Friday, December 16, 2022

ಓದುವ ಹವ್ಯಾಸ

 

 

1993ರಲ್ಲಿ ಹುಬ್ಬಳ್ಳಿಗೆ ವರ್ಗವಾಯಿತು. ಯಥಾಪ್ರಕಾರ ಶಿಫ್ಟಿಂಗ್ ಕಾರ್ಯಕ್ರಮ. ಮನೆ ಸಾಮಾನುಗಳ ಲಿಸ್ಟಲ್ಲಿ ಪುಸ್ತಕ, ವಾರಪತ್ರಿಕೆ ಮತ್ತು ಇತರೇ ಡೈಜೆಸ್ಟುಗಳ ಒಂದು ದೋಡ್ಡ ಕಟ್ಟು ಸಹ ಇತ್ತು. ಅವುಗಳನ್ನು ಅಪ್ಯಾಯಮಾನವಾಗಿ ರೂಢಿಸಿಕೊಂಡು ಬಂದಿದ್ದೆ. ಹಿಂದೆ ಅನೇಕರು ತಮ್ಮಲ್ಲಿನ ಇಲಸ್ಟ್ರೇಟೆಡ್ ವೀಕ್ಲಿ, ರೀಡರ್ಸ್ ಡೈಜೆಸ್ಟು, ಸುಧಾ ಮುಂತಾದ ಪತ್ರಿಕೆಗಳನ್ನು ಅಂಗಡಿಗೆ ಮಾರುತ್ತಿದ್ದರು. ಇವುಗಳಲ್ಲಿ ನನಗೆ ಆಸಕ್ತಿ ಯಿದ್ದ ಪತ್ರಿಕೆಗಳನ್ನು ಎತ್ತಿಟ್ಟುಕೊಳ್ಳುತ್ತಿದ್ದೆ. ನಮ್ಮ ಸುಬ್ರಾಯಣ್ಣನವರಿಗೂ ಆಗಿನ ಕಾಲದ ವಿಶೇಷಗಳಾದ ರೀಡರ್ಸ್ ಡೈಜೆಸ್ಟ್, ಸ್ಪುಟ್ನಿಕ್ ಮುಂತಾದ ಪತ್ರಿಕೆಗಳನ್ನು ಯಾರಾದರೂ ಅಂಗಡಿಗೆ ತಂದು ಮಾರಿ ಹೋದರೆ ಭಾsಳಾ ಖುಷಿ. ಬಂದ ಎಲ್ಲಾ ಪುಸ್ತಕ ಗಳನ್ನು ಕಟ್ಟು ಕಟ್ಟಗಳನ್ನೇ ನಾವಿಬ್ಬರೂ ಗಾಯಬ್ ಮಾಡುತ್ತಿದ್ದೆವು. ಪುರುಸೊತ್ತಿನಲ್ಲಿ ಓದಲಿಕ್ಕಾಗುತ್ತದೆ ಎಂದು ನಮ್ಮ ಅಭಿಪ್ರಾಯ. ಆದರೆ ಹಿರಿಯರಿಗೆ ಅದು ಇಷ್ಟವಿರುತ್ತಿರಲಿಲ್ಲ. 

ಒಮ್ಮೆ ಒಬ್ಬ ಮಹಾಶಯರು ಇಲಸ್ಟ್ರೇಟೆಡ್ ವೀಕ್ಲಿಯ ದೊಡ್ಡದೊಂದು ಕಟ್ಟು ಅಂಗಡಿಗೆ ಮಾರಿ ಹೋಗಿದ್ದರು. ಇಡೀ ಕಟ್ಟನ್ನು ನಾನು ಅಡಗಿಸಿಟ್ಟೆ, ಬಿತ್ತು ಗಲಾಟೆ..!! ಬೆಳಿಗ್ಗೆ ತಾನೇ ತೆಕೊಂಡ ಪೇಪರು ಇಷ್ಟರೊಳಗೆ ಮಾಯಕ ಮಾಡಿದ್ದಾರೆ!! ಭಾರೀ ಭಾರೀ ಪೇಪರು ಓದ್ತೀರೋ?? ಭಾರೀ ಜ್ಞಾನ ಸಂಪಾದನೆ ಮಾಡಿಯಾಯಿತೋ? ಅದರಲ್ಲಿ ಎಂಥ ಖರ್ಮ ಉಂಟಂಥೇಳಿ ಮುಕುಳಿ ಮೇಲೆ ಮಾಡಿ ಓದ್ತಾರೋ ನನ್ನ ಮಂಡೆಗೆ ಹೊಕ್ಕೂದಿಲ್ಲ!! ಯಾವಾಗ ನೋಡಿದ್ರೂ ಪುಸ್ತಕ ಪೇಪರು ಓದೂದು! ಸಂಜೆ ಟೈಮಲ್ಲಿ ನಮುನೆ ಗಿರಾಕಿ ರಷ್ಷು ಉಂಟು, ಇವರಿಗೆಲ್ಲ ಕತೆ ಓದುವ ಚಟ...!! ತಂದೆಯವರ ಅಬ್ಬರ ಸ್ವಲ್ಪ ಸಮಯ ನಡೆಯಿತು, ಎಲ್ಲವನ್ನು ತಲೆತಗ್ಗಿಸಿ ಕೇಳಿಸಿಕೊಂಡೆ, ಆದರೆ ವೀಕ್ಲಿಯ ಕಟ್ಟು ಎಲ್ಲಿಟ್ಟಿದ್ದೆ ಎಂದು ಗುಟ್ಟು ಬಿಡಲಿಲ್ಲ. ನಾನು ಸುಬ್ರಾಯಣ್ಣ ನಮನಮಗೆ ಇಷ್ಟವಿದ್ದ ಪತ್ರಿಕೆಗಳನ್ನು ವಿಂಗಡಿಸಿ ನಂತರವೇ ಉಳಿದವು ಗಳನ್ನು ವಾಪಸಿಟ್ಟೆವು.

ಪತ್ರಿಕೆಗಳ ಸಾಂಗತ್ಯ ನನ್ನೊಟ್ಟಿಗೆ ದಿಲ್ಲಿ ಪಯಣದಿಂದ ಸುರುವಾಗಿದ್ದು ಹುಬ್ಬಳ್ಳಿಗೆ ಬರುವಾಗ ಬರೋಬ್ಬರಿ ಒಬ್ಬ ಠೊಣಪ ಕೂಲಿಯವನೂ ಹೊರಲಾಗದಷ್ಟು, 'ಅಯ್ಯಬ್ಬ' ಅನ್ನುವಷ್ಟಾಗಿತ್ತು. ' ಕಟ್ನೊಳಗೆ ಏನದರೀ ಸರ!! ಯಮಭಾರ ಐತಿ??'  "ನಿನಗರ್ಥ ಆಗೂದಿಲ್ಲ ಬಿಡು, ಸುಮ್ಮನೇ ರೂಮಲ್ಲಿ ಮೂಲೆಯಲ್ಲಿಡು." ಎನ್ನುತ್ತಿದ್ದೆ. ಆಗಾಗ ವಿರಾಮ ಕಾಲದಲ್ಲಿ ಕಟ್ಟು ಬಿಚ್ಚಿ ನನಗೆ ಆಸಕ್ತಿಯಿದ್ದ ಪೇಪರನ್ನು ಓದಿ ಖುಷಿ ಪಡುತ್ತಿದ್ದೆ. "ಓದಿದ್ದನ್ನೇ ಓದೂದು ನಗೂದು! ಎಂಥ ಖರ್ಮವೋ!" ಮನೆಯವರ ಮಾತು ಬೇರೆ. 'ಇಷ್ಟು ಪುಸ್ತಕ ಗಳಲ್ಲಿ ಎಲ್ಲವೂ ನನಗೆ ಬೇಕಾಗಿಲ್ಲ, ಆದರೆ ಇಷ್ಟು ಕಾಲ ಜತನದಿಂದ ಕಾಪಿಟ್ಟು ಕೊಂಡು ಒಮ್ಮೆಲೇ ಗುಜರಿಗೆ ಹಾಕೂದೇ, ಛೇ!' ಎಂದುಕೊಂಡು ಸುಧಾ, ತರಂಗ, ...ಡ್ ವೀಕ್ಲಿ ಮತ್ತು ವೀಕ್ ಮುಂತಾದ ಪತ್ರಿಕೆಗಳಲ್ಲಿನ ಇಷ್ಟವಾದ ಪ್ರಬಂಧ, ಕಥೆ, ಕಾದಂಬರಿ, ಕಾರ್ಟೂನು, ಪ್ರವಾಸ ಕಥನ, ಅಡುಗೆ, ಅಪರೂಪದ ಫೋಟೋಗಳು ಮುಂತಾದವುಗಳನ್ನು ಆದಷ್ಟು ಮಟ್ಟಿಗೆ ಅವುಗಳ ದಿನಾಂಕಗಳ ಪ್ರಕಾರ ಕ್ರೋಢೀಕರಿಸಿ ವಿಂಗಡಿಸಿ ಪ್ರತಿಯೊಂದನ್ನೂ ಬುಕ್ ಬೈಂಡ್ ಮಾಡಿಸಿ ಇಟ್ಟುಕೊಂಡೆ. ಸಮಯ ಬಂದಾಗ ನನಗೆ ಗೆಳೆಯರಿಗೆ ಓದಲು ಅನುಕೂಲ ಆಗ್ತದೆ ಎಂಬ ಆಶಯ. ನನ್ನ ಅದೃಷ್ಟವೋ ಅಲ್ಲವೋ ಹೆಚ್ಚಿನ ಗೆಳೆಯರಿಗೆ ಇದರಲ್ಲಿ ಉಮೇದು ಹುಟ್ಟಲಿಲ್ಲ. 'ಕತೀ ಓದಿದ್ರೆ ಏನು ಗಂಟು ಸಿಗತೈತ್ರೀ ಸರ..!' ನನ್ನ ಗೆಳೆಯರೊಬ್ಬರಿಗೆ ಅಚ್ಚರಿ. ಮಕ್ಕಳು ಓದುವ ಕಥೆಗಳ, ಕಾರ್ಟೂನುಗಳ ಸಂಗ್ರಹವೊಂದು ಸಹ ನನ್ನ ಗಂಟಿನಲ್ಲಿತ್ತು. ಹುಬ್ಬಳ್ಳಿಯ ಮಿತ್ರ ಅಶೋಕ ಅವರೂ ಸಹ ಓದಿನ ಹುಚ್ಚ. 'ಬರ್‍ರೀ ಸರ, ಚಲೋ ಲೈಬ್ರರಿ ತೋರಸ್ತೀನಿ ಎಂದು ನಮ್ಮ ಬ್ರಾಂಚಿನ ಬಳಿಯೇ ಮೂರುಸಾವಿರ ಮಠದವರು ನಡೆಸುತ್ತಿರುವ ಒಂದು ಲೈಬ್ರರಿಗೆ ಕರಕೊಂಡು ಹೋಗಿ ಅಲ್ಲಿನ ಲೈಬ್ರೇರಿಯನರ ಪರಿಚಯ ಮಾಡಿಸಿದರು. ಪುಣ್ಯಾತ್ಮ ಓದಿನಲ್ಲಿ ನಮ್ಮಿಬ್ಬರ ಗುರು! ಸ್ವತಃ ವೊರೇಷಿಯಸ್ ರೀಡರ್!! ಬಹಳ ಚನ್ನಾದ ಗ್ರಂಥಗಳ ಸಂಗ್ರಹಣೆ ಅಲ್ಲಿತ್ತು. ಈಗಲೂ ಗ್ರಂಥಾಲಯ ಅಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬ ನಂಬಿಕೆಯಿದೆ. ಹುಬ್ಬಳ್ಳಿ ಜೀವನದ ಮಧುರ ಕ್ಷಣಗಳ, ಅನುಭವಗಳ ಮಾಲೆಯಲ್ಲಿ ಇದೊಂದು ಹೂ...

ಪುತ್ತೂರು ಬಳಿಯ ಒಂದು ಹಳ್ಳಿಯಲ್ಲಿ ಮೆನೆಜರಾಗಿದ್ದೆ. ಒಬ್ಬ ಸಹೃದಯೀ ರೈತ+ಕಾನೂನು ಕಲಿತವರು ಆಪ್ತರಾದರು. ಒಂದು ದಿನ ಸುಮಾರು ಹತ್ತು ಕಥಾಸಂಕಲನ, ಕಾದಂಬರಿ ಕೊಂಡೊಯ್ದು ಅವರಿಗೆ ಕೊಟ್ಟೆ. ಅವರಿಗೆ ಆನಂದವೋ ಆನಂದ. ಇದೆಲ್ಲ ಎಲ್ಲಿ ಒಟ್ಟು ಮಾಡಿದ್ದು ಸ್ವಾಮೀ!! ಬಹಳ ಚಂದ ಉಂಟಲ್ಲಾ, ಇಷ್ಟೆಲ್ಲ ಓದಲು ನನಗೆ ವರ್ಷವಾದರೂ ಬೇಕು....

"ಅವನ್ನೆಲ್ಲ ನೀವೇ ಇಟ್ಟುಕೊಳ್ಳಿ ಭಟ್ರೇ, ನಿಮಗೆಂದೇ ತಂದದ್ದು. ನಾನು ಅವನ್ನೆಲ್ಲ ಮಗುಚೀ ಮಗುಚೀ ಓದಿ ಮುಗಿಸಿ ಆಗಿದೆ. ನೀವು ಇಲ್ಲಿ ನಿಮ್ಮ ಆಸಕ್ತ ಪುಸ್ತಕ ಪ್ರಿಯ ಗೆಳೆಯರಿಗೆ ಬೇಕಾದರೆ ಕೊಡಬಹುದು." ಭಟ್ಟರಿಗೆ ಆನಂದವಾಯಿತು.

ನಂತರದ ದಿನಗಳಲ್ಲಿ ನನಗದೊಂದು ಹವ್ಯಾಸವೇ ಆಯಿತೆಂದು ಹೇಳಬಹುದು. ಬಹಳ ವರ್ಷಗಳ ಹಿಂದೆ ತರಂಗ ವಾರಪತ್ರಿಕೆಯಲ್ಲಿ 'ಅಂತರಂಗ-ಬಹಿರಂಗ' ಎಂದು ಸಂಪಾದಕೀಯ ಲೇಖನಗಳನ್ನು ಮಾನ್ಯ ಸಂತೋಷಕುಮಾರ ಗುಲ್ವಾಡಿಯವರು ಬರೆಯುತ್ತಿದ್ದರು. ಅರೇ! ಎಷ್ಟು ಚೆನ್ನಾಗಿ ಬರೀತಾರೆ! ಆದರೆ ಇವುಗಳೆಲ್ಲಾ ಹೀಗೆಯೇ ಉಳಿದು ಹೋಗುತ್ತವಲ್ಲ, ಏನು ಮಾಡಲೀ ಎಂದು ಯೋಚಿಸುತ್ತಿರುವಾಗಲೇ ಅವರ ಆಯ್ದ ಲೇಖನಗಳ ಸಮಗ್ರ ಪುಸ್ತಕವೇ ಪ್ರಕಟವಾಯಿತು. ಕಳೆದ ವರ್ಷ ಅದನ್ನು ಎತ್ತಿಕೊಂಡು ನಾಲ್ಕೈದು ಎಪಿಸೋಡುಗಳನ್ನು ಓದಿದೆ. ಬಹಳ ಖುಷಿಯಾಯಿತು. ಇಂದಿನ ಸಾಮಾಜಿಕ ಅಥವಾ ರಾಜಕೀಯಗಳಿಗೆ ಅಂದಿನ ಸಂಪಾದಕೀಯ, ಅಭಿಪ್ರಾಯಗಳು ಹೊಂದಾಣಿಕೆಯಾಗೂದಿಲ್ಲ. ಆದರೂ ಕೆಲವು ನಾಸ್ಟಾಲ್ಜಿಕ್ ನೆನಪುಗಳ ಮೆರವಣಿಗೆ ನಡೆಯಿತು.

ಅದೇ ರೀತಿ ಉದಯವಾಣಿ ದಿನಪತ್ರಿಕೆಯ ವಾರದ ವಿಶೇಷ ಪುರವಣಿ 'ಸಾಹಿತ್ಯ ಸಂಪದ' ಸಂಪಾದಕರ ಜೋಗಿ ಕಾಲಂ ಬರುತ್ತಿತ್ತು. ಬಹಳ ಆಕರ್ಷಕವಾಗಿ ತರ್ಕಬದ್ಧವಾಗಿ ಬರೆದು ಪ್ರಕಟಿಸಿ ಓದುಗರ ಮನವನ್ನು ಗೆದ್ದವರು ಅವರು. ಅವರ ಲೇಖನಗಳನ್ನು ಯಥಾವತ್ತಾಗಿ ನನ್ನ ಕಂಪ್ಯೂಟರಲ್ಲಿ ಟಂಕಿಸಿ ಸೇವ್ ಮಾಡಿಟ್ಟಿದ್ದೇನೆ. ನಾನು ಕೊಂಚ ಹಳಬನಾದುದರಿಂದ ತೃಪ್ತಿಯಾಗದೆ ಅನೇಕ ಪ್ರಬಂಧಗಳನ್ನು ಪೆನ್ ಡ್ರೈವಲ್ಲಿ ಕಾಪೀ ಮಾಡಿ ಕನ್ನಡ ಲಿಪಿ ಇರುವ ಸೈಬರ್ ಕೆಫೆಯೊಂದನ್ನು ಬೆಂಗಳೂರಲ್ಲಿ ಹುಡುಕಿ ಮುದ್ರಿಸಿ ತಂದು ಫೈಲು ಮಾಡಿಟ್ಟು ಕೊಂಡ ಬಳಿಕವೇ ಸಮಾಧಾನ ಹೊಂದಿದ್ದೇನೆ. ಈಗ ಪ್ರಖ್ಯಾತ ಲೇಖಕರ ಪ್ರಬಂಧಗಳ ಸಂಪಾದಿತ ಪುಸ್ತಕಗಳು ಲಭ್ಯವಿವೆ.....

ಬೆಂಗಳೂರಿನ ಕಲ್ಯಾಣನಗರದಲ್ಲೊಂದು ಸರಕಾರೀ ಲೈಬ್ರೇರಿಯಿದೆ. ಈಗ ಅದು ದೊಡ್ಡ ವಿಸ್ತಾರವಾದ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದೆ. ಒಮ್ಮೆ ಅಲ್ಲಿಗೆ ಹೋಗಿದ್ದೆ. 'ಮೆಂಬರ್ ಶಿಪ್ ಬೇಕಿದ್ದರೆ ಏನು ಮಾಡಬೇಕು?'

" ಅರ್ಜಿ ಫಾರಮ್ಮು ಭರ್ತಿ ಮಾಡಿ ಗೆಝೆಟೆಡ್ ಅಧಿಕಾರಿಯವರ ಸಹಿ ಮಾಡಿಸಿ ತನ್ನಿ" ಎಂದರು. ಗೆಝೆಟೆಡ್ ಆಫೀಸಿನವರನ್ನೆಲ್ಲಿ ಹುಡುಕಲೀ? ಕೊನೆಗೆ ಯಾವುದೇ ಕಾಲೇಜಿನ ಪ್ರಿನ್ಸಿಪಾಲರ ಸಹಿ ಸೀಲು ಸಹ ಆಗುತ್ತದೆ ಎಂದಾಗ ಅದೆ ಏರಿಯಾದಲ್ಲಿನ ಪ್ರತಿಷ್ಠಿತ ಖಾಸಗೀ ಕಾಲೇಜೊಂದರ ಪ್ರಿನ್ಸಿಪಾಲರ ಬಳಿ ಬಿನ್ನವಿಸಿಕೊಂಡೆ. ಆತ ಬಿಲ್ ಕುಲ್ ಸಹಿ ಮಾಡಲೊಪ್ಪಲಿಲ್ಲ. ಮತ್ತೇನು ಮಾಡಲೆಂದು ವಾಪಸು ಲೈಬ್ರೇರಿಗೆ ಬಂದೆ. " ಅಲ್ಲ ಮಾರಾಯ್ರೇ, ಕನ್ನಡ ಕಥೆ ಕಾದಂಬರಿಗಳನ್ನು ಓದುವವರೇ ಕಮ್ಮಿ. ಇಲ್ಲಿ ಸಹ ಕೇವಲ ನ್ಯೂಸ್ ಪೇಪರ್ ಓದಲೆಂದೇ ಬರುವವರು ಜಾಸ್ತಿ. ಹಾಗಿರುವಾಗ ನಾನೊಬ್ಬ ಸದಸ್ಯತ್ವಕ್ಕೆಂದು ಬಂದರೆ ಗಝೆಟೆಡ್ ಅಧಿಕಾರಿಗಳ ಸಹಿ ಕೇಳ್ತೀರಲ್ಲ..! ಇದೇನು ಹಣಕಾಸಿನ ವ್ಯವಹಾರವೇ ಅಥವಾ ಆಸ್ತಿ ರಿಜಿಸ್ಟ್ರೇಷನ್ನಾ? ನನಗೆ ಬೇಂಕು ಮೆನೆಜರುಗಳ ಒಂದಿಬ್ಬರ ಪರಿಚಯವಿದೆ. ನಿಮಗೆ ಬೇಕೇ ಬೇಕೆಂದರೆ ಅವರ ಸಹಿ ಹಾಕಿಸಿ ತರುತ್ತೇನೆ..." ನನ್ನ ಮಾತು ಸಾಗುತ್ತಿರುವಾಗಲೇ ಅಲ್ಲಿರುವ ಮಹನೀಯರೊಬ್ಬರು ಹತ್ತಿರ ಬಂದರು. ಅಲ್ಲಿದ್ದ ಸಿಬಂದಿಯ ಬಳಿ "ಇವರ ಮೆಂಬರ್ ಶಿಪ್ ಮಾಡಿಕೊಡು ಮತ್ತು ಮೂರು ಕಾರ್ಡು ಕೊಡು. ಮೂರು ಫೋಟೋ ಮತ್ತು ನೂರು ರೂಪಾಯಿ ಶುಲ್ಕ ಕೊಡಿ ಸ್ವಾಮೀ" ಎಂದರು.

"ತಮ್ಮ ಪರಿಚಯ ಆಗಲಿಲ್ಲ ಸರ್."

"ನಾನು ಈಶ್ವರ್ ಅಂತ. ಎಲ್ಲಾ ಲೈಬ್ರೇರಿಗಳು ನನ್ನ ಅಧೀನ ಬರುತ್ತವೆ. ನಿಮಗೆ ಉತ್ತಮ ಬುಕ್ಕುಗಳನ್ನು ಓದಬೇಕೆಂದರೆ ನನ್ನ ಆಫೀಸಿಗೆ ಬನ್ನಿ. ಅಲ್ಲಿನ ಸಂಗ್ರಹ ದೊಡ್ಡದು." ಆತ ಆಹ್ವಾನಿಸಿದರು. ಬಹಳ ಸ್ನೇಹಮಯೀ ವ್ಯಕ್ತಿತ್ವ ಅವರದು. ಅವರ ಲೈಬ್ರೇರಿಯಲ್ಲಿನ ಸಂಗ್ರಹವು ವಿಪುಲವಾದದ್ದು. ಸ್ವತಃ ಓದುವ ಹವ್ಯಾಸ ಬೆಳೆಸಿಕೊಂಡಿದ್ದರು.

ಸರ್, ನಿಮ್ಮ ಲೈಬ್ರೇರಿಗಳಲ್ಲಿ ನೀವು ತರಿಸಿಟ್ಟ ಬುಕ್ಕುಗಳನ್ನೇ ನಾವು ಓದಬೇಕೇ? ನಮ್ಮ ಆಸಕ್ತಿಯ ಪುಸ್ತಕಗಳ ಸ್ಟಾಕು ಅಷ್ಟೇನೂ ಕಾಣೂದಿಲ್ಲ  ಒಮ್ಮೆ ಕೇಳಿದೆ.

"ಅದಕ್ಕೊಂದು ಸಮಿತಿಯಿದೆ. ನಿಮ್ಮ ಆಸಕ್ತಿಯ ಸುಮಾರು ಮುವತ್ತು ಪುಸ್ತಕಗಳ ಪಟ್ಟಿಯನ್ನು ಲಗತ್ತಿಸಿ ಒಂದು ಅಪ್ಲಿಕೇಷನ್ ಕೊಡಿ, ಒಂದು ಪ್ರತಿ ನನಗೂ ಕೊಡಿ. ಸಧ್ಯದಲ್ಲೇ ಸಮಿತಿಯ ಸಭೆ ಸೇರಲಿದೆ. ನೋಡುವ, ಏನಾದರೂ ಛಾನ್ಸ್ ಆಗಬಹುದು." ಅರ್ಜಿ ಕೊಟ್ಟೆ. ಛಾನ್ಸು ಏನೂ ಆದಂತೆ ಗೋಚರವಾಗಲಿಲ್ಲ....

ಒಬ್ಬ ಸಜ್ಜನರ ಸ್ನೇಹವಾದುದೇ ನನಗಾದ ದೊಡ್ಡ ಲಾಭ.

               

No comments:

Post a Comment