Wednesday, June 17, 2020

ಇವನು ನನ್ನ ತಮ್ಮ...


     ಇವನು ನನ್ನ ತಮ್ಮ. ನಾವು ಹೈಸ್ಕೂಲಿಗೆ ಹೋಗುತ್ತಿರುವಾಗ, ಬಹುಶಃ ಫಾರೆಸ್ಟಿನವರೋ ಯಾರೋ ಸಾಲಾಗಿ ನೆಟ್ಟವರಲ್ಲಿ ಇವನೂ ಒಬ್ಬ. ಆಗ ಎದುರು ಇರುವ ರಸ್ತೆ ಈಗಿನಷ್ಟು ಅಗಲವಿರಲಿಲ್ಲ, ವನರಾಜಿ ರಾರಾಜಿಸುತ್ತಿದ್ದ ಸುಭಿಕ್ಷ ಕಾಲ! ನಾವು ಮಧ್ಯಾಹ್ನ ಊಟ ಮುಗಿಸಿ ಸರಭರನೆ ಹೊರಟು ಸಿಗುವ 25 ನಿಮಿಷಗಳಲ್ಲಿ ಈ ತಂಪಾದ ನೇರಾದ ಉಡುಪಿ ರಸ್ತೆಯಲ್ಲಿ ಆಟ, ಓಟ, ಸೈಕಲ್ ಓಡಿಸುವುದು ಮುಂತಾದವುಗಳಲ್ಲಿ ಬಿಜಿ಼ಯಾಗುತ್ತಿದ್ದೆವು. ಆಗಲೇ ಒಂದು ದಿನ ನನಗೆ ಇವನ ಮೇಲೆ ಮೋಹ ಹುಟ್ಟಿತ್ತು. ಸಪೂರ ನೇರ ಗಿಡವಾಗಿದ್ದ. 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ' ಎಂದು ಆಗ ಯಾರೋ ದೋಸ್ತಿ ಗಾದೆಮಾತು ಹೇಳಿ ತನ್ನ ಜ್ಞಾನವನ್ನು ಪ್ರದರ್ಶಿಸಿದ. 'ಇಂವ ಮರವಾಗಿ ಬಗ್ಗಲಿಕ್ಕಲ್ಲ, ಬದಲಿಗೆ ನೇರವಾಗಿ ಉನ್ನತಕ್ಕೇರುತ್ತಾನೆ ನೋಡು' ಎಂದಿದ್ದೆ.
 
ಹೈಸ್ಕೂಲಿನಲ್ಲಿ ವಿಜ್ಞಾನಕ್ಕೆ ಹಂದೆಮಾಸ್ಟ್ರು - ಸಾಯನ್ಸ್ ಮಾಸ್ಟರು ಎಂದು ಹೈಸ್ಕೂಲಲ್ಲಿ ಹಾಗೂ ಊರಲ್ಲೂ ಫೇಮಸ್ಸು. ಗಿಡ ಮರಗಳಿಗೆ ವಯಸ್ಸಾಗುವುದನ್ನು ಕಂಡುಹಿಡಿಯಲು ಸುಲಭೋಪಾಯವಿದೆ, ಪ್ರತಿ ವರ್ಷಕ್ಕೆ ಒಂದರಂತೆ ಕಾಂಡದಲ್ಲಿ ವರ್ತುಲಗಳು - ರಿಂಗ್ - ಬೆಳೆಯುತ್ತವೆ. ಎಷ್ಟು ರಿಂಗುಗಳು ಇವೆಯೋ ಆ ಮರಕ್ಕೆ ಅಷ್ಟು ವರ್ಷ ಪ್ರಾಯ ಆಯಿತು ಅಂತ ಲೆಕ್ಕ.
 
 ಮರುದಿನ ನಮ್ಮ ಗೆಳೆಯನೊಬ್ಬ ಕ್ಲಾಸಿಗೆ ಬರುವಾಗ ಕತ್ತಿಯೊಂದನ್ನು ತಂದಿದ್ದ.

”ಕತ್ತಿ ಯಾಕೆ ಮಾರಾಯ!”

”ಮಾಸ್ಟ್ರು ಹೇಳೀರಲೆ ಗಡೆ, ಮರದ ಪ್ರಾಯ ಎಷ್ಟು ಅಂತ ತನಿಖೆ ಮಾಡುವ ಅಂತ ಕತ್ತಿ ಹಿಡ್ಕಬಂದಿದೆ. ನೀವು ಸುಮ್ನೆ ಬನಿ.” ಅಂತೆಯೇ ಕಾಡಿನಲ್ಲಿ ಒಂದು ಮರ ಸಿಲೆಕ್ಟ್ ಮಾಡಿ ಇನ್ನೇನು ಕತ್ತಿ ಬೀಸಬೇಕು, ಒಂದು ಡೌಟು ಬಂತು. 

”ಅಲ್ಲ, ಈಗ ಪ್ರಾಯ ತಿಳಿಯುವ ಗಡಿಬಿಡಿಯಲ್ಲಿ ಮರ ಕಡಿದರೆ ಅದು ಸಾಯುತ್ತದಲ್ಲ!! ನಾವದರ ಪ್ರಾಯ ಕಂಡುಹಿಡಿದು ಏನು ಸಾರ್ಥಕವಾಯಿತು?”

”ಹೌದಲ್ಲ! ಕಾಂಡದ ಬದಲು ಗೆಲ್ಲು ಕಡಿದರೆ ಹೇಗೆ?”

”ಕಾಂಡ ಮೊದಲೇ ಇರುತ್ತದೆ, ಗೆಲ್ಲುಗಳು ಬರೂದು ನಂತರದ ದಿನಗಳಲ್ಲಿ ತಾನೇ?” ಇನ್ನೊಬ್ಬನ ಸಂಶಯ. ಕತ್ತಿ ತಂದ ವಿಜ್ಞಾನಿಗೆ ಬೇಸರ ಸಿಟ್ಟು ಬಂದು ಕತ್ತಿಯನ್ನು ಬಿಸಾಡಿದ. 

”ಇರಲಿ ಇವನೇ, ವನಮಹೋಸ್ತವ ಮಾಡೂದು ನಾವೆ, ಈಗ ನಾವೇ ಗಿಡ ಕಡಿಯೂದೇಕೆ?” ಮತ್ತೊಬ್ಬ ಸಮಾಧಾನ ಮಾಡಿದ. ಒಂದು ಮರ ಆದಿನ ಉಳಿಯಿತು.
 
     ನಂತರದ ಯವ್ವನದ ದಿನಗಳಲ್ಲಿ ಹೆಬ್ರಿಯಲ್ಲೇ ನೌಕರಿಯಿದ್ದು, ಬೇಂಕು ಮುಗಿದ ನಂತರ ಸಂಜೆಯ ವಾಕಿಂಗಿಗೆ ಗೆಳೆಯ ರೊಡನೆ ಹೋಗುತ್ತಿದ್ದಾಗ ಇವನೂ ಕೊಂಚ ದಪ್ಪಗಾಗಿದ್ದು ಎತ್ತರಕ್ಕೇರಿದ್ದುದನ್ನು ಕಂಡು ನನ್ನೊಳಗೇ ಖುಷಿಪಡುತ್ತಿದ್ದೆ. ಎದುರಿನ ರಸ್ತೆಯು ಕಾಲಾಂತರದಲ್ಲಿ ಅವಶ್ಯಕತೆಗಳಿಗನುಸಾರ ಅಗಲವಾಗುತ್ತಿದ್ದುದು ಸಣ್ಣಗೇ ಕಿರಿಕಿರಿಯೆನಿಸುತ್ತಿತ್ತು. ರಸ್ತೆಯ ಅಗಲೀಕರಣವೆಂಬ ಡೆಮೊಕ್ಲೀಸನ ಖಡ್ಗವನ್ನು ಎಂಭತ್ತರ ದಶಕದಲ್ಲಿ ಮೊತ್ತಮೊದಲು ಇವನ ಮೇಲೆ ನೇತಾಡಿಸಿದರು.... ಈ ನಡುವೆ ನಿಂತ ನೀರಿನಂತಹ ಊರ ಜೀವನದ ಸಾಕ್ಷಿಯಾಗಿ ಇವನು ಬೆಳೆಯಲಾರಂಭಿಸಿದ....
 
1971ರಲ್ಲಿ ನನಗೆ ಸಿಂಡಿಕೇಟಿನಲ್ಲಿ ಜಾಬ್ ಆಯಿತು. ಕಲಿತದ್ದು ಮೆಕಾನಿಕಲ್ ನಲ್ಲಿ ಡಿಪ್ಲೋಮಾ, ಕೇ ಪಿ ಟಿ ಮಂಗಳೂರಲ್ಲಿ. ಆದರೆ ನಮ್ಮ ಅದೃಷ್ಟದ ಬಾಗಿಲು ಪೂರ್ತಿ ತೆರೆದಿರಲಿಲ್ಲ. ಕಲಿತ ವಿದ್ಯೆಯ ಲೈನಲ್ಲಿ ಯಾವುದೇ ನೌಕರಿಯಾಗಲಿಲ್ಲ. ಬಹಳ ಬೇಸರ ದು:ಖದಲ್ಲಿರುವ ಸಮಯದಲ್ಲಿ ನನ್ನ ಗೆಳೆಯ ವೆಂಕಟೇಶ ಕಾಮತನಿಗೆ ನೌಕರಿಯಾಯಿತು. ತನಗೆ ಜಾಬ್ ಸಿಕ್ಕಿದ ಸಂತಸದ ಜತೆಗೆ ನನ್ನ ನಿರುದ್ಯೋಗ ಪರ್ವ ಮುಂದುವರೆದ ಖತಿ ಎರಡನ್ನೂ ಹೊತ್ತುಕೊಂಡು ಆತ ಕೆ ಜಿ ಎಫ್ ನತ್ತ ಹೊರಟು ಬಿ ಇ ಎಮ್ ಎಲ್ ನಲ್ಲಿ ನೌಕರಿ ಸೇರಿಕೊಂಡ. ಸಂಜೆ ನಮ್ಮ ಗೆಳೆಯರ ಗುಂಪಿನೊಡನೆ ವಾಕಿಂಗ್ ಹೋಗುವಾಗ ಈ ನನ್ನ ತಮ್ಮ ಸಹ ನಮ್ಮೆಲ್ಲರ ಕುರಿತು ಸಹಾನುಭೂತಿ ತೋರುತ್ತಿದ್ದ. ತಾನೂ ನಿಂತಲ್ಲೇ ತನ್ನ ಬಳಗದವರೊಡನೆ ಗಾಳಿಯಲ್ಲಿ ತೂಗುತ್ತಿದ್ದ. 

ಹೌದನಾ ನಿನ್ನ ಕೆಲಸದ ವಿಚಾರ ಎಲ್ಲಿಯವರೆಗೆ ಬಂತು?’’ ನಮ್ಮ ಗಿಂಡಮಾಮ-ಪುರುಷೋತ್ತಮ ಮಲ್ಯರು- ವಿಚಾರಿಸಿದರು.

”ಸಧ್ಯಕ್ಕೆ ಎಂತದೂ ಆಗಿಲ್ಲ.”

”ಒಂದು ಕೆಲಸ ಮಾಡುವಾ. ಈಗ ಸಿಂಡಿಕೇಟಿನಲ್ಲಿ ಭಾರೀ ಡಿಮಾಂಡು ಉಂಟು. ಇವತ್ತು ಕಸ್ಟೋಡಿಯನ್ ಕೆ ಕೆ ಪೈ ಯವರೊಡನೆ ಮಾತಾಡಿ ಬರುವಾ. ನನಗೆ ಅವರ ಒಳ್ಳೇ ಗುರ್ತ ಉಂಟು. ದೇವರು ಕಣ್ಣು ಬಿಟ್ಟರೆ ಏನಾದರೂ ಆಗಬಹುದು.” 

1970ರ ಮೇ ತಿಂಗಳ ಕಡುಬೇಸಿಗೆಯ ಒಂದು ಮಧ್ಯರಾತ್ರಿ ಸುಮಾರು ಮೂರು ಘಂಟೆಯ ಹೊತ್ತಿನಲ್ಲಿ ಮನೆಯವರೆಲ್ಲರೂ ಗಾಢ ನಿದ್ದೆಯಲ್ಲಿರುವಾಗ ನಮ್ಮ ಮುಳಿಮಾಡಿನ ಮನೆಯು ಭಗ್ಗನೆ ಬೆಂಕಿಗಾಹುತಿಯಾಯಿತು. ಬ್ರಹ್ಮಾವರದಿಂದ ಬರುತ್ತಿದ್ದ ಒಬ್ಬ ಲಾರಿ ಡ್ರೈವರನಿಗೆ ದೂರದಿಂದ ಈ ಬೆಂಕಿಯ ರೌದ್ರಾವತಾರ ಕಂಡು ಜೀವದ ಹಂಗು ತೊರೆದು ಲಾರಿ ಓಡಿಸಿ ಬಂದು ಉರಿಯುತ್ತಿದ್ದ ಮನೆಯಲ್ಲಿ ಮೈಮೇಲೆ ಜ್ಞಾನವಿಲ್ಲದಂತೆ ಮಲಗಿದ್ದ ನಮ್ಮನ್ನೆಲ್ಲ ಎಬ್ಬಿಸಿ ಬದುಕಿಸಿದ. ಪುಣ್ಯಾತ್ಮನವನು. ’ದೇವರು ಆಪತ್ತಿನಲ್ಲಿರುವವರ ಕೈ ಹಿಡಿದು ಪೊರೆಯುತ್ತಾನೆ ನೋಡು. ಯಾವ ಯಾವ ರೂಪಗಳಲ್ಲಿ ಬಂದು ಒದಗುತ್ತಾನೆ ನೋಡು!’ ಎಂದು ನಮ್ಮಮ್ಮ ಆಗಾಗ ನೆನಪಿಸಿಕೊಳ್ಳುತ್ತಿದ್ದರು.
 
ಇದೇ ಸಮಯದ ಒಂದು ದಿನ -ಜುಲೈ ತಿಂಗಳಿರಬೇಕು- ಗಿಂಡಮಾಮನವರು ನನ್ನನ್ನು ಕರಕೊಂಡು ಉಡುಪಿಗೆ ಬಂದರು. ”ನೋಡು ಕೆ ಕೆ ಪೈ ಯವರ ಮನೆಯಲ್ಲಿ ಮಾತಾಡಬೇಕು. ಆಫೀಸಿನಲ್ಲಿ ನಮ್ಮ ಕಷ್ಟ ಸುಖ ವಿಚಾರಿಸಲು ಅವರಿಗೆ ವ್ಯವಧಾನವಿರುವುದಿಲ್ಲ. 

     1975ರಲ್ಲಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಹೇರಿದರು, ಹೆಚ್ಚಿನ ಊರವರು ಇದನ್ನು ವಿರೋಧಿಸಿ ಕ್ಷೋಭೆಗೆ ಒಳಗಾದರು, 1977ರಲ್ಲಿ ಅದೇ ಇಂದಿರಾಗಾಂಧಿಯವರು ಸ್ವತಃ ಸೋತರು. ಎಲ್ಲರಿಗೂ ಸಂತಸ, ಮೂರು ವರುಷಗಳ ವರೆಗೆ ಜನತಾಪಕ್ಷದವರ ನಾಟಕಮಂಡಳಿಯಿತ್ತು, ಪುನಾ ಇಂದಿರಾಗಾಂಧಿಯವರ ಅಬ್ಬರ ಶುರುವಾಯಿತು. ಎಲ್ಲ ಘಟನಾವಳಿಗಳಿಗೆ ಸಾಕ್ಷಿಯಾಗಿ ಇವನು ಬೆಳೆಯುತ್ತಲಿದ್ದ.
 
     ನನ್ನ ನೌಕರಿಯ ದೌಡು ಎಂಭತ್ತನಾಲಕ್ಕರಿಂದ ದೆಹಲಿಗೆ ವರ್ಗವಾದಂತೆ ಆರಂಭವಾಗಿ ದೇಶದ ರಾಜ್ಯದ ಅನೇಕ ನಗರ ಊರುಗಳಲ್ಲಿ ಸುರುವಾದಂತೆ ಈತನ ಸಂಗ ವಿರಳವಾಯಿತು. ರಜಾಕಾಲಗಳಲ್ಲಿ ಮಕ್ಕಳನ್ನು ಕಟ್ಟಿಕೊಂಡು ಬಂದಾಗ ಊರಲ್ಲಿ ಇವನನ್ನು ಭೆಟ್ಟಿಯಾಗಿ ಖುಷಿಪಡುತ್ತಿದ್ದೆ. 'ಏನು ನಾಯಕರೇ, ರಜದಲ್ಲಿ ಬಂದದ್ದಾ? ಅಂದ ಹಾಗೆ ಈಗ ನೀವು ದಿಲ್ಲಿಯಲ್ಲಿ ಇರೂದಲ್ವಾ? ಮೊನ್ನೆ ನಮ್ಮ ಓಕುಡ ಮಾಸ್ಟ್ರು ಹೇಳುತ್ತಿದ್ರು. ನಿಮ್ಮಲ್ಲಿ ಅವರಿಗೆ ಭಾರೀ ಗಮ್ಮತ್ತಾಯಿತಂತೆ. ಇಲ್ಲಿ ರಸ್ತೆ ಬದಿಯಲ್ಲಿ ಒಬ್ಬರೇ ಏನು ಮಾಡ್ತಾ ಇದ್ದೀರಿ?' ಪರಿಚಿತರೊಬ್ಬರು ಒಮ್ಮೆ ಸಂಜೆ ವಿಚಾರಿಸಿದರು. 'ನನ್ನ ತಮ್ಮ , ಗೆಳೆಯ ಹಾಗೂ ಆತ್ಮೀಯನೊಡನೆ ಸ್ವಗತದಲ್ಲಿದ್ದೇನೆ, ಇವರಿಗೆ ಹೇಗೆ ಹೇಳಲೀ' ಎಂಬ ಗೊಂದಲದಲ್ಲಿ ನಾನು ಬಿದ್ದೆ. ಪುಣ್ಯಕ್ಕೆ ಅವರು ಹೆಚ್ಚು ಹೊತ್ತು ನಿಲ್ಲಲಿಲ್ಲ.....
 
     ಊರು ಬೆಳೆಯಿತು. ಗ್ರಾಮವಾಗಿದ್ದ ಹೆಬ್ರಿಯು ಪೇಟೆಯಾಗಿ, ಪಟ್ಟಣವಾಗಿ ಈಗ ತಾಲೋಕು ಕೇಂದ್ರವಾಗಿದೆ. ಹೈಸ್ಕೂಲು ಕಲಿಯುತ್ತಿದ್ದ ಕೇಶವ, ಸಿಂಡಿಕೇಟು ಬೇಂಕಿನ ಸದಸ್ಯನಾಗಿ, ಸಂಸಾರಿಗನಾಗಿ ಏಗುತ್ತ ಇಂದು ತಕ್ಕಮಟ್ಟಿನ ಗೌರವಯುತನಾಗಿರುತ್ತೇನೆ. ಈ ನನ್ನ ಸಹೋದರನೂ ಹೆಬ್ರಿ ಊರಿನ ಎಲ್ಲಾ ಪ್ರಗತಿ, ಉನ್ನತಿ ಅವನತಿಗಳಿಗೂ, ಊರಜನರ ಕಷ್ಟ ಸುಖಗಳಿಗೂ ಸಾಕ್ಷಿಯಾಗಿ ತಾನೂ ಸಹ ಸಾಕಷ್ಟು ಬೆಳೆದಿದ್ದಾನೆ. ಸಾಕಷ್ಟು ದಪ್ಪವೂ ಆಗಿದ್ದಾನೆ. ಜ್ಞಾನಿಯೂ ಆಗಿದ್ದಾನೆ. ಮನುಷ್ಯರ ಬುದ್ಧಿ/ದುರ್ಬುದ್ಧಿ , ಪ್ರೀತಿ/ದ್ವೇಷ , ಆಶೆ/ನಿರಾಶೆ ಮೋಹ, ಮದ, ಮತ್ಸರ, ಕಾಮ ವೈರಾಗ್ಯಗಳಿಗೆ ತತ್ವಜ್ಞಾನಿಯ ತೆರದಲ್ಲಿ ಸಾಕ್ಷೀಭೂತನಾಗಿದ್ದಾನೆ! ಇವನು ನನ್ನ ತಮ್ಮನೆಂದು ಕಂಡು ಪ್ರೀತಿಸಿದ ನಾನು ನಿಜವಾಗಿ ನೋಡಿದರೆ ಇವನೆದುರು ತೀರಾ ಕುಬ್ಜ. ರಾಗ ದ್ವೇಷ ಪ್ರೀತಿ ಕಾಮ ಹಮ್ಮು ಬಿಮ್ಮುಗಳಿಂದ ಆವೃತನಾದ ನಾನು ಅಣ್ಣ ಹೇಗಾದೇನು!! ಕೊಂಚ ಆತ್ಮ ವಿಶ್ಲೇಷಣೆಗೆ ಒಳಗಾದೆ....
 
     ಇವನನ್ನು ಈಗ ಕಂಡಾಗ ಅನೇಕ ಭಾವಗಳು ಹುಟ್ಟುತ್ತವೆ. ಆದರೆ ದೇಶವು ಪ್ರಗತಿಪಥದಲ್ಲಿ ದೌಡಾಯಿಸುತ್ತಿದೆ. ದೇಶಕ್ಕೆ ಒಬ್ಬ ಉನ್ನತ ವ್ಯಕ್ತಿತ್ವದ ಸಮರ್ಥ ನೇತಾರನ ನೇತೃತ್ವ ದೊರಕಿದೆ. ಪ್ರಗತಿಯ ಒಂದು ಭಾಗ ವಿಶಾಲವಾದ ಅಗಲವಾದ ರಸ್ತೆಗಳ ಜಾಲ. ಎಂಭತ್ತರ ದಶಕದಲ್ಲಿ ತೂಗಹಾಕಿದ ಡೆಮೊಕ್ಲೀಸನ ಖಡ್ಗವು ಈಗಲೂ ಇವನ ಮೇಲೆ ಇನ್ನೂ ಛಕಛಕ ಎಂದು ಝಳಪಿಸುತ್ತ ಇದೆ...!!!!


Saturday, January 6, 2018

ದೇಶಹಿತದ ಪಾರಮ್ಯ


ಸ್ವಲ್ಪ ಸಮಯದ ಹಿಂದೆ ಊರಲ್ಲಿ-ಮನೆಯಲ್ಲಿ-ಚರ್ಚಾಕೂಟ ನಡೆದಿತ್ತು. ಯಥಾಪ್ರಕಾರ ದೇಶಭಕ್ತಿ, ಸಂಸ್ಕೃತಿ, ರಾಷ್ಟ್ರ ಇವೆಲ್ಲ ಬಂತು."ನಮ್ಮ ದೇಶದ ಪೂರ್ವ ಇತಿಹಾಸ , ಕತೆ, ಪುರಾಣ ಎಲ್ಲ ಬಹಳ ಶ್ರೇಷ್ಠ. ಆದರೆ ಜನರು ಮಾತ್ರ ಬುರ್ನಾಸು, ಜನರಿಗೆ ಈ  ಹಿಂದಿನಿಂದಲೂ ಭೌಗೋಳಿಕವಾಗಿ ನಮ್ಮ ರಾಷ್ಟ್ರ ಒಂದು ನಾವೆಲ್ಲ ಒಂದು ಎಂಬ ಭಾವನೆಯೇ ಇರಲಿಲ್ಲ. ನಾವು ಹಿಂದಿನ   ಚರಿತ್ರೆಯನ್ನು ತೆಗೆದುಕೊಳ್ಳೋಣ. ನಮ್ಮದು ಅತ್ಯಂತ ಶ್ರೇಷ್ಠ ದೇಶ, ಇಲ್ಲಿ ಅನೇಕ ಪ್ರತಿಭಾವಂತರು ಹುಟ್ಟಿದ್ದಾರೆ, ದೊಡ್ಡ  ದೊಡ್ಡ  ನಾಮಾಂಕಿತ ಚಕ್ರವರ್ತಿಗಳು ಆಳಿ ಬಾಳಿದ ನಾಡು, ವೀರ ಶೂರರ ಬೀಡು ,ರಾಮ ಕೃಷ್ಣರ, ಅಶೋಕ ಚಕ್ರವರ್ತಿಯ ನೆಲ. ಎಲ್ಲ ಸರಿ. ಆದರೆ ಮೇಲೆ ಹೇಳಿದ ಹಾಗೆ ಎಲ್ಲರೂ ಅಂದರೆ  ರಾಜನಿಂದ ಹಿಡಿದು ಪ್ರಜೆಗಳು ಸಹಿತ  ತಮ್ಮ ತಮ್ಮ ಸ್ವಂತ  ಹಿತಾಸಕ್ತಿಗಳನ್ನು ಕಾಪಾಡಿದರಷ್ಟೇ  ವಿನಃ ಸಮಗ್ರ ರಾಷ್ಟ್ರದ ಬಗ್ಗೆ ಆಲೋಚಿಸಲಿಲ್ಲ. ಪುರುರವನ ಮೇಲಿನ  ಯಾವುದೋ  ಸಿಟ್ಟನ್ನು ಸಿಕಂದರನಿಗೆ  ಸಹಾಯ ಮಾಡುವ ಮೂಲಕ ಜಯಚಂದನು  ತೀರಿಸಿಕೊಂಡ. ಆದರೆ ಆಗ ಭಾರತದ  ಮೇಲೆ ಯವನನೊಬ್ಬನ  ಆಕ್ರಮಣವನ್ನು ತಾನು ಪ್ರಚೋದಿಸಿದ ಹಾಗೆ ಆದೀತು ಎಂಬ ಎಳ್ಳಷ್ಟು ಚಿಂತೆ ಅವನಿಗಾಗಲಿಲ್ಲ. ಅಥವಾ  ಅವನ ರಾಷ್ಟ್ರದ  ಕಲ್ಪನೆಯಲ್ಲೇ ತಪ್ಪು ಇತ್ತೋ? ಅದೇ ರೀತಿ ನಮ್ಮ ದೇಶದ  ಮೇಲೆ ನಡೆದ ಮುಸಲ್ಮಾನರ ದಾಳಿಗಳು. ನಮ್ಮಲ್ಲಿ  ಒಗ್ಗಟ್ಟಿರಲಿಲ್ಲ. ಅಲ್ಲದೆ ರಾಷ್ಟ್ರ ಎಂಬ ಸರಿಯಾದ ಕಲ್ಪನೆ ಸಹಾ ಇರಲಿಲ್ಲ.ಆಸೇತು ಹಿಮಾಚಲ ಗಾಂಧಾರದಿಂದ  ಬರ್ಮಾದ ವರೆಗೆ  ಹಬ್ಬಿದ    ನಮ್ಮ  ನಾಡು ಎಂದು ಪದ ಹಾಡುತ್ತೇವೆ. ಇಂಥ ನಾಡಿನಲ್ಲಿ ಎಷ್ಟೆಷ್ಟು ಸಣ್ಣ ದೊಡ್ಡ ರಾಜ್ಯಗಳು (ದೇಶಗಳು)  ಪ್ರತಿಯೊಬ್ಬರೂ  ಪರಸ್ಪರ ಕಚ್ಚಾಡಿಕೊಂಡು ದುರ್ಬಲಗೊಂಡು  ಕೊನೆಗೆ ಬ್ರಿಟಿಷರ  ಅಧೀನರಾದೆವು. ಹೇಗೆ  ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ  ಒಂದು ರಾಷ್ಟ್ರವಾಗಿದ್ದೆವೋ ಅದೇ ರೀತಿ ಭೌಗೋಲಿಕವಾಗಿಯೂ ನಮ್ಮಲ್ಲಿ  ರಾಷ್ಟ್ರದ  ಭಾವನೆ, ಭಕ್ತಿ, ಪ್ರೀತಿ  ಮುಂಚಿನಿಂದಲೇ  ಇದ್ದಿದ್ದರೆ ನಾವು ಯಾರ ಗುಲಾಮರು ಆಗಬೇಕಾಗಿರಲಿಲ್ಲ ಎಂದು ನನ್ನ ವಿಚಾರ. ಆ ಬಗ್ಗೆ ಹೇಳಬೇಕೆಂದರೆ  ಬ್ರಿಟಿಷರು ಬಂದ  ಮೇಲೆಯೇ ಪ್ರಜೆಗಳಲ್ಲಿ ರಾಷ್ಟ್ರದ ಬಗ್ಗೆ ಸ್ಪಷ್ಟ ಕಲ್ಪನೆ ಮೂಡಿತು ಎನ್ನಬಹುದು. ಬ್ರಿಟಿಷರ ದಬ್ಬಾಳಿಕೆ ತಮ್ಮ  ಗುಲಾಮೀ  ಜೀವನದ ಕಷ್ಟ ಹಾಗು ಹೇಯಭಾವನೆ ಮತ್ತು ಮುಖ್ಯವಾಗಿ ತಿಲಕರು, ಹೆಡಗೆವಾರರು, ವಿವೇಕಾನಂದರು, ಮತ್ತು ಇಂತಹ ಅನೇಕ  ನಾಯಕರ ನಾಯಕತ್ವವು ನಮಗೆ ಅಖಂಡ ಭಾರತದ ಕಲ್ಪನೆ ನೀಡಿತು. ಇಪ್ಪತ್ತನೇ ಶತಮಾನದ ಆದಿಯಲ್ಲಿ  ಇಡೀ ರಾಷ್ಟ್ರವು  ಬ್ರಿಟಿಷರ ವಿರುದ್ಧ ಎದ್ದು ನಿಂತಿತು. ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಮಾತ್ರ ಪುನಃ ಸಂಕುಚಿತ ಭಾವನೆಗಳು, ತಾನು  ನಾಯಕನಾಗಬೇಕು, ದೇಶ ಇಬ್ಭಾಗವಾದರೂ ಪರವಾಗಿಲ್ಲ ಎಂಬಂತಹ ದುರಾಸೆ ಅತಿಯಾಸೆ ನಾಯಕರಲ್ಲಿ ಹುಟ್ಟಿ ಯಾವ  ವಿಶಾಲ  ಭಾರತಕ್ಕಾಗಿ ಯುವಕರು, ಮಕ್ಕಳು, ಸ್ತ್ರೀಯರು ಎನ್ನದೆ ಬಲಿದಾನ ನೀಡಿದರೋ ಆ ಭಾರತವು  ಮತ್ತೊಮ್ಮೆ ಹೋಳಾಯ್ತು. ಅಲ್ಲಿಗೆ  ಮುಗಿಯಿತೇ? ಇಲ್ಲ.ತನ್ನು ದೊಡ್ಡ ಮನುಷ್ಯನಾಗಬೇಕು, ದೇಶ ಏನು ಬೇಕಾದ್ರೂ ಆಗಲಿ ಎಂಬಂತಹ ಮನೋಭಾವವುಳ್ಳ  ಮುಖ್ಯಸ್ಥನಿಂದ ವಿಶಾಲ ಭೂಭಾಗವು ಚೈನಾದ ಪಾಲಾಯ್ತು.ಇವತ್ತಿಗೂ ಅದನ್ನು ವಾಪಾಸು ಪಡೆಯಲು ನಮ್ಮಿಂದ ಆಗಲಿಲ್ಲ. ಇನ್ನು ಮುಂದೆಯೂ ಆಗುವುದು ಡೌಟು. ನಮಗೆ ಪವಿತ್ರವಾದ ಮಾನಸಸರೋವರ ಯಾತ್ರೆ ಮಾಡಲು ನಾವು ಚೀನಾದವರ ಕಾಲು ಹಿಡಿಯಬೇಕು. ನಮ್ಮ ಅರುನಾಚಲಪ್ರದೇಶದಲ್ಲಿ ಆಗಾಗ ಚೀನಾದವರು ಕ್ಯಾತೆ ತೆಗೆಯುತ್ತ  ಇದ್ದಾರೆ. ಅವರಿಗೆ ಸಮರ್ಥವಾಗಿ ಜವಾಬು ನೀಡಲು ನಮ್ಮ ನಾಯಕರೆನಿಸಿದವರಿಗೆ ಆಗುತ್ತಿಲ್ಲ. ಆಗುತ್ತಿಲ್ಲವೋ ಮನಸ್ಸಿಲ್ಲವೋ ಯಾ ರಿಗೆ ಗೊತ್ತು? ಈ ಮನೋಭಾವವು ರಾಷ್ಟ್ರದ ಕಲ್ಪನೆಯ ಅಭಾವದ ಸಂಕೇತ. ಎಲ್ಲರೂ-ಆ ಪಾರ್ಟಿ ಈ ಪಾರ್ಟಿ ಎಂಬ  ಭೇದವಿಲ್ಲದೆ ಸುಲಿಗೆಯಲ್ಲಿ ತನ್ಮಯರಾಗಿದ್ದಾರೆ. ಹೀಗೆಯೇ ಆದರೆ ಮುಂದೆ ಒಂದು ದಿನ ಪುನಃ ನಮ್ಮ ಮುಂದಿನ ಪೀಳಿಗೆಯು  ಪರರ ಜೀತ ಮಾಡುವ ಸಮಸ್ಯೆ ಬರಬಹುದೇ? ಇದಕ್ಕೆ ಪರಿಹಾರವಿಲ್ಲವೇ?              

Friday, January 3, 2014

ಓಕುಡ ಮಾಸ್ಟರ ದಿಲ್ಲೀ ಪ್ರವಾಸ


 
೧೯೮೬ರ ದಶಂಬರ ತಿಂಗಳು. ದಿಲ್ಲಿಯಲ್ಲಿ ಆ ಸಲ  ಅಗತ್ಯಕ್ಕಿಂತ ಸ್ವಲ್ಪ ಜಾಸ್ತಿಯೇ ಚಳಿ ಬಿದ್ದಿತ್ತು. ಬ್ರಾಂಚಿನಲ್ಲಿ ಹೆಚ್ಚಿನವರು ಕೆಲಸ ಮಾಡುವ ಬದಲು ಹೀಟರಿನ ಎದುರು ಕೂತು ಕೈ ಮೈ ಬಿಸಿಮಾಡಿ ಕೊಳ್ಳುವುದರಲ್ಲೇ ಮಗ್ನರಾಗಿದ್ದರು. ಗ್ರಾಹಕರೂ ವಿರಳವಾಗಿದ್ದರು. ಆಪ್ ಕಾ ಟ್ರಂಕಾಲ್ ಹೈ, ಜಲ್ದಿ ಆಯಿಯೇ ಎಂದು ಬುಲಾವು ಬಂತು. ಯಾರ ಫೋನಿರಬಹುದು ಎಂದು ಯೋಚಿಸುತ್ತ ಹಲೋ ಅಂದೆ. 
 
'ಹರಿ ಓಮ್, ಚಂಡೀಗಡದಿಂದ ಪಾಂಡುರಂಗ ಮಾತಾಡುತ್ತ  ಇದ್ದೇನೆ ಭಾವಜಿ.' ಅತ್ತಕಡೆಯಿಂದ ಪಾಂಡರಂಗನ  ಆವಾಜು ಕೇಳಿ ಬಂತು. ಬಹಳ ಖುಷಿಯಾಯ್ತು. 
 
'ಹರಿ ಓಂ, ದಿಲ್ಲಿಗೆ ಬರುವ ಕಾರ್ಯಕ್ರಮ ಉಂಟಾ?'
 
'ನನ್ನ ಪ್ರೋಗ್ರಾಮ್ ಯಾವುದೂ ಸಧ್ಯಕ್ಕಿಲ್ಲ. ಇಲ್ಲಿ ಹೆಬ್ರಿಯ ಸುಬ್ರಾಯ ಓಕುಡ ಮಾಸ್ಟ್ರು ಬಂದಿದ್ದಾರೆ. ಅವರು ಅಮೃತಸರಕ್ಕೆ ಯಾವುದೋ ಕಾರ್ಯ ನಿಮಿತ್ತ ಹೋದವರು ವಾಪಸು ಹೆಬ್ರಿಗೆ ಹೊರಟಿದ್ದಾರೆ. ಇವತ್ತು ನಮ್ಮಲ್ಲಿ ಉಳಕೊಂಡಿದ್ದಾರೆ. ಅವರ ರೈಲು ನಾಳೆ ಬೆಳಗ್ಗೆ ದಿಲ್ಲಿ ತಲಪುತ್ತದೆ. ಎರಡು ದಿನ ಬಿಟ್ಟು ಊರಿಗೆ ಬೆಂಗಳೂರು ಮೂಲಕ ವಾಪಸಾಗುತ್ತಾರೆ. ಎರಡು ದಿನ  ಅವರ ವ್ಯವಸ್ಠೆ ನೋಡಬೇಕು.'
 
'ಆದೀತು. ಈ ದಿನಗಳಲ್ಲಿ ದಿಲ್ಲಿಯಲ್ಲಿ ಆಟೋರಿಕ್ಷಾಗಳ ಹರತಾಳ ನಡೆಯುತ್ತಿದೆ. ಯಾವಾಗ ಮುಗೀತದೆ ಎಂದು ಸರಿಯಾಗಿ ಗೊತ್ತಿಲ್ಲ. ಹಾಗಾಗಿ ನಾನು ರೇಲ್ವೆ ಸ್ಟೇಷನ್ ತಲಪುವಾಗ ತಡವಾದೀತು. ನಾನು ಬರುವ ವರೆಗೆ ಅವರು ಅಲ್ಲಿ ಇಲ್ಲಿ ಹೊರಗೆ ಅಡ್ಡಾಡಲು ಹೋಗಬಾರದು. ಈ ಮಾತನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿ ಹೇಳು.'
 
'ಅದೆಲ್ಲ ನಾನು ವಿವರಿಸಿ ಹೇಳುತ್ತೇನೆ. ನೀವು ನಾಳೆ ನೆನಪಿಟ್ಟು ಬಂದು ಅವರನ್ನು ಕರಕೊಂಡು ಹೋಗಿ.'
 
'ಆಗಬಹುದು. ಗೋವಿಂದಮಾಮು ಮತ್ತು ಉಳಿದವರೆಲ್ಲ ಕ್ಷೇಮವೇ?'
 
'ಎಲ್ಲರೂ ಆರಾಮವಾಗಿದ್ದಾರೆ. ಜೈ ಶ್ರೀರಾಮ್'
 
'ಜೈ ಶ್ರೀರಾಮ್.' ನಾನು ಫೊನು ಕೆಳಗಿಟ್ಟೆ. 

'ದಿಲ್ಲಿ ಪೇಟೆಯಲ್ಲಿ ಆಟೋಸ್ಟ್ರೈಕ್ ಇರುವಾಗ ಇಂತದ್ದೆಲ್ಲ ಪಂಚಾತಿಕೆ ಏಕೆ ವಹಿಸಿಕೊಳ್ಳುತ್ತೀರಿ? ಈ ಚಳಿಗಾಲದಲ್ಲಿ ಬೆಳಬೆಳಗ್ಗೆ ಅಷ್ಟು ದೂರ ಹೇಗೆ ಹೋಗುವಿರಿ?'
 
'ಅಂದರೆ?'
 
'ಅಂದರೆ ಚಂಡೀಗಡದ ರೈಲು ಬರುವುದು ದಿಲ್ಲೀ ನಿಲ್ದಾಣಕ್ಕೆ ಮತ್ತು ಅದು ಇರುವುದು ಕೆಂಪುಕೋಟೆ ಹತ್ತಿರ ತಿಳಿಯಿತೇ?'
 
ವಹಿಸಿಕೊಂಡ ಕೆಲಸದ ಗಹನತೆ ಅರ್ಥವಾಗಲಾರಂಭಿಸಿತು. ಆ ಸಮಯದಲ್ಲಿ ದಿಲ್ಲಿಯಲ್ಲಿ ಅತ್ಯಂತ ಕಠಿಣವಾದ ಚಳಿ ಬಿದ್ದಿತ್ತು. ಅಲ್ಲದೇ ಆಟೋರಿಕ್ಷಾ ಡ್ರೈವರುಗಳ ಅನಿರ್ದಿಷ್ಟ ಹರತಾಳ ಜಾರಿಯಲ್ಲಿತ್ತು. ಯಾವಾಗ ಮುಗಿಯುತ್ತದೆ ಎಂಬ ನಿಗದಿ ಸೂಚನೆ ಇರಲಿಲ್ಲ. ನಮ್ಮ ಮನೆಯಿಂದ ರೇಲ್ವೇ ಸ್ಟೇಷನ್ನು ಸುಮಾರು ೧೫ ಕಿ.ಮೀಟರುಗಳಷ್ಟು ದೂರವಿತ್ತು. ನನ್ನ ಬಳಿ ಯಾವುದೇ ವಾಹನವಿಲ್ಲ. ಇದ್ದರೂ ಆ ಚಳಿ ಮತ್ತು ಮಂಜುಮುಸುಕಿದ ಬೆಳಂಜಾವದಲ್ಲಿ ಹೋಗುವುದೂ ದೂರದ ಮಾತು. ಏನು  ಮಾಡುವುದು? ಹೊರಗಡೆ ಚಳಿ ಇದ್ದರೂ ತಲೆ ಮಾತ್ರ ಬಿಸಿ ಆಗತೊಡಗಿತು... .. 
 
ನನ್ನ ಗೆಳೆಯ ಹಾಗೂ ಗುರು ಮಲ್ಯರ ಕತೆ ನೆನಪಾಯಿತು..... 

ಮಂಗಳೂರಿನಿಂದ ದಿಲ್ಲಿಗೆ ಪರಿಚಯದವರು ಯಾರೇ ಹೊರಡಲಿ 'ಅಲ್ಲಿ ನಮ್ಮ ಭಾವ ಇದ್ದಾರೆ, ಅವರು ಬಂದು ನಿಮ್ಮನ್ನು ಕರ ಕೊಂಡು ಎಲ್ಲ ವ್ಯವಸ್ಥೆ ಮಾಡುತ್ತಾರೆ. ನೀವೇನೂ ಚಿಂತೆ ಮಾಡೂದು ಬೇಡ' ಎಂದು ಇವರ ಭಾವನೆಂಟ ಅವರಿಗೆಲ್ಲ ಧೈರ್ಯ ಭರವಸೆ ಹೇಳಿ ಕಳುಹಿಸುವುದೂ.,ಇವರು ಇಲ್ಲಿ ಅವರನ್ನು ಸ್ಟೇಷನ್ನಿನಿಂದ ಮನೆಗೆ ಕರಕೊಂಡು ಬಂದು ಒಂದೆರಡು ದಿನ ತಮ್ಮಲ್ಲಿ ಸೂಕ್ತ ಆತಿಥ್ಯ ಖಾತಿರದಾನಿ ಮಾಡಿಸಿ ಕಳುಹಿಸುವುದೂ ನಡಕೊಂಡು ಬಂದಿತ್ತು. ಇವರೂ ಸಹ ಖುಷಿಯಿಂದಲೇ ಈ ಕಾರ್ಯಕ್ರಮ, ವ್ಯವಸ್ಥೆ ನಡೆಸಿಕೊಂಡು ಬಂದಿದ್ದರು  ಎಲ್ಲಿಯವರೆಗೆಂದರೆ.... 
 
'ನಮ್ಮ ಜನ್ನಿಮಾಯಿ ದಿಲ್ಲಿಗೆ ಹೊರಟಿದ್ದಾರೆ. ಇಂತಹಾ ತಾರೀಕಿಗೆ ದಿಲ್ಲಿ ತಲುಪುತ್ತಾರೆ. ಅವರಿಗೆ ಸಹಾಯ ಮಾಡುವುದು.' ಎಂದು ಮಲ್ಯರಿಗೆ ವಿನಂತಿ ಬಂತು. ಇವರಿಗೋ ಆ ದಿನಗಳಲ್ಲಿ ಕಂಡಾಪಟ್ಟೆ ಕೆಲಸ, ಪುಕುಳಿ ತುರಿಸಿಕೊಳ್ಳಲೂ ಪುರುಸತ್ತಿಲ್ಲ. ಯಾವುದೋ ಪ್ರಮುಖ ಬ್ರಾಂಚಿನ ಸ್ಥಳಾಂತರ ಮತ್ತದರ ಆರಂಭೋತ್ಸವಕ್ಕೆ ಸ್ವಯಂ ಛೆಯರ್ ಮೇನ್ ಬರುವವರಿದ್ದರು. ಇವರ ಮೇಲೆ ಹೆಚ್ಚಿನ ಜವಾಬ್ದಾರಿ ಇತ್ತು. ಡಿ.ಜಿ.ಎಮ್ ಸಾಹೇಬರು ಪ್ರತಿಯೊಂದಕ್ಕೂ ಮಲ್ಯರೇ ಮಲ್ಯರೇ ಎಂದು ತಲೆಮೇಲೇ ಕೂತು ಕೆಲಸ ಮಾಡಿಸುತ್ತಿದ್ದರು.ಇವರ ತಲೆ ಬಾರಾ ಆಣೆ ಆಗಿತ್ತು.ಹೀಗಿರುವಾಗ ಮಂಗಳೂರಿನ ಜನ್ನಿಮಾಯಿಗೆ ದಿಲ್ಲಿ ತಿರುಗುವ  ಆಶೆ ಆಗಿತ್ತು.
 
'ರಜೆ ಬೇಕು ಅಂತ ಕ್ಯಾಬಿನ್ ಒಳಗೆ ಕಾಲಿಟ್ಟರೆ ಕಾಲುಗಂಟು ಮುರಿದು ಕೈಯ್ಯಲ್ಲಿ ಕೊಡುತ್ತೇನೆ, ಹುಶ್ಶಾರ್!' ಎಂದು ಆಶೀರ್ವದಿಸಿದ್ದ ಡಿ ಜಿ ಎಂ ಅವರನ್ನು ಹೇಗೆ ಮಣಿಸುವುದು ಎಂದು ಇವರ ಚಡಪಡ ಜಾಸ್ತಿಯಾಯಿತು. ಕೊನೆಗೆ ರೈಲು ಬರುವ  ಸಮಯಕ್ಕೆ ಸರಿಯಾಗಿ ಹೋಗಿ ಬನ್ನಿ ರಜೆ ಕೊಡಲು ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲ ಎಂದು ಪರ್ಮಿಶನ್ ಕೊಟ್ಟರು. 


ಹೊಸದಿಲ್ಲಿ ರೇಲ್ವೇ ನಿಲ್ದಾಣದಲ್ಲಿ ಕೂತು 'ಹೀ ಜನ್ನಿಮಾಯಿ ಮ್ಹಳ್ಹೆರಿ ಕೋಣಬಾ!' ಎಂದು ಮನಸ್ಸಿನ ಕೋಣೆಗಳನ್ನು ತಡಕಾಡುತ್ತ ಮಲ್ಯರು ರೈಲಿನ ಆಗಮನದ ನಿರೀಕ್ಷೆಯಲ್ಲಿದ್ದರು. ಪುಣ್ಯಕ್ಕೆ ರೈಲು ಸಮಯಕ್ಕೆ ಸರಿಯಾಗಿ ಬಂತು. ಜನ್ನಿಮಾಯಿ ಕಾಣಲಿಲ್ಲ. ಇವರು ಕೊಂಚ ಕಾತರದಿಂದ ರೈಲಿನ ಉದ್ದಕ್ಕೂ ಹೋಗಿ ಎಲ್ಲಾ ಬೋಗಿಗಳನ್ನು ಪರಿಶೀಲಿಸಿದರು. ಇಲ್ಲ ಜನ ಪತ್ತೆ ಇಲ್ಲ.! ತಾನೆಲ್ಲಾದರೂ ತಪ್ಪಿದೆನೋ ಎಂದು ಆತಂಕಗೊಂಡರು. ಇಲ್ಲ ಸರಿಯಾದ ದಿನವೇ. ಹಾಗಾದರೆ ಈ ಜನ್ನಿಮಾಯಿ ಎಲ್ಲಿ? ಪಾಪ ಈ ಬಡಮುದುಕಿ ಎಲ್ಲಾದರೂ ಹೊರಗೆ ಹೋಗಿ ತನ್ನ ನಿರೀಕ್ಷೆ ಮಾಡುತ್ತಿದ್ದಾರೋ? ಎಂದು ಪ್ಲಾಟ್ ಫಾರಮ್ಮಿನ ಹೊರಗೆ ಬಂದು ಹುಡುಕಿದರು. ಊಂಹೂಂ ಇಲ್ಲ. ಆತಂಕವು ಗಾಬರಿಗೆ ತಿರುಗಿತು. ಪುನಃ ಒಳಗೆ ಹೋಗಿ ಸ್ಟೇಷನ್ನಿನ ಎಲ್ಲ ಪ್ಲಾಟ್ ಫಾರಮ್ಮುಗಳ ತಲಾಷು ಶುರು ಹಚ್ಚಿದರು. ಜನ್ನಿಮಾಯಿ ಸಿಗಲಿಲ್ಲ. ಛೆ! ಎಂಥಾ ಕೆಲಸವಾಯ್ತು! ಪಾಪ ಆ ಹೆಂಗಸು ಈಗ ಈ ದಿಲ್ಲಿ ಎಂಬ ಕಾಡಿನಲ್ಲಿ ಕಣ್ಣುಕತ್ತಲೆ ಬಂದು ಎಲ್ಲಿ ಸಿಕ್ಕಿಬಿದ್ದಿದ್ದಾರೋ? ಎಂದು ಮಂಡೆಬಿಸಿ ಮಾಡಿಕೊಂಡು ವಾಪಸು ಬೇಂಕಿಗೆ ಬಂದರು. ಇಡೀ ದಿನ ಮನಸ್ಸು ವ್ಯಗ್ರವಾಗಿಯೇ ಇತ್ತು.. ಹೀ ಜನ್ನಿಮಾಯಿ ಖೈಯಿಂ ಗೆಲ್ಲೀ?

ಜನ್ನಿಮಾಯಿ ರೈಲು ಹತ್ತುವುದೇ ಫಸ್ಟ್ ಟೈಮ್. ಹಾಗಾಗಿ ಸ್ವಲ್ಪ ಟೆನ್ ಶನ್ ನಲ್ಲಿದ್ದರು. ದೇವರ ಹಾಗೆ ಮಲ್ಯರ ಭಾವನೆಂಟ ಸಿಕ್ಕಿದ. ಅವನು ಧೈರ್ಯ ಕೊಟ್ಟನಂತರ ಅಲ್ಲವೇ ತಾನು ದಿಲ್ಲಿ ಟ್ರಿಪ್ಪು ಪಕ್ಕಾ ಮಾಡಿದ್ದು? ಇಲ್ಲದಿದ್ದರೆ ಈ ಪ್ರಾಯದಲ್ಲಿ ಎಂತದು ತಿರುಗಾಟ?  ಆ ಮಲ್ಯರೂ ಸಹ ಭಾರೀ ಒಳ್ಳೇ ಜನ  ಅಂತೆ! 'ಭಾರೀ ಮಾಯಸ್ತು ಜನ ಖೈಂ ಸಕ್ಕಡ ಮ್ಹಣ್ತಾತಿ' ಎಂದು ದೇವರ ಮತ್ತು ಮಲ್ಯರ ಜಪ ಮಾಡುತ್ತ ಜನ್ನಿಮಾಯಿ ಸೀಟುಮೇಲೆ ಕಣ್ಣುಮುಚ್ಚಿ ಕುಳಿತರು. 
 
ಕಣ್ಣು ತೆರೆದಾಗ  ಎದುರಿಗೆ ಕೂತ ಮನುಷ್ಯ ತನ್ನನ್ನೇ ಗುರುಗುರು ನೋಡುತ್ತ ಇದ್ದಾರೆ! ಇವರನ್ನು ಎಲ್ಲಿ ನೋಡಿದ್ದೇನೆ ತಾನು! ನೆನಪಿನ ಬಟನ್ ಒತ್ತುತ್ತಿದ್ದಂತೆ 'ಜನ್ನಿಮಾಯಿ ಅಲ್ಲವೇ? ನನ್ನ ಗುರುತು ಸಿಗಲಿಲ್ಲವೇ?' ಎಂದು ಎದುರು ಕೂತಿದ್ದವರು ನಗುತ್ತ ತನ್ನ ಪರಿಚಯ ಹೇಳಿಕೊಂಡರು. ತನ್ನ ದೂರದ ಸಂಬಂಧಿಯೊಬ್ಬರ ಮಗ. ಹೌದು ಈತ  ಈಗ ದಿಲ್ಲಿಯಲ್ಲಿ ಕೆನರಾಬೇಂಕಿನಲ್ಲಿ ಮೆನೆಜರು. ಯಾವುದೋ ಶುಭಕಾರ್ಯಕ್ಕೆಂದು ಊರಿಗೆ ಬಂದವರು ರಜೆ ಮುಗಿಸಿ ಫ್ಯಾಮಿಲಿ ಸಹಿತ  ದಿಲ್ಲಿಗೆ ಹೋಗುತ್ತಿದ್ದಾರೆ ಅವರ ಹೆಂಡತಿ ಸಹಿತ ಗುರುತಿನವರೇ. ತುಂಬ  ಒಳ್ಳೆಯ ಕುಟುಂಬ. ಜನ್ನಿಮಾಯಿಗೆ ಈಗ ಪ್ರಯಾಣ  ಏಕ್ ದಮ್ ಗಮ್ಮತ್ತಾಯಿತು. 
 
'ದಿಲ್ಲಿಯಲ್ಲಿ ಯಾರಲ್ಲಿ ಉಳಕೊಂಡಿದ್ದೀರಿ?'
 
'ನಾನು ಮಲ್ಯರ ಮನೆಗೆ ಹೋಗುತ್ತೇನೆ. ಅವರು ಸ್ಟೇಷನ್ನಿಗೆ ಬರುತ್ತಾರೆ.'
 
'ಹೌದಾ, ಮಲ್ಯರ ಗುರುತು ನನಗೆ ಉಂಟು. ತುಂಬಾ ಒಳ್ಳೆಯ ಮನುಷ್ಯ. ಆದರೆ ಈಗ ವೀಕ್ ಡೇಸ್ ನಲ್ಲಿ ಅವರು ಪಾಪ ರಜೆ ಮಾಡಿ ಬರಬೇಕು. ಅವರಿಗೂ ಕಷ್ಟ. ಒಂದು ಕೆಲಸ ಮಾಡುವ.ಈಗ ನೀವು ನಮ್ಮ ಮನೆಗೆ ಬನ್ನಿ. ಎರಡು ದಿನ ನಮ್ಮಲ್ಲಿ ಉಳಕೊಳ್ಳಿ. ನಾಡದು ಆದಿತ್ಯವಾರ ನಿಮ್ಮನ್ನು ಅವರಲ್ಲಿ ಬಿಟ್ಟು ಬರುತ್ತೇನೆ. ನಮ್ಮ ಮನೆ ಅವರ  ಏರಿಯಾದಲ್ಲೇ ಇದೆ.' ರಾಯರು ಆಮಂತ್ರಿಸಿದರು. 
 
'ನಿಮಗೆಲ್ಲ ಸುಮ್ಮನೆ ತೊಂದರೆ. ಯಾರಿಗೆಲ್ಲ  ಎಂದು ರಗಳೆ ಮಾಡುವುದು?' ಜನ್ನಿಮಾಯಿಗೆ ಸಂಕೋಚ.
 
'ತೊಂದರೆ ಏನು ಬಂತು ಅದರಲ್ಲಿ? ನೀವು ಬಂದರೆ ನಮಗೆ ತುಂಬ ಸಂತೋಷ. ಎಷ್ಟು ಸಮಯದ ನಂತರ ಸಿಕ್ಕಿದ್ದೀರಿ! ನಿಮ್ಮ ಹತ್ತಿರ ತುಂಬಾ ಮಾತಾಡಬೇಕು.'
 
ಅವರ ಪ್ರೀತಿ ವಿಶ್ವಾಸಗಳಿಗೆ ಜನ್ನಿಮಾಯಿ ಮಾರುಹೋದರು. 
 
ಹೊಸದಿಲ್ಲಿ ಸ್ಟೇಷನ್ನಿನಲ್ಲಿ ಮಲ್ಯರು ಗಾಬರಿಯಿಂದ ಇವರನ್ನು ಹುಡುಕಾಡುತ್ತಿರುವ ವೇಳೆಯಲ್ಲಿ ಜನ್ನಿಮಾಯಿ ತನ್ನ ಹೊಸ ಗೆಳೆಯರೊಂದಿಗೆ ಹಿಂದಿನ ನಿಜಾ಼ಮುದ್ದೀನ್ ಸ್ಟೇಷನ್ನಿನಲ್ಲಿ ಇಳಿಯುತ್ತಿದ್ದರು.
 
ನಾಲಕ್ಕು ದಿನಗಳ ವರೆಗೆ ಮಲ್ಯರ ತಳಮಳ ಕಷ್ಟ ಅವರಿಗೇ ಗೊತ್ತು. ಆದಿತ್ಯವಾರದಂದು ಜನ್ನಿಮಾಯಿ ಬಂದರು. ಒಂದು ಭರಣಿ ಮಾವಿನಕಾಯಿ ಉಪ್ಪಿನಕಾಯಿ ತಂದಿದ್ದರು. ಮಲ್ಯರಿಗೆ ಒಮ್ಮೆ ಹೋದ ಜೀವ ಬಂದಂತಾಯಿತು. ಒಟ್ಟಿಗೆ ಸಿಟ್ಟೂ ಬಂದಿತ್ತು. ಆದರೆ ಅವರು ಸಜ್ಜನ ಮನುಷ್ಯ. ಬಂದವರ  ಆತಿಥ್ಯವನ್ನು ಚನ್ನಾಗಿ ಮಾಡಿ ಕಳುಹಿಸಿಕೊಟ್ಟರು..... 

ನನಗೆ ಮಲ್ಯರ ರೀತಿಯ ಸಮಸ್ಯೆಯಲ್ಲ.ಓಕುಡರು ನಮ್ಮಲ್ಲಿಗೇ ಬರಬೇಕು. ಅವರನ್ನು ರಿಸೀವ್ ಮಾಡುವುದೇ ನನ್ನ ಸಮಸ್ಯೆ. ನಡುರಾತ್ರಿಯ ನಂತರ ಅರ್ಧ ಘಂಟೆಗೊಂದರಂತೆ ನೈಟ್ ಸ್ಪೆಷಲ್ ಬಸ್ಸುಗಳು ಸಂಚರಿಸುತ್ತವೆ. ಇವು ಬಸ್ಸು ಮತ್ತು ರೈಲುನಿಲ್ದಾಣಗಳಿಗೆ ಓಡಾಡುತ್ತವೆ. ನಾಲ್ಕು ಘಂಟೆಗೆ ಎದ್ದು ಬಸ್ಸು ಹಿಡಿದು ರೇಲು ನಿಲ್ದಾಣವನ್ನು ನಾನು ತಲಪುವಾಗುವಾಗ ಐದೂ ಹತ್ತು. ರೈಲು ಸಮಯಕ್ಕೆ ಸರಿಯಾಗಿ ಬಂತು ಓಕುಡರೂ ಇಳಿದರು. 
 
'ನಮಸ್ಕಾರ ಓಕುಡ ಮಾಸ್ಟ್ರಿಗೆ, ದಿಲ್ಲಿಗೆ ಸ್ವಾಗತ. ಬನ್ನಿ ಮನೆಗೆ ಹೋಗೋಣ'. 
 
'ನಮಸ್ಕಾರ. ನೀವು ದೇವುರಾಯರ ಹಿರೀಮಗ ಅಲ್ವಾ. ಈಗ ದಿಲ್ಲಿಯಲ್ಲಿ ಕೆಲಸವೋ? ನೀವಿದ್ದದ್ದು ಬಹಳ ಒಳ್ಳೇದಾಯ್ತು   ಇಲ್ಲದೇ ಹೋದರೆ ಈ ಭಾಷೆ ಬಾರದ ಊರಲ್ಲಿ ಸ್ವಲ್ಪ ಕಷ್ಟ ಮಾರಾಯರೇ'. 
 
'ಈಗ ಇಲ್ಲಿ ಆಟೋ ಸಿಗುವುದಿಲ್ಲ. ನಮ್ಮ ಮನೆಯ ದಾರಿಯ ಬಸ್ಸಿನಲ್ಲಿ ಹೋಗಬೇಕು ಆಗಬಹುದಲ್ಲ.. '
 
'ಆದೀತು.'
 
ಮನೆಗೆ ಬಂದೆವು.'ಕೊಂಕಣೇರ ಊಟ ನಡಿತದಲ್ಲ ಮಾಸ್ಟ್ರೇ.' 
 
’ಓಹೋ' ಬಿಸಿಬಿಸಿ ದೋಸೆಗಳನ್ನು ಒಂದಾದ ಮೇಲೆ ಒಂದರಂತೆ ಪಟ್ಟಾಗಿ ಹೊಡೆದರು. 
 
ಮನೆಯವಳ ಮುಖ ಅರಳಿತು. 
 
ದಿಲ್ಲೀ ಸೈಟ್ ಸೀಯಿಂಗ್ ಬಸ್ಸಿನಲ್ಲಿ ಕೂರಿಸಿದೆ. 'ಇಡೀ ದಿನ ದಿಲ್ಲಿ ಆಗ್ರಾ ಮತ್ತು ಮಥುರಾ ಎಲ್ಲ ನೋಡಿ ಬನ್ನಿ. ಸಂಜೆ ಕೆಂಪು ಕೋಟೆ ಬಳಿ ಇಳಿಸುತ್ತಾರೆ. ನಾನಲ್ಲಿ ಬರುತ್ತೇನೆ. ನನ್ನನ್ನು ಕಾಯುತ್ತಿರಿ.'  ಮಾಸ್ಟ್ರಿಗೆ ಖುಷಿಯಾಯ್ತು. 
 
'ನನ್ನ ಅಣ್ಣನ ಮಗಳಿಗೆ ಡಿಫೆನ್ಸ್ ನಲ್ಲಿರುವ ಹುಡುಗನಿಗೆ ಕೊಟ್ಟಿದೆ. ಅವನಿಗೆ ಅಮೃತಸರದಲ್ಲಿ ಕೆಲಸ. ಊರಿಗೆ ಬಂದವಳನ್ನು ಪುನಃ ಅಮೃತಸರಕ್ಕೆ ಬಿಟ್ಟುಬರಲು ಅವರಿಗೆ ಪ್ರಾಯ ಆಯ್ತು ನೋಡಿ ಅದಕ್ಕೆ ನಾನು ಹೋಗಿ ಬರತೇನೆ ಎಂದು ಬಂದೆ. ಇಲ್ಲಿ ನಿಮ್ಮ ಗೋವಿಂದರಾಯರ ಮಗನ ಗುರ್ತ ಪರಿಚಯ ಚಂಡೀಗಡದಲ್ಲಾಯಿತು. ಗೋವಿಂದರಾಯರದ್ದು ಮತ್ತು ನಮ್ಮದು ಬಹಳ ಹಿಂದಿನ ಪರಿಚಯ ಭಾರೀ ಒಳ್ಳೆಯ ಜನ.ಅವರ ಮಗ ಸಹ ಒಳ್ಳೆಯ ಹುಡುಗ, ಏನು ವಿನಯ! ಎಷ್ಟು ಆದರ! ಸಂಸ್ಕಾರ ಅಂದರೆ ಅದು! ರಕ್ತದಲ್ಲೇ ಇದೆ....' ಓಕುಡರ ಮಾತು ಸಾಗುತ್ತಲೇ ಇತ್ತು. 
 
ನೆಕ್ಸ್ಟ್ ಡೇ ಬೆಳಗ್ಗೆ 'ಈ ದಿನ ಸ್ವಲ್ಪ ರೆಸ್ಟ್ ತೆಕ್ಕೊಳ್ಳಿ ಸರ್, ಸಂಜೆ ಬೇಗ ಬರತೇನೆ, ಇಲ್ಲೇ ಹತ್ತಿರ ಕರೋಲ್ ಬಾಗ್ ಅಜಮಲ್ ಖಾನ್ ರಸ್ತೆಯ ಸಂತೆ ಎಲ್ಲ ತಿರುಗುವ. ನಿಮಗೇನಾದರೂ ಪರ್ಚೇಸ್ ಇದ್ದರೆ ಮಾಡ ಬಹುದು. ನನಗೂ ಸಹ ದಿಲ್ಲಿಯ ಹೆಚ್ಚಿನ ಪರಿಚಯ ಆಗಿಲ್ಲ. ಅಲ್ಲದೆ ನಾನು ರಜೆ ಸಹ ಹಾಕಿಲ್ಲ. ಆಗಬಹುದಲ್ಲ.'ಎಂದು ಆಫೀಸಿಗೆ ಬಂದೆ. ಸಂಜೆಯ ತಿರುಗಾಟ  ಆಯಿತು. ರಾತ್ರಿ ಸ್ವಲ್ಪ ಸಿಹಿ ಮಾಡಿದ್ದಳು.
 
'ಇದೆಲ್ಲ ಏಕೆ ಮಾಡಹೊರಟಿರಮ್ಮ! ಸಿಂಪಲ್ ಅಡುಗೆ ಸಾಕಿತ್ತು. ನಿಮ್ಮ ತಂದೆಯವರ ಹೆಸರು ತುಂಬ ಕೇಳಿದ್ದೇನೆ. ಅವರು ಹೆಬ್ರಿಯಲ್ಲಿ ಹೆಡ್ ಮಾಸ್ಟರ್ ಆಗಿದ್ದರಂತೆ. ಕಿಣಿ ಮಾಸ್ಟರು ಅಂದರೆ ಅಷ್ಟು ಫೇಮಸ್ಸು. ನಮ್ಮ ಅಣ್ಣ ಹೇಳುತ್ತ ಇರ್ತಾರೆ. ನಿಮ್ಮ ಅಣ್ಣ  ಕಿಣಿಯವರೂ ನಾನೂ ಒಳ್ಳೇ ದೋಸ್ತಿ' ಓಕುಡಮಾಸ್ಟರು ಪ್ರೀತಿಯಿಂದ ಮಾತಾಡಿದರು. 
 
ಮನೆಯ ಯಜಮಾಂತಿಗೆ ಆನಂದವಾಯಿತು. 'ಏನು ಗಮ್ಮತ್ತು ಮಾಡಿದ್ದೇನೆ ಸರ್? ನಮ್ಮ ಅಡುಗೆ ನಿಮಗೆ ಹಿಡಿಸಿತೋ ಇಲ್ಲವೋ., ನನಗೆ ತಿಳಿದಷ್ಟು ಮಾಡಿ ಬಡಿಸಿದ್ದೇನೆ. ಊರಲ್ಲಾದರೆ ಅತ್ತೆಯವರಿದ್ದರು. ಇಲ್ಲಿ ನನ್ನದೇ ಅಳತೆ ರುಚಿ... ಸರಿಯಾಗಿದೆಯೋ ಇಲ್ಲವೋ ನೀವೇ ಹೇಳಬೇಕು...! 
 
'ಇವಳು ಅಡುಗೆ ಮಾಡುವಾಗ ಹಿಂದೆ ಬೆಂಬಲಕ್ಕೆ ನಳಮಹಾರಾಜ ನಿಲ್ಲುತ್ತಾನೆ ಸರ್. ನಳಪಾಕ ಅಂದರೆ ಹೇಗೆ ಅಂತ ಇವಳ ಅಡುಗೆ ಉಂಡ ನಂತರವೇ ನನಗೆ ಗೊತ್ತಾದದ್ದು'. ಇವಳ ಮುಖ ಇಷ್ಟಗಲ ಆಯಿತು. 
 
'ಅವರದ್ದು ಹಾಗೇ ಸರ್, ಬಂದವರ ಎದುರಿಗೆ ಹೆಂಡತಿಯ ಫಾರ್ಸು ಮಾಡುವುದು' ನಗುತ್ತ ದೂರಿತ್ತಳು. 
 
'ಇಲ್ಲಮ್ಮ ಅಡುಗೆ ಸತ್ಯಕ್ಕೂ ರುಚಿಯಾಗಿದೆ.. '
 
ಮರುದಿನ ಬೆಳಗ್ಗೆ ಆರೂಹತ್ತಕ್ಕೆ ರೈಲು. ನನಗೆ ಇಡೀ ರಾತ್ರಿ ನಿದ್ದೆ ಇಲ್ಲ.. ಬೆಳಗ್ಗೆ ನಾಲಕ್ಕು ಘಂಟೆಗೆ ಎದ್ದು ಹೊರಟೆವು. ಸ್ನಾನದ್ದೊಂದು ಕಾರ್ಯಕ್ರಮ ಮುಗಿಸಿಯೇ ಬಿಡ್ತೇನೆ ಆಗಬಹುದಲ್ಲವೇ ಎಂದು ಬಿಸಿನೀರು ಮಾಡುತ್ತೇವೆಂದರೂ ಆ ಚಳಿಯಲ್ಲೂ ತಣ್ಣೀರು ಸ್ನಾನ ಮಾಡಿ ಹೊರಟರು. ಪುಣ್ಯಕ್ಕೆ ಆದಿನ ಆಟೋಸ್ಟ್ರೈಕು ಹಿಂತೆಗೆಯಲ್ಪಟ್ಟಿತ್ತು. ಸಮಯಕ್ಕೆ ಸರಿ ಯಾಗಿ ರೈಲು ನಿಲ್ದಾಣ ತಲುಪಿದೆವು.

'ನೀನು ಆ ಓಕುಡ ಮಾಸ್ಟ್ರಿಗೆ ಏನು ಮಾಯಕ ಮಾಡಿದ್ದೀ ಮಹರಾಯ! ಇಲ್ಲಿ ಊರಲ್ಲಿ ನಿಂದು ಭಾರೀ ಭಾರಿ ಎಡ್ವಟೈಸ್ ಮೆಂಟು ಮಾಡುತ್ತಿದ್ದಾರೆ...! ದೇವುರಾಯರ ಮಗ ಅಂದರೆ ಹಾಗೆ ಹೀಗೆ ಲಕ್ಷಕ್ಕೆ ಒಬ್ಬರು ಅಂತವರು ಸಿಕ್ಕುವುದು ಕಷ್ಟ...... ' ಊರಿನಿಂದ   ಉಲ್ಲಾಸನ ಕಾಗದ ಬಂತು. 
 
ಮನಸ್ಸಿಗೆ ಆದ ಖುಷಿ ಸಮಾಧಾನ ನನಗೇ ಗೊತ್ತು...  

Saturday, October 13, 2012

Bengalurinalli Kannadada Balake......

ಮಾನ್ಯರೇ,
ನಮ್ಮ ಕರ್ನಾಟಕದ ಜನತೆ ಬಹಳವೇ ಸಜ್ಜನರು,ಶಾಂತಿಪ್ರಿಯರು.ತುಂಬಾ ಮೃದುಹೃದಯವಂತರು.ನಮ್ಮ ಸಜ್ಜನಿಕೆಯ ಲಾಭವನ್ನು ಇಡೀ ದೇಶವೇ ಪಡೆಯುತ್ತ ಇದೆ.ಇಲ್ಲಿ ದೇಶದ ಎಲ್ಲ ದಿಕ್ಕುಗಳಿಂದಲೂ ಜನರು ಅನೇಕ ಕಾರಣಗಳಿಗೆಂದು ಬಂದು ನೆಲೆಸಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. .ಆತಿಥೇಯರಾದ ನಾವು ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಿಗೇನೇ ಸಜ್ಜನರಾಗಿದ್ದೇವೆಯೋ ಎಂಬ ಶಂಕೆ ಬರುತ್ತಿದೆ.ಯಾರಾದರೂ ಉದ್ಯೋಗ ಅಥವಾ ವ್ಯಾಪಾರಕ್ಕೆಂದು ತಮಿಳುನಾಡಿಗೆ ಹೋದರೆ ಅವರು ಅಲ್ಲಿ ತಮಿಳು ಕಲಿಯಲೇಬೇಕು.ಕೇರಳಕ್ಕೆ ಹೋದರೆ ಮಲೆಯಾಳಿ,ಆಂಧ್ರದಲ್ಲಿ ತೆಲುಗು ಅಥವ ಮಹಾರಾಷ್ಟ್ರದಲ್ಲಿ ಹಿಂದಿ ಯಾ ಮರಾಠಿ ಭಾಷೆ ಕಲಿಯಲೇ ಬೇಕು-ಕಲಿಯುತ್ತಾರೆ-ಏಕೆಂದರೆ ಆಯಾ ಪ್ರದೇಶದಲ್ಲಿ ಅಲ್ಲಿನ ಭಾಷೆಯು ನಡೆಯುತ್ತದೆ.ಆದರೆ ನಮ್ಮ ರಾಜ್ಯದ ಜನರು ಮೇಲೆ ಹೇಳಿದಂತೆ ತುಂಬಾನೇ ಸಜ್ಜನರು,ಉದಾರಮನಸ್ಸಿನವರು.ಇಲ್ಲಿಗೆ ಬಂದ ಅತಿಥಿಗಳ ಮನನೋಯಿಸಲು ತಯಾರಿಲ್ಲ.ಇಲ್ಲಿ ಜೀವಿಸಲು ಬಂದವರಿಗೆ ನಮ್ಮ ಭಾಷೆ ಕನ್ನಡ ಕಲಿಯುವಂತೆ ನಾವು ಪ್ರೇರೇಪಿಸುವುದಿಲ್ಲ.ಬದಲಾಗಿ ನಾವೇ ಅವರ ಭಾಷೆ ಕಲಿತು ಕೃತಾರ್ಥರಾಗುತ್ತೇವೆ.

ಗ್ರಾಮೀಣ ಪ್ರದೇಶಗಳ ಜನರು ಅಷ್ಟು ತಿಳಿದವರಲ್ಲ.ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ.ಹಾಗಾಗಿ ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಕನ್ನಡ ಉಳಿದಿದೆ ಎನ್ನಬಹುದು.ಆದರೂ ಕೆಲವೆಡೆ ಭಾಷಾಭಿಮಾನದ ಕೊರತೆ ಕಂಡುಬರುತ್ತದೆ.ಕೊಲ್ಲೂರು ಪ್ರಸಿದ್ಧಯಾತ್ರಾಸ್ಥಳ.ಇಲ್ಲಿಗೆ ಭಕ್ತಾದಿಗಳು ದೇವಿಯ ದರ್ಶನಪಡೆದು ಕೃತಾರ್ಥರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ಅದರಲ್ಲೂ ಕೇರಳದ ಭಕ್ತರು ಹೆಚ್ಚಾಗಿ ಬರುತ್ತಾರೆ.ಅನೇಕ ಭಕ್ತರು ದೇವಿಯ ಪದತಲದಲ್ಲಿ ಶಾಶ್ವತವಾಗಿ ಇರಲು ಬಯಸಿ ಇಲ್ಲೇ ನೆಲಸಿದ್ದಾರೆ.ಅಂತವರಲ್ಲಿ ಒಬ್ಬರು ಒಮ್ಮೆ ಹಣ ಪಡೆಯಲು ಬೇಂಕಿಗೆ ಹೋದರು.ಎಷ್ಟು ಬೇಕು? ಎಂದು ಅಧಿಕಾರಿ ಕೇಳಿದಾಗ "ಆಯಿರಮ್ ರೂಬಾಯ್" ಎಂದರು.ಅಧಿಕಾರಿಗೆ ಅರ್ಥವಾಗಲಿಲ್ಲ.ಎಷ್ಟು ಹಣ ಬೇಕು ಮಾರಾಯರೇ ಎಂದಾಗ ಪುನಃ ಆಯಿರಮ್ ರುವಾಯ್ ಎಂದೇ ಉತ್ತರ ಬಂತು ಬೇಂಕು ಅಧಿಕಾರಿಗೂ ಕಿರಿಕಿರಿ ಆಯಿತು.ಪುನಃಪುನಃ ಆ ಗ್ರಾಹಕ ಮಲೆಯಾಳದಲ್ಲೇ ಮಾತಾಡತೊಡಗಿದರು.ಕೊಲ್ಲೂರಿಗೆ ಬಂದು ಸುಮಾರು ಇಪ್ಪತ್ತು ವರ್ಷಗಳ ಮೇಲಾಯ್ತು ಆದರೂ ಆ ಮನುಷ್ಯ ಎನಕೆ ಕನ್ನಡ ಅರಿವಿಲ್ಲ ಎಂದು ಜಂಬದಲ್ಲೇ ಇದ್ದರು.ಹಾಗೂ ಅವರನ್ನು ಸಹಿಸಿಕೊಂಡು ಊರವರಿದ್ದರು.ಆಯಾ ರಾಜ್ಯದ ಭಾಷೆ ಕಲಿಯದೇ ವರ್ಷಾನುಗಟ್ಟಳೆ ಒಂದೆಡೆ ಇರಬೇಕೆಂದರೆ ಅದು ಕರ್ನಾಟಕವೇ ಆಗಿರಬೇಕು ವಿನಾ ಬೇರೆ ಯಾವ ರಾಜ್ಯದಲ್ಲೂ ಈ ರೀತಿಯ ಸವಲತ್ತು ಸಿಗಲಾರದು.

ಬೆಂಗಳೂರು ನಗರದಲ್ಲಿ ಕನ್ನಡಪರ ಸಂಘಟನೆಗಳು ಅನೇಕವಿವೆ.ಕನ್ನಡಕ್ಕಾಗಿ ಹೋರಾಡುವ ಮಂದಿಗಳು ಸಂಸ್ಥೆಗಳು,ರಾಜಕಾರಣಿಗಳು,ಕೂಟಗಳು ಇತ್ಯಾದಿ ಇತ್ಯಾದಿ ತುಂಬ ಇವೆ ಎಂಬ ಭಾವನೆ ಇಟ್ಟುಕೊಂಡು ಬಂದರೆ ಇಲ್ಲಿನ ಪರಿಸ್ಥಿತಿ ಬೇರೆಯೇ ಆಗಿದೆ.ನೂರು ಮಂದಿಯ ಬಳಿ ನೀವು ವ್ಯವಹರಿಸಿದರೆ ನಿಮಗೆ ಕನ್ನಡದ ಕಂಪು ಕೇವಲ ಹದಿನೈದು ಯಾ ಇಪ್ಪತ್ತು ಜನರಲ್ಲಿ ಸಿಕ್ಕೀತು ಬಹು ಕಷ್ಟದಲ್ಲಿ! ಉಳಿದವರೆಲ್ಲ ಅನ್ಯಭಾಷಿಗರು.ಲಾಲ್‌ಬಾಗಿನ ಬಳಿ ನಿಂತಿದ್ದೆ.ಇಬ್ಬರು ಯುವಕರು ಹತ್ತಿರ ಬಂದರು-
"ಅಂಕಲ್‌ಜಿ ಯಹಾಂ ಸೆ ಮೆಜೆಸ್ಟಿಕ್‌ ಕೋ ಬಸ್ ಮಿಲೇಗಿ ಕ್ಯಾ?" ಎಂದು ಕೇಳಿದರು.
ನೋಡೋಣ ಎಂದು ನೀವು ಯಾವ ಊರಿನವರು ಎಂದು ಕೇಳಿದೆ.
"ರಾಯಚೂರ್ರೀ ಸರ" ಅಂದರು!
"ರಾಯಚೂರಿನ ಮಂದಿಗೆ ಕನ್ನಡ ಬರಾಂಗಿಲ್ಲೇನು?" ನಾನು ರಾಯಚೂರಿನವನಲ್ಲದಿದ್ದರೂ ಆದಷ್ಟು ಅವರ ಧಾಟಿಯಲ್ಲಿ ಕೇಳಿದೆ.
"ಬರತ್ರೀ ಸರ,ಆದರ ಇಲ್ಲಿ ಬೆಂಗ್ಳೂರ್ನಾಗೆ ನಡೀಬೇಕಲ್ರೀ! ಅದಕ್ಕ ಹಿಂದೀವಳಗ ಕೇಳಾಕಹತ್ತೀನ್ರೀ" ಅವನ ಸಮಜಾಯಿಷಿಕೆ....
ಅಂದರೆ ಬೆಂಗಳೂರಿನಲ್ಲಿ ಬೇರೆ ಊರಿಂದ-ಕರ್ನಾಟಕದವರೇ-ಬಂದವರೂ ಸಹ ಮೊದಲಿಗೆ ಹಿಂದಿಯಲ್ಲೇ ಮಾತಾಡಿ ಕಡೆಗೆ ಕನ್ನಡಕ್ಕೆ ಬರುತ್ತಾರೆ.ಇದು ಇತರ ರಾಜ್ಯದವರ ಅಹಂಕಾರವೋ ನಮ್ಮ ದೌರ್ಬಲ್ಯವೋ ತಿಳಿಯದು.
ತರಕಾರಿ ಅಂಗಡಿಗೆ ಹೋದೆ-"ಎನ್ನ ವೇಣು?" ಅಂಗಡಿ ಯಜಮಾನಿ ಕೇಳಿದಳು.
"ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತ ಇದ್ದಿ.ಕನ್ನಡ ಭಾಷೆ ಬರುವುದಿಲ್ಲವೇ?" ಕೇಳಿದೆ.
"ನನಕ ರೊಂಬ ಬಾಶೆ ವರುತ್ತೆ,ನಿನಕೆ ಎತ್ತರ ವೇಣು?" ಅವಳದ್ದು ಧಿಮಾಕಿನ ಜವಾಬು.ಇಷ್ಟು ಜಂಬ ಇರುವವಳ ಬಳಿ ವ್ಯಾಪಾರ ಮಾಡಲು ಮನಸ್ಸಾಗದೇ ವಾಪಸು ಬಂದೆ.....
ಬಸ್ಸುಗಳಲ್ಲಿ,ಪಾರ್ಕುಗಳಲ್ಲಿ,ಫುಟ್‌ಪಾತ್‌ಗಳಲ್ಲಿ,ಅಂಗಡಿ-ಹೋಟಲುಗಳಲ್ಲಿ ಎಲ್ಲೇ ನೋಡಿರಿ ಹೆಚ್ಚಿನಂಶ ಯುವಕಯುವತಿಯರು ಇಂಗ್ಲಿಷ್,....ಬಾಕಿ ಹಿಂದಿ ಮತ್ತು ಇತರೇ ಭಾಷೆಗಳಾದ ತೆಲುಗು ತಮಿಳುಗಳೆ ರಾರಾಜಿಸುತ್ತಿವೆ.ಅನೇಕ ಕಡೆಗಳಲ್ಲಿ ಅವರೇ ಬಹುಸಂಖ್ಯಾತರು ಮತ್ತು ಅವರದೇ ರಾಜ್ಯಭಾರ.ಕನ್ನಡದಲ್ಲಿ ಮಾತಾಡುವುದು ಅಂದರೆ ಬಹುತೇಕ ಜನರಿಗೆ ಹೀನೈಸಿಕೆ ಎಂದೆನಿಸುತ್ತದೆಯೋ ಏನೋ! ಬಹಳ ಕಷ್ಟಪಟ್ಟು ಇಂಗ್ಲಿಷ್ ಮಾತಾಡುತ್ತಾರೆ! ಎದುರಿಗಿದ್ದ ಆಂಗ್ಲ ಭಾಷೆ ಬಾರದವರಿಗೆ ಒಂದು ರೀತಿಯ ಮುಜುಗರ ಬೇರೆ.

ಕ.ರಾ.ರ.ಸಾ.ನಿಗಮವು ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ.ನಿಗಮದ ನಿರ್ವಹಣೆ ಅತ್ಯುತ್ತಮವಾಗಿದ್ದು ಇದು ನನಗೆ ತಿಳಿದಂತೆ ಸತತ ನಾಲ್ಕು ವರ್ಷಗಳಿಂದ ಲಾಭದಲ್ಲಿದೆ.ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆಯು ನಿತ್ಯಸಂಚಾರಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತದೆ.ಉತ್ತಮ ಕಂಡೀಷನ್ ಇರುವ ಬಸ್ಸುಗಳು,ದಿನದ ಹಾಗೂ ತಿಂಗಳ ಪಾಸುಗಳು,ವೋಲ್ವೋ ಬಸ್ಸುಗಳು,ನಗುಮುಖದ ಚಾಲಕ-ನಿರ್ವಾಹಕರು,ಪ್ರಯಾಣಿಕರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಸಹನೆಯಿಂದ ತೃಪ್ತಿಕರ ಉತ್ತರ ನೀಡಿ ಮಾರ್ಗದರ್ಶನ ಮಾಡುವ ನಿಲ್ದಾಣ ಸಿಬಂದಿಗಳು ಇನ್ನೇನು ಬೇಕು.ನಾನು ಬೆಂಗಳೂರಿನಲ್ಲಿ ಪ್ರಯಾಣಕ್ಕಾಗಿ ಬಸ್ಸುಸಾರಿಗೆಯನ್ನೇ ಇಚ್ಚಿಸುತ್ತೇನೆ.ಆಟೋಗಳಲ್ಲಿ ಪಯಣಿಸುವುದಿಲ್ಲ.ನನ್ನ ಸುಮಾರು ಎರಡೂವರೆ ವರ್ಷಗಳ ಅನುಭವದಂತೆ ಇದುವರೆಗೆ ಒಂದೇ ಒಂದು ಅಹಿತಕರ ಘಟನೆ,ಚಾಲಕ ನಿರ್ವಾಹಕರಿಂದ ಅಸಭ್ಯ ವರ್ತನೆ ಮುಂತಾದುವುಗಳನ್ನು ನಾನು ನೋಡಿಲ್ಲ.ಬೆಂಗಳೂರು ಒಂದು ಮಹಾನಗರ, ಮತ್ತು ಇನ್ನೂ ಬೆಳೆಯುತ್ತಿರುವ ನಗರ.ಇಲ್ಲಿನ ಸಾರಿಗೆ ನಿಗಮವೂ ದೊಡ್ಡದೇ.ಸಾವಿರಾರು ಬಸ್ಸುಗಳು ಅವುಗಳ ಸಿಬಂದಿ ವರ್ಗವೂ ದೊಡ್ಡದೇ.ಅವರು ನೀಡುವ ಸೇವಾ ಸೌಲಭ್ಯಗಳು ಅತ್ಯಂತ ಪ್ರಶಂಸನೀಯ.ಉತ್ತಮ ನಿರ್ವಹಣೆ ಬಗ್ಗೆ ಅದಕ್ಕೆ ಕೇಂದ್ರ ಸರಕಾರದ ಶಹಭಾಶ್‌ಗಿರಿ ಮತ್ತು ಪ್ರಶಸ್ತಿ ಸಹಾ ಬಂದಿದೆ.

ದೊಡ್ಡ ಸಂಸ್ಥೆ ಎಂದ ಮೇಲೆ ಸಣ್ಣಪುಟ್ಟ ಕುಂದುಕೊರತೆಗಳು ಇದ್ದೇ ಇರುತ್ತವೆ.ಆದರೆ ನಾವು ಸಮಗ್ರ ದೃಷ್ಟಿಕೋಣವಿಟ್ಟು ಸಂಸ್ಥೆಯ ಕಾರ್ಯವಿಧಾನವನ್ನು ವಿಶ್ಲೇಷಿಸಬೇಕೆ ವಿನಹ ಒಂದೆರಡು ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿ ಇಡೀ ವ್ಯವಸ್ಥೆಯನ್ನು ಹೀಗಳೆಯುವುದು ತಪ್ಪು.ಇತ್ತೀಚಿನ ಟೈಂಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಬ್ಬಾಕೆಯ ದೂಷಣಾಲೇಖನ ಬಂದಿತ್ತು-"ಬಸ್ ಕರೋ ಇಟ್ಸ್ ಅವರ್ ಹೋಮ್ ಟೂ"-ಬಸ್ಸಿನಲ್ಲಿ ಸಿಬಂದಿವರ್ಗದವರು ಒಬ್ಬ ಪಾಪದ ಹುಡುಗಿಯನ್ನು ಕಳ್ಳತನದ ಆರೋಪದ ಮೇಲೆ ವಿನಾಕಾರಣ ಥಳಿಸುತ್ತಿದ್ದರು.ಅದನ್ನು ಆಕೆ ತಪ್ಪಿಸಿದರು.ಈ ನಡುವೆ ಸದರಿ ಸಿಬಂದಿಗಳು ತಮ್ಮ ವಿರುದ್ಧ ಮಾತಾಡಿದ ಈ ಹಿಂದಿ ಭಾಷಿಕ ಮಹಿಳೆ ಮೇಲೇರಿ ಬಂದರು-ಹಿಂದಿ ಮಾತನಾಡುವ ಮಂದಿಗೆ ಕನ್ನಡದವರ ವಿರುದ್ಧ ಮಾತಾಡಲು ಯಾವ ಹಕ್ಕಿದೆ? ಇಳಿ ಕೆಳಗೆ ಎಂದು ತನ್ನನ್ನು ಬಸ್ಸಿನಿಂದ ಇಳಿಸಿದರು ಎಂದು ಆಕೆಯ ಆರೋಪ....

ನಾನು ಬಸ್ಸಿನ ಸಿಬಂದಿಯವರು ಮಾಡಿದ ದೌರ್ಜನ್ಯದ ಪರವಾಗಿ ಯಾವುದೇ ವಕಾಲತ್ತು ಮಾಡುವುದಿಲ್ಲ.ಅವರು ಮಾಡಿದ್ದು ತಪ್ಪು ಮತ್ತು ಅವರನ್ನು ಎದುರಿಸಿ ಆ ಪಾಪದ ಹುಡುಗಿಗೆ ಸಹಾಯ ಮಾಡಿದುದು ಪ್ರಶಂಸೆಗೆ ಅರ್ಹ....ತಾನು ಬೇರೆ ರಾಜ್ಯದಿಂದ ಬಂದವಳು,ಇಲ್ಲಿ ಜೀವಿಸುವವಳು ಆದ್ದರಿಂದ ಇಲ್ಲಿನ ಭಾಷೆ ಕಲಿಯುವುದು ತನ್ನ ಕರ್ತವ್ಯವಾಗಿರಬೇಕಿತ್ತು.ಅದನ್ನು ಅವರೂ ಒಪ್ಪುತ್ತಾರೆ.ಭಾಷೆ ಕಲಿಯುವುದು ಎಂದರೆ ಅ ಆ ಇ ಈ ಕಲಿಯುವುದಲ್ಲ.ಜನರೊಡನೆ ವ್ಯವಹರಿಸಲು ಆಗುವಷ್ಟನ್ನಾದರೂ ಕಲಿಯಬಹುದಿತ್ತು..ಇಲ್ಲ ಅದನ್ನು ಆಕೆ ಕಲಿಯಲಿಲ್ಲ ಮಾತ್ರವಲ್ಲ ತಾನು ಮನಸ್ಸಾದರೆ ಮಾತ್ರ ಕಲೀತೇನೆ,ಕನ್ನಡ ಕಲಿಯುವಂತೆ ಯಾರೂ ತನ್ನನ್ನು ಬಲವಂತ ಪಡಿಸಲಾಗದು.ತಾನು ಯಾವ ಭಾಷೆ ಉಪಯೋಗಿಸುತ್ತೇನೆ ಎಂಬುದು ತನ್ನ ಪ್ರಜಾಸತ್ತಾತ್ಮಕ ಹಕ್ಕು.ಕನ್ನಡ ಮಾತನಾಡುವುದಿಲ್ಲ ಎಂದು ಯಾರೂ ತನಗೆ ಸಾರ್ವಜನಿಕ ಸೇವೆ ನಿರಾಕರಿಸಲಾಗದು ಎಂದು ಸಮರ್ಥಿಸಿಕೊಂಡಿದ್ದಾರೆ...ಇದು ಮಾತ್ರ ಧಾರ್ಷ್ಟ್ಯದ ಮಾತು.ನಮ್ಮ ಬೆಂಗಳೂರಿಗೆ ಬಂದಿದ್ದೀರಿ.ಇಲ್ಲಿನವರ ಪ್ರೀತಿಗೆ ಪಾತ್ರರಾಗಬೇಕೇ ವಿನಃ ಇಲ್ಲಿನ ವ್ಯವಸ್ಥೆಗಳನ್ನು ದೂಷಿಸುವುದು ಸ್ವಲ್ಪ ಅತಿರೇಕದ ಮಾತು.ಇದು ಸಲ್ಲದು.ನಾವಿದನ್ನು ಒಪ್ಪಲಾಗದು.ಯಾವುದೇ ಭಾಷೆ ಕಲಿಯಲು ಬಹಳ ಕಷ್ಟವೇನಿಲ್ಲ.....ನಮ್ಮಲ್ಲಿ ತಮಿಳುನಾಡಿನಿಂದ ಒಬ್ಬ ಕೃಷಿ ಆಧಿಕಾರಿ ವರ್ಗವಾಗಿ ಬಂದರು.ತಮಗೆ ನೂರು ದಿನ ಸಮಯ ಕೊಡುತ್ತೇನೆ ಅಷ್ಟರ  ಒಳಗೆ ನಮ್ಮ  ಮಾತು ಕಲಿಯಬೇಕು ಎಂದಾಗ ತನಗೆ ಕೇವಲ ಒಂದು ತಿಂಗಳು ಸಮಯ ಕೊಡಿ ಸಾಕು ಅಷ್ಟರೊಳಗೆ ಕಲೀತೇನೆಂದರಲ್ಲದೇ ಕಲಿತೂ ಬಿಟ್ಟರು ಮತ್ತು ತುಂಬ ಜನಪ್ರಿಯ ಅಧಿಕಾರಿ ಎಂಬ ಹೆಗ್ಗಳಿಕೆಯನ್ನೂ ಅಲ್ಪಕಾಲದಲ್ಲಿ ಗಳಿಸಿದರು.ಈ ರೀತಿಯ ಸಕಾರಾತ್ಮಕ ನಡವಳಿಕೆ ಇರಬೇಕೇ ವಿನಃ ತನಗೆ ಖುಷಿ ಇದ್ದರೆ ಮಾತ್ರ ಕಲೀತೇನೆ ಎಂಬ ಮನೋಭಾವನೆ ಒಳ್ಳೆಯದಲ್ಲ.

Monday, September 24, 2012

The Issue of Corruption-An Observation

-----೫-----
                       
            "ಯಾಜಿಯವರೆ ಇಲ್ಲಿ ರೇಷನ್ ಕಾರ್ಡ್ ಮಾಡಿಸುನ ಆಫೀಸು ಎಲ್ಲುಂಟು?" ಕೇಳಿದೆ.ದಿಲ್ಲಿಗೆ ವರ್ಗವಾಗಿ ಸ್ವಲ್ಪ ದಿನಗಳಾಗಿದ್ದವು.s
            "ನೀವೇಕೆ ಕಷ್ಟ ಪಡ್ತೀರಿ,ನಮ್ಮ ಭಗವಾನ್ ಬರ್ತಾನೆ ಅವನ ಹತ್ತಿರ ಹೇಳುವ,ಮಾಡಿಸ್ಕೊಡ್ತಾನೆ.ಒಂದೈವತ್ತು ರುಪಾಯಿ ಬಿಸಾಡಿದ್ರೆ ಸೈ." ಯಾಜಿ ನಿರ್ಲಕ್ಷ್ಯದಿಂದ ಹೇಳಿದರು.ನನಗೆ ಸ್ವಲ್ಪ ಬೇಸರವಾಯ್ತು.
            ನೋಡೋಣ ಎಂದು ಮರುದಿನ ರೇಷನ್ ಆಫೀಸು ಹುಡುಕಿಕೊಂಡು ಹೋದೆ.ಅವರಿವರನ್ನು ಕೇಳಿಕೊಂಡು ತಲುಪಿದಾಗ ಸುಮಾರು ಹತ್ತೂವರೆ ಆಗಿತ್ತು..
            "ಜಯ್ ರಾಮ್ ಜೀ ಕಿ,ನಾನು ಕರ್ನಾಟಕದಿಂದ ಬರುತ್ತಿದ್ದೇನೆ.ಸಿಂಡಿಕೇಟ್ ಬೇಂಕಿನಲ್ಲಿ ವರ್ಗಾವಣೆ ಹೊಂದಿ ಇದೇ ಪ್ರಸಾದ್ ನಗರದಲ್ಲಿ ವಾಸ್ತವ್ಯ ಮಾಡಿದ್ದೇನೆ.ನನ್ನ ರೇಷನ್ ಕಾರ್ಡ್ ಆಗಬೇಕಿತ್ತು."ಎಂದೆ.ಸಂಭಾಷಣೆ ಹಿಂದಿಯಲ್ಲೇ ನಡೆಸಿದೆ.    
            "ಉಧರ್ ಖಿಡಿಕಿ ಸೆ ಅರ್ಜೀ ಲೇಕೆ ಭರ್ಕೆ ದೀಜಿಯೆ" ಎಂದು ಅಲ್ಲಿನ ಅಧಿಕಾರಿ ತಿಳಿಸಿದರು.
            ಐವತ್ತು ಪೈಸೆ ಅರ್ಜಿ ಪಡಕೊಂಡು ಭರ್ತಿ ಮಾಡಿ ಅಗತ್ಯವಿರುವ ಎಲ್ಲ ಕಾಗದ,ಕಡತಗಳನ್ನು ಲಗತ್ತಿಸಿ ಅವರಿಗೆ ಕೊಟ್ಟೆ,                  
            "ಏಕ್ ಹಫ್ತೆ ಕೆ ಬಾದ್ ಆಯಿಯೇಗಾ"
            "ಏಕ್ ಹಫ್ತಾ ಕ್ಯೊಂ?" ಕೇಳಿದೆ.  
            "ಐಸಾ ಹೈ,ಆಜ್ ಕಲ್ ಗಲತ್ ತರೀಕೆ ಸೆ ಕಾರ್ಡ್ ಬನಾನೆವಾಲೆ ಜ್ಯಾದಾ ಹೋಗಯೇ ಹೈ,ಇಸ್ ಲಿಯೆ ಜಾಂಚ್ ಪಡ್ತಾಳ್ ಕರ್ ನಾ ಪಡತಾ ಹೈ"
            "ನಮ್ಮ ಮನೆಯವರಿಗೆ ಹಿಂದಿಯ ತಿಳುವಳಿಕೆ ಕಮ್ಮಿ.ಕೊಂಚ ಸುಧಾರಣೆ ಮಾಡಬೇಕು" ಎಂದೆ.
            "ದೇಖತೇ ಹೈ,ಅಬ್ ಆಪ್ ಚಲೋ,ಹಫ್ತೆ ಬಾದ್ ಆವೋ" ಉತ್ತರ ಬಂತು,ನಾನು ಮರಳಿದೆ.ಮನೆಯಲ್ಲಿ ಈ ಬಗ್ಗೆ ಸೂಚನೆನೀಡಿದೆ.ವಾರ ಕಳೆಯಿತು. ಪುನಃ ಕಚೇರಿಗೆ ಹೋದೆ.ರೇಷನ್ ಕಾರ್ಡ್ ತೆಗೆದು ಕೈಯ್ಯಲ್ಲಿ ಕೊಟ್ಟರು.
            "ಮತ್ತೆ ಮನೆಗೆ ಯಾರೂ ಬರಲಿಲ್ಲ?"ವಿಚಾರಿಸಿದೆ.
            "ದೇಖೋ ಭಾಯ್ ಸಾಬ್ ನೀವು ಬೇಂಕಿನಲ್ಲಿ ಆಫೀಸರ್ ಆಗಿದ್ದೀರಿ.ಸಂಬಂಧಪಟ್ಟ ಎಲ್ಲಾ ಕಾಗದಪತ್ರಗಳನ್ನು ನೀಡಿದ್ದೀರಿ,ವಿಳಾಸದ ಮಾಹಿತಿಯನ್ನು ಕೊಟ್ಟಿದ್ದೀರಿ,ಹಾಗಿರುವಾಗ ತಪಾಸಣೆಯ ಜರೂರಿ ಏನಿದೆ? ಮೇಲಾಗಿ ನೀವು ಕರ್ನಾಟಕದಿಂದ ಬಂದವರು ಇಷ್ಟು ಚೆನ್ನಾಗಿ ಹಿಂದಿ ಮಾತಾಡುತ್ತೀರಿ!ಬಹಳ ಆಶ್ಚರ್ಯ!ನಿಮಗೆ ರೇಷನ್ ಕಾರ್ಡ್ ಕೊಡದೇ ಮತ್ತೆ ಯಾರಿಗೆ ಕೊಡಲಿ?" ಎಂದರು ಆಫೀಸರ್.
            ಯಾಜಿಯವರಿಗೆ ಬಹಳ ಆಶ್ಚರ್ಯ ಆಯಿತು."ಎಷ್ಟು ಕೊಟ್ಟಿರಿ?" ಕೇಳಿದರು.
            "ಐವತ್ತು ಪೈಸೆ ಕೊಟ್ಟೆ,ಅದೂ ಅರ್ಜೀ ಫಾರ್ಮಿನ ಬೆಲೆ" ಎಂದೆ.ಅವರಿಗೆ ನಂಬಲು ತುಂಬ ಕಷ್ಟವಾಯಿತು.
            ಸುಮಾರು ನಾಲ್ಕು ವರ್ಷಗಳ ಬಳಿಕ ಜನಕ್‌ಪುರಿ ಎಂಬಲ್ಲಿ ಮನೆ ಬದಲಾಯಿಸಿದಾಗ ಕೂಡಾ ರೇಷನ್ ಕಾರ್ಡ್ ಬದಲಾಯಿಸಲು ಯಾವುದೇ ಕಷ್ಟ ಆಗಲಿಲ್ಲ. ಆದಷ್ಟು ಮಟ್ಟಿಗೆ ಕಾಗದಪತ್ರಗಳನ್ನು ಸರಿಯಾಗಿ ಜೋಡಿಸಿಕೊಂಡು ಸರಿಯದ ರೀತಿಯಲ್ಲಿ ವಿನಯಪೂರ್ವಕವಾಗಿ ಸಂಪರ್ಕಿಸಿದರೆ ಯಾವುದೇ ಕಚೇರಿಯಲ್ಲಿ ಸಾಮಾನ್ಯವಾಗಿ ನಮ್ಮ ಕೆಲಸ ಆಗಿಯೆ ಆಗುತ್ತದೆ.ಇದಕ್ಕೆ ದಿಲ್ಲಿ,ಬೆಂಗಳೂರು,ಹುಬ್ಬಳ್ಳಿ ನಗರಗಳಲ್ಲಿ ನನಗಾದ ಒಳ್ಳೆಯ ಅನುಭವಗಳೇ ಸಾಕ್ಷಿ. ನಾವೂ ಸಹಾ ನಮ್ಮ ಸಂಪರ್ಕಕ್ಕೆ ಬಂದ,ಬರುವ ಗ್ರಾಹಕ,ವ್ಯಕ್ತಿಗಳೊಂದಿಗೆ ಸಹಾ ಅನುನಯದಿಂದ ವ್ಯವಹರಿಸಿದರೆ ನಮಗೆ ಹೊಸ ಗೆಳೆಯರು ಲಭ್ಯರಾಗುವು ದಷ್ಟೇ ಅಲ್ಲ ಮುಂದೊಂದು ದಿನ ಅನುಕೂಲವೇ ಆಗಬಹುದು.ಇದು ನನ್ನ ಅನುಭವ.
            ದೇಶದಲ್ಲೇ ಅತಿ ಬುದ್ಧಿವಂತರಿರುವ ನಾಡಿನವರು ಎಂಬ ದೊಡ್ಡಸ್ತಿಕೆ ಉಡುಪಿ ಜಿಲ್ಲೆಯವರಿಗೆ ಉಂಟು.ನಾವು ಬುದ್ದಿವಂತರೆಂದು ಇತರರು ಹೇಳುವುದು ಒಂದು ಮಾತು.ನಾವು ಬುದ್ಧಿವಂತರೆಂದು ನಾವೇ ಹೇಳಿಕೊಂಡು ತಿರುಗುವುದು ಇನ್ನೊಂದು ಸಂಗತಿ.ಉಡುಪಿ ಜಿಲ್ಲೆಯವರು ಸಾಮಾನ್ಯವಾಗಿ ಎರಡನೇ ಜಾತಿ.ನನಗೆ ನಮ್ಮ ಜಿಲ್ಲೆಯಲ್ಲೆ ಒಂದೆರಡು ಬಾರಿ ಅನನುಕೂಲ,ಮುಜುಗರದ ಅನುಭವ ಆಯಿತು....
            ದಿಲ್ಲಿಯಿಂದ ಕುಂದಾಪುರಕ್ಕೆ (ಕೊಲ್ಲೂರಿಗೆ) ವರ್ಗವಾಗಿ ಬಂದೆ.ಯಥಾಪ್ರಕಾರ ರೇಷನ್ ಕಾರ್ಡಿಗೆ ಅರ್ಜಿ ಕೊಟ್ಟೆ.ಮನುಷ್ಯ ಮಾತ್ರದವನಿಗೆ ಅರ್ಥ ಆಗದ ಒಂದು ಕಾನೂನಿನ ಕಡ್ಡಿ ಅಡ್ಡ ಇಟ್ಟು ರೇಷನ್ ಕಾರ್ಡ್ ವಿತರಿಸಲು ಪಿರಿಪಿರಿ ಸುರುವಾಯ್ತು.ಕಡೆಗೆ ತಹಸೀಲ್ದಾರರ ಬಳಿ ಹೋದೆ.
            "ಇದೇನು ನಾಲ್ಕು  ತಿಂಗಳ ಹಿಂದಿನ ತಾರೀಕಿದೆಯಲ್ಲಾ!" ತಹಸೀಲ್ದಾರರು ವಿಚಾರಿಸಿದರು.
            "ಹೌದು ಸ್ವಾಮಿ ನಾಲ್ಕು ತಿಂಗಳ ಹಿಂದೆ ಅರ್ಜಿ ಕೊಟ್ಟಿದ್ದೆ" ಚುಟುಕಾಗಿ ಉತ್ತರಿಸಿದೆ.
            ಒಂದು ಕ್ಷಣ ನನ್ನನ್ನೇ ನೋಡಿದರು.ಆತ ತುಂಬ ಒಳ್ಳೆಯ ಹಾಗೂ ನೇರ ಸ್ವಭಾವದ ಅಧಿಕಾರಿಯೆಂದು ಕೇಳಿದ್ದೆ."ನೋಡಿ ಇವರೆ,ಈಗ ನೀವು ತಾರೀಕು ಚೇಂಜ್ ಮಾಡಿ ಕೊಡಿ.ನಿಮಗೆಒಂದು ವಾರ ಅಥವಾ ಹತ್ತು ದಿನಗಳಲ್ಲಿ ಕಾರ್ಡ್ ಕೊಡಿಸುತ್ತೇನೆ,ಅಲ್ಲ ನೀವು ಮೊದಲೇ ನೇರವಾಗಿ ನನ್ನ ಬಳಿ ಬಂದಿದ್ದರೆ ಇಷ್ಟರೊಳಗೆ ನಿಮ್ಮ ಕೆಲಸ ಆಗುತ್ತಿತ್ತು"ಎಂದರು.
            "ನೋಡಿ ಸರ್ ನಮ್ಮ ಬೇಂಕಿನಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಅಂದರೆ ಎಕೌಂಟ್ ತೆರೆಯಲು,ಹಣ ಡ್ರಾ ಮಾಡಲು ಇಂತದೆಕ್ಕೆಲ್ಲಾ ಯಾರೂ ಸೀದಾ ಮೆನೆಜರರ ಬಳಿ ಹೋಗುವುದಿಲ್ಲ,ಅದಕ್ಕೆ ಸಂಬಂಧ ಪಟ್ಟ ಡಿಪಾರ್ಟ್‌ಮೆಂಟುಗಳಿಗೆ ಹೋಗ್ತಾರೆ.ಇಲ್ಲಿಯೂ ಹಾಗೇ ಇರಬಹುದು ಎಂದು ನಿಮ್ಮ ಗುಮಾಸ್ತರ ಬಳಿ ಹೋದೆ.ಅದೇ ಸಮಸ್ಯೆ ಆಯ್ತು" ತಹಸೀಲ್ದಾರರು ನಕ್ಕರು.ನನ್ನ ಕಾರ್ಡ್ ಅವರ ಮಾತಿನಂತೆ ಕೂಡಲೇ ಸಿಕ್ಕಿತು.ಆದರೆ ಗೊತ್ತು ಗುರುತಿಲ್ಲದ ಇತರ ನಗರಗಳಲ್ಲಿ ಆರಾಮವಾಗಿ ಆದ ಕೆಲಸಕ್ಕೆ ಇಲ್ಲಿ ಪರದಾಡಬೇಕಾಯ್ತಲ್ಲ ಎಂಬ ಕೊರಗು ಉಳಿಯಿತು.
            ಸರಕಾರೀ ಅಧಿಕಾರಿಗಳೆಂದರೆ ಒಂದು ರೀತಿಯ ತಿರಸ್ಕಾರ ಭಾವನೆ ನಮ್ಮಲ್ಲಿದೆ.ಸರಕಾರೀ ಕೆಲಸಕಾರ್ಯಗಳೆಂದರೆ ಹಣ ಇಲ್ಲದೆ ಆಗುವುದೇ ಇಲ್ಲ ಎಂಬ ಪರಿಸ್ಥಿತಿಯನ್ನು ನಾವು ಜನರೇ ಹುಟ್ಟಿಸಿ ಬೆಳೆಸಿಕೊಂಡು ಬಂದದ್ದು, ಈಗ ಪ್ರಸಕ್ತ ಅಧಿಕಾರಿಗಳನ್ನು ಬೈಯ್ಯುವುದೇ ಒಂದು ಚಾಳಿಯಾಗಿ ಬಿಟ್ಟಿದೆ.ಎಲ್ಲೇ ಹೋಗಲಿ,ಯಾವುದೇ ಮದುವೆ,ಮುಂಜಿ ಸಭೆಗಳಿಗೆ ಹಾಜರಾಗಿ ಒಂದೇ ರಾಜಕೀಯ ಇಲ್ಲವೇ ಅಧಿಕಾರಿ ವರ್ಗದವರನ್ನು ಹೀಯಾಳಿಸುವುದು ಫ್ಯಾಷನ್ ಆಗಿ ಹೋಗಿದೆ.ತಮ್ಮದೆಂದು ಒಂದು ಹಕ್ಕಿದೆ,ಅದೇ ರೀತಿಯಲ್ಲಿ ಬಾಧ್ಯತೆ ಸಹಾ ಇದೆ ಎಂಬುದನ್ನು ಜನರು ಮರೆಯುತ್ತಾರೆ.ಸಮಸ್ಯೆ ಏನಾದರೂ ಬಂದರೆ ಮಂತ್ರಿ, ಮುಖ್ಯಮಂತ್ರಿಗಳನ್ನು ಹಿಗ್ಗಾಮುಗ್ಗಾ ಜರೆದು ನಿವಾಳಿಸುವುದು ಮತ್ತು ನಾಲ್ಕು ಜನರೆದುರು ತಾನೊಬ್ಬ ಬುದ್ಧಿವಂತ ಎಂದೆನಿಸಿಕೊಳ್ಳುವುದು ವಾಡಿಕೆ ಆಗಿದೆ. ಟ್ಯಾಕ್ಸ್ ಆಫೀಸರ್ ಲಂಚಕೋರ,ವಿಲೇಜ್ ಅಕೌಂಟೆಂಟ್ ಕಳ್ಳ ಸೂಳೇಮಗ,ದುಡ್ಡಿನ ಎದುರಿಗೆ ಇವರಿಗೆ ದೋಸ್ತಿ,ಸಂಬಂಧ ಇದು ಯಾವುದೂ ತೋರುವುದಿಲ್ಲ ಹಾಗೆ ಹೀಗೆ ಎಂದು ಹಳಿಯುತ್ತಾರೆ.ಲಂಚ ಡಿಮಾಂಡ್ ಮಾಡುವ ಸೇಲ್ಸ್ ಟ್ಯಾಕ್ಸ್ ಅಧಿಕಾರಿ ಕಳ್ಳ ಬೋಳಿಮಗ ಆದರೆ ಲಂಚ ಕೊಟ್ಟ ವ್ಯಾಪಾರಿ ಯಾರ ಮಗ? ಎಂದು ಒಬ್ಬರ ಬಳಿ ಕೇಳಿದಾಗ ಬಹಳ ಸಿಟ್ಟು ಬಂತವರಿಗೆ.ತಾನು ವ್ಯಾಪಾರದ ಲೆಕ್ಕ ಬರಿಯೂದಿಲ್ಲ,ಟ್ಯಾಕ್ಸ್ ಕಟ್ಟುವುದಿಲ್ಲ,ಟ್ಯಾಕ್ಸ್ ಆಫೀಸರ್ ಮಾತ್ರ ಬೋಳೀ ಮಗ! ನನ್ನ ಹತ್ರ ಒಂದು ವಾರ ಮಾತಾಡಲಿಲ್ಲ.
            ಭ್ರಷ್ಟತೆ ರಾಜ್ಯದಲ್ಲಿ,ದೇಶದಲ್ಲಿ ಇಲ್ಲವೇನೆಂದಲ್ಲ.ಉದಯವಾಣಿಯ ಒಂದು ಸಂಚಿಕೆಯಲ್ಲಿ ಉಲ್ಲೇಖವಾದಂತೆ ಲಂಚಗುಳಿತನ ಈಗಲ್ಲ ಸುಮಾರು ಎಂಟುನೂರು ವರ್ಷಗಳ ಹಿಂದೆ ಇತ್ತೆಂದು ಶಿವಶರಣ ಬಸವೇಶ್ವರರೇ ತಮ್ಮ ವಚನ ಒಂದರಲ್ಲಿ ಹೇಳಿದ್ದಾರೆ-ನೇರಳೆ ಹಣ್ಣಿಗೆ ಕಪ್ಪು ಬಣ್ಣವನ್ನು ಬಳಿದು ಮಾರುವ ಜನರನ್ನು ಏನೆಂದು ಕರೆಯಬೇಕು?- ಎಂದು.ಹಾಗೆಂದು ಈಗ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ಸಮರ್ಥಿಸಲಾಗುವುದಿಲ್ಲ.
            ನನ್ನ ವೃತ್ತಿಜೀವನದಲ್ಲಿ ನನ್ನ ಸ್ವಂತ ಕೆಲಸಗಳಿಗೆ ಸರಕಾರೀ ಅಧಿಕಾರಿಗಳ ಬಳಿ ಹೋಗುವ ಪರಿಸ್ಥಿತಿಗಳು ಕೆಲವೇ ಕೆಲವು ಎನ್ನಬಹುದು.ಆದರೂ ಇವುಗಳಲ್ಲಿ ದುಡ್ಡುಕೊಟ್ಟು ಕೆಲಸ ಮಾಡಿಸಿಕೊಂಡ ಸಂಧರ್ಭಗಳು ಇಲ್ಲವೇ ಇಲ್ಲ ಎನ್ನಬಹುದು.ಆದ್ದರಿಂದ ಸಾಮಾನ್ಯವಾಗಿ ಲಂಚದ ಬಗ್ಗೆ ಮಾತಾಡುವಾಗ ಕೆಳಗಿನ ಮಟ್ಟದ ಅಧಿಕಾರಿ ಇಲ್ಲವೇ ನೌಕರರನ್ನು ತೆಗಳುವಾಗ ಮನಸ್ಸಿಗೆ ಕಷ್ಟವಾಗುತ್ತದೆ.
            ಕೃಷಿಸಾಲ ನೀಡುವ ಮೊದಲು ಆಯಾ ರೈತರ ತೋಟ,ಕೃಷಿಯ ಪೂರ್ವಸಮೀಕ್ಷೆ ನಡೆಸಬೇಕು.ಅಂತೆಯೇ ಒಬ್ಬ ಆಢ್ಯರೆನಿಸಿಕೊಂಡವರ ಜಾಗ ನೋಡಲು ಹೋಗಿದ್ದೆ.ತನಗೆ ಬೇಕಾದ ಸಾಲ-ಹತ್ತಿರದವರೊಬ್ಬರ ತೋಟ ಖರೀದಿ.ಸಾಮಾನ್ಯವಾಗಿ ಅವರ ಸಾಲದ ಉದ್ದೇಶ ಸಮಂಜಸ ಎನಿಸದಿದ್ದರೂ ಅವರ ಹಿಂದಿನ ಬೇಂಕ್ ವ್ಯವಹಾರಗಳು ರೆಗುಲರ್ ಇದ್ದುದರಿಂದ ಒಪ್ಪಿಕೊಂಡಿದ್ದೆ.ಅವರ ತೋಟ,ಕೃಷಿ,ಬೆಳೆ ಮತ್ತು ಹಿಡುವಳಿಗಳ ಬಗ್ಗೆ ವಿವರಣೆ ಬರಕೊಂಡೆ.     "ನೋಡಿ ಸರ್,ನಮಗೆ ಒಟ್ಟು ಕುಟುಂಬದ ಜಾಗ ತುಂಬ ಉಂಟು.ಆದರೆ ಸ್ವಲ್ಪ ಜಾಗಕ್ಕೆ ಇನ್ನೂ ಆರ್ ಟಿ ಸಿ ಸಿಗಬೇಕಷ್ಟೆ.ಸಿಕ್ಕಿದ ಕೂಡಲೆ ತಿಳಿಸುತ್ತೇನೆ."
            "ಒಟ್ಟು ಎಷ್ಟು ಜಾಗ?"
            "ನೋಡಿ ಸ್ವಾಮಿ,ಒಟ್ಟು ಒಂಭತ್ತು ಎಕರೆಯಷ್ಟು ಜಾಗ ಅಕ್ರಮ ಸಕ್ರಮ ಪ್ರಕಾರ ನಮಗೆ ರಿಕಾರ್ಡ್ ಆಗಬೇಕು.ಆದರೆ ಕಳ್ಳನಿಗೆ ಇಪ್ಪತ್ತು ಸಾವಿರ ಪೀಕ ಬೇಕು ನೋಡಿ.ಜನರ ಆಶೆಗೆ ಒಂದು ಎಂಡ್ ಇಲ್ಲ.ಎಷ್ಟು ಎಳೆದರೂ ಇನ್ನೂ ಕಮ್ಮಿಯೇ!"
            ಕಳ್ಳ ಎಂದು ಯಾರನ್ನು ಉದ್ದೇಶಿಸಿದ್ದು ಎಂದು ತಿಳಿಯಿತು.ನನ್ನ ಅನುಭವದಂತೆ ಆ ತಹಸೀಲ್ದಾರರು ಒಳ್ಳೆಯವರೇ.ಮನಸ್ಸಿಗೆ ಒಂಚೂರು ಬೇಸರ ಸಹ ಆಯ್ತು.
            "ನೋಡಿ ಇವರೇ,ನಿಮ್ಮ ಬಳಿ ನಿಮ್ಮದು,ತಮ್ಮನ ಪಾಲಿದ್ದು,ಹೆಂಡತಿಯ ಪಾಲಿದ್ದು ಅಂತ ಸುಮಾರು ಎಂಟೊಂಭತ್ತು ಎಕರೆ ತೋಟ ಆಸ್ತಿ ಇದೆ. ಹಿಂದೆ ಈ ಜಾಗವೆಲ್ಲ ನಿಮ್ಮ ತಂದೆಯರೊಬ್ಬರ ಹೆಸರಲ್ಲಿ ಮಾತ್ರ ಇತ್ತು.ಒಬ್ಬ ರೈತನಿಗೆ ತನ್ನ ಆಸ್ತಿಯ ಹತ್ತಿರದ ಸುಮಾರು ಐದು ಎಕರೆಗಳಷ್ಟು ಜಾಗ ಬೇಲಿ ಹಾಕಿದರೆ ಮುಂದೆ ಅದು ಸಕ್ರಮ ಆಗುತ್ತದೆ ಎಂದು ಇದ್ದ ಒಂದು ಆಸ್ತಿಯನ್ನು ವಿಭಾಗ ಮಾಡಿ ನೀವು ತಮ್ಮ,ಹೆಂಡತಿ ಎಂದು ಹಂಚಿಕೊಂಡಿದ್ದೀರಿ ಮತ್ತು ಹತ್ತಿರ ಹತ್ತಿರ ಎಂಟು ಒಂಭತ್ತು ಎಕರೆಗಳಷ್ಟು ಜಾಗಕ್ಕೆ ಬೇಲಿ ಹಾಕಿದ್ದೀರಿ.ಈ ಕ್ರಮ ನ್ಯಾಯಯುತವೇ ಆಗಿದೆ ಒಪ್ಪಿಕೊಳ್ಳುತ್ತೇನೆ.ಆದರೂ ನೀವೊಮ್ಮೆ ಸರಕಾರೀ ನೌಕರರ ಲೆಕ್ಕಾಚಾರದಂತೆ ಯೋಚಿಸಿ."ಕೂತಲ್ಲೆ ಎಂಟು ಎಕರೆ ಜಾಗ ಹೊಡೀತಾರಲ್ಲ ಇವರ ಆಶೆಗೆ ಒಂದು ಎಂಡ್ ಇಲ್ವಾ! ಪೀಕಲಿ ದುಡ್ಡು! ಎಕರೆಗೆ ಎರಡೂವರೆ ಲಕ್ಷ ಎಂದರೂ ಹತ್ತು ಹನ್ನೆರಡು ಲಕ್ಷ ರುಪಾಯಿ ಆಯ್ತು!" ಎಂದು ಲೆಕ್ಕಾಚಾರ ಮಾಡಿ ಹೊಟ್ಟೆಕಿಚ್ಚು ಪಡುತ್ತಾರೆ.ಹೌದೋ ಅಲ್ವೋ?" ಎಂದೆ.
            "ಹೌದು ಸರ್" ಎಂದರು.ದಾಕ್ಷಿಣ್ಯಕ್ಕೆ ಹೇಳಿದರೋ ಏನೋ ನನಗೆ ತಿಳಿಯಲಿಲ್ಲ. ನಾನೂ ಮುಂದಕ್ಕೆ ಆ ವಿಷಯವನ್ನು ಬೆಳೆಸಲಿಲ್ಲ.ಸುಮ್ಮನೆ ಸಂಬಂಧ ಇಲ್ಲದ ವಿಚಾರಗಳಲ್ಲಿ ಬಿದ್ದು ನಾವೇಕೆ ಮನಸ್ಸು ಕೆಡಿಸಿಕೊಳ್ಳಬೇಕು,ಪಾರ್ಟಿ ಒಳ್ಳೆಯವರಿದ್ದಾರೆ ಕೃಷಿಗೆ ಸಂಬಂಧಿಸಿದಂತೆ ನಮ್ಮ ಬಳಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ,ಉಪಯುಕ್ತತೆಯನ್ನು ನೋಡಿ ಸಾಲ ಕೊಡುವುದು ನಮ್ಮ ಕೆಲಸ ಎಂದು ನಾನೂ ಸುಮ್ಮನಾದೆ.ಆವರ ಸಾಲ ಮಂಜೂರು ಮಾಡಿದೆ.ಕೆಲ ಕಾಲದ ಬಳಿಕ ಒಮ್ಮೆ ಸಿಕ್ಕಿದರು."ಮೆನೇಜರರಿಗೆ ಬೇಸರವಾಗಿರಬೇಕು-ನಾನು ತಹಸೀಲ್ದಾರರಿಗೆ ಬೈದದ್ದಕ್ಕೆ.ಏನೋ ಬೇಜಾರಾಗಿತ್ತು ನೋಡಿ ಆ ದಿನ,ಹಾಗಾಗಿ ಆ ಮಾತು ಬಂತು.ಹಾಗೆ ನೋಡಿದರೆ ನಮ್ಮ ತಹಸೀಲ್ದಾರರೂ ಒಳ್ಳೆಯವರೆ.ನಮಗೆ ಹೆಚ್ಚು ಕಷ್ಟ ಕೊಡಲಿಲ್ಲ.ಆದರೂ ಆ ಡಿಪಾರ್ಟ್‌ರ್ಮೆಂಟ್‌‍ನಲ್ಲಿ ಎಲ್ಲ ನಡೀತದೆ. ಅವರಾದರೂ ಏನು ಮಾಡಿಯಾರು? ಅವರದ್ದೂ ಕೈಕಟ್ಟಿರುತ್ತದೆ" ಎಂದರು.
            "ಸರಿ ಮಾರಾಯರೆ" ಎಂದೆ.     

Sunday, September 9, 2012

Bhashabhimaana


ನಮ್ಮ ಕರ್ನಾಟಕದ ಜನತೆ ಬಹಳವೇ ಸಜ್ಜನರು,ಶಾಂತಿಪ್ರಿಯರು.ತುಂಬಾ ಮೃದುಹೃದಯವಂತರು.ನಮ್ಮ ಸಜ್ಜನಿಕೆಯ ಲಾಭವನ್ನು ಇಡೀ ದೇಶವೇ ಪಡೆಯುತ್ತ ಇದೆ.ಇಲ್ಲಿ ದೇಶದ ಎಲ್ಲ ದಿಕ್ಕುಗಳಿಂದಲೂ ಜನರು ಅನೇಕ ಕಾರಣಗಳಿಗೆಂದು ಬಂದು ನೆಲೆಸಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. .ಆತಿಥೇಯರಾದ ನಾವು ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಿಗೇನೇ ಸಜ್ಜನರಾಗಿದ್ದೇವೆಯೋ ಎಂಬ ಶಂಕೆ ಬರುತ್ತಿದೆ.ಯಾರಾದರೂ ಉದ್ಯೋಗ ಅಥವಾ ವ್ಯಾಪಾರಕ್ಕೆಂದು ತಮಿಳುನಾಡಿಗೆ ಹೋದರೆ ಅವರು ಅಲ್ಲಿ ತಮಿಳು ಕಲಿಯಲೇಬೇಕು.ಕೇರಳಕ್ಕೆ ಹೋದರೆ ಮಲೆಯಾಳಿ,ಆಂಧ್ರದಲ್ಲಿ ತೆಲುಗು ಅಥವ ಮಹಾರಾಷ್ಟ್ರದಲ್ಲಿ ಹಿಂದಿ ಯಾ ಮರಾಠಿ ಭಾಷೆ ಕಲಿಯಲೇ ಬೇಕು-ಕಲಿಯುತ್ತಾರೆ-ಏಕೆಂದರೆ ಆಯಾ ಪ್ರದೇಶದಲ್ಲಿ ಅಲ್ಲಿನ ಭಾಷೆಯು ನಡೆಯುತ್ತದೆ.ಆದರೆ ನಮ್ಮ ರಾಜ್ಯದ ಜನರು ಮೇಲೆ ಹೇಳಿದಂತೆ ತುಂಬಾನೇ ಸಜ್ಜನರು,ಉದಾರಮನಸ್ಸಿನವರು.ಇಲ್ಲಿಗೆ ಬಂದ ಅತಿಥಿಗಳ ಮನನೋಯಿಸಲು ತಯಾರಿಲ್ಲ.ಇಲ್ಲಿ ಜೀವಿಸಲು ಬಂದವರಿಗೆ ನಮ್ಮ ಭಾಷೆ ಕನ್ನಡ ಕಲಿಯುವಂತೆ ನಾವು ಪ್ರೇರೇಪಿಸುವುದಿಲ್ಲ.ಬದಲಾಗಿ ನಾವೇ ಅವರ ಭಾಷೆ ಕಲಿತು ಕೃತಾರ್ಥರಾಗುತ್ತೇವೆ.

ಗ್ರಾಮೀಣ ಪ್ರದೇಶಗಳ ಜನರು ಅಷ್ಟು ತಿಳಿದವರಲ್ಲ.ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ.ಹಾಗಾಗಿ ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಕನ್ನಡ ಉಳಿದಿದೆ ಎನ್ನಬಹುದು.ಆದರೂ ಕೆಲವೆಡೆ ಭಾಷಾಭಿಮಾನದ ಕೊರತೆ ಕಂಡುಬರುತ್ತದೆ.ಕೊಲ್ಲೂರು ಪ್ರಸಿದ್ಧಯಾತ್ರಾಸ್ಥಳ.ಇಲ್ಲಿಗೆ ಭಕ್ತಾದಿಗಳು ದೇವಿಯ ದರ್ಶನಪಡೆದು ಕೃತಾರ್ಥರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ಅದರಲ್ಲೂ ಕೇರಳದ ಭಕ್ತರು ಹೆಚ್ಚಾಗಿ ಬರುತ್ತಾರೆ.ಅನೇಕ ಭಕ್ತರು ದೇವಿಯ ಪದತಲದಲ್ಲಿ ಶಾಶ್ವತವಾಗಿ ಇರಲು ಬಯಸಿ ಇಲ್ಲೇ ನೆಲಸಿದ್ದಾರೆ.ಅಂತವರಲ್ಲಿ ಒಬ್ಬರು ಒಮ್ಮೆ ಹಣ ಪಡೆಯಲು ಬೇಂಕಿಗೆ ಹೋದರು.ಎಷ್ಟು ಬೇಕು? ಎಂದು ಅಧಿಕಾರಿ ಕೇಳಿದಾಗ "ಆಯಿರಮ್ ರೂಬಾಯ್" ಎಂದರು.ಅಧಿಕಾರಿಗೆ ಅರ್ಥವಾಗಲಿಲ್ಲ.ಎಷ್ಟು ಹಣ ಬೇಕು ಮಾರಾಯರೇ ಎಂದಾಗ ಪುನಃ ಆಯಿರಮ್ ರುವಾಯ್ ಎಂದೇ ಉತ್ತರ ಬಂತು ಬೇಂಕು ಅಧಿಕಾರಿಗೂ ಕಿರಿಕಿರಿ ಆಯಿತು.ಪುನಃಪುನಃ ಆ ಗ್ರಾಹಕ ಮಲೆಯಾಳದಲ್ಲೇ ಮಾತಾಡತೊಡಗಿದರು.ಕೊಲ್ಲೂರಿಗೆ ಬಂದು ಸುಮಾರು ಇಪ್ಪತ್ತು ವರ್ಷಗಳ ಮೇಲಾಯ್ತು ಆದರೂ ಆ ಮನುಷ್ಯ ಎನಕೆ ಕನ್ನಡ ಅರಿವಿಲ್ಲ ಎಂದು ಜಂಬದಲ್ಲೇ ಇದ್ದರು.ಹಾಗೂ ಅವರನ್ನು ಸಹಿಸಿಕೊಂಡು ಊರವರಿದ್ದರು.ಆಯಾ ರಾಜ್ಯದ ಭಾಷೆ ಕಲಿಯದೇ ವರ್ಷಾನುಗಟ್ಟಳೆ ಒಂದೆಡೆ ಇರಬೇಕೆಂದರೆ ಅದು ಕರ್ನಾಟಕವೇ ಆಗಿರಬೇಕು ವಿನಾ ಬೇರೆ ಯಾವ ರಾಜ್ಯದಲ್ಲೂ ಈ ರೀತಿಯ ಸವಲತ್ತು ಸಿಗಲಾರದು.

ಬೆಂಗಳೂರು ನಗರದಲ್ಲಿ ಕನ್ನಡಪರ ಸಂಘಟನೆಗಳು ಅನೇಕವಿವೆ.ಕನ್ನಡಕ್ಕಾಗಿ ಹೋರಾಡುವ ಮಂದಿಗಳು ಸಂಸ್ಥೆಗಳು,ರಾಜಕಾರಣಿಗಳು,ಕೂಟಗಳು ಇತ್ಯಾದಿ ಇತ್ಯಾದಿ ತುಂಬ ಇವೆ ಎಂಬ ಭಾವನೆ ಇಟ್ಟುಕೊಂಡು ಬಂದರೆ ಇಲ್ಲಿನ ಪರಿಸ್ಥಿತಿ ಬೇರೆಯೇ ಆಗಿದೆ.ನೂರು ಮಂದಿಯ ಬಳಿ ನೀವು ವ್ಯವಹರಿಸಿದರೆ ನಿಮಗೆ ಕನ್ನಡದ ಕಂಪು ಕೇವಲ ಹದಿನೈದು ಯಾ ಇಪ್ಪತ್ತು ಜನರಲ್ಲಿ ಸಿಕ್ಕೀತು ಬಹು ಕಷ್ಟದಲ್ಲಿ! ಉಳಿದವರೆಲ್ಲ ಅನ್ಯಭಾಷಿಗರು.ಲಾಲ್‌ಬಾಗಿನ ಬಳಿ ನಿಂತಿದ್ದೆ.ಇಬ್ಬರು ಯುವಕರು ಹತ್ತಿರ ಬಂದರು-
"ಅಂಕಲ್‌ಜಿ ಯಹಾಂ ಸೆ ಮೆಜೆಸ್ಟಿಕ್‌ ಕೋ ಬಸ್ ಮಿಲೇಗಿ ಕ್ಯಾ?" ಎಂದು ಕೇಳಿದರು.
ನೋಡೋಣ ಎಂದು ನೀವು ಯಾವ ಊರಿನವರು ಎಂದು ಕೇಳಿದೆ.
"ರಾಯಚೂರ್ರೀ ಸರ" ಅಂದರು!
"ರಾಯಚೂರಿನ ಮಂದಿಗೆ ಕನ್ನಡ ಬರಾಂಗಿಲ್ಲೇನು?" ನಾನು ರಾಯಚೂರಿನವನಲ್ಲದಿದ್ದರೂ ಆದಷ್ಟು ಅವರ ಧಾಟಿಯಲ್ಲಿ ಕೇಳಿದೆ.
"ಬರತ್ರೀ ಸರ,ಆದರ ಇಲ್ಲಿ ಬೆಂಗ್ಳೂರ್ನಾಗೆ ನಡೀಬೇಕಲ್ರೀ! ಅದಕ್ಕ ಹಿಂದೀವಳಗ ಕೇಳಾಕಹತ್ತೀನ್ರೀ" ಅವನ ಸಮಜಾಯಿಷಿಕೆ....
ಅಂದರೆ ಬೆಂಗಳೂರಿನಲ್ಲಿ ಬೇರೆ ಊರಿಂದ-ಕರ್ನಾಟಕದವರೇ-ಬಂದವರೂ ಸಹ ಮೊದಲಿಗೆ ಹಿಂದಿಯಲ್ಲೇ ಮಾತಾಡಿ ಕಡೆಗೆ ಕನ್ನಡಕ್ಕೆ ಬರುತ್ತಾರೆ.ಇದು ಇತರ ರಾಜ್ಯದವರ ಅಹಂಕಾರವೋ ನಮ್ಮ ದೌರ್ಬಲ್ಯವೋ ತಿಳಿಯದು.
ತರಕಾರಿ ಅಂಗಡಿಗೆ ಹೋದೆ-"ಎನ್ನ ವೇಣು?" ಅಂಗಡಿ ಯಜಮಾನಿ ಕೇಳಿದಳು.
"ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತ ಇದ್ದಿ.ಕನ್ನಡ ಭಾಷೆ ಬರುವುದಿಲ್ಲವೇ?" ಕೇಳಿದೆ.
"ನನಕ ರೊಂಬ ಬಾಶೆ ವರುತ್ತೆ,ನಿನಕೆ ಎತ್ತರ ವೇಣು?" ಅವಳದ್ದು ಧಿಮಾಕಿನ ಜವಾಬು.ಇಷ್ಟು ಜಂಬ ಇರುವವಳ ಬಳಿ ವ್ಯಾಪಾರ ಮಾಡಲು ಮನಸ್ಸಾಗದೇ ವಾಪಸು ಬಂದೆ.....
ಬಸ್ಸುಗಳಲ್ಲಿ,ಪಾರ್ಕುಗಳಲ್ಲಿ,ಫುಟ್‌ಪಾತ್‌ಗಳಲ್ಲಿ,ಅಂಗಡಿ-ಹೋಟಲುಗಳಲ್ಲಿ ಎಲ್ಲೇ ನೋಡಿರಿ ಹೆಚ್ಚಿನಂಶ ಯುವಕಯುವತಿಯರು ಇಂಗ್ಲಿಷ್,....ಬಾಕಿ ಹಿಂದಿ ಮತ್ತು ಇತರೇ ಭಾಷೆಗಳಾದ ತೆಲುಗು ತಮಿಳುಗಳೆ ರಾರಾಜಿಸುತ್ತಿವೆ.ಅನೇಕ ಕಡೆಗಳಲ್ಲಿ ಅವರೇ ಬಹುಸಂಖ್ಯಾತರು ಮತ್ತು ಅವರದೇ ರಾಜ್ಯಭಾರ.ಕನ್ನಡದಲ್ಲಿ ಮಾತಾಡುವುದು ಅಂದರೆ ಬಹುತೇಕ ಜನರಿಗೆ ಹೀನೈಸಿಕೆ ಎಂದೆನಿಸುತ್ತದೆಯೋ ಏನೋ! ಬಹಳ ಕಷ್ಟಪಟ್ಟು ಇಂಗ್ಲಿಷ್ ಮಾತಾಡುತ್ತಾರೆ! ಎದುರಿಗಿದ್ದ ಆಂಗ್ಲ ಭಾಷೆ ಬಾರದವರಿಗೆ ಒಂದು ರೀತಿಯ ಮುಜುಗರ ಬೇರೆ.

ಕ.ರಾ.ರ.ಸಾ.ನಿಗಮವು ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ.ನಿಗಮದ ನಿರ್ವಹಣೆ ಅತ್ಯುತ್ತಮವಾಗಿದ್ದು ಇದು ನನಗೆ ತಿಳಿದಂತೆ ಸತತ ನಾಲ್ಕು ವರ್ಷಗಳಿಂದ ಲಾಭದಲ್ಲಿದೆ.ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆಯು ನಿತ್ಯಸಂಚಾರಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತದೆ.ಉತ್ತಮ ಕಂಡೀಷನ್ ಇರುವ ಬಸ್ಸುಗಳು,ದಿನದ ಹಾಗೂ ತಿಂಗಳ ಪಾಸುಗಳು,ವೋಲ್ವೋ ಬಸ್ಸುಗಳು,ನಗುಮುಖದ ಚಾಲಕ-ನಿರ್ವಾಹಕರು,ಪ್ರಯಾಣಿಕರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಸಹನೆಯಿಂದ ತೃಪ್ತಿಕರ ಉತ್ತರ ನೀಡಿ ಮಾರ್ಗದರ್ಶನ ಮಾಡುವ ನಿಲ್ದಾಣ ಸಿಬಂದಿಗಳು ಇನ್ನೇನು ಬೇಕು.ನಾನು ಬೆಂಗಳೂರಿನಲ್ಲಿ ಪ್ರಯಾಣಕ್ಕಾಗಿ ಬಸ್ಸುಸಾರಿಗೆಯನ್ನೇ ಇಚ್ಚಿಸುತ್ತೇನೆ.ಆಟೋಗಳಲ್ಲಿ ಪಯಣಿಸುವುದಿಲ್ಲ.ನನ್ನ ಸುಮಾರು ಎರಡೂವರೆ ವರ್ಷಗಳ ಅನುಭವದಂತೆ ಇದುವರೆಗೆ ಒಂದೇ ಒಂದು ಅಹಿತಕರ ಘಟನೆ,ಚಾಲಕ ನಿರ್ವಾಹಕರಿಂದ ಅಸಭ್ಯ ವರ್ತನೆ ಮುಂತಾದುವುಗಳನ್ನು ನಾನು ನೋಡಿಲ್ಲ.ಬೆಂಗಳೂರು ಒಂದು ಮಹಾನಗರ, ಮತ್ತು ಇನ್ನೂ ಬೆಳೆಯುತ್ತಿರುವ ನಗರ.ಇಲ್ಲಿನ ಸಾರಿಗೆ ನಿಗಮವೂ ದೊಡ್ಡದೇ.ಸಾವಿರಾರು ಬಸ್ಸುಗಳು ಅವುಗಳ ಸಿಬಂದಿ ವರ್ಗವೂ ದೊಡ್ಡದೇ.ಅವರು ನೀಡುವ ಸೇವಾ ಸೌಲಭ್ಯಗಳು ಅತ್ಯಂತ ಪ್ರಶಂಸನೀಯ.ಉತ್ತಮ ನಿರ್ವಹಣೆ ಬಗ್ಗೆ ಅದಕ್ಕೆ ಕೇಂದ್ರ ಸರಕಾರದ ಶಹಭಾಶ್‌ಗಿರಿ ಮತ್ತು ಪ್ರಶಸ್ತಿ ಸಹಾ ಬಂದಿದೆ.

ದೊಡ್ಡ ಸಂಸ್ಥೆ ಎಂದ ಮೇಲೆ ಸಣ್ಣಪುಟ್ಟ ಕುಂದುಕೊರತೆಗಳು ಇದ್ದೇ ಇರುತ್ತವೆ.ಆದರೆ ನಾವು ಸಮಗ್ರ ದೃಷ್ಟಿಕೋಣವಿಟ್ಟು ಸಂಸ್ಥೆಯ ಕಾರ್ಯವಿಧಾನವನ್ನು ವಿಶ್ಲೇಷಿಸಬೇಕೆ ವಿನಹ ಒಂದೆರಡು ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿ ಇಡೀ ವ್ಯವಸ್ಥೆಯನ್ನು ಹೀಗಳೆಯುವುದು ತಪ್ಪು.ಇತ್ತೀಚಿನ ಟೈಂಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಬ್ಬಾಕೆಯ ದೂಷಣಾಲೇಖನ ಬಂದಿತ್ತು-"ಬಸ್ ಕರೋ ಇಟ್ಸ್ ಅವರ್ ಹೋಮ್ ಟೂ"-ಬಸ್ಸಿನಲ್ಲಿ ಸಿಬಂದಿವರ್ಗದವರು ಒಬ್ಬ ಪಾಪದ ಹುಡುಗಿಯನ್ನು ಕಳ್ಳತನದ ಆರೋಪದ ಮೇಲೆ ವಿನಾಕಾರಣ ಥಳಿಸುತ್ತಿದ್ದರು.ಅದನ್ನು ಆಕೆ ತಪ್ಪಿಸಿದರು.ಈ ನಡುವೆ ಸದರಿ ಸಿಬಂದಿಗಳು ತಮ್ಮ ವಿರುದ್ಧ ಮಾತಾಡಿದ ಈ ಹಿಂದಿ ಭಾಷಿಕ ಮಹಿಳೆ ಮೇಲೇರಿ ಬಂದರು-ಹಿಂದಿ ಮಾತನಾಡುವ ಮಂದಿಗೆ ಕನ್ನಡದವರ ವಿರುದ್ಧ ಮಾತಾಡಲು ಯಾವ ಹಕ್ಕಿದೆ? ಇಳಿ ಕೆಳಗೆ ಎಂದು ತನ್ನನ್ನು ಬಸ್ಸಿನಿಂದ ಇಳಿಸಿದರು ಎಂದು ಆಕೆಯ ಆರೋಪ....

ನಾನು ಬಸ್ಸಿನ ಸಿಬಂದಿಯವರು ಮಾಡಿದ ದೌರ್ಜನ್ಯದ ಪರವಾಗಿ ಯಾವುದೇ ವಕಾಲತ್ತು ಮಾಡುವುದಿಲ್ಲ.ಅವರು ಮಾಡಿದ್ದು ತಪ್ಪು ಮತ್ತು ಅವರನ್ನು ಎದುರಿಸಿ ಆ ಪಾಪದ ಹುಡುಗಿಗೆ ಸಹಾಯ ಮಾಡಿದುದು ಪ್ರಶಂಸೆಗೆ ಅರ್ಹ....ತಾನು ಬೇರೆ ರಾಜ್ಯದಿಂದ ಬಂದವಳು,ಇಲ್ಲಿ ಜೀವಿಸುವವಳು ಆದ್ದರಿಂದ ಇಲ್ಲಿನ ಭಾಷೆ ಕಲಿಯುವುದು ತನ್ನ ಕರ್ತವ್ಯವಾಗಿರಬೇಕಿತ್ತು.ಅದನ್ನು ಅವರೂ ಒಪ್ಪುತ್ತಾರೆ.ಭಾಷೆ ಕಲಿಯುವುದು ಎಂದರೆ ಅ ಆ ಇ ಈ ಕಲಿಯುವುದಲ್ಲ.ಜನರೊಡನೆ ವ್ಯವಹರಿಸಲು ಆಗುವಷ್ಟನ್ನಾದರೂ ಕಲಿಯಬಹುದಿತ್ತು..ಇಲ್ಲ ಅದನ್ನು ಆಕೆ ಕಲಿಯಲಿಲ್ಲ ಮಾತ್ರವಲ್ಲ ತಾನು ಮನಸ್ಸಾದರೆ ಮಾತ್ರ ಕಲೀತೇನೆ,ಕನ್ನಡ ಕಲಿಯುವಂತೆ ಯಾರೂ ತನ್ನನ್ನು ಬಲವಂತ ಪಡಿಸಲಾಗದು.ತಾನು ಯಾವ ಭಾಷೆ ಉಪಯೋಗಿಸುತ್ತೇನೆ ಎಂಬುದು ತನ್ನ ಪ್ರಜಾಸತ್ತಾತ್ಮಕ ಹಕ್ಕು.ಕನ್ನಡ ಮಾತನಾಡುವುದಿಲ್ಲ ಎಂದು ಯಾರೂ ತನಗೆ ಸಾರ್ವಜನಿಕ ಸೇವೆ ನಿರಾಕರಿಸಲಾಗದು ಎಂದು ಸಮರ್ಥಿಸಿಕೊಂಡಿದ್ದಾರೆ...ಇದು ಮಾತ್ರ ಧಾರ್ಷ್ಟ್ಯದ ಮಾತು.ನಮ್ಮ ಬೆಂಗಳೂರಿಗೆ ಬಂದಿದ್ದೀರಿ.ಇಲ್ಲಿನವರ ಪ್ರೀತಿಗೆ ಪಾತ್ರರಾಗಬೇಕೇ ವಿನಃ ಇಲ್ಲಿನ ವ್ಯವಸ್ಥೆಗಳನ್ನು ದೂಷಿಸುವುದು ಸ್ವಲ್ಪ ಅತಿರೇಕದ ಮಾತು.ಇದು ಸಲ್ಲದು.ನಾವಿದನ್ನು ಒಪ್ಪಲಾಗದು.ಯಾವುದೇ ಭಾಷೆ ಕಲಿಯಲು ಬಹಳ ಕಷ್ಟವೇನಿಲ್ಲ....ನಮ್ಮ ಲ್ಲಿ ತಮಿಳುನಾಡಿನಿಂದ ಒಬ್ಬ ಕೃಷಿ ಆಧಿಕಾರಿ ವರ್ಗವಾಗಿ ಬಂದರು.ತಮಗೆ ನೂರು ದಿನ ಸಮಯ ಕೊಡುತ್ತೇನೆ ಅಷ್ಟರ  ಒಳಗೆ ನಮ್ಮ  ಮಾತು ಕಲಿಯಬೇಕು ಎಂದಾಗ ತನಗೆ ಕೇವಲ ಒಂದು ತಿಂಗಳು ಸಮಯ ಕೊಡಿ ಸಾಕು ಅಷ್ಟರೊಳಗೆ ಕಲೀತೇನೆಂದರಲ್ಲದೇ ಕಲಿತೂ ಬಿಟ್ಟರು ಮತ್ತು ತುಂಬ ಜನಪ್ರಿಯ ಅಧಿಕಾರಿ ಎಂಬ ಹೆಗ್ಗಳಿಕೆಯನ್ನೂ ಅಲ್ಪಕಾಲದಲ್ಲಿ ಗಳಿಸಿದರು.ಈ ರೀತಿಯ ಸಕಾರಾತ್ಮಕ ನಡವಳಿಕೆ ಇರಬೇಕೇ ವಿನಃ ತನಗೆ ಖುಷಿ ಇದ್ದರೆ ಮಾತ್ರ ಕಲೀತೇನೆ ಎಂಬ ಮನೋಭಾವನೆ ಒಳ್ಳೆಯದಲ್ಲ.




Saturday, September 8, 2012

karnatakadalli kannada mataadiri


ಕ.ರಾ.ರ.ಸಾ.ನಿಗಮವು ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ.ನಿಗಮದ ನಿರ್ವಹಣೆ ಅತ್ಯುತ್ತಮವಾಗಿದ್ದು ಇದು ನನಗೆ ತಿಳಿದಂತೆ ಸತತ ನಾಲ್ಕು ವರ್ಷಗಳಿಂದ ಲಾಭದಲ್ಲಿದೆ.ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆಯು ನಿತ್ಯಸಂಚಾರಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತದೆ.ಉತ್ತಮ ಕಂಡೀಷನ್ ಇರುವ ಬಸ್ಸುಗಳು,ದಿನದ ಹಾಗೂ ತಿಂಗಳ ಪಾಸುಗಳು,ವೋಲ್ವೋ ಬಸ್ಸುಗಳು,ನಗುಮುಖದ ಚಾಲಕ-ನಿರ್ವಾಹಕರು,ಪ್ರಯಾಣಿಕರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಸಹನೆಯಿಂದ ತೃಪ್ತಿಕರ ಉತ್ತರ ನೀಡಿ ಮಾರ್ಗದರ್ಶನ ಮಾಡುವ ನಿಲ್ದಾಣ ಸಿಬಂದಿಗಳು ಇನ್ನೇನು ಬೇಕು.ನಾನು ಬೆಂಗಳೂರಿನಲ್ಲಿ ಪ್ರಯಾಣಕ್ಕಾಗಿ ಬಸ್ಸುಸಾರಿಗೆಯನ್ನೇ ಇಚ್ಚಿಸುತ್ತೇನೆ.ಆಟೋಗಳಲ್ಲಿ ಪಯಣಿಸುವುದಿಲ್ಲ.ನನ್ನ ಸುಮಾರು ಎರಡೂವರೆ ವರ್ಷಗಳ ಅನುಭವದಂತೆ ಇದುವರೆಗೆ ಒಂದೇ ಒಂದು ಅಹಿತಕರ ಘಟನೆ,ಚಾಲಕ ನಿರ್ವಾಹಕರಿಂದ ಅಸಭ್ಯ ವರ್ತನೆ ಮುಂತಾದುವುಗಳನ್ನು ನಾನು ನೋಡಿಲ್ಲ.ಬೆಂಗಳೂರು ಒಂದು ಮಹಾನಗರ, ಮತ್ತು ಇನ್ನೂ ಬೆಳೆಯುತ್ತಿರುವ ನಗರ.ಇಲ್ಲಿನ ಸಾರಿಗೆ ನಿಗಮವೂ ದೊಡ್ಡದೇ.ಸಾವಿರಾರು ಬಸ್ಸುಗಳು ಅವುಗಳ ಸಿಬಂದಿ ವರ್ಗವೂ ದೊಡ್ಡದೇ.ಅವರು ನೀಡುವ ಸೇವಾ ಸೌಲಭ್ಯಗಳು ಅತ್ಯಂತ ಪ್ರಶಂಸನೀಯ.ಉತ್ತಮ ನಿರ್ವಹಣೆ ಬಗ್ಗೆ ಅದಕ್ಕೆ ಕೇಂದ್ರ ಸರಕಾರದ ಶಹಭಾಶ್‌ಗಿರಿ ಮತ್ತು ಪ್ರಶಸ್ತಿ ಸಹಾ ಬಂದಿದೆ.

ದೊಡ್ಡ ಸಂಸ್ಥೆ ಎಂದ ಮೇಲೆ ಸಣ್ಣಪುಟ್ಟ ಕುಂದುಕೊರತೆಗಳು ಇದ್ದೇ ಇರುತ್ತವೆ.ಆದರೆ ನಾವು ಸಮಗ್ರ ದೃಷ್ಟಿಕೋಣವಿಟ್ಟು ಸಂಸ್ಥೆಯ ಕಾರ್ಯವಿಧಾನವನ್ನು ವಿಶ್ಲೇಷಿಸಬೇಕೆ ವಿನಹ ಒಂದೆರಡು ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿ ಇಡೀ ವ್ಯವಸ್ಥೆಯನ್ನು ಹೀಗಳೆಯುವುದು ತಪ್ಪು.ಇತ್ತೀಚಿನ ಟೈಂಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಂದು ದೂಷಣೆಯ ಲೇಖನ ಬಂದಿತ್ತು-"ಬಸ್ ಕರೋ ಇಟ್ಸ್ ಅವರ್ ಹೋಮ್ ಟೂ"-ಬಸ್ಸಿನಲ್ಲಿ ಸಿಬಂದಿವರ್ಗದವರು ಒಬ್ಬ ಪಾಪದ ಹುಡುಗಿಯನ್ನು ಕಳ್ಳತನದ ಆರೋಪದ ಮೇಲೆ ವಿನಾಕಾರಣ ಥಳಿಸುತ್ತಿದ್ದರು.ಅದನ್ನು ಆಕೆ ತಪ್ಪಿಸಿದರು.ಈ ನಡುವೆ ಸದರಿ ಸಿಬಂದಿಗಳು ತಮ್ಮ ವಿರುದ್ಧ ಮಾತಾಡಿದ ಈ ಹಿಂದಿ ಭಾಷಿಕ ಮಹಿಳೆ ಮೇಲೇರಿ ಬಂದರು-ಹಿಂದಿ ಮಾತನಾಡುವ ಮಂದಿಗೆ ಕನ್ನಡದವರ ವಿರುದ್ಧ ಮಾತಾಡಲು ಯಾವ ಹಕ್ಕಿದೆ? ಇಳಿ ಕೆಳಗೆ ಎಂದು ತನ್ನನ್ನು ಬಸ್ಸಿನಿಂದ ಇಳಿಸಿದರು ಎಂದು ಆಕೆಯ ಆರೋಪ....

ನಾನು ಬಸ್ಸಿನ ಸಿಬಂದಿಯವರು ಮಾಡಿದ ದೌರ್ಜನ್ಯದ ಪರವಾಗಿ ಯಾವುದೇ ವಕಾಲತ್ತು ಮಾಡುವುದಿಲ್ಲ.ಅವರು ಮಾಡಿದ್ದು ತಪ್ಪು ಮತ್ತು ಅವರನ್ನು ಎದುರಿಸಿ ಆ ಪಾಪದ ಹುಡುಗಿಗೆ ಸಹಾಯ ಮಾಡಿದುದು ಪ್ರಶಂಸೆಗೆ ಅರ್ಹ....ತಾನು ಬೇರೆ ರಾಜ್ಯದಿಂದ ಬಂದವಳು,ಇಲ್ಲಿ ಜೀವಿಸುವವಳು ಆದ್ದರಿಂದ ಇಲ್ಲಿನ ಭಾಷೆ ಕಲಿಯುವುದು ಆಕೆಯ ಕರ್ತವ್ಯವಾಗಿರಬೇಕಿತ್ತು.ಅದನ್ನು ಅವರೂ ಒಪ್ಪುತ್ತಾರೆ.ಭಾಷೆ ಕಲಿಯುವುದು ಎಂದರೆ ಅ ಆ ಇ ಈ ಕಲಿಯುವುದಲ್ಲ.ಜನರೊಡನೆ ವ್ಯವಹರಿಸಲು ಆಗುವಷ್ಟನ್ನಾದರೂ ಕಲಿಯಬಹುದಿತ್ತು..ಇಲ್ಲ ಅದನ್ನು ಆಕೆ ಕಲಿಯಲಿಲ್ಲ ಮಾತ್ರವಲ್ಲ ತಾನು ಮನಸ್ಸಾದರೆ ಮಾತ್ರ ಕಲೀತೇನೆ,ಕನ್ನಡ ಕಲಿಯುವಂತೆ ಯಾರೂ ತನ್ನನ್ನು ಬಲವಂತ ಪಡಿಸಲಾಗದು.ತಾನು ಯಾವ ಭಾಷೆ ಉಪಯೋಗಿಸುತ್ತೇನೆ ಎಂಬುದು ತನ್ನ ಪ್ರಜಾಸತ್ತಾತ್ಮಕ ಹಕ್ಕು.ಕನ್ನಡ ಮಾತನಾಡಲಿಲ್ಲ ಎಂದು ಯಾರೂ ತನಗೆ ಸಾರ್ವಜನಿಕ ಸೇವೆ ನಿರಾಕರಿಸಲಾಗದು ಎಂದು ಸಮರ್ಥಿಸಿಕೊಂಡಿದ್ದಾರೆ...ಇದು ಮಾತ್ರ ಧಾರ್ಷ್ಟ್ಯದ ಮಾತು. ನಮ್ಮ ಬೆಂಗಳೂರಿಗೆ ಬಂದಿದ್ದೀರಿ.ಬಹಳ ಸಂತೋಷ.ಇಲ್ಲಿನವರ ಪ್ರೀತಿಗೆ ಪಾತ್ರರಾಗಬೇಕೇ ವಿನಃ ಇಲ್ಲಿನ ವ್ಯವಸ್ಥೆಗಳನ್ನು ದೂಷಿಸುವುದು ಸ್ವಲ್ಪ ಅತಿರೇಕದ ಮಾತು.ಇದು ಸಲ್ಲದು. ನಾವಿದನ್ನು ಒಪ್ಪಲಾಗದು.ಯಾವುದೇ ಭಾಷೆ ಕಲಿಯಲು ಬಹಳ ಕಷ್ಟವೇನಿಲ್ಲ....ನಮ್ಮ ಲ್ಲಿ ತಮಿಳುನಾಡಿನಿಂದ ಒಬ್ಬ ಕೃಷಿ ಆಧಿಕಾರಿ ವರ್ಗವಾಗಿ ಬಂದರು.ನಿಮಗೆ ನೂರು ದಿನ ಸಮಯ ಕೊಡುತ್ತೇನೆ ಅಷ್ಟರ ಒಳಗೆ ನಮ್ಮ ಮಾತು ಕಲಿಯಬೇಕು ಎಂದಾಗ ತನಗೆ ಕೇವಲ ಒಂದು ತಿಂಗಳು ಸಮಯ ಕೊಡಿ ಸಾಕು ಅಷ್ಟರೊಳಗೆ ಕಲಿಯುತ್ತೇನೆಂದರಲ್ಲದೇ ಕಲಿತೂ ಬಿಟ್ಟರು ಮತ್ತು ತುಂಬ ಜನಪ್ರಿಯ ಅಧಿಕಾರಿ ಎಂಬ ಹೆಗ್ಗಳಿಕೆಯನ್ನೂ ಅಲ್ಪಕಾಲದಲ್ಲಿ ಗಳಿಸಿದರು.ಈ ರೀತಿಯ ಸಕಾರಾತ್ಮಕ ನಡವಳಿಕೆ ಇರಬೇಕೇ ವಿನಃ ತನಗೆ ಖುಷಿ ಇದ್ದರೆ ಮಾತ್ರ ಕಲೀತೇನೆ ಎಂಬ ಮನೋಭಾವನೆ ಒಳ್ಳೆಯದಲ್ಲ.