Sunday, April 23, 2023

ಮರೆಯಲಾಗದ ನೆನಪುಗಳು

ಹೆಬ್ರಿ ಎಲಿಮೆಂಟರಿ ಶಾಲೆ ಬಹಳ ಹಿಂದಿನದು. ನಮ್ಮಮ್ಮ ಸಹ ತನ್ನ ನಾಲ್ಕನೇ ಈಯತ್ತೆಯ ತನಕ ಇದೇ ಶಾಲೆಯಲ್ಲಿ ಕಲಿತಿದ್ದರು. ಕೌಟುಂಬಿಕ ಸಮಸ್ಯೆಗಳಿಂದಾಗಿ ಮುಂದೆ ಹೋಗಲಿಲ್ಲ, ವಿದ್ಯೆ ಮೊಟಕಾಯಿತು. ನನ್ನ ಅನುಮಾನದ ಮೇರೆಗೆ ಇದು ಸುಮಾರು ಸಾವಿರದಾ ಒಂಭೈನೂರಾ ಮುವತ್ತರ ದಶಕದ ಉತ್ತರಾರ್ಧವಿರಬಹುದು. ಇಷ್ಟು ಚಂದ ಕಲಿಯುತ್ತಿರುವ ಹುಡುಗಿ ಶಾಲೆಗೇಕೆ ಬರುತ್ತಿಲ್ಲ ಎಂದು ಆಕೆಯನ್ನು ಹುಡುಕಿ ಇಬ್ಬರು ಮಾಸ್ತರು ಹೆಬ್ರಿಯಿಂದ ಸುಮಾರು ನಾಲ್ಕು ಕಿಲೋ ಮೀಟರು ದೂರದ ಕಲ್ಲೀಲಿಗೆ ಬಂದರು. ಈಕೆ ತನ್ನ ಚಿಕ್ಕ ತಮ್ಮ ಬಾಬುವನ್ನು ಕಂಕುಳಲ್ಲಿ ಹೇರಿಕೊಂಡು ನದೀ ತೀರದಲ್ಲಿ ದನ ಮೇಯಿಸುತ್ತ ಇದ್ದರು. ಮಾಸ್ತರು ಬಂದುದು ಕಂಡು ಮಗುವನ್ನು ಇಳಿಸಿ ನಮಸ್ಕಾರ ಮಾಡಿದರು.

"ಏಕಮ್ಮ, ನೀನು ಶಾಲೆಗೆ ಬರುತ್ತ ಇಲ್ಲ, ಏನು ಸಮಸ್ಯೆ?" ಹುಡುಗಿ ಮಾತಾಡಲಿಲ್ಲ, ಎಲ್ಲರೂ ಮನೆಗೆ -ಗುಡಿಸಲಿಗೆ- ಬಂದರು. ಆಗ ಬಹು ಕಷ್ಟದ ಕಾಲ.

"ನಮಗೆ ಕಾಲದಲ್ಲಿ ತುಂಬ ಕಷ್ಟವುಂಟು, ಸ್ಲೇಟು ಪುಸ್ತಕ ಕೊಳ್ಳಲು ದುಡ್ಡಿಲ್ಲ ಅದೂ ಅಲ್ಲದೆ ಮಗು ಸಣ್ಣದು. ಹಾಗಾಗಿ ಶಾಲೆ ಕಳಿಸಲಿಲ್ಲ ನಮ್ಮಅಜ್ಜಿ ಭವಾನಮ್ಮ ಅರಿಕೆ ಮಾಡಿಕೊಂಡರು.

"ಸ್ಲೇಟು ಪುಸ್ತಕ ತೆಕೊಳ್ಳಲು ಹಣ ಇಲ್ಲ ಎಂದು ಮಗುವಿನ ಶಾಲೆ ಬಂದ್ ಮಾಡಿಸುವುದೇನಮ್ಮ! ಎಷ್ಟು ಬುದ್ಧಿವಂತ ಹುಡುಗಿ! ಅವಳ ಸ್ಲೇಟು ಪುಸ್ತಕಗಳ ವ್ಯವಸ್ಥೆ ನಾವು ನೋಡಿಕೊಳ್ತೇವೆ. ದಯವಿಟ್ಟು ಅವಳ ಶಿಕ್ಷಣ ನಿಲ್ಲಿಸಬೇಡಿ." ಪರಿಪರಿಯಾಗಿ ಬಂದವರು ಪುಸಲಾಯಿಸಿದರು. ಆದರೆ ಏನೂ ಫಲಕಾರಿಯಾಗಲಿಲ್ಲ. ಅಮ್ಮನ ವಿದ್ಯೆ ನಾಕನೇ ತರಗತಿಗೆ ಮೊಟಕಾಯಿತು.

ತನ್ನನ್ನು ಹುಡುಕಿಕೊಂಡು ಬಂದು ಕಲಿಕೆ ಮುಂದುವರೆಸಬೇಕೆಂದು ಒತ್ತಾಯಿಸಿದ ಸೋನ್ಸ್ ಮಾಸ್ತರನ್ನು ತನ್ನ ಇಳೀ ವಯಸ್ಸಿನಲ್ಲೂ ಆಗಾಗ ನೆನೆಸಿ ಭಾವುಕರಾಗುತ್ತಿದ್ದರು ನಮ್ಮಮ್ಮ.

ಸೋನ್ಸ್ ಮಾಸ್ತರರಂತೆ ಕಾಳಜಿ ಇಟ್ಟುಕೊಂಡು ಕಲಿಯಲು ಬರುವ ಎಲ್ಲಾ ಮಕ್ಕಳು ತಮ್ಮ ಸ್ವಂತ ಮಕ್ಕಳಂತೇ ಎಂಬ ಭಾವ ಇಟ್ಟುಕೊಂಡು ನಿಷ್ಠೆಯಿಂದ ಪಾಠ ಹೇಳುವ ಅಧ್ಯಾಪಕರು ಹಿಂದಿನಿಂದಲೂ - ನಮ್ಮ ಚಿಕ್ಕಂದಿನಿಂದಲೂ - ಇದ್ದರು, ಈಗಲೂ ಇದ್ದಾರೆ. ವಿದ್ಯಾದಾನ ಮಾಡುವಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸರಕಾರೀ ಶಾಲೆಗಳು ರಾಜ್ಯದಲ್ಲಿ ಇತರೇ ಪ್ರದೇಶಗಳ ಶಾಲೆಗಳಿಗಿಂತ ಎರಡು ಮುಷ್ಟಿ ಹೆಚ್ಚೇ ಎನ್ನಬಹುದು. ಇತ್ತೀಚಿನ ಪದವಿ ಪೂರ್ವ ಪರೀಕ್ಷೆಗಳ ಫಲಿತಾಂಶವನ್ನು ಗಮನಿಸಿ - ದ.ಕ. ಮತ್ತು ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ. ಈ ಕುರಿತು ನನಗೆ ಹೆಮ್ಮೆ ಹಾಗೂ ಅಭಿಮಾನವಿದೆ. 

ಎಲಿಮೆಂಟರಿ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ಮಾಧವ ನಾಯಕರು. ನಮಗೆ ಐದನೇ ತರಗತಿಯಲ್ಲಿ ಇಂಗ್ಲಿಷ್ ಕಲಿಸುತ್ತಿದ್ದರು. ಬಹಳ ಚನ್ನಾಗಿ ಮನಮುಟ್ಟುವಂತೆ ಪಾಠ ಮಾಡುತ್ತಿದ್ದರು. ತಲೆಗೆ ಟಕ್ಕೆಂದು ಕುಟ್ಟಿ ಕೊಡುವುದು ಒಂದು ಬಿಟ್ಟರೆ ಭಾರೀ ಒಳ್ಳೆಯ ಹೆಡ್ ಮಾಸ್ಟರು. ನಮ್ಮೆಲ್ಲರ ಅಕ್ಷರಗಳು ಗುಂಡು ಗುಂಡಗೆ ನೇರವಾಗಿ ಯಾವುದೇ ತಪ್ಪಿಲ್ಲದೇ ಸ್ಫುಟವಾಗಿರಬೇಕಾದರೆ ಅದು ಹೆಡ್ ಮಾಸ್ಟರು ಮಾಧವ ನಾಯಕರ ಕೃಪೆ. ಎಡಬದಿ ಅಡ್ಡ ಮಲಗಿದ ನನ್ನ ಇಂಗ್ಲೀಷು ಕಾಪಿಯನ್ನು ಕಂಡು ಕಂಡಾಪಟ್ಟೆ ಸಿಟ್ಟು ಬಂದಿತ್ತವರಿಗೆ. "ಭಾರೀ ಬುದ್ಧಿವಂತ ನೀನು! ಕೈ ತೋರಿಸು " ಎಂದು ಫುಟ್ ರೂಲರಿಂದ ಕೊಟ್ಟ ಪೆಟ್ಟಿನ ರುಚಿ (ನೋವು) ಇಂದೂ ನೆನಪುಂಟು. ಒಂದೇ ಒಂದು ಪೆಟ್ಟು ನನ್ನ ಅಕ್ಷರ ಬುದ್ಧಿ ಎಲ್ಲವೂ ನೆಟ್ಟಗಾದವು. ಆದರೂ ಶಾಲಾ ಮಕ್ಕಳ ಮೇಲೆ ತುಂಬಾ ಮಮತೆ ಇಟ್ಟ ಗುರುಗಳು ಅವರು….

ವರ್ಷದ ಅಖೇರಿಗೆ ಪಾಸು-ಫೇಲು ಸಮಯ. ಹೆಡ್ ಮಾಸ್ಟರು ಮಾಧವ ನಾಯಕರು ನಮ್ಮ ಕ್ಲಾಸಿಗೆ ಬಂದುಮಕ್ಕಳೇ ನಿಮ್ಮ ಇಡೀ ಕ್ಲಾಸಿನವರು ಪಾಸು. ಇನ್ನು ಮುಂದೆ ನೀವೆಲ್ಲ ಹೈಸ್ಕೂಲು ವಿದ್ಯಾರ್ಥಿಗಳು. ನನಗೆ ಒಂದು ಮಾತನ್ನು ನೀವೆಲ್ಲ ಕೊಡಬೇಕು - ಹೈಸ್ಕೂಲಿನಲ್ಲಿ ಮನವಿಟ್ಟು ಚೆನ್ನಾಗಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಪಾಸಾಗಿ ಮುಂದಿನ ಕ್ಲಾಸಿಗೆ ತೇರ್ಗಡೆ ಹೊಂದಬೇಕು. ಎಲ್ಲಾದರೂ ಮೈಮರೆತು ಗಮನವಿಟ್ಟು ಓದದೇ ಅಸಡ್ಡೆ ಮಾಡಿ ಫೈಲಾದರೆ ಹೈಸ್ಕೂಲಿಂದ ವಾಪಾಸು ಇದೇ ಎಲಿಮೆಂಟರಿ ಶಾಲೆಗೆ ನೂಕಿ ಬಿಡುತ್ತಾರೆ. ಅದು ತುಂಬ ಅವಮಾನಕರ ಅಂದರೆ ನಾಚಿಕೆ ವಿಚಾರ. ಆದ್ದರಿಂದ ನನ್ನ ಮಾತು ನೆನಪಿಟ್ಟುಕೊಳ್ಳಿ, ನಿಮಗೆಲ್ಲ ಒಳ್ಳೆಯದಾಗಲಿ’ ಎಂದು ಹರಸಿ ಎಲ್ಲರನ್ನು ಉತ್ತೀರ್ಣಗೊಳಿಸಿ ಕಳಿಸಿಕೊಟ್ಟರು.

ಹಿಂದೆ ನಮ್ಮ .. ಜಿಲ್ಲೆಯ ಶಿಕ್ಷಣ ಇಲಾಖೆಯು ಮದ್ರಾಸು ಯುನಿವರ್ಸಿಟಿಯ ಅಧೀನದಲ್ಲಿತ್ತು. ನಾವು ಐದನೇ ಪಾಸಾಗುವಾಗ ಕರ್ನಾಟಕ ಶಿಕ್ಷಣ ಇಲಾಖೆಯ ಅಧೀನ ಬಂತು. ಹೊಸ ಪದ್ಧತಿಯಂತೆ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೆಯ ತರಗತಿಯ ವರೆಗೆ ಸೇರ್ಪಡೆಯಾಯಿತು. ವಿಲೀನ ಕಾರ್ಯಕ್ರಮ ಹಂತ ಹಂತವಾಗಿ ಕಾರ್ಯಗತವಾಯಿತು. ಹೈಸ್ಕೂಲಿನಲ್ಲಿ  I  ಫಾರ್ಮು II  ಫಾರ್ಮು..... ಹೀಗೆ ಸಿಕ್ಸ್ತ್ ಫಾರ್ಮು ವರೆಗೆ ತರಗತಿಗಳು. ನಾವು ಐದನೇ ಪಾಸಾಗಿ ಫಸ್ಟ್ ಫಾರ್ಮಿಗೆಂದು ಹೈಸ್ಕೂಲಿನಲ್ಲಿ ಭರ್ತಿಯಾದೆವು. ಹೈಸ್ಕೂಲಲ್ಲಿ ಮಾಧವ ಮಾಸ್ಟರು ಹೇಳಿದಂತೆ ವರ್ಷಾಂತ್ಯದ ಪಾಸು-ಫೇಲು ರಿಸಲ್ಟಿನಲ್ಲಿ ನಮ್ಮ ಫಸ್ಟ್ ಫಾರ್ಮಿನ ಒಂದಿಬ್ಬ ನತದೃಷ್ಟ ಫೇಲಾದ ಹುಡುಗರು ವಾಪಸು ಎಲಿಮೆಂಟರಿಯಲ್ಲಿ  ಹೊಸದಾಗಿ ಪ್ರಾರಂಭವಾದ ಆರನೇ ತರಗತಿಯಲ್ಲಿ ಅಲ್ಲಿ ಐದು ಪಾಸಾಗಿ ಬಂದ ಹುಡುಗರೊಡನೆ ಕೂಡಬೇಕಾಯಿತು. ಮದರಾಸು ಶಿಕ್ಷಣ ಪದ್ಧತಿಯ ಫಸ್ಟ್ ಫಾರ್ಮು ಕ್ಯಾನ್ಸಲಾಯಿತು. ಮರುವರ್ಷ ಸೆಕೆಂಡ್ ಫಾರ್ಮಿನಿಂದ ಪಾಸಾಗಿ ನಾವು ಥರ್ಡ್ ಫಾರ್ಮಿಗೆ ಹೋದರೆ ಫೇಲಾದವರು ಎಲಿಮೆಂಟರಿಯ ಏಳನೇ ಕ್ಲಾಸಲ್ಲಿ ಕೂತರು. ಮುಂದಿನ ವರ್ಷ ನಾವು ಥರ್ಡ್ ಫಾರ್ಮಿಂದ ಪಾಸಾದ ವಿದ್ಯಾರ್ಥಿಗಳು ಹೊಸದಾಗಿ ಸುರುವಾದ ಎಂಟನೆಯ ತರಗತಿಗೆ ಸೇರಬೇಕಾಯಿತು. ಏಕೆಂದರೆ ಮೂರು ವರ್ಷಗಳಲ್ಲಿ ಆರನೇ, ಐದನೇ ಹಾಗೂ ನಾಲ್ಕನೇ ಫಾರ್ಮುಗಳನ್ನು ಖತಮ್ ಮಾಡಲಾಗಿತ್ತು. ನಮ್ಮ ಹೊಸ ಎಂಟನೇ ತರಗತಿಗೆ ನಮಗಿಂತ ಒಂದು ವರ್ಷ ಕಿರಿಯರಾದ ಏಳನೇ ಪಾಸಾದ ಎಲಿಮೆಂಟರಿ ಹುಡುಗರು ಬಂದು ಸೇರಿದರು. ನಮ್ಮ ಮುಕುಂದ, ರಾಮದಾಸ, ದಿನ್ನ ಭಟ್ಟ, ಗುಂಡು, ರಾಮಕೃಷ್ಣ ಇನ್ನಿತರರು ಲಾಂಗ್ ಜಂಪ್ ಹಾಕಿ ನಮ್ಮನ್ನು ಸೇರಿಕೊಂಡರು….

ತರಗತಿಯಲ್ಲಿ ಗೋಡೆಯಲ್ಲಿ ಕರಿಹಲಗೆಯ ವ್ಯವಸ್ಥೆ, ನಂತರ ಅಧ್ಯಾಪಕರ ಖುರ್ಚಿ ಮೇಜು, ತದನಂತರ ವಿದ್ಯಾರ್ಥಿಗಳ ಡೆಸ್ಕು ಬೆಂಚುಗಳು. ಎಡ ಬದಿಯಲ್ಲಿ ಹುಡುಗಿಯರಿಗೆಂದು ಟೂ ಸೀಟರುಡೆಸ್ಕು-ಬೆಂಚು, ನಡುವೆ ಐದು ಹುಡುಗರಿಗೆ ಕೂಡುವ ದೊಡ್ಡ ಡೆಸ್ಕು-ಬೆಂಚು ಮತ್ತು ಬಲಬದಿ ಕೊನೆಯಲ್ಲಿ ಪುನಃ ಟೂಸೀಟರುಡೆಸ್ಕು-ಬೆಂಚು. ನನಗೆ ನೆನಪಿರುವಂತೆ ಒಂಭತ್ತನೇ ತರಗತಿಯಿರಬೇಕು.. ಎದೂರಿನ ಲೈನಲ್ಲಿ ಟೂ ಸೀಟರಿನಲ್ಲಿ ಜಾನ್ ಕ್ಲೈವ, ದಿನ್ನ ಭಟ್ಟ ಮತ್ತೆ ದೊಡ್ಡ ಡೆಸ್ಕಿನಲ್ಲಿ ರಾಮದಾಸ, ಸುಂದರ, ರಾಮಕೃಷ್ಣ, ಸುರೇಂದ್ರ ಮತ್ತು ಗುಂಡು ಕೊನೆಯಲ್ಲಿ ಹುಡುಗಿಯರ ಡೆಸ್ಕು. ಎದೂರಿನ ಡೆಸ್ಕಲ್ಲಿ ಕೂತ ಹುಡುಗರು ಮಹಾ ಕಿಲಾಡಿಗಳು. ಪಂಚಭೂತಗಳು ಎಂದು ರಝಾಕು ಮಾಸ್ಟ್ರು ನಾಮಕರಣ ಮಾಡಿದ್ದರು. ಮಕ್ಕಳೊಡನೆ ಸಲಿಗೆಯಿಂದಿರುವ ಮಾಸ್ಟ್ರ ಬಳಿ ಇವರದ್ದು ಪೂರಾ ಕೀಟಲೆ.!  

ಕನ್ನಡಕ್ಕೆ ಜಿನರಾಜ ಪಂಡಿತರು, ತುಂಬಾ ವಿದ್ವಾನರು ಹಾಗೂ ಮನಸ್ಸಿಟ್ಟು ಪಾಠ ಹೇಳುತ್ತಿದ್ದರು. ಕೊಂಚ ಸೀರಿಯಸ್ ನೇಚರ್ ಅವರದು. ಅವರೆಂದರೆ ನಮಗೆಲ್ಲ ಭಯಭಕ್ತಿ. ಅವರ ಪಾಠದ ಸಮಯದಲ್ಲಿ ಇಡೀ ಕ್ಲಾಸು ತದೇಕಚಿತ್ತದಿಂದ ಆಲಿಸುತ್ತಿತ್ತು. ಗೊರೂರು ರಾಮಸ್ವಾಮಿ ಅಯ್ಯಂಗಾರರಮರೆಯಲಾಗದ ನೆನಪುಗಳುಎಂಬ ಲಲಿತಪ್ರಬಂಧವೊಂದು ಕನ್ನಡ ಪಾಠವಾಗಿತ್ತು. ಗೊರೂರು ಅವರದು ನವಿರಾದ ತಿಳೀ ಹಾಸ್ಯವಿರುವ ಕತೆ ಹಾಗೂ ಲೇಖನಗಳು. ಇಂದಿಗೂ-ಸುಮಾರು ಅರುವತ್ತು ವರ್ಷಗಳ ಬಳಿಕವೂ-ಓದಿ ಆನಂದಿಸುತ್ತೇನೆ. ಇರಲಿ, ಪಾಠದ ವಿವರಗಳಿಲ್ಲಿ ಮುಖ್ಯವಲ್ಲ. ತಿಳಿಹಾಸ್ಯದ ಪಾಠವಾಗಿದ್ದುದರಿಂದ ಹೆಚ್ಚಿನ ಹುಡುಗರು ಅದನ್ನು ಓದಿದ್ದರೂ ಪಂಡಿತರ ಶೈಲಿಗೆ ಮೆಚ್ಚಿ ಇಡೀ ಕ್ಲಾಸು ಆಸಕ್ತಿಯಿಂದ ಕೇಳುತ್ತಿತ್ತು. ಪಿನ್ ಡ್ರಾಪ್ ಸೈಲೆನ್ಸು...

ಜಾನ್ ಕ್ಲೈವನಿಗೆ ಏನು ಮಿಸ್ಟೀಕು ಆಯಿತೋ ತಿಳೀಲಿಲ್ಲ, ಕೂತಲ್ಲೇಪೀಂ ಪಿಸುಕ್ಕ್‌’ ಅಂದ. ಸೌಂಡು ಅಗತ್ಯಕ್ಕಿಂತ ಜಾಸ್ತಿ ಇತ್ತು. ಹತ್ತಿರದಲ್ಲಿ ಕೂತ ದಿನ್ನಭಟ್ಟಪುರ್ರ್‍’ ಎಂದು ಕಿಸಿಕಿಸಿ ನಕ್ಕ, ಕೀಟಲೆ ನೆಕ್ಸ್ಟ್ ಡೆಸ್ಕಿನ ರಾಮದಾಸ ಕಂಟಿನ್ಯೂ ಮಾಡುತ್ತಾ ಕಿಕ್ಕಿಕ್ಕೀ ಎಂದು ತುಟಿ ಮೇಲೆ ಕೈಯಿಟ್ಟುಕೊಂಡ. ಆಸಕ್ತಿಯಿಂದ ಪಾಠ ಹೇಳುತ್ತಿದ್ದ ಪಂಡಿತರಿಗೂ ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದ ನಮಗೂ ತೀವ್ರ ರಸಭಂಗವಾಯಿತು. ಒಂಥರಾ ಇರಿಟೇಷನ್. ಲಘುಹಾಸ್ಯದ ಪ್ರಬಂಧವಾದರೂ ತನ್ಮಯತೆಯಿಂದ ವಿವರಿಸುತ್ತಿದ್ದ ಪಂಡಿತರಿಗಂತೂ ಭಯಂಕರ ಸಿಟ್ಟು ಬಂದು ಕಣ್ಣು ಮುಖ ಕೆಂಪಾಗಿ ಪುಸ್ತಕವನ್ನು ಬಿಸಾಡಿದವರೇ ಕ್ಲೈವನ ಎರಡೂ ಕಿವಿಗಳನ್ನು ಹಿಂಡಿ ಎತ್ತಿ ಎಳೆದವರೇ ಬೆನ್ನಿಗೆ ರಪರಪನೆ ಬಾರಿಸುತ್ತ ಹತ್ತಿರದಲ್ಲಿ ಖಾಲಿಯಿದ್ದ ಇನ್ನೊಂದು ರೂಮಿಗೆ ದೂಡಿಬಿಟ್ಟರು. ವಾಪಸು ಬಂದವರೇ ದಿನ್ನಭಟ್ಟನನ್ನು ಎಬ್ಬಿಸಿ ಎರಡು ಬಾರಿಸುವುದರೊಳಗೆ ಆತ ಹೆದರಿ ಹೊರಗೆ ಓಡಿಬಿಟ್ಟ. ನಮ್ಮ ರಾಮದಾಸ ಅಗತ್ಯಕ್ಕಿಂತ ದಪ್ಪ, ಗುಂಡುಗುಂಡಗೆ, ಉರುಟುರುಟು ಹುಡುಗ. ದಿನ್ನಭಟ್ಟನ ನಂತರ ಇವನ ನಂಬರು. ಮಾಸ್ಟ್ರು ಬರುವುದರೊಳಗೆ ಇಂವ ಎದ್ದು ದುಡುದುಡು ಓಡುವಾಗಲೇ ಬೆನ್ನಿಗೆರಡು ಗುದ್ದುಗಳು ಧಡಮ್ ಧಡಮ್ ಬಿದ್ದವು. ಇಷ್ಟರಲ್ಲಿ ಈ ಪ್ರಹಸನದಿಂದ ಉಳಿದ ನಾವೆಲ್ಲ ದಂಗಾಗಿ ಹೆದರಿ ಉಸಿರು ಬಿಟ್ಟರೆ ನಮಗೆಲ್ಲಿ ಬೀಳುತ್ತವೋ ಎಂದು ಗಪ್ ಚಿಪ್ ಕೂತಿದ್ದೆವು. ರಾಮದಾಸನ ನಂತರ ಸುಂದರ ತದನಂತರ ರಾಮಕೃಷ್ಣನ ಸರದಿ. ಇಬ್ಬರೂ ಬುದ್ಧಿವಂತಿಕೆಯಿಂದ ದಡಬಡನೆ ಎದ್ದು ಕ್ಲಾಸಿಂದ ಹೊರಗೋಡಿ ಪೆಟ್ಟು ತಪ್ಪಿಸಿಕೊಂಡರು. ಈಗ ಸುರೇಂದ್ರನ ಪಾಳಿ. ಇವನದು ಒಂದು ಕಾಲು ಪೋಲಿಯೋಗ್ರಸ್ಥ. "ಕುಂಟ ನೀನೇನೂ ಕೀಟಲೆಯಲ್ಲಿ ಕಮ್ಮಿಯೇನಿಲ್ಲ, ನಡಿ ಹೊರಗೆ." ಆತ ಮತ್ತು ಗುಂಡುವಿಗೆ ಪೆಟ್ಟು ತಪ್ಪಿತು.

"ನನಗೆ ಪಾಠ ಹೇಳುವ ವ್ಯವಧಾನ ಸಮಾಧಾನ ಇಲ್ಲ, ಆದ್ದರಿಂದ ಬರುವ ಕ್ಲಾಸಲ್ಲಿ ಮುಂದುವರೆಸುತ್ತೇನೆ." ಎಂದವರೇ ಪುಸ್ತಕ ಎತ್ತಿಕೊಂಡು ಟೀಚರ್ಸ್ ರೂಮಿಗೆ ವಾಪಸಾದರು. ಅವರಾಚೆ ಹೋಗುವುದೇ ತಡ ಗಪ್ಪನೇ ಕುಳಿತಿದ್ದ ನಾವು ಉಸಿರು ಬಿಟ್ಟೆವು. ಹೊರ ಹಾಕಲ್ಪಟ್ಟ ಖದೀಮರು ಅಲ್ಲೂ ಕಿಸಿಕಿಸಿ ಪಿಸಿಪಿಸಿ ನಗುತ್ತಿದ್ದರೇ ವಿನಃ ಯಾವುದೇ ಮಂಡೆಬಿಸಿಯಲ್ಲಿಲ್ಲ. ಇದನ್ನು ಕಂಡ ಇಡೀ ಕ್ಲಾಸು ಹೋ ಎಂದು ನಗಲಾರಂಭಿಸಿತು. ಘರ್ಜನೆ ಟೀಚರ್ಸ್ ರೂಮಲ್ಲಿದ್ದ ಪಂಡಿತರು ಹಾಗೂ ಇತರ ಮಾಸ್ಟರುಗಳಿಗೆ ತಲಪಿತು. ಒಂದು ಉದ್ದದ ಬೆತ್ತ ಹಿಡಕೊಂಡವರೇ ಧಡಧಡನೇ "ಯಾರದು ಕೂಗಿದ್ದು?" ಮೇಜಿಗೆ ಎರಡು ಬಾರಿ ಬಾರಿಸಿದರು. ಕ್ಲಾಸು ಪುನಾ ಗಪ್ಪುಚಿಪ್ಪು! ಹೊರಗಿನ ರೂಮಲ್ಲಿ ಗಡಗಡ ನಡುಗುತ್ತ ನಿಂತಿದ್ದವರನ್ನು "ಹೋಗ್ರೋ ಕ್ಲಾಸಲ್ಲಿ ಕೂತ್ಕೊಳ್ಳಿ ಹೋಗಿ" ಎನ್ನುತ್ತ ವಾಪಸಾದರು.

ಗೊರೂರು ಅವರ ಲಲಿತ ಪ್ರಬಂಧ "ಮರೆಯಲಾಗದ ನೆನಪುಗಳು" ಯಾವ ಕಥಾ ಸಂಕಲನಗಳ ಸಂಗ್ರಹದ ಯಾವ ಸಂಚಿಕೆ ಯಲ್ಲಿದೆ ಎಂಬುದು ನನಗೆ ನೆನಪಿಲ್ಲ. ಆದಷ್ಟು ಮಟ್ಟಿಗೆ ಹುಡುಕಿದೆ, ಸಿಕ್ಕಿಲ್ಲ…. ಹಿಂದಿನ ದಿನಗಳಲ್ಲಿ ಯಕ್ಷಗಾನ ಬಯಲಾಟಗಳನ್ನು ರಾತ್ರಿಯಿಡೀ ನೋಡಿ ಮುಂದಿನ ರಜಾದಿನಗಳಲ್ಲಿ ನಾವು ಹುಡುಗರು ಮೋರೆ, ಕೈಕಾಲುಗಳಿಗೆ ಮಸಿ, ಕುಂಕುಮಗಳಿಂದ ತರ ತರಹ ಬಣ್ಣ ಬಳಿದುಕೊಂಡು ಮನೆಯ ಹಿಂದಿನ ಮಾವಿನ ಮರಗಳ ಕೆಳಗೆ ಬಾಲ್ದಿ ಡ್ರಮ್ಮು ತೆಂಗಿನೆಣ್ಣೆ ಬರುವ ಡಬ್ಬಿ ಇತ್ಯಾದಿಗಳನ್ನು ಬಾರಿಸಿ ಹಿಮ್ಮೇಳವಿಟ್ಟುಕೊಂಡು ನಮ್ಮದೇ ಯಕ್ಷಗಾನ ಆಟ ಆಡುತ್ತಿದ್ದೆವು. ಅಂತಹ ಆಟಗಳು ಪ್ರತಿಯೊಂದು ಊರು, ಹಳ್ಳಿಗಳಲ್ಲಿ ಕಾಮನ್ನು. ದಿನಗಳ ಆಟ, ಗಲಾಟೆ, ಜಗಳ, ಕೋಪ, ಮುನಿಸು ಮತ್ತು ದೋಸ್ತಿಗಳ ಆನಂದವೇ ಒಂದು ಸುಖಕರ ನೆನಪು. ಇಂತಹದೇ ನೆನಪೊಂದನ್ನು ಗೊರೂರು ತನ್ನ ಪ್ರಬಂಧದಲ್ಲಿ ಸಾಕಾರಗೊಳಿಸಿದ್ದರು. ಸುಮಾರು ಅರುವತ್ತು ವರ್ಷಗಳಾದವು. ನೆನಪು ಇಂದಿಗೂ ನಿತ್ಯನೂತನ..!