅಲ್ಲ ಮಾರ್‍ರೇ ನಮ್ಮ ಕಪಾಟುಗಳಲ್ಲಿ ಈ ನಮುನೀ ಕಜಾವು ಬಿದ್ಕೊಂಡಿತ್ತೆಂದು ನಮಗೇ ಗೊತ್ತಿರ್ಲಿಲ್ಲ! ಓ ದೇವರೇ!!' ಎಂದು ಒಂದು ಸೆಕ್ಷನ್ನಿನ ಮುಖ್ಯಸ್ಥರು ನನ್ನ ಬಳಿ ಉದ್ಘರಿಸಿದ್ದರು. ಈ ಕಾರ್ಯಾಚರಣೆಯಿಂದ ಹೆಡ್ಡಾಫೀಸಿನಲ್ಲಿ ಸುಮಾರು ಹದಿನೈದಕ್ಕಿಂತ ಜಾಸ್ತಿ ಕಪಾಟುಗಳು, ಫೈಲ್ ಕ್ಯಾಬಿನೆಟ್ ಗಳು ಖಾಲಿಯಾಗಿ ಸಿಕ್ಕವು. ನನಗೆ ಹೆಮ್ಮೆಯೆನಿಸಿತು....

     ನಂತರದ ದಿನಗಳಲ್ಲಿ ನನ್ನ ಡ್ಯೂಟಿ ಬ್ರಾಂಚುಗಳಲ್ಲಿ, ಈ 'ಓಲ್ಡ್ ರೆಕಾರ್ಡ್ಸ್ ಮೇಂಟೇನೆನ್ಸ್' ನನ್ನ ಆಸಕ್ತಿಯ ವಿಷಯಗಳಲ್ಲಿ ಒಂದಾಯಿತು... ಎಂಭತ್ತರ ಉತ್ತರಾರ್ಧದಲ್ಲಿ ಆಫೀಸರಾಗಿ ಭಡ್ತಿ ಸಿಕ್ಕು ದೆಹಲಿ ಜೀವನ, ವೃತ್ತಿ ಆರಂಭವಾಯಿತು....

     'ಮಾನ್ಯವರ್, ಮುಝೆ ಆಪಕೇ ಅಧೀನ್ ಕರ್ತವ್ಯ ನಿಭಾನೇ ಕಾ ಆದೇಶ್ ಮಿಲಾ ಹೈ, ಪೆಹಲೇ ರಾಮ್ ರಾಮ್ ಕಹಿಯೇ, ಹಸ್ತಲಾಘವ್ ಕೀಜಿಯೇ, ಅಥಃ ಆಜಕಾ ಕಾಮ್ ಬತಾಯಿಯೇ'  ಠಾಕುರ್‌ ಹೆಸರಿನ ಕ್ಲರ್ಕ್ ನನ್ನ ಸೆಕ್ಷನ್ ಗೆ ಬಂದ.

     'ಅರೇ ಬರ್ಕುರ್ದಾರ್, ಢಂಗ್ ಸೇ ಹಿಂದಿ ಮೇ ಕಹೋ ನಾ, ಯಹ ತೇರೇ ಸಂಸ್ಕೃತ್ ಮೇರೆ ಪಲ್ಲೆ ನಂಹೀ ಪಡತೀ' ಅಂದೆ.

     ಈತನದ್ದು ಹೆಸರು-ಸರನೇಮು-ಮಾತ್ರ 'ಠಾಕೂರ್'. ಯಾವುದೇ ಅಹಂಕಾರವಾಗಲೀ, ಅಸಡ್ಡೆಯಾಗಲೀ ದರ್ಪವಾಗಲೀ ಇಲ್ಲದ ಸಜ್ಜನ ಸಾಧು ಮನುಷ್ಯ. ಯುವ ಪ್ರಾಯ, ಕೆಲಸ ಮಾಡುವ, ಕಲಿಯುವ ಹುಮ್ಮಸ್ಸಿನ ಹುಡುಗ. ಯಾವಾಗಲೂ ಹಸನ್ಮುಖದ ಸ್ಟಾಫು. ನನಗೂ ಆತನಿಗೂ ಬಹುಬೇಗ ಸಲಿಗೆ ಬೆಳೆಯಿತು.

     'ನಾಯಕ್ ಸರ್, ಯಹ ರೋಜ಼್ ರೋಜ಼್ ಡೆಬಿಟ್, ಕ್ರೆಡಿಟ್, ಪಿಗ್ಮಿ ಎಂಟ್ರೀ ಇನಕೇ ಅಲಾವಾ ಬ್ರಾಂಚ್ ಮೇ ಕೋಯೀ ಔರ್ ಕಾಮ್ ನಂಹೀ ಕ್ಯಾ?... ಈ ದಿನ ನಿತ್ಯದ ಏಕತಾನತೆಯ ಕೆಲಸಗಳಿಂದ ರೋಸಿ ಹೋಗಿದ್ದೇನೆ...'

     ನಾನು ಇದೇ ಗಳಿಗೆಯ ನಿರೀಕ್ಷೆಯಲ್ಲಿದ್ದೆ, 'ಇದೆಯಲ್ಲಾ! ನಾನು ಹೇಳಿದ ಹಾಗೆ ಕೇಳುವುದಾದರೆ ಹೇಳಿ ಕೊಡುತ್ತೇನೆ, ಬಾ' ಎಂದು ಆತನನ್ನು ಹಳೇ ರಿಕಾರ್ಡುಗಳ ರೂಮಿಗೆ ಕರಕೊಂಡು 'ನಾಳೆ ಬರುವಾಗ ಒಂದು ಜೋಡಿ ಹಳೆಯ ಡ್ರೆಸ್ ತಾ, ಇಲ್ಲಿನ ಹಳೆಯ ಕಡತಗಳ ರಾಶಿಯನ್ನು ನಿಯಮಗಳ ಪ್ರಕಾರ ಜೋಡಿಸಿಡಬೇಕು, ನಿನ್ನೊಡನೆ ನಾನೂ ಬರುತ್ತೇನೆ. ಎರಡು ತಿಂಗಳ ಟೈಮು ಉಂಟು, ಇದರ ಮಹತ್ವ ನಿನಗೇ ಮುಂದಿನ ದಿನಗಳಲ್ಲಿ ತಿಳೀತದೆ.'

     ಬಹು ಖುಷಿಯಿಂದ ಒಪ್ಪಿಕೊಂಡ. ನಾನು, ಠಾಕುರ್ ಹಾಗೂ ಅಶೋಕ ಎಂಬ ಟೆಂಪರರಿ ಅಟೆಂಡರ್ ಮೇಲೆ ಮಾಳಿಗೆಯಲ್ಲಿನ ಕೊಠಡಿಯಲ್ಲಿ ಸ್ಥಾಪಿತರಾದೆವು.

     'ಅರೇ ಛೋಟೇಮಿಯಾ, ನಾನು ಹಿಂದೀ ಪಿಕ್ಚರುಗಳಲ್ಲಿ ನೋಡಿದ ಪ್ರಕಾರ ಠಾಕೂರ್ ಅಂದರೆ ಒಂದು ತೆರನ ರುಸ್ತುಮ್ ಇದ್ದ ಹಾಗೆ, ಮುಖ ತುಂಬ ಗಲ್ಲಿ ಮೀಸೆ, ಕೈಯಲ್ಲಿ ಲಾಠಿ, ಮನೆಯ ಚಾವಡಿಯಲ್ಲಿ ಒಡ್ಡೋಲಗ, ಹಿಂದೆ ಪೀಕದಾನಿ ಹಿಡಕೊಂಡು ಒಬ್ಬ ತೈನಾತಿ, ಖುರ್ಚಿಯ ಬಗಲಲ್ಲಿ ಗುಂಡು ತುಂಬಿದ ಕೋವಿ!!....... ಈ ರೀತಿಯ ಚಿತ್ರಣ ಮೂಡುತ್ತದೆ!! ನೀನು ನೋಡಿದರೆ ಹೆಸರಿಗೆ ಮಾತ್ರ 'ಠಾಕುರ್' ಕೋವಿ ಬಿಡು, ಒಂದು ಬೆತ್ತ ಸಹ ಇಲ್ಲ........'  ಸುಮ್ಮನೆ ಛೇಡಿಸಿದೆ.

     'ಅರೇ ನಾಯಕ್ ಜೀ, ನೀವು ಸುಮ್ಮನೆ ಉಂಗಲೀ ಮಾಡುತ್ತಿದ್ದೀರಿ, ಠಾಕೂರಗಿರಿ ಏನೂ ಇಲ್ಲ, ಮರ್ಯಾದೆಯಿಂದ ಊರಲ್ಲಿ ಜೀವಿಸುವುದೇ ಪ್ರಯಾಸಕರವಾಗಿದೆ. ಅದೆಲ್ಲ ಇರಲಿ, ಒಂದು ಬರ್ಕಲಿ ಈಚೆ ಬಿಸಾಡಿ.....' ಕೆಲಸ ಮುಂದುವರೆಸಿದ.

     'ಒಂದು ಕತೆ ಕೇಳು, ಅಧ್ಯಕ್ಷ ಅಬ್ರಹಾಮ್ ಲಿಂಕನ್ ರನ್ನು ಭೆಟ್ಟಿಯಾಗಲು ವೈಟ್ ಹೌಸಿಗೆ ಒಬ್ಬ ಸೆನೇಟರ್ ಬಂದ, ಆಗ ಈ ಅಧ್ಯಕ್ಷ ರೂಮಲ್ಲಿ ಕೂತು ತನ್ನ ಶೂಗಳ ಪಾಲಿಷ್ ಚಮಕಾಯಿಸುತ್ತಿದ್ದರು. ಈ ಸೆನೇಟರಿಗೆ ಅದನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅರೇ ಸರ್! ನಿಮ್ಮ ಶೂಗಳನ್ನು ನೀವೇ ಪಾಲಿಷ್ ಮಾಡುವುದೇ? ಎಂದು ಉದ್ಘರಿಸಿದ. 'ಹೌದು, ನೀನು ಯಾರ ಶೂಗಳನ್ನು ಪಾಲಿಷ್ ಮಾಡುತ್ತೀ?' ಅಧ್ಯಕ್ಷ ಕೆಣಕಿದರು.....

     'ಕತೆಯ ತಾತ್ಪರ್ಯವೆಂದರೆ ಯಾವುದೇ ಕೆಲಸವಿರಲಿ ಶೃದ್ಧೆಯಿಂದ ಮಾಡಬೇಕು, ಯಾವ ಕೆಲಸವನ್ನೂ ಹೀನೈಸಿಕೆಯಿಂದ ನೋಡಬಾರದು. ತಿಳಿಯಿತೇ'

     'ಆಪನೇ ತೋ ಬಡೀ ಅಚ್ಛೀ ಬಾತ್ ಬತಲಾಯೀ, ಆಪಕಾ ಧನ್ಯವಾದ್.' ಠಾಕುರಿಗೆ ಖುಷಿಯಾಯಿತು. ತಾನು ಮಾಡುತ್ತಿರುವ ಕೆಲಸದ ಕುರಿತು ಒಂದಿಬ್ಬರು ದೋಸ್ತಿಗಳು ತಮಾಷೆ ಮಾಡಿದ್ದುದರಿಂದ ಖಿನ್ನನಾಗಿದ್ದ, ಈಗ ಸರಿಯಾದ....

     'ಅಶೋಕ್, ಸ್ವಲ್ಪ ಬೋರ್ ಆಗುತ್ತಾ ಇದೆ, ಒಂದು ನಿನ್ನ ಪಸಂದೀಲಾ ಗಾನಾ ಹಾಡು ನೋಡುವ.....' ಆತನಿಗೂ ಉಮೇದು ಬಂತು, ಹಾಡಲಾರಂಭಿಸಿದ... 'ಆವಾಜ಼್ ದೇ, ಕಹಾಂ ಹೈ? ದುನಿಯಾ ಮೇರೀ ಜವಾಂ ಹೈ......'

     'ಇಲ್ಲಿ ಏನು ನಡೀತಾ ಉಂಟು ನಾಯಕರೇ?' ನಮ್ಮ ಡಿವಿಜನಲ್ ಮೆನೇಜರ್ - ಡಿಸೋಜಾ ಎಂದವರ ಹೆಸರಿರಬೇಕು - ಬಾಗಿಲಲ್ಲಿ ನಿಂತು ಆವಾಜು ಹಾಕಿದರು.

     'ನಾವು ಮೂವರೂ ಎದ್ದು ನಿಂತೆವು, 'ಸರ್ ಓಲ್ಡ್ ರಿಕಾರ್ಡ್ಸ್ ಸೆಗ್ರಿಗೇಷನ್ ಜಾತ್ತ ಆಸ್ಸ, ಚೆರಕೇಂಕ ಬೋರ್ ಜಾಯಿನಾಶೀಂ ಥೊಡೇಂ ಎಂಟರ್ ಟೇನ್ ಮೆಂಟ್...'

     'ಗುಡ್ ಗುಡ್, ಯೂ ಆರ್ ಡೂಯಿಂಗ್ ವೆಲ್.' ಮರುದಿನದ ಟಪಾಲಿನಲ್ಲಿ ಈತನ ಕರ್ತವ್ಯದಲ್ಲಿನ ತನ್ಮಯತೆ ಹಾಗೂ ನಿಷ್ಠೆಗಳನ್ನು ಪ್ರಶಂಸಿಸಿ ಡಿವಿಜನಲ್ ಆಫೀಸಿನಿಂದ ಒಂದು ಪ್ರಶಂಸಾಪತ್ರ ಠಾಕೂರ್ ಹೆಸರಲ್ಲಿ ಬಂತು. ಠಾಕುರನ ಖುಷಿಗೆ ಎಲ್ಲೆಯೇ ಇರಲಿಲ್ಲ...

     ಇದು ಯಾವುದೇ ಹಾಸ್ಯ, ವಿಡಂಬನೆಯ ಪ್ರಬಂಧವಲ್ಲ. ಸಾಮಾನ್ಯವಾಗಿ ನಮ್ಮಲ್ಲಿ ಆತ ಕೀಳು ತಾನು ಮೇಲು, ಈ ಕೆಲಸ ತನಗೆ ಹೇಳಿಸಿದ್ದಲ್ಲ ಎಂಬ ತಾರತಮ್ಯ ಇರುತ್ತದೆ. ಒಂದು ಕೆಲಸ ಕೀಳು ಎಂದಾದರೆ ಅದು ಸಂಸ್ಥೆಯ ನಿಯಮಾವಳಿಯಲ್ಲಿ ಏಕೆ ಇರುತ್ತದೆ? ಯಾವುದೇ ಕೆಲಸ ಕೀಳಲ್ಲ, ಕೆಲಸ ತಪ್ಪಿಸಿ ತಿರುಗುವುದು ಅಲ್ಪತನ. ಹಾಗಾಗಿ ಈ ನೆನಪನ್ನು ಕೆದಕಿದ್ದೇನೆ.