ಮಂಗಳೂರು ಪೊಲಿಟೆಕ್ನಿಕ್ ನೆನಪುಗಳು...
ಭಾಗ ಒಂದು --- ಡಿಪ್ಲೋಮಾ ದಾಖಲಾತಿ
ಒಂದು ಸಾವಿರದಾ ಒಂಭೈನೂರಾ ಅರುವತ್ತಾರರಂದು ನನ್ನ ಟೆಂಥು ಪರೀಕ್ಷೆಗಳು ಮುಗಿದವು. ಪಬ್ಲಿಕ್ ಪರೀಕ್ಷೆ. ಚೆನ್ನಾಗಿ ಬರೆದಿದ್ದೆ, ಒಳ್ಳೆಯ ಮಾರ್ಕುಗಳೂ ನನ್ನ ನಿರೀಕ್ಷೆಯಂತೆ ಸಿಕ್ಕಿದ್ದವು. ಊರಲ್ಲಿ ಹೆಚ್ಚಿನವರಿಗೆ ಬಹಳ ಖುಷಿ. ”ದೇವೂ ಪುತ್ತಾಕ ಚಾಂಗ ಮಾರ್ಕ ಆಯ್ಲೀಂತಿ, ಮುಕಾರಿ ಶಿಕ್ಕೂನು ಏಕ ಬರೇಂ ಕಾಮ ಮೇಳೋಂ" ಒಂದಿಬ್ಬರು ಹಿತೈಷಿಗಳು ಹಾರೈಸಿದರು. ಹಾರೈಕೆಗಳೇನೋ ಸರಿ, ನಮ್ಮ ಆರ್ಥಿಕ ಪರಿಸ್ಥಿತಿಯ ಲಿಮಿಟೇಷನ್ನುಗಳ ಅರಿವು ಇದ್ದುದರಿಂದ ಉನ್ನತ ಶಿಕ್ಷಣದ ಆಸೆ ಆಸೆಯಾಗಿಯೇ ಉಳಿಯಬಹುದೆಂಬ ಆತಂಕ ಸದಾ ಬಾಧಿಸುತ್ತಿತ್ತು. ಮೇಲ್ಪೇಟೆಯ ಶ್ರೀಧರ ನಾಯಕರು ತನ್ನ ತಮ್ಮನ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಖರ್ಚುಗಳನ್ನು ಪೂರೈಸಲು ಹೆಣಗುತ್ತಿರುವ ಚಿತ್ರ ಇಂದೂ ನನ್ನ ಕಣ್ಣೆದುರು ಇದೆ. ಅಂದಿನ ದಿನಗಳಲ್ಲಿ ಬಡತನವು ಸಾರ್ವತ್ರಿಕವಾಗಿತ್ತು. ಹೆಚ್ಚಿನವರು ಒಳ್ಳೆಯ ದಿನಗಳ ಕನಸುಗಳನ್ನು ಮಾತ್ರ ಕಾಣುತ್ತಿದ್ದರು. ಕೆಲವರು ಅಂತಹ ಕನಸುಗಳನ್ನು ಕಾಣುತ್ತಿರಲೂ ಇಲ್ಲ. ತಮ್ಮ ತಮ್ಮ ಬಡತನಕ್ಕೆ ಒಗ್ಗಿಹೋಗಿ ಒಪ್ಪಿಕೊಂಡಿದ್ದರು. ನಾನುಮಾತ್ರ ಉತ್ತಮ ಮಾರ್ಕು ಗಳನ್ನು ಪಡಕೊಂಡಿದ್ದರಿಂದ ಕನಸು ಕಾಣಲು ಅರ್ಹನಾಗಿದ್ದೆ, ಅಂತೆಯೇ ಒಳ್ಳೊಳ್ಳೆಯ ಡಿಗ್ರಿಗಳನ್ನು ಪಡ ಕೊಂಡು ದೊಡ್ಡ ಅಧಿಕಾರಿಯಾಗಿ - ಯಾವ ತೆರನ ಅಧಿಕಾರವೆಂಬ ಕಲ್ಪನೆಯಿರಲಿಲ್ಲ - ಊರಿನ ಮತ್ತು ದೇಶದ ಉದ್ಧಾರಕ್ಕಾಗಿ ನನ್ನನ್ನು ಸಮರ್ಪಿಸಿಕೊಂಡಂತೆ, ಸರ್ ಎಮ್ ವಿಶ್ವೇಶ್ವರಯ್ಯನವರಂತೆ ಭಾರೀ ಭಾರೀ ಅಣೆಕಟ್ಟುಗಳನ್ನು ಕಟ್ಟಿಸಿದಂತೆ- ಓಹೋಹೋ- ಸ್ವಪ್ನಗಳನ್ನು ಅನುಭವಿಸುತ್ತಿದ್ದೆ. ನನ್ನ ಆಶೆಗಳಿಗೆ ಶ್ರೀಧರ ನಾಯಕರು ಪ್ರತಿದಿನ ತುಪ್ಪ ಎರೆಯುತ್ತಿದ್ದರು.
ನಮ್ಮ ತಂದೆಯವರ ಹಣಕಾಸಿನ ಪರಿಸ್ಥಿತಿ ಅಂದಿನ ದಿನಗಳಲ್ಲಿ ಅಷ್ಟೇನೂ ತೃಪ್ತಿಕರವಾಗಿರಲಿಲ್ಲ, ದಿನವಹಿ ಖರ್ಚುಗಳನ್ನು ಸರಿತೂಗಿಸಲೇ ಹೆಣಗುತ್ತಿದ್ದರು. ತಮ್ಮ ಕಷ್ಟ, ಅಸಹಾಯಕತೆ, ದೈನ್ಯ ಮುಂತಾದವುಗಳನ್ನು ನಮ್ಮಿಂದ ಮುಚ್ಚಿಡಲು ಬಹಳ ಹೆಣಗುತ್ತಿದ್ದರು. ತನ್ನಿಂದ ಹೆಚ್ಚೇನೂ ಕಲಿಯಲಾಗಲಿಲ್ಲ, ಮಕ್ಕಳಾದರೂ ಕಲಿಯಲೆಂಬ ಆಸೆ. "ವಸರೆ ಶೀನ್ವಾಸಾಲೆ ಏಕ ಉತ್ತರ ನಿಮ್ಗೀ, ಖನೇ ಪುಣೀ ಸಾಯು ಕರ್ತಾಲೋ" ಅಂದಿನ ದಿನಗಳಲ್ಲಿ ಮಂಗಳೂರಿನ ಕರ್ನಾಟಕ ಪೊಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ ಕಲಿಯುವ ಭಾರೀ ರೇಸ್ ಶುರುವಾಗಿತ್ತು. ಸಾಕಷ್ಟು ಶ್ರೀಮಂತರಾಗಿದ್ದವರು ಮಕ್ಕಳನ್ನು ಇಂಜಿನಿಯರಿಂಗ್ ಮೆಡಿಕಲ್ಲು ಅದು ಇದು ಕಲಿಸುತ್ತಿದ್ದರು. ಒಳ್ಳೆಯ ಮಾರ್ಕುಗಳಿದ್ದು ಆರ್ಥಿಕ ಸಮಸ್ಯೆ ಇದ್ದವರು ಡಿಪ್ಲೋಮಾ ಕಲಿಯಲು ಪ್ರಯತ್ನಿಸುತ್ತಿದ್ದರು. ಮಂಗಳೂರಿನ ಕೇ ಪೀ ಟಿ ಯ ಡಿಪ್ಲೋಮಾ ಕೋರ್ಸುಗಳಿಗೆ ಅಂದು ಬಹಳ ಮರ್ಯಾದೆ ಹಾಗೂ ಡಿಮಾಂಡು ಇತ್ತು. ನನ್ನ ರಿಕ್ವೆಸ್ಟಿಗೆ ದೊಡ್ಡಪ್ಪನವರಿಂದ ಅಷ್ಟೇನೂ ತೃಪ್ತಿದಾಯಕ ಜವಾಬು ದೊರಕಲಿಲ್ಲ. ಅವರ ಮೂಡು ಅಂದು ಚೆನ್ನಾಗಿರಲಿಲ್ಲವೋ ಏನೋ, ನಾನೂ ಮುಂದೆ ಮಾತಾಡಲಿಲ್ಲ. ಆದರೂ ಇತರ ಗೆಳೆಯರು, ಹಿತೈಷಿಗಳು, ಗಣಪತಣ್ಣ ಮುಂತಾದವರ ಉತ್ತೇಜನಗಳಿಂದ ನಾನು ಹಾಗೂ ಜೀವದ ಗೆಳೆಯ ವೆಂಕಟೇಶ ಕಾಮತ್ ಇಬ್ಬರೂ ಡಿಪ್ಲೋಮಾ ಕಲಿಯಲು ಕೇ ಪೀ ಟಿ ಸೇರುವುದೆಂದಾಯಿತು. ಮೇಲುಪೇಟೆ ಶ್ರೀಧರ ನಾಯಕರದಂತೂ ಬಹಳ ಒತ್ತಾಸೆ.
ನಮ್ಮ ಬಾಬುಮಾಮನವರು ಆಗ ಎಲ್ ಐ ಸಿ ಯ ಡಿವಿಝನಲ್ ಆಫೀಸು ಉಡುಪಿಯಲ್ಲಿ ಉದ್ಯೋಗದಲ್ಲಿದ್ದರು. "ನಿನ್ನ ಶಿಕ್ಷಣದ ಖರ್ಚನ್ನು ತಾನು ನೋಡಿಕೊಳ್ಳುತ್ತೇನೆ ನೀನು ಯಾವುದೇ ಚಿಂತೆ ಮಾಡದೇ ಎಡ್ಮಿಷನ್ ತೆಕೋ" ಎಂದು ಉತ್ತೇಜಿಸಿದ ಕಾರಣ ನಾನು ಹಾಗೂ ವೆಂಕಟೇಶ ಕಾಮತ್ ಕೇ ಪೀ ಟೀ ವಿದ್ಯಾರ್ಥಿಗಳಾದೆವು. ೧೯೬೬ರ ಇಸವಿ, ತ್ರೇತಾಯುಗದ ಕಾಲವದು. ಕದ್ರಿಗುಡ್ಡೆಯಲ್ಲಿ ಕೇ ಪೀ ಟಿ, ಅದರ ವರ್ಕ್ಶಾಪುಗಳು, ಎರಡು ಹಾಸ್ಟೆಲುಗಳು, ಒಂದು ಸಪರೇಟು ಐ ಟೀ ಐ, ಅದರೆದುರು ಒಂದು ಹೊಟೇಲು ಇಷ್ಟೇ ಅಲ್ಲಿನ ವ್ಯವಸ್ಥೆ. ಪೇಟೆಗೆ - ಹಂಪನಕಟ್ಟೆಗೆ - ಹೋಗಲು ೧೯, ೧೪ ಹಾಗೂ ೩೧ ನಂಬ್ರದ ಮೂರು ಸಿಟಿಬಸ್ಸುಗಳು ಲಭ್ಯ. ಬಸ್ಸುಗಳಿವೆ ಎಂದು ಖುಷಿ ಬಂದಂತೆ ಊರು ತಿರುಗಲು ಅನುಮತಿ ಇರಲಿಲ್ಲ. ಅಲ್ಲದೇ ಹುಡುಗರು ಬೇಕಾಬಿಟ್ಟಿ ಅಡ್ಡಾಡುತ್ತಿರಲೂ ಇಲ್ಲ. ಹೆಚ್ಚಿನವರು ಗ್ರಾಮೀಣ ಪ್ರದೇಶಗಳಿಂದ ಬಂದವರು, ಹಣಕಾಸಿನ ಅಡಚಣೆ ಇದ್ದವರು. ಹಾಗಾಗಿ ಕ್ಲಾಸು-ಹಾಸ್ಟೆಲು, ಹಾಸ್ಟೆಲು-ಕ್ಲಾಸು ಕ್ರಮವಾಗಿ ಪಾಲಿಸಿಕೊಂಡೇ ಬರುತ್ತಿದ್ದೆವು.
ಮಂಗಳೂರಿನ ಪೊಲಿಟೆಕ್ನಿಕ್ಕಿಗೆ ಆ ದಿನಗಳಲ್ಲಿ ತುಂಬಾ ಒಳ್ಳೆಯ ಹೆಸರಿತ್ತು. ಕಲಿಸುವ ಅಧ್ಯಾಪಕರು, ವರ್ಕ್ಶಾಪುಗಳಲ್ಲಿ ಕೆಲಸ ಕಲಿಸುವ ಸಿಬಂದಿಗಳು ನುರಿತವರು ಹಾಗೂ ಒಳ್ಳೆಯವರಿದ್ದರು. ಶಾಸ್ತ್ರಿ ಎಂಬ ಪ್ರಿನ್ಸಿಪಾಲರು ನನಗೆ ನೆನಪಿದ್ದಂತೆ ನಾವು ಸೇರಿದ ವರ್ಷವೇ ವರ್ಗವಾಗಿ ನಂಬಿಯಾರ್ ಎಂಬ ಹೊಸಬರು ಬಂದು ಅಧಿಕಾರ ವಹಿಸಿಕೊಂಡರು. ಅವರಿಗೆ ಕನ್ನಡ ಬರುತ್ತಿದ್ದಿಲ್ಲ, ಅವರ ಮಲಯಾಳೀ ಇಂಗ್ಲೀಷು ಸಹಜ ಇಂಗ್ಲೀಷ್ ಕೂಡಾ ಸರಿಯಾಗಿ ತಿಳಿಯದ ನಮಗೆ ಕೊಂಚವೂ ಅರ್ಥ ಆಗುತ್ತಿರಲಿಲ್ಲ. ಸಿಟ್ಟಿನ, ಗಂಟುಮುಖದ ಮತ್ತು ಮಿತಭಾಷೀ ಪ್ರಿನ್ಸಿಪಾಲರ ಅವಕೃಪೆಗೆ ತುತ್ತಾಗದಂತೆ ನಾವೆಲ್ಲ ಬಹಳ ಜಾಗ್ರತೆ ವಹಿಸುತ್ತಿದ್ದೆವು. ಅವರದ್ದು ಒಂದು ಸಬ್ಜಕ್ಟು ನಮಗಿತ್ತು, ಆಡಳಿತದಲ್ಲಿ ಎಷ್ಟು ಸ್ಟ್ರಿಕ್ಟೋ ಪಾಠದಲ್ಲಿ ಅಷ್ಟೇ ಶಿಸ್ತಿನವರು. ವಿದ್ಯಾರ್ಥಿಗಳಿಂದ ಮಾತ್ರವಲ್ಲ ಅಧ್ಯಾಪಕ ವರ್ಗದವರಿಂದಲೂ ಶಿಸ್ತನ್ನು ಅಪೇಕ್ಷಿಸುತ್ತಿದ್ದರು. ಪಾಠ ಹೇಳಲು ಡಸ್ಟರು, ಚಾಕ್ ಪೀಸ್ ಮತ್ತು ನೋಟುಬುಕ್ಕು ಹಿಡಕೊಂಡು ಬಾಗಿಲು ತೆರೆದು ಹೊರಟರೆಂದರೆ ಹಾಲಿನ ಹೊರಗೆ ಅಲ್ಲಲ್ಲಿ ಬೀದಿ ಬಸವರಂತೆ ತಿರುಗಾಡುತ್ತಿದ್ದ ಪೋಕರಿ ಹುಡುಗರು ಬಡಬಡನೆ ಒಳಗೆ ತೂರಿ ಬರುತ್ತಿದ್ದರು. ಭಯಭಕ್ತಿಗಳಿಂದ ಅವರ ಆಗಮನದ ನಿರೀಕ್ಷೆಯಲ್ಲಿ ಎಲ್ಲರೂ ಗಪ್ಪುಚಿಪ್ಪು ಕೂತಿರುತ್ತಿದ್ದೆವು.! ಅವರೋ - ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಸಜ್ಜನ ಸಾಧು ಪೂಜೆ ವೇಳೆಗೆ ಮಜ್ಜಿಗೆಯೊಳಗಣ ಬೆಣ್ಣೆಯಂತೆ - ಮೆಲ್ಲಮೆಲ್ಲನೆ ನಡಕೊಂಡು ಬರುತ್ತಿದ್ದರು. ಮೊದಲೇ ಹೇಳಿದ್ದೇನೆ - ಸುಮಾರು ೫೬ ವರ್ಷಗಳ ಹಿಂದಿನ ಕಾಲವದು, ಹೆಚ್ಚಿನ ಹುಡುಗರು ಹಳ್ಳಿಗಳಿಂದ ಬಂದವರು, ಇಂಗ್ಲೀಷ್ ಮೀಡಿಯಮ್ ಪಾಠ್ಯಕ್ರಮದ ಅಭ್ಯಾಸ ಇಲ್ಲದವರು. ಕ್ಲಾಸ್ ರೂಮಿನ ಸೀನನ್ನು ನೀವು ಊಹಿಸಬಹುದು. ಮೆಕಾನಿಕಲ್ ಮತ್ತು ಆಟೋಮೊಬೈಲ್ ಎರಡು ಸೆಕ್ಷನ್ನುಗಳಿಗೆ ಕಾಮನ್ ಸಬ್ಜಕ್ಟ್ ಇದ್ದಾಗ ಕ್ಲಾಸ್ ರೂಮು ಖಚಾಖಚ್ ತುಂಬಿರುತ್ತಿತ್ತು. ಸುಮಾರು ಎಪ್ಪತ್ತೈದು ವಿದ್ಯಾರ್ಥಿಗಳು ಪಿನ್ ಡ್ರೊಪ್ ಸೈಲೆನ್ಸ್ ಇರುವ ಕ್ಲಾಸ್ ನಲ್ಲಿ ಕಣ್ಣು ಬಾಯಿ ಕಿವಿಗಳನ್ನು ತೆರೆದಿಟ್ಟುಕೊಂಡು ಪ್ರಿನ್ಸಿಪಾಲ್ ನಂಬಿಯಾರರ ಪಾಠ ಕೇಳುವ ದೃಶ್ಯ ಇಂದಿಗೂ ನನ್ನ ಕಣ್ಣ ಮುಂದಿದೆ.! ಅಷ್ಟು ಚೆನ್ನಾಗಿ ಪಾಠ ಹೇಳುತ್ತಿದ್ದರು!!
ಪ್ರಿನ್ಸಿಪಾಲರ ಕೋಣೆಯ ಎದುರು ಲೈಬ್ರೆರಿ ಇತ್ತು. ಆ ಕಾಲದ ಅತ್ಯಂತ ಸುಸಜ್ಜಿತ ಗ್ರಂಥಾಲಯವದು. ಅಲ್ಲಿನ ದಪ್ಪದಪ್ಪ ಬುಕ್ಕುಗಳನ್ನು ನೋಡಿಯೇ ಹೆದರಿಕೆಯೂ ಆನಂದವೂ ಆಯಿತು. ಆದರೆ ಅಲ್ಲಿನ ಗ್ರಂಥಪಾಲಕ ಮಾತ್ರ ಭಾರೀ ಭಯಂಕರ ಆಸಾಮಿ. ಪ್ರಿನ್ಸಿಪಾಲರಿಗೂ ಹೆದರದವರು ಸಹ ಈ ಮನುಷ್ಯನಿಗೆ ಭಯಬೀಳುತ್ತಿದ್ದರು. ಅವರ ಅಬ್ಬರಕ್ಕೇ ಬೆದರಿ ಮುಕ್ಕಾಲು ಪಾಲು ಹುಡುಗರು ಲೈಬ್ರೇರಿಯ ಒಳಗೆ ಕಾಲೇ ಇಡುತ್ತಿರಲಿಲ್ಲ. ಒಂದಿಬ್ಬರು ಲೆಕ್ಚರರು ಸಹಾ ಅವರ ತಂಟೆಗೆ ಹೋಗುತ್ತಿರಲಿಲ್ಲ. ಏಕೋ ಏನೋ ನಾನು ಅವರ ಖಾಸ್ ಗಿರಾಕಿಯಾದೆ. ಮೊದಲೆರಡು ಬಾರಿ ಗುರುಕಾಯಿಸಿದರೂ ನಾನು ಕೇಳಿದ ಗ್ರಂಥವನ್ನು ಕೊಡುತ್ತಿದ್ದರು. ಅಲ್ಲದೇ ಇಂಥಿಂಥಾ ಬೂಕು ತಕೋ ಮತ್ತು ಓದು, ಒಳ್ಳೇದಿದೆ ಎಂಬ ಸಜೆಷನ್ ಕೊಟ್ಟದ್ದೂ ಇದೆ. ಪುಸ್ತಕಗಳ ಹೆಚ್ಚಿನ ಬಳಕೆಯಾಗಿರದ ಕಾರಣ ಒಳ್ಳೇ ಸ್ಥಿತಿಯಲ್ಲಿದ್ದವು! ಹತ್ತನೇ ಕ್ಲಾಸಿನ ವರೆಗೆ ಕನ್ನಡದಲ್ಲಿ ಓದಿದ ನನಗೆ ಮೊದಮೊದಲು ಓದು ಕಷ್ಟವಾದರೂ ಕ್ರಮೇಣ ಸುಧಾರಣೆಯಾಯಿತು. ಹಿಂದೆ ಹೆಬ್ರಿಯಲ್ಲಿ ರಾಮಣ್ಣ ಹೆಬ್ಭಾರ ಮಾಸ್ಟರರನ್ನು ಕಾಡಿ ಬೇಡಿ ಕತೆ ಕಾದಂಬರಿ ಓದುತ್ತಿದ್ದೆ. ಇಲ್ಲಿ ಹಾಸ್ಟೆಲು ರೂಮಿನಲ್ಲಿ ಮಾಡಲು ಬೇರೆ ಕೆಲಸವಿಲ್ಲ, ಹಾಗಾಗಿ ಅರ್ಥ ಆಗಲಿ ಬಿಡಲಿ ಪುಸ್ತಕ ಓದುವುದೇ ಗೀಳಾಯಿತು. ಗೆಳೆಯರನೇಕರಿಂದ ಓದಿ ಓದಿ ಮರುಳಾದ ಕೂಚು ಬಟ್ಟ ಎಂಬ ಸುಪ್ರಸಿದ್ಧ ಬಿರುದೂ ಪ್ರಾಪ್ತ ವಾಗಿತ್ತು. ಇರಲಿ ಪಾಪ ಎಂದು ಅವರನ್ನು ಮಾಫ್ ಮಾಡಿದ್ದೆ. ಕ್ಲಾಸಲ್ಲಿ ಹೇಳಿದ ಪಾಠಗಳ ಸಾರಾಂಶವನ್ನು ರಫ್ ಬರಕೊಂಡು ರೂಮಲ್ಲಿ ಕೂತು ನೋಟ್ ಬುಕ್ಕಲ್ಲಿ ಫೇರ್ ಬರಕೊಳ್ಳುವ ಪರಿಪಾಟವೂ ಇತ್ತು.! ಈ ಅಭ್ಯಾಸ ಇನ್ನೂ ಕೆಲವರಿಗೆ ಹಬ್ಬಿತು. ನಿನ್ನ ನೋಟ್ಸು ಬಾಳ ಚಂದ ಉಂಟು ಮಾರಾಯಾ! ಒಂಚೂರು ಓದಿ ವಾಪಾಸು ಕೊಡ್ತೇನೆ, ಕೊಡ್ತೀಯಾ? ಎಂದು ಹಾಸ್ಟೆಲು ಗೆಳೆಯರಲ್ಲದೇ ಮಂಗಳೂರಿನ ಇತರ ದೋಸ್ತುಗಳೂ ಬೇಡಿಕೊಂಡು ಓದುತ್ತಿದ್ದರು.! ಇದು ನನ್ನ ಹೆಗ್ಗಳಿಕೆ ಅಥವಾ ಜಂಬದ ಮಾತಲ್ಲ, ಇಂದು ಐವತ್ತೈದು ವರ್ಷಗಳ ನಂತರವೂ ಕೇಪೀಟಿಯ ನೆನಪಾದಾಗ ಮನ ಪುಳಕಗೊಳ್ಳತ್ತದೆ.!
ಭಾಗ ಎರಡು --- ಹಾಸ್ಟೆಲು ಜೀವನ...
ಎಸ್ ಎಸ್ ಎಲ್ ಸೀ ಮುಗಿಸಿದ ಕೂಡಲೇ ಡಿಪ್ಲೋಮಾ ಕ್ಲಾಸಿಗೆ ಸೇರಿದ ವಿದ್ಯಾರ್ಥಿಗಳು ನಾವು, ನಮ್ಮಂತೆ ಅನೇಕ ವಿದ್ಯಾರ್ಥಿಗಳಿದ್ದರು. ಪೀ ಯೂ ಸಿ ಮಾಡಿ ಬಂದವರ ಪ್ರಮಾಣ ಕೊಂಚ ಕಡಿಮೆ. ನಾನು ವೆಂಕಟೇಶ ಕಮ್ತಿ ಸೇರಿದಂತೆ ಈ ಎಸ್ಸೆಲ್ಸಿ ಹುಡುಗರು ಚಡ್ಡಿಯಲ್ಲೇ ಶೋಭಿಸುತ್ತಿದ್ದರು.! ಕಾರಣ: ಪ್ಯಾಂಟು ಹೊಲಿಸಿಕೊಳ್ಳಲು ದುಡ್ಡಿನ ಸಮಸ್ಯೆ. ಎಲ್ಲ ಸ್ಟೂಡೆಂಟ್ಸು ಹುಡುಗರೇ ಆದ್ದರಿಂದ ಯಾವುದೇ ನಾಚಿಕೆ ಪ್ರಶ್ನೆ ಇರಲಿಲ್ಲ. ಬಿನ್ನಿ ಮಿಲ್ಲಿನ ಖಾಕಿ ಚಡ್ಡಿಗಳನ್ನು ಹದಿನೈದು ದಿನಗಳಿಗೊಮ್ಮೆ ಇಸ್ತ್ರೀ ಮಾಡಿಸಿ ಕ್ಲಾಸಿಗೆ ಹೋಗುವಾಗ ಮಾತ್ರ ಉಪಯೋಗಿಸಿ ಹಾಸ್ಟೆಲಿನಲ್ಲಿ ಮುಂಡು ಉಟ್ಟುಕೊಂಡು ಚಡ್ಡಿಯ ಹಾಗೂ ನಮ್ಮ ಘನತೆ ಗೌರವಗಳನ್ನು ಉಳಿಸಿಕೊಳ್ಳುತ್ತಿದ್ದೆವು.! ವಾರದಲ್ಲಿ ಮೂರು ದಿನ ನೀಲಿ ಬಣ್ಣದ ಯೂನಿ ಫಾರ್ಮ್ ಇರುತ್ತಿದ್ದುದರಿಂದ ಅನುಕೂಲವಾಗಿತ್ತು.
ಬೆಳಗ್ಗೆ ೭.೪೦ ಕ್ಕೆ ಉಪಾಹಾರದ ಮೊದಲ ಬೆಲ್ಲು ಬಾರಿಸುತ್ತಿದ್ದರು. ಡೈನಿಂಗು ಹಾಲ್ ನಲ್ಲಿ ಸದ್ದು ಗಲಾಟೆ ಮಾಡದೇ ತಿಂಡಿ ತಿನ್ನಬೇಕು. ಏನಾದರೂ ಮಾತಾಡಿದರೆ ಹಿಂದಿನಿಂದ ಶ್ ಶ್ ಎಂಬ ವಾರ್ನಿಂಗು ಬರುತ್ತಿತ್ತು. ಕೂಡಲೇ ಎಲ್ಲರೂ ಗುಪ್ ಚುಪ್. ಅಲ್ಲೇ ಹಿಂದಿರುವ ಅಡುಗೆ ಕೋಣೆಯಲ್ಲಿ ಸಾಸಿವೆ ಬಿದ್ದ ಶಬ್ದ ಸಹ ದುಡುಮ್ ಅಂತ ಕೇಳಿಸುತ್ತಿತ್ತು, ಅಷ್ಟು ನಿಶಬ್ದವಾಗಿ ಪ್ಲೇಟಿನಲ್ಲಿ ಬಡಿಸಿದ್ದನ್ನು ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿಕೊಂಡು ತಿಂದು ಬರಬೇಕು!! ಬಡಿಸುವವರೂ ಸಹ ಒಂದು ತೆರನ ರೊಬೋಟಿನಂತೆ ನಿರ್ಭಾವುಕರಾಗಿ ಯಾವುದೇ ಹುಡುಗನ ಮುಖ ಮೂತಿ ನೇರ ನೋಡದೇ ಬಡಿಸುತ್ತಾ ಹೋಗುತ್ತಿದ್ದರು. ಬೇಯಿಸಿದ ನೇಂದ್ರ ಬಾಳೆಹಣ್ಣು ಮತ್ತು ಕಡ್ಲೆ ಉಪ್ಕರಿ. ಈ ಎರಡೂ ಐಟಮ್ಮುಗಳು ಬೆಳಗಿನ ಉಪಹಾರವಾಗಿ ಬಳಕೆಯಾಗುತ್ತದೆಂದು ನನಗೆ ಗೊತ್ತಾದದ್ದೇ ಅಲ್ಲಿ.! ಅರ್ಧ ಬಾಳೆಹಣ್ಣು ತಿನ್ನುವಷ್ಟರಲ್ಲಿ ಕಣ್ಣುಕತ್ತಲೆ ಬಂತು. ಆದರೆ ಪ್ಲೇಟಿನಲ್ಲಿ ಒಂದೇ ಒಂದು ಅಗುಳು ಬಿಡಬಾರದೆಂಬ ಹುಕುಮು ಇದ್ದ ಕಾರಣ ಮೊದಲ ಒಂದು ತಿಂಗಳ ಉಪಾಹಾರ ಕೊಂಚ ಯಾತನೆ ಕೊಟ್ಟಿತ್ತು. ಅಡುಗೆಯವರಿಗೆ ಅನುಭವ ಹೆಚ್ಚು, ಒತ್ತಾಯ ಪೂರಕ ಬಡಿಸಿದ್ದನ್ನು ಪೂರಾ ತಿನ್ನಿಸುತ್ತಿದ್ದರು. ಕ್ರಮೇಣ ಈ ಆಹಾರ ಪದ್ಧತಿ ಅಭ್ಯಾಸವಾಯಿತು. ನಾವು ಬೆಳೆಯುವ ಹದಿಹರೆಯದ ಹುಡುಗರು, ಹಸಿವು ಜಾಸ್ತಿ. ಮುಂದಿನ ದಿನಗಳಲ್ಲಿ ಇನ್ನೊಂದು ಬಾಳೆಹಣ್ಣು ಬಡಿಸು ಮಾರಾಯ ಎಂದು ಎಷ್ಟೇ ಅಂಗಲಾಚಿದರೂ ಊಹೂಂ, ಇಲ್ಲ ಅಂದ್ರೆ ಇಲ್ಲ. ಮುಖ್ಯ ಅಡುಗೆಯವರು ಬಹಳ ಸಖತ್ ಮನುಷ್ಯ, ಮಾತು ಕಮ್ಮಿ ಫೈನಲ್ ಈಯರ್ ಸ್ಟೂಡೆಂಟುಗಳನ್ನು ಹೊರತುಪಡಿಸಿ ಉಳಿದವರೆಲ್ಲ ಅವರ ಸುದ್ದಿಗೇ ಹೋಗುತ್ತಿರಲಿಲ್ಲ. ಅವರ ಹೆಸರು ಯಾರಿಗೂ ಗೊತ್ತಿಲ್ಲ. ಹಿಟ್ಲರ್ ಎಂದು ಪ್ರಖ್ಯಾತರಾಗಿದ್ದರು. ಹಿಟ್ಲರ್ ಅಂದರೆ ಯಾರೆಂದು ನಮಗೆ ಆ ಕಾಲದಲ್ಲಿ ಗೊತ್ತಿರಲಿಲ್ಲ, ಯಾರೋ ದೊಡ್ಡ ಕುಂಬಳಕಾಯಿ ಇರಬೇಕು ಎಂದು ನಮ್ಮ ಭಾವನೆ....
ಸಮಯಪಾಲನೆ ಬಹಳ ಕಟ್ಟುನಿಟ್ಟಾಗಿ ಪಾಲಿಸಲ್ಪಡುತ್ತಿತ್ತು. ೭.೪೦ ರ ಮೊದಲ ಬೆಲ್ ನಂತರ ೮.೦೦ ಕ್ಕೆ ಇನ್ನೊಂದು ಬೆಲ್ಲು. ತಡಮಾಡಿ ಹೋದರೆ ತಿಂಡಿ ಇಲ್ಲ. ರಾತ್ರಿ ಸಹ ಅದೇ ತರಹ. ೮.೨೦ ಕ್ಕೆ ಊಟದ ಎರಡನೇ ಬೆಲ್ಲು. ಒಂಭತ್ತು ಘಂಟೆಯ ಒಳಗೆ ಎಲ್ಲರೂ ಊಟ ಮುಗಿಸಿ ರೂಮು ಸೇರಲೇಬೇಕು. ಹಾಸ್ಟೆಲ್ಲಿನಲ್ಲಿ ವಿದ್ಯಾರ್ಥಿಗಳದ್ದೇ ಒಂದು ಕಮಿಟಿ ಇತ್ತು, ಒಬ್ಬ ಜನರಲ್ ಸೆಕ್ರೆಟರಿ, ರೇಡಿಯೋ ರೂಮಿಗೆ ಒಬ್ಬ ಸೆಕ್ರೆಟರಿ, ತರಕಾರಿ ಖರೀದಿಗೆ ಒಬ್ಬ ಸೆಕ್ರೆಟರಿ.... ಫೈನಲ್ ಈಯರ್ ಸ್ಟೂಡೆಂಟ್ ಒಬ್ಬರು ಪ್ರತೀ ರಾತ್ರಿ ೯.೩೦ರ ಆಸುಪಾಸು ಎಲ್ಲಾ ರೂಮಿನ ಬಾಗಿಲು ತಟ್ಟಿ ಹುಡುಗರು ಸ್ಟಡಿ ಮಾಡುತ್ತಿದ್ದಾರೋ ಅಥವಾ ಆಲಸ್ಯದಿಂದ ಮಲಗಿದ್ದಾರೋ ಎಂದು ಚೆಕ್ ಮಾಡುತ್ತಿದ್ದರು. ೯.೦೦ - ೧೦.೦೦ ಸ್ಟಡೀ ಟೈಮು ಕಡ್ಡಾಯ ಅಂದ್ರೆ ಬಿಲ್ ಕುಲ್ ಕಂಪಲ್ಸರಿ. ಯಾರಾದರೂ ಗೋಡೆ ಹಾರಿ ಪೇಟೆ ತಿರುಗಲು ಹೋಗಿದ್ದಾರೋ ಎಂದೂ ಚೆಕಿಂಗು ಇತ್ತು. ಮೌನವಾಗಿ ಪಾಠ ಓದುತ್ತಿದ್ದೆವು, ಕೆಳಗಿನ ಶಾಖಾಹಾರೀ ಹಾಸ್ಟೆಲಿನ ವಿದ್ಯಾರ್ಥಿಗಳು ಎಲ್ಲಾ ರೂಲ್ಸುಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೆವು. ಮೇಲಿನ ಮಾಂಸಾಹಾರಿಗಳು ಹೆಚ್ಚಿನವರು ಶುದ್ಧ ತಂಟಲಮಾರಿಗಳು. ಘಟ್ಟಿ ಘಟ್ಟಿ ಮಾತಾಡೂದು, ಪದ ಹಾಡೂದು ಮತ್ತಿತರೇ - ಈಗಿನ ಹುಡುಗರು ನಗಬಹುದು - ಖತರ್ ನಾಕ್ ದುರಭ್ಯಾಸಗಳನ್ನು ಬೆಳೆಸಿಕೊಂಡಿದ್ದರು. ಅ ರೌಡಿಗಳ ದೋಸ್ತಿ ನಮಗೆ ಬೇಡಪ್ಪ! ನಮ್ಮ ಮೂರು ವರ್ಷ ಸ್ಟಡಿ ಮಾಡಿ ಮುಗಿಸಿದರೆ ಸಾಕಪ್ಪ ಎಂಬ ಜಾಗ್ರತೆಯಲ್ಲಿ ನಾವು ಬಡಪಾಯಿಗಳಿದ್ದೆವು. ಅವರು ನಮ್ಮತ್ತ ಕೊಂಚ ಕನಿಕರದಿಂದಲೇ ನೋಡುತ್ತಿದ್ದರು! ಕಾಶ್ಮೀರದ ಒಬ್ಬ ನನ್ನ ದೋಸ್ತಿ ಇದ್ದ. ನನ್ನ ನೋಟ್ಸಿನ ಕಾರಣ ಆತ ನನ್ನ ಖಾಸಾ ಪ್ರೆಂಡ್ ಆಗಿದ್ದ. ಕೊಂಚ ಮಟ್ಟಿನ ಠಿಸ್ ಫಿಸ್ ಇಂಗ್ಲಿಷ್ ನನಗೆ ಆತನೇ ಕಲಿಸಿದ್ದು...
ಹಾಸ್ಟೆಲಿನ ಎಂಟ್ರೆನ್ಸ್ ಪಕ್ಕದ ಸಣ್ಣ ರೂಮು ನಮಗೆ ಅಲಾಟ್ ಆಗಿತ್ತು. ಅದರಲ್ಲಿ ಇಬ್ಬರಿಗೆ ಮಾತ್ರ ಅವಕಾಶ. ವಿರಾಮದ ಸಮಯದಲ್ಲಿ ಕ್ಲಾಸಿನ ಗೆಳೆಯರು ಅವನು ಇವನು ಎಂಬ ಬೇಧ ಭಾವ ಇಲ್ಲದೆ ನಮ್ಮ ರೂಮಿಗೆ ಲಗ್ಗೆಯಿಡುತ್ತಿದ್ದರು! ನಾವಿಬ್ಬರೂ ಪಾಪದವರು, ಸುಮ್ಮನೆ ಕಾಲ ಕಳೆಯಲು, ನೋಟ್ಸು ಓದಲು, ಈಗ ಪಾಠ ಇಲ್ಲ ಅದಕ್ಕೆ ಇದಕ್ಕೆ ಎಂದು ಬಂದು ಕೋಣೆಯಲ್ಲಿ ಬೀಡು ಬಿಡುತ್ತಿದ್ದರು. ಹುಸೈನಿ ಎಂಬವನಿಗೆ ನನ್ನದೇ ಕಾಟ್ ಆಗಬೇಕಿತ್ತು, ಇಡೀ ದಿನ ರೂಮಲ್ಲಿ ಅಡ್ಡಾಗಿ ಇರುತ್ತಿದ್ದ.. ಜಯದೇವ ಬಾಗಲೋಡಿ ಇನ್ನೊಬ್ಬ ಗಿರಾಕಿ. ಲಕ್ಷ್ಮಣ ಭಟ್-ಬಹುಷಃ ರಥಬೀದಿಯಿಂದ ಬರುತ್ತಿದ್ದ ಕಾಣುತ್ತೆ- ತುಂಬ ದಾಕ್ಷಿಣ್ಯ ಪ್ರವೃತ್ತಿಯ ದೋಸ್ತಿ. ವಾಸುದೇವ ಭಟ್, ಮೂಲ್ಕಿಯ ಹತ್ತಿರದ ಕಾರ್ನಾಡಿನ ಉಮೇಶ ಗಡಿಯಾರ, ಮೂಲ್ಕಿಯ ದೇವದಾಸ ಪೈ, ಕಾರ್ಕಳದ ಸುರೇಶ ಕಾಮತ್, ಉಜಿರೆಯ ಪಾಂಡುರಂಗ ಬಾಳಿಗಾ, ಲಕ್ಷ್ಮಿನಾರಾಯಣ, ಕೃಷ್ಣ ಭಟ್ ಇವರೆಲ್ಲ ನನ್ನ ಅಂತರಂಗದ ಗೆಳೆಯರು. ಪಾಂಡುರಂಗ ಬಾಳಿಗರು ಇಂದು ಉಜಿರೆಯಲ್ಲಿ ಒಬ್ಬಆಢ್ಯ ಹಾಗೂ ಸಕ್ಸೆಸ್ ಫುಲ್ ಉದ್ಯಮಿ. ತುಂಬಾ ಸಜ್ಜನ ಮತ್ತು ಗೌರವಾನ್ವಿತರು. ಸುರೇಶ ಕಾಮತರು ಇಂದು - ೧೦-೧೨-೨೦೨೨ - ತನ್ನ ಹಳೆಯ ನಾಸ್ಟಾಲ್ಜಿಕ್ ನೆನಪು ಗಳನ್ನು ಹಂಚಿ ಖುಷಿಪಟ್ಟರು....
ಗ್ರೂಪ್ ಫೋಟೋದಲ್ಲಿ ಕೆಲವರ ಮುಖಗಳು ಮಸುಕು ಮಸುಕು ನೆನಪು ಬರುತ್ತದೆ - ಜಗದೀಶ, ಲಿಯೋ ಟೌರೋ, ಎಮ್ ಜಿ ನಂಜಪ್ಪ, ಕೇಶವ ಭಟ್, ರತ್ನಾಕರ ಪಿ ಎಸ್... ಲೆಕ್ಚರರುಗಳಲ್ಲಿ ಎನ್ ವೀ ಜತ್ತನ್ನ, ಪ್ರಿನ್ಸಿಪಾಲ್ ಟಿ ಎನ್ ಭಾಡ್ಯ, ಎಮ್ ತುಳಜಾರಾಮ್, ಎನ್ ಟಿ ಆರ್ ನಂಬಿಯಾರ್ ಇವರ ಪರಿಚಯ ನೆನಪಾಗುತ್ತದೆ. ಶ್ರೀ ತುಳಜಾರಾಮ್ ಇವರು ಉತ್ತರ ಕರ್ನಾಟಕದವರಿರಬೇಕು, ಮಂಗಳೂರು ಭಾಷೆಗೆ ಹೊಂದಿಕೊಳ್ಳಲು ಅವರಿಗೆ ತುಸು ಸಮಯ ತಗಲಿತ್ತು, ಅವರ ಲೆಕ್ಚರು ಫಾಲೋ ಮಾಡಲೂ ನಮಗೆ ಕೆಲವು ಟೈಮು ತಾಗಿತ್ತು. ಮಿಸ್ಟರ್ ಜತ್ತನ್ನ ಅವರದ್ದು ತುಂಬ ಶಿಸ್ತಿನ ಪಾಠ. ಜೊಯಿಂಟ್ ಸೆಷನ್ನುಗಳ ಪಾಠ. ಕ್ಲಾಸ್ ರೂಮು ಭರ್ಜರಿ ತುಂಬಿರುತ್ತಿತ್ತು. ಬಂದವರೇ ಎಲ್ಲರ ಅಟೆಂಡೆನ್ಸ್ ತೆಕೊಂಡು ತಿರುಗಿ ಬೋರ್ಡಿನ ಮೇಲೆ ಡ್ರಾಯಿಂಗ್ ಮಾಡಲು ಸುಮಾರು ಹತ್ತು ಹದಿಮೂರು ನಿಮಿಷ ತಗೊಳ್ಳುತ್ತಿದ್ದರು. ಅಷ್ಟರಲ್ಲಿ ನಾಲ್ಕೈದು ಮಂದಿ ಪೋಕರಿಗಳು ಪುಸಕ್ಕನೆ ಕ್ಲಾಸಿಂದ ಗಾಯಬ್! ಮೊದಮೊದಲು ಅವರ ಗಮನಕ್ಕೆ ಬರಲಿಲ್ಲ. ಅಂದರೆ ಅವರಿಗೆ ಡೌಟು ಬಾರದೆಂದು ೩-೪ ಹುಡುಗರು ಮಾತ್ರ ಜಾರುತ್ತಿದ್ದರು. ಒಮ್ಮೆಯಂತೂ ತೀವ್ರ ಅತಿರೇಕಕ್ಕೆ ಹೋಯಿತು. ಬರೆಯುತ್ತಿದ್ದ ಡ್ರಾಯಿಂಗು ದೊಡ್ಡದಿತ್ತು, ಅಂತೆಯೇ ಅಂದು ಹಾಜರಿ ನಂತರ ಮಾಯಕರಾದ ಖದೀಮರೂ ಜಾಸ್ತಿಯಿದ್ದರು! ವಾಪಸು ಕ್ಲಾಸಿಗೆ ಮುಖ ಮಾಡಿದಾಗ ಕ್ಲಾಸಿನ ಸಾಂದ್ರತೆ ಕಡಿಮೆಯಾದ ಭಾಸವಾಯಿತವರಿಗೆ. ಸಿಟ್ಟು ನೆತ್ತಿಗೇರಿತು! ಪುನಃ ಹಾಜರಿ ಕರೆದರು, ಅಧ್ಯಾಪಕರ ಸಿಟ್ಟು ತಾರಕಕ್ಕೇರಿದೆಯೆಂಬ ಭಯದ ಕಾರಣ ಮಾಯವಾದವರ ಪರ ಪ್ರಾಕ್ಸಿ ಹೇಳಲು ಯಾರೂ ಹೋಗಲಿಲ್ಲ. ಬಾಗಿಲ ಬಳಿಯಲ್ಲಿ ನನ್ನ ಮತ್ತು ವೆಂಕಟೇಶ ಕಾಮತನ ಖುರ್ಚಿ. ”ಕಮಾನ್ ಸ್ಟೇಂಡಪ್, ಯಾರು ಯಾರೆಲ್ಲ ಕ್ಲಾಸಿಂದ ಹೊರ ಹೋಗಿದ್ದಾರೆ?" ಕಾಮತ್ ಮಾತಾಡಲಿಲ್ಲ. ಮ್ಯಾಟರ್ ಮೇಲೆ ಪ್ರಿನ್ಸಿಪಾಲರ ಬಳಿ ಹೋಯಿತು. ಪ್ರಿನ್ಸಿಪಾಲರ ಎದುರು ನಾವು ಐದಾರು ಹುಡುಗರು ನಡುಗುತ್ತ ನಿಂತೆವು, ನಮಗೆ ಮೆರಿಟ್ ಸ್ಕಾಲರ್ ಶಿಪ್ ಸಿಗುತ್ತಿದ್ದ ವಿಚಾರ ಪ್ರಿನ್ಸಿಪಾಲರಿಗೆ ಗೊತ್ತು, ಅಲ್ಲದೇ ನಾವು ಇದ್ದವರ ಪೈಕಿ ಆದಷ್ಟು ಮಟ್ಟಿಗೆ ಸುಭಗರೆಂಬ! ಮಾತೂ ಗೊತ್ತು. ಪರಂಪರೆಯಂತೆ ಸ್ವಲ್ಪ ಬುದ್ಧಿವಾದವನ್ನೂ ಬೆದರಿಕೆಯನ್ನೂ ಹಾಕಿ ಕಳಿಸಿದರು......
೧೯೬೭ ರ ಸಮಯದಲ್ಲಿ ರಾ ಸ್ವ ಸಂಘದ ಶಾಖೆಯೊಂದನ್ನು ನಾವು ಕದ್ರಿಗುಡ್ಡೆ ರೇಡಿಯೋ ಸ್ಟೇಷನ್ ಬಳಿ ಆರಂಭಿಸಿದೆವು. ನಾನು ಮು.ಶಿ. ಅಂದರೆ ಮುಖ್ಯ ಶಿಕ್ಷಕ, ನನ್ನ ಒತ್ತಾಯದ ಮೇರೆಗೆ ನನ್ನ ಖಾಸಾ ದೋಸ್ತುಗಳು ಉಪಸ್ಥಿತರಿರುತ್ತಿದ್ದರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಹೆಬ್ರಿಯಲ್ಲಿ ಸಂಘ ಶಾಖೆ ನಡೆಸುತ್ತಿದ್ದೆ. ಹಾಗಾಗಿ ಕೇ ಪೀ ಟಿ ಯಲ್ಲೂ ಸುರು ಮಾಡಿದೆವು. ಬಿಜೈ ಯಿಂದ ಶಿವಶಂಕರ್ ಎಂಬವರು ಮಾರ್ಗದರ್ಶನಕ್ಕೆಂದು ಆಗಾಗ ಬರುತ್ತಿದ್ದರು. ಮೃದು ಹಾಗೂ ಸವಿಮಾತಿನ ತರುಣ. ಅತಿ ಶೀಘ್ರದಲ್ಲೇ ನಮ್ಮ ಮನವನ್ನು ಗೆದ್ದರು. ನಮ್ಮ ಶಾಖೆ ನಿಯಮಿತವಾಗಿ ನಡೆಯುತ್ತಿತ್ತೆಂದೇನೂ ಅಲ್ಲ. ಸಂಖ್ಯೆ ಹೆಚ್ಚಿದ್ದಾಗ ಖುಷಿ ಯಾಗುತ್ತಿತ್ತು, ಕಮ್ಮಿಯಿದ್ದಾಗ ಅಂದರೆ ೩-೪ ಹುಡುಗರಿದ್ದಾಗ ಅದು ಇದು ನೆನಪಿದ್ದ ಕಥೆ ಹೇಳಿ ಕಾಲ ಕಳೆಯುತ್ತಿದ್ದೆ. ಕುಂಟುತ್ತ ನಡೆಯುತ್ತಿದ್ದ ಶಾಖೆಗೆ ಶಿವಶಂಕರರು ಆಗಾಗ ಬಂದು ಉಮೇದು ಕೊಡುತ್ತಿದ್ದರು. ಮಾನ್ಯ ಚಂದ್ರಶೇಖರ ಭಂಡಾರಿಯವರು ಆಗ ಜಿಲ್ಲಾ ಪ್ರಚಾರಕರಾಗಿದ್ದ ನೆನಪು. ಮಿತ ಮೃದುಭಾಷಿ ಚಂದ್ರು ಅವರ ಭೆಟ್ಟಿ ಕಾರ್ಯಾಲಯದಲ್ಲಿ ಮಾಡಿದ್ದೆ.
೧೯೬೮ ರ ಒಂದು ಸಂಜೆ ಕದ್ರಿಗುಡ್ಡೆಯಲ್ಲಿ ನಮ್ಮ ಶಾಖೆ ನಡೀತಿರುವಾಗ ಸ್ಕೂಟರೊಂದರಲ್ಲಿ ಚಂದ್ರುಮಾಮ ಮಾನ್ಯ ಶೇಷಾದ್ರಿಯವರೊಡನೆ ಬಂದರು. ನಾವು ಕೂಡಲೇ ಎದ್ದು ಪ್ರಣಾಮ ಮಾಡಿ ನಿಂತೆವು.
"ಕೂಡಿ ಕೂಡಿ, ಶಾಖೆ ನಡೀತಾ ಉಂಟು! ಹಾಸ್ಟೆಲಿನಲ್ಲಿ ಎಷ್ಟು ಸ್ವಯಂಸೇವಕರಿದ್ದಾರೆ?" ಶೇಷಾದ್ರಿಯವರ ಪ್ರಶ್ನೆ.
”ಮುವ್ವತ್ತು ಸ್ವಾಮಿ”
”ಓಹೋ, ಬಹಳ ಒಳ್ಳೇದು, ಶೂನ್ಯಕ್ಕೆ ಬೆಲೆ ಇಲ್ಲ ತಾನೆ!” ಶೇಷಾದ್ರಿ ನಕ್ಕರು. ಅಂದಿನ ಉಪಸ್ಥಿತಿ ಮೂರು. ನಾನು ಮಾತಾಡಲಿಲ್ಲ.
”ನಡೀರಿ ನಿಮ್ಮ ಹಾಸ್ಟೆಲಿಗೆ ಹೋಗಿ ಉಳಿದವರ ಸಂಪರ್ಕ ಮಾಡೋಣ.”
ನನಗೆ ಸಂಭ್ರಮ, ಶೇಷಾದ್ರಿಯವರು ನಮ್ಮ ರೂಮಿಗೆ ಬರುತ್ತಾರೆ! ಸಂಘದ ಮಹಾನುಭಾವರೊಬ್ಬರು ಬಂದಿದ್ದಾರೆ ಎಂದು ಗೊತ್ತಾದ ಕೂಡಲೇ ಹಾಸ್ಟೆಲು ಗೆಳೆಯರನೇಕರು ದುಡುದುಡು ಬಂದರು. ವರ್ಷದ ಹಿಂದೆ ಬೆಳಗಾವಿಯಲ್ಲಿ ವಾರಕ್ಕೂ ಹೆಚ್ಚು ದಿನ ನಡೆದ ಸಮಾರಂಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಮಾನ್ಯ ಶೇಷಾದ್ರಿಯವರ ಉಪನ್ಯಾಸಗಳಿದ್ದವು. ನಮ್ಮ ರೂಮಲ್ಲಿ ಅಲ್ಲದೇ ಹೊರಗೆ ಜಗಲಿಯಲ್ಲಿ ಒತ್ತೊತ್ತಿ ಕುಳಿತು ನಿಂತು ತನ್ಮಯತೆಯಿಂದ ಮಂತ್ರಮುಗ್ಧರಾಗಿ ಆಲಿಸುತ್ತಿದ್ದ ಹದಿ ಹರೆಯದ ಮನಸುಗಳಿಗೆ ಇತಿಹಾಸದ ಭವ್ಯ ಹಾಗೂ ಅವಿಸ್ಕರಣೀಯ ಕಥಾನಕವನ್ನು ಅಂದು ಬಹಳವೇ ರೋಚಕವಾಗಿ ಮಾನ್ಯರು ಉಣಬಡಿಸಿದರು.! ನೆರೆದ ಎಲ್ಲಾ ಕಿವಿಗಳಿಗೆ ಕೇವಲ ಶೇಷಾದ್ರಿಯವರ ಮಾತುಗಳು ಮಾತ್ರ ಕೇಳುತ್ತಿದ್ದವು. ಸುಮಾರು ಒಂದೂವರೆ ಘಂಟೆಯ ಕಾಲ ನಾವೆಲ್ಲ ಮಹಾರಾಷ್ಟದ ಕೋಟೆಗಳಲ್ಲಿ ಶಿವಾಜಿ ಮಹಾರಾಜರ ಸೈನಿಕರಾಗಿಯೋ, ಸಿಂಹಗಢದ ಕಾವಲುಗಾರನಾಗಿಯೋ ಕಳೆದುಹೋಗಿ
ಸಂಭ್ರಮಿತರಾಗಿದ್ದೆವು! ತನ್ಮಯರಾಗಿದ್ದೆವು!. ಇಂಗ್ಲಿಷಿನ "ಟ್ರಾನ್ಸ್”ಎಂಬ ಶಬ್ದ ಈ ಭಾವಕ್ಕೆ ಅಪ್ಲೈ ಆಗುತ್ತೋ ಗೊತ್ತಿಲ್ಲ. ”ಯುಗಾವತಾರ” ಎಂಬ ಅವರ ಅತ್ಯಂತ ಬೋಧಕ ಕಾದಂಬರಿ ಸಹಾ ಅದೇ ಸಮಯದಲ್ಲಿ ಪ್ರಕಟವಾಯಿತು. ಅಂದಿನ ಕಾಲದ ಹುಡುಗರು, ಯುವಕರು ಹಾಗೂ ಇತಿಹಾಸ ವಿದ್ಯಾರ್ಥಿಗಳು ಛತ್ರಪತಿ ಶಿವಾಜಿ ಮಹಾರಾಜರ ಕಥೆಯನ್ನು ಓದಿ ಧನ್ಯರಾಗಿದ್ದಾರೆ.!
೮.೧೦ ಕ್ಕೆ ಊಟದ ಎರಡನೇ ಬೆಲ್ಲು ಹೊಡೀತಾರೆ ಎಂಬ ಮಾಹಿತಿ ಶೇಷಾದ್ರಿಯವರಿಗೆ ಸೂಚಿಸಿದ್ದೆ. ಎಂಟು ಘಂಟೆ ಐದು ನಿಮಿಷಗಳಿಗೆ ಮಾತು ಮುಗಿಸಿ ಅವರು ಹೊರಟರು. ಅದೊಂದು ಅಪೂರ್ವ ಸಂದರ್ಭ. ಎಲ್ಲಾ ಮಿತ್ರರಿಗೆ ಖುಷಿಯೋ ಖುಷಿ! ಇಂದಿಗೆ ಐವತ್ತಾರು ವರ್ಷಗಳೇ ಕಳೆದವು, ಆ ದಿನ ನನ್ನ ರೂಮಲ್ಲಿ ನಡೂವೆ ಖುರ್ಚಿಯ ಮೇಲೆ ಕುಳಿತು ಕಥೆ ಹೇಳುವ ಶೇಷಾದ್ರಿಯವರ ಮತ್ತು ಸುತ್ತಲೂ ಬಾಯಿ ಕಣ್ಣು ಬಿಟ್ಟುಕೊಂಡು ಆಲಿಸುತ್ತಿರುವ ನನ್ನ ಗೆಳೆಯರ ಚಿತ್ರ ಮನಃಪಟಲದಲ್ಲಿ ಇಂದಿಗೂ ಅಚ್ಚಳಿಯದೇ ಛಾಪಿಸಿದೆ!!
No comments:
Post a Comment