Thursday, December 29, 2022

ತೆಂಕಿಲ - ಈಪೆದಾಯೆ

 

 

 

1978 ರಲ್ಲಿ ನಮ್ಮ ವಿವಾಹ ಆಯಿತು. ಮಗಳಿಗೆ ಹತ್ತಿರದಲ್ಲೇ ಸಂಬಂಧ ಆದದ್ದು ತಾಯಿಗೆ ಸಂಭ್ರಮ, ಪರಿಚಯದವನೇ ಆದ ಅಳಿಯ ಎಂದು ವಿಶೇಷ ಗೌರವ ಅಭಿಮಾನ. ವಾಸ್ತೇವ ಭಾವನವರ ಡ್ಯೂಟಿಯ ವ್ಯಾಪ್ತಿಯಲ್ಲಿ ಹೆಬ್ರಿಯೂ ಬರುತ್ತಿದ್ದು ಮನೆಗೆ ಬಂದಾಗ ಅಣ್ಣ ಅಣ್ಣ ಎಂದು ಇವಳ ಸಂಭ್ರಮ!

ಮೊದಲ ಸಲದ ಹೆರಿಗೆ/ಬಾಳಂತಿರ ತವರು ಮನೆಯಲ್ಲೇ ಆಗಬೇಕು ಎಂಬ ರೂಲ್ಸ್ ಪ್ರಕಾರ ಅಜೆಕಾರು ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಆಯಿತು. ಕಿಣಿಯರ ಮನೆಮಗಳ ಹೆರಿಗೆ ಎಂದು ಆಸ್ಪತ್ರೆ ಸ್ಟಾಫ್ ನವರ ವಿಶೇಷ ಕಾಳಜಿ.

ಗಂಡು ಮಗು ಆಗಿದೆ ಎಂಬ ಸುದ್ದಿ ಕೇಳಿ ಆಗ ತಾನೇ ಮೂರು ಸಹ ತುಂಬದ ಸತ್ಯೇಂದ್ರ ಮಗುವಿಗೆ ಕೊಡಲೆಂದು ಕೈಯಲ್ಲಿ ಚಾಕಲೇಟು ಹಿಡಕೊಂಡು ಪುಟು ಪುಟು ಒಂದೂವರೆ ಕಿ.ಮೀ ದೂರದ ಆಸ್ಪತ್ರೆಗೆ ನಡಕೊಂಡು ಬಂದಿದ್ದ. ಅವನಿಗೆ ನಂದಿನಕ್ಕ ಅಂದ್ರೆ ಜೀವ.

ನಂತರದ ದಿನಗಳಲ್ಲಿ ಆಗಾಗ ಅಜೆಕಾರು ಟ್ರಿಪ್ಪು ಆಗುತ್ತಿತ್ತು. ಬೆಳಗ್ಗೆ ತಿಂಡಿಗೆ ವಾಸ್ತೇವ ಭಾವಜಿ-ಮೋಕೆಯ ಸತ್ಯೇಂದ್ರ-ಕೇಶವ ಭಾವಜಿ-ತಿಲಕಾ... ತೆರನ ಪಂಕ್ತಿಯ ವ್ಯವಸ್ಥೆ. ಅನ್ಸೂಯಕ್ಕ ಬಿಸಿ ಬಿಸಿ ದೋಸೆ ಸರ್ವ್ ಮಾಡೂದು ಅದು ಇದು ಮಾತಾಡುತ್ತ ತಿಂಡಿ ಸಮಾರಾಧನೆ ಕ್ರಮ. "ತೆಂಕಿಲೇಕ ಭಾಲ್ತಾ, ಸಾನ್ ಸುಮಾರಾ ನಾ ತೋ ಹ್ಞಾಂ" ಎಂದು ಮಧ್ಯೆ ಮಧ್ಯೆ ಭಾವಜಿಯವರ ಡೈಲಾಗು.

"ಕೇಶವು ಭಾವಜೀ, ತೆಂಕಿಲ ಮ್ಹಳೇರಿ ಕೋಣ್ ಮ್ಹೊಣು ಗೊಸ್ಸ್ ಕೀ?"

"ನಾರೇ ಬಾಬ್ಬಾ! ಕೋಣಾಸ್ಸೆ ಪೂರೋ?"

"ಹಾಂವಚೀ, ಆನ್ನಾನ ಮಾಕ್ಕ ಗೊತ್ನಾ ಮೋಣು ಲೆಕ್ಲಾಂ, ತೆಂಕಿಲ ಮ್ಹಳೇರಿ ಹಾಂವ" ಜ್ಯೂನಿಯರ್ ಕಿಣಿಯ ಸ್ಪಷ್ಟನೆ.

ಎರಡು ವರ್ಷಗಳ ನಂತರದ ಭೇಟಿ. ಪುನಃ ಬೆಳಗಿನ ತಿಂಡಿಯ ಸೀನು....

"ಕೇಶವು ಭಾವಜಿ, ಆತ್ತ ಹಾಂವ ತೆಂಕಿಲ ನ್ಹಂಯೀ,"

"ಆತ್ತ ತೆಂಕಿಲ ಕೋಣ?"

"ವಿಕ್ರಮು, ಆತ್ತ ತೋ ತೆಂಕಿಲ. ಆನಿ ಹಾಂವ ಈಪೆದಾಯೆ. ನ್ಹಂವೇ ಆನಾ.!" ‌‌ಐದರ ಮಗು ಸತ್ಯೇಂದ್ರನಿಗೆ ಬಹಳ ಹೆಮ್ಮೆ..

ಒಂದು ರಸಮಯ ಘಳಿಗೆಯ ಮೆಮೋರಿ ಬಟನನ್ನು ಪುನಃ ಒತ್ತಿದ್ದೇನೆ.

ಕಾಣಿ ಆಯ್ಕೂಚೆ ಸಂಭ್ರಮು

 

 

ಕಾಣಿ ಆಯ್ಕುಚೇ ಸಂಭ್ರಮು..

ಸಾವಿರದಾ ಒಂಭೈನೂರಾ ಎಪ್ಪತ್ತರ ದಶಕದ ಪೂರ್ವಾರ್ಧ ಇರಬಹುದು. ಒಂದು ಶನಿವಾರ ಮಧ್ಯಾಹ್ನ ಹೆಡ್ಡಾಫೀಸಿನ ಡ್ಯೂಟಿ ನಂತರ ಊಟ ಚಾ ಮುಗಿಸಿ ಹೆಬ್ರಿ ತಲಪುವಾಗ ಸುಮಾರು ನಾಲ್ಕೂವರೆ ಇರಬೇಕು, ಅಭ್ಯಾಸ ಬಲದಂತೆ ದೊಡ್ಡಪ್ಪನ ಮನೆಯತ್ತ ಕಾಲು ಹಾಕಿದೆ....

'ಆಯಿಲಗೋ, ಆಯಿಲೋ. ಸಕಡ ಯೆಯ್ಯಾ' ಎಂಬ ಗಲಾಟೆ ಸುರುವಾಯಿತು. 'ಪುಲಕ್ಕಾ, ಶಾಲ್ಲೀ ನಲ್ಲೀ ವಗ್ಗೀ ಯೆಯ್ಯಾಗೋ' ನಮ್ಮ ಶಾಂತಿಯೋ ರೇವತಿಯೋ ಎದುರು ಮನೆಯತ್ತ ಓಡಿದಳು. ಅರ್ಧ ದಾರಿಯಲ್ಲಿದ್ದ ಪಾಂಡು ಪೈಯವರ ಹಲಸಿನ ಮರ ದಾಟುವುದರೊಳಗೆ ಎದುರು ಮನೆಯ ಹುಡುಗಿಯರ ದಂಡು ಓಡೋಡಿ ಬಂತು.

'ಸ್ವಲ್ಪ ಮೆಲ್ಲ ಹೋಗಿ ಮಕ್ಕಳೇ, ಅವನದ್ದು ಕಾಪಿ ತಿಂಡಿ ಸಂಭ್ರಮ ಮುಗೀಲಿ, ಅಯ್ಯೋ ದೇವಾ! ಮಕ್ಕಳ ಗಡಿಬಿಡಿ ಕಂಡ್ರೆ ಸಾಕು' ಫುಲ್ಲಕ್ಕನ ಅಮ್ಮ ಶ್ರೀಮತಿ ಮಾಯಿಯವರ ಚಡಪಡಿಕೆ...

ಇಲ್ಲಿ ಮನೆಯಲ್ಲಿ ನನಗೆ ಬಿಸಿ ಬಿಸಿ ಕಾಫಿ ತಿಂಡಿಯ ಸಮಾರಾಧನೆ. ಆತಿಥ್ಯ ಮಾಡುದರಲ್ಲಿ ನಮ್ಮ ಚಿಕ್ಕಮ್ಮ 'ಪಾಚ್ಚಿ'ಯನ್ನು ಮೀರಿಸುವವರು ಯಾರೂ ಇಲ್ಲ. ತಿಂಡಿಯ ರುಚಿಗಿಂತಲೂ ಅವರ ಪ್ರೀತಿಯ ಸವಿಯೋ ಸವಿ. 'ಸಾಕು ಪಾಚ್ಚಿ, ನಾನು ಮಣಿಪಾಲದಲ್ಲಿ ತಿಂಡಿ ತಿಂದೇ ಬಂದಿದ್ದೇನೆ' ಎಂದರೆ 'ಇರಲಿ ಮಗಾ, ನೀವೆಲ್ಲಾ ಬೆಳೆಯುವ ಹುಡುಗರು, ಸರೀ ತಿನ್ನಬೇಕು.' ಪಾಚ್ಚಿಯ ನೆನಪು ಯಾವಾಗಲೂ ಆಗುತ್ತದೆ ಮತ್ತು ಮನಸ್ಸು ಪುಳಕಗೊಳ್ಳುತ್ತದೆ...

ತಿಂಡಿ ಮುಗಿಸಿ ಹಿಂದಿನ ಅಂಗಳ ಬರುವಾಗ ಹುಡುಗಿಯರು ಶಿಸ್ತಿನಿಂದ ಅಂಗಳದಲ್ಲಿನ ಉದ್ದನೆಯ ಸಿಮೆಂಟು ಸೀಟಿನ ಮೇಲೆ ಕೂತು ಕಾಯುತ್ತಾ ಇರುತ್ತಿದ್ದರು...ಏಕೆ? ಮುಂಚಿನ ದಿನ ಶುಕ್ರವಾರ ನೋಡಿದ ರಾಜೇಶ ಖನ್ನಾನ ಆರಾಧನಾ ಸಿನಿಮಾ ಕಥೆ ಕೇಳೂದಕ್ಕೆ. ಸಾಲಿನಲ್ಲಿ ಎಲ್ಲರೂ ಹುಡುಗಿಯರೆ, ಒಗ್ಗರಣೆಗಾಗಿ ಸರ್ವೋತ್ತಮನೋ ಮುಕುಂದನೋ ಇರ್ತಿದ್ದ. ಸಿನಿಮಾ ಕತೆ ಸುರು......

ಇದು ನನ್ನ ಪ್ರತೀ ಶನಿವಾರದ ಕಾರ್ಯಕ್ರಮ. ಮೊದಮೊದಲು ನಮ್ಮ ಮನೆಯವರಿಗೆ ಮಾತ್ರ ಕಥೆ ಹೇಳುತ್ತಿದ್ದೆ, 'ವೈಗೋ ಕೇಶವು ಭಾರೀ ಲಾಯೇಕ ಕಾಣಿ ಸಾಂಗ್ತಾ, ತೂಂವಂಯೀ ಯೋ,' ನಮ್ಮ ಆಮ್ಮಣಿಯ ಆಹ್ವಾನ ಅವಳ ಗೆಳತಿ ಫುಲ್ಲಳಿಗೆ ಹೋಯಿತು. ಅವಳು ಕಥೆ ಕೇಳಿದಳು, ಮರು ಶನಿವಾರದಿಂದ ಅವರ ಮನೆಯಿಂದ ಮೂವರು ಆಸಕ್ತರ ಸೇರ್ಪಡೆಯಾಯಿತು. ಕಥೆ ಹೇಳುವ ನನಗಿಂತಲೂ ಕೇಳುವ ಚದುರೆಯರ ತನ್ಮಯತೆ ಮೆಚ್ಚತಕ್ಕದ್ದು. ಎಲ್ಲರೂ ಬಿಟ್ಟಬಾಯಿಯಿಂದ, ಕಣ್ಣು ರೆಪ್ಪೆ ಸಹ ಮುಚ್ಚದೇ ನನ್ನನ್ನು ನೋಡ್ತಾ ಕಥೆ ಕೇಳುವ ಪರಿ ಬಹಳ ಸೊಗಸು...

'ವ್ಹೈರೇ ಕೇಶ್ವಾ, ತೂಂವ ಭಾರೀ ಚಂದ ಕಾಣಿ ಸಾಂಗ್ತ ಖಂಯೀ, ಚೆರ್ಡುಂವ ತೂಂವ ಮಳ್ಳೇರಿ ಸೈ, ನೆಂತಾತಿ, ನನಗೂ ಸಹ ಹೇಳು ಮಹರಾಯ ಕತೆ...' ಶ್ರೀಮತಮ್ಮನವರ ಉದ್ಘಾರ....

'ಹಾಗೇನೂ ಇಲ್ಲ, ಇವರೆಲ್ಲ ಸುಮ್ನೇ ಹೊಗಳೋದು.'

'ಇಲ್ಲಮ್ಮ, ಭಾರೀ ಚಂದ ಹೇಳ್ತಾನೆ, ನಾವೇ ಸಿನಿಮಾ ನೋಡಿದಂತಾಗ್ತದೆ, ಅಷ್ಟು ಒಳ್ಳೇದಾಗಿ ವಿವರ್ಸಿ ವಿವರ್ಸಿ ಹೇಳ್ತಾನೆ.' ಮಗಳ ಶಿಫಾರಸು. ಕೇಶವ ನಾಯ್ಕ ಒಂದೆರಡು ಇಂಚು ಉಬ್ಬಿದ.

'ಇವರಿಗೆ ಕಥೆ ಹೇಳಬೇಕು ಅಂತಾ ರಾತ್ರಿ ಸೆಕೆಂಡ್ ಷೋ ನೋಡಿ ಮಧ್ಯರಾತ್ರಿ ನಡಕೊಂಡೇ ಎಂ ಜಿ ಎಂ ತನಕ ಕತ್ಲಲ್ಲಿ ಬಂದು ಕಷ್ಟ ಪಡೂದು ನಾನು. ಕಥೆ ಕೇಳಿ ಖುಷಿ ಪಡೂದು ಇವಳು!' ಎಂದೆ.

'ಅರೇ! ಹಾಗಂದ್ರೆ ಹೇಗೆ ಮಹರಾಯ, ಬಾ, ಒಳಗೆ ಬಾ, ಗಮ್ಮತ್ತು ಮಾಡುವ, ಅದಕ್ಕೇನು! ನೀನು ನಮ್ಮವನೇ ಅಲ್ವ.' ಶ್ರೀಮತಮ್ಮನವರು ಆದರದಿಂದ ಕರೆದು ಕೂರಿಸಿದರು. ಪ್ಲೇಟಿನಲ್ಲಿ ಬಿಸಿ ಬಿಸಿ ಮೀನು ಫ್ರೈ ಬಂತು.

ಖುಷಿಯೋ ಖುಷಿ, ' ನಮುನೆ ಪ್ರೋಗ್ರಾಂ ಇರೂದಾದರೆ ನಾನು ಇನ್ನು ದಿನಾ ಸೆಕೆಂಡ್ ಷೋ ನೋಡ್ತೇನೆ.' ಅಂದೆ.

'ನಿನ್ನ ಬುದ್ಧಿವಂತಿಕೆ ಮಾತೆಲ್ಲ ಬೇಡ, ಫ್ರೈ ಹೇಗಾಗಿದೆ ಹೇಳು?' ಅವರು ಸಂತಸದಿಂದ ಉಪಚರಿಸಿದರು.

ಮೀನು ಫ್ರೈ ಕಾರ್ಯಕ್ರಮ ಆಗಾಗ ನಡೆಯುತ್ತಿತ್ತು.

'ಹೌದನಾ, ನಮ್ಮ ಮಗು ಶಾಲೆ ಓದೂದರಲ್ಲಿ ಒಂಚೂರು ಸದರ. ಆಟ ಊಟ ಕುಣಿತ ಇವುಗಳಲ್ಲೆಲ್ಲ ಭಾರಿ ಜೋರು. ನೀನು ಕಲಿಯೂದರಲ್ಲಿ ಬುದ್ಧಿವಂತ ಅಲ್ವ ನಿನ್ನಿಂದ ಸ್ವಲ್ಪ ಉಪಕಾರ ಆಗಬೇಕಿತ್ತಲ್ಲ' ಮೀನು ಫ್ರೈ ಒಟ್ಟಿಗೆ ಒಮ್ಮೆ ರಿಕ್ವೆಸ್ಟು ಬಂತು.

'ಯಾವ ಮಗು?'

'ಇಲ್ಲಿ ಕುಣೀತಾ ಇದ್ದಾಳಲ್ಲ, ಫುಲ್ಲ, ಇವಳೇ.'

' ಮಗು ಪೀ ಯೂ ಸಿ ಅಲ್ಲವಾ?'

'ಹೌದು ಮಾರಾಯಾ, ಅವ್ಳಿಗೆ ಗಣಿತ, ಇಂಗ್ಲೀಷು, ಸಾಯನ್ಸು ಮತ್ತು ಬೀಜಗಣಿತ ಕಷ್ಟ ಅಂತೆ. ನೀನು ಒಂಚೂರು ಪುರಸೊತ್ತು ಮಾಡಿಕೊಂಡು ಟಿವಿಷನ್ನು ಕೊಡ್ತೀಯಾ?'

"ಕನ್ನಡದ ಟ್ಯೂಷನ್ ಬೇಡ್ವಾ, ಅದೂ ಸಹ ಹೇಳಿ ಕೊಡ್ತೇನೆ, ಆಗದಾ!" ಒಂದು ಡೈಲಾಗು ಬಿಟ್ಟೆ.

"ಪಳsಗೋ ಆಮ್ಮಾ, ತಮಾಸ ಕರತಾ.." ಮಗಳ ಮುನಿಸು.

"ನಮ್ಮಲ್ಲೂ ಇದೇ ತರ ಐಟಮ್ಮು ಉಂಟು, ಇವಳ ದೋಸ್ತಿ ಆಮ್ಮಣಿ....."

ಇವಳಿಗೆ ಟ್ಯೂಷನ್ ಕೊಡುವ ಕಾಯಕದಲ್ಲಿ ಕೇಶವ ನಾಯಕ ಪುನಃ ಹಳೇ ಇಂಗ್ಲಿಷ್ ಪುಸ್ತಕ ಓದಿ ಉರು ಹಾಕತೊಡಗಿದ.

ಇಲ್ಲಿ ದೊಡ್ಡಪ್ಪನ ಮನೆಯಲ್ಲಿ ವಿವೇಕಣ್ಣ ಭಾರತಕ್ಕ ಇವರಿಗೆ ಬೀಜಗಣಿತ ಹೇಳೂದು.. ನಾನು ಹೇಳಿದ್ದು ಅವರಿಗೆ ತಲೆಗೆ ಹೋಗುತ್ತಿಲ್ಲ, ಕಲಿಯುವ ಉಮೇದೂ ಇಲ್ಲ, ಇಬ್ಬರದೂ ಬರೀ ಕೀಟಲೆ.

ಅಲ್ಲಿ ಹೊಸ ಷ್ಟೂಡೆಂಟಿಗೆ ಹುರುಪಿನಿಂದ ವಾರವಿಡೀ ಓದಿ ಮನನ ಮಾಡಿಕೊಂಡ 'ಡ್ಯಾಫೋಡಿಲ್ಸ್' ಪದ್ಯದ ಟಿವಿಷನ್! ಇವಳಿಗೂ ತಲೆಗೆ ಏನೂ ಹೋದ ಹಾಗೆ ಕಾಣಲಿಲ್ಲ, ನನ್ನ ಮುಖ ನೋಡ್ತಾ ನಗೂದು... "ಅಲ್ಲ ಮಾರಾಯ, ಸುಮ್ನೇ ಪಾಠ ಹೇಳೂದಾ, ಅವಳೇನಾದರೂ ಮನಸಿಟ್ಟು ಕೇಳೂದುಂಟಾ!" ಅವರ ತಂದೆಯವರ ವಿಚಾರಣೆ.

"ಪಾಠ ಅರ್ಥ ಆಯ್ತೋ ಇಲ್ವೋ ಅಂತ ಅವಳೇ ಹೇಳಬೇಕು, ನನಗೆ ಮಾತ್ರ ಒಳ್ಳೇ ಉಪಚಾರದ (ಮೀನು ಫ್ರೈ) ಲಾಭ ಆಗ್ತಾ ಉಂಟು......"

"ನಾನು ಅಷ್ಟೆಲ್ಲ ಪಡಪೋಷಿ ಅಲ್ಲ, ಅಂವ ಹೇಳಿದ್ದೆಲ್ಲ ಕರೆಕ್ಟ್ ಕೇಳಿದ್ದೇನೆ, ಈಸಲ ಬೇಕಾದರೆ ನೋಡಿ ಖಂಡಿತಾ ಪಾಸು." ಫುಲ್ಲ ಸುಮ್ಮ ಸುಮ್ಮನೇ ಮುನಿಸಿಕೊಂಡಳು.

ರಿಸಲ್ಟ್ ಏನಾಯಿತು ಎಂದು ವಿಚಾರಿಸಲು ನಾನು ಹೋಗಲಿಲ್ಲ.

ಶಿವರಾಯ ಶೆಣೈ ಮಾಮು, ಶ್ರೀಮತಮ್ಮನವರ ಕುಟುಂಬಕ್ಕೂ ನಮಗೂ ಬಹಳಷ್ಟು ಸ್ನೇಹಸಂಬಂಧ. ಊರಲ್ಲಿ ಆಢ್ಯ, ಗೌರವಾನ್ವಿತ ಮನೆತನ. ಸ್ನೇಹಮಯ ಜೀವನ. ಇಂದಿಗೂ ಅವರ ಎಲ್ಲಾ ಮಕ್ಕಳೂ ಸಮಾಜದಲ್ಲಿ ಗೌರವಾನ್ವಿತರು.... ಶೈಣೈಯವರ ತಂಗಿ ಸುವಾಸಿನಿಯವರು ಹೆಬ್ರಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ನನ್ನ ಗುರುಗಳು. ನಿಷ್ಠೆಯಿಂದ, ಮನಸ್ಸಿಟ್ಟು ಕೆಲಸ ಮಾಡುವುದು ಹೇಗೆ ಎಂದು ಅತ್ಯಂತ ಸಂಯಮದಿಂದ ಕಲಿಸಿದ ಸೀನಿಯರ್. ಇವತ್ತಿಗೂ ಅವರ ಮೃದು ಮಾತುಗಳ, ಗ್ರಾಹಕರೊಡನೆ ಸಹೋದ್ಯೋಗಿಗಳೊಡನೆ ನಡೆಸುವ ಉತ್ತಮ ವ್ಯವಹಾರ ನೆನಪಾಗುತ್ತದೆ.

ಇತ್ತೀಚೆಗೆ ಶ್ರೀಮತಮ್ಮನವರು ಪೂರ್ಣ ಬಾಳು ಬದುಕಿ ಜೀವನ ಯಾತ್ರೆ ಮುಗಿಸಿ ಭಗವಂತನ ಧಾಮವನ್ನು ಸೇರಿದರು. ಕುರಿತು ಸಿಹಿ ಅವಲಕ್ಕಿ ಕಾರ್ಯಕ್ರಮಕ್ಕೆ ಹೋದಾಗ ಗೆಳೆಯರೊಬ್ಬರು "ಇವರಾರು ಗೊತ್ತಾ, ಶಿವರಾಯ ಶೈಣೈಯವರ ಹಿರಿ ಮಗಳು." ಎಂದು ಪರಿಚಯ ಮಾಡಿಕೊಟ್ಟಾಗ ಮೇಲಿನ ಎಪಿಸೋಡು ನೆನಪಾಯಿತು.