ಸಂಜೆಯ ಹೊತ್ತು, ದೊಡ್ಡ ಚೀಲ ಹಿಡಕೊಂಡು ವಾಕಿಂಗು ಹೊರಟೆವು. "ನಿನಗೆ ದಿಲ್ಲಿ ತೋರಿಸುತ್ತೇನೆ ನಡಿ, ನಾಳೆ ಎಂಥದೂ ತೋರಿಸಲಿಲ್ಲ ಅಂತ ಕಂಪ್ಲೇಂಟು ಬೇಡ." ತಮಾಷೆ ಮಾಡಿದೆ.
"ಹೌದು, ಇಷ್ಟರ ವರೆಗೆ ಭಾರಿ ಕಂಪ್ಲೇಂಟು ಮಾಡಿದ್ದೇನೆ! ಹೋಗೂದು ತರಕಾರಿ ತರಲಿಕ್ಕೆ, ಅದರ ಮೇಲೆ ದಿಲ್ಲಿ ತೋರಿಸ್ತಾರಂತೆ ದಿಲ್ಲಿ! ದಿಲ್ಲಿ ತೋರಿಸುವವರ ಸುರ್ಪ ನೋಡಿ." ಟಿಟ್ ಫೊರ್ ಟ್ಯಾಟ್ ಆಯಿತು.
ಚನಾ ಮಾರ್ಕೆಟಿನ ಹಿಂದಿನ ರಸ್ತೆ ದಾಟುವಾಗ "ಭಾಯ್ ಸಾಬ್, ಭಾಯ್ ಸಾಬ್" ಎಂದು ಕರೆದ ಹಾಗಾಯ್ತು. ನೋಡುವಾಗ ಹತ್ತಿರದ ಹರ್ಯಾಣಾ ಸ್ಟೋರ್ಸಿನ ಮಾಲೀಕ ನಮ್ಮನ್ನೇ ಕರೀತಿದಾನೆ. ಅರೆ!, "ಇವನೇಕೆ ಕರಿತಿದಾನೆ? ಇವನ ಬಳಿ ಏನಾದರೂ ಬಾಕಿ ಉಳಿದಿದೆಯಾ ಮಾರಾಯಿತಿ?"
"ಇಲ್ಲಪ್ಪ, ಅವನ ಹತ್ರ ಎಂತದು ಬಾಕಿ? ಅವನ ಅಂಗಡಿಗೆ ಹೋಗುವುದು ಬಿಟ್ಟು 3 ತಿಂಗಳ ಮೇಲೆ ಆಯ್ತು."
"ಏನು ಸ್ವಾಮೀ, ನಮ್ಮ ಮೇಲೆ ಸಿಟ್ಟು ಮಾಡಿಕೊಂಡಿದ್ದೀರಾ ಹೇಗೆ? ಯಜಮಾನರು ಇತ್ತೀಚೆಗೆ ನಮ್ಮಲ್ಲಿ ಬಂದೇ ಇಲ್ಲ. ಏನಾದರೂ ಮಿಸ್ಟೇಕ್ ಆಗಿದ್ದರೆ ಹೇಳಿ ಸರ್, ಸುಧಾರಣೆ ಮಾಡಿಕೊಳ್ಳುತ್ತೇನೆ." ಅಂಗಡಿಯವನು ಅಲವತ್ತುಕೊಂಡ.
ಹಿಂದೆ ಅವನ ಅಂಗಡಿಯಿಂದ ನಮಗೆ ಬೇಕಾದ ದಿನಸಿ, ಸ್ಟೇಷನರಿ ಸಾಮಾನುಗಳನ್ನು ಒಯ್ಯುತ್ತಿದ್ದೆವು. ದಿನಸಿ ಸಾಮಾನು ತಂದಂತೆಯೂ ಆಯಿತು, ಹತ್ತಿರದಲ್ಲಿದ್ದ ಪಾರ್ಕಿನಲ್ಲಿ ಮಕ್ಕಳೊಡನೆ ಆಡಿದಂತೆಯೂ ಆಯ್ತು ಎಂದುಕೊಂಡು ಈ ವ್ಯವಸ್ಥೆ ಇತ್ತು. ಕ್ರಮೇಣ ಇದು ಕೊಂಚ ಕಷ್ಟಕ್ಕಿಟ್ಟುಕೊಂಡಿತು. ಅವನ ಅಂಗಡಿಗೂ ನಮ್ಮ ಮನೆಗೂ ಸುಮಾರು ಒಂದು ಮೈಲು ದೂರ. ಸಾಮಾನು ಹೊರಬೇಕು, ಪಾವನಾ ಚಿಕ್ಕವಳು ಅವಳನ್ನು ಎತ್ತಿಕೊಳ್ಳಬೇಕು, ಅವಳನ್ನು ಎತ್ತಿಕೊಂಡರೆ ವಿಕ್ರಮ ಕುಸುಕುಸು ಮಾಡುತ್ತಾನೆ, ಅವನನ್ನೂ ಎತ್ತಿಕೊಂಡು ಬರಬೇಕು. ತುಂಬ ರಗಳೆ ಆಗಲಾರಂಭಿಸಿತು. ಅಲ್ಲದೆ ನೂರು ಗ್ರಾಮ್ ಸಾಸಿವೆ ಬೇಕೆಂದರೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಒಬ್ಬಳೇ ಅಲ್ಲೀ ವರೆಗೆ ಹೋಗುವಂತಿಲ್ಲ, ಇಬ್ಬರಿಗೂ ಸಂಭ್ರಮ ಮಾಡಿ ಹೊರಡಿಸಿ ಹೋಗೂದೂ ಆಗುವ ಬಾಬತ್ತಲ್ಲ ಎಂದು ಇವಳು ಮನೆಯ ಹತ್ತಿರವೇ ಇದ್ದ ಅಂಗಡಿಯಿಂದ ತಂದುಕೊಳ್ಳುತ್ತಿದ್ದಳು.ಈಗ ಹಳೇ ಅಂಗಡಿಯವ ಸುಖಕಷ್ಟ ಮಾತನಾಡ ತೊಡಗಿದ...
"ಹಾಗೇನಿಲ್ಲ, ನಮಗೆ ಇಲ್ಲಿಂದ ತುಂಬ ದೂರ ಮತ್ತು ಕಷ್ಟ ಆಗ್ತದೆ. ಅಲ್ಲದೆ ಕೆಲವೊಮ್ಮೆ ನಿಮ್ಮಲ್ಲಿ ಬೇಕಾದ ಮ್ಹಾಲು ಸಿಗೂದಿಲ್ಲವಲ್ಲ.." ನನ್ನ ಉತ್ತರದಿಂದ ಅವನಿಗೆ ಸಮಾಧಾನವಾಗಲಿಲ್ಲ.
"ಈಗ ನಾನು ಅಂಗಡಿ ವಿಸ್ತಾರ ಮಾಡಿದ್ದೇನೆ ಸರ್, ಏಕದಮ್ ಫ್ರೆಶ್ ಮತ್ತು ಕ್ಲೀನ್ ಮಾಲು ಮಾತ್ರ ಇಡೋದು. ನೀವು ಪಟ್ಟಿ ಕೊಟ್ಟು ಹೋಗಿ, ಮನೆಗೆ ನಿಮ್ಮ ಹಿಂದೆಯೇ ಸಾಮಾನು ಕಳಿಸ್ತೇವೆ. ನೋ ಎಕ್ಸಟ್ರಾ ಚಾರ್ಜ್. ಪೇಮೆಂಟು ಸಹ ಮಂಥ್ಲೀ ಮಂಥ್ಲಿ ಮಾಡಬಹುದು." ಅಂಗಡಿ ಸಾಹುಕಾರ ಪುಕಳಾಯಿಸತೊಡಗಿದ.
ಸವಿ ಸವಿ ಮಾತುಗಳಿಂದ ಸೋಲಿಸಿಬಿಟ್ಟ. "ಆಯಿತು ಸಾಹುಕಾರರೇ, ತಕ್ಕೊಳ್ಳಿ ಪಟ್ಟಿ. ನಮ್ಮದು ಕ್ಯಾಷ್ ಎಂಡ್ ಕ್ಯಾರೀ ಪದ್ಧತಿ. ಒಳ್ಳೆಯ ಮ್ಹಾಲು, ಸರಿಯಾದ ರೇಟು ಹಾಕಿ ಕೊಡಿ, ಅಷ್ಟು ಸಾಕು. ನೀವು ಇಷ್ಟೆಲ್ಲಾ ಕೇಳಿಕೊಂಡ ಮೇಲೆ ನಿಮ್ಮ ದೋಸ್ತಿ ಮುಂದುವರೆಸೋಣ, ಖಂಡೆಮ್ ಮಾಲು ತುರುಕಿಸಿದರೆ ವಾಪಸು ಮಾಡುತ್ತೇವೆ." ಪಟ್ಟಿ ಮತ್ತು ಚೀಲ ತಕ್ಕೊಂಡ.
ಇತರ ದಿನಸಿಗಳೊಂದಿಗೆ ಒಂದು ಫಿನಾಯಲು ಬಾಟಲು ಇತ್ತು. ಅದನ್ನು ತಾನು ಹಿಡಕೊಂಡು ಬರ್ತೇನೆ ಎಂದು ವಿಕ್ರಮ ಹಟಮಾಡಿದ. ಅವನಿಗಾಗ ಐದು ವರ್ಷ. 'ನಿನ್ನಿಂದಾಗೂದಿಲ್ಲ, ಜಾರಿಬಿದ್ದರೆ ಬಾಟ್ಲಿ ಒಡೆದು ಹೋಗ್ತದೆ' ಅಂದರೆ ಕೇಳಲಿಲ್ಲ. ಇರಲಿ ಮಾರಾಯಿತೀ ಅಷ್ಟು ಹಟ ಮಾಡ್ತಾನಲ್ಲ, ಕೊಡು ಅಂದೆ. ಬಾಟಲಿ ಕೈಗೆ ಕೊಟ್ಟದ್ದೇ ತಡ ಇವಳು ಹೇಳಿದ ಹಾಗೇ ಮಾಡಿದ. ಠಳ್ ಎಂದು ಬಾಟಲು ಕೈಜಾರಿ ಬಿದ್ದು ಒಡೆದು ಊರು ತುಂಬಾ ಫಿನಾಯಲು ಮತ್ತು ಕುಪ್ಪಿ ಚೂರು ಆಗಿ ರಾಮಾಯಣವಾಯ್ತು. ಟಕ್ ಎಂದು ಒಂದು ಕುಟ್ಟಿ ಕೊಟ್ಟೆ.
"ಮಗುವಿಗೆ ಏಕೆ ಹೊಡೀತೀರಿ ಸರ್, ಪರಾಮೋಶಿ ಆಗಿ ಬಿತ್ತು, ಏನು ಮಾಡುವುದು?" ಅಂಗಡಿಯವರು ಸಮಾಧಾನ ಹೇಳಿದರು.
"ಪರಾಮೋಶಿ ಎಲ್ಲ ಸರಿ, ಆದ್ರೆ ಬಾಟಲು ಒಡೀತಲ್ಲ. ಹತ್ತು ರೂಪಾಯಿ ಹೋಯ್ತು ಫಿನಾಯಲೂ ಹೋಯಿತು. ಇರಲಿ, ಈಗ ಇನ್ನೊಂದು ಬಾಟಲು ಕೊಡಿ."
"ಅಚ್ಛಾ ಸರ್." ಇನ್ನೊಂದು ಬಾಟಲು ಕೊಟ್ಟರು. ಆದರೆ ಅದರ ಬೆಲೆ ತೆಗೆದುಕೊಳ್ಳಲು ಒಪ್ಪಲಿಲ್ಲ.
"ತಪ್ಪು ನಮ್ಮದು ಮಾರಾಯರೇ, ನಮ್ಮ ತಪ್ಪಿಗೆ ನೀವೇಕೆ ನಷ್ಟ ಮಾಡಿಕೊಳ್ಳಬೇಕು? ತಕೊಳ್ಳಿ ಹಣ."
"ಬೇಡ ಸರ್, ನಮಗೆ ಕಂಪನಿಯಿಂದ ರೀಇಂಬರ್ಸ್ ಮೆಂಟ್ ಬರುತ್ತದೆ. ನಮಗೇನೂ ಲಾಸ್ ಇಲ್ಲ."
ಆಗ ಇನ್ನೂ ಗ್ರಾಹಕ ಹಿತರಕ್ಷಣಾ ಕಾನೂನು ಜಾರಿಯಾಗಿರಲಿಲ್ಲ.
"ಒಂದು ಕೆಲಸ ಮಾಡಿ, ನಿಮಗೆ ಕಂಪನಿಯಿಂದ ಹಣ ಬಂದ ಕೂಡಲೇ ನಮಗೆ ಕೊಡಿ. ಈಗ ತಕ್ಕೊಳ್ಳಿ. ನಮ್ಮ ತಪ್ಪಿಗೆ ನೀವೇಕೆ ದಂಡಕೊಡಬೇಕು? ನನಗೆ ಸರಿ ಕಾಣೂದಿಲ್ಲ."
"ಠೀಕ್ ಹೈ ಸರ್, ಜೈಸೇ ಆಪ್ ಕೀ ಇಚ್ಛಾ."......
ಪ್ರತೀ ಸೋಮವಾರ ಅಜಮಲ್ ಖಾನ್ ರೋಡಲ್ಲಿ ಮಂಡೇ ಮಾರ್ಕೆಟ್ ಸಂತೆ ನಡೆಯುತ್ತದೆ. ಒಳ್ಳೇ ಚೌಕಾಷಿ ಮಾಡಿದರೆ ನಮಗೆ ಬೇಕಾದ ಬಟ್ಟೆಬರೆ, ಸ್ಟೇಷನರಿ, ಮತ್ತಿತರ ಗೃಹೋಪಯೋಗೀ ವಸ್ತುಗಳನ್ನು ಖರೀದಿಸಬಹುದು. ಹಾಗೇ ಸಂತೆ ಮುಗಿಸಿ ಅಲ್ಲಿನ ಪಂಜಾಬೀ ಡಾಬಾ-ಭಾರೀ ಫೇಮಸ್ ಹೊಟೇಲು-ದಲ್ಲಿ ಛೋಲೇ ಭಟೂರೇ ತಿಂದು ವಾಪಸು ಬರುವಾಗ ಹರ್ಯಾಣಾ ಸ್ಟೋರ್ಸ್ ಸಾಹುಕಾರ ಕೈ ಬೀಸಿ ಕರೆಯುತ್ತಿದ್ದಾನೆ!
"ಲೀಜಿಯೇ ಸಾಬ್, ದಸ್ ರುಪಯೇ."
"ಕಿಸ್ ಬಾತ್ ಕೀ?" ನನಗೆ ಅರ್ಥವಾಗಲಿಲ್ಲ.
"ಆದಿನ ನಿಮ್ಮ ಹುಡುಗನ ಕೈಯ್ಯಲ್ಲಿ ಫಿನೈಲ್ ಬಾಟಲು ಒಡೆದಿತ್ತಲ್ಲ, ಅದರ ಹಣ ಕಂಪನಿಯಿಂದ ರಿಫಂಡ್ ಬಂದಿದೆ."
"ಧನ್ಯವಾದ ಸಾಹುಕಾರರೇ, ನಮಗೆ ಮರೆತೇ ಹೋಗಿತ್ತು. ನೀವು ನೆನಪಿಟ್ಟುಕೊಂಡಿದ್ದೀರಲ್ಲ, ಶಭಾಷ್." ಕಂಪನಿಯಿಂದ ರೀ ಇಂಬರ್ಸ್ ಮೆಂಟ್ ಬಂದಿತ್ತೋ ಇವನೇ ಕೈಯಿಂದ ಹಾಕಿದ್ದನೋ ಗೊತ್ತಾಗಲಿಲ್ಲ.
ವ್ಯಾಪಾರ ಮಾತ್ರ ಅವನ ಅಂಗಡಿಯಲ್ಲಿ ಮುಂದುವರೆಯಿತು. ವ್ಯಾಪಾರಿಗಳು ಲಾಭಬಡುಕರು, ಕಣ್ಣಲ್ಲಿ ರಕ್ತ ಇಲ್ಲದವರು, ಬಡವ ಬಲ್ಲಿದರೆಂಬ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಸುಲಿಯುವವರು ಎಂಬ ತುಚ್ಛ ಭಾವ ಇದ್ದ ಸಮಯದಲ್ಲಿ-ಈ ಭಾವನೆ ಈಗಲೂ ಜನರಲ್ಲಿ ಇದೆ - ದೂರದ ಊರಿನಲ್ಲಿ ಗುರುತು ಪರಿಚಯ ಇಲ್ಲದ ಒಬ್ಬ ಕಿರಾಣಿ ದುಕಾನುದಾರ ತೋರಿದ ಸಹೃದಯ ಭಾವ, ಪ್ರೀತಿ ಮರೆಯಲುಂಟೇ..!!!
ooo0ooo
"ನಮಸ್ಕಾರ ಸಾಹುಕಾರರೇ, ನಾವು ಇಲ್ಲೇ ಹಿಂದಿನ ಮನೆಗೆ ಬಾಡಿಗೆಗೆ ಬಂದಿದ್ದೇವೆ. ನಿಮ್ಮ ಪರಿಚಯ ಮಾಡಿಕೊಳ್ಳೋಣ ಅಂತ ಬಂದೆ,"
"ಬನ್ನಿ ಬನ್ನಿ, ಶೆಣೈಯವರು ಹೇಳಿದ್ದಾರೆ. ನಿಮ್ಮದು ಸಿಂಡಿಕೇಟಲ್ಲವಾ? ನಿಮಗೆ ಯಾವ ಐಟಮ್ ಬೇಕಾದರೂ ನಮ್ಮಲ್ಲಿ ಸಿಗುತ್ತದೆ. ಇಲ್ಲದಿದ್ದರೆ ತರಿಸಿಕೊಡುತ್ತೇವೆ." ಅಂಗಡಿಯವರು-ಹೆಸರು ಬೇಡ- ದೋಸ್ತಿಯಾದರು.
"ಅದು ಸರಿ ಮಾರಾಯರೇ, ನಮಗೆ ನೋಡಿ ಮ್ಹಾಲು ಏಕದಮ್ ಫ್ರೆಶ್ ಮತ್ತು ಕ್ಲೀನ್ ಬೇಕು. ಕಳಪೆ ಅಥವಾ ಓಲ್ಡು ಐಟಮ್ಮು ಬಂದರೆ ವಾಪಸು ಮಾಡ್ತೇನೆ."
"ನಿಮಗೆ ಅದರ ಚಿಂತೆಯೇ ಬೇಡ. ನಾವು ಜಕ್ರಿ ಮಾಲು ಇಡೂದೇ ಇಲ್ಲ........"
ಬೆಳಗ್ಗಿನ ಚಹಾ ಸಮಯ. "ಇವತ್ತು ನಮ್ಮ 'ನಾಯಕ್ ರೆಸ್ಟೋರೆಂಟ್' ನಲ್ಲಿ ಸ್ಪೆಷಲ್ ಮಸಾಲೆ ದೋಸೆ, ಲಿಮಿಟೆಡ್ ಸ್ಟಾಕ್. ಬೇಗ ಬಂದರೆ ಬಿಸಿಬಿಸಿ ಸಿಗುತ್ತದೆ." ಶ್ರೀಮತಿಯವರ ಎಡ್ವರ್ಟೈಸ್ ಮೆಂಟ್ ಆಯಿತು.
"ಬರಲಿ ಒಂದರ ಹಿಂದೆ ಒಂದು, ಫಸ್ಟ್ ಕ್ಲಾಸಾಗಿದ್ದರೆ ಗಿರಾಕಿ ಉಂಟು, ಇಲ್ಲದಿದ್ದರೆ ಪೇಮೆಂಟು ಇಲ್ಲ." ಒಂದಾದ ಮೇಲೊಂದು ದೋಸೆ ಏರಿಸುತ್ತ ಕೂತೆ.
"ಒಂದು ಕೇಟೀ ಬರಲಿ." ಆರ್ಡರು ಹೋಯಿತು. ಹಬೆಯಾಡುವ ಚಹ ಬಂತು. ಒಂದು ಸಿಪ್ ಮಾಡಿದೆ. ಮಣ್ಣು ತಿಂದ ಹಾಗಾಯ್ತು. 'ಇದೆಂತ ಮಾರಾಯ್ತಿ? ಚಾಕ್ಕೆ ಏನು ಹಾಕಿದ್ದೀ? ಬರೀ ಬೂಸು, ಇಷ್ಟು ಒಳ್ಳೇ ದೋಸೆ ತಿಂದು ಈ ಕೊಳಕು ಚಾ ಕೊಟ್ಟು ಎಲ್ಲ ಮಜ ಹಾಳು ಮಾಡಿದಿಯಲ್ಲ?'
"ಈಗ ಅಂಗಡಿಯಿಂದ ತಂದ ಚಾಪುಡಿ ಹಾಕಿಯೇ ಮಾಡಿದ್ದು."
ಬೆಳಗ್ಗೆ ಹುಡುಗನ ಬಳಿ ತರಿಸಿದ ಚಾ ಪೆಕೇಟ್ ನೋಡಿದೆ. ಬ್ರೂಕ್ ಬಾಂಡ್ ಚಾ. ಈ ಯುಗದ್ದಂತೂ ಅಲ್ಲ, ದ್ವಾಪರದ್ದೋ ಅದರ ಹಿಂದಿದ್ದೋ ಇರಬೇಕು. ಒಂದು ಪರಿಮಳವಾಗಲೀ ರುಚಿಯಾಗಲೀ ಏನೂ ಇಲ್ಲ. ರಸಾಯನಶಾಸ್ತ್ರ ಪಾಠದಲ್ಲಿ ವಸ್ತುವಿನ ಗುಣವಿಶೇಷಗಳನ್ನು ವಿವರಿಸುತ್ತಾರಲ್ಲ -ಇದಕ್ಕೆ ಬಣ್ಣವಿಲ್ಲ, ರುಚಿ ಇಲ್ಲ, ಆಕಾರವಿಲ್ಲ, ಗಾತ್ರವಿಲ್ಲ- ಅದೇ ರೀತಿ ಒಂದು ತರದ ಬೂದುಬಣ್ಣ ಬಿಟ್ಟರೆ ಆ ಹುಡಿಗೆ ಬೇರೇನೂ ಇರಲಿಲ್ಲ!
ಸಿಡಿಮಿಡಿಯಿಂದಲೇ ಸೀದಾ ಅಂಗಡಿಗೆ ಹೋದೆ. "ಸಾಹುಕಾರರೇ ಇದೆಂತದು ಕಳಿಸಿದ್ದೀರಿ? ನಮಗೆ ಫ್ರೆಶ್ ಮಾಲು ಕೊಡಬೇಕಲ್ವೇ, ಹುಡುಗ ಬಂದ ಅಂತ ಯಾವುದೋ ಹಳತು ಕಂಡಮ್ ಐಟಮ್ ಕಳಿಸಿಬಿಡೂದಾ!! ಇದನ್ನು ಬದಲು ಮಾಡಿಕೊಡಿ."
"ಅಲ್ಲ, ನೀವು ಪೆಕೇಟು ಒಡೆದಾಯ್ತಲ್ಲ.?"
"ಪೆಕೇಟು ಬಿಚ್ಚದೆ ಒಳಗೆ ಏನುಂಟು ಅಂತ ಹೇಗೆ ತಿಳೀತದೆ?"
"ಒಡೆದ ಪ್ಯಾಕ್ ಕಂಪನಿಯವರು ತಕ್ಕೊಳ್ಳುತ್ತಾರಾ?"
"ಫ್ರೆಶ್ ಸಾಮಾನು ಮಾರುವುದು ನಿಮ್ಮ ಧರ್ಮ. ಅದೇ ರೀತಿ ಹಳತು ಐಟಮ್ಮು ಏನಾದರೂ ಉಳಿದಿದ್ದರೆ ಅವನ್ನು ಬದಲಾಯಿಸಿ ಕೊಡುವುದು ಕಂಪನಿಯವರ ಕರ್ತವ್ಯ. ಈಗ ನೀವು ಬೇರೆ ತಾಜಾ ಚಾಪುಡಿ ಕೊಡಿ,"
ಗೊಣಗುತ್ತಲೇ ಬೇರೆ ಹುಡಿ ಕೊಟ್ಟರು. ನನಗೂ ತುಂಬ ಬೇಸರವಾಯಿತು. ಅಂದಿನಿಂದ ಅವರಲ್ಲಿ ವ್ಯಾಪಾರ ಕಟ್ ಆಯ್ತು.
"ಇವರೊಬ್ಬರು ದೊಡ್ಡ ಜನ! ಭಾರೀ ಲಕ್ಷಗಟ್ಟಳೆ ವ್ಯಾಪಾರ ಮಾಡುವವರ ಹಾಗೆ ಮಾತಾಡ್ತಾರೆ. ಬೇಂಕಿನಲ್ಲಿ ಆಫೀಸರ್ ಆದರೆ ಅವರಿಗಾಯ್ತು. ಒಬ್ಬರು ಹೋದರೆ ನೂರು ಜನ ಬೇರೆ ಸಿಗ್ತಾರೆ." ಅವರ ಕಹಿಮಾತು ಕೇಳಿ ತಿಳಿದು ಮತ್ತೂ ಬೇಸರವಾಯಿತು.
ಇಂಥದ್ದೇ ಕಹಿ ಅನುಭವ ಇನ್ನೊಂದೆಡೆ ಆಯಿತು. ಗಿರಾಕಿ ಏನಾದರೂ ಮಾಹಿತಿ ಕೇಳಿದರೆ ಧಿಮಾಕಿನ ಮಾರುತ್ತರ! 'ಸ್ವಲ್ಪ ನಿಲ್ಲಿ ಮಾರಾಯರೇ, ಏನು ಅರ್ಜೆಂಟು ಮಾಡ್ತೀರಿ? ನಿಮಗೆಂತ ಜೀವ ಎಳೀತದಾ? ಅಬಬಬಬ...!
3200 ಕಿ. ಮೀ ದೂರದ ದಿಲ್ಲಿಯ ಅಪರಿಚಿತ ಹರ್ಯಾಣಾ ಸ್ಟೋರ್ಸನ-ಅವರ ಹೆಸರು ಸಹ ಗೊತ್ತಿಲ್ಲ, ಕೇಳಿದಾಗ ನಾಮ್ ಸೇ ಕ್ಯಾ ಲೇನಾ ದೇನಾ, ಪ್ಯಾರ್ ಮೊಹಬ್ಬತ್ ದಿಲ್ ಮೇ ಹೋನಾ ಹೈ ಬಸ್ ಎಂದಿದ್ದ-ಮಾಲಿಕರು ಪಸರಿಸಿದ ಪ್ರೀತಿಯ (ಮೆಹಕ್) ಪರಿಮಳಕ್ಕೂ, ನಮ್ಮವರೆಂದು ನಾವು ಎಣಿಸಿದ ಊರ ಜನರು ಹರಡಿದ ಅಸಡ್ಡೆ - ತಿರಸ್ಕಾರಗಳ - ನಾತಕ್ಕೂ ಯಾವ ಹೋಲಿಕೆ ಕೊಡಲಿ...?
No comments:
Post a Comment