Sunday, April 9, 2023

ರಾಜಕೀಯ, ಮಂತ್ರಿಮಂಡಲ ಘಟನೆ ಹಾಗೂ ಭಾರತೀಯ ಜನತಾ ಪಕ್ಷ.

 ನಾವೆಲ್ಲ ರಾ.ಸ್ವ.ಸೇವಕ ಸಂಘದ ಸ್ವಯಂಸೇವಕರು. ನಾನು ಹೈಸ್ಕೂಲು ಬಹುಷಃ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ ಮು. ಶಿಕ್ಷಕನಾಗಿದ್ದೆ. ನಮ್ಮ ತಾಯಿ ಭಾರತಿ, ನಾವೆಲ್ಲ ಒಂದು, ನಾವೆಲ್ಲ ಹಿಂದು ಇತ್ಯಾದಿ ಇತ್ಯಾದಿ ಅರೆದೂ ಅರೆದೂ ಹೇಳಿ ಹೇಳಿ ಅವನ್ನೆಲ್ಲ ಕೇಳಿ ಬೆಳೆದವರು ನಾವು. ಒಂದು ಕತೆ ಹೇಳುತ್ತಿದ್ದರು: ಒಮ್ಮೆ ಗಾಂಧಿಯವರು ಸಂಘದ ಶಿಕ್ಷಾವರ್ಗಕ್ಕೆ ಅತಿಥಿಯಾಗಿ ಹೋಗಿದ್ದರು. ತನಗೆ ಸ್ವಯಂಸೇವಕರೊಡನೆ ವೈಯಕ್ತಿಕವಾಗಿ ಮಾತನಾಡಲಿದೆ ಎಂದು ಒಬ್ಬನ ಬಳಿ ಕೇಳಿದರಂತೆ 'ಏನಪ್ಪಾ ನಿನ್ನ ಜಾತಿ ಯಾವುದು?'

'ತಾನು ಹಿಂದು' ಎಂದನಾತ. 
 
'ಅದು ಸರಿ, ನಾನೂ ಹಿಂದೂನೇ, ಹಿಂದುಗಳಲ್ಲಿ ಯಾವ ಜಾತಿಯವನು?' 
 
'ತನಗೆ ಜಾತಿಯಲ್ಲಿ ವಿಶ್ವಾಸವಿಲ್ಲ, ಇಲ್ಲಿ ಸೇರಿರುವ ಎಲ್ಲರೂ ಬಂಧುಗಳು, ಎಲ್ಲರೂ ಹಿಂದೂಗಳು' ಎಂದನಾತ ವಿನಯದಿಂದ. 
 
ಗಾಂಧಿಯವರಿಗೆ ಅಲ್ಲಿ ಸೇರಿದ ನೂರಾರು ಶಿಬಿರಾರ್ಥಿಗಳಲ್ಲಿ ಬ್ರಾಹ್ಮಣ, ಬನಿಯಾ, ಪ.ಜಾತಿ ಅಥವಾ ಪ. ಜನಜಾತಿಗೆ ಸೇರಿದ ಯುವಕರು ಎಷ್ಟೆಷ್ಟು ಬಂದಿದ್ದಾರೆ ಎಂಬುದು ತಿಳಿಯದೆ ಗೊಂದಲವಾಯಿತು...
ಈ ಕಥೆಯನ್ನು ನಾನು ಸುಮಾರು 55 ವರ್ಷಗಳಿಂದ ಕೇಳಿ ಪುಳಕಿತನಾಗುತ್ತಿದ್ದೆ. ಇತ್ತೀಚೆಗೆ ಇದೇ ಕತೆಯು ನಮ್ಮ ಸಂವಾದ ಕಾರ್ಯಕ್ರಮವೊಂದರಲ್ಲಿ ಪುನರಾವರ್ತನೆ ಆಯಿತು! ಇಂತಹ ಸಕಾರಾತ್ಮಕ ಮನೋಭಾವ ಸಾಮಾನ್ಯ ಸ್ವಯಂಸೇವಕರದ್ದು ಎಂದು ಇಂದಿಗೂ ನನ್ನ ಖಚಿತ ಅನಿಸಿಕೆ.

ಇವತ್ತು ಮಾನ್ಯ ಬೊಮ್ಮಾಯಿಯವರ ಮಂತ್ರಿಮಂಡಲದ ವಿಸ್ತರಣೆಯಾಯಿತು. ಯಾವುದೋ ಒಂದು ಟೀವಿ ಚಾನಲ್ ನಲ್ಲಿ ಹೊಸ ಮಂತ್ರಿಗಳ ಹೆಸರು ಪರಿಚಯ ಬರುತ್ತಿತ್ತು. ಹೇಗೆ ಬರುತ್ತಿತ್ತು ಪರಿಚಯ!!? ವಿ. ಸೊಮಣ್ಣ-ಲಿಂಗಾಯತ, ಬಿ.ಸಿ.ನಾಗೇಶ-ಬ್ರಾಹ್ಮಣ, ಆರ್. ಅಶೋಕ-ಒಕ್ಕಲಿಗ, ಡಾ. ಕೆ.ಸುಧಾಕರ-ಒಕ್ಕಲಿಗ, ಭೈರತಿ ಬಸವರಾಜ-ಕುರುಬ, ಈಶ್ವರಪ್ಪ-ಒಕ್ಕಲಿಗ, ಸುನೀಲ್ ಕುಮಾರ್-ಈಡಿಗ, ಕಾರಜೋಳ-ದಲಿತ.......ಯಾರೊಬ್ಬನೂ ಹಿಂದೂ ಇಲ್ಲ, ಭಾರತೀಯ ಇಲ್ಲ....🤔🤔👿

ರಾ.ಸ್ವ.ಸಂಘದ ಉನ್ನತ ಆದರ್ಶಗಳನ್ನಿಟ್ಟು ಬೆಳೆದು ಬಂದ ಪಕ್ಷ ಭಾರತೀಯ ಜನತಾ ಪಕ್ಷ. ಇಂತಹಾ ಪಕ್ಷದವರೂ ಸಹ ಮಂತ್ರಿ ಮಂಡಲ ಘಟನೆ ಮಾಡುವಾಗ ಶಾಸಕರ ಜಾತಿ ನೋಡಿಯೇ ಆಯ್ಕೆ ಮಾಡುವ ಅನಿವಾರ್ಯತೆಗೆ ಪಕ್ಕಾಗಿದೆ ಎಂದರೆ ಬಹಳ ದುಃಖ, ಬೇಸರ ಮತ್ತು ಸಿಟ್ಟು ಬರುತ್ತದೆ. ಮಾತು ಮಾತಿಗೆ ಶಾಂತಿದೂತರು ಜಾತಿ ನೋಡೂದಿಲ್ಲ, ಒಂದೇ ಗುಂಪಾಗಿ ಓಟು ಹಾಕುತ್ತಾರೆ, ಹಿಂದೂಗಳೇ ನಮಗೆ ಇರುವುದು ಒಂದೇ ದೇಶ, ಅವರಿಗೆ ಐವತ್ತಕ್ಕೂ ಹೆಚ್ಚು ದೇಶಗಳಿವೆ, ಹಿಂದೂಗಳೇ ಒಗ್ಗಟ್ಟಿನಲ್ಲಿ ಬಲವಿದೆ, ತಪ್ಪಿದರೆ ಅಪಾಯ ತಪ್ಪಿದ್ದಲ್ಲ ಹಾಗೆ ಹೀಗೆ ಎಂದು ಸ್ಲೋಗನ್ ಮೇಲೆ ಸ್ಲೋಗನ್ ಹಾಕುತ್ತಾರೆ. ತಮ್ಮ ಬುಡಕ್ಕೇ ಬಂದಾಗ ಅವನ ಜಾತಿ ಯಾವುದು, ಇಂವ ಯಾವ ಪಂಗಡದವ ಎಂದು ಭೂತಕನ್ನಡಿ ಹಾಕಿ ಹುಡುಕುತ್ತಾರೆ. ಆಯ್ಕೆ ಮಾಡಲು ವಾರಗಟ್ಟಲೆ ತಿಣುಕಿದ್ದಾರೆ. 
 
ಅಭ್ಯರ್ಥಿಯ ಕಾರ್ಯಕ್ಷಮತೆ, ಪಕ್ಷ ಹಾಗೂ ದೇಶಕ್ಕೆ ಆತನಲ್ಲಿರುವ ಬದ್ಧತೆ, ಜನಸಾಮಾನ್ಯರ ಕುರಿತು ಇರುವ ಕಾಳಜಿ ಮುಂತಾದವುಗಳನ್ನು ತಾನೇ ಪರೀಕ್ಷಿಸಬೇಕು!! ತನ್ನ ಕ್ಷೇತ್ರ ಹಾಗೂ ರಾಜ್ಯದಲ್ಲಿ ಯಾವ ತೆರದಲ್ಲಿ ಜನಪರ ಸೇವೆ ನೀಡಿದ್ದಾರೆ ಎಂದು ಪರಿಗಣಿಸಬೇಕಲ್ಲವೇ. 
 
ಭಾ ಜ ಪ ವೂ ಇತರೇ ಪಕ್ಷಗಳಂತೆ ಎಂಬುದು ಸಾಬೀತಾಯಿತು!
 
ಅನಿಸಿಕೆ: ಅಗೋಸ್ತು ೪, ೨೦೨೧

 

No comments:

Post a Comment