ನಮ್ಮ ಕರ್ನಾಟಕದ ಜನತೆ ಬಹಳವೇ ಸಜ್ಜನರು,ಶಾಂತಿಪ್ರಿಯರು.ತುಂಬಾ ಮೃದುಹೃದಯವಂತರು.ನಮ್ಮ ಸಜ್ಜನಿಕೆಯ ಲಾಭವನ್ನು ಇಡೀ ದೇಶವೇ ಪಡೆಯುತ್ತ ಇದೆ.ಇಲ್ಲಿ ದೇಶದ ಎಲ್ಲ ದಿಕ್ಕುಗಳಿಂದಲೂ ಜನರು ಅನೇಕ ಕಾರಣಗಳಿಗೆಂದು ಬಂದು ನೆಲೆಸಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. .ಆತಿಥೇಯರಾದ ನಾವು ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಿಗೇನೇ ಸಜ್ಜನರಾಗಿದ್ದೇವೆಯೋ ಎಂಬ ಶಂಕೆ ಬರುತ್ತಿದೆ.ಯಾರಾದರೂ ಉದ್ಯೋಗ ಅಥವಾ ವ್ಯಾಪಾರಕ್ಕೆಂದು ತಮಿಳುನಾಡಿಗೆ ಹೋದರೆ ಅವರು ಅಲ್ಲಿ ತಮಿಳು ಕಲಿಯಲೇಬೇಕು.ಕೇರಳಕ್ಕೆ ಹೋದರೆ ಮಲೆಯಾಳಿ,ಆಂಧ್ರದಲ್ಲಿ ತೆಲುಗು ಅಥವ ಮಹಾರಾಷ್ಟ್ರದಲ್ಲಿ ಹಿಂದಿ ಯಾ ಮರಾಠಿ ಭಾಷೆ ಕಲಿಯಲೇ ಬೇಕು-ಕಲಿಯುತ್ತಾರೆ-ಏಕೆಂದರೆ ಆಯಾ ಪ್ರದೇಶದಲ್ಲಿ ಅಲ್ಲಿನ ಭಾಷೆಯು ನಡೆಯುತ್ತದೆ.ಆದರೆ ನಮ್ಮ ರಾಜ್ಯದ ಜನರು ಮೇಲೆ ಹೇಳಿದಂತೆ ತುಂಬಾನೇ ಸಜ್ಜನರು,ಉದಾರಮನಸ್ಸಿನವರು.ಇಲ್ಲಿಗೆ ಬಂದ ಅತಿಥಿಗಳ ಮನನೋಯಿಸಲು ತಯಾರಿಲ್ಲ.ಇಲ್ಲಿ ಜೀವಿಸಲು ಬಂದವರಿಗೆ ನಮ್ಮ ಭಾಷೆ ಕನ್ನಡ ಕಲಿಯುವಂತೆ ನಾವು ಪ್ರೇರೇಪಿಸುವುದಿಲ್ಲ.ಬದಲಾಗಿ ನಾವೇ ಅವರ ಭಾಷೆ ಕಲಿತು ಕೃತಾರ್ಥರಾಗುತ್ತೇವೆ.
ಗ್ರಾಮೀಣ ಪ್ರದೇಶಗಳ ಜನರು ಅಷ್ಟು ತಿಳಿದವರಲ್ಲ.ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ.ಹಾಗಾಗಿ ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಕನ್ನಡ ಉಳಿದಿದೆ ಎನ್ನಬಹುದು.ಆದರೂ ಕೆಲವೆಡೆ ಭಾಷಾಭಿಮಾನದ ಕೊರತೆ ಕಂಡುಬರುತ್ತದೆ.ಕೊಲ್ಲೂರು ಪ್ರಸಿದ್ಧಯಾತ್ರಾಸ್ಥಳ.ಇಲ್ಲಿಗೆ ಭಕ್ತಾದಿಗಳು ದೇವಿಯ ದರ್ಶನಪಡೆದು ಕೃತಾರ್ಥರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ಅದರಲ್ಲೂ ಕೇರಳದ ಭಕ್ತರು ಹೆಚ್ಚಾಗಿ ಬರುತ್ತಾರೆ.ಅನೇಕ ಭಕ್ತರು ದೇವಿಯ ಪದತಲದಲ್ಲಿ ಶಾಶ್ವತವಾಗಿ ಇರಲು ಬಯಸಿ ಇಲ್ಲೇ ನೆಲಸಿದ್ದಾರೆ.ಅಂತವರಲ್ಲಿ ಒಬ್ಬರು ಒಮ್ಮೆ ಹಣ ಪಡೆಯಲು ಬೇಂಕಿಗೆ ಹೋದರು.ಎಷ್ಟು ಬೇಕು? ಎಂದು ಅಧಿಕಾರಿ ಕೇಳಿದಾಗ "ಆಯಿರಮ್ ರೂಬಾಯ್" ಎಂದರು.ಅಧಿಕಾರಿಗೆ ಅರ್ಥವಾಗಲಿಲ್ಲ.ಎಷ್ಟು ಹಣ ಬೇಕು ಮಾರಾಯರೇ ಎಂದಾಗ ಪುನಃ ಆಯಿರಮ್ ರುವಾಯ್ ಎಂದೇ ಉತ್ತರ ಬಂತು ಬೇಂಕು ಅಧಿಕಾರಿಗೂ ಕಿರಿಕಿರಿ ಆಯಿತು.ಪುನಃಪುನಃ ಆ ಗ್ರಾಹಕ ಮಲೆಯಾಳದಲ್ಲೇ ಮಾತಾಡತೊಡಗಿದರು.ಕೊಲ್ಲೂರಿಗೆ ಬಂದು ಸುಮಾರು ಇಪ್ಪತ್ತು ವರ್ಷಗಳ ಮೇಲಾಯ್ತು ಆದರೂ ಆ ಮನುಷ್ಯ ಎನಕೆ ಕನ್ನಡ ಅರಿವಿಲ್ಲ ಎಂದು ಜಂಬದಲ್ಲೇ ಇದ್ದರು.ಹಾಗೂ ಅವರನ್ನು ಸಹಿಸಿಕೊಂಡು ಊರವರಿದ್ದರು.ಆಯಾ ರಾಜ್ಯದ ಭಾಷೆ ಕಲಿಯದೇ ವರ್ಷಾನುಗಟ್ಟಳೆ ಒಂದೆಡೆ ಇರಬೇಕೆಂದರೆ ಅದು ಕರ್ನಾಟಕವೇ ಆಗಿರಬೇಕು ವಿನಾ ಬೇರೆ ಯಾವ ರಾಜ್ಯದಲ್ಲೂ ಈ ರೀತಿಯ ಸವಲತ್ತು ಸಿಗಲಾರದು.
ಬೆಂಗಳೂರು ನಗರದಲ್ಲಿ ಕನ್ನಡಪರ ಸಂಘಟನೆಗಳು ಅನೇಕವಿವೆ.ಕನ್ನಡಕ್ಕಾಗಿ ಹೋರಾಡುವ ಮಂದಿಗಳು ಸಂಸ್ಥೆಗಳು,ರಾಜಕಾರಣಿಗಳು,ಕೂಟಗಳು ಇತ್ಯಾದಿ ಇತ್ಯಾದಿ ತುಂಬ ಇವೆ ಎಂಬ ಭಾವನೆ ಇಟ್ಟುಕೊಂಡು ಬಂದರೆ ಇಲ್ಲಿನ ಪರಿಸ್ಥಿತಿ ಬೇರೆಯೇ ಆಗಿದೆ.ನೂರು ಮಂದಿಯ ಬಳಿ ನೀವು ವ್ಯವಹರಿಸಿದರೆ ನಿಮಗೆ ಕನ್ನಡದ ಕಂಪು ಕೇವಲ ಹದಿನೈದು ಯಾ ಇಪ್ಪತ್ತು ಜನರಲ್ಲಿ ಸಿಕ್ಕೀತು ಬಹು ಕಷ್ಟದಲ್ಲಿ! ಉಳಿದವರೆಲ್ಲ ಅನ್ಯಭಾಷಿಗರು.ಲಾಲ್‌ಬಾಗಿನ ಬಳಿ ನಿಂತಿದ್ದೆ.ಇಬ್ಬರು ಯುವಕರು ಹತ್ತಿರ ಬಂದರು-
"ಅಂಕಲ್‌ಜಿ ಯಹಾಂ ಸೆ ಮೆಜೆಸ್ಟಿಕ್ ಕೋ ಬಸ್ ಮಿಲೇಗಿ ಕ್ಯಾ?" ಎಂದು ಕೇಳಿದರು.
ನೋಡೋಣ ಎಂದು ನೀವು ಯಾವ ಊರಿನವರು ಎಂದು ಕೇಳಿದೆ.
"ರಾಯಚೂರ್ರೀ ಸರ" ಅಂದರು!
"ರಾಯಚೂರಿನ ಮಂದಿಗೆ ಕನ್ನಡ ಬರಾಂಗಿಲ್ಲೇನು?" ನಾನು ರಾಯಚೂರಿನವನಲ್ಲದಿದ್ದರೂ ಆದಷ್ಟು ಅವರ ಧಾಟಿಯಲ್ಲಿ ಕೇಳಿದೆ.
"ಬರತ್ರೀ ಸರ,ಆದರ ಇಲ್ಲಿ ಬೆಂಗ್ಳೂರ್ನಾಗೆ ನಡೀಬೇಕಲ್ರೀ! ಅದಕ್ಕ ಹಿಂದೀವಳಗ ಕೇಳಾಕಹತ್ತೀನ್ರೀ" ಅವನ ಸಮಜಾಯಿಷಿಕೆ....
ಅಂದರೆ ಬೆಂಗಳೂರಿನಲ್ಲಿ ಬೇರೆ ಊರಿಂದ-ಕರ್ನಾಟಕದವರೇ-ಬಂದವರೂ ಸಹ ಮೊದಲಿಗೆ ಹಿಂದಿಯಲ್ಲೇ ಮಾತಾಡಿ ಕಡೆಗೆ ಕನ್ನಡಕ್ಕೆ ಬರುತ್ತಾರೆ.ಇದು ಇತರ ರಾಜ್ಯದವರ ಅಹಂಕಾರವೋ ನಮ್ಮ ದೌರ್ಬಲ್ಯವೋ ತಿಳಿಯದು.
ತರಕಾರಿ ಅಂಗಡಿಗೆ ಹೋದೆ-"ಎನ್ನ ವೇಣು?" ಅಂಗಡಿ ಯಜಮಾನಿ ಕೇಳಿದಳು.
"ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತ ಇದ್ದಿ.ಕನ್ನಡ ಭಾಷೆ ಬರುವುದಿಲ್ಲವೇ?" ಕೇಳಿದೆ.
"ನನಕ ರೊಂಬ ಬಾಶೆ ವರುತ್ತೆ,ನಿನಕೆ ಎತ್ತರ ವೇಣು?" ಅವಳದ್ದು ಧಿಮಾಕಿನ ಜವಾಬು.ಇಷ್ಟು ಜಂಬ ಇರುವವಳ ಬಳಿ ವ್ಯಾಪಾರ ಮಾಡಲು ಮನಸ್ಸಾಗದೇ ವಾಪಸು ಬಂದೆ.....
ಬಸ್ಸುಗಳಲ್ಲಿ,ಪಾರ್ಕುಗಳಲ್ಲಿ,ಫುಟ್‌ಪಾತ್‌ಗಳಲ್ಲಿ,ಅಂಗಡಿ-ಹೋಟಲುಗಳಲ್ಲಿ ಎಲ್ಲೇ ನೋಡಿರಿ ಹೆಚ್ಚಿನಂಶ ಯುವಕಯುವತಿಯರು ಇಂಗ್ಲಿಷ್,....ಬಾಕಿ ಹಿಂದಿ ಮತ್ತು ಇತರೇ ಭಾಷೆಗಳಾದ ತೆಲುಗು ತಮಿಳುಗಳೆ ರಾರಾಜಿಸುತ್ತಿವೆ.ಅನೇಕ ಕಡೆಗಳಲ್ಲಿ ಅವರೇ ಬಹುಸಂಖ್ಯಾತರು ಮತ್ತು ಅವರದೇ ರಾಜ್ಯಭಾರ.ಕನ್ನಡದಲ್ಲಿ ಮಾತಾಡುವುದು ಅಂದರೆ ಬಹುತೇಕ ಜನರಿಗೆ ಹೀನೈಸಿಕೆ ಎಂದೆನಿಸುತ್ತದೆಯೋ ಏನೋ! ಬಹಳ ಕಷ್ಟಪಟ್ಟು ಇಂಗ್ಲಿಷ್ ಮಾತಾಡುತ್ತಾರೆ! ಎದುರಿಗಿದ್ದ ಆಂಗ್ಲ ಭಾಷೆ ಬಾರದವರಿಗೆ ಒಂದು ರೀತಿಯ ಮುಜುಗರ ಬೇರೆ.
ಕ.ರಾ.ರ.ಸಾ.ನಿಗಮವು ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ.ನಿಗಮದ ನಿರ್ವಹಣೆ ಅತ್ಯುತ್ತಮವಾಗಿದ್ದು ಇದು ನನಗೆ ತಿಳಿದಂತೆ ಸತತ ನಾಲ್ಕು ವರ್ಷಗಳಿಂದ ಲಾಭದಲ್ಲಿದೆ.ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆಯು ನಿತ್ಯಸಂಚಾರಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತದೆ.ಉತ್ತಮ ಕಂಡೀಷನ್ ಇರುವ ಬಸ್ಸುಗಳು,ದಿನದ ಹಾಗೂ ತಿಂಗಳ ಪಾಸುಗಳು,ವೋಲ್ವೋ ಬಸ್ಸುಗಳು,ನಗುಮುಖದ ಚಾಲಕ-ನಿರ್ವಾಹಕರು,ಪ್ರಯಾಣಿಕರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಸಹನೆಯಿಂದ ತೃಪ್ತಿಕರ ಉತ್ತರ ನೀಡಿ ಮಾರ್ಗದರ್ಶನ ಮಾಡುವ ನಿಲ್ದಾಣ ಸಿಬಂದಿಗಳು ಇನ್ನೇನು ಬೇಕು.ನಾನು ಬೆಂಗಳೂರಿನಲ್ಲಿ ಪ್ರಯಾಣಕ್ಕಾಗಿ ಬಸ್ಸುಸಾರಿಗೆಯನ್ನೇ ಇಚ್ಚಿಸುತ್ತೇನೆ.ಆಟೋಗಳಲ್ಲಿ ಪಯಣಿಸುವುದಿಲ್ಲ.ನನ್ನ ಸುಮಾರು ಎರಡೂವರೆ ವರ್ಷಗಳ ಅನುಭವದಂತೆ ಇದುವರೆಗೆ ಒಂದೇ ಒಂದು ಅಹಿತಕರ ಘಟನೆ,ಚಾಲಕ ನಿರ್ವಾಹಕರಿಂದ ಅಸಭ್ಯ ವರ್ತನೆ ಮುಂತಾದುವುಗಳನ್ನು ನಾನು ನೋಡಿಲ್ಲ.ಬೆಂಗಳೂರು ಒಂದು ಮಹಾನಗರ, ಮತ್ತು ಇನ್ನೂ ಬೆಳೆಯುತ್ತಿರುವ ನಗರ.ಇಲ್ಲಿನ ಸಾರಿಗೆ ನಿಗಮವೂ ದೊಡ್ಡದೇ.ಸಾವಿರಾರು ಬಸ್ಸುಗಳು ಅವುಗಳ ಸಿಬಂದಿ ವರ್ಗವೂ ದೊಡ್ಡದೇ.ಅವರು ನೀಡುವ ಸೇವಾ ಸೌಲಭ್ಯಗಳು ಅತ್ಯಂತ ಪ್ರಶಂಸನೀಯ.ಉತ್ತಮ ನಿರ್ವಹಣೆ ಬಗ್ಗೆ ಅದಕ್ಕೆ ಕೇಂದ್ರ ಸರಕಾರದ ಶಹಭಾಶ್‌ಗಿರಿ ಮತ್ತು ಪ್ರಶಸ್ತಿ ಸಹಾ ಬಂದಿದೆ.
ದೊಡ್ಡ ಸಂಸ್ಥೆ ಎಂದ ಮೇಲೆ ಸಣ್ಣಪುಟ್ಟ ಕುಂದುಕೊರತೆಗಳು ಇದ್ದೇ ಇರುತ್ತವೆ.ಆದರೆ ನಾವು ಸಮಗ್ರ ದೃಷ್ಟಿಕೋಣವಿಟ್ಟು ಸಂಸ್ಥೆಯ ಕಾರ್ಯವಿಧಾನವನ್ನು ವಿಶ್ಲೇಷಿಸಬೇಕೆ ವಿನಹ ಒಂದೆರಡು ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿ ಇಡೀ ವ್ಯವಸ್ಥೆಯನ್ನು ಹೀಗಳೆಯುವುದು ತಪ್ಪು.ಇತ್ತೀಚಿನ ಟೈಂಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಬ್ಬಾಕೆಯ ದೂಷಣಾಲೇಖನ ಬಂದಿತ್ತು-"ಬಸ್ ಕರೋ ಇಟ್ಸ್ ಅವರ್ ಹೋಮ್ ಟೂ"-ಬಸ್ಸಿನಲ್ಲಿ ಸಿಬಂದಿವರ್ಗದವರು ಒಬ್ಬ ಪಾಪದ ಹುಡುಗಿಯನ್ನು ಕಳ್ಳತನದ ಆರೋಪದ ಮೇಲೆ ವಿನಾಕಾರಣ ಥಳಿಸುತ್ತಿದ್ದರು.ಅದನ್ನು ಆಕೆ ತಪ್ಪಿಸಿದರು.ಈ ನಡುವೆ ಸದರಿ ಸಿಬಂದಿಗಳು ತಮ್ಮ ವಿರುದ್ಧ ಮಾತಾಡಿದ ಈ ಹಿಂದಿ ಭಾಷಿಕ ಮಹಿಳೆ ಮೇಲೇರಿ ಬಂದರು-ಹಿಂದಿ ಮಾತನಾಡುವ ಮಂದಿಗೆ ಕನ್ನಡದವರ ವಿರುದ್ಧ ಮಾತಾಡಲು ಯಾವ ಹಕ್ಕಿದೆ? ಇಳಿ ಕೆಳಗೆ ಎಂದು ತನ್ನನ್ನು ಬಸ್ಸಿನಿಂದ ಇಳಿಸಿದರು ಎಂದು ಆಕೆಯ ಆರೋಪ....
ನಾನು ಬಸ್ಸಿನ ಸಿಬಂದಿಯವರು ಮಾಡಿದ ದೌರ್ಜನ್ಯದ ಪರವಾಗಿ ಯಾವುದೇ ವಕಾಲತ್ತು ಮಾಡುವುದಿಲ್ಲ.ಅವರು ಮಾಡಿದ್ದು ತಪ್ಪು ಮತ್ತು ಅವರನ್ನು ಎದುರಿಸಿ ಆ ಪಾಪದ ಹುಡುಗಿಗೆ ಸಹಾಯ ಮಾಡಿದುದು ಪ್ರಶಂಸೆಗೆ ಅರ್ಹ....ತಾನು ಬೇರೆ ರಾಜ್ಯದಿಂದ ಬಂದವಳು,ಇಲ್ಲಿ ಜೀವಿಸುವವಳು ಆದ್ದರಿಂದ ಇಲ್ಲಿನ ಭಾಷೆ ಕಲಿಯುವುದು ತನ್ನ ಕರ್ತವ್ಯವಾಗಿರಬೇಕಿತ್ತು.ಅದನ್ನು ಅವರೂ ಒಪ್ಪುತ್ತಾರೆ.ಭಾಷೆ ಕಲಿಯುವುದು ಎಂದರೆ ಅ ಆ ಇ ಈ ಕಲಿಯುವುದಲ್ಲ.ಜನರೊಡನೆ ವ್ಯವಹರಿಸಲು ಆಗುವಷ್ಟನ್ನಾದರೂ ಕಲಿಯಬಹುದಿತ್ತು..ಇಲ್ಲ ಅದನ್ನು ಆಕೆ ಕಲಿಯಲಿಲ್ಲ ಮಾತ್ರವಲ್ಲ ತಾನು ಮನಸ್ಸಾದರೆ ಮಾತ್ರ ಕಲೀತೇನೆ,ಕನ್ನಡ ಕಲಿಯುವಂತೆ ಯಾರೂ ತನ್ನನ್ನು ಬಲವಂತ ಪಡಿಸಲಾಗದು.ತಾನು ಯಾವ ಭಾಷೆ ಉಪಯೋಗಿಸುತ್ತೇನೆ ಎಂಬುದು ತನ್ನ ಪ್ರಜಾಸತ್ತಾತ್ಮಕ ಹಕ್ಕು.ಕನ್ನಡ ಮಾತನಾಡುವುದಿಲ್ಲ ಎಂದು ಯಾರೂ ತನಗೆ ಸಾರ್ವಜನಿಕ ಸೇವೆ ನಿರಾಕರಿಸಲಾಗದು ಎಂದು ಸಮರ್ಥಿಸಿಕೊಂಡಿದ್ದಾರೆ...ಇದು ಮಾತ್ರ ಧಾರ್ಷ್ಟ್ಯದ ಮಾತು.ನಮ್ಮ ಬೆಂಗಳೂರಿಗೆ ಬಂದಿದ್ದೀರಿ.ಇಲ್ಲಿನವರ ಪ್ರೀತಿಗೆ ಪಾತ್ರರಾಗಬೇಕೇ ವಿನಃ ಇಲ್ಲಿನ ವ್ಯವಸ್ಥೆಗಳನ್ನು ದೂಷಿಸುವುದು ಸ್ವಲ್ಪ ಅತಿರೇಕದ ಮಾತು.ಇದು ಸಲ್ಲದು.ನಾವಿದನ್ನು ಒಪ್ಪಲಾಗದು.ಯಾವುದೇ ಭಾಷೆ ಕಲಿಯಲು ಬಹಳ ಕಷ್ಟವೇನಿಲ್ಲ....ನಮ್ಮ ಲ್ಲಿ ತಮಿಳುನಾಡಿನಿಂದ ಒಬ್ಬ ಕೃಷಿ ಆಧಿಕಾರಿ ವರ್ಗವಾಗಿ ಬಂದರು.ತಮಗೆ ನೂರು ದಿನ ಸಮಯ ಕೊಡುತ್ತೇನೆ ಅಷ್ಟರ ಒಳಗೆ ನಮ್ಮ ಮಾತು ಕಲಿಯಬೇಕು ಎಂದಾಗ ತನಗೆ ಕೇವಲ ಒಂದು ತಿಂಗಳು ಸಮಯ ಕೊಡಿ ಸಾಕು ಅಷ್ಟರೊಳಗೆ ಕಲೀತೇನೆಂದರಲ್ಲದೇ ಕಲಿತೂ ಬಿಟ್ಟರು ಮತ್ತು ತುಂಬ ಜನಪ್ರಿಯ ಅಧಿಕಾರಿ ಎಂಬ ಹೆಗ್ಗಳಿಕೆಯನ್ನೂ ಅಲ್ಪಕಾಲದಲ್ಲಿ ಗಳಿಸಿದರು.ಈ ರೀತಿಯ ಸಕಾರಾತ್ಮಕ ನಡವಳಿಕೆ ಇರಬೇಕೇ ವಿನಃ ತನಗೆ ಖುಷಿ ಇದ್ದರೆ ಮಾತ್ರ ಕಲೀತೇನೆ ಎಂಬ ಮನೋಭಾವನೆ ಒಳ್ಳೆಯದಲ್ಲ.
Ee prabhandakkagi thumba dhanyavaadhagalu 🙏
ReplyDelete