ಜವಹರಲಾಲ್ ನೆಹರೂಗೆ ದೇಶದ ಗಡಿರಕ್ಷಣೆ ಕುರಿತು ಸರದಾರ ವಲ್ಲಭಭಾಯಿ ಪಟೇಲರು ತುಂಬಾ ಜಾಗರೂಕರಾಗಿರಿ ಎಂದು ಪದೇಪದೇ ಗಿಳಿಗೆ ಹೇಳಿದ ಹಾಗೆ ಜ್ಞಾಪಿಸುತ್ತ ಇದ್ದರು. ನಾವು ನಮ್ಮ ಗಡಿಯಲ್ಲಿ ಬಹಳ ಜಾಗರೂಕರಾಗಿರಬೇಕು, ಚೈನಾ ದೇಶ ಬಹಳ ಮಹತ್ವಾಕಾಂಕ್ಷೀ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದುವರೆಯುತ್ತಿದೆ, ಟಿಬೆಟ್ ನೊಂದಿಗೆ ನಾವು ರಕ್ಷಣಾ ಒಪ್ಪಂದ ಮಾಡಿಕೊಂಡು ಅಲ್ಲಿ ನಮ್ಮ ಸೈನ್ಯದ ತುಕಡಿಯೊಂದನ್ನು ಸ್ಥಾಪಿಸಬೇಕು, ಈ ಕೆಲಸ ಆದಷ್ಟು ಬೇಗನೇ ಮಾಡಬೇಕು ಎಂಬ ಸಲಹೆ ನೀಡಿದ್ದರು. ನಮ್ಮ ಮತ್ತು ಚೈನಾದ ನಡುವೆ ಒಂದು buffer zone (ಅತಿರಿಕ್ತ ದೇಶ) ಇದ್ದರೆ ನಮಗೇ ಒಳ್ಳೆಯದು, ಯುದ್ಧದ ಪರಿಸ್ಥಿತಿ ಬಂದರೆ ನಮ್ಮ ನೆಲ ಸೇಫ್ ಆಗಿ ಇರುತ್ತದೆ ಎಂಬ ಆಶಯ ಅವರದು.
ಆದರೆ ಪ್ರಧಾನಿ ನೆಹರು ಮತ್ತು ಉಪಪ್ರಧಾನಿ ಪಟೇಲ್ ಅವರ ಸಂಬಂಧಗಳು ಹೇಳಿಕೊಳ್ಳುವಷ್ಟು ಸರಳವಾಗಿರಲಿಲ್ಲ. ಪಟೇಲರ ಮಾತು ಕೇಳುವ ಸೌಜನ್ಯ ನೆಹರೂಗೆ ಇರಲಿಲ್ಲ, ನೀನು ಗೃಹಮಂತ್ರಿ ತಾನೇ, ನಿನ್ನ ಕೆಲಸ ಮಾತ್ರ ನೋಡಿಕೋ, ವಿದೇಶ ವ್ಯವಹಾರ ನನ್ನ ಜಬಾದಾರಿ, ನಾನದನ್ನು ನೋಡಿಕೊಳ್ಳುತ್ತೇನೆ, ನಿನ್ನ ಸಲಹೆ ಬೇಡ ಎಂಬ ಉಡಾಫೆಯಿಂದ, ಮತ್ತು ಜಾಗತಿಕವಾಗಿ ತನ್ನ ವೈಯಕ್ತಿಕ ದೊಡ್ಡಸ್ತಿಕೆಯನ್ನು ಮೆರೆಸುವ ಗಡಿಬಿಡಿಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯತ್ತ ಧ್ಯಾನವನ್ನೇ ಕೊಡಲಿಲ್ಲ. ಹಿಂದೀ ಚೀನೀ ಭಾಯೀ ಭಾಯೀ ಎಂದು ಚೌ ಎನ್ ಲೈ ಹೆಗಲ ಮೇಲೆ ಕೈಯಿಟ್ಟು ಜಗತ್ತೆಲ್ಲ ತಿರುಗಿದ್ದೇ ತಿರುಗಿದ್ದು! ಆ ಬದಮಾಷ್ ಚೌ ಎನ್ ಲೈ ತನ್ನ ಇನ್ನೊಂದು ಕೈಯಲ್ಲಿ ಚೂಪಾದ ಚೂರಿ ಹಿಡಕೊಂಡೇ ಇವರೊಡನೆ ವ್ಯವಹರಿಸುತ್ತಿದ್ದ. ನೆಹರೂಗೆ ಇದು ತಿಳಿಯಲೇ ಇಲ್ಲ!! ಬೇಜವಾಬುದಾರಿಯಾಗಿ ನಡಕೊಂಡ ಫಲವಾಗಿ ಒಂದು ಬಲಾಢ್ಯ ದೇಶ ನಮ್ಮ ಮೇಲೆಯೇ ಯುದ್ಧ ನಡೆಸಿ ಬಹುದೊಡ್ಡ ಪ್ರಮಾಣದ ಭೂಭಾಗವನ್ನು ಕಬಳಿಸಿಕೊಂಡು ಇಂದಿಗೂ ನಾವು ಬಹುದೊಡ್ಡ ಸಮಸ್ಯೆಯಲ್ಲಿದ್ದೇವೆ.
ಆದರೆ ರಷ್ಯಾದ ಅಧ್ಯಕ್ಷ ಅಷ್ಟು ಮೂರ್ಖರಲ್ಲ. ಎಂಭತ್ತರ ದಶಕದಲ್ಲಿ ಏಕಾಧಿಪತ್ಯ ಕೊನೆಗೊಂಡು ಸೋವಿಯತ್ ಒಕ್ಕೂಟದ ಸದಸ್ಯ ದೇಶಗಳು ಸ್ವತಂತ್ರ ದೇಶಗಳಾದವು. ಆ ಸಮಯದಲ್ಲಿ 'ಕಾಮನ್ ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (C I S) ರಚನೆಯಾಗಿ ಈ ದೇಶಗಳು ಒಗ್ಗಟ್ಟಾಗಿ ಇರಬೇಕು-ಇರುತ್ತೇವೆ- ನಮ್ಮ ಕೂಟವನ್ನು ಒಡೆಯುವ ಕೆಲಸವನ್ನು ನೇಟೋ ಮತ್ತು ಯುರೋಪಿಯನ್ ಒಕ್ಕೂಟದವರೂ ಕೂಡ ಮಾಡಬಾರದು ಎಂದೂ, ತಮ್ಮ ಒಕ್ಕೂಟದ ರಾಜ್ಯಗಳು ಯುರೋಪಿಯನ್ ಯೂನಿಯನ್ ಸೇರಬಾರದು ಎಂದೂ ಒಪ್ಪಂದ ಮಾಡಿಕೊಂಡಿದ್ದವು. ಹೆಚ್ಚಿನ ರಾಜ್ಯಗಳು ಈ ಒಪ್ಪಂದವನ್ನು ಮನ್ನಿಸಿವೆ. ಆದರೆ ಕಾಲ ಕಳೆದಂತೆ ಅಮೆರಿಕ ಹಾಗೂ ಯುರೋಪಿಯನ್ನರ ಸೆಳೆತ ವಸಾಹತುಶಾಹಿತನಗಳ ಬಲವಂತ ಯಾ ಆಕರ್ಷಣೆಗಳಿಗೆ ಬಲಿಯಾಗಿ ಕೆಲವು ರಾಜ್ಯಗಳು ಐರೋಪ್ಯ ಒಕ್ಕೂಟಕ್ಕೆ ಸೇರಿದವು. ಉಕ್ರೇನ್ ರಷ್ಯಾಕ್ಕೆ ನೆರೆ ರಾಷ್ಟ್ರ. ಇಬ್ಬರೂ ಒಂದೇ ಗಡಿಯನ್ನು ಹಂಚಿಕೊಂಡಿವೆ. ಪಶ್ಚಿಮ ರಾಷ್ಟ್ರಗಳ ಗುಂಪಿಗೆ ಸೇರಬಾರದು ಎಂದು ತಾಕೀತು ಮಾಡಿದರೂ ಉಕ್ರೇನ್ ಒಪ್ಪದಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ಗೆ ಸಿಟ್ಟು ಬರುವುದು ಸ್ವಾಭಾವಿಕ. ತನ್ನ ಗಡಿಯಲ್ಲಿ ಮಹತ್ವಾಕಾಂಕ್ಷಿ ರಾಷ್ಟ್ರವೊಂದು ಬೀಡು ಬಿಡುವುದು ಸಹಜವಾಗಿ ಅವರಿಗೆ ಸಹನೆಯಾಗುವುದಿಲ್ಲ. ನೇಟೋ ಸೇರಬಾರದು, ಸೇರಿದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂಬ ವಾರ್ನಿಂಗ್ ಸಹ ನೀಡಿದ್ದರು ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಆದರೆ ಈ ಅಮೆರಿಕದ ಒತ್ತಾಸೆ, ಬಲವಂತ ಹಾಗೂ ಸೆಳೆತಗಳಿಗೆ ಬಲಿಯಾಗಿ ಉಕ್ರೇನಿನ ಅಧ್ಯಕ್ಷ ಪುಟಿನರ ಮಾತು ಕೇಳದೇ ತನ್ನ ದೇಶವನ್ನು ಯುದ್ಧದ ಬೆಂಕಿಗೆ ನೂಕಿದ್ದಾರೆ....
ಭಾರತ-ರಷಿಯಾ-ಉಕ್ರೇನ್.....
ರಷ್ಯಾವು ಬಹುಕಾಲದಿಂದಲೂ ಭಾರತದ ಪರಮ ಸ್ನೇಹಿತನಾಗಿಯೇ ಇತ್ತು-ಇದೆ. ನಮ್ಮ ಯಾವುದೇ ಸಂಕಷ್ಟದ ಸಮಯದಲ್ಲಿ ನಮಗೆ ಬೆಂಬಲ ಸಹಾಯ ಹಸ್ತ ನೀಡಿದೆ. 1971ರ ಬಾಂಗ್ಲಾ ವಿಮೋಚನೆಯ ಹೋರಾಟದ ಸಮಯದಲ್ಲಿ ಅಮೆರಿಕವು ಭಾರತದ ವಿರುದ್ಧ ತನ್ನ ಸಮರ ನೌಕೆಯನ್ನು ಕಳುಹಿಸಿದಾಗ ಸಕಾಲದಲ್ಲಿ ಸಹಾಯ ನೀಡಿದ ದೇಶ ರಷ್ಯಾ. ನಮ್ಮ ರಕ್ಷಣಾ ವ್ಯವಸ್ಥೆಯ ಶೇಕಡಾ 70ರಷ್ಟು ಯುದ್ಧ ಸಾಮಗ್ರಿಗಳನ್ನು ಪೂರೈಸುವುದು ರಷಿಯಾ. ಆಧುನಿಕ S-400 ಕ್ಷಿಪಣಿಗಳನ್ನು ಅಮೆರಿಕದ ವಿರೋಧ ಇದ್ದರೂ ಸಕಾಲದಲ್ಲಿ ಸರಬರಾಜು ಮಾಡಿದ ದೇಶ ರಷ್ಯಾ.ಕಾಶ್ಮೀರ ಸಮಸ್ಯೆ ಕುರಿತು ವಿಶ್ವಸಂಸ್ಥೆಯಲ್ಲಿ ಬೆಂಬಲವಾಗಿ ಇರುವ ರಾಷ್ಟ್ರ ರಷ್ಯಾ..
1998ರಲ್ಲಿ ಮಾನ್ಯ ವಾಜಪೇಯಿಯವರು ಅಣ್ವಸ್ತ್ರ ಪರೀಕ್ಷಣೆ ನಡೆಸಿದಾಗ ಅದನ್ನು ಟೀಕಿಸಿ ವಿರೋಧಿಸಿ ನಮ್ಮ ವಿರುದ್ಧ ಮತ ಹಾಕಿದ ದೇಶ ಉಕ್ರೇನ್, ನಮ್ಮ ವಿರೋಧವಿದ್ದರೂ ಪಾಕಿಸ್ತಾನಕ್ಕೆ ಯುದ್ಧ ಟ್ಯಾಂಕ್ ಗಳನ್ನು ಒದಗಿಸಿದ ದೇಶ ಉಕ್ರೇನ್, ನಮಗೆ ಯುರೇನಿಯಂ ಸಪ್ಲೈ ಮಾಡಲು ನಿರಾಕರಿಸಿದ ದೇಶ ಉಕ್ರೇನ್, ಕಾಶ್ಮೀರ ಸಮಸ್ಯೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ವಿರೋಧ ಮತ ಹಾಕಿದ ದೇಶ ಉಕ್ರೇನ್. 370 ನೇ ವಿಧಿಯನ್ನು ರದ್ದು ಪಡಿಸಿದ್ದುದನ್ನು ಖಂಡಿಸಿ ನಮ್ಮ ಆಂತರಿಕ ವ್ಯವಹಾರಗಳಲ್ಲಿ ಅನವಶ್ಯಕ ತಲೆ ತೂರಿಸಿದ ದೇಶ ಉಕ್ರೇನ್, ನಿಮ್ಮ ಸಾವಿರಾರು ಯುವಕರು ನಮ್ಮಲ್ಲಿ ಕಲಿಯುತ್ತಿದ್ದಾರೆ, ಅವರ ಸುರಕ್ಷತೆ ಬೇಕಿದ್ದರೆ ನಮ್ಮ ಪರ ವಿಶ್ವಸಂಸ್ಥೆಯಲ್ಲಿ ಮತ ಹಾಕಿ ಎಂಬ ಬೆದರಿಕೆ ಹಾಕಿದ ದೇಶ ಉಕ್ರೇನ್.......
ಹೀಗಿರುವಾಗ ನಮ್ಮ ಪರಮ ಮಿತ್ರರಾಷ್ಟ್ರವಾದ ರಷ್ಯಾದ ಪರವಾಗಿ ನಾವಿರಬೇಕೇ ಅಥವಾ ನಮಗೆ ವ್ಯತಿರಿಕ್ತವಾಗಿ ಧೋರಣೆ ಇಟ್ಟುಕೊಂಡಿರುವ ಉಕ್ರೇನ್ ಪರವಾಗಿ ನಿಲ್ಲಬೇಕೇ..!! ಯೋಚಿಸಬೇಕಾದ ವಿಚಾರ. ನಮ್ಮ ದೇಶದ ನಿಜವಾದ ಮಿತ್ರನ ಬೆಂಬಲಕ್ಕೆ ನಿಲ್ಲಬೇಕಾದುದು ನಮ್ಮದೇ ಹಿತಕ್ಕೆ ದಾರಿ. ಹಾಗಿರುವಾಗ ಕೆಲವು ಪತ್ರಿಕೆಗಳು ರಷ್ಯಾವನ್ನು ಅತಿರಂಜಿತವಾಗಿ ನಿಂದಿಸುವುದು ಸೂಕ್ತವಲ್ಲ. ಪ್ರತೀ ರಾಷ್ಟ್ರವೂ ತನ್ನ ಹಿತವನ್ನೇ ಬಯಸುತ್ತದೆ. ಅಂತಿರುವಾಗ ನಾವು ಸಹ ನಮಗೆ ಯಾವುದು ಹಿತ ಎಂದು ಯೋಜಿಸಿಯೇ ನೀತಿ ನಿರೂಪಣೆ ನಿರ್ಧರಿಸಬೇಕು. ವಿನಾ ಕಾರಣ ನ್ಯಾಯದಾನ ಮಾಡುವುದು ಉಚಿತವಲ್ಲ.
ಮಾರ್ಚ್ 2, 2022 ರಂದು ಫೇಸ್ ಬುಕ್ ನಲ್ಲಿ ಪ್ರಕಟಿತ.
No comments:
Post a Comment