ಹರಿಖಂಡಿಗೆ ಕೇಶವ ನಾಯಕ ಮಾಮು...
ಎರಡು ಮೂರು ದಿನಗಳಿಂದ ಚಳಿಯ ಬಾಧೆ ಜಾಸ್ತಿಯಾಗಿದ್ದು, ಮಾಡುವುದಕ್ಕೂ ಯಾವುದೇ ಜಂಬರ ಇಲ್ಲದುದರಿಂದ ಮನೆಯ ಎದುರು ಕೂತು ಬಕಧ್ಯಾನ ಮಾಡುತ್ತಿದ್ದೆ. ತಲೆಯೊಳಗೆ ಏನೂ ಆಲೋಚನೆಗಳಿಲ್ಲದಿದ್ದರೂ ಮನವು ಎಲ್ಲೋ ಕಳೆದು ಹೋಗಿತ್ತು. ಬೆಳಗ್ಗಿನ 11.30ರ ಸಮಯ. ಪರಿಚಿತರೊಬ್ಬರು ತಮ್ಮ ವಾಹನ ನಿಲ್ಲಿಸಿ ಬರತೊಡಗಿದರು. ಫಕ್ಕನೆ ಗುರುತಾಗಲಿಲ್ಲ, ಹತ್ತಿರ ಬಂದು ನಮಸ್ಕರಿಸಿ "ಗುರುತ ಆಯ್ತೋ?"...
"ಹರಿಖಂಡಿಗೆ ಕೇಶವ ಮಾಮನ ಮಗ ಅಲ್ಲವೇ? ಗುರುತ ಆಗದೇ!!...."
ಮನಸ್ಸು ಹಿಂದಕ್ಕೆ ಓಡತೊಡಗಿತು. ಹರಿಖಂಡಿಗೆ ಕೇಶವ ನಾಯಕರು ನಮ್ಮ ತಂದೆಯವರ ಆತ್ಮೀಯರು. ನಿಷ್ಕಲ್ಮಷವಾದ ಪ್ರೀತಿ ಯನ್ನು ಇವರಿಂದ ಕಲಿಯಬೇಕು. ದೊಡ್ಡ ರಾಜಕಾರಣಿಯಾಗಲೀ, ಶ್ರೀಮಂತರಾಗಲೀ ಅಲ್ಲ, ಆದರೆ ಹೃದಯ ವಂತಿಕೆಯಲ್ಲಿ ಶ್ರೀಮಂತರು. ಪರೋಪಕಾರ, ಸಮಾಜಮುಖೀ ಜೀವನ ನಡೆಸಿದವರು. ಜೀವನೋಪಾಯಕ್ಕಾಗಿ ನಿರಂತರ ಹೋರಾಟ ಮಾಡಬೇಕಾದ ಹಾಗೂ ತಮ್ಮದೇ ಸ್ವಂತದ ಜಂಜಟಗಳನ್ನು ತೀರ್ಮಾನಿಸಲಾಗದ ಕಾಲಘಟ್ಟದಲ್ಲಿದ್ದವರು. 'ನಮ್ಮದೇ ನಮಗೆ ಹಾಸಿ ಹೊದ್ದುಕೊಳ್ಳುವಷ್ಟು ಉಂಟು, ಊರ ಉಸಾಬರಿ ಯಾಕೆ? ನಮಗೆ ಅದೆಲ್ಲ ಹೇಳಿಸಿದ್ದಲ್ಲ' ಎಂಬ ಥಿಂಕಿಂಗ್ ಇದ್ದ ವೇಳೆ ಯಲ್ಲಿ ಊರಿನ ಸಾರ್ವಜನಿಕ ಸಮಸ್ಯೆ ಅವ್ಯವಸ್ಥೆಗಳ ವಿರುದ್ಧ ಸೆಣಸಿದವರು...
ಉಡುಪಿಯ ಎಮ್ ಜಿ ಎಮ್ ಮತ್ತಿತರ ಕಾಲೇಜುಗಳಲ್ಲಿ ಕಲಿಯಲು ದೊಂಡೇರಂಗಡಿ, ಹರಿಖಂಡಿಗೆ ಮತ್ತಿತರ ಗ್ರಾಮ – ಹಳ್ಳಿ ಗಳಿಂದ ವಿದ್ಯಾರ್ಥಿಗಳು ದಿನನಿತ್ಯ ಉಡುಪಿಗೆ ಪಯಣಿಸಬೇಕಿತ್ತು. ಹಳ್ಳಿಗಳಲ್ಲಿನ ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನಂಶ ಮಕ್ಕಳು ಬಡ ರೈತ ಕುಟುಂಬಗಳಿಂದ ಬಂದವರು. ಆ ಸಮಯದಲ್ಲಿ ಬರುತ್ತಿದ್ದ ಒಂದೇ ಬಸ್ಸನ್ನು ಅವಲಂಬಿಸಿರಬೇಕಾದ ಸಂದಿಗ್ಧತೆ. ತಮ್ಮದು ಮೊನೋಪಲಿ ಇದ್ದ ಕಾರಣ ಬಸ್ಸು ಮಾಲೀಕರದ್ದು ಕೊಂಚ ಉದ್ಧಟ ವರ್ತನೆ. 'ಊರ ಮಕ್ಕಳು ಬಡವರು, ಹೋಗುವಾಗ ಬರುವಾಗ ಟಿಕೇಟು, ಮಧ್ಯಾಹ್ನ ಊಟಕ್ಕೆ ಖರ್ಚು, ಊರಲ್ಲಿ ಉನ್ನತ ವ್ಯಾಸಂಗದ ವ್ಯವಸ್ಥೆಯಿಲ್ಲ, ಹಾಗಾಗಿ ವಿದ್ಯಾರ್ಥಿಗಳಿಗೆ 'C' ಅಂದರೆ ಅರ್ಧ ಚಾರ್ಜು ಮಾತ್ರ ಹಾಕಬೇಕು' ಎಂಬ ವಿನಂತಿಯನ್ನು ಮಾಡಿದರು. ಬಸ್ಸಿನವರು ಕೇಳಲಿಲ್ಲ, 'ಬೇಕಿದ್ದರೆ ಬರಲಿ, ಇಲ್ಲದಿದ್ದರೆ ಬೇಡ, ಛಾರ್ಜು ಫುಲ್ ಕೊಡಬೇಕು..' ಎಂಬ ತಿರಸ್ಕಾರ. ಅನೇಕ ಬಾರಿ ವಿನಯಪೂರ್ವಕ ವಿನಂತಿಸಿದರೂ ಫಲಕಾರಿ ಆಗಲಿಲ್ಲ.
ಸಮಸ್ಯೆ ಗಂಭೀರವೆಂದು ಪರಿಗಣಿಸಿ ಕೇಶವ ಮಾಮನವರು ಮಾತುಕತೆಗೆ ಬಂದು ಚರ್ಚೆ ನಡೆಸಿದರೂ ಹೆಚ್ಚಿನ ಪ್ರಗತಿ ಆಗಲಿಲ್ಲ. "ತುಕ್ಕಾ ಕಸ್ಸಲೆಕ ಮಾರಾಯ ಗಾಂವ್ಚೆ ತಲೆಬಿಸಿ! ನುತss ವ್ಯಾರು ಕೋರ್ನು ಆಸ್ಸೇತ ನ್ಹಂವೇ!!" ಎಂದು ಊರವರು, ಹಿತೈಷಿಗಳು ಬುದ್ಧಿ ಹೇಳಿದರೂ ಇವರು ತಮ್ಮ ವೈಯಕ್ತಿಕ ಕಿರಿಕಿರಿಗಳ ನಡುವೆಯೂ ವಿದ್ಯಾರ್ಥಿಗಳಿಗೋಸ್ಕರ ಒಂದು ಹೋರಾಟ, ಅಭಿಯಾನವನ್ನೇ ನಡೆಸಿದರು. ತತ್ಕಾಲೀನ ಸಮಯದಲ್ಲಿ ಇದು ನಿಜವಾಗಿಯೂ ಪ್ರಾಮುಖ್ಯತೆ ಪಡೆದ ಆಂದೋಳನವಾಗಿತ್ತು. ಈ ಹಳ್ಳಿಯ ಮಂದಿ ಯಾವ ಲೆಕ್ಕ! ಎಂಬ ಧೋರಣೆಯಲ್ಲಿದ್ದ ಬಸ್ಸು ಮೆನೇಜುಮೆಂಟು, ಸಂಬಂಧ ಪಟ್ಟ ಕೆಲವು ಅಧಿಕಾರಿಗಳು ಕೊನೆಗೂ ಇವರ ದೃಢ ನಿಲುವಿಗೆ ಒಪ್ಪಲೇ ಬೇಕಾಯ್ತು. ಇಂದು ಅನೇಕ ವಿದ್ಯಾರ್ಥಿಗಳು ಅವರನ್ನು ಸ್ಮರಿಸುತ್ತಾರೆ. ಹಾಗೆಂದು ಬಸ್ಸು ಕಂಪನಿಯವರ, ಅಧಿಕಾರಿಗಳ ಮೇಲೆ ಯಾವುದೇ ಕೋಪ, ಕಹಿಯ ಲೇಶವನ್ನೂ ಇರಿಸಿಕೊಳ್ಳದೇ ಒಳ್ಳೆಯ ಸ್ನೇಹ ಸಂಬಂಧಗಳನ್ನು ಮುಂದುವರೆಸಿದ್ದರು. ಇದೂ ಒಂದು ಅವರ ಉತ್ತಮ ಗುಣ.
ಕೇಶವ ಮಾಮನವರನ್ನು ಆಗಾಗ ಸ್ಮರಿಸುತ್ತಿರುತ್ತೇನೆ. ಅವರ ಮಕ್ಕಳೂ ಸಹ ನಮ್ಮೊಡನೆ ಉತ್ತಮ ಸ್ನೇಹ ಬಾಂಧವ್ಯಗಳನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ. ಪ್ರೀತಿ, ಸ್ನೇಹಭಾವ, ವಿಶ್ವಾಸಗಳ ಅಭಾವದ ಕಾಲವಾದ ಇಂದಿನ ದಿನಗಳಲ್ಲೂ ಇಪ್ಪತ್ತು ಮುವ್ವತ್ತು ವರ್ಷಗಳ ಹಿಂದೆ ಪಬ್ಲಿಕ್ ಪರೀಕ್ಷೆಗಳಲ್ಲಿ ಬರೆಯಲು ನಮ್ಮಲ್ಲಿ ಕಳೆದ ನಾಲ್ಕೈದು ದಿನಗಳನ್ನು ಭಾವ ಪೂರ್ಣರಾಗಿ ನೆನೆಯುತ್ತಾರೆ! "ಕೇಶವ್ ಮಾಮ್, ಪರೀಕ್ಷೆ ಟೈಮಾರೀ ತುಮ್ಮೆಥೈಂ ರಾಬ್ಬಿಲೇ, ಜಾವಣ ಕೆಲ್ಲೆಲೇ ಉಡ್ಗಾಸು ವಿಸೋರು ನಾ!!" ಎಂದು ಹೇಳಿ ನಮ್ಮನ್ನು ಪ್ರೇಮದ ಸರಪಳಿಯಲ್ಲಿ ಬಿಗಿಯಾಗಿ ಕಟ್ಟಿ ಬಿಡುತ್ತಾರೆ!! ಯಾವಾಗಲೋ ಮಾಡಿದ ಒಂದೆರಡು ಗಂಜಿಯೂಟವನ್ನು ಇಂದಿಗೂ ಚಪ್ಪರಿಸುವ ಇವರ ಪ್ರೀತಿಯನ್ನು ಹೇಗೆ ವರ್ಣಿಸಲಿ?
No comments:
Post a Comment