-----೫-----
"ಯಾಜಿಯವರೆ ಇಲ್ಲಿ ರೇಷನ್ ಕಾರ್ಡ್ ಮಾಡಿಸುನ ಆಫೀಸು ಎಲ್ಲುಂಟು?" ಕೇಳಿದೆ.ದಿಲ್ಲಿಗೆ ವರ್ಗವಾಗಿ ಸ್ವಲ್ಪ ದಿನಗಳಾಗಿದ್ದವು.s
"ನೀವೇಕೆ ಕಷ್ಟ ಪಡ್ತೀರಿ,ನಮ್ಮ ಭಗವಾನ್ ಬರ್ತಾನೆ ಅವನ ಹತ್ತಿರ ಹೇಳುವ,ಮಾಡಿಸ್ಕೊಡ್ತಾನೆ.ಒಂದೈವತ್ತು ರುಪಾಯಿ ಬಿಸಾಡಿದ್ರೆ ಸೈ." ಯಾಜಿ ನಿರ್ಲಕ್ಷ್ಯದಿಂದ ಹೇಳಿದರು.ನನಗೆ ಸ್ವಲ್ಪ ಬೇಸರವಾಯ್ತು.
ನೋಡೋಣ ಎಂದು ಮರುದಿನ ರೇಷನ್ ಆಫೀಸು ಹುಡುಕಿಕೊಂಡು ಹೋದೆ.ಅವರಿವರನ್ನು ಕೇಳಿಕೊಂಡು ತಲುಪಿದಾಗ ಸುಮಾರು ಹತ್ತೂವರೆ ಆಗಿತ್ತು..
"ಜಯ್ ರಾಮ್ ಜೀ ಕಿ,ನಾನು ಕರ್ನಾಟಕದಿಂದ ಬರುತ್ತಿದ್ದೇನೆ.ಸಿಂಡಿಕೇಟ್ ಬೇಂಕಿನಲ್ಲಿ ವರ್ಗಾವಣೆ ಹೊಂದಿ ಇದೇ ಪ್ರಸಾದ್ ನಗರದಲ್ಲಿ ವಾಸ್ತವ್ಯ ಮಾಡಿದ್ದೇನೆ.ನನ್ನ ರೇಷನ್ ಕಾರ್ಡ್ ಆಗಬೇಕಿತ್ತು."ಎಂದೆ.ಸಂಭಾಷಣೆ ಹಿಂದಿಯಲ್ಲೇ ನಡೆಸಿದೆ.
"ಉಧರ್ ಖಿಡಿಕಿ ಸೆ ಅರ್ಜೀ ಲೇಕೆ ಭರ್ಕೆ ದೀಜಿಯೆ" ಎಂದು ಅಲ್ಲಿನ ಅಧಿಕಾರಿ ತಿಳಿಸಿದರು.
ಐವತ್ತು ಪೈಸೆ ಅರ್ಜಿ ಪಡಕೊಂಡು ಭರ್ತಿ ಮಾಡಿ ಅಗತ್ಯವಿರುವ ಎಲ್ಲ ಕಾಗದ,ಕಡತಗಳನ್ನು ಲಗತ್ತಿಸಿ ಅವರಿಗೆ ಕೊಟ್ಟೆ,
"ಏಕ್ ಹಫ್ತೆ ಕೆ ಬಾದ್ ಆಯಿಯೇಗಾ"
"ಏಕ್ ಹಫ್ತಾ ಕ್ಯೊಂ?" ಕೇಳಿದೆ.
"ಐಸಾ ಹೈ,ಆಜ್ ಕಲ್ ಗಲತ್ ತರೀಕೆ ಸೆ ಕಾರ್ಡ್ ಬನಾನೆವಾಲೆ ಜ್ಯಾದಾ ಹೋಗಯೇ ಹೈ,ಇಸ್ ಲಿಯೆ ಜಾಂಚ್ ಪಡ್ತಾಳ್ ಕರ್ ನಾ ಪಡತಾ ಹೈ"
"ನಮ್ಮ ಮನೆಯವರಿಗೆ ಹಿಂದಿಯ ತಿಳುವಳಿಕೆ ಕಮ್ಮಿ.ಕೊಂಚ ಸುಧಾರಣೆ ಮಾಡಬೇಕು" ಎಂದೆ.
"ದೇಖತೇ ಹೈ,ಅಬ್ ಆಪ್ ಚಲೋ,ಹಫ್ತೆ ಬಾದ್ ಆವೋ" ಉತ್ತರ ಬಂತು,ನಾನು ಮರಳಿದೆ.ಮನೆಯಲ್ಲಿ ಈ ಬಗ್ಗೆ ಸೂಚನೆನೀಡಿದೆ.ವಾರ ಕಳೆಯಿತು. ಪುನಃ ಕಚೇರಿಗೆ ಹೋದೆ.ರೇಷನ್ ಕಾರ್ಡ್ ತೆಗೆದು ಕೈಯ್ಯಲ್ಲಿ ಕೊಟ್ಟರು.
"ಮತ್ತೆ ಮನೆಗೆ ಯಾರೂ ಬರಲಿಲ್ಲ?"ವಿಚಾರಿಸಿದೆ.
"ದೇಖೋ ಭಾಯ್ ಸಾಬ್ ನೀವು ಬೇಂಕಿನಲ್ಲಿ ಆಫೀಸರ್ ಆಗಿದ್ದೀರಿ.ಸಂಬಂಧಪಟ್ಟ ಎಲ್ಲಾ ಕಾಗದಪತ್ರಗಳನ್ನು ನೀಡಿದ್ದೀರಿ,ವಿಳಾಸದ ಮಾಹಿತಿಯನ್ನು ಕೊಟ್ಟಿದ್ದೀರಿ,ಹಾಗಿರುವಾಗ ತಪಾಸಣೆಯ ಜರೂರಿ ಏನಿದೆ? ಮೇಲಾಗಿ ನೀವು ಕರ್ನಾಟಕದಿಂದ ಬಂದವರು ಇಷ್ಟು ಚೆನ್ನಾಗಿ ಹಿಂದಿ ಮಾತಾಡುತ್ತೀರಿ!ಬಹಳ ಆಶ್ಚರ್ಯ!ನಿಮಗೆ ರೇಷನ್ ಕಾರ್ಡ್ ಕೊಡದೇ ಮತ್ತೆ ಯಾರಿಗೆ ಕೊಡಲಿ?" ಎಂದರು ಆಫೀಸರ್.
ಯಾಜಿಯವರಿಗೆ ಬಹಳ ಆಶ್ಚರ್ಯ ಆಯಿತು."ಎಷ್ಟು ಕೊಟ್ಟಿರಿ?" ಕೇಳಿದರು.
"ಐವತ್ತು ಪೈಸೆ ಕೊಟ್ಟೆ,ಅದೂ ಅರ್ಜೀ ಫಾರ್ಮಿನ ಬೆಲೆ" ಎಂದೆ.ಅವರಿಗೆ ನಂಬಲು ತುಂಬ ಕಷ್ಟವಾಯಿತು.
ಸುಮಾರು ನಾಲ್ಕು ವರ್ಷಗಳ ಬಳಿಕ ಜನಕ್‌ಪುರಿ ಎಂಬಲ್ಲಿ ಮನೆ ಬದಲಾಯಿಸಿದಾಗ ಕೂಡಾ ರೇಷನ್ ಕಾರ್ಡ್ ಬದಲಾಯಿಸಲು ಯಾವುದೇ ಕಷ್ಟ ಆಗಲಿಲ್ಲ. ಆದಷ್ಟು ಮಟ್ಟಿಗೆ ಕಾಗದಪತ್ರಗಳನ್ನು ಸರಿಯಾಗಿ ಜೋಡಿಸಿಕೊಂಡು ಸರಿಯದ ರೀತಿಯಲ್ಲಿ ವಿನಯಪೂರ್ವಕವಾಗಿ ಸಂಪರ್ಕಿಸಿದರೆ ಯಾವುದೇ ಕಚೇರಿಯಲ್ಲಿ ಸಾಮಾನ್ಯವಾಗಿ ನಮ್ಮ ಕೆಲಸ ಆಗಿಯೆ ಆಗುತ್ತದೆ.ಇದಕ್ಕೆ ದಿಲ್ಲಿ,ಬೆಂಗಳೂರು,ಹುಬ್ಬಳ್ಳಿ ನಗರಗಳಲ್ಲಿ ನನಗಾದ ಒಳ್ಳೆಯ ಅನುಭವಗಳೇ ಸಾಕ್ಷಿ. ನಾವೂ ಸಹಾ ನಮ್ಮ ಸಂಪರ್ಕಕ್ಕೆ ಬಂದ,ಬರುವ ಗ್ರಾಹಕ,ವ್ಯಕ್ತಿಗಳೊಂದಿಗೆ ಸಹಾ ಅನುನಯದಿಂದ ವ್ಯವಹರಿಸಿದರೆ ನಮಗೆ ಹೊಸ ಗೆಳೆಯರು ಲಭ್ಯರಾಗುವು ದಷ್ಟೇ ಅಲ್ಲ ಮುಂದೊಂದು ದಿನ ಅನುಕೂಲವೇ ಆಗಬಹುದು.ಇದು ನನ್ನ ಅನುಭವ.
ದೇಶದಲ್ಲೇ ಅತಿ ಬುದ್ಧಿವಂತರಿರುವ ನಾಡಿನವರು ಎಂಬ ದೊಡ್ಡಸ್ತಿಕೆ ಉಡುಪಿ ಜಿಲ್ಲೆಯವರಿಗೆ ಉಂಟು.ನಾವು ಬುದ್ದಿವಂತರೆಂದು ಇತರರು ಹೇಳುವುದು ಒಂದು ಮಾತು.ನಾವು ಬುದ್ಧಿವಂತರೆಂದು ನಾವೇ ಹೇಳಿಕೊಂಡು ತಿರುಗುವುದು ಇನ್ನೊಂದು ಸಂಗತಿ.ಉಡುಪಿ ಜಿಲ್ಲೆಯವರು ಸಾಮಾನ್ಯವಾಗಿ ಎರಡನೇ ಜಾತಿ.ನನಗೆ ನಮ್ಮ ಜಿಲ್ಲೆಯಲ್ಲೆ ಒಂದೆರಡು ಬಾರಿ ಅನನುಕೂಲ,ಮುಜುಗರದ ಅನುಭವ ಆಯಿತು....
ದಿಲ್ಲಿಯಿಂದ ಕುಂದಾಪುರಕ್ಕೆ (ಕೊಲ್ಲೂರಿಗೆ) ವರ್ಗವಾಗಿ ಬಂದೆ.ಯಥಾಪ್ರಕಾರ ರೇಷನ್ ಕಾರ್ಡಿಗೆ ಅರ್ಜಿ ಕೊಟ್ಟೆ.ಮನುಷ್ಯ ಮಾತ್ರದವನಿಗೆ ಅರ್ಥ ಆಗದ ಒಂದು ಕಾನೂನಿನ ಕಡ್ಡಿ ಅಡ್ಡ ಇಟ್ಟು ರೇಷನ್ ಕಾರ್ಡ್ ವಿತರಿಸಲು ಪಿರಿಪಿರಿ ಸುರುವಾಯ್ತು.ಕಡೆಗೆ ತಹಸೀಲ್ದಾರರ ಬಳಿ ಹೋದೆ.
"ಇದೇನು ನಾಲ್ಕು ತಿಂಗಳ ಹಿಂದಿನ ತಾರೀಕಿದೆಯಲ್ಲಾ!" ತಹಸೀಲ್ದಾರರು ವಿಚಾರಿಸಿದರು.
"ಹೌದು ಸ್ವಾಮಿ ನಾಲ್ಕು ತಿಂಗಳ ಹಿಂದೆ ಅರ್ಜಿ ಕೊಟ್ಟಿದ್ದೆ" ಚುಟುಕಾಗಿ ಉತ್ತರಿಸಿದೆ.
ಒಂದು ಕ್ಷಣ ನನ್ನನ್ನೇ ನೋಡಿದರು.ಆತ ತುಂಬ ಒಳ್ಳೆಯ ಹಾಗೂ ನೇರ ಸ್ವಭಾವದ ಅಧಿಕಾರಿಯೆಂದು ಕೇಳಿದ್ದೆ."ನೋಡಿ ಇವರೆ,ಈಗ ನೀವು ತಾರೀಕು ಚೇಂಜ್ ಮಾಡಿ ಕೊಡಿ.ನಿಮಗೆಒಂದು ವಾರ ಅಥವಾ ಹತ್ತು ದಿನಗಳಲ್ಲಿ ಕಾರ್ಡ್ ಕೊಡಿಸುತ್ತೇನೆ,ಅಲ್ಲ ನೀವು ಮೊದಲೇ ನೇರವಾಗಿ ನನ್ನ ಬಳಿ ಬಂದಿದ್ದರೆ ಇಷ್ಟರೊಳಗೆ ನಿಮ್ಮ ಕೆಲಸ ಆಗುತ್ತಿತ್ತು"ಎಂದರು.
"ನೋಡಿ ಸರ್ ನಮ್ಮ ಬೇಂಕಿನಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಅಂದರೆ ಎಕೌಂಟ್ ತೆರೆಯಲು,ಹಣ ಡ್ರಾ ಮಾಡಲು ಇಂತದೆಕ್ಕೆಲ್ಲಾ ಯಾರೂ ಸೀದಾ ಮೆನೆಜರರ ಬಳಿ ಹೋಗುವುದಿಲ್ಲ,ಅದಕ್ಕೆ ಸಂಬಂಧ ಪಟ್ಟ ಡಿಪಾರ್ಟ್‌ಮೆಂಟುಗಳಿಗೆ ಹೋಗ್ತಾರೆ.ಇಲ್ಲಿಯೂ ಹಾಗೇ ಇರಬಹುದು ಎಂದು ನಿಮ್ಮ ಗುಮಾಸ್ತರ ಬಳಿ ಹೋದೆ.ಅದೇ ಸಮಸ್ಯೆ ಆಯ್ತು" ತಹಸೀಲ್ದಾರರು ನಕ್ಕರು.ನನ್ನ ಕಾರ್ಡ್ ಅವರ ಮಾತಿನಂತೆ ಕೂಡಲೇ ಸಿಕ್ಕಿತು.ಆದರೆ ಗೊತ್ತು ಗುರುತಿಲ್ಲದ ಇತರ ನಗರಗಳಲ್ಲಿ ಆರಾಮವಾಗಿ ಆದ ಕೆಲಸಕ್ಕೆ ಇಲ್ಲಿ ಪರದಾಡಬೇಕಾಯ್ತಲ್ಲ ಎಂಬ ಕೊರಗು ಉಳಿಯಿತು.
ಸರಕಾರೀ ಅಧಿಕಾರಿಗಳೆಂದರೆ ಒಂದು ರೀತಿಯ ತಿರಸ್ಕಾರ ಭಾವನೆ ನಮ್ಮಲ್ಲಿದೆ.ಸರಕಾರೀ ಕೆಲಸಕಾರ್ಯಗಳೆಂದರೆ ಹಣ ಇಲ್ಲದೆ ಆಗುವುದೇ ಇಲ್ಲ ಎಂಬ ಪರಿಸ್ಥಿತಿಯನ್ನು ನಾವು ಜನರೇ ಹುಟ್ಟಿಸಿ ಬೆಳೆಸಿಕೊಂಡು ಬಂದದ್ದು, ಈಗ ಪ್ರಸಕ್ತ ಅಧಿಕಾರಿಗಳನ್ನು ಬೈಯ್ಯುವುದೇ ಒಂದು ಚಾಳಿಯಾಗಿ ಬಿಟ್ಟಿದೆ.ಎಲ್ಲೇ ಹೋಗಲಿ,ಯಾವುದೇ ಮದುವೆ,ಮುಂಜಿ ಸಭೆಗಳಿಗೆ ಹಾಜರಾಗಿ ಒಂದೇ ರಾಜಕೀಯ ಇಲ್ಲವೇ ಅಧಿಕಾರಿ ವರ್ಗದವರನ್ನು ಹೀಯಾಳಿಸುವುದು ಫ್ಯಾಷನ್ ಆಗಿ ಹೋಗಿದೆ.ತಮ್ಮದೆಂದು ಒಂದು ಹಕ್ಕಿದೆ,ಅದೇ ರೀತಿಯಲ್ಲಿ ಬಾಧ್ಯತೆ ಸಹಾ ಇದೆ ಎಂಬುದನ್ನು ಜನರು ಮರೆಯುತ್ತಾರೆ.ಸಮಸ್ಯೆ ಏನಾದರೂ ಬಂದರೆ ಮಂತ್ರಿ, ಮುಖ್ಯಮಂತ್ರಿಗಳನ್ನು ಹಿಗ್ಗಾಮುಗ್ಗಾ ಜರೆದು ನಿವಾಳಿಸುವುದು ಮತ್ತು ನಾಲ್ಕು ಜನರೆದುರು ತಾನೊಬ್ಬ ಬುದ್ಧಿವಂತ ಎಂದೆನಿಸಿಕೊಳ್ಳುವುದು ವಾಡಿಕೆ ಆಗಿದೆ. ಟ್ಯಾಕ್ಸ್ ಆಫೀಸರ್ ಲಂಚಕೋರ,ವಿಲೇಜ್ ಅಕೌಂಟೆಂಟ್ ಕಳ್ಳ ಸೂಳೇಮಗ,ದುಡ್ಡಿನ ಎದುರಿಗೆ ಇವರಿಗೆ ದೋಸ್ತಿ,ಸಂಬಂಧ ಇದು ಯಾವುದೂ ತೋರುವುದಿಲ್ಲ ಹಾಗೆ ಹೀಗೆ ಎಂದು ಹಳಿಯುತ್ತಾರೆ.ಲಂಚ ಡಿಮಾಂಡ್ ಮಾಡುವ ಸೇಲ್ಸ್ ಟ್ಯಾಕ್ಸ್ ಅಧಿಕಾರಿ ಕಳ್ಳ ಬೋಳಿಮಗ ಆದರೆ ಲಂಚ ಕೊಟ್ಟ ವ್ಯಾಪಾರಿ ಯಾರ ಮಗ? ಎಂದು ಒಬ್ಬರ ಬಳಿ ಕೇಳಿದಾಗ ಬಹಳ ಸಿಟ್ಟು ಬಂತವರಿಗೆ.ತಾನು ವ್ಯಾಪಾರದ ಲೆಕ್ಕ ಬರಿಯೂದಿಲ್ಲ,ಟ್ಯಾಕ್ಸ್ ಕಟ್ಟುವುದಿಲ್ಲ,ಟ್ಯಾಕ್ಸ್ ಆಫೀಸರ್ ಮಾತ್ರ ಬೋಳೀ ಮಗ! ನನ್ನ ಹತ್ರ ಒಂದು ವಾರ ಮಾತಾಡಲಿಲ್ಲ.
ಭ್ರಷ್ಟತೆ ರಾಜ್ಯದಲ್ಲಿ,ದೇಶದಲ್ಲಿ ಇಲ್ಲವೇನೆಂದಲ್ಲ.ಉದಯವಾಣಿಯ ಒಂದು ಸಂಚಿಕೆಯಲ್ಲಿ ಉಲ್ಲೇಖವಾದಂತೆ ಲಂಚಗುಳಿತನ ಈಗಲ್ಲ ಸುಮಾರು ಎಂಟುನೂರು ವರ್ಷಗಳ ಹಿಂದೆ ಇತ್ತೆಂದು ಶಿವಶರಣ ಬಸವೇಶ್ವರರೇ ತಮ್ಮ ವಚನ ಒಂದರಲ್ಲಿ ಹೇಳಿದ್ದಾರೆ-ನೇರಳೆ ಹಣ್ಣಿಗೆ ಕಪ್ಪು ಬಣ್ಣವನ್ನು ಬಳಿದು ಮಾರುವ ಜನರನ್ನು ಏನೆಂದು ಕರೆಯಬೇಕು?- ಎಂದು.ಹಾಗೆಂದು ಈಗ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ಸಮರ್ಥಿಸಲಾಗುವುದಿಲ್ಲ.
ನನ್ನ ವೃತ್ತಿಜೀವನದಲ್ಲಿ ನನ್ನ ಸ್ವಂತ ಕೆಲಸಗಳಿಗೆ ಸರಕಾರೀ ಅಧಿಕಾರಿಗಳ ಬಳಿ ಹೋಗುವ ಪರಿಸ್ಥಿತಿಗಳು ಕೆಲವೇ ಕೆಲವು ಎನ್ನಬಹುದು.ಆದರೂ ಇವುಗಳಲ್ಲಿ ದುಡ್ಡುಕೊಟ್ಟು ಕೆಲಸ ಮಾಡಿಸಿಕೊಂಡ ಸಂಧರ್ಭಗಳು ಇಲ್ಲವೇ ಇಲ್ಲ ಎನ್ನಬಹುದು.ಆದ್ದರಿಂದ ಸಾಮಾನ್ಯವಾಗಿ ಲಂಚದ ಬಗ್ಗೆ ಮಾತಾಡುವಾಗ ಕೆಳಗಿನ ಮಟ್ಟದ ಅಧಿಕಾರಿ ಇಲ್ಲವೇ ನೌಕರರನ್ನು ತೆಗಳುವಾಗ ಮನಸ್ಸಿಗೆ ಕಷ್ಟವಾಗುತ್ತದೆ.
ಕೃಷಿಸಾಲ ನೀಡುವ ಮೊದಲು ಆಯಾ ರೈತರ ತೋಟ,ಕೃಷಿಯ ಪೂರ್ವಸಮೀಕ್ಷೆ ನಡೆಸಬೇಕು.ಅಂತೆಯೇ ಒಬ್ಬ ಆಢ್ಯರೆನಿಸಿಕೊಂಡವರ ಜಾಗ ನೋಡಲು ಹೋಗಿದ್ದೆ.ತನಗೆ ಬೇಕಾದ ಸಾಲ-ಹತ್ತಿರದವರೊಬ್ಬರ ತೋಟ ಖರೀದಿ.ಸಾಮಾನ್ಯವಾಗಿ ಅವರ ಸಾಲದ ಉದ್ದೇಶ ಸಮಂಜಸ ಎನಿಸದಿದ್ದರೂ ಅವರ ಹಿಂದಿನ ಬೇಂಕ್ ವ್ಯವಹಾರಗಳು ರೆಗುಲರ್ ಇದ್ದುದರಿಂದ ಒಪ್ಪಿಕೊಂಡಿದ್ದೆ.ಅವರ ತೋಟ,ಕೃಷಿ,ಬೆಳೆ ಮತ್ತು ಹಿಡುವಳಿಗಳ ಬಗ್ಗೆ ವಿವರಣೆ ಬರಕೊಂಡೆ. "ನೋಡಿ ಸರ್,ನಮಗೆ ಒಟ್ಟು ಕುಟುಂಬದ ಜಾಗ ತುಂಬ ಉಂಟು.ಆದರೆ ಸ್ವಲ್ಪ ಜಾಗಕ್ಕೆ ಇನ್ನೂ ಆರ್ ಟಿ ಸಿ ಸಿಗಬೇಕಷ್ಟೆ.ಸಿಕ್ಕಿದ ಕೂಡಲೆ ತಿಳಿಸುತ್ತೇನೆ."
"ಒಟ್ಟು ಎಷ್ಟು ಜಾಗ?"
"ನೋಡಿ ಸ್ವಾಮಿ,ಒಟ್ಟು ಒಂಭತ್ತು ಎಕರೆಯಷ್ಟು ಜಾಗ ಅಕ್ರಮ ಸಕ್ರಮ ಪ್ರಕಾರ ನಮಗೆ ರಿಕಾರ್ಡ್ ಆಗಬೇಕು.ಆದರೆ ಕಳ್ಳನಿಗೆ ಇಪ್ಪತ್ತು ಸಾವಿರ ಪೀಕ ಬೇಕು ನೋಡಿ.ಜನರ ಆಶೆಗೆ ಒಂದು ಎಂಡ್ ಇಲ್ಲ.ಎಷ್ಟು ಎಳೆದರೂ ಇನ್ನೂ ಕಮ್ಮಿಯೇ!"
ಕಳ್ಳ ಎಂದು ಯಾರನ್ನು ಉದ್ದೇಶಿಸಿದ್ದು ಎಂದು ತಿಳಿಯಿತು.ನನ್ನ ಅನುಭವದಂತೆ ಆ ತಹಸೀಲ್ದಾರರು ಒಳ್ಳೆಯವರೇ.ಮನಸ್ಸಿಗೆ ಒಂಚೂರು ಬೇಸರ ಸಹ ಆಯ್ತು.
"ನೋಡಿ ಇವರೇ,ನಿಮ್ಮ ಬಳಿ ನಿಮ್ಮದು,ತಮ್ಮನ ಪಾಲಿದ್ದು,ಹೆಂಡತಿಯ ಪಾಲಿದ್ದು ಅಂತ ಸುಮಾರು ಎಂಟೊಂಭತ್ತು ಎಕರೆ ತೋಟ ಆಸ್ತಿ ಇದೆ. ಹಿಂದೆ ಈ ಜಾಗವೆಲ್ಲ ನಿಮ್ಮ ತಂದೆಯರೊಬ್ಬರ ಹೆಸರಲ್ಲಿ ಮಾತ್ರ ಇತ್ತು.ಒಬ್ಬ ರೈತನಿಗೆ ತನ್ನ ಆಸ್ತಿಯ ಹತ್ತಿರದ ಸುಮಾರು ಐದು ಎಕರೆಗಳಷ್ಟು ಜಾಗ ಬೇಲಿ ಹಾಕಿದರೆ ಮುಂದೆ ಅದು ಸಕ್ರಮ ಆಗುತ್ತದೆ ಎಂದು ಇದ್ದ ಒಂದು ಆಸ್ತಿಯನ್ನು ವಿಭಾಗ ಮಾಡಿ ನೀವು ತಮ್ಮ,ಹೆಂಡತಿ ಎಂದು ಹಂಚಿಕೊಂಡಿದ್ದೀರಿ ಮತ್ತು ಹತ್ತಿರ ಹತ್ತಿರ ಎಂಟು ಒಂಭತ್ತು ಎಕರೆಗಳಷ್ಟು ಜಾಗಕ್ಕೆ ಬೇಲಿ ಹಾಕಿದ್ದೀರಿ.ಈ ಕ್ರಮ ನ್ಯಾಯಯುತವೇ ಆಗಿದೆ ಒಪ್ಪಿಕೊಳ್ಳುತ್ತೇನೆ.ಆದರೂ ನೀವೊಮ್ಮೆ ಸರಕಾರೀ ನೌಕರರ ಲೆಕ್ಕಾಚಾರದಂತೆ ಯೋಚಿಸಿ."ಕೂತಲ್ಲೆ ಎಂಟು ಎಕರೆ ಜಾಗ ಹೊಡೀತಾರಲ್ಲ ಇವರ ಆಶೆಗೆ ಒಂದು ಎಂಡ್ ಇಲ್ವಾ! ಪೀಕಲಿ ದುಡ್ಡು! ಎಕರೆಗೆ ಎರಡೂವರೆ ಲಕ್ಷ ಎಂದರೂ ಹತ್ತು ಹನ್ನೆರಡು ಲಕ್ಷ ರುಪಾಯಿ ಆಯ್ತು!" ಎಂದು ಲೆಕ್ಕಾಚಾರ ಮಾಡಿ ಹೊಟ್ಟೆಕಿಚ್ಚು ಪಡುತ್ತಾರೆ.ಹೌದೋ ಅಲ್ವೋ?" ಎಂದೆ.
"ಹೌದು ಸರ್" ಎಂದರು.ದಾಕ್ಷಿಣ್ಯಕ್ಕೆ ಹೇಳಿದರೋ ಏನೋ ನನಗೆ ತಿಳಿಯಲಿಲ್ಲ. ನಾನೂ ಮುಂದಕ್ಕೆ ಆ ವಿಷಯವನ್ನು ಬೆಳೆಸಲಿಲ್ಲ.ಸುಮ್ಮನೆ ಸಂಬಂಧ ಇಲ್ಲದ ವಿಚಾರಗಳಲ್ಲಿ ಬಿದ್ದು ನಾವೇಕೆ ಮನಸ್ಸು ಕೆಡಿಸಿಕೊಳ್ಳಬೇಕು,ಪಾರ್ಟಿ ಒಳ್ಳೆಯವರಿದ್ದಾರೆ ಕೃಷಿಗೆ ಸಂಬಂಧಿಸಿದಂತೆ ನಮ್ಮ ಬಳಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ,ಉಪಯುಕ್ತತೆಯನ್ನು ನೋಡಿ ಸಾಲ ಕೊಡುವುದು ನಮ್ಮ ಕೆಲಸ ಎಂದು ನಾನೂ ಸುಮ್ಮನಾದೆ.ಆವರ ಸಾಲ ಮಂಜೂರು ಮಾಡಿದೆ.ಕೆಲ ಕಾಲದ ಬಳಿಕ ಒಮ್ಮೆ ಸಿಕ್ಕಿದರು."ಮೆನೇಜರರಿಗೆ ಬೇಸರವಾಗಿರಬೇಕು-ನಾನು ತಹಸೀಲ್ದಾರರಿಗೆ ಬೈದದ್ದಕ್ಕೆ.ಏನೋ ಬೇಜಾರಾಗಿತ್ತು ನೋಡಿ ಆ ದಿನ,ಹಾಗಾಗಿ ಆ ಮಾತು ಬಂತು.ಹಾಗೆ ನೋಡಿದರೆ ನಮ್ಮ ತಹಸೀಲ್ದಾರರೂ ಒಳ್ಳೆಯವರೆ.ನಮಗೆ ಹೆಚ್ಚು ಕಷ್ಟ ಕೊಡಲಿಲ್ಲ.ಆದರೂ ಆ ಡಿಪಾರ್ಟ್‌ರ್ಮೆಂಟ್‌ನಲ್ಲಿ ಎಲ್ಲ ನಡೀತದೆ. ಅವರಾದರೂ ಏನು ಮಾಡಿಯಾರು? ಅವರದ್ದೂ ಕೈಕಟ್ಟಿರುತ್ತದೆ" ಎಂದರು.
"ಸರಿ ಮಾರಾಯರೆ" ಎಂದೆ.
Healthy and positive reactions-suggestions are invited....
ReplyDelete