“ಆಜಿ ಥೊಡೇಂ ಶೀತ ವರ್ಲೆಂ" ರಾತ್ರಿಹೊತ್ತು ಅಡಿಗೆಮನೆ ಕ್ಲೀನ್ ಮಾಡುವಾಗ ಇವಳು ಹೇಳಿದಳು.
"ಅದನ್ನು ತಂಗಳನ್ನ ಮಾಡು" ಸಲಹೆ ಕೊಟ್ಟೆ.
"ನಿಮಗೊಂದು ತಂಗಳನ್ನದ ಹುಚ್ಚು, ಆಯ್ತು ಅದೊಂದು ದೊಡ್ಡ ವಿಷಯ ಅಲ್ಲ, ಫ್ರಿಜ್ಜಿನೊಳಗೆ ಇಡದಿದ್ದರೆ ಸೈ. ನಾಳೆಗೆ ಶೆಣ್ ಶೀತ ರೆಡೀ."
"ನಿನಗೇನು ಗೊತ್ತು ಅದರ ರುಚಿ! ನಾವು ಸಣ್ಣವರಿರುವಾಗ ವಾರದಲ್ಲಿ ನಾಲ್ಕು ದಿನ ಅದೇ! ಬಟ್ಟಲು ತುಂಬಾ ತಂಗಳನ್ನ ಮೇಲೆ ತೆಂಗಿನೆಣ್ಣೆ+ಉಪ್ಪು+ಹಸಿಮೆಣಸು ಹಾಕಿ ಊಟ ಮಾಡುವ ಆಗಿನ ಸ್ಟೈಲೇ ಬೇರೆ! ಜತೆಗೆ ಉಪ್ಪಿನಕಾಯಿ ರಸ ಇದ್ದರೆ ಇನ್ನೂ ಟೇಸ್ಟ್, ತಂದೆಯವರಿಗೆ ದಿನಾ ಬೇಕಿತ್ತು. ಆದರೆ ಅಮ್ಮ ಮಾತ್ರ ದಿನಾ ತಂಗಳನ್ನ ಏಕೆ ಉಣ್ಣಬೇಕು ಅಂತ ಏನಾದರೂ ಕಾರಣ ಹೇಳಿ ಬಿಸಿಬಿಸಿ ಬಡಿಸುತ್ತಿದ್ದರು. ಒಮ್ಮೆಯಂತೂ ಮುಂಚಿನ ದಿನದ ಮೀನು-ಕೈಪು ಇದ್ದಾಗ ಅದಕ್ಕೆ ಸಾಥಿಯಾಗಿ ಶೇಣ್-ಶೀತ ಬಡಿಸು ಎಂದಾಗ ಇಲ್ಲ ಎಂಬ ಜವಾಬು ಬಂತು. ಆ ದಿನ ಸಣ್ಣ ಜಗಳ ಸಹ ಆದ ನೆನಪು ನನಗೆ. ಮಕ್ಕಳು ತಂಗಳನ್ನ ತಿನ್ನಬಾರದು ಎಂದು ತಾಯಿಯ ಮನಸ್ಸು. ನಮಗೋ ಅದರ ಮೇಲೆ ಒಂದು ತೆರನಾದ ಪ್ರೀತಿ. ಶಾಲೆಗೆ ಹೋಗುವ ಹುಡುಗರು ಬಿಸಿಬಿಸಿ ಊಟ ಮಾಡಿ ಶಕ್ತಿವಂತರಾಗಿ ಆರೋಗ್ಯವಂತರಾಗಿರಬೇಕು ಎಂದು ಅಮ್ಮನ ಆಸೆ."
ತಂಗಳೂಟ ಆ ಕಾಲದ (ಅರುವತ್ತರ ದಶಕ) ಅನಿವಾರ್ಯತೆಯಾಗಿತ್ತು. ಆಗ ಬಡತನ ಸಾರ್ವತ್ರಿಕವಾಗಿತ್ತು. ಅಧಿಕತಮ ಮನೆಗಳಲ್ಲಿ ಬೆಳಗ್ಗೆ ಗಂಜಿ, ತಂಗಳನ್ನ ಅಥವಾ ಫೋವ್-ರುಲಾಂವ್. ದೋಸೆ, ಇಡ್ಲಿಗಳ ಸಂಭ್ರಮ ತಿಂಗಳಿಗೆ ಒಮ್ಮೆ. ಗಂಜಿಯೂಟ ನನಗೆ ಪ್ರಿಯವೂ ಆಗಿತ್ತು. ಈಗಲೂ ಸಹ ಬಹುಪ್ರಿಯ.😋😋😋
ನಮ್ಮ ನಂಬಿಕೆಗಳಲ್ಲಿ ಸರಳ ಜೀವನಕ್ಕೆ ಬಹಳ ಮಹತ್ವ. ಬಡತನದ ಇನ್ನೊಂದು ಪರಿಭಾಷೆ ಸರಳ ಜೀವನ. ಸುಮಾರು ಸಾವಿರ ವರುಷಗಳ ಪರಕೀಯರ ದಬ್ಬಾಳಿಕೆ, ದುರಾಡಳಿತಗಳಿಂದಾಗಿ ಸಾಮಾನ್ಯ ಜನರು ಬಡತನದಲ್ಲೇ ಬದುಕು ನಡೆಸಬೇಕಾಯಿತು. ಕ್ರಮೇಣ ಅದೊಂದು ಜೀವನ ಪದ್ಧತಿಯೇ ಆಯಿತು. ಈ ಅನಿವಾರ್ಯ ಜೀವನಕ್ಕೆ ಸಮರ್ಥನೆಗಳನ್ನೂ ನೀಡುತ್ತಿದ್ದರು! ಅನೇಕ ತರಹದ ಕತೆ, ಉಪಮೆ ಅಥವಾ ವ್ಯಾಖ್ಯಾನಗಳ ಸೃಷ್ಟಿಯಾಯಿತು. 'ಬಟ್ಟಲು ತುಂಬ ಗಂಜಿ, ಮೇಲೆ ಉಪ್ಪು, ತೆಂಗಿನೆಣ್ಣೆ, ಮೆಣಸು ಹಿಂಜಿಕೊಂಡು ಉಂಡ ಅಂದರೆ ಎಷ್ಟು ಬೇಕಾದರೂ ಕೆಲಸ ಮಾಡಬಹುದು,' ಹಾಗೆ ಹೀಗೆ ಎಂಬ ರೈತರ, ಕೂಲಿಗಾರರ ಉದ್ಘಾರಗಳು ಸರ್ವೇಸಾಮಾನ್ಯ. ಏಕೆ ಹೀಗೆ? ಒಳ್ಳೆಯ ತರಕಾರಿ ಹಾಕಿ ಮಾಡಿದ ಬಿಸಿಬಿಸಿ ಅಡಿಗೆ ಅವರಿಗೆ ಜೀರ್ಣವಾಗೂದಿಲ್ಲವೇ? ಒಂದು ವಸ್ತು ಲಭ್ಯವಿಲ್ಲದಿದ್ದಾಗ ಕ್ರಮೇಣ ಅದರ ಮೇಲೆ ಆಸೆ ಹುಟ್ಟೂದಿಲ್ಲ ., ಮಾತ್ರವಲ್ಲ ತಾನು ಪಳಗಿದ ಸ್ಟೈಲಿಗೇ ಮನುಷ್ಯ ಹೊಂದಿಕೊಂಡು ಮನುಷ್ಯ ಅದರಲ್ಲೇ ಸುಖ ಕಾಣುತ್ತಾನೆ!
"ನಾನು ಆಗ ಸಣ್ಣ ಹುಡುಗ. ಹೊಯಿಂಗೇಜಡ್ಡಿನಿಂದ ನಾನು, ಶೀನ್ವಾಸ ಮತ್ತು ನಿನ್ನ ಅಜ್ಜ ಒಟ್ಟು ಮೂರು ಜನ ಕಾರ್ಕಳ ವೆಂಕಟರಮಣ ದೇವಳಕ್ಕೆಂದು ಹೊರಟೆವು. ಬಹುಷಃ ತೇರುಹಬ್ಬವಿರಬೇಕು. ಈಗಿನ ಹಾಗೆ ಆಗ ಮೋಟಾರು ಎಲ್ಲುಂಟು? ಎಲ್ಲರೂ ಹೆಚ್ಚಾಗಿ ನಡಕೊಂಡೇ ಹೋಗೂದು. ನಮಗೆ ಅದೆಲ್ಲ ಅಭ್ಯಾಸ. ಹತ್ತಿರದ ದಾರಿ ಎಂದು ಕಾಡುಮೂಲಕ ನಡಕೊಂಡೇ ಪ್ರಯಾಣ ಸಾಗಿತು. ನಾನು ಸಣ್ಣಂವ, ಬರೀ ಐದೋ ಆರೋ ಪ್ರಾಯ! ನನ್ನ ಹಟ ತಡೀಲಾರದೇ ಕರಕೊಂಡು ಹೋಗಿದ್ದರು. ಮೊದಮೊದಲು ಕಾಡುದಾರಿ ಭಾರೀ ಉಲ್ಲಾಸಕರವಾಗಿತ್ತು. ಆದರೆ ನಂತರದ ಪಯಣ ಪ್ರಯಾಸಕರವಾದರೂ ಕಾಡಿನ ಅನುಭವವೇ ಬೇರೆ. ಮಧ್ಯಾಹ್ನದ ಹೊತ್ತಿಗೆ ಒಂದು ದೋsಡ್ಡ ಮರದ ಕೆಳಗೆ ಒಂದೆಡೆ ಸ್ವಲ್ಪ ಜಾಗ ಕ್ಲೀನು ಮಾಡಿ, ಮೂರು ಕಲ್ಲು ಒಟ್ಟಿಗಿಟ್ಟು ಒಲೆ ರೆಡಿ ಮಾಡಿ ಹೊತ್ತುಕೊಂಡು ಬಂದ ಮಡಕೆಯಲ್ಲಿ ಗಂಜಿ ಬೇಯಿಸಿ ಅಲ್ಲೇ ನೆಲದಲ್ಲಿ ಸ್ವಲ್ಪ ಗುಂಡಿ ಮಾಡಿ ತಂದ ಬಾಳೆಲೆ ಸಹ ಕಾಯಿಸಿ ಬಡಿಸಿಕೊಂಡು ಉಂಡ ಆ ಗಂಜಿ ಊಟ ನೋಡು ಇವತ್ತಿಗೂ ನೆನಪಿದೆ, ಗಂಜಿ ಮತ್ತು ಒಂಚೂರು ಉಪ್ಪು ಅಷ್ಟೇ! ಆದರೆ ಅದರ ರುಚಿ ಈವತ್ತಿಗೂ ನಾಲಗೆ ತುದೀ ಮೇಲುಂಟು!" ತಂದೆಯವರು ಸುಮಾರು ಅರವತ್ತೈದು ವರ್ಷಗಳ ನಂತರ ಕತೆಯನ್ನು ಬಹಳ ತನ್ಮಯತೆಯಿಂದ ಹೇಳಿದ್ದು ನೆನಪಾಗುತ್ತದೆ.
ಏನೆಂದು ವಿಶ್ಲೇಷಿಸಲಿ! ಬಡತನವನ್ನು ವೈಭವೀಕರಿಸುವ ಅನುಭವಗಳನ್ನು ವಿಮರ್ಶಿಸುವುದು ಸೂಕ್ತವಲ್ಲ. ತಾವು ಹಳಬರು ಕಲ್ಲು ತಿಂದು ಕರಗಿಸಿಕೊಳ್ಳುತ್ತಿದ್ದೆವು ಗೊತ್ತಾ, ಈಗಿನ ಮಕ್ಕಳಿಗೆ ಸುಖ ಜಾಸ್ತಿಯಾಗಿದೆ! ದಿನಾ ತುಪ್ಪ ಬೇಕವನಿಗೆ! ಅವನ ಮುಸುಂಡು ನೋಡು! ನೀರುಳ್ಳಿ ಬೆಳ್ಳುಳ್ಳಿ ಹಾಕಿದ ಊಟವಾಗಬೇಕು, ಮದ ಏರದೇ ಇರ್ತದಾ! ಮನುಷ್ಯ ಅಂದ ಮೇಲೆ ಕಷ್ಟ-ಸುಖ, ದಯೆ-ದಾಕ್ಷಿಣ್ಯ ಗೊತ್ತಿರಬೇಕು! ನಯವಿನಯ ಇರಬೇಕು, ತಗ್ಗಿ ಬಗ್ಗಿ ನಡೆಯಬೇಕು! ಎಂಬ ಡೈಲಾಗುಗಳು ಹಿತವಚನಗಳು ಧಾರಾಳವಾಗಿ ಮಕ್ಕಳಾದ ನಮಗೆ ಲಭ್ಯವಾಗುತ್ತಿದ್ದವು. ದಟ್ಟ ದಾರಿದ್ರ್ಯ ಇದ್ದಂತಹ ಸಮಯದಲ್ಲಿ ಪರಕೀಯರ ದುರಾಡಳಿತವನ್ನು ಸಹಿಸಿಕೊಂಡು, ಬರ, ಸಾಂಕ್ರಾಮಿಕ ರೋಗ ರುಜಿನಗಳನ್ನೂ ಅನುಭವಿಸಿಕೊಂಡು ಮಾನಸಿಕವಾಗಿಯೂ ದುರ್ಬಲರಾಗಿದ್ದ ಸಮಯ. ಆಗ ಇಂತಹ ಡೈಲಾಗುಗಳು, ಬಡತನದ ವೈಭವೀಕರಣಗಳು ಸಾಮಾನ್ಯವಾಗಿದ್ದವು.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕ್ರಮೇಣ ಪ್ರಗತಿ ಕಂಡು ಬಂದಿತು. ಶಾರೀರಿಕವಾಗಿಯಲ್ಲದಿದ್ದರೂ ಬಡತನ ಹೇಗಿದ್ದಿರ ಬಹುದೆಂಬ ಕಲ್ಪನೆ ನಮ್ಮಲ್ಲಿತ್ತು. ಹಾಗಾಗಿ ನಮ್ಮ ಹಿರಿಯರ ಮಾತುಗಳನ್ನು ಅಲ್ಲಗಳೆಯುತ್ತಿರಲಿಲ್ಲ. ಈಗ ಇಪ್ಪತ್ತೊಂದನೆಯ ಶತಮಾನದ ಮಕ್ಕಳಿಗೆ ಇಂತಹ ಅನುಭವಗಳಲ್ಲಿ ವಿಶ್ವಾಸವೇ ಇಲ್ಲ!
ಏನೇ ಇರಲಿ, ಶೇಣ್ ಶೀತ ಜೆವಣ ಮಾತ್ರ ಬಹಳ ಖುಷಿಕೊಟ್ಟಿತು.
ಪ್ರತಿಕ್ರಿಯೆಗಳು:-
ದಿವ್ಯಾ: ಇಂದಿಗೂ ನಾನು ನಿನ್ನೆಯ ಅನ್ನ ಬಿಸಾಡುವುದಿಲ್ಲ, ನಗರ ಜೀವನದಲ್ಲಿ ದನಗಳೂ ಇಲ್ಲ, ಆದ್ದರಿಂದ ಮೊಸರನ್ನ ಅಥವಾ ಹೀಗೆಯೇ ಪದಾರ್ಥದ ಜೊತೆ ತಿನ್ನುತ್ತೇನೆ. ಬೆಳ್ತಿಗೆ ಅನ್ನ ಆದರೆ ಚಿತ್ರಾನ್ನ. ಮಿಕ್ಕಿದ ಅನ್ನದ ರುಚಿಯೇ ಬೇರೆ, ಮುಂಚೆ ತಿಂದು ಗೊತ್ತಿರಲಿಲ್ಲ ಈಗ ಅದರ ರುಚಿ ಹತ್ತಿದೆ.
ಉತ್ತರ: ಶೀತ ಮ್ಹಳೇರಿ ದೇವು ಚೆರ್ಡಾ, ಅನ್ನ ಬ್ರಹ್ಮ' ಮ್ಹೊಣು ಮ್ಹಾಲ್ಗಡೇನಿ ಸಾಂಗ್ಚೆ ನುಸ್ತೀ ನ್ಹಂಯೀಂ..... ಎಂದು ನಮ್ಮ ಮಾಮಾಮಾ ಭವಾನಿ ಎಂದು ಹೇಳುತ್ತಿದ್ದರು. ಕೈತಪ್ಪಿ ನೆಲಕ್ಕೆ ಬಿದ್ದ ಒಂದೊಂದು ಅನ್ನದ ಅಗುಳನ್ನು ಜಾಗ್ರತೆಯಿಂದ ಹೆಕ್ಕಿ ಉಣ್ಣುವಾಗ ತಮಾಷೆ ಮಾಡಿದ ಮೊಮ್ಮಕ್ಕಳಾದ ನಮಗೆ ಮೆಲುವಾಗಿ ಪ್ರೀತಿಯಿಂದ ಸಮಜಾಯಿಸುತ್ತಿದ್ದರು. ಅಂದು ಕಾಲ ಕಷ್ಟದ ದಿನಗಳು, ಇಂದು ಸಮೃದ್ಧಿಯ ದಿನಗಳಾದರೂ ಅವರ ವಿಚಾರ ಎಂದೆಂದಿಗೂ ಲಗಾವಾಗುತ್ತದೆ.
No comments:
Post a Comment