ಕ.ರಾ.ರ.ಸಾ.ನಿಗಮವು ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ.ನಿಗಮದ ನಿರ್ವಹಣೆ ಅತ್ಯುತ್ತಮವಾಗಿದ್ದು ಇದು ನನಗೆ ತಿಳಿದಂತೆ ಸತತ ನಾಲ್ಕು ವರ್ಷಗಳಿಂದ ಲಾಭದಲ್ಲಿದೆ.ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆಯು ನಿತ್ಯಸಂಚಾರಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತದೆ.ಉತ್ತಮ ಕಂಡೀಷನ್ ಇರುವ ಬಸ್ಸುಗಳು,ದಿನದ ಹಾಗೂ ತಿಂಗಳ ಪಾಸುಗಳು,ವೋಲ್ವೋ ಬಸ್ಸುಗಳು,ನಗುಮುಖದ ಚಾಲಕ-ನಿರ್ವಾಹಕರು,ಪ್ರಯಾಣಿಕರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಸಹನೆಯಿಂದ ತೃಪ್ತಿಕರ ಉತ್ತರ ನೀಡಿ ಮಾರ್ಗದರ್ಶನ ಮಾಡುವ ನಿಲ್ದಾಣ ಸಿಬಂದಿಗಳು ಇನ್ನೇನು ಬೇಕು.ನಾನು ಬೆಂಗಳೂರಿನಲ್ಲಿ ಪ್ರಯಾಣಕ್ಕಾಗಿ ಬಸ್ಸುಸಾರಿಗೆಯನ್ನೇ ಇಚ್ಚಿಸುತ್ತೇನೆ.ಆಟೋಗಳಲ್ಲಿ ಪಯಣಿಸುವುದಿಲ್ಲ.ನನ್ನ ಸುಮಾರು ಎರಡೂವರೆ ವರ್ಷಗಳ ಅನುಭವದಂತೆ ಇದುವರೆಗೆ ಒಂದೇ ಒಂದು ಅಹಿತಕರ ಘಟನೆ,ಚಾಲಕ ನಿರ್ವಾಹಕರಿಂದ ಅಸಭ್ಯ ವರ್ತನೆ ಮುಂತಾದುವುಗಳನ್ನು ನಾನು ನೋಡಿಲ್ಲ.ಬೆಂಗಳೂರು ಒಂದು ಮಹಾನಗರ, ಮತ್ತು ಇನ್ನೂ ಬೆಳೆಯುತ್ತಿರುವ ನಗರ.ಇಲ್ಲಿನ ಸಾರಿಗೆ ನಿಗಮವೂ ದೊಡ್ಡದೇ.ಸಾವಿರಾರು ಬಸ್ಸುಗಳು ಅವುಗಳ ಸಿಬಂದಿ ವರ್ಗವೂ ದೊಡ್ಡದೇ.ಅವರು ನೀಡುವ ಸೇವಾ ಸೌಲಭ್ಯಗಳು ಅತ್ಯಂತ ಪ್ರಶಂಸನೀಯ.ಉತ್ತಮ ನಿರ್ವಹಣೆ ಬಗ್ಗೆ ಅದಕ್ಕೆ ಕೇಂದ್ರ ಸರಕಾರದ ಶಹಭಾಶ್‌ಗಿರಿ ಮತ್ತು ಪ್ರಶಸ್ತಿ ಸಹಾ ಬಂದಿದೆ.
ದೊಡ್ಡ ಸಂಸ್ಥೆ ಎಂದ ಮೇಲೆ ಸಣ್ಣಪುಟ್ಟ ಕುಂದುಕೊರತೆಗಳು ಇದ್ದೇ ಇರುತ್ತವೆ.ಆದರೆ ನಾವು ಸಮಗ್ರ ದೃಷ್ಟಿಕೋಣವಿಟ್ಟು ಸಂಸ್ಥೆಯ ಕಾರ್ಯವಿಧಾನವನ್ನು ವಿಶ್ಲೇಷಿಸಬೇಕೆ ವಿನಹ ಒಂದೆರಡು ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿ ಇಡೀ ವ್ಯವಸ್ಥೆಯನ್ನು ಹೀಗಳೆಯುವುದು ತಪ್ಪು.ಇತ್ತೀಚಿನ ಟೈಂಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಂದು ದೂಷಣೆಯ ಲೇಖನ ಬಂದಿತ್ತು-"ಬಸ್ ಕರೋ ಇಟ್ಸ್ ಅವರ್ ಹೋಮ್ ಟೂ"-ಬಸ್ಸಿನಲ್ಲಿ ಸಿಬಂದಿವರ್ಗದವರು ಒಬ್ಬ ಪಾಪದ ಹುಡುಗಿಯನ್ನು ಕಳ್ಳತನದ ಆರೋಪದ ಮೇಲೆ ವಿನಾಕಾರಣ ಥಳಿಸುತ್ತಿದ್ದರು.ಅದನ್ನು ಆಕೆ ತಪ್ಪಿಸಿದರು.ಈ ನಡುವೆ ಸದರಿ ಸಿಬಂದಿಗಳು ತಮ್ಮ ವಿರುದ್ಧ ಮಾತಾಡಿದ ಈ ಹಿಂದಿ ಭಾಷಿಕ ಮಹಿಳೆ ಮೇಲೇರಿ ಬಂದರು-ಹಿಂದಿ ಮಾತನಾಡುವ ಮಂದಿಗೆ ಕನ್ನಡದವರ ವಿರುದ್ಧ ಮಾತಾಡಲು ಯಾವ ಹಕ್ಕಿದೆ? ಇಳಿ ಕೆಳಗೆ ಎಂದು ತನ್ನನ್ನು ಬಸ್ಸಿನಿಂದ ಇಳಿಸಿದರು ಎಂದು ಆಕೆಯ ಆರೋಪ....
ನಾನು ಬಸ್ಸಿನ ಸಿಬಂದಿಯವರು ಮಾಡಿದ ದೌರ್ಜನ್ಯದ ಪರವಾಗಿ ಯಾವುದೇ ವಕಾಲತ್ತು ಮಾಡುವುದಿಲ್ಲ.ಅವರು ಮಾಡಿದ್ದು ತಪ್ಪು ಮತ್ತು ಅವರನ್ನು ಎದುರಿಸಿ ಆ ಪಾಪದ ಹುಡುಗಿಗೆ ಸಹಾಯ ಮಾಡಿದುದು ಪ್ರಶಂಸೆಗೆ ಅರ್ಹ....ತಾನು ಬೇರೆ ರಾಜ್ಯದಿಂದ ಬಂದವಳು,ಇಲ್ಲಿ ಜೀವಿಸುವವಳು ಆದ್ದರಿಂದ ಇಲ್ಲಿನ ಭಾಷೆ ಕಲಿಯುವುದು ಆಕೆಯ ಕರ್ತವ್ಯವಾಗಿರಬೇಕಿತ್ತು.ಅದನ್ನು ಅವರೂ ಒಪ್ಪುತ್ತಾರೆ.ಭಾಷೆ ಕಲಿಯುವುದು ಎಂದರೆ ಅ ಆ ಇ ಈ ಕಲಿಯುವುದಲ್ಲ.ಜನರೊಡನೆ ವ್ಯವಹರಿಸಲು ಆಗುವಷ್ಟನ್ನಾದರೂ ಕಲಿಯಬಹುದಿತ್ತು..ಇಲ್ಲ ಅದನ್ನು ಆಕೆ ಕಲಿಯಲಿಲ್ಲ ಮಾತ್ರವಲ್ಲ ತಾನು ಮನಸ್ಸಾದರೆ ಮಾತ್ರ ಕಲೀತೇನೆ,ಕನ್ನಡ ಕಲಿಯುವಂತೆ ಯಾರೂ ತನ್ನನ್ನು ಬಲವಂತ ಪಡಿಸಲಾಗದು.ತಾನು ಯಾವ ಭಾಷೆ ಉಪಯೋಗಿಸುತ್ತೇನೆ ಎಂಬುದು ತನ್ನ ಪ್ರಜಾಸತ್ತಾತ್ಮಕ ಹಕ್ಕು.ಕನ್ನಡ ಮಾತನಾಡಲಿಲ್ಲ ಎಂದು ಯಾರೂ ತನಗೆ ಸಾರ್ವಜನಿಕ ಸೇವೆ ನಿರಾಕರಿಸಲಾಗದು ಎಂದು ಸಮರ್ಥಿಸಿಕೊಂಡಿದ್ದಾರೆ...ಇದು ಮಾತ್ರ ಧಾರ್ಷ್ಟ್ಯದ ಮಾತು. ನಮ್ಮ ಬೆಂಗಳೂರಿಗೆ ಬಂದಿದ್ದೀರಿ.ಬಹಳ ಸಂತೋಷ.ಇಲ್ಲಿನವರ ಪ್ರೀತಿಗೆ ಪಾತ್ರರಾಗಬೇಕೇ ವಿನಃ ಇಲ್ಲಿನ ವ್ಯವಸ್ಥೆಗಳನ್ನು ದೂಷಿಸುವುದು ಸ್ವಲ್ಪ ಅತಿರೇಕದ ಮಾತು.ಇದು ಸಲ್ಲದು. ನಾವಿದನ್ನು ಒಪ್ಪಲಾಗದು.ಯಾವುದೇ ಭಾಷೆ ಕಲಿಯಲು ಬಹಳ ಕಷ್ಟವೇನಿಲ್ಲ....ನಮ್ಮ ಲ್ಲಿ ತಮಿಳುನಾಡಿನಿಂದ ಒಬ್ಬ ಕೃಷಿ ಆಧಿಕಾರಿ ವರ್ಗವಾಗಿ ಬಂದರು.ನಿಮಗೆ ನೂರು ದಿನ ಸಮಯ ಕೊಡುತ್ತೇನೆ ಅಷ್ಟರ ಒಳಗೆ ನಮ್ಮ ಮಾತು ಕಲಿಯಬೇಕು ಎಂದಾಗ ತನಗೆ ಕೇವಲ ಒಂದು ತಿಂಗಳು ಸಮಯ ಕೊಡಿ ಸಾಕು ಅಷ್ಟರೊಳಗೆ ಕಲಿಯುತ್ತೇನೆಂದರಲ್ಲದೇ ಕಲಿತೂ ಬಿಟ್ಟರು ಮತ್ತು ತುಂಬ ಜನಪ್ರಿಯ ಅಧಿಕಾರಿ ಎಂಬ ಹೆಗ್ಗಳಿಕೆಯನ್ನೂ ಅಲ್ಪಕಾಲದಲ್ಲಿ ಗಳಿಸಿದರು.ಈ ರೀತಿಯ ಸಕಾರಾತ್ಮಕ ನಡವಳಿಕೆ ಇರಬೇಕೇ ವಿನಃ ತನಗೆ ಖುಷಿ ಇದ್ದರೆ ಮಾತ್ರ ಕಲೀತೇನೆ ಎಂಬ ಮನೋಭಾವನೆ ಒಳ್ಳೆಯದಲ್ಲ.
No comments:
Post a Comment