Thursday, March 16, 2023

ಡಬಲ್ ಪೇಮೆಂಟ್

ಹುಬ್ಬಳ್ಳಿಯ ಸುಪರ್ಮಾರ್ಕೆಟ್ ಶಾಖೆಯ ನನ್ನ ಅನುಭವಗಳು ಇಂದಿಗೂ ಖುಶಿ ಕೊಡುತ್ತವೆ. ಇತರೇ ಬ್ರಾಂಚುಗಳಂತೆ ಇದ್ದರೂ ಮೆನೆಜರು ಸಹಿತ ಹೆಚ್ಚಿನವರು ಸ್ನೇಹಮಯಿಗಳು. ಸ್ಟಾಫುಗಳಲ್ಲಿ ಲಲನೆಯರದ್ದೇ ಮೇಲುಗೈ. ಕೊಲ್ಲೂರಿನಿಂದ ವರ್ಗವಾಗಿ ಬ್ರಾಂಚು ಒಮ್ಮೆ ನೋಡೋಣ ಎಂದು ಮಧ್ಯಾಹ್ನ ಮೂರರ ಹೊತ್ತಿಗೆ ಹೋದೆ. ಕೌಂಟರಿನಲ್ಲಿ ಎದೂರು ಲೈನಾಲೈನು ಮಹಿಳಾ ಮಣಿಗಳು ಕೂತು ಹರಟೆಯಲ್ಲಿ ಮಗ್ನರಾಗಿದ್ದರು., ಯಾವುದೋ ವಿಚಾರದ ಮೇಲೆ ಭಾರೀ ಭಾರೀ ಮಾತಾಡುತ್ತಿದ್ದವರ ಮುಂದೆ ನಿಂತೆ.

ನನ್ನ ಗುರ್ತ ಸಿಗ್ತದೋ

”ಮಿ.ನಾಯಕ್?”

ಕರೆಕ್ಟ್, ತೂಂವ ಅಕೌಂಟ್ಸ್ ಸೆಕ್ಷನಾಂತು ಅಶ್ಶೀಲಿ ನಂವೆ?” ಅನುಮಾನಿಸುತ್ತ ಕೇಳಿದೆ.

ಯೇ ಮಝೆ಼ ದೇವಾ! ಹಾಜೋ ಉಢಾಸು ಪಳಗೋ!" ಆಕೆ ಉದ್ಘರಿಸಿದರು, "ಮಝೇ಼ ನಾಂವ ಉಢಾಸ ಆಸ್ಸಕೀ?"

ಆತ್ತ ಕಿತ್ಲೆ ಮೋಣು ಚೆಲ್ಲೆಲೇ ನಾಂವ ಉಡ್ಗಾಸು ದವರ್ಚೆ?" ಆಕೆ ಘೊಳ್ಳನೆ ನಕ್ಕಳು.

ನಾನು ಕಾರ್ಮಿನಾ ಗೊನ್ಸಾಲ್ವೀಸ್, ನೀವು ಇಲ್ಲಿ ಬಂದ ಕಾರಣ?”

ನನ್ನನ್ನು ಇಲ್ಲಿ ಎತ್ತಿ ಹಾಕಿದ್ದಾರೆ, ನಿಮ್ಮೆಲ್ಲರ ಸೇವೆ ಮಾಡಲು.”

ಇಲ್ಲಿಗೆ ಟ್ರಾನ್ಸ್ ಫರ್ಆಗಿದೆಯಾ? ಹಾಗಾದರೆ ಹೊರಗೆ ನಿಂತಿದ್ದಿರೇಕೆ? ಒಳಗೆ ಬನ್ನಿ, ವ್ಹೈರೇ ಎಚ್ ಎನ್ ಪೈ ಆಮ್ಗೆಲೆ ಗಾಂವಾ ತುಕೂನು ನಾಯಕ್ ಮಾಮು ಆಯಲಾ ಪಳೆ.”

ನನ್ನ ಮಿತ್ರರು ಅಲ್ಲಿನ ಸಬ್ ಮೆನೆಜರಾಗಿದ್ದವರು ದಿನ ವರ್ಗವಾಗಿ ರಿಲೀವ್ ಆಗಿದ್ದರು. ನನಗೆ ಪೆನ್ ಶನ್ ಸೆಕ್ಷನ್ ನಲ್ಲಿ ಕೂಡಬೇಕೆಂಬ ಆದೇಶ ಆಯಿತು. ನನಗೆ ಪೆನ್ ಶನ್ ಶಬ್ದದ ಸ್ಪೆಲ್ಲಿಂಗ್ ಮಾತ್ರ ಗೊತ್ತಿತ್ತು ವಿನಾ ಕೆಲಸದ ಗಂಧಗಾಳಿ ಇದ್ದಿರಲಿಲ್ಲ. ಕ್ರಮೇಣ ಸರಿಹೋಯಿತು. ಬ್ರಾಂಚಿನ ಸ್ಟಾಫು ಹಾಗೂ ಗ್ರಾಹಕರು ಬಹಳವೇ ಸಹೃದಯರು ಮತ್ತು ಸ್ನೇಹಮಯಿ ಭಾವದವರೆಂಬ ಭಾಸವಾಯಿತು. ನನ್ನದು ಸ್ವಯಂ ಸಂಕೋಚ ಹಾಗೂ ಗೆಳೆತನದ ಮಾನಸಿಕತೆ ಯಾದ್ದರಿಂದ ಬಹು ಬೇಗನೆ ಎಲ್ಲರೊಡನೆ ಉತ್ತಮ ಸ್ನೇಹ ಸಲಿಗೆ ಬೆಳೆಯಿತು...

ರೇಲ್ವೇ ಡಿಪಾರ್ಟ್ಮೆಂಟಿನಲ್ಲಿ ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದ ಪಿಂಚಣಿದಾರರೊಬ್ಬರು ಅಲ್ಲಿನ ತನ್ನ ಕಾಂಟ್ರಾಕ್ಟ್ ಅವಧಿ ಮುಗಿದ ನಂತರ ರಿಲೀವಿಂಗ್ ಲೆಟರ್  ತಂದುಕೊಟ್ಟರು. ಪಿಂಚಣಿದಾರರು ಇತರೇ ಸಂಸ್ಥೆಗಳಲ್ಲಿ ನೌಕರಿ ಹಿಡಿದರೆ ಆ ಅವಧಿ ತನಕ ಅವರಿಗೆ ತುಟ್ಟಿಭತ್ಯೆ ನೀಡಬಾರದೆಂಬ ಕಾನೂನು ಇತ್ತು. ಆದರೆ ಬ್ರಾಂಚಿನವರ ಕಣ್ಣುತಪ್ಪಿನಿಂದ ಸದರಿಯವರಿಗೆ ತುಟ್ಟಿಭತ್ಯೆ ಪಾವತಿಯಾಗುತ್ತಿತ್ತು. ಈಗ ಅವರಿಂದ ಸುಮಾರು ಇಪ್ಪತ್ತೆರಡು ಸಾವಿರ ರೂಪಾಯಿಗಳಷ್ಟು ಮೊತ್ತದ ವಸೂಲಾತಿ ಸಮಸ್ಯೆ ಹುಟ್ಟಿತು.

ಆ ಪಿಂಚಣಿದಾರಳನ್ನು ಕರೆಸಿ ಕೂರಿಸಿದೆ, ”ನೋಡಮ್ಮ ಒಂದು ಸಮಸ್ಯೆಯನ್ನು ಹುಟ್ಟುಹಾಕಿಕೊಂಡಿದ್ದೀರಿ. ನಿಯಮಾವಳಿ ಪ್ರಕಾರ ನೌಕರಿ ಮಾಡುತ್ತಿದ್ದ ಟೈಮಲ್ಲಿ ನಿಮಗೆ ಡೀ ಏ ಕೊಡಲು ಬರೂದಿಲ್ಲ. ಆದರೆ ನಿಮ್ಮ ಖಾತೆಗೆ ಹೆಚ್ಚುವರಿ ಹಣ ಜಮಾ ಆಗುತ್ತಾ ಬಂದಿದೆ. ಅದನ್ನು ಆದಷ್ಟು ಕೂಡಲೇ ವಸೂಲು ಮಾಡಿ ತಿಳಿಸಬೇಕು ಎಂಬ ಆದೇಶ ಮೇಲಿನವರಿಂದ ಬಂದಿದೆ. ಹಾಗಾಗಿ ನೀವು ಆ ಹಣವನ್ನು ಕೂಡಲೇ ಮರುಪಾವತಿ ಮಾಡಬೇಕಾಗಿದೆ.” ಅನುನಯದಿಂದ ಕೇಳಿದೆ.

‘’ನನಗೆ ಗೊತ್ತಿಲ್ರೀ ಸರ, ನೀವು ಪಿಂಚಣಿ ಜಮಾ ಮಾಡತಿದ್ರಿ, ನಾನು ಅದರ ತನಿಖಿ ನೋಡಲಿಕ್ಕ ಹೋಗಿಲ್ರೀ

‘’ನೀವು ತಪ್ಪು ಮಾಡಿದ್ದೀರಿ ಎಂದು ನಾನಿಲ್ಲಿ ಆರೋಪ ಮಾಡುತ್ತ ಇಲ್ಲ. ಒಂದು ತಪ್ಪು ಘಟಿಸಿದೆ, ಈಗ ಅದನ್ನು ನಾವು - ಬೇಂಕು ಮತ್ತು ನೀವು- ಕೂತು ಸರಿಪಡಿಸಬೇಕು.”

‘’ಹೇಗೆ?”

‘’ಸುಲಭವಿದೆ. ಹೆಚ್ಚುವರಿ ಪಡೆದ ಹಣವನ್ನು ನೀವು ಕಟ್ಟಿದರೆ ಸೈ.”

‘’ನನ್ನ ಬಳಿ ಈಗ ಅಷ್ಟು ಹಣವಿಲ್ಲ, ಮೇಲಾಗಿ ಅದು ನಾನು ಮಾಡಿದ ಮಿಸ್ಟೇಕಲ್ಲ. ನಿಮ್ಮ ತಪ್ಪು.” ಕೊಂಚ ಚಾಲಾಕಾದಳು.

‘’ನೋಡಮ್ಮ, ಖಾತೆಗೆ ಪಿಂಚಣಿ ಹಣ ತಪ್ಪಾಗಿ ಹೆಚ್ಚು ಜಮಾ ಆಗುತ್ತಿದ್ದಾಗ ಸುಮ್ಮನಿದ್ದು ಈಗ ವಸೂಲಿಗೆ ಬಂದಾಗ ನನಗೇನೂ ಗೊತ್ತಿಲ್ಲ ಎಂದು ಕೈಯಾಡಿಸಿದರೆ ಸರಿಯಾಗಲ್ಲ. ನಾವು ಬೇಂಕಿನವರು ಪೆನ್ ಶನ್ ವಿತರಣೆ ಮಾಡುವುದು ಮಾತ್ರ, ಕೊಡುವವರು ಸರಕಾರದವರು. ಹಾಗಾಗಿ ಸರಕಾರದಿಂದ ಆದೇಶ ಬರುವ ವರೆಗೆ ಕಾಯುತ್ತೀರೋ ಅಥವಾ ಈಗಲೇ ಪೇಮೆಂಟ್ ಮಾಡುತ್ತೀರೋ ಯೋಚಿಸಿ ಹೇಳಿ. ಅಲ್ಲಿಯ ವರೆಗೆ ಕಾಯುತ್ತೇನೆ ಎಂದರೆ ಅದು ಡಬಲ್ ಒಫೆನ್ಸ್ ಆಗುತ್ತದೆ. ಅದು ಕಾನೂನು ಪ್ರಕಾರ ಶಿಕ್ಷಾರ್ಹ. ಅಲ್ಲದೇ ರಿಸರ್ವ್ ಬೇಂಕಿನಿಂದ ಇನ್ಸ್ ಪೆಕ್ಷನ್ ನಡೆಸಲು ಇಲ್ಲಿ ಅಧಿಕಾರಿಗಳು ಬಂದಿದ್ದಾರೆ. ಅವರಿಗೆ ಇದರ ಸುಳಿವು ಸಿಕ್ಕರೆ ಇನ್ನೂ ತೊಂದರೆ ಆಗುತ್ತದೆ. ನೀವು ಅಷ್ಟೆಲ್ಲ ಕಷ್ಟ ತೊಂದರೆಗಳಿಗೆ ಸಿಕ್ಕಿ ಬೀಳಬಾರದೆಂದೇ ಇಲ್ಲಿಗೆ ಖುದ್ದು ಕರೆಸಿ ಮಾತಾಡಿಸಿದ್ದು. ನಿಮಗೆ ಹಣ ಕಟ್ಟಲು ಏನಾದರೂ ನಮ್ಮ ಸಹಾಯ ಬೇಕಿದ್ದರೆ ತಯಾರಿದ್ದೇವೆ.”

ಆಕೆ ತೀರ ಸರಳ ವ್ಯಕ್ತಿ. ”ನೀವೇ ಏನಾದ್ರೂ ವ್ಯವಸ್ಥಾ ಮಾಡ್ರೀ ಸರ, ನಾನು ಭಾಳ ಬಡವಿ.”

‘’ಈಗ ನೀವು ಅರ್ಜಂಟಾಗಿ ಹತ್ತು ಸಾವಿರ ಕಟ್ಟಿ, ಉಳಿದ ಮೊತ್ತವನ್ನು ಇನ್ನು ಒಂದು ತಿಂಗಳ ಒಳಗೆ ಖಂಡಿತಾ ಕಟ್ಟುತ್ತೇನೆ ಎಂದು ಸಾಹೇಬರ ಬಳಿ ಒಂದು ಅರ್ಜಿ ಬರೆದುಕೊಡಿ. ನಾನೂ ಶಿಫಾರಸು ಮಾಡ್ತೇನೆ.”

‘’ಆಯ್ತು ಸರ.” ಒಂದು ವಾರದ ಬಳಿಕ ಐದುಸಾವಿರ ರೂಪಾಯಿಗಳನ್ನು ಕಟ್ಟಿ ರಶೀದಿ ತೋರಿಸಿದಳು. ಅವಳ ಹೆಸರಲ್ಲಿ ಐವತ್ತು ಸಾವಿರದ ಠೇವಣಿ ಇತ್ತು, ಅದನ್ನು ತಂದು ತೋರಿಸಿದಳು. ”ಅದರ ವಾಯಿದೆ ಮುಗಿದಿದೆ. ಅದರ ಹಣ ಕೊಡಿ, ಅದು ನನ್ನ ಹಣವಲ್ಲ, ನನ್ನ ಸಂಬಂಧಿಕರದ್ದು, ಅದರಿಂದ ನನ್ನ ಬಾಕಿ ಕೊಡಲು ಆಗೂದಿಲ್ಲ.” ಅವಳ ವಾದ.

‘’ಅದೆಲ್ಲ ಆಗೂದಿಲ್ಲ. ಸದರಿ ಡಿಪಾಸಿಟ್ಟನ್ನು ಮುಂದಿನ ವಾಯಿದೆಗೆ ರಿನ್ಯೂವಲ್ ಮಾಡಿ ಇಡಿ. ಈಗ ಬಡ್ಡಿದರವೂ ಆಕರ್ಷಕ ಇದೆ. ನಿಮಗೆ ನಷ್ಟವಾಗುವುದಿಲ್ಲ. ನಿಮ್ಮ ಬಾಕಿ ಪಾವತಿ ಆದ ಮೇಲೆ ವಾಪಸು ಕೊಡುತ್ತೇವೆ. ಬೇಗ ಬೇಗ ಕಟ್ಟಿದಷ್ಟೂ ನಿಮಗೇ ಅನುಕೂಲ.” ಸಮಾಧಾನದಿಂದ ಸಮಜಾಯಿಸಿ ತಿಳಿಹೇಳಿದ ಮಾತು ಒಪ್ಪಿದಳು. ಅವಳ ಒಟ್ಟಿಗೆ ಬಂದ ಗೆಳೆಯರೂ ಅದನ್ನೇ ಅನುಮೋದಿಸಿದರು.

ಪೂರ್ತಿ ರೊಕ್ಕ ಇಲ್ರೀ, ಏನಾದರೂ ಸಾಲ ಕೊಡಸೂ ವ್ಯವಸ್ಥಾ ಮಾಡ್ತೀರೇನ್ ಸರ?”

‘’ಸಾಲ ಅಂದರೆ ಅದಕ್ಕೆ ಬಡ್ಡೀ ನಡೀತದೆ. ಮತ್ತು ನಾವು ಸೂಕ್ತವಾದ ಸರಿಯಾದ ಕಾರಣ ನಮೂದಿಸಬೇಕು. ಬೇಂಕಿನಿಂದ ಪೆನ್ ಶನ್ ಜಾಸ್ತಿ ಪಡಕೊಂಡೀನಿ, ಅದನ್ನು ಕಟ್ಟಲಿಕ್ಕಾಗಿ ಸಾಲ ಕೊಡ್ರೀ ಅಂದ್ರ ನಡಿಯಾಂಗಿಲ್ಲ. ಆದಷ್ಟು ಲಗೂನೇ ಪಾವತಿ ಮಾಡಲು ಪ್ರಯತ್ನಿಸಿ.” ಸಮಾಧಾನ ಮಾಡಿ ಕಳಿಸಿದೆ.

ಕಾನೂನು ಪ್ರಕಾರ ಅವಳಿಂದ ಬರೂ ಹಣ ವಸೂಲಿ ಮಾಡಲು ನೀವು ಆಕೆಗೆ ಅಷ್ಟೇಕೆ ಬೆಣ್ಣೆ ಹಚ್ಚತೀರಿ? ಎಂದು ನನ್ನ ಗೆಳೆಯರು ಅಚ್ಚರಿಪಟ್ಟರು.

‘’ಕಾನೂನು, ನೋಟೀಸು, ಕೋರ್ಟು ವಕಾಲತ್ತು ಎಲ್ಲವೂ ಇವೆ. ಅವುಗಳು ಒಂದು ಕಡೆ, ಅನುನಯದ ಭರವಸೆಯ ಮಾತುಗಳು ಇನ್ನೊಂದೆಡೆ. ಎಲ್ಲವೂ ಕಾನೂನು ಮೂಲಕವೇ ನಡಿಯೂದಿಲ್ಲ. ಎರಡು ಒಳ್ಳೆಯ ನುಡಿ ಆಡಿದರೆ ಎರಡೂ ಕಡೆಯವರು ಖುಶ್ ಏನು ಹೇಳ್ತೀರಿ?”

‘’ಅದೂ ಸರೀನೆ,” ಒಪ್ಪಿದರು.

ಸುಪರಮಾರ್ಕೆಟ್ ಬ್ರಾಂಚಿಂದ ವರ್ಗವಾಗಿ ದುರ್ಗದಬೈಲು ಶಾಖೆಯಲ್ಲಿ ಡ್ಯೂಟಿ ಮಾಡುತ್ತಿದ್ದೆ. ಸುಮಾರು ಏಳೆಂಟು ತಿಂಗಳ ಬಳಿಕ ಒಂದು ಸಂಜೆ ಕೇಶ್ವಾಪೂರ ಬಡಾವಣೆಯ ಬಳಿ ಒಬ್ಬ ಯುವಕ ಎದುರು ಸಿಕ್ಕು ಮುಗುಳು ನಗುತ್ತ ನಮಸ್ಕರಿಸಿದ.

‘’ನಿಮ್ಮ ಪರಿಚಯವಾಗಲಿಲ್ಲ.!”

‘’ನಾನು ಎಸ್ತರ್ತಮ್ಮ ಸರ, ಗುರುತಾಗಿಲ್ಲೇನು?’

ನಾನು ಯೋಚನೆಗೆ ಬಿದ್ದೆ..

‘’ಸರ, ಎಸ್ತರ್ಪೆನ್ ಶನ್ ದಾರಳು, ರೊಕ್ಕ ಜಾಸ್ತಿ ತಗೊಂಡಿದ್ದಳಲ್ಲಾ. ಎಲ್ಲಾ ಹಣ ಕಟ್ಟಿ ತೀರಿಸಿದ್ದೇವೆ ಸರ, ನಿಮ್ಮಿಂದ ತುಂಬಾ ಅನುಕೂಲ ಸಹಾಯ ಆಯ್ತು ಸರ, ಈಗ ಬ್ರಾಂಚಲ್ಲಿ ನೀವು ಕಾಣಿಸ್ಲಿಲ್ಲ ಸರ, ವರ್ಗ ಆಗಿದ್ದೀರೇನ್ ಸರ? ನಿಮ್ಮ ಮೆನೆಜರೂ ಭಾಳ ಚಲೋ ಅದಾರ ಸರ. ನಿಮ್ಮಿಂದ ತುಂಬಾ ಉಪಕಾರ ಆತು ಸರ.” ಒಂದೇ ಉಸುರಲ್ಲಿ ಬಡಬಡನೆ ಧನ್ಯವಾದ ಹೇಳಿ ಪುನಃ ಉಸುರೆಳಕೊಂಡ.

ಬಹಳ ಖುಷಿಯಾಯಿತು. ”ತುಂಬಾ ಚಲೋ ಕೆಲಸ ಮಾಡಿದಿರಿ. ನಮ್ಮ ನಮ್ಮ ಕೆಲಸ, ವ್ಯವಹಾರಗಳಲ್ಲಿ ಆದಷ್ಟು ನೀಯತ್ತಿನಲ್ಲಿದ್ದರೆ ನಮಗೇ ಒಳ್ಳೆಯದು. ಮನಸ್ಸಿಗೆ ತೃಪ್ತಿ, ಸಮಾಧಾನ, ಅಲ್ಲದೆ ದೇವರು ಒಳ್ಳೇದೇ ಹರಸುತ್ತಾನೆ.”

‘’ಹೂಂನ್ರಿ ಸರ, ನಿಮ್ಮ ಆಶೀರ್ವಾದ ಸರ, ಬರ್ತೀನ್ರೀ ಸರ, ನಮಸ್ಕಾರ.”

‘’ನಮಸ್ಕಾರ.”

----0----

ಹುಬ್ಬಳ್ಳಿಯ ನನ್ನ ಸೇವಾವಧಿ ಮುಗಿದು ಗದಗದ ಮುಖ್ಯ ಶಾಖೆಗೆ ವರ್ಗವಾಯಿತು. ದಿನಾ ಬೆಳಗ್ಗೆ ರೈಲು ಪ್ರಯಾಣ. ನಿಲ್ದಾಣದ ಸ್ಕೂಟರ್ ಪಾರ್ಕಿಂಗ್ ಎಪ್ಪತ್ತು, ಹುಬ್ಬಳ್ಳಿ-ಗದಗ ರೈಲುಪ್ರಯಾಣ ಪಾಸು ನೂರಾ ನಲವತ್ತು ಹೀಗೆ ತಿಂಗಳಿಗೆ ಇನ್ನೂರಾ ಹತ್ತು ರೂಪಾಯಿಗಳ ಪ್ರಯಾಣದ ಖರ್ಚು. ನಮ್ಮದೇ ಒಂದು ಬಳಗವಿತ್ತು.

ಒಂದು ದಿನ ಮೆನೆಜರರ ಕ್ಯಾಬಿನ್ನಿನಲ್ಲಿ ಜೋರಾದ ಜಗಳದ ವಾತಾವರಣ ಕಂಡುಬಂತು. ಒಬ್ಬ ಗ್ರಾಹಕನ ಮೇಲೆ ಮೂರು ನಾಲ್ಕು ಸಿಬಂದಿಗಳು ತುಂಬ ಜಗಳ ಬಿಸಿಬಿಸಿ ಚರ್ಚೆ ಹಚ್ಚಿದ್ದರು. ಮಾರಾಮಾರಿಯ ಹಂತಕ್ಕೂ ಹೋಯಿತು. ಕೊನೆಗೆ ಮೆನೆಜರು ಪರಿಸ್ಥಿತಿಯನ್ನು ನಿಯಂತ್ರಿಸಿ ಗ್ರಾಹಕನನ್ನು ಹೊರಕಳಿಸಿದರು.

‘’ಏನು ಗಲಾಟೆ ಸರ್‍?” ಮಧ್ಯಾಹ್ನ ಕೇಳಿದೆ.

‘’ಎಲ್ಲಾ ನಾವೇ ಮಾಡಿಕೊಂಡದ್ದು ನಾಯಕರೇ, ಸೂಜಿಮೊನೆಯಲ್ಲಿ ಹೋಗುವಂತದಕ್ಕೆ ಒನಕೆ ಬಳಸಿದರೆ ಹೇಗೆ? ಇಲ್ಲಿ ಕೆಲಸ ಮಾಡುವಾಗ ಯಾವ ಯಾವದೋ ಪರಧ್ಯಾನದಲ್ಲಿದ್ದು, ಮಾಡಿದ ತಪ್ಪು ಒಪ್ಪದೇ ಮುಚ್ಚಿಕೊಳ್ಳಲು ಇನ್ನೊಂದು ತಪ್ಪು, ತದನಂತರ ಮಗುದೊಂದು ತಪ್ಪು ಮಾಡಿ ಮಾಡಿ ಈಗ ದೊಡ್ಡ ಗುಡ್ಡ ಆಗಿದೆ.”

ವಿಷಯ ಹೇಳಿ ಸರ್

‘’ಬೆಳಗ್ಗೆ ಬಂದರಲ್ಲಾ, ಮನುಷ್ಯ ಒಬ್ಬ ಮರಿಲಾಯರು, ಮೇಲಾಗಿ ಸಣ್ಣ ಮಟ್ಟಿನ ಪುಢಾರಿಯೂ ಆಗಿದ್ದಾನೆ. ಹಿಂದೆ ಇವನ ತಾಯಿಯ ಪೆನ್ ಶನ್ ನಮ್ಮಲ್ಲಿಂದ ಬಟವಾಡೆಯಾಗುತ್ತಿತ್ತು. ಒಂದೆರಡು ವರ್ಷಗಳ ಹಿಂದೆ ಆಕಿ ಅದನ್ನು ಹುಬ್ಬಳ್ಳಿ ಸುಪರ್ಮಾರ್ಕೆಟ್ ಬ್ರಾಂಚಿಗೆ ವರ್ಗಾಯಿಸಿಕೊಂಡಳು. ಹಾಗಿರುವಾಗ ಇಲ್ಲಿನವರ ಜವಾಬುದಾರಿ ಏನಿತ್ತು? ಇಲ್ಲಿ ಮಾಡುವ ಬಟವಾಡೆ ಯನ್ನು ನಿಲ್ಲಿಸಬೇಕಿತ್ತು ತಾನೇ? ಅದನ್ನು ಮಾಡಲು ಹೆಚ್ಚು ಕಷ್ಟವಿಲ್ಲ. ಅದಕ್ಕೆಂದೇ ಇರುವ ಒಂದು ಪತ್ರವನ್ನು ಝೋನಲ್ ಆಫೀಸಿಗೆ ಹಾಕಿದ್ದರೆ ಸಾಕಿತ್ತು, ಅಷ್ಟೆ. ಅದನ್ನಿವರು ಮಾಡಿಲ್ಲ. ಆಕೆಗೆ ಇಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ಎರಡೂ ಕಡೆ ಪೆನ್ ಶನ್ ಜಮಾ ಆಗ್ತಿತ್ತು. ಇಲ್ಲಿ ಜಮಾ ಆಗುತ್ತಿದ್ದ ವಿಚಾರ ಆಕೀಗೆ ಗೊತ್ತಿದ್ದಿಲ್ಲ. ಕೆಲವು ಸಮಯದ ಹಿಂದೆ ಇಲ್ಲಿನ ಪಾಸ್ ಬುಕ್ಕಿನ  ಎಂಟ್ರೀ ಮಾಡಿಸಲು ಬಂದಾಕಿಗೆ ಪುಸ್ತಕ ಎಂಟ್ರಿ ಮಾಡಿಕೊಡುವ ಬದಲು ವರ್ಷಗಟ್ಟಲೇ ಬಾಕಿಯಿರುವ ಎಂಟ್ರಿ ಮಾಡಲಾಗೂದಿಲ್ಲ ಹಂಗೆ ಹಿಂಗೆ ಅಂತ ಜಗಳ ಹಚ್ಚಿ ವಾಪಸು ಕಳಿಸಿದರು. ಮರುದಿನ ಆಕಿ ಮತ್ತು ಲಾಯರು ಬಂದಾಗ ಪುನಃ ಜಗಳ ಹಚ್ಚಿದರು. ಬಂದ ಕಸ್ಟಮರ್ಬಳಿ ಮಂದಿ ಎದಕ ಜಗಳ ನಡಸ್ತಾರೋ ನನಗ್ಗೊತ್ತಾಗಲ್ಲ, ಗದ್ದಲಾ ಜೋರಾಗಿ ಆಕಿ ತನ್ನ ಅಕೌಂಟು ಕ್ಲೋಸ್ ಮಾಡಿ ಹೋದಳು. ಖಾತೆ ಕ್ಲೋಸ್ ಮಾಡುವಾಗಲಾದ್ರೂ ಸ್ವಲೂಪ ಧ್ಯಾನ ಬೇಕೋ ಬೇಡವೋ! ಯಾವಾಗ್ಲೂ ಹಟವೇ ಮುಖ್ಯವಾದರೆ ಹಿಂಗೇ ತೊಂದರೆ ಆಗೂದು ನೋಡಿ. ಆಕಿ ಡಬಲ್ ಪೇಮೆಂಟ್ ಪಡಕೊಂಡದ್ದು ಇವರಿಗೆ ತಿಳಿಯುವಾಗ ತುಂಬ ತಡವಾಗಿತ್ತು. ಈಗ ಅವರು ರೊಕ್ಕ ಕೊಡಾಂಗಿಲ್ಲ, ಇವರು ಬಿಡಾಂಗಿಲ್ಲ. ಕೊನೆಗೆ ವಕೀಲನನ್ನ ಮ್ಯೂಚುವಲ್ ದೋಸ್ತ್ ಒಬ್ಬರ ಮೂಲಕ ಮನವೊಲಿಸಿ ಚಲೋ ಮಾತು ಹೇಳಿ ಚಾಪ್ಟರ್ಕ್ಲೋಸ್ ಮಾಡೋಣ ಅಂತ ಕರೆಸಿದ್ದೆ, ಇನ್ನಾ ಮಾತುಕತೆ ಶುರು ಮಾಡಿಲ್ಲ ಧಾಂಡಿಗ ಮಂದಿ ಒಳ ನುಗ್ಗಿ ಎಲ್ಲ ಚೌಪಟ್ ಮಾಡಿಬಿಟ್ರು, ಛೇ!!” ಉತ್ತರಕರ್ನಾಟಕದ ಜನಪ್ರಿಯ ಆಶೀರ್ವಚನಗಳು ನಡುನಡುವೆ ಪುಂಖಾನುಪುಂಖವಾಗಿ ಬಳಕೆಯಾದವು. ಹಿತವಾಗದ ಕಾರಣ ನಾನದನ್ನು ಪ್ರಸ್ತುತ ಪಡಿಸಿಲ್ಲ. ಸ್ವಭಾವತಃ ಸೌಮ್ಯ ಭಾವದ ಹಿತನುಡಿಯ ಮೆನೆಜರು ಅಂದು ಬಹಳವೇ ಖತಿಗೊಂಡಿದ್ದರು.

ಸರ್ವೇಸಾಮಾನ್ಯ ಗ್ರಾಹಕರು ಬೇಂಕುಗಳಿಗೆ, ಸಂಸ್ಥೆಗಳಿಗೆ ಮೋಸ, ದಗಾ ಮಾಡುವವರಲ್ಲ. ಆದರೆ ವಿನಾಕಾರಣ ಕಾಲುಕೆದರಿ ಜಗಳಕ್ಕೆ ಬಂದರೆ, ಅನಗತ್ಯ ಕಿರಿಕಿರಿ ಅಸಡ್ಡೆ ಮಾತುಗಳನ್ನಾಡಿದರೆ ನಂತರದ ದಿನಗಳಲ್ಲಿ ಅನಾವಶ್ಯ ತೊಂದರೆ, ಕಷ್ಟ, ನಷ್ಟಗಳನ್ನು ಅನುಭವಿಸಬೇಕು. ಅದೂ ಅಲ್ಲದೆ ವರ್ಷಾವಧಿಯಲ್ಲಿ ಸಂಸ್ಥೆ ಗಳಿಸಿದ ಒಳ್ಳೆಯ ಹೆಸರಿಗೂ ಮಸಿ ಬಳಿದಂತೆ ಆಗುತ್ತದೆ. ನಾವು ಬುದ್ಧಿವಂತರು ಎಂದು ಇತರರಿಗೆ ತೋರಿಸಬೇಕೆಂದಿಲ್ಲ. ನಮ್ಮಂತೆ ಇತರರೂ ಬುದ್ಧಿವಂತರಿರುತ್ತಾರೆ ಎಂಬ ತಿಳಿವಳಿಕೆ, ಸಜ್ಜನಿಕೆ ಇದ್ದರೆ ಅನೇಕ ಅನಗತ್ಯ ಕಷ್ಟಗಳು ಸುರುವಾಗುವುದೇ ಇಲ್ಲ.

ಎಪಿಸೋಡು ಕಾಲ ೧೯೯೭

ನೆನಪು ೨೦೧೨ 

 

 

No comments:

Post a Comment