Monday, April 10, 2023

ಮಡಿ, ಮೈಲಿಗೆ, ಅಮೆ ಮತ್ತು ಅಸ್ಪೃಶ್ಯತೆ..

 

ನಮ್ಮ ಅಜ್ಜಿ ಭವಾನಿಮಾಯಿಗೆ ನಾವು ಮೊಮ್ಮಕ್ಕಳೆಂದರೆ ಭಾರೀ ಮೋಕೆ. ಅದೂ ನಾವು ಮಗಳ ಮಕ್ಕಳು, ಹಾಗಾಗಿ ಎಲ್ಲರಿಗಿಂತ ಒಂದು ಮುಷ್ಟಿ ಜಾಸ್ತಿ ಪ್ರೀತಿ. ಅವರ ಪ್ರೀತಿ ಊರ ಎಲ್ಲರ ಮೇಲೆ ಇದ್ದಿತ್ತು. ಅವರ ಮನಸ್ಸು-ಹೃದಯ ವಿಶಾಲ ಮತ್ತು ಸ್ನೇಹ ಪೂರ್ಣ, ಕಪಟವೆಂದರೇನೆಂದು ಗೊತ್ತಿಲ್ಲದವರು. ದುಡ್ಡಿನಲ್ಲಿ ಬಡವರಾದರೂ ಪ್ರೀತಿ ಸ್ನೇಹದಲ್ಲಿ ಶ್ರೀಮಂತರು. ನನ್ನ ಅಜ್ಜಿ ಅಂತ ಜಂಬ ಕೊಚ್ಚಿಕೊಳ್ಳುತ್ತಿಲ್ಲ, ಇದು ಸತ್ಯ ವಿಚಾರ. ಆದರೆ ತುಂಬ ಹಳೇಕಾಲದವರಾದುದರಿಂದ ಮಡಿಹುಡಿ ಕೊಂಚ ಅತಿರೇಕವೇ ಎನ್ನುವಷ್ಟಿತ್ತು. ತಾನು ಎಷ್ಟೇ ಶುದ್ಧಾಚಾರದಲ್ಲಿರಲಿ, ನಮ್ಮ ಅಭ್ಯಂತರವಿಲ್ಲ. ಆದರೆ ಮನೆ ಮಂದಿ ಯವರ ನಡುವೆ ಎಂತಹ ಮಡಿ! ನಮಗರ್ಥವಾಗುತ್ತಿರಲಿಲ್ಲ.

ನಾವು ಎಲಿಮೆಂಟರಿ ಶಾಲೆ ಓದುತ್ತಿರುವ ಕಾಲ. ಅವರು ಬೆಳಗ್ಗೆ ಸ್ನಾನಮಾಡಿ ಮಣಮಣ ಯಾವುದೋ ದೇವರ ನಾಮಸ್ಮರಣೆ ಮಾಡುತ್ತಾ ಅವರಿವರು-ಅಂದರೆ ನಾವು ಮಕ್ಕಳು-ಮುಟ್ಟುತ್ತಾರೋ ಎಂಬ ಹೆದರಿಕೆಯಿಂದ ದಡಬಡಿಸಿ ಬಂದು ದೇವರ ಕೋಣೆ ಸೇರಿಬಿಡುತ್ತಿದ್ದರು. ಅಲ್ಲಿ ಐದು-ಹತ್ತು ನಿಮಿಷಗಳ ದೇವರ ನಾಮಸ್ಮರಣೆ ಮುಗಿಸಿದರೋ ಬಚಾವು, ನಂತರ ಭಯವಿಲ್ಲ. ಆದ್ರೆ ಅಷ್ಟರ ತನಕ ನಾವ್ಯಾರೂ ಅವರನ್ನು ಮುಟ್ಟಬಾರದು. ಯಾರಾದರೂ ಮಕ್ಕಳು ಹತ್ತಿರ ಸುಳಿದರೆ ಹಚಚ್ ಹಚಚ್  ದೂರ ದೂರ ಎಂದು ಓಡಿಸಿ ದೇವರಕೋಣೆ ಸೇರುತ್ತಿದ್ದರು. ನಾವೋ ಹಟಹಿಡಿದವರಂತೆ ಕಾದುಕೂತು ಅವರು ಸ್ನಾನ ಮುಗಿಸಿ ಬರುವ ಸಮಯ ನೋಡಿ ಓಡಿ ಬಂದು ಅವರನ್ನು ಫಟ್ ಅಂತ ಮುಟ್ಟಿ ಥಟ್ ಅಂತ ಓಡುತ್ತಿದ್ದೆವು. "ಅಯ್ಯಯ್ಯಾ ಆಪ್ಪೊಣುಕ ಚೆರ್ಡಾ" ಎಂದು ಹೇಳುವಷ್ಟರಲ್ಲಿ ಅನಾಹುತ ಆಗಿಯೇ ಹೋಗುತ್ತಿತ್ತು. " ಮಕ್ಕಳ ಬಾಯಲ್ಲಿ ಆಗೂದಿಲ್ಲ, ತಂಟ್ಲ್ ಮಾರಿ ಅಂದ್ರೆ ತಂಟ್ಲ್ ಮಾರಿಗಳು, ಒಂದು ಚೂರೂ ಬುದ್ಧಿಯಿಲ್ಲ!" ಎಂದು ತಿರುಗಿ ಸ್ನಾನಮಾಡಿ ಬರುವಾಗ ಇನ್ನೊಬ್ಬ ರೆಡಿ! ಆದರೂ ಅವರು ತಮ್ಮ ಮಡಿಯನ್ನು ಕಾಯ್ದುಕೊಂಡೇ ಬರುತ್ತಿದ್ದರು. ನಾವು ಮಕ್ಕಳು ಎಷ್ಟುಸಲ ಮುಟ್ಟುತ್ತಿದ್ದೆವೋ ಅಷ್ಟೂಸಲ ಅವರು ಸ್ನಾನ ಮಾಡುತ್ತಿದ್ದರು. ಒಂದೆರಡು ಸಲ ಅತಿರೇಕಕ್ಕೆ ಹೋಗಿ ಮನೆಯಲ್ಲಿ ಚರ್ಚೆ , ರಸಕಸಿ ಆದದ್ದೂ ಉಂಟು. "ಈಗ ಮಕ್ಕಳು ಮುಟ್ಟಿದರು ಅಂದರೆ ನಿನ್ನ ಶುದ್ಧಕ್ಕೆ ಎಂತದ್ದು ತೊಂದರೆ ಬಂತು? ಅವು ಸಣ್ಣವು, ಬುದ್ಧಿ ಇಲ್ಲದವು, ಅವುಗಳಿಗೆ ಹೇಳಿದಷ್ಟು ಭಾಷೆಯಿಲ್ಲ, ಆದರೆ ನಿನಗೆ ಜ್ಞಾನ ಇಲ್ಲವೇ? ಮಕ್ಕಳು ಅಂದರೆ ದೇವರ ಸಮಾನ ಅಂತ ನೀನೇ ಹೇಳಿದ್ದೀ. ಹಾಗಿರುವಾಗ ದಿನಕ್ಕೆ ಮೂರು-ನಾಲ್ಕು ಸಲ ಏಕೆ ಪುನಃ ಪುನಃ ಮೀಯೂದು? ಆರೋಗ್ಯಕ್ಕೆ ಹಾಳಲ್ಲವೇ?" ಅಮ್ಮ ಗದರಿಸಿದರೂ ಇವರ ಮಡಿ ಇನ್ನೂ ಗಟ್ಟಿಗೊಳ್ಳುತ್ತಿತ್ತೇ ವಿನಃ ಮಗಳು ಹೇಳುವುದರಲ್ಲಿ ತಥ್ಯವಿದೆ ಎಂದು ತಿಳಕೊಳ್ಳಲು ಅಥವಾ ಸುಧಾರಣೆಗೊಳ್ಳಲು ಇವರು ತಯಾರಿರಲಿಲ್ಲ.

ಹಾಗೆಂದು ನಮ್ಮ ಅಜ್ಜಿಯವರಷ್ಟು ಒಳ್ಳೆಯ ಹೃದಯವಂತರು ಹುಡುಕಿದರೂ ಸಿಗಲಿಕ್ಕಿಲ್ಲ. ನಾಲ್ಕು ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ, ಇನ್ನೊಬ್ಬರ ದುಃಖವನ್ನು ತಾನು ವಹಿಸಿಕೊಂಡು ಅವರಿಗೆ ಸಾಧ್ಯವಾದಷ್ಟು ಸಹಾಯ, ಸಾಂತ್ವನ ನೀಡು ವಂತದ್ದು ಎಲ್ಲವನ್ನು ಮಾಡುವ ಭವಾನಿಮಾಯಿ ಮಡಿಯ ವಿಚಾರದಲ್ಲಿ ಮಾತ್ರ ಖಡಕ್ ವ್ಯಕ್ತಿ. ಮಡಿ/ಅಸ್ಪೃಶ್ಯತೆಯ ವ್ಯಾಪ್ತಿ ಬಲು ದೊಡ್ಡದು. ಆಗಾಗ ಕೆಲವು ಪ್ರಸಂಗಗಳು ಘಟಿಸುತ್ತಿದ್ದವು....

ನಮ್ಮ ಮನೆಗೆ ಒಮ್ಮೆ ಸಂಜೆ ಸಂಘಶಾಖೆ ಮುಗಿದ ನಂತರ ಅಂದು ಬಂದ ಪ್ರಚಾರಕರು "ನಡಿ ಮಾರಾಯ, ಇವತ್ತು ನಿಮ್ಮ ಮನೆಗೆ ಹೋಗಿ ಎಲ್ಲರ ಪರಿಚಯ ಮಾಡಿಕೊಳ್ಳೋಣ." ಎಂದು ಬಂದೆವು. ನಮ್ಮ ಅಜ್ಜಿ ದಿನಗಳಲ್ಲಿ ನಮ್ಮಲ್ಲಿ ಇರುತ್ತಿದ್ದರು. ಅವರು ಒಂಚೂರು ಹಳೆಯ ಸ್ವಭಾವದವರು ಎಂದು ಅಳುಕುತ್ತಲೇ ಉಸುರಿದೆ. ಸರಿ ಎಂದರು.

ಮನೆಯ ಅಂಗಳದಲ್ಲಿ ಕೂತು ಪಟ್ಟಾಂಗ ನಡೆಯುತ್ತಿತ್ತು. "ಯಾರು ಬಂದದ್ದೂ?" ವಿಚಾರಣೆ ಆಯಿತು.

"ನಾನಮ್ಮ, ಉಡುಪಿಯಿಂದ ಬಂದಿದ್ದೇನೆ. ಸಂಘದಲ್ಲಿ ನನಗೆ ಸಣ್ಣದೊಂದು ಜವಾಬ್ದಾರಿ ಇದೆ. ಆಶೀರ್ವಾದ ಮಾಡಿ." ಇವರು ಅಜ್ಜಿಯೆದುರು ಸಾಷ್ಟಾಂಗ ನಮಸ್ಕಾರ ಮಾಡಿದರು.

"ದೇವರು ಒಳ್ಳೇದು ಮಾಡಲಿ. ಏಳಿ ಏಳಿ." ಮನೆಗೆ ಬಂದ ಅಪರಿಚಿತ ಯುವಕ ತನಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದು ನೋಡಿ ಅಜ್ಜಿ ಬಹಳವೇ ಪ್ರಭಾವಿತರಾದರು. ಇದುವರೆಗೆ ರೀತಿಯ ಅನುಭವ ಅವರಿಗಾಗಿರಲಿಲ್ಲ.

"ಏನು ಹೆಸರೋ, ಯಾವ ಊರೋ?"

"ನನ್ನ ಹೆಸರು ಸುದರ್ಶನ ಅಂತ. ನಾನು ಸಂಘದಲ್ಲಿ ಪ್ರಚಾರಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ."

"ಅದೇ ನಮ್ಮ ಬಾಬು ಮಾಡುತ್ತ ಇದ್ದಾನೆ. ಅದೇ ಕೆಲಸವೋ?"

"ಹೌದಮ್ಮ." ನಂತರ ಪ್ರಚಾರಕರು ಅದು ಇದು ಮಾತನಾಡಿ ನಮ್ಮೊಟ್ಟಿಗೆ ಸಂಪರ್ಕವೆಂದು ಪೇಟೆಗೆ ಹೊರಟರು. ಬೀಳ್ಕೊಡು ವಾಗಲೂ ತಲೆಬಾಗಿಸಿ ನಮಸ್ಕಾರ ಮಾಡಿದರು.

 "ಏನು ವಿನಯ! ಏನು ಬುದ್ಧಿ! ಎಷ್ಟು ಒಳ್ಳೆಯ ಹುಡುಗ! ಹೆಸರು ಸಹ ಸುದರ್ಶನ. ಸುದರ್ಶನ ಅಂದರೆ ವಿಷ್ಣುವಿನ ಹೆಸರು. ಇದ್ದರೆ ಇವರ ಹಾಗೆ ಇರಬೇಕು. ಹಿರಿಯರೆಂದರೆ ಎಷ್ಟು ಮರ್ಯಾದೆ, ಭಕ್ತಿ! ಬಂದವರೇ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದರು. ಎಷ್ಟು ಚಂದ ಇದ್ದಾರೆ! ಖಂಡಿತ ಒಳ್ಳೇ ಬ್ರಾಹ್ಮಣ ವಂಶದವರಿರಬೇಕು...... ಅಜ್ಜಿಯ ಗುಣಗಾನ ನಡೆದೇ ಇತ್ತು. ನಾವೂ ಹೆಚ್ಚಿಗೆ ಏನೂ ಮಾತಾಡಲಿಲ್ಲ.

ನಾಲ್ಕೈದು ದಿನಗಳು ಕಳೆದವು. "ಅಮ್ಮ, ದಿವಸ ಬಂದಿದ್ರಲ್ಲ, ಸಂಘದ ಜನ, ಅವರು ಯಾರು ಅಂತ ನಿನಗೆ ಗೊತ್ತೋ?" ನರಸಿಂಹ ಮಾಮ ಕೇಳಿದರು.

"ಹೌದು, ಸುದರ್ಶನ ಅಂತ, ನನಗೆ ಇನ್ನೂ ನೆನಪುಂಟು. ಎಷ್ಟು ಒಳ್ಳೆಯ ಹುಡುಗ! ಏನು ವಿನಯ! ಏನು ಘನಸ್ಥಿಕೆ! ಮಾತಾಡು ವಾಗಲೂ ಎಷ್ಟು ಚಂದ!...." ಪುನಃ ಅವರ ಗುಣಗಾನ ಸುರುವಿಟ್ಟರು.

"ಅದೆಲ್ಲ ಬಿಡು ಮಾರಾಯ್ತೀ, ಆದರೆ ಜನ ಯಾರು ಅಂತ ನೀನು ಪೂರ್ತಿ ವಿಚಾರಣೆ ಮಾಡಿದ್ದೀಯ? ಬಂದು ಬಂದು ಕಾಲಿಗೆ ಉದ್ದಕ್ಕೆ ಬಿದ್ದರು ಅಂದ ಕೂಡಲೇ ಅವನ ಮುಖ ಎತ್ತಿ ಹಿಡಿದು ಸರಿಯಾಗಿ ನೋಡುವ ಮಾರಾಯರೇ ಅಂತ ನಾಟಕ ಮಾಡಿದಿ ಯಲ್ಲ, ಅವರ ಹೆಸರು ಕೇಳಿದ್ದೀಯಾ?"

"ಹೌದು ಸುದರ್ಶನ ಅಂತ, ದೇವರ ಹೆಸರು. ಅದರೆಲ್ಲೆಂತಾಯ್ತು?"

"ಸುದರ್ಶನ ಹೌದು, ಮುಂದೆ ಎಂತದು ವಿಚಾರಿಸಿದ್ದೀಯ? ಅವರ ಪೂರ್ತಿ ಹೆಸರು ಸುದರ್ಶನ ಶೆಟ್ಟಿ ಅಂತ. ಗೊತ್ತಾಯ್ತಾ? ಹೋಗೀ ಹೋಗಿ ಒಬ್ಬ ಶೆಟ್ಟರನ್ನು ಮೈ ಮುಖ ಮುಟ್ಟಿ ಮಾತಾಡ್ಸಿ ಕಳಿಸಿ ಕೊಟ್ಟಿಯಲ್ಲ! ನಂತರ ಸ್ನಾನ ಮಾಡಿದ್ದೀಯ? ಶೆಟ್ಟಿ ಯನ್ನು ಮುಟ್ಟಿ ಭಷ್ಟ ಮಾಡಿಕೊಂಡಿಯಲ್ಲಾ, ಈಗ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು." ಇವರು ಛೇಡಿಸಿದರು.

"ಹೌದನಾ ನರ್ಸಿಮ್ಮಾ, ಅವರು ಶೆಟ್ಟರಾ? ಅವರು ಅಷ್ಟು ಚಂದ ಬೆಳ್ಳಗೆ ಇದ್ರು, ಬಿಳೀ ಮುಂಡು ಶರಟು ಹಾಕಿಕೊಂಡು ಬ್ರಾಮ್ಮಣನ ಹಾಗೆ ಇದ್ದರು!? ಈಗ ಎಂತ ಮಾಡೂದು?" ಇವರಿಗೆ ಗಲಿಬಿಲಿ ಆಯಿತು.

"ಬಣ್ಣ ನೋಡಿ ಒಬ್ಬರ ಜಾತಿ ಯೋಗ್ಯತೆ ಅಳೀತಿಯಲ್ಲ, ಏನಮ್ಮ ನೀನು! ಇಷ್ಟೆಲ್ಲ ತಿಳುವಳಿಕೆ ಇದ್ದವಳು ನೀನೇ ಹೀಗೆ ಹೇಳೂದಾ? ಮನುಷ್ಯನ ಯೋಗ್ಯತೆ ಅವನ ನಡವಳಿಕೆ, ವಿನಯ, ವಿವೇಕ ಇವುಗಳಲ್ಲಿ ಇವೆಯೇ ವಿನಃ ಅವನ ಬಣ್ಣ ಜಾತಿಯಲ್ಲಿ ಇಲ್ಲ. ಶೆಟ್ಟರಾಗಲೀ, ಬಟ್ಟರಾಗಲೀ, ಪೂಜಾರಿಯಾಗಲೀ ಎಲ್ಲರಲ್ಲಿ ಒಳ್ಳೇದನ್ನು ಕಾಣಬೇಕು. ಭಟ್ಟರಾದರೆ ಶ್ರೇಷ್ಠ, ಶೆಟ್ಟರಾದರೆ ಕನಿಷ್ಠವೋ? ಹಾಗೆಲ್ಲ ಆಲೋಚನೆ ಬರಬಾರದು, ಗೊತ್ತಾಯಿತಾ?" ನರಸಿಂಹ ಮಾಮ ಸಣ್ಣದೊಂದು ಲೆಕ್ಚರ್ ಕೊಟ್ಟರು.

"ಅದಾದರೆ ಸಮ, ನೀನು ಹೇಳಿದ ಮಾತಿನಲ್ಲಿ ಅರ್ಥವುಂಟು ನೋಡು." ಅಜ್ಜಿಯೂ ಒಪ್ಪಿಕೊಂಡರು. ಆದರೂ ಶೆಟ್ಟರನ್ನು ಮುಟ್ಟಿದ್ದಕ್ಕೆ ಪ್ರಾಯಶ್ಚಿತ್ತ ಮಾಡಬೇಕೇ ಬೇಡವೇ ಎಂಬ ಜಿಜ್ಞಾಸೆ ಒಂದೆರಡು ದಿನ ಇತ್ತು. ಏನೂ ಪ್ರಾಯಶ್ಚಿತ್ತದ ಅಗತ್ಯವಿಲ್ಲ ಎಂದು ಅಮ್ಮ ಧೈರ್ಯ ಕೊಟ್ಟ ಮೇಲೆ ಸ್ವಲ್ಪ ಸಮಾಧಾನಗೊಂಡರು.

"ಒಂದಿಷ್ಟು ಪಂಚಗವ್ಯ ತೆಕೊಂಡರೆ ತೀರ್ಮಾನ ಆಗ್ತದೆ ಅಂತ ನರ್ಸಿಮ ಹೇಳ್ತಿದ್ದ." ಒಂದೆರಡು ದಿನ ಮಣಮಣಿಸುತ್ತಿದ್ದರು. ತೆಕ್ಕೊಂಡರೋ ಇಲ್ಲವೋ ನನಗೆ ಗೊತ್ತಾಗಲಿಲ್ಲ..

               

               

               

No comments:

Post a Comment