Saturday, December 24, 2022

ಅವರು ನನ್ನ ಅಣ್ಣ ಇದ್ದ ಹಾಗೆ ಸರ್

 

ಶ್ರೀ ನಾರಾಯಣ ಗಡಿಯಾರರು...

೧೯೭೦ರ ಮೇ ತಿಂಗಳ ಸುಮಾರಿಗೆ ನಮ್ಮ ಅದೃಷ್ಟಕ್ಕೋ ದುರಾದೃಷ್ಟಕ್ಕೋ ಹೆಬ್ರಿಯ ಹುತ್ತುರ್ಕೆಯಲ್ಲಿರುವ ಮುಳಿಮನೆ ಆಕಸ್ಮಿಕ ಬೆಂಕಿ ಬಿದ್ದು ಸುಟ್ಟು ಭಸ್ಮವಾಯಿತು. ನಾನು ಡಿಪ್ಲೋಮಾ ಕಲಿತು ಕೆಲಸದ ತಲಾಶಿಯಲ್ಲಿದ್ದೆ. ಮನೆ ಸುಟ್ಟು ಪೂರಾ ರಸ್ತೆಗೇ ಬಿದ್ದಂತಾಗಿತ್ತು. ಕಲಿತ ವಿದ್ಯೆಯ ಲೈನಲ್ಲಿ ಉದ್ಯೋಗ ಸಿಗುವ ಸಂಭವ ಕ್ಷೀಣವಾಗಿತ್ತು. ಮುಂದೆ ಗಾಢಾಂಧಕಾರ...

ಭಗವಂತ ಪಾಪದವರನ್ನು ತೀರಾ ಬಿಟ್ಟು ಹಾಕೂದಿಲ್ಲ, ನಮ್ಮ ಗಿಂಡ್ ಮಾಮನವರು ನನ್ನನ್ನು ಮಾನ್ಯ ಕೆ.ಕೆ.ಪೈಯವರಲ್ಲಿ ಕರಕೊಂಡು ಹೋಗಿ ಬಿನ್ನವಿಸಿಕೊಂಡು ಸಿಂಡಿಕೇಟು ಬೇಂಕಿನಲ್ಲಿ ಕ್ಲಾರ್ಕು ಕೆಲಸ ಸಿಗಲು ಕಾರಣರಾದರು. ಮಾನ್ಯ ಕೆ.ಕೆ.ಪೈ ಹಾಗೂ ನಮ್ಮ ಗಿಂಡುಮಾಮನವರಿಗೆ ನಾನು ಸದಾ ಋಣಿ. ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಕಲಿಯುವಾಗ ನಾನು ಬಹಳ ಆಶೆ ಆಸಕ್ತಿ ಹಾಗೂ ಕನಸುಗಳನ್ನು ಕಾಣುತ್ತಿದ್ದೆ. ಕನಸುಗಳೇ ಬೇರೆ, ವಾಸ್ತವಿಕದ ಕಾಠಿಣ್ಯವೇ ಬೇರೆ ಎಂದು ತಿಳಿಯಲು ಬಹಳ ಸಮಯ ಆಗಲಿಲ್ಲ. ನಾಲಕ್ಕು ದಿನ ಬೇಸರವಿತ್ತು. ವಾರದ ನಡುವಿನ ಮಂಗಳವಾರವೋ ಬುಧವಾರವೋ ಬೇಂಕಿನ ಹೆಡ್ ಆಫೀಸಿನ ಪ್ರಿಮೈಸಸ್ ಡಿಪಾರ್ಟ್ಮೆಂಟಿಗೆ, ಆರ್ಡರು ಸಿಕ್ಕಿದ ಒಂದು ವಾರದೊಳಗೆ ಹಾಜರಾಗತಕ್ಕುದು ಎಂಬ ನೇಮಕಾತಿ ಪತ್ರ ಸಿಕ್ಕಿತ್ತು. ಅಂತೆಯೇ ಬರುವ ಸೊಮವಾರ ಜೊಯಿನ್ ಆಗುವ ಯೋಚನೆಯಲ್ಲಿದ್ದೆ. ಹೆಬ್ರಿ ನರಸಿಂಹ ಶೆಣೈಯವರು ನಮ್ಮ ಹಿತೈಷಿಗಳು- ”ಸೋಮವಾರ ಮಂಗಳವಾರ ಎಂದು ದಿನ ನೋಡ್ತಾ ಕೂರಬೇಡ, ಆರ್ಡರು ಸಿಕ್ಕಿದ ಕೂಡಲೇ ಕೆಲಸಕ್ಕೆ ಹಾಜರಾಗು, ಎಷ್ಟು ಬೇಗ ಹಾಜರಾಗ್ತೀಯೋ ಅಷ್ಟೂ ಉತ್ತಮ ಮತ್ತು ಅದೇ ಶುಭದಿನ.” ಎಂದಾಗ ಅದೇ ಸರಿಯೆನಿಸಿ ಮರುದಿನವೇ ಮಣಿಪಾಲಕ್ಕೆ ಹೋಗಿ ರಿಪೋರ್ಟ್ ಮಾಡಿಕೊಂಡೆ. ದಿನಾಂಕ ೧೭-೦೨-೧೯೭೧ನೇ ಬುಧವಾರ, ನನ್ನ ಜೀವನದಲ್ಲಿ ಅದೊಂದು ಮೈಲುಗಲ್ಲು.

೧೯೬೯ರಲ್ಲಿ ಬೇಂಕುಗಳ ರಾಷ್ಟ್ರೀಕರಣವಾಗಿ ದೇಶಾದ್ಯಂತ ಶಾಖೆಗಳ ವ್ಯವಹಾರಗಳು ಗಣನೀಯವಾಗಿ ವೃದ್ಧಿಗೊಂಡವು, ಅದಕ್ಕೆ ಅನುಗುಣವಾಗಿ ಹೆಡ್ ಆಫೀಸಿನಲ್ಲೂ ಕೆಲಸಕಾರ್ಯಗಳೂ ಅಧಿಕವಾಗಿದ್ದವು. ಹುಡುಗಪ್ರಾಯದ - ೨೧ ವರ್ಷ - ಸಂಕೋಚ ಪ್ರವೃತ್ತಿಯ ಹೊಸ ಎಂಪ್ಲೋಯೀ ಹೆಬ್ರಿ ಕೇಶವ ನಾಯಕ ನನ್ನಷ್ಟಕ್ಕೆ ಕುಳಿತಿದ್ದೆ. ಹತ್ತಿರದ ಟೇಬಲ್ಲಿನ ಲೇಡಿ ಸ್ಟಾಫ್ ನನ್ನನ್ನು ನೋಡಿ ಮುಸಿ ಮುಸಿ ನಗುತ್ತಿದ್ದರು.

‘’ನನ್ನ ಗುರುತ ಆಯ್ತೋ?” ನನ್ನ ಸೀನಿಯರು ಒಬ್ಬರು ನನ್ನ ಟೇಬಲ್ಲಿಗೆ ಬಂದು ವಿಚಾರಿಸಿದರು.

‘’ಹೌದು, ನೀವು ಕೆ ಪಿ ಟಿ ಯಲ್ಲಿ ನನಗಿಂತ ಎರಡು ವರ್ಷ ಸೀನಿಯರ್ ಆಗಿದ್ದಿರಿ. ಹಾಸ್ಟೆಲ್ ನಲ್ಲಿ ನೋಡಿದ ನೆನಪು. ಹೆಸರು ಸರಿಯಾಗಿ ನೆನಪಿಲ್ಲ.”

‘’ಗುಡ್, ಗಡಿಯಾರ ಅಂತ. ಈಗ ನಿನಗೆ ಕೆಲಸದ ಬಗ್ಗೆ ಮಾಹಿತಿ ಕೊಡ್ತೇನೆ. ಬೇರೆ ಬೇರೆ ಬ್ರಾಂಚುಗಳಿಂದ ಫರ್ನಿಚರು, ಟೈಪ್ ರೈಟರು ಅದು ಇದು ಬೇಕು ಎಂದು ನಮ್ಮ ಆಫೀಸಿಗೆ ಇಂಡೆಂಟುಗಳು ಬರುತ್ತವೆ. ವಿನಂತಿಗಳನ್ನು ಪರಿಶೀಲಿಸಿ ಸೂಕ್ತ ಸ್ಯಾಂಕ್ಷನ್ ಮಾಡುತ್ತೇವೆ. ಕೆಲವು ಫೈಲುಗಳನ್ನು ಕೊಟ್ಟಿರುತ್ತೇನೆ. ಅವುಗಳನ್ನು ಓದು, ಮುಂದೆ ನಿನಗೇ ತಿಳೀತದೆ.” ಬಂದ ಫೈಲುಗಳನ್ನು ಬಿಡಿಸಿ ಓದಿದೆ, ಏನೂ ಅರ್ಥವಾಗಲಿಲ್ಲ. ಕೊಂಚ ಸಮಯದ ನಂತರ ಸಣ್ಣಗೆ ಕುರುವಣಿ ಸುರುವಾಯ್ತು. ಮಧ್ಯಾಹ್ನ ಊಟಕ್ಕೆ ಕರೆದರು. ಊಟದ ನಂತರ ಮತ್ತೆ ಕುರುವಣಿ.... ಹತ್ತಿರದ ಮೇಜಿನ ರಘುರಾಮ ಆಚಾರ್ಯರು ತುಂಬ ತಿಳುವಳಿಕೆಯ ದೋಸ್ತು, ಪ್ರೀತಿ ಹಾಗೂ ಸಮಾಧಾನದಿಂದ ಗೈಡು ಮಾಡುತ್ತಿದ್ದರು. ಕ್ರಮೇಣ ವೃತ್ತಿಯಲ್ಲಿ ಪಳಗಿದೆ.

ನಮಗೆ ಅನ್ನ, ಆಶ್ರಯ ಹಾಗೂ ಗೌರವ ಎಲ್ಲ ಕೊಡುವುದು ಬೇಂಕು, ಆದ್ದರಿಂದ ಸಂಸ್ಥೆಗೆ ನಾವು ಸದಾ ನಿಷ್ಟೆಯಿಂದಿರಬೇಕು ಎಂಬ ಮೊದಲ ಪಾಠ ಬೋಧಿಸಿದ್ದು ಗಡಿಯಾರರು. ತಾನು ಸ್ವತಹ ಸದಾ ಕರ್ತವ್ಯದಲ್ಲಿ ಮಗ್ನ. ಆಪೀಸಿನ ಡ್ಯೂಟಿಯಲ್ಲದೇ ಯಾರು ಯಾವ ಟೈಮಲ್ಲಿ ಬಂದು ಕೇಳಿದರೂ ಹಸನ್ಮುಖರಾಗಿಯೇ ಅವರ ಕೆಲಸವನ್ನು - ಹೊಸಮನೆ ನಕ್ಷೆ, ಇಂಟೀರಿಯರ್ಡಿಸೈನು-ಡೆಕೊರೇಷನ್ನು ಇನ್ನಿತರೇ - ಮಾಡಿಕೊಡುತ್ತಿದ್ದರು. ಯಾವಾಗ ನೋಡಿದರೂ ತನ್ನ ಟೇಬಲ್ ಮೇಲೆ ರಾಶಿ ಫೈಲುಗಳನ್ನು ಇಟ್ಟುಕೊಂಡು ಕೆಲಸದಲ್ಲೇ ಮಗ್ನ..! ಮನುಷ್ಯ ಯಾವಾಗ ಮನೆಗೆ ಹೋಗ್ತಾರೆ, ಬ್ಯಾಂಕಿಗೆ ಯಾವಾಗ ಬರುತ್ತಾರೆ ಎಂದು ಕಂಡುಹಿಡಿಯಲು ನನಗಾಗಲಿಲ್ಲ. ಆಫೀಸು, ಸ್ವಂತ ಅಥವಾ ಅನ್ಯ ಹೀಗೆ ಯಾವುದೇ ಕೆಲಸವಿರಲಿ ಯಾವುದೇ ಸಮಸ್ಯೆಯಿರಲಿ ಗಡಿಯಾರ ಬೇಕು. ”ಕಸಲೇಂ ಪ್ರೊಬ್ಲೇಮ ಆಸ್ಸೊಂ, ಗಡಿಯಾರಾಲೆ ಸಾಂಗ್ಲೆ ಸೈ, ಯೆಚ್ಚಾನ ನಾ....”(ಯವುದೇ ಪ್ರೊಬ್ಲೆಮ್ ಇರಲಿ, ಗಡಿಯಾರರ ಬಳಿ ಹೇಳಿದರೆ ಸೈ, ಯೊಚನೆಯೇ ಇಲ್ಲ....) ಎಂಬ ಪೂರ್ಣ ಭರವಸೆ ಎಲ್ಲರಲ್ಲೂ ಇತ್ತು. ’ಬಿಟ್ಟಿ ಕಮಿಟಿ ಸೆಕ್ರೆಟರಿ ಎಂಬ ಬಿರುದು ಅವರಿಗಿತ್ತು, ಈ ಕಮಿಟಿಯ ಛೆಯರ್ಮೇನು ಶ್ರೀ ವಿಜಯನಾಥ ಶೆಣೈ. ಅವರ ಕಥೆ ಇಲ್ಲಿ ಬೇಡ.

ಶ್ರೀ ಕೆ. ಸಿ. ಪೈಯವರು ನಮ್ಮ ಬಾಸು. ತುಂಬಾ ಒಳ್ಳೆಯ ಮನುಷ್ಯ. ಡಿಪಾರ್ಟಮೆಂಟಿನ ಸ್ಟಾಫ್ ಎಷ್ಟು ಕೆಲಸ ಮಾಡಿದರೂ ಬೇಸರವಿಲ್ಲ. ದೇವರ ದಯದಿಂದ ನಮ್ಮ ಕೆಲಸ ಮುಗಿಯುದೆಂದೇ ಇಲ್ಲ, ಮುಗಿದರೆ ಅವರ ಬಳಿ ತಕ್ಷಣ ಆಗಲೇಬೇಕಾಗಿದ್ದ ಭಾರೀ ಅರ್ಜಂಟ್ ಕೆಲಸ ರೆಡೀ ಇರುತ್ತಿತ್ತು. ಆಫ್ ಕೋರ್ಸ್ ತಾನು ಸದಾ ಕೆಲಸ ಕೆಲಸ ಅಂತ ಮಗ್ನರಾಗಿಯೇ ಇರುತ್ತಿದ್ದರು. ನಾನು ಮತ್ತು ನರಸಿಂಹ ನಾಯಕ ಇಬ್ಬರು ಹುಡುಗು ಪ್ರಾಯದವರು ಬಂದದ್ದು ಸೀನಿಯರ್ಸ್ಗಳಿಗೆ ಗಮ್ಮತ್ತಾಯಿತು. ಸಂಜೆ ಆರೂವರೆ ನಂತರ ಕೇಬಿನ್ನಿಗೆ ನಮ್ಮನ್ನೆಲ್ಲ ಕರೆಸಿ ಡ್ಯೂಟಿಯ ಬಗ್ಗೆ ಅದು ಇದು ಚರ್ಚೆ ನಡೆಸುವಾಗ ಗಡಿಯಾರ, ಮಲ್ಯ, ಕಾಮತಿ ಮತ್ತೊಬ್ಬ ಯಾರಾದರೊಬ್ಬ ಸೀನಿಯರು ಏನಾದರೂ ಕಡ್ಡಿ ಎತ್ತಿ ಹಾಕಿ ಇದ್ದವರ ಪೈಕಿ ಜ್ಯೂನಿಯರ್ಮತ್ತು ಪಾಪದಂವ - ಹಳ್ಳಿಗಮಾರ!- ಆದ ಕೇಶವ ನಾಯಕನ ತಮಾಷೆ ಕುಶಾಲು ಮಾಡಿ ನಗೆಚಾಟಿಕೆ ಹುಡಿ ಹಾರಿಸಿ ನಗುವುದೂ, ಲೇವಡಿ ಮಾಡುವುದೂ ಆಗಾಗ ನಡೀತಿತ್ತು. ಏನೇ ತಮಾಷೆ ಜೋಕುಗಳಿದ್ದರೂ ಡ್ಯೂಟಿಯಲ್ಲಿ ಯಾವುದೇ ನ್ಯೂನತೆ ಗಳನ್ನು ಬಾಸು ಸಹಿಸೂದಿಲ್ಲ. ಇಷ್ಟಿದ್ದರೂ ಡಿಪಾರ್ಟುಮೆಂಟು ಒಂದು ಕುಟುಂಬದಂತೆ ಇತ್ತು. ಬೇಂಕಿನ ಮೇಲೆ ಎಲ್ಲರಿಗೂ ಬಹಳ ಗೌರವ ಭಕ್ತಿ ಇತ್ತು.

ಕೆ.ಸಿ.ಪೈಯವರ ಮಗನ ಉಪನಯನಕ್ಕೆಆಫೀಸಿನವರು ಒಟ್ಟಾಗಿ ಚೆನ್ನಾಗಿ ಸಿಂಗರಿಸಿಕೊಂಡು ಹೋದೆವು. ಎದೂರಿಗೆ ಛೆಯರ್ಮೇನ್ ಕೆ.ಕೆ.ಪೈ ಯವರು ಕೋಟಿನ ಮೇಲೆ ಗುಲಾಬಿ ಹೂ ಸಿಕ್ಕಿಸಿಕೊಂಡು ಹಸನ್ಮುಖರಾಗಿ ಬಂದವರನ್ನೆಲ್ಲಾ ಸ್ವಾಗತಿಸುತ್ತಿದ್ದರು. ಎಲ್ಲರನ್ನೂ ಉಚಿತ ರೀತಿಯಲ್ಲಿ ಆದರದಿಂದ ಒಳಗೆ ಕರಕೊಳ್ಳುತ್ತಿದ್ದರು. ನನ್ನ ನೆನಪು ಇದ್ದಂತೆ ಮುಗುಳು ನಗುತ್ತಿದ್ದ ಕೆ ಕೆ ಪೈ ಯವರ ಹಸ್ತಲಾಘವ ಮಾಡಿದ್ದು ಅದೇ ಮೊದಲು ಹಾಗೂ ಕೊನೆಯದು. ಎಲ್ಲ ಕಾರ್ಯಕ್ರಮಗಳು ಮುಗಿದು ಅತಿಥಿಗಳ ನಿರ್ಗಮನಾನಂತರ ಮನೆಯಲ್ಲಿ ಕೂತು ಆರಾಮಾಗಿ ಕುಶಲೋಪರಿ ಮಾತುಕತೆಗಳು ಸಾಗಿತ್ತು. ಕೇಶವ ನಾಯ್ಕ ಭಾರೀ ಶೋಕ್ ಪದ ಹಾಡ್ತಾನೆ ಎಂದು ಗಡಿಯಾರರ ಘೋಷಣೆಯಾಯ್ತು, ನಾನೂ ಒಳ್ಳೇ ಹುರುಪಿನಲ್ಲಿದ್ದೆ.....

 ‘’ರಾತ್ ಕಲೀ ಇಕ್ ಖ್ವಾಬ್ ಮೇ ಆಯೀ 

ಔರ ಗಲೇ ಕಾ ಹಾರ ಹುಯೀ

ಸುಬಹ್ ಕೋ ಜಬ ಹಮ್ ನೀಂದಸೆ ಜಾಗೇ 

ಆಂಖ್ ಉನ್ಹೀ ಸೆ ಚಾರ್ಹುಯೀ........ "

ಹಾಡನ್ನು ಹಾಡಿಯೇ ಹಾಡಿದೆ. ಎಲ್ಲರಿಗೂ ಖುಷಿಯೋ ಖುಷಿ, ಖೂಬ್ ಚಪ್ಪಾಳೆ ಬಿದ್ದವು. ಮಿಸೆಸ್ ಪೈಯವರೂ ಸಹ ಶಭಾಷ್ ಗಿರಿ ಕೊಟ್ಟರು. ”ಹುಡುಗ ಚೆನ್ನಾಗಿ ಹಾಡ್ತಾನೆ...”

‘’ಹುಡೂಗ ಒಳ್ಳೇದಾಗಿ ಹಾಡ್ತಾನೆ, ಮೇಲಾಗಿ ಒಳ್ಳೊಳ್ಳೆ ಕನಸುಗಳೂ ಬೀಳ್ತಾವೆ, ಅವುಗಳಲ್ಲಿ ಯಾರು ಯಾರೋ ಬರ್ತಾರೆ....” ಗಡಿಯಾರರ ಕಡ್ಡಿ ಕೀಟಲೆ ಶುರುವಾಯಿತು. ಅದಕ್ಕೆ ಮಲ್ಯರ ಒಗ್ಗರಣೆ ಬೇರೆ. ತುಂಬ ಹೊತ್ತು ನನ್ನ ಛೇಡ್ ಖಾನಿ ನಡೀತು.

ಇವತ್ತಿಗೂ ಪದ್ಯದ ನಾಲ್ಕು ಸಾಲುಗಳು ಹಾಗೂ ದಿನದ ನಾಲ್ಕು ಸಂತಸದ ಘಳಿಗೆಗಳು ನೆನಪಿವೆ.

----೦೦೦----

ಬೆಳಗ್ಗೆ ಬೇಗ ಹೊರಟರೂ ಮಂಗಳೂರು ಝೋನಲ್ ಆಫೀಸು ತಲಪುವಾಗ ಹನ್ನೊಂದರ ಹತ್ತಿರವಾಗಿತ್ತು. ಸ್ವಲ್ಪ ಸುಧಾರಿಸಿ ಕ್ರಾಪು ಗೀಪು ಸರಿಮಾಡಿಕೊಂಡು ಮೇಲೆ ಪರ್ಸನಲ್ ಸೆಕ್ಷನ್ನಿನ ಶ್ರೀ ಗೋವಿಂದ ಭಟ್ಟರ ಟೇಬಲ್ ಎದುರು ನಿಂತೆ. ಫೋನಿನಲ್ಲಿ ಯಾರೊಡನೆಯೋ ಮಾತಾಡುತ್ತಿದ್ದವರು ಕುಳಿತುಕೊಳ್ಳಲು ಸನ್ನೆ ಮಾಡಿದರು.

‘’ನಾನು ಕೊಲ್ಲೂರು ಬ್ರಾಂಚಿನಿಂದ ಬರುತ್ತಾ ಇದ್ದೇನೆ.”

‘’ಓಹೋಹೋ ಗ್ರೇಟ್ ಕೇಶವ ನಾಯಕ್, ಬನ್ನಿ ಬನ್ನಿ.” ವ್ಯಂಗ್ಯವೋ ಕುಹಕವೋ ಒಂದು ತೆರನ ಸ್ವಾಗತ ದೊರೆಯಿತು. ಹೆಡ್ ಆಫೀಸಿನವರ ಹಣೆಬರಹವೇ ಇಷ್ಟು, ತಾವು ಬ್ರಾಂಚಿನವರಿಗಿಂತ ಬುದ್ಧಿವಂತರು, ತಿಳಿದವರು., ಬ್ರಾಂಚಿನವರಿಗೆ ಎಷ್ಟು ಹೇಳಿದರೂ ಮಂಡೆ ಒಳಗೆ ಹೊಕ್ಕೂದಿಲ್ಲ ಎಂಬ ಧಿಮಾಕಿನ ಸಣ್ಣ ಕೋಡು ತಲೆಯಲ್ಲಿ ಬೆಳೆದಿರುತ್ತಿದೆ. ಅದರಲ್ಲೂ ಪರ್ಸನಲ್ ಡಿಪಾರ್ಟ್ಮೆಂಟಿನವರಿಗೆ ಎರಡು ಕೋಡುಗಳು. ಇವರಿಗೆ ಯಾರೂ ಎದುರುತ್ತರ ಕೊಡೂದಿಲ್ಲ, ಹಾಗಾಗಿ ಯಾರಾದರೂ ತಮ್ಮ ಕೆಲಸಕ್ಕಾಗಿ ಬಂದಾಗ ಟಿಂಗಲ್ ಮಾಡಿ ನಗೂದು ಚೇಷ್ಟೆ ಮಾಡುವುದು ನಡೆಯುತ್ತಿತ್ತು.....

ಒಂದೂ ಹತ್ತರ ಟೈಮಿಗೆ ಛೆಯರ್ಮೇನರ ಅಟೆಂಡರ್ಗಡಿಬಿಡಿಯಿಂದಛೇರ್ಮೇನ್ ಕರೀತಾರೆ, ಬೇಗ ಬನ್ನಿ, ಬೇಗ ಬೇಗ..” ದಡಬಡ ಅವರ ಆಫೀಸಿಗೆ ಧಾವಿಸಿದೆ. ಅಧ್ಯಕ್ಷರು ಸಿಟ್ಟಿನಿಂದ ಕೆಂಪು ಕೆಂಪಾಗಿದ್ದರು.! ನನಗೆ ಝಗ್ ಆಯಿತು, ಬೆಳಗ್ಗೆ ಎಲ್ಲ ಸರಿಕಟ್ಟು ನೋಡಿಕೊಂಡು ಹೋಗಿದ್ದೆ, ಇದೇನು ತಾಪತ್ರಯ ಬಂತು..!

‘’ನೋಡು ಮಿ. ನಾಯಕ್, ಈಗ ಸ್ಟಾಫ್ ಸೆಕ್ಷನ್ ನನ್ನ ಆಫೀಸಿಗೆ ಮುಖ ಮಾಡಿ ಇದೆ. ನಾನೀಗ ಊಟಕ್ಕೆ ಹೋಗ್ತಾ ಇದ್ದೇನೆ. ಬೈ   ಟೈಮ್ ರಿಟರ್ನ್ ಹೋಲ್ ಬ್ಲಡಿ ಡಿಪಾರ್ಟ್ಮೆಂಟ್ ಶುಡ್ ಫೇಸ್ ಅದರ್ಸೈಡ್ ದಟ್ ಮೀನ್ಸ್ ಕೇ ಏಮ್ ಸೀ, ಅಂಡರ್ಸ್ಟುಡ್? ಆರ್ಶಲ್ ಹೇವ್ ಟು ರಿಪೀಟ್?” ಘರ್ಜಿಸಿದರು.

‘’ಯಸ್ ಸರ್‍!” ನನಗೆ ಸಂದರ್ಭ ಅರ್ಥವಾಗಲಿಲ್ಲ.

‘’ಗುಡ್, ದೆನ್ ಗೆಟ್ ಸ್ಟಾರ್ಟೆಡ್.” ಅಧ್ಯಕ್ಷರು ಊಟಕ್ಕೆ ಹೋದರು. ಅವರೊಟ್ಟಿಗೆ ಅಲ್ಲಿದ್ದ ಇತರರೂ ಹೊರಬಂದೆವು.

ಅಧ್ಯಕ್ಷರ ಬಳಿ ಅನೇಕ ಮಂದಿ ತಮ್ಮ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ಬಂದು ಕಾಯುತ್ತ ಇರ್ತಾರೆ, ಅದರಂತೆ ವಿವಿಧ ಸಂಸ್ಥೆಗಳ ಹಿರಿ ಕಿರಿಯ ಅಧಿಕಾರಿಗಳು, ಊರಿನ ಮಹನೀಯರೂ ಬಂದಿರುತ್ತಾರೆ. ಅಧ್ಯಕ್ಷರ ಛೇಂಬರಿನ ಹೊರಗೆ ಅವರಿಗೆಲ್ಲ ಆಸನಗಳ ವ್ಯವಸ್ಥೆ. ಸರ್ವೇಸಾಮಾನ್ಯ ಹೆಚ್ಚಿನವರು ಕೊಂಚ ಆತಂಕಿತ ಭಾವದಲ್ಲಿರುತ್ತಾರೆ. ಅದು ಸಹಜ. ಸ್ಟಾಫ್ ಸೆಕ್ಷನ್ನಿನ ಹುಡುಗಿಯರು ಕೂತಲ್ಲೇ ಜನರನ್ನು ನೋಡಿ ವ್ಯಂಗ್ಯ ಮಾಡಿ ಅನವಶ್ಯ ನಗುವ ಚಾಳಿ ಬೆಳೆಸಿಕೊಂಡಿದ್ದರು. ದಿನ ಯಾವುದೋ ಬೇಂಕಿನ ಉನ್ನತ ಅಧಿಕಾರಿ ಒಬ್ಬರು ಉಪದ್ವ್ಯಾಪಕ್ಕೆ ಗುರಿಯಾದರು. ಬೇಸರಗೊಂಡ ಅವರು ಅಧ್ಯಕ್ಷರ ಬಳಿ ದೂರಿತ್ತರು. ಅಧ್ಯಕ್ಷರಿಗೆ ಕಂಡಾಪಟ್ಟೆ ಸಿಟ್ಟು ನೆತ್ತಿಗೇರಿ ಸ್ಟಾಫ್ ಸೆಕ್ಷನ್ನಿನ ಡೀ ಎಮ್ ರನ್ನು ಕರೆದು ಚನ್ನಾಗಿ ಉಗಿದರು. ನಂತರ ಸಾರ್ವಜನಿಕರ ಸೀಟಿಂಗ್ ವ್ಯವಸ್ಥೆ ಗ್ರೌಂಡ್ ಫ್ಲೋರಿನಲ್ಲೇ ಶುರುವಾಯಿತು. ಅದರೆ ಇವರ ಕುಹಕ ಬುದ್ಧಿ ಮಾತ್ರ ಕಡಿಮೆಯಾಗಲಿಲ್ಲ. ಇರಲಿ ವಿಷಯಾಂತರ ಬೇಡ.

‘’ನನ್ನ ಹೆಸರು ನಿಮಗೆ ಹೇಗೆ ಗೊತ್ತು?”

‘’ನೀವು ಭಾರಿ ಭಾರೀ ಫೇಮಸ್ಸು ಮಹರಾಯರೇ. ಗಡಿಯಾರ ಅಂತೆ! ಮಲ್ಯ ಅಂತೆ! ಸುಬ್ಬ ಅಂತೆ! ಶುಂಠಿ ಅಂತೆ! ಇವರೆಲ್ಲ ನಿಮ್ಮ ಇನ್ ಫ್ಲೂಯೆನ್ಸ್ ಮಾಡಲು ತಿರುಗುತ್ತ ಇದ್ದಾರೆ. ಇಲ್ಲಿ ದಲ್ಲಾಲಿ ಮಾಡಲಿಕ್ಕೆ ಎಷ್ಟು ಜನ ಇಟ್ಟಿದ್ದೀರಿ?” ಒಂದು ಅನಗತ್ಯ ಡೈಲಾಗು ಹೊಡೆದರು.

‘’ನೋಡಿ ಸ್ವಾಮಿ, ನನಗೆ ಗಡಿಯಾರ ಮತ್ತು ಮಲ್ಯರು ಗೊತ್ತು. ನಾನು ಹಿಂದೆ ಪ್ರಿಮೈಸಸ್ ಡಿಪಾರ್ಟಮೆಂಟಲ್ಲಿ ಕೆಲಸ ಮಾಡಿದವ. ನನ್ನನ್ನು ಕೊಲ್ಲೂರಿನಿಂದ ಎತ್ತಿ ಎಲ್ಲಿಯೋ ಎಸೆದಿದ್ದಾರೆ! ಸ್ವಲ್ಪ ಹೆಲ್ಪ್ ಮಾಡು ಮಾರಾಯ! ಎಂದು ಗಡಿಯಾರರ ಬಳಿ ರಿಕ್ವೆಸ್ಟ್ ಮಾಡಿದ್ದೆ, ಮತ್ತೆ ಯಾರೇ ಸುಬ್ಬ ಶುಂಠಿಗಳ ಗುರ್ತ ನನಗಿಲ್ಲ. ಈಗ ನನ್ನ ವಿಷಯಕ್ಕೆ ಬರುವ ಸರ್‍, ನಾನು ದಿಲ್ಲಿಯಲ್ಲಿ ಆರು ವರ್ಷ ಸರ್ವೀಸ್ ಮಾಡಿ ಊರಿಗೆ ಅರ್ಜಿ ಹಾಕಿದಾಗ ನೀವು ಕೊಲ್ಲೂರಿಗೆ ಕಳಿಸಿದಿರಿ. ಕೊಲ್ಲೂರು ಅಂದರೆ ಎಂಡ್ ಒಫ್ ವರ್ಲ್ಡ್! ಏನೇ ಆಗಲಿ ಎಂದು ಮೂರು ವರ್ಷ ಕೆಲಸ ಮಾಡಿ ಅರ್ಜಿ ಹಾಕಿದರೆ ನೀವು ಪುನಃ ನನ್ನನ್ನು ನವಲಗುಂದಕ್ಕೆ ಟ್ರಾನ್ಸ್ ಫರ್ಮಾಡಿದರೆ ಹೇಗೆ ಸರ್‍! ಒಂದು ನ್ಯಾಯ ಬೇಡವೇ?”

‘’ನಾವು ಇಲ್ಲಿ ನ್ಯಾಯ ಮಾಡಲು ಕೂತದ್ದಲ್ಲ. ಕೆಲಸ ಮಾಡಲು ಕೂತದ್ದು. ಅಲ್ಲ ನಿಮಗೆ ನಮ್ಮ ಕತೆ ಗೊತ್ತಿದ್ದೂ ಧಾರವಾಡ ಕೇಳಿದ್ದೇಕೆ ಮತ್ತೆ?”

‘’ಧಾರವಾಡ ಸಿಟಿಯ ಯಾವುದಾದರೂ ಒಂದು ಬ್ರಾಂಚು ಎಂದು ಬರೆದಿದ್ದೆ!”

‘’ಪುನಃ ಅದೇ ಮಾತು! ನೀವು ಧಾರವಾಡ ಸಿಟಿ ಕೇಳಿದ್ದು, ನಾವು ಧಾರವಾಡ ಜಿಲ್ಲೆಯ ಬ್ರಾಂಚಿಗೆ ಆರ್ಡರ್ಹಾಕಿದ್ದೇವೆ. ಈಗ ಎಂಥದು, ನೀವು ಹೋಗ್ತೀರೋ ಇಲ್ಲವೋ? ಏಕೆಂದರೆ ಕೊಲ್ಲೂರಿಗೆ ಜನ ಹಾಕಬೇಕಲ್ಲ.”

‘’ಇಲ್ಲ ನಾನು ಕೊಲ್ಲೂರಿಗೆ ವಾಪಾಸು ಬರೂದಿಲ್ಲ ಅಂತ ಶಪಥ ಹಾಕಿ ಬಂದಿದ್ದೇನೆ. ನೀವು ನನಗೆ ಇಲ್ಲೇ ಯಾವುದಾದರೊಂದು ಬ್ರಾಂಚಿಗೆ ವರ್ಗ ಕೊಡಿ ಮಾರಾಯರೇ.” ವಿನಂತಿ ಮಾಡಿದೆ.

‘’ನಿಮ್ಮ ಶಪಥ ಮುರಿಯಬಾರದೆಂದರೆ ನವಲಗುಂದಕ್ಕೆ ಹೋಗಿ, ತಾಲೂಕು ಕೇಂದ್ರ ಅದು. ದೊಡ್ಡ ಬ್ರಾಂಚು, ಬಿಸಿನೆಸ್ ಸೆಂಟರು. ಸ್ಟಾಫು ಕೂಡಾ ಒಳ್ಳೆಯವರಿದ್ದಾರೆ.” ಪುಕಳಾಯಿಸಿದರು.

‘’ಅದು ತುಂಬ ಕಷ್ಟ ಸರ್‍, ನೀವು ನನಗೆ ಹೆಲ್ಪ್ ಮಾಡಲೇ ಬೇಕು.”

‘’ಒಂದು ಕೆಲಸ ಮಾಡಿ, ನವಲಗುಂದ ಆಗದಿದ್ದರೆ ಕುಂದಗೋಳಕ್ಕೆ ಹೋಗ್ತೀರಾ?”

‘’ಅದೇನೋ ಹೇಳ್ತಾರಲ್ಲ, ಬಿಸಿ ಕಾವಲಿಯಿಂದ ಒಲೆಗೆ ಬಿದ್ದ ಹಾಗೆ!”

‘’ಕುಂದಗೋಳ ಹುಬ್ಬಳ್ಳಿಗೆ ಹತ್ತಿರ ಮಾರಾಯರೇ, ಹುಬ್ಬಳ್ಳಿಯಲ್ಲಿ ಸ್ಟೇ ಮಾಡಿ, ಅಪ್ ಎಂಡ್ ಡೌನ್ ಮಾಡಿ. ನಿಮಗೆ ಅನುಕೂಲ ಆಗ್ತದೆ.”

‘’ಕುಂದಗೋಳ ಲಾಯೇಕ ಗಾಂವು, ಕಸ್ಸಲೇಂ ಕಿರಿಕಿರಿ ನಾ.” (ಕುಂದಗೋಳ ಒಳ್ಳೆಯ ಊರು ಯಾವುದೇ ಕಿರಿಕಿರಿ ಇಲ್ಲ) ತನ್ನ ಯಾವುದೋ ಕೆಲಸಕ್ಕೆ ಬಂದ ವಂಡ್ಸೆಯ ಮೆನೆಜರು ಒಂದು ಫ್ರೀ ಒಗ್ಗರಣೆ ಸಿಡಿಸಿದರು. ನನಗೆ ಇವರ ಡೈಲಾಗೇ ಕಿರಿಕಿರಿ ಆಯಿತು.

‘’ನನಗೆ ಸ್ವಲ್ಪ ಟೈಮ್ ಕೊಡಿ ಸ್ವಾಮಿ.”

‘’ಕೊಲ್ಲೂರಿಗೆ ಯಾವ ಮಾತ್ರಕ್ಕೂ ವಾಪಸು ಹೋಗೂದಿಲ್ಲ ಅಂತ ಶಪಥ ಹಾಕಿದ್ದೀರಲ್ಲ. ಕುಂದಗೋಳ ಒಳ್ಳೇ ಊರು, ಏನಂತ ನಾಳೆಯೊಳಗೆ ಬರೆದು ಕೊಡಿ, ನಮಗೆ ಹೆಚ್ಚು ಟೈಮಿಲ್ಲ.”

ಕುಂದಗೋಳ ಆಗಬಹುದೆಂದು ಬರಕೊಟ್ಟು ಆರ್ಡರ್ಹಿಡಕೊಂಡು ಹುಬ್ಬಳ್ಳಿಗೆ ಬಂದೆ.

‘’ಇದು ಕುಂದಗೋಳ ಬ್ರಾಂಚೇನು? ನಾನು ಕೇಶವ ನಾಯಕ್ ಮಾತನಾಡುತ್ತ ಇದ್ದೇನೆ.” ಹುಬ್ಬಳ್ಳಿಯಿಂದ ಟೆಲಿಫೋನ್ ಕರೆ ಮಾಡಿದೆ.

‘’ಹೂಂನ್ರಿ ಸರ, ನಿಮ್ಮನ್ನೇ ಕಾಯ್ತಾ ಇದೀವಿ ಸರ್‍. ಎದಗ್ ಬರತೀರಿ ಸರ?’ ಲಗೂನೆ ಬನ್ನಿ ಸರ್‍.”

‘’ಆಗಲಿ ನೋಡೋಣ.” ಎಂದು ಫೋನಿಟ್ಟೆ. ಹಾಗೇನೆ ಡಿವಿಜನಲ್ ಆಫೀಸಿನಲ್ಲಿ ಮಾತಾಡಿ ಹೋಗುವ ಎಂದು ಹುಬ್ಬಳ್ಳಿ ಡಿ ತಲುಪಿ ಮೊದಲಿಗೆ ಸಿಕ್ಕಿದ ಆಫೀಸರ್ಎದುರು ಕೂತೆ.

‘’ನೀವು ಕುಂದಗೋಳಕ್ಕೆ ಹೋಗುವ ಅವಶ್ಯಕತೆ ಇಲ್ಲ. ನಿಮ್ಮ ಆರ್ಡರ್ಸುಪರ್ಮಾರ್ಕೆಟ್ ಬ್ರಾಂಚ್ ಹುಬ್ಬಳ್ಳಿ ಎಂದು ಬದಲಾಗಿ ಬಂದಿದೆ.” ಅವರು ತಿಳಿಸಿದರು.

‘’ಎಲ್ಲಿದೆ ಬ್ರಾಂಚು?”

‘’ಇಲ್ಲೇ ಇದೆ ಮಾರಾಯರೆ, ನೀವು ಕೂಡಲೇ ಕೊಲ್ಲೂರಿಂದ ರಿಲೀವ್ ಆಗಿ ಇಲ್ಲಿ ಜಾಯಿನ್ ಆಗಿ.”

ಅಂತೆಯೇ ನಮ್ಮ ಹುಬ್ಬಳ್ಳಿ ಜೀವನ ಶುರುವಾಯಿತು. ಗುಪ್ತರ ಕಾಲವು ನಮ್ಮ ಭಾರತದ ಸುವರ್ಣಯುಗ ಎಂದು ಚರಿತ್ರೆ ಪಾಠಗಳಲ್ಲಿ ಓದಿದ್ದೆ. ಹುಬ್ಬಳ್ಳಿಯ ಜೀವನ ಕಾಲವು ನಮ್ಮೆಲ್ಲರ ಸುವರ್ಣಯುಗವೆಂದೇ ಹೇಳಬೇಕು. ಒಳ್ಳೆಯ ಮೆನೆಜರು, ಹಸನ್ಮುಖೀ ಪ್ರೀತಿಯ ಸಹೋದ್ಯೋಗಿಗಳು ಮತ್ತು ಸಹೃದಯೀ ಗ್ರಾಹಕರು.!! ಮಕ್ಕಳಿಗೂ ಉತ್ತಮ ದರ್ಜೆಯ ಶಾಲಾ ಕಾಲೇಜುಗಳು!! ಇನ್ನೇನು ಬೇಕು..!

ಶ್ರೀ ಗೋವಿಂದ ಭಟ್ಟರು ಯಾವುದೋ ಕಾರ್ಯನಿಮಿತ್ತ ಒಮ್ಮೆ ನಮ್ಮ ಶಾಖೆಗೆ ಬಂದಿದ್ದರು. ”ನನ್ನ ಪರಿಚಯ ಉಂಟಾ ಸ್ವಾಮೀ?” ಕೇಳಿದೆ.

‘’ಏನು ಹೇಳ್ತೀರಿ ನಾಯಕರೆ! ನೀವು ನಮ್ಮವರೇ ಅಲ್ವಾ! ನಮ್ಮಿಂದ ಆದಷ್ಟು ಮಟ್ಟಿಗೆ ಸಹಾಯ ನಾವು ಮಾಡ್ತೇವೆ. ಈಗ ನೀವು ಖುಷ್ ಹೌದಲ್ವಾ, ಅಷ್ಟಾದರೆ ಸೈ.”

‘’ನಿಮ್ಮಿಂದ ನನಗೆ ತುಂಬ ಅಂದರೆ ತಂಬಾನೇ ಸಹಾಯ ಅನುಕೂಲ ಆಗಿದೆ ಸರ್‍. ಒಳ್ಳೆಯ ಬ್ರಾಂಚು, ಒಳ್ಳೆಯ ಮೆನೇಜರ್ಮತ್ತೆ ಸ್ಟಾಫು.! ಅದೇನು ಸರ್‍, ನನ್ನ ಮೇಲೆ ದಯೆತೋರಿ ಇಷ್ಟು ಚೆನ್ನಾಗಿರೋ ಬ್ರಾಂಚಿಗೆ ವರ್ಗ ಮಾಡಿದಿರಿ? ತುಂಬಾ ಥ್ಯಾಂಕ್ಸ್ ಸರ್‍.’

‘’ಥ್ಯಾಂಕ್ಸ್ ಎಲ್ಲಾ ನಿಮ್ಮ ಗಡಿಯಾರರಿಗೆ ಹೇಳಿ. ಅವರೇ ಅಷ್ಟು ಉಮೇದು, ಮುತುವರ್ಜಿ ವಹಿಸಿ  ನಿಮ್ಮ ವರ್ಗಾವಣೆ ಯನ್ನು ಇಲ್ಲಿಗೆ ಮಾಡಿಸಿದ್ದು. ಅದು ಹಾಗಿರಲಿ, ನಿಮ್ಮ ಬಗ್ಗೆ ಅವರಿಗೆ ಏನಷ್ಟು ಮೋಕೆ?”

‘’ಅವರು ನನ್ನ ಅಣ್ಣ ಇದ್ದ ಹಾಗೆ ಸರ್‍.” ಮನಸ್ಸು ತುಂಬಿ ಬಂದು ಹೇಳಿದೆ.

‘’ಅವರು ಸಹ ಇದೇ ಮಾತು ಹೇಳಿದ್ದು ನಾಯಕರೆ! ಭಟ್ರೇ ಕೇಶವ ನಾಯಕ ನನ್ನ ತಮ್ಮ ಇದ್ದ ಹಾಗೆ. ನನ್ನ ಸ್ವಂತ ತಮ್ಮನ ವಿಚಾರದಲ್ಲಿ ನಿಮ್ಮ ಹತ್ರ ಇನ್ ಫ್ಲುಯೆನ್ಸಿಗೆಂದು ಬಂದರೆ ಹೇಗೋ ಹಾಗೇನೇ ಎಂದು ಎಣಿಸಿ ನೀವು ಅವನಿಗೆ ಹೆಲ್ಪ್ ಮಾಡಬೇಕು ಎಂದು ಸ್ವತಃ ಫೋನ್ ಮಾಡಿ ರಿಕ್ವೆಸ್ಟ್ ಮಾಡಿದ ಮೇರೆಗೆ ನಿಮಗೆ ಬ್ರಾಂಚ್ ಕೊಟ್ಟದ್ದು. ನಿಮ್ಮದು ಮತ್ತು ಅವರದು ಅಷ್ಟು ದೋಸ್ತಿಯಾ?”

‘’ದೋಸ್ತಿ ವಿಚಾರವೂ ಹೌದು, ಅವರ ಮನಸ್ಸೂ ಅಷ್ಟು ದೊಡ್ಡದು ಸರ್‍. ಅಂಥವರು ಸಿಗುವುದು ವಿರಳ.”

‘’ ಮಾತು ಇನ್ನೊಮ್ಮೆ ಹೇಳಿ.” ಭಟ್ಟರು ಸಮ್ಮತಿಸಿದರು.

 

 

 

 

 

 

 

      

No comments:

Post a Comment