ನಮ್ಮ ಬ್ರಾಂಚು ಹುಡುಗಾಟಿಕೆಗೆ ಇಡೀ ದಿಲ್ಲಿಗೇ ಫೇಮಸ್ಸು. ಮೂರಕ್ಕೆ ಕಮ್ಮಿಯಿಲ್ಲದಂತೆ ದಿನಾ ಜಗಳಗಳಿಲ್ಲದಿದ್ದರೆ ಏನೋ ಕಳಕೊಂಡ ಭಾವ!! ಜಗಳಕ್ಕೆ ಗ್ರಾಹಕರು ಸಿಗದಿದ್ದರೆ ತಮ್ಮೊಳಗೇ ಏನಾದರೂ ಕಿರಿಕಿರಿ ಹುಟ್ಟಿಸಿಕೊಂಡು ಆ ನ್ಯೂನತೆಯನ್ನು ಹೋಗಲಾಡಿಸಿಕೊಳ್ಳುತ್ತಿದ್ದೆವು. ಅದೊಂದು ಡೆಮೊಕ್ರೆಟಿಕ್ ವ್ಯವಸ್ಥೆ. ಯಾರು ಯಾರ ಬಳಿ ಬೇಕಿದ್ದರೂ ಯುದ್ಧಕ್ಕಿಳಿಯ ಬಹುದಿತ್ತು - ಕ್ಲಾರ್ಕ್×ಕ್ಲಾರ್ಕ್, ಕ್ಲಾರ್ಕ್×ಆಫೀಸರ್, ಆಫೀಸರ್×ಆಫೀಸರ್- ಹೀಗೆ ಯಾವುದೇ ತಾರತಮ್ಯವಿರಲಿಲ್ಲ. 1.ಕ್ಯಾಷ್ ಕೌಂಟರಿನಲ್ಲಿ 2. ಸೇವಿಂಗ್ಸ್ ಡಿಪಾರ್ಟ್ ಮೆಂಟಲ್ಲಿ 3. ಪಿಗ್ಮಿ ಸೆಕ್ಷನ್ನು, ಈ ರೀತಿ ಮಿನಿಮಮ್ ಮೂರು, ಉಳಿದಂತೆ ಹೆಚ್ಚುವರಿ ಮನೋರಂಜನೆ! (ಜಗಳ) ಅವರವರ ಖಯಾಲು ಹೊಂದಿಕೊಂಡಂತೆ.......
ಇಂತಿರುವ ಒಂದು ದಿನ, ಸುಮಾರು ಹನ್ನೊಂದು ಘಂಟೆಯ ಸಮಯಕ್ಕೆ ತಲೆ ತುರಿಸಿಕೊಳ್ಳಲೂ ಆಗದಂತಹ ಕೆಲಸದ ನಡುವೆ ಏನೋ ಅಸಂಮಂಜಸತೆಯ ಭಾವದಿಂದ ತಲೆ ಎತ್ತಿ ನನ್ನ ಕ್ಲಾರ್ಕ್ ಅರೋಡಾ ಬಳಿ ಕೇಳಿದೆ 'ಹಾಂಜಿ ಅರೋಡಾ, ಇವತ್ತು ಏನು ವಿಶೇಷವಿದೆ?
'ಏನೂ ಇಲ್ಲವಲ್ಲ! ಏಕೆ?'
'ಬೆಳಗಿನಿಂದ ನೋಡುತ್ತಿದ್ದೇನೆ!! ಇವತ್ತು ಏನೋ ಪ್ರೊಬ್ಲೆಮ್ ಇದೆ. ಎಲ್ಲರೂ ಮೌನವಾಗಿದ್ದೀರಿ! ಏನೂ ಗಲಾಟೆ ಇಲ್ಲ, ಹೀಗಾದರೆ ಹೇಗೆ? ಏನೂ ಮಜಾ ಇಲ್ಲ!!'
ಅಷ್ಟೊತ್ತಿಗೆ ಹಿಂದಿನ ಸೀಟಲ್ಲಿ ಕೂತಿದ್ದ ಸಿಸೋಡಿಯಾನ ಬಾಯಿಂದ ಸಾವಿರ ವಾಟ್ಸಗಳಿಗಿಂತ ಜಾಸ್ತಿಯ 'ಹೋ ಹೋ ಹೋ' ಎಂಬ ಘರ್ಜನೆ ಮೊಳಗಿತು!!! ತಮ್ಮಷ್ಟಕ್ಕೇ ದಿನದ ಕೆಲಸ ಮಾಡಿಕೊಂಡಿದ್ದ ಇಡೀ ಬ್ರಾಂಚು ಒಮ್ಮೆಲೇ ಜಿಗಿತು ಬಿತ್ತು!! ಕೇಬಿನ್ನಿನಿಂದ ಮೆನೆಜರು ಗಾಬರಿ ಬಿದ್ದು ಹೊರಗೋಡಿ ಬಂದರು 'ವಾಟ್ ನೋನ್ಸೆಂಸ್ ಈಸ್ ಹೆಪ್ಪನಿಂಗ್ ಹಿಯರ್? ಯಹ್ ಕ್ಯಾ ಮಜಾಕ್ ಬನಾ ರಕ್ಖಾ ಹೈ?' ನನ್ನ ಬಳಿ ಬಂದರು...
'ನಾಯಕ್ ಸಾಬ್ ಕೋ ಕುಛ್ ಮಜಾ ನಹೀಂ ಆ ರಹಾ ಥಾ, ಅಬ್ ತೋ ಆಯಾ ನಾ?...' ಸಿಸೋಡಿಯಾ ವಿವರಣೆ ನೀಡಿದ. ಬ್ರಾಂಚು ಘೊಳ್ಳೆಂದು ನಕ್ಕಿತು...
'ಇದೇನು ತಮಾಷೆ ನಾಯಕರೇ? ಕಮ್ ಟು ಮೈ ಕೇಬಿನ್' ಮೆನೆಜರು ಸಿಡಿಮಿಡಿಗೊಂಡರು. ಇದೇನು ರಗಳೆಯಪ್ಪಾ ಎಂದು ಕೇಬಿನ್ನಿಗೆ ಹೋದೆ.
'ನಾಯಕರಿಗೆ ಏನೂ ಗಮ್ಮತ್ತು ಆಗಿರಲಿಲ್ಲ. ಈಗ ನೋಡಿ ಒಳಗೆ ಚೆನ್ನಾದ ಮಜಾ ಆಗ್ತದೆ ಎಂದು ಬ್ರಾಂಚಲ್ಲಿ ಇನ್ನೊಂದು ಬೊಬ್ಬೆ ಎದ್ದಿತು.
'ನೋಡಿ ನಾಯಕರೆ, ಇವರು ನಿಮ್ಮ ಕರ್ನಾಟಕದವರು, ಮಿ.......ರವರು. ಗೋವಾದಿಂದ ವರ್ಗವಾಗಿ ಬಂದಿದ್ದಾರೆ. ಇವರ ಪರಿಚಯ ಎಲ್ಲರಿಗೂ ಮಾಡಿಕೊಡಿ... ಅದೇನು ಹೊರಗೆ ಗಲಾಟೆ ಎಬ್ಬಿಸಿದ್ದೀರಿ?'
'ಅದು ನಿತ್ಯದ ಖರ್ಮ. ನೀವು ಚಿಂತೆ ಮಾಡಬೇಡಿ. ಬನ್ನಿ ಇವರೇ, ನಿಮಗೆ ಎಲ್ಲರ ಗುರುತು ಪರಿಚಯ ಮಾಡಿಕೊಡುತ್ತೇನೆ.' ಎಂದು ಬಂದ ಹೊಸ ಅಧಿಕಾರಿಯವರ ಸ್ವಾಗತ ಮಾಡಿದೆ.
'ಇಲ್ಲಿ ಎಲ್ಲಿ ಉಳಕೊಂಡಿದ್ದೀರಿ?'
'ಯಾವುದೋ ಹೊಟೇಲಲ್ಲಿ ಬೇಗು ಬಿಸಾಡಿ ಬಂದಿದ್ದೇನೆ. ಇಲ್ಲಿ ಒಬ್ಬ ನಾಯಕ್ ಅವರ ವಿಳಾಸವನ್ನು ಗೋವಾದ ನನ್ನ ಮೆನೆಜರು ಕೊಟ್ಟಿದ್ದಾರೆ. ಅವರೊಟ್ಟಿಗೆ ಮನೆ ಸಿಗುವ ತನಕ ಉಳಕೊಳ್ಳಲು ಒಪ್ಪಿದ್ದಾರೆ.'
'ನಿಮ್ಮ ಆ ನಾಯಕರು ಬ್ರಹ್ಮಚಾರಿ ಮನುಷ್ಯ. ಆದಿತ್ಯವಾರ ಅಡುಗೆ ಮಾಡಿ ವಾರವಿಡೀ ಅದನ್ನೇ ಫ್ರಿಜ್ಜಲ್ಲಿಟ್ಟು ತಿಂದು ದಿನ ಕಳೆಯುತ್ತಾರೆ. ಒಂದು ಕೆಲಸ ಮಾಡಿ. ನಮ್ಮದು ಮನೆ ಸಣ್ಣದು, ನಿಮಗೆ ಅಭ್ಯಂತರವಿಲ್ಲದಿದ್ದರೆ, ಕುಚ್ಚಲಕ್ಕಿ ಊಟ ಸೇರುತ್ತದಾದರೆ ನಮ್ಮಲ್ಲಿ ಉಳಕೊಳ್ಳಿ. ಸಂಜೆಯ ಸಮಯದಲ್ಲಿ ಮನೆ ಹುಡುಕಾಟ ಮಾಡಿ. ನಾನೂ ಬರುತ್ತೇನೆ....'
'ನಿಮಗೇಕೆ ತೊಂದರೆ...' ಎಂದು ಮೊದಲು ದಾಕ್ಷಿಣ್ಯ ಪಟ್ಟುಕೊಂಡರೂ ನನ್ನ ಒತ್ತಾಯದ ಮೇರೆಗೆ ನಮ್ಮಲ್ಲಿ ಉಳ ಕೊಂಡರು. ನಂತರ ಸೂಕ್ತ ಮನೆ ಹುಡುಕಿ ತಮ್ಮ ಸಂಸಾರ ಕರೆಸಿಕೊಂಡರು. ಮುವತ್ತನಾಲಕ್ಕು ವರುಷಗಳಾದವು. ಇಂದಿಗೂ ಅವರು ನನ್ನ ಬಹಳ ಆತ್ಮೀಯರು.
.....ಲಾಲ್ ಗುಪ್ತಾ ನಿಜಕ್ಕೂ ಬ್ರಾಂಚಿನ ಲಾಲ್ ಆಗಿದ್ದ. ಬಹಳ ಸ್ನೇಹಜೀವಿ. ಎಲ್ಲರೊಡನೆ ತಮಾಷೆ ಮಾತನ್ನಾಡಿಕೊಂಡು ಗ್ರಾಹಕರೊಡನೆ ಸ್ನೇಹಮಯ ಸಂಬಂಧ ಇಟ್ಟುಕೊಂಡಿದ್ದವನು. ಏನು ಕಿರಿಕಿರಿಯಿದ್ದರೂ ಮಧ್ಯ ಬಂದು ಸಮಾಧಾನಕರ ಹೊಂದಾಣಿಕೆಯಲ್ಲಿ ಜಗಳ ತೀರ್ಮಾನ ಮಾಡುತ್ತಿದ್ದ. ಉಪಕಾರಿ ಜೀವಿ.
'ಭಾಯ್ ಗುಪ್ತಾ, ಆಪ್ ಸೇ ಕುಛ್ ಮದದ್ ಹೋನಾ ಹೈ, ಕರೋಗೆ?' ಕೇಳಿದೆ.
'ಹುಕಂ ಕರೋ ಜೀ'
'ಐಸಾ ಹೈ, ಆಜ್ ಮಚ್ಛೀ ಖಾನೆ ಕಾ ಮನ್ ಕರ್ ರಹಾ ಹೈ.'
'ಮಚ್ಛೀ ಖಾನೇ ಕೀ ಇಚ್ಛಾ ಹೋ ರಹೀ ಹೈ?'
'ಹೌದು ಮಹರಾಯ, ಆದರೆ ನನಗೆ ಒಳ್ಳೆಯ ಮೀನು ಆರಿಸಲು ಬರೂದಿಲ್ಲ. ಬಜಾರಿನಿಂದ ತಾಜಾ ಮೀನು ಆರಿಸಲು ಸಹಾಯ ಮಾಡ್ತೀಯಾ?
'ಅಚ್ಛಾ ಜೀ' ಎಂದವನೇ 'ನಾಯಕ್ ಸಾಬ್ ಕೋ ಮಚ್ಛೀ ಖಾನೇ ಕೀ ಬಡೀ ಇಚ್ಛಾ ಹೋ ರಹೀ ಹೈ, ಔರ್ ಆಜ್ ಉನಕೋ ಗುಪ್ತಾ ಅಚ್ಛೀ ಮಚ್ಛೀ ಚುನ್ ಕೇ ದೇಗಾ. ಆಪ್ ಸಬ್ ಲೋಗೋಂ ಕಾ ರಾತ್ ಕಾ ಖಾನಾ ನಾಯಕ್ ಕೇ ಘರ್' ದೊಡ್ಡ ಧ್ವನಿಯಲ್ಲಿ ಎನೌನ್ಸ್ ಮೆಂಟ್ ಮಾಡಿಬಿಟ್ಟ.
'ಅರೆ ಮಾರಾಯಾ! ನಾನು ಬ್ರಾಹ್ಮಣನಿದ್ದೇನೆ. ನೀನು ಹೀಗೆಲ್ಲ ಬ್ರಾಂಚಲ್ಲಿ ಮರ್ಯಾದೆ ಕಳೀಬೇಡ!!!'
'ನಾಯಕ್ ಬೋಮ್ಮನ್ ಹೈ, ಫಿರ್ ಭೀ ಮಚ್ಛೀ ಪರ್ ಮರತೇ ಹೈ, ಆಪ್ ಕಾ ನಿಮಂತ್ರಣ್ ಪಕ್ಕಾ ಹೈ.'
ನಾನು ಬಾಯಿ ಮುಚ್ಚಿ ತಲೆ ಮೇಲೆ ಕೈಯಿಟ್ಟು ಕೂತೆ. ಆದರೆ ಸಂಜೆ ಆರೂವರೆ ಸಮಯಕ್ಕೆ ಸರಿಯಾಗಿ ಮನೆ ತನಕ ಉತ್ತಮ ಮೀನು ತಂದುಕೊಟ್ಟು ಊಟ ಮಾಡಿ ಹೋಗು ಮಹರಾಯ ಎಂದರೂ ಕೇಳದೆ ನಮಸ್ಕಾರ ಹೇಳಿ ಹೋದ ಆ ಗೆಳೆಯನ ನೆನಪು ಇಂದಿಗೂ ಬರುತ್ತಿರುತ್ತದೆ. ಶುದ್ಧ ಪ್ರೀತಿ ಎಂದರೆ ಇದು!!!