ಸಿಂಡಿಕೇಟ್ ಬೇಂಕು ಅರುವತ್ತ ನಾಲ್ಕರ ಸಮಯದಲ್ಲಿ ತನ್ನ ಹೆಡ್ಡಾಫೀಸನ್ನು ಮಣಿಪಾಲಕ್ಕೆ ಸ್ಥಳಾಂತರಿಸಿತು. ಆ ಶುಭ ಸಮಯದಲ್ಲಿ ಅನೇಕ ಹೊಸ ಜನೋಪಯೋಗೀ ಸ್ಕೀಮುಗಳನ್ನು ಜ್ಯಾರಿಗೆ ತಂದಿತು. ವಾಣಿಜ್ಯ ಬೇಂಕುಗಳಲ್ಲಿ ಮೊಟ್ಟಮೊದಲು ಕೃಷಿ ವ್ಯವಸಾಯಕ್ಕೆ ಸಂಬಂಧಿಸಿದಂತೆ ಹೊಸದಾಗಿ ಕ್ರಾಂತಿಕಾರಕ ಸ್ಕೀಮನ್ನು ತೆರೆಯಿತು. ಅದುವರೆಗೆ ಕೃಷಿಸಾಲ ನೀಡುವ ಗುತ್ತಿಗೆ ಕೋ-ಆಪರೇಟಿವ್ ಬೇಂಕುಗಳಿಗೆ ಮಾತ್ರ ಇತ್ತು. ಕಮರ್ಷಿಯಲ್ ಬೇಂಕುಗಳು ಕೃಷಿಕರ ಬೇಕು-ಬೇಡಗಳ ಉಸಾಬರಿಗೇ ಹೋಗುತ್ತಿರಲಿಲ್ಲ. ಈ ಯೋಜನೆಯನ್ನು ತಂದು ಜ್ಯಾರಿಗೊಳಿಸಿದ ಬಗ್ಗೆ ರಿಸರ್ವ್ ಬೇಂಕಿನಿಂದ ಆಕ್ಷೇಪಣೆ ಅಲ್ಲದಿದ್ದರೂ ಆತಂಕ ವ್ಯಕ್ತವಾಗಿತ್ತು. ಕಡೆಗೆ ಅದೇ ರಿಸರ್ವ್ ಬೇಂಕಿನಿಂದ ಮೆಚ್ಚುಗೆ, ಶಹಭಾಷ್ ಗಿರಿ ಸಹಾ ಬಂತು. ಈ ಕ್ರಾಂತಿಕಾರಕ ಯೋಜನೆ ಜ್ಯಾರಿಯ ಬಗ್ಗೆ ಬೇಂಕಿಗೆ ಇಂದಿಗೂ ಬಹಳ ಹೆಮ್ಮೆ ಅಭಿಮಾನ ಇದೆ......
ತತ್ಸಂಬಂಧ ಮಡಿಫಾರ್ಮನ್ನು ಸ್ಥಾಪಿಸಲಾಯಿತು. ಇಲ್ಲಿ ಕೃಷಿ ಉದ್ಯಮದ ಬೆಳೆವಣಿಗೆ ಬಗ್ಗೆ , ಉತ್ತಮ ಸುಧಾರಿತ ಕೃಷಿ ಮಾಡುವ ಕುರಿತು ಹೆಚ್ಚಿನ ರೀತಿಯ ಪ್ರಾತ್ಯಕ್ಷಿಕೆ ಇತ್ತು. ಇದನ್ನು ಹತ್ತಿರದ ಬ್ರಾಂಚಿಗೆ ಎಟ್ಯಾಚ್ ಮಾಡಲಾಗಿತ್ತು. ಅಂತಿರುವ ಸಮಯಕ್ಕೆ ಜಪಾನಿನ ಆರ್ಥಿಕ ನಿಯೋಗವೊಂದು ಭಾರತಕ್ಕೆ ಬಂದಿತ್ತು. ಆ ತಂಡಕ್ಕೆ ದೇಶದ ಪ್ರತಿಷ್ಠಿತ ಬೇಂಕೊಂದು ತನ್ನ ಪ್ರಧಾನ ಕಛೇರಿಯನ್ನು ತೀರಾ ಗ್ರಾಮೀಣ ಪ್ರದೇಶದಲ್ಲಿ ಹೊಂದಿದ್ದು, ತನ್ನ ಹೆಚ್ಚಿನ ವ್ಯವಹಾರವನ್ನು ಗ್ರಾಮೀಣ ಭಾರತದಲ್ಲೇ ಹೊಂದಿದೆ ಎಂಬ ವಿಚಾರ ತಿಳಿದು ಆಶ್ಚರ್ಯವಾಯಿತು. ಆ ನಿಯೋಗವು ಮಣಿಪಾಲಕ್ಕೆ ಭೇಟಿ ಕೊಟ್ಟಾಗ ಅದರ ಹೆಚ್ಚಿನ ಸದಸ್ಯರ ಅಭಿಲಾಷೆಯಂತೆ ಸದರೀ ಬ್ರಾಂಚು ವಿಸಿಟ್ ಫಿಕ್ಸ್ ಆಯಿತು.
"ಜಾಪನೀಸ್ ಡೆಲಿಗೇಷನ್ ವಿಸಿಟ್ಸ್ ಯುವರ್ ಬ್ರಾಂಚ್. ಎರೇಂಜ್ ಸ್ನ್ಯಾಕ್ಸ್." ಹೆಡ್ಡಾಫೀಸಿನಿಂದ ತುರ್ತು ಟೆಲಿಗ್ರಾಮು ಬಂದ ಮೇರೆಗೆ ಬ್ರಾಂಚು ಮೆನೆಜರು ಎಲ್ಲ ಎರೇಂಜ್ ಮೆಂಟ್ ಮಾಡಿದರು.
ನಿಗದಿತ ದಿನದಂದು ಚೆಯರ್ ಮೇನರು ಜಪಾನೀ ತಂಡವನ್ನು ಕರಕೊಂಡು ಬ್ರಾಂಚಿಗೆ ಬಂದರು. ಶಾಖೆಯ ಹತ್ತಿರ ಬಂದವರೇ ಝಗ್ಗನೇ ನಿಂತರು. ಸುಮಾರು ಎಂಟು-ಹತ್ತು ಹಾವಾಡಿಗರು ತಂತಮ್ಮ ಹಾವುಗಳನ್ನು ಆಡಿಸುತ್ತ ಪೇಂ ಪೇಂ ಪುಂಗಿ ಊದಲು ಮೊದಲಿಟ್ಟರು. ಆಚೆ ಬದಿಯಲ್ಲಿ ಇನ್ನೊಂದು ಗುಂಪಿನವರು ಢೋಲು ತಮ್ಮಟೆಗಳನ್ನು ಅತ್ಯುತ್ಸಾಹದಿಂದ ಢಮಢಮನೆ ಬಾರಿಸತೊಡಗಿದರು. ಹಾವಾಡಿಗರ ಮೇಲಾಟದಿಂದ ಒಮ್ಮೆ ದಿಗಿಲುಗೊಂಡರೂ ಕೂಡಲೇ ಛೆಯರ್ ಮೇನರು ಸುಧಾರಿಸಿಕೊಂಡರು.
ಜಪಾನೀ ಅತಿಥಿಗಳನ್ನು ಹೂಮಾಲೆ ಹಾಕಿ ಆರತಿ ಎತ್ತಿ ಸ್ವಾಗತಿಸಲಾಯಿತು.
"ವೊತ್ ಈಸ್ ದಿಸ್ ಮಿಸ್ತರ್ ಚೆಯರ್ ಮೆನ್?" ತಂಡದ ಮುಖ್ಯಸ್ಥ ಕಕಮಕ ನೋಡುತ್ತಾ ಕೇಳಿದ. ಆತನಿಗೆ ಈ ರೀತಿಯ ಢೋಲಿನ ಡೌಲಿನ ಪರಿಚಯ ಇದ್ದಿರಲಿಲ್ಲ ಪಾಪ!
"ದಿಸ್ ಈಸ್ ಅವರ್ ಟ್ರೆಡೀಷನಲ್ ವೆಲ್ ಕಂ. ನೀವೆಲ್ಲ ನಮ್ಮ ಅತಿಗಣ್ಯ ಅತಿಥಿಗಳು. ಆ ಕಾರಣ ಹಾರ್ದಿಕವಾಗಿ ಸ್ವಾಗತಿಸಲಾಯಿತು." ಛೆಯರ್ ಮೆನರು ವಿವರಿಸಿದರು.
"ವ್ಹೊ! ಈಸ್ ಇಟ್!! ವೆರ್ರಿ ಗುದ್ ವೆರ್ರಿ ಗುದ್." ಜಪಾನಿನವನಿಗೆ ಆನಂದವೋ ಆನಂದ.
"ಕಸ್ಸಲರೇ ಹೇಂ ನಾಟಕ?" ಛೆಯರ್ ಮೇನ್ ಮೆನೆಜರರನ್ನು ಕೊನೆಯಲ್ಲಿ ತರಾಟೆಗೆ ತೆಗೆದುಕೊಂಡರು.
"ಅಲ್ಲ, ಹೆಡ್ಡಾಫೀಸಿಂದ ಟೆಲಿಗ್ರಾಮು ಬಂದಿತ್ತು. ಜಾಪಾನಿನವರು ಬರುತ್ತಾರೆ. ಎರೇಂಜ್ ಸ್ನೇಕ್ಸ್ ಅಂತ ತುರ್ತು ಮೆಸೇಜು ಬಂದಿತ್ತು. ಇಲ್ಲಿ ಹಾವು ಎಲ್ಲಿ ಅಂತ ಹುಡುಕೂದು? ಊರಿನ ಮರ್ಯಾದೆ ಪ್ರಶ್ನೆ ಮಾರಾಯರೇ ಅಂತ ಹತ್ತು ಜನ ಹಾವು ಹಿಡಿಯುವವರನ್ನು ಒಟ್ಟು ಮಾಡಬೇಕಾದರೆ ಸಾಕುಬೇಕಾಯಿತು, ಕುರಿಕೋಣ ಬಿದ್ದು ಹೋಯ್ತು ಅಂತಾರಲ್ಲ ಹಾಗಾಯ್ತು ನನ್ನ ಅವಸ್ಥೆ. ಅವರಲ್ಲೂ ಇಬ್ಬರು ಅಬ್ಸೆಂಟು....."
ಛೆಯರ್ ಮೆನರು ಗೊಳ್ಳನೇ ನಕ್ಕರು... —
feeling joyful.
No comments:
Post a Comment