1989ರ ಸಮಯವಿರಬೇಕು....
ಬೆಳಗ್ಗಿನಿಂದ ಕಾಮತರು ಬಿಝಿಯಾಗಿದ್ದರು. ಕೌಂಟರಿನಲ್ಲಿ ಸಾಕಷ್ಟು ರಶ್ಶೂ ಇತ್ತು. ಒಬ್ಬ ಠೇವಣಿದಾರರೊಡನೆ ಏನೋ ಗರಮ್ ಚರ್ಚೆ ನಡೆಯುತ್ತಿತ್ತು. ಇವರ ಹಿಂದಿ ಆ ಜನಕ್ಕೆ ಅರ್ಥವಾಗುತ್ತಿರಲಿಲ್ಲ , ಅವರ ಪಂಜಾಬಿ ಮಿಶ್ರಿತ ಹಿಂದಿ ಇವರ ಮಂಡೆಗೆ ಹೋಗುತ್ತಿರಲಿಲ್ಲ. ಎದುರು ಕೂತ ಕ್ಲಾರ್ಕು ಇವರ ಸಹಾಯಕ್ಕೆ ಹೋಗುವ ಮನಸ್ಸು ಮಾಡಿದಂತಿಲ್ಲ. ಮಾತ್ರವಲ್ಲ ಇವರ ಜಗಳ ಕಂಡು ಮಜ ಅನುಭವಿಸಿ ಖುಷಿ ಪಡುತ್ತಿದ್ದಂತೆ ಭಾಸವಾಯಿತು. ಮೆಲ್ಲನೆ ಹತ್ತಿರ ಹೋದೆ...
"ಮಿ. ಸಲೂಜಾ, ಪ್ಲೀಸ್ ಕಮ್ ಟು ಮೈ ಡೆಸ್ಕ್."
"ನನ್ನ ಈ ಎಲ್ಲ ಡಿಪಾಸಿಟ್ ಗಳನ್ನು ಕ್ಲೋಸು ಮಾಡಿ ಒಂದೇ ರಸೀದಿಯಲ್ಲಿ ರಿನ್ಯೂ ಮಾಡಿ ಕೊಡಿ. ಐ ಡೋಂಟ್ ಮೈಂಡ್ ಲೂಸಿಂಗ್ ಸಮ್ ಮನಿ." ಎಂದರು.
"ಬಟ್ ವೀ ಡೋಂಟ್ ವಾಂಟ್ ಅವರ್ ಕಸ್ಟಮರ್ಸ್ ಲೂಸ್ ಎನಿ ಮನಿ ಬಿಕೋಸ್ ಆಫ್ ಅಸ್."
"ನೋಡಿ ಮಿಸ್ಟರ್, ನನ್ನದು ಇಲ್ಲಿ ಸುಮಾರು ಇಪ್ಪತ್ತೆಂಟು ಡಿಪಾಸಿಟ್ಟುಗಳಿವೆ, ಪ್ರತಿಯೊಂದರ ವಾಯಿದೆ ತಾರೀಕು ಬೇರೆ ಬೇರೆ. ನನಗೆ ಅದೆಲ್ಲ ಕಿರಿಕಿರಿಯಾಗುತ್ತದೆ. ಆದ್ದರಿಂದ ನೀವು.ನಾನು ಹೇಳಿದ ಹಾಗೇ ಮಾಡಿ." ಸಲೂಜ ಇನ್ನೂ ಸಿಡಿಮಿಡಿ ಮಾಡುತ್ತಲೇ ಇದ್ದರು.
"ಓ ಅಶೋಕ್, ಕೂಡಲೇ ಹೋಗಿ ಆರು ಕ್ಯಾಂಪಾ ಕೋಲಾ ತಾ, ಮತ್ತು ಯಜಮಾನರಿಗೆ ಕೂರಲು ಆರು ಕುರ್ಚಿಗಳನ್ನಿಡು." ಎಟೆಂಡರು ಅಶೋಕ ಆಸನಗಳ ವ್ಯವಸ್ಥೆ ಮಾಡಿದ.
"ಓಹ್, ಡೋಂಟ್ ಬೋದರ್ ಎಬೌಟ್ ಡ್ರಿಂಕ್ಸ್ ಪ್ಲೀಸ್." ಎಂದು ಕುರ್ಚಿಯಲ್ಲಿ ಕೂತರು ಸಲೂಜಾ. ಕೊಂಚ ಆರಾಮು ಮತ್ತು ಕೆಂಪಾಕೋಲಾ ಸೇವನೆ ಬಳಿಕ ಬಂದ ನಾಲ್ಕೂ ಮಂದಿ ಹಗುರಾದರು.
"ನೋಡಿ ಸ್ವಾಮೀ, ನಾನು ಕೊಟ್ಟ ಫಾರ್ಮುಗಳ ಮೇಲೆ ಟಿಕ್ ಮಾಡಿದ ಗುರುತಿನ ಮುಂದೆ ನೀವು ಸಹಿ ಮಾಡುತ್ತಾ ಹೋಗಿ. ನಮಗೆ ರಗಳೆ ಆಗುತ್ತದೆ ಅಥವಾ ಬೇರೆ ಬೇರೆ ಡೇಟುಗಳ ಲೆಕ್ಕಾಚಾರ ಯಾರು ಇಟ್ಟುಕೊಳ್ಳುವುದು ಮುಂತಾದ ಚಿಂತೆ ಮಾಡಬೇಡಿ. ಹೇಗಿದ್ದರೂ ನೀವು ಅವುಗಳನ್ನು ಕಟ್ಟು ಕಟ್ಟಿ ಲಾಕರಿನಲ್ಲಿ ತಾನೇ ಇಡುವುದು! ಲೀವ್ ಆಲ್ ಯುವರ್ ವರೀಸ್ ಟು ಅಸ್."
"ಹೌದಲ್ಲ! ಅದೂ ಸರೀನೇ." ಎಂದವರು ಸಹಿ ಮಾಡಲು ಸುರು ಮಾಡಿದರು.
ಮಾತು
ಮಾತಿಗೆ ಅಮೆರಿಕನ್ ಇಂಗ್ಲಿಷ್ ಮಾತಾಡುತ್ತಿದ್ದ ಮಹಾನುಭಾವ! ”ಟೋಟಲ್ ಕಿತನೇ ಡಾಲರ್ ಕೆ
ಫಿಕ್ಸೆಡ್ ಹೈ! ಮ್ಯಾಚುರಿಟಿ ಹೋನೇಸೆ ಕಿತನೇ ಡಾಲರ್ ಮಿಲತೇ ಹೈ?....”
”ಆಪ್ ಸ್ಟೇಟ್ಸ್ ಮೆ ರೆಹತೇ ಕ್ಯಾ?”
”ನೋ ಸರ್, ಮೇ ಕೆನಾಡಾ ಮೇ ರೆಹತಾ ಹೂಂ, ಇಸ್ ಲಿಯೆ ಬೀಚ್ ಬೀಚ್ ಮೆ ಡಾಲರ್ ನಿಕಲತೇ ಹೈಂ” ಸಲೂಜಾ ಮುಗುಳ್ನಕ್ಕರು.
”ಕೆನಾಡಾದಲ್ಲಿ ಚಳಿ ಹೇಗೆ ಸರ್? ನಾವು ಕೊಂಚ ಟೆಂಪರೇಟ್ ಪ್ರದೇಶದಿಂದ ಬಂದವರು, ನಮಗೆ ದಿಲ್ಲಿಯ ಚಳಿಯೇ ಸಹಿಸಲಾಗೂದಿಲ್ಲ..!”
”ಅಲ್ಲಿಯ ಕೋಲ್ಡ್ ಹೇಳಿ ಉಪಯೋಗ ಇಲ್ಲ ಮಿ. ನಾಯಕ್! ಮೈನಸ್ ಇಪ್ಪತ್ತಕ್ಕೂ ಕೆಳಗೆ ತಾಪಮಾನ ಇಳಿಯುತ್ತದೆ, ಅದನ್ನು ಅನುಭವಿಸಿಯೇ ತಿಳೀಬೇಕು! ಆದರೆ ಅವೆಲ್ಲವನ್ನು ನಿಯಂತ್ರಣದಲ್ಲಿಡಲು ಅಲ್ಲಿ ಸೂಕ್ತ ವ್ಯವಸ್ಥೆಗಳಿವೆ. ಕೆನಾಡಾ ಈಸ್ ಎ ರಿಚ್ ಕಂಟ್ರೀ ಯೂ ನೋ. ” ಹತ್ತು ನಿಮಿಷಗಳ ಹಿಂದಿನ ಗಡಸುತನ ಹೋಗಿ ಮುಖದಲ್ಲಿ ಮಂದಹಾಸ ಮಿನುಗಿತು.
"ನಿಮಗೆ ಕೆಲವು ಪತ್ರಗಳನ್ನು ಕಳಿಸಿದ್ದೆವು, ಇನ್ ಕಮ್ ಟೇಕ್ಸ್ ಕುರಿತು. ನಿಮಗೆ ಕೊಂಚ ಹಣ ಸಿಗುತ್ತದೆ. ತಂದಿದ್ದರೆ ಕೊಡಿ." ಸಿ ಡಿ ಐ ಟಿ ಪಿ 1974 ಕಾನೂನಿನಂತೆ ಜಮಾ ಮಾಡಿದ ಹಣದ ರೀಫಂಡ್ ಅವರಿಗೆ-ನಾಲ್ಕೂ ಜನರಿಗೆ- ಸಿಗಲಿದ್ದವು.
"ಹೌದು, ತಿಂಗಳ ಹಿಂದೆ ಕೆಲವು ಕಾಗದಗಳು ಬಂದಿದ್ದವು. ಬೇಂಕಿನಿಂದ ಏನೇನೋ ನೋಟೀಸುಗಳು ಬರುತ್ತಿರುತ್ತವೆ, ಎಂದು ಉದಾಸೀನ ಮಾಡಿದ್ದೆವು." ಮಿಸೆಸ್ ಸಲೂಜಾ ಆ ನಾಲ್ಕು ಕವರುಗಳನ್ನು ವೆನಿಟೀ ಬೇಗಿನಿಂದ ತೆಗೆದು ಕೊಟ್ಠರು. ಪುಣ್ಯಾತ್ಮರು ಆ ಕವರುಗಳನ್ನು ಒಡೆದೇ ಇರಲಿಲ್ಲ!
"ನೋಡಿ ಸರ್, ನಿಮ್ಮ ನಾಲ್ಕು ಮಂದಿಯ ಟೇಕ್ಸ್ ರೀಫಂಡು+ಬಡ್ಡಿ ಎಂದು ಸುಮಾರು ಒಂದು ಲಕ್ಷದ ತನಕ ನಿಮಗೆ ಸಿಗುತ್ತದೆ. ಆದರೆ ನಾನು ನಿಮಗದನ್ನು ಕೊಡೂದಿಲ್ಲ. ಇನ್ನೂ ನಾಲ್ಕು ಫಾರ್ಮಿಗೆ ಸಹಿಮಾಡಿ ಕೊಡಿ. ಅವನ್ನೂ ಫಿಕ್ಸೆಡ್ ನಲ್ಲಿ ಇಡೋಣ."
"ಓಕೆ ಓಕೇ. ಅವರಿಗೆ ಈ ಹಣ ಸಿಗುವ ವಿಚಾರವೇ ತಿಳಿದಿರಲಿಲ್ಲ. ತನಗೆ ಲಾಟರಿ ಹೊಡೆದ ಭಾವದಲ್ಲಿ ಇದ್ದರು.
"ನೋಡಿ ಮೇಡಮ್, ಪ್ರೀತಿ ಸಲೂಜಾ ಎಂಬ ಹೆಸರಿನಲ್ಲಿ ಇಲ್ಲಿ ಹತ್ತು ಸಾವಿರ ರೂಪಾಯಿಗಳು ಅಮಾನತು ಖಾತೆಯಲ್ಲಿ - ಸಸ್ಪೆನ್ಸ್ ಎಕೌಂಟ್ - ಬಿದ್ದಿದೆ. ಜಮಾ ಸ್ಲಿಪ್ಪಿನಲ್ಲಿ ಖಾತೆ ನಂಬರು ಬರೆದಿರಲಿಲ್ಲ ಹಾಗಾಗಿ. ಪ್ರೀತಿ ಸಲೂಜಾ ನೀವೇ ತಾನೇ? ನಿಮ್ಮ ಬಳಿ ರಶೀದಿ ಇದ್ದರೆ ಕೊಡಿ. ಆ ಹಣವನ್ನೂ ಫಿಕ್ಸೆಡ್ ಮಾಡೋಣ ಏನಂತೀರಿ?"
"ಲೋ ಜೀ, ಏಕ್ ಔರ್ ಲಾಟರೀ ಲಗೀ. ಮೇರೆ ಪೈಸೆ ಗುಲ್ ಹೋಗಯೇ, ಐಸೆ ಸೋಚಕೇ ಮೈ ಪರೇಶಾನ್ ಥೀ." ಶ್ರೀಮತಿಯವರು ತನ್ನ ಬಳಿಯಿದ್ದ ರಸೀದಿ ಮತ್ತು ಪಾಸುಬುಕ್ಕು ತೆಗೆದು ಕೊಟ್ಟರು. ಈ ಹಿಂದೆ ಆಕೆ ವಿಚಾರಿಸಿದ್ದರೂ ಸೂಕ್ತ ಸಮಾಧಾನಕರ ಉತ್ತರ ಸಿಗದೇ ವಾಪಸಾಗಿದ್ದರು.
ಇಷ್ಟಾಗುವಾಗ ಸಲೂಜಾ ಪೂರ್ತಿ ರಿಲ್ಯಾಕ್ಸ್ ಆಗಿದ್ದರು. ಕೂಲ್ ಡ್ರಿಂಕ್ಸ್ ಕುಡಿದು ತಂಪೂ ಆಗಿದ್ದರು. ”ನಿಮ್ಮ ಬ್ರಾಂಚಿನಲ್ಲಿ ಈ ನಮೂನೆ ರಶ್ ಏಕೆ ಮಿ. ನಾಯಕ್? ನಿಮ್ಮ ಎಲ್ಲಾ ಕೌಂಟರುಗಳಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ! ಅಲ್ಲಿ ನೋಡಿ, ಕ್ಯಾಷ್ ಮತ್ತು ಕರೆಂಟ್ ಅಕೌಂಟ್ ಸೆಕ್ಷನುಗಳಲ್ಲಿ ಸಂತೆಯೋ ಸಂತೆ! And you people are managing them so coolly and efficiently!! ಕೆನಾಡಾ ಮೇ ತೋ ಐಸಾ ನ್ಹಂಹೀ ಹೆ!, ಓಹ್ ಐ ಏಮ್ ಸಾರಿ, ಫಿರ್ ಸೇ ಕೆನಾಡಾ ನಿಕಲ್ ಪಡಾ...” ಅವರ ಮೂಡ್ ಸಖತ್ ಗೆಲುವಾಗಿತ್ತು.
ನಮ್ಮ ಬ್ರಾಂಚಿನ ಎದುರು ಲಘು ಔದ್ಯೋಗಿಕ ವಲಯ ಸ್ಥಾಪನೆಯಾಗಿದ್ದು ಅದಕ್ಕೆ ಬೇಕಾದ ಮೂಲ ಸೌಕರ್‍ಯಗಳ ಕಾಮಗಾರಿಗಳೂ ಮುಗಿದಿದ್ದು ಅನೇಕ ಉದ್ದಿಮೆಗಳು ಅದಾಗಲೇ ಶುರುವಾಗಿದ್ದವು, ಹೊಸ ಹೊಸ ಉದ್ದಿಮೆಗಳು ವ್ಯಾಪಾರೀ ಮಳಿಗೆಗಳು ಸ್ಥಾಪನೆಯ ವಿವಿಧ ಹಂತಗಳಲ್ಲಿದ್ದವು. ಎಲ್ಲ ಹಳೇ ಹಾಗೂ ಹೊಸಾ ಉದ್ಯಮಗಳ ಬ್ಯಾಂಕಿಂಗ್ ಅಗತ್ಯಗಳ ಪೂರೈಕೆಗೆ ನಮ್ಮ ಶಾಖೆ ಲಗತ್ತಾಗಿತ್ತು. ಹತ್ತಿರದಲ್ಲಿ ಪಂಜಾಬ್ & ಸಿಂಧ್ ಬ್ಯಾಂಕಿನ ಬ್ರಾಂಚೊಂದಿತ್ತು, ಆದರೆ ನೂರಕ್ಕೆ ಎಂಭತ್ತು ಸೇಕಡಾ ಗ್ರಾಹಕರು ನಮ್ಮ ಬ್ಯಾಂಕಿಗೇ ಮುಗಿಬೀಳುತ್ತಿದ್ದರು!
''ಸರ್, ನಮ್ಮ ಸಿಂಡಿಕೇಟ್ ಬೇಂಕಿಗೆ ಗ್ರಾಹಕರ ಸೇವೆಯ ವಿಚಾರದಲ್ಲಿ ಇಡೀ ದೇಶದಲ್ಲೇ ಒಳ್ಳೆಯ ಹೆಸರಿದೆ. ನಮ್ಮ ಹೆಡ್ ಆಫೀಸು ಸಹ ಒಂದು ಹಳ್ಳಿಪ್ರದೇಶದಲ್ಲಿ ಇದೆ. ಅದೂ ಒಂದು ವಿಶೇಷ.. ಜನರ, ಗ್ರಾಹಕರ ಕ್ಲಪ್ತಸೇವೆ ನಮಗೆ ರಕ್ತಗತವಾಗಿದೆ.''
''Yes Sir, I fully agree with you.'' ಸಲೂಜಾ ತಾನು ತಂದಿದ್ದ ರಾಥ್ ಮನ್ ಸಿಗರೇಟನ್ನು ನನಗೂ ಕ್ಲಾರ್ಕ್ ಠಾಕೂರ್ ಗೂ ಕೊಟ್ಟರು. (ಆಗಿನ್ನೂ
ನೋ ಸ್ಮೋಕಿಂಗ್ ಕಾನೂನು ಜ್ಯಾರಿಯಲ್ಲಿರಲಿಲ್ಲ.) "ನೋ ಸರ್, ಕಸ್ಟಮರ್ ಬಳಿ ಸಿಗರೇಟು
ತಕ್ಕೊಳ್ಳಲಿಕ್ಕಿಲ್ಲ, ಬೇಡ." ಎಂದರೂ ಒತ್ತಾಯ ಪೂರ್ವಕ ಕೊಟ್ಟ ಕಾರಣ
ಒಪ್ಪಿಕೊಳ್ಳಬೇಕಾಯಿತು.
"ಯೂ ಸೀ, ಮಿ. ನಾಯಕ್, ನಿಮಗೆ ಇದೆಲ್ಲ ಹೇಗೆ ನೆನಪಾಗುತ್ತದೆ? ಅದೇ, ನಮ್ಮ ಐ ಟೀ ರೀಫಂಡ್, ನಂಬರ್ ಬರೆಯದ ಸ್ಲಿಪ್, ಡಿಪೋಸಿಟ್ ಗಳ ಇಂಟರೆಸ್ಟ್ ರೇಟು ಬೈಹಾರ್ಟ್! I am amazed!... ಮೋರ್ ಓವರ್ ಯೂ ಟಾಕ್ ಸೋ ಸ್ವೀಟ್, ರಿಯಲೀ ಗುಡ್."
"ಅಲ್ಲಿ ಎದುರು ನೋಡಿ ಸರ್ ಬೋರ್ಡು, 'ಕಸ್ಟಮರ್ ಈಸ್ ಅವರ್ ಕಿಂಗ್, ಸರ್ವೀಸ್ ವಿದ್ ಎ ಸ್ಮೈಲ್, ನೋ ಮೇನ್ ಈಸ್ ಟೂ ಸ್ಮಾಲ್ ಫಾರ್ ಬೇಂಕಿಂಗ್ ಇತ್ಯಾದಿ ಇತ್ಯಾದಿ.... ನಮ್ಮ ಬೇಂಕಿನ ಸ್ಲೋಗನ್ ಗಳಿಗೆ ಬದ್ಧನಾಗಿರಲು ಮತ್ತು ಆದಷ್ಟು ಮಟ್ಟಿಗೆ ಅಪ್ಟುಡೇಟ್ ಆಗಿರಲು ಪ್ರಯತ್ನಿಸುತ್ತೇವೆ. ನನ್ನ ಗೆಳೆಯರೂ ಸಹ ನಗುಮುಖದ ಸೇವೆ ನೀಡಲು ಬದ್ಧರಾಗಿದ್ದಾರೆ. ಉತ್ತಮ ಸೇವೆ ನೀಡುವಲ್ಲಿ ನಾವು ಇತರ ಎಲ್ಲಾ ಬೇಂಕುಗಳಿಗಿಂತ ಮುಂದಿದ್ದೇವೆ."
"ಗುಡ್ ಗುಡ್, ಫೆಂಟಾಸ್ಟಿಕ್! ಐಸೇ ಹೀ ಏಕ್ ಭಲಾ ಆದ್ಮೀ ಅಂದರ್ ಕೇಬಿನ್ ಮೇ ಪೆಹಲೇ ಮಿಲೇ ಥೇ. ಅಬ್ ವೋ.ಕಹಾಂ ಹೈ?"
"ಏಕೆ ಸರ್?"
"ನನ್ನ ಖಾತೆ ಮುಂಚೆ ಬೇರೆ ಬೇಂಕಿನಲ್ಲಿ ಇತ್ತು. ಒಮ್ಮೆ ಯಾವದೋ ಕೆಲಸಕ್ಕೆಂದು ನಿಮ್ಮ ಬೇಂಕಿಗೆ ಬಂದಿದ್ದೆ. ಅದೂ ಇದೂ ಮಾತಾಡುವಾಗ ನನ್ನ ಕೆನಡಾ ಫ್ಲೈಟಿನ ಒಂದು ಸಮಸ್ಯೆ ಬಗ್ಗೆ ಹೇಳಿದ್ಧೆ. ಆಗ ನಿಮ್ಮ ಮೆನೆಜರು ವಿವರಗಳನ್ನು ನನ್ನಿಂದ ಪಡೆದು ತನ್ನ ಗೆಳೆಯರೊಡನೆ ವ್ಯವಹರಿಸಿ ನನ್ನ ಪ್ರಾಬ್ಲಮ್ಮನ್ನು ಸಾಲ್ವ್ ಮಾಡಿದ್ದರು. ಕೂತಲ್ಲೇ ಅವರು ತಾನಾಗಿಯೇ ಸ್ವಪ್ರೇರಣೆಯಿಂದ ನನಗೆ ಹೆಲ್ಪ್ ಮಾಡಿದ್ದರು. ನನ್ನ ಮುಖ್ಯ ಖಾತೆಯಿದ್ದ ಬೇಂಕು ಮೆನೆಜರು ನನ್ನ ಸಮಸ್ಯೆಯ ಬಗ್ಗೆ ಕನಿಕರ ಪಟ್ಟಿದ್ದರೇ ವಿನಃ ಯಾವುದೇ ಹೆಲ್ಪು ಮಾಡಿರಲಿಲ್ಲ. ಮೇಲಾಗಿ ಭಾರತದಲ್ಲಿನ ನೌಕರಶಾಹಿಯ ಅಸಡ್ಡೆ ಬಗ್ಗೆ ಸಣ್ಣ ಭಾಷಣವನ್ನೂ ಕೊಟ್ಟಿದ್ದರು. ನಿಮ್ಮವರು ಮಾತ್ರ ಶಾಂತಿಯಿಂದ ನನ್ನ ಸಮಸ್ಯೆಯ ವಿವರಗಳನ್ನು ಕೇಳಿ ಪಡೆದು, ತನ್ನ ಮಿತ್ರರೊಬ್ಬರನ್ನು ಸಂಪರ್ಕಿಸಿ ನನಗೆ ಅನುಕೂಲ ಮಾಡಿಕೊಟ್ಟರು. ನನಗೆ ಅವರ ನಡತೆ ಬಹಳ ಮೆಚ್ಚಿಗೆಯಾಗಿ ಅದೇ ದಿನ ನನ್ನ ಎಲ್ಲಾ ಡಿಪಾಸಿಟ್ ಗಳನ್ನು ಈ ಬೇಂಕಿಗೆ ಶಿಫ್ಟ್ ಮಾಡಿಸಿದೆ. ಅವೇ ಖಾತೆಗಳೀಗ ಹಣ್ಣಾಗಿವೆ. ಈಗ ಅವರೆಲ್ಲಿದ್ದಾರೆ? ಹೀ ಈಸ್ ಸಚ್ ಎ ನೈಸ್ ಪರ್ಸನ್!......"
"ಸ್ವಾಮೀ, ಈ ಖಾತೆಗಳ ರಿನ್ಯೂವಲಿನ ಪ್ರಾಥಮಿಕ ಕೆಲಸಗಳೆಲ್ಲ ಮುಗಿದವು. ಇನ್ನು ಹೊಸ ರಸೀದಿಗಳನ್ನು ಬರೆಯುವುದು ಬಾಕಿ ಇದೆ. ಅದಕ್ಕೆ ಕೊಂಚ ಸಮಯ ತಗಲುತ್ತದೆ. ನಿಮ್ಮ ಆಕ್ಷೇಪಣೆ ಇಲ್ಲದಿದ್ದರೆ ನಾವದನ್ನು ನಿಮ್ಮ ವಿಳಾಸಕ್ಕೆ ಪೋಸ್ಟ್ ಮಾಡಿ ಕಳುಹಿಸುತ್ತೇವೆ. ನೀವು ಅದಕ್ಕೆಂದು ಪುನಃ ಬೇಂಕಿಗೆ ಬರುವ ತಾಪತ್ರಯವಿಲ್ಲ. ಆಗಬಹುದೇ?"
"ನಮ್ಮವರು ಯಾರಾದರೂ ಇಲ್ಲಿ ಬರುತ್ತಿರುತ್ತಾರೆ. ಬರುವ ವಾರದೊಳಗೆ ರಿನ್ಯೂವಲ್ ಮಾಡಿ ಇಡಿ. ನಾವು ಸ್ವತಃ ಪಡಕೊಂಡು ಹೋಗುತ್ತೇವೆ."
"ಓ ಕೆ ಸರ್, ಕಮ್ ಡೈರೆಕ್ಟ್ಲೀ ಟು ಮೀ."
"ಮಿ. ನಾಯಕ್, ನೀವು ಇವತ್ತು ನನ್ನ ಕೆಲಸಗಳನ್ನು ಮಾಡಿಸಿಕೊಟ್ಟ ಕ್ರಮ, ನಮ್ಮ ಬಳಿ ವ್ಯವಹರಿಸಿದ ಸ್ಟೈಲು, ನಿಮ್ಮ ಸಹೋದ್ಯೋಗಿಯವರೊಡನೆ ನಡಕೊಂಡ ರೀತಿ ಕಂಡು ನನಗೆ ತುಂಬ ಖುಷಿಯಾಗಿದೆ. ನಿಮ್ಮ ಹೆಡ್ ಆಫೀಸಿನ ನಂಬರು ಕೊಡಿ, ಐ ವಾಂಟ್ ಟು ಕನ್ವೇ ಮೈ ಎಪ್ರೀಶಿಯೇಷನ್ ಟು ದೆಮ್."
"ನಾನು ಎಲ್ಲರ ಬಳಿ ಹೀಗೆಯೇ ನಡಕೊಳ್ಳುವುದು. ಅಲ್ಲದೇ ಇದು ನನ್ನ ಡ್ಯೂಟಿ. ಆಗ ತಿಳಿಸಿದ ಹಾಗೆ 'ಕಸ್ಟಮರ್ ಈಸ್ ಅವರ್ ಕಿಂಗ್' ನಮ್ಮ ರಾಜರನ್ನು ನಾವು ಚೆನ್ನಾಗಿಯೇ ಟ್ರೀಟ್ ಮಾಡಬೇಕಲ್ಲವೇ?"
"ನಿಮ್ಮ ಬಳಿ ನಿಜ ಹೇಳಲೇ, ಈ ರೀತಿ ಇಪ್ಪತ್ತೆಂಟು ರಸೀದಿಗಳನ್ನು ರಿನ್ಯೂವಲಿಗೆ ತಂದರೆ ಇಲ್ಲಿ ಖಂಡಿತಾ ಜಗಳವಾಗುತ್ತದೆ. ಇಲ್ಲಿಂದ ನಮ್ಮನ್ನು ಒದ್ದು ಓಡಿಸಬಹುದು ಎಂಬ ಶಂಕೆಯಿಂದಲೇ ನಾವು ಬಂದಿದ್ದೆವು. ಇಲ್ಲಿ ಸಂಭವಿಸಬಹುದಾದ ಎಲ್ಲಾ ಸಂಭಾವ್ಯ ಜಗಳ/ಚರ್ಚೆಗಳಿಗೆ ತಯಾರಾಗಿಯೇ ಬಂದಿದ್ದೆವು. ಆದರೆ ಇಲ್ಲಿ ನೀವೆಲ್ಲ ನಮಗೆ ಬಹಳ ಒಳ್ಳೆಯ ಸರ್ವೀಸ್ ನೀಡಿದಿರಿ. ಥ್ಯಾಂಕ್ ಯೂ ವೆರಿ ಮಚ್."
"ಬಂದ ಕಸ್ಟಮರ್ ಒಡನೆ ಜಗಳ ಮಾಡುತ್ತ ಕೂತರೆ ನಮ್ಮದು ಹಾಗೂ ಬಂದವರದ್ದೂ ಬೀ ಪೀ ಮತ್ತು ಶುಗರ್ ಎರಡೂ ಏರುತ್ತವೆ, ಬದಲಿಗೆ ಬಂದ ಗ್ರಾಹಕರ ಬಳಿ ಒಂದೆರಡು ಒಳ್ಳೆಯ ಮಾತು ಆಡಿದರೆ ಮನಸ್ಸಿಗೆ ಖುಷಿ. ಬಂದವರ ಆರೋಗ್ಯವೂ ಸುಸೂತ್ರ, ಏನಂತೀರಿ? ಮೇಲಾಗಿ ನನಗೀಗ ಒಬ್ಬ ಹೊಸ ದೋಸ್ತಿಯೂ ಸಿಕ್ಕರು. ಬನ್ನಿ ಮೆನೆಜರರ ಬಳಿ ಮಾತಾಡೋಣ. ಇವರೂ ಸಹ ಮುಂಚಿನವರಂತೆ ಒಳ್ಳೆಯವರು." ಮೆನೆಜರರ ಭೆಟ್ಟಿ ಮಾಡಿಸಿದೆ.....
ಮೇಲಿನ ಎಪಿಸೋಡಿನಲ್ಲಿ ಯಾವುದೇ ವಿಶೇಷವಿಲ್ಲ, ಅಥವಾ ನನ್ನ ದೊಡ್ಡಸ್ಥಿಕೆ ಮೆರೆಸಲೂ ಬರೆದದ್ದಲ್ಲ. ಬೇಂಕುಗಳಲ್ಲಿ, ಸರಕಾರೀ ಕಛೇರಿಗಳಲ್ಲಿ ಯವುದೇ ಕೆಲಸ ಕಾರ್ಯಗಳು ಸಾಗುವುದಿಲ್ಲ , ಎಲ್ಲರೂ ಕಾಮ್ ಚೋರರು, ಉದ್ಧಟರು ಎಂಬ ಭಾವ ಜನಸಾಮಾನ್ಯರಲ್ಲಿ ಆಗಲೂ ಇತ್ತು, ಈಗಲೂ ಇದೆ. ಅಂತಿರುವಾಗ ಓರ್ವ ಗ್ರಾಹಕನು ತನಗೆ ದೊರಕಿದ ಕ್ಲಪ್ತ ಹಾಗೂ ನಗುಮುಖದ (ದುರ್ಲಭ ಸೇವೆ!) ಸೇವೆಯಿಂದ ಚಕಿತನೂ ತೃಪ್ತನೂ ಆದದ್ದನ್ನು ಕಂಡು ಆ ನೆನಪು ಆಗಾಗ ಬರುತ್ತಿರುತ್ತದೆ.........
ಎಪಿಸೋಡು: 1989ರ ಕಡು ಬೇಸಿಗೆಯ ಒಂದು ಹೆಕ್ಟಿಕ್ ಆಫೀಸು ಸಮಯ., ರಾಣೀ ಝಾನ್ಸೀ ರೋಡು ಬ್ರಾಂಚು ನವದೆಹಲಿ
ನೆನಪು: 2018ರ ಮಾರ್ಚ್
ನೆನಪು: 2018ರ ಮಾರ್ಚ್
No comments:
Post a Comment