"The Kashmere Files" ಸಿನಿಮಾ ಬರುವ ಮೊದಲೇ ಬರೆದ ನನ್ನ ಪ್ರಬಂಧವಿದು. ಆ ಸಮಯದಲ್ಲಿ ಕಾಶ್ಮೀರ ಪಂಡಿತರು ಮತಾಂಧರ ಕೈಯಿಂದ ಅನುಭವಿಸಿದ ದೌರ್ಜನ್ಯದ ಭೀಕರತೆಯ ಅರಿವು ನನಗಿರಲಿಲ್ಲ. ಮುಸಲ್ಮಾನರ ಉಪಟಳ ತಡೆಯಲಾರದೆ ಓಡಿ ಬಂದರು ಎಂಬ ಸಾಮಾನ್ಯ ತಿಳಿವಳಿಕೆ ಇತ್ತು ಅಷ್ಟೆ. ಆ ದುರ್ಮಾರ್ಗಿ ವೀ ಪೀ ಸಿಂಗನಿಗೆ ಈ ಭಾ ಜ ಪ ದವರು ಏಕೆ ಸಪೋರ್ಟು ಮಾಡುತ್ತಿದ್ದಾರೆ! ತಮಗರ್ಥವಾಗುತ್ತಿಲ್ಲ ಎಂದು ಆ ಸಜ್ಜನರು ಆಶ್ಚರ್ಯ ಪಡುತ್ತಿದ್ದರು... ಪಾಪ ಕಾಶ್ಮೀರದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ ಸಜ್ಜನ ವ್ಯಕ್ತಿಯೊಬ್ಬರು ನವದೆಹಲಿಯಲ್ಲಿ ಸಿಟಿ ಬಸ್ಸು ಹತ್ತುವ ತರಾತುರಿಯಲ್ಲಿ ಕಾಲು ಜಾರಿ ಬಿದ್ದು ಅಪಮೃತ್ಯುಗೀಡಾದರು ಎಂಬ ಮಾಹಿತಿ ಕೇಳಿ ಬಹಳ ದುಃಖವಾಯಿತು.
ನನ್ನ ಪ್ರಬಂಧ:- ಡೆಸ್ಟಿನಿ....
ಶ್ರೀಮಹಾವಿಷ್ಣುವು ದಿನಾ ಬೆಳಿಗ್ಗೆ ಮಹಾದೇವನಿಗೆ ಪೂಜೆಯನ್ನು ಸಲ್ಲಿಸಿಯೇ ಮುಂದಿನ ಕೆಲಸಗಳನ್ನು ಮಾಡುವ ಪರಿಪಾಟ ಇಟ್ಟುಕೊಂಡಿದ್ದನು. ಅಂತೆಯೇ ಒಮ್ಮೆ ಮಹಾದೇವನ ಮಂದಿರಕ್ಕೆ ಬಂದಿದ್ದನು ಪರಮಾತ್ಮನನ್ನು ಒಳಗೆ ಬಿಟ್ಟು ಗರುಡನು ಹೊರಗೆ ಕಾಯುತ್ತ ಇದ್ದನು. ಆಗ ಒಂದು ಗುಬ್ಬಚ್ಚಿಯು ಅಲ್ಲಿ ಬಂದು ಕೂತಿತು. ಜಾತಿ ಬಾಂಧವ್ಯದ ಪ್ರೀತಿಯಂತೆ ಇಬ್ಬರೂ ಉಭಯ ಕುಶಲೋಪರಿಯಲ್ಲಿ ತೊಡಗಿದವು. ಆ ಸಮಯಕ್ಕೆ ಸರಿಯಾಗಿ ಯಮಧರ್ಮರಾಯನೂ ಶಿವನ ದರ್ಶನಕ್ಕೆಂದು ಅದೇ ಮಂದಿರಕ್ಕೆ ಬಂದನು. ಒಳಗೆ ವಿಷ್ಣು ಪರಮಾತ್ಮನೂ ಇರುವನೆಂದು ತಿಳಿದು ಅತ್ಯಂತ ಸಂತಸದಿಂದ ತಾನೂ ಭಗವಂತನ ದರ್ಶನಕ್ಕೆಂದು ಒಳಗೆ ಹೋಗುವಾಗ ಗರುಡನ ಬಳಿಯಿದ್ದ ಗುಬ್ಬಚ್ಚಿ ಕಣ್ಣಿಗೆ ಬಿತ್ತು. "ಅರೇ ಇದೇನು ವಿಚಿತ್ರ?" ಎಂಬ ಭಾವದಿಂದ ಅದನ್ನು ನೋಡಿ ಒಳನಡೆದನು.
ಯಮನ ಈ ವರ್ತನೆಯಿಂದ ಪಕ್ಷಿದ್ವಯರಿಗೆ ಚಿಂತೆಗಿಟ್ಟುಕೊಂಡಿತು. ತನ್ನ ಅಂತ್ಯ ಬಂತೆಂದು ಗುಬ್ಬಿ ಹೆದರಿದರೆ, ತನ್ನ ಹೊಸ ಗೆಳೆತಿಗೆ ಸಂಕಷ್ಟ ಬಂತೆಂದು ಗರುಡನಿಗೆ ವ್ಯಥೆಯಾಯಿತು. 'ಹೇಗೂ ಯಮನು ಪೂಜೆ ಮುಗಿಸಿ ದೇವನಿಗೆ ತನ್ನ ಪ್ರಣಾಮಗಳನ್ನು ಸಲ್ಲಿಸಿ ಹೊರಬರಲು ಕೊಂಚ ಮಟ್ಟಿನ ಸಮಯ ತಗಲುತ್ತದೆ. ತಾನೋ ಮಹಾವಿಷ್ಣುವಿನ ವಾಹನ, ಶಕ್ತಿಶಾಲಿ. ಮನೋವೇಗಕ್ಕಿಂತಲೂ ಹೆಚ್ಚಿನ ವೇಗವುಳ್ಳವನು. ಈ ಗುಬ್ಬಚ್ಚಿಯನ್ನೇಕೆ ಬದುಕಿಸಬಾರದು?' ಗರುಡನಿಗೆ ಉಪಾಯವೊಂದು ಹೊಳೆಯಿತು.......
ಪೂಜೆ ಮುಗಿಸಿ ಯಮನು ಹೊರಗೆ ಬಂದ. ಗರುಡನು ಸಂತಸದಿಂದ ಬೀಗುತ್ತಿದ್ದ. "ಯಮಧರ್ಮರಾಯಾ, ಇವತ್ತು ಒಂದು ಪಾಪದ ಜೀವವನ್ನು ನಾನು ಉಳಿಸಿದೆ. ಈ ಗುಬ್ಬಚ್ಚಿಯನ್ನು ಬಹುದೂರ ಮೇರು ಪರ್ವತದಾಚೆ ಬಿಟ್ಟು ಬಂದಿದ್ದೇನೆ. ನಿನ್ನ ವ್ಯಾಪ್ತಿಯನ್ನು ಮೀರಿ ಇದೆ ಅದು. ನೀನು ಸೋತೆ."
ಯಮನು ವಿಷಾದದಿಂದ ಉತ್ತರಿಸಿದ. "ವಿಧಿಲೀಲೆ ಎಂದರೆ ಹೀಗೇ ನೋಡು. ಅದನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಆ ಗುಬ್ಬಚ್ಚಿಯ ಜೀವಕ್ಕಾಗಿ ಮೃತ್ಯು ಮೇರು ಪರ್ವತದ ಆಚೆ ಕಾಯುತ್ತಿತ್ತು. ಬೆಳಗ್ಗೆ ಬಂದಾಗ ಅದನ್ನು ಇಲ್ಲಿ ಕಂಡು ಅಚ್ಚರಿಯಾಗಿತ್ತು. ಅದು ಮೇರು ಪರ್ವತದ ಆಚೆ ಹೇಗೆ ತಲುಪುತ್ತದೆ ಎಂದು ನನಗೆ ಸಂಶಯವಿತ್ತು. ನೀನು ಸದುದ್ದೇಶದಿಂದ ಮಾಡಿದ ಉಪಕಾರವು ಫಲಿಸಲಿಲ್ಲ." ಗರುಡನಿಗೂ ತುಂಬಾ ವ್ಯಥೆಯಾಯಿತು....
ಹೊಸದಿಲ್ಲಿಯ ಪ್ರಸಾದನಗರದಲ್ಲಿನ ನಮ್ಮ ಮನೆಯ ಬಾಡಿಗೆ ಕರಾರು ಮುಗಿದಿತ್ತು. ಲೀಸ್ ಮುಂದುವರೆಸಲು ಮಾಲೀಕ ತಯಾರಿರಲಿಲ್ಲ, ನಮಗೂ ಆ ಮನೆ ಸಣ್ಣದಾಗುತ್ತಿತ್ತು. ಹೊಸ ಮನೆಯ ತಲಾಶಿಯಲ್ಲಿದ್ದೆ. ನಮ್ಮ ಬೇಂಕಿನ ಗ್ರಾಹಕ ಶರ್ಮಾ ಎಂಬವರೊಡನೆ ಹೀಗೆ ಲೋಕಾಭಿರಾಮವಾಗಿ ಸುದ್ದಿ ಹಾಕಿದೆ. "ಜನಕಪುರಿಯಲ್ಲಿ ನಮ್ಮ ಕಸಿನ್ ಒಬ್ಬರ ಮನೆಯಿದೆ. ಹೊಸಾ ಮನೆ. ನಿಮಗೆ ಪಸಂದ್ ಆಗಬಹುದು. ನಾಳೇನೇ ಕೀ ತಂದುಕೊಡುತ್ತೇನೆ." ಮರುದಿನವೇ ಕೀ ತಂದುಕೊಟ್ಟರು.
"ಅಲ್ಲ ಮಾರಾಯರೇ, ಬಾಡಿಗೆ ಎಷ್ಟು ಏನು ಅಂತ ಮಾತಾಗಲಿಲ್ಲ. ಮನೆ ಶಿಫ್ಟ್ ಮಾಡಿ ಅಂದರೆ ಹೇಗೆ?" ನನಗೆ ಆತಂಕ.
"ನಾಯಕ್ ಸಾಬ್, ನಾನು ಯಾರೋ ಏನೋ, ಆದರೂ ನೀವು ನನಗೆ ಈ ಬೇಂಕಿನಲ್ಲಿ ಚೆಕ್ಕು ಡಿಸ್ಕೌಂಟ್ ಫೆಸಿಲಿಟಿ ನೀಡಿ ನನ್ನ ಕಷ್ಟದ ಸಮಯದಲ್ಲಿ ತುಂಬಾ ಸಹಾಯ ಮಾಡಿದ್ದೀರಿ. ನನ್ನದೇ ಬೇಂಕಿನ ಮೆನೆಜರ್ ನನಗೆ ಲಿಮಿಟು ಕೊಟ್ಟಿರಲಿಲ್ಲ. ನಿಮ್ಮಿಂದ ನನ್ನ ಬಿಸಿನೆಸ್ ಬಹಳಷ್ಟು ಡೆವಲಪ್ ಆಗಿದೆ. ಈಗ ನಿಮಗೆ ಕಿಂಚಿತ್ ಅನುಕೂಲ ಆದರೆ ನನಗೆ ಖುಷಿಯಾಗುತ್ತದೆ."
"ನಾನು ನಿಮಗೇನು ಹೆಲ್ಪು ಮಾಡಿದ್ದು ಶರ್ಮಾ ಅವರೇ, ನಾವು ಮಾಡಿದ್ದು ಬಿಸಿನೆಸ್ಸು, ಚೆಕ್ಕು ಡಿಸ್ಕೌಂಟು ಮಾಡಿದ್ದಕ್ಕೆ ಬೇಂಕು ಛಾರ್ಜು ಹಾಕುತ್ತದೆ. ಪುಕ್ಕಟೆ ಅಲ್ಲ."
"ನಾವು ಸಹ ಹಾಗೇ ಸರ್, ನಿಮಗೆ ಪುಗಸಟ್ಟೆ ಮನೆ ಕೊಡುವುದಿಲ್ಲ. ಬಾಡಿಗೆ ವಸೂಲು ಮಾಡ್ತೇವೆ." ಶರ್ಮಾ ನಕ್ಕರು.
ಜನಕಪುರಿಯ ಹೊಸಾ ಎಮ್ ಐ ಜಿ ಮನೆಗೆ ಶಿಫ್ಟ್ ಆದೆವು. ಗ್ರೌಂಡ್ ಫ್ಲೋರಲ್ಲಿ ಒಬ್ಬ ಪಂಜಾಬೀ ಗೃಹಸ್ಥ, ಫಸ್ಟ್ ಫ್ಲೋರಲ್ಲಿ ಒಂದು ಸರದಾರಜೀ ಕುಟುಂಬ, ಸೆಕೆಂಡ್ ಫ್ಲೋರಲ್ಲಿ ನಾವು. ನಮ್ಮ ಫ್ಲಾಟಿನ ಎದುರು ದಂಪತಿಗಳಿಬ್ಬರಿದ್ದರು. ಗಂಡ ಮತ್ತು ಹೆಂಡತಿ. ಇಬ್ಬರೂ ವರ್ಕಿಂಗು. ನಿಮಗೆಲ್ಲ ಗೊತ್ತಿರುವಂತೆ ನನ್ನ ನಾಲಿಗೆ ಸ್ವಲ್ಪ ಉದ್ದ. ಬಂದ ಎರಡು ಮೂರು ದಿನಗಳೊಳಗೆ ಎಲ್ಲರ ಪರಿಚಯವಾಯಿತು, ದೋಸ್ತಿಯೂ ಆಯಿತು. ಕೆಳಗಿನ ಮನೆಯ ಸರದಾರಜೀ ದಂಪತಿಗಳಂತೂ ಬಹಳವೇ ಸಹೃದಯಿ ಮತ್ತು ಸ್ನೇಹಮಯಿ. ನಮಗೆ ತುಂಬಾ ಉಪಕಾರ ಮಾಡಿದರು. ಚನ್ನಾದ, ಕಪಟವಿಲ್ಲದ ಪ್ರೀತಿಭರಿತ ಮಾತುಗಳು. ಗೆಳೆಯ, ಪರಿಚಿತ, ಅಪರಿಚಿತ, ಮನೆಯ ಒಳಗೆ ಮತ್ತು ಬಳಗದವರೊಡನೆ ಯಾವ ರೀತಿಯಲ್ಲಿ ಮಾತು ಮತ್ತು ವ್ಯವಹಾರ ನಡೆಸಬೇಕೆಂಬುದನ್ನು ಆ ಸರದಾರಜಿಯನ್ನು ನೋಡಿ ಕಲಿಯಬೇಕು. ಅಂತಹ ಸಭ್ಯ ನೆರೆಯವರು ಸಿಕ್ಕಿದ್ದು ನನ್ನ ಪುಣ್ಯವೆ ಸರಿ. ಮುಂದಿನ ದಿನಗಳಲ್ಲಿ ಅವರು ನಮಗೆ ದಿಲ್ಲಿಯ ಎಲ್ಲಾ ಪ್ರಮುಖ ಗುರುದ್ವಾರಗಳ ದರ್ಶನ ಮಾಡಿಸಿದರು.
ಸುಮಾರು ಒಂದು ತಿಂಗಳಾಗುತ್ತ ಬಂದರೂ ಎದುರು ಮನೆಯವರ ಪರಿಚಯ ಆಗಲಿಲ್ಲ. ತಮ್ಮಷ್ಟಕ್ಕೆ ತಾವಿದ್ದರು. ಬೇಂಕಿಗೆ ಹೊರಟಾಗ ಒಮ್ಮೆ ಮೆಟ್ಟಿಲ ಬಳಿ ಸಿಕ್ಕರು. "ಹಲೋ, ಗುಡ್ ಮಾರ್ನಿಂಗ್ ಟು ಯೂ." ಎಂದು ನಮಸ್ಕರಿಸಿ ಮಾತಾಡಿಸಿದೆ. "ಹ್ಞೂಂ" ಎಂದಷ್ಟೇ ಹೇಳಿ ಆ ಮನುಷ್ಯ ಸೀದಾ ನಡೆದ. ಮುಖದ ಮೇಲೆ ಹೊಡೆಸಿಕೊಂಡಂತಾಯಿತು. ಮೋರೆಯಲ್ಲಿ ಒಂದು ನಗೆಯಿಲ್ಲ, ನಾನು ಮಾತನಾಡಿಸಿದ್ದಕ್ಕೆ ಯಾವುದೇ ಪ್ರತಿಕ್ರಿಯೆಯಿಲ್ಲ, ಕಡೇಪಕ್ಷ ನನ್ನ ಮುಖವನ್ನಾದರೂ ನೋಡಿದನೇ, ಅದೂ ಇಲ್ಲ!! ನಾನೊಬ್ಬ ನಾನ್-ಎಕ್ಸಿಸ್ಟೆಂಟ್ ಪ್ರಾಣಿಯೋ ಎಂಬಂತೆ ನಡಕೊಂಡ ಅವನ ವರ್ತನೆಯಿಂದ ಬೇಸರ ಹಾಗೂ ಮುಖಭಂಗವಾಯಿತು. ಆದರೂ ಏನು ತಲೆಬಿಸಿ ಯಲ್ಲಿದ್ದನೋ ಯಾರಿಗೆ ಗೊತ್ತು? ಎಂದು ಸಮಾಧಾನಪಟ್ಟುಕೊಂಡೆ. ನಾಲ್ಕು ದಿನಗಳ ಬಳಿಕ ಪುನಃ ಸಿಕ್ಕಿದ.
"ಜೈರಾಮಜೀ ಕೀ, ನನ್ನ ಹೆಸರು ಕೇಶವ ನಾಯಕ್, ನಾನು ನಿಮ್ಮ ನೇಬರ್ ಆಗಿ ಬಂದಿದ್ದೇನೆ. ಸಿಂಡಿಕೇಟ್ ಬೇಂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ತಾವು?" ನನ್ನ ಪರಿಚಯ ಹೇಳಿಕೊಂಡೆ.
"ಹ್ಞೂಂ" ಪುನಃ ಅದೇ ವರ್ತನೆ. ಮುಖ ಗಂಟಿಕ್ಕಿದ ಭಾವ, ನಗೆಯಿಲ್ಲ, ಮಾತಿಲ್ಲ. ನನಗೆ ಇರುಸುಮುರುಸಾಯಿತು. ಮೆಟ್ಟಿಲು ಇಳಿಯುವಾಗ ಒಟ್ಟಿಗಿದ್ದವರು ಮೆಲ್ಲನೆ ಬೇರೆಯಾಗಿ ಆತ ತನ್ನ ದಾರಿ, ನಾನು ನನ್ನ ದಾರಿ ಹಿಡಿದೆವು.
"ಹಮಾರೇ ಸಾಮನೇವಾಲಾ ಬಾತೇಂ ಕುಛ್ ಕಮ್ ಕರತೇ ಹೇಂ ಕ್ಯಾ?" ಸಂಜೆ ಸರದಾರಜಿ ಬಳಿ ವಿಚಾರಿಸಿದೆ.
"ಥೋಡಾ ಕುಚ್ ಐಸೇ ಹೀ ಹೇ" ಉತ್ತರ ಬಂತು. ಆ ಮನುಷ್ಯ ಕೆನರಾ ಬೇಂಕಿನಲ್ಲಿ ಮೆನೆಜರ್ ಎಂಬ ಮಾಹಿತಿ ಸಿಕ್ಕಿತು. ಈ ಕೆನರಾ ಬೇಂಕಿನವರಿಗೆ ತಲೆಮೇಲೆ ಸಣ್ಣದೊಂದು ಕೋಡು ಇದೆ. ಅವರದು ದೊಡ್ಡ ಬೇಂಕು. ಸಿಂಡಿಕೇಟು ಕೋರ್ಪೋರೇಶನ್ ಬೇಂಕಿನವರ ಹತ್ರ ದೋಸ್ತಿ ಇಟ್ಟುಕೊಳ್ಳೂದು ಅವರ ಭರಾಮಿಗೆ ಕಮ್ಮಿ ಎಂಬ ಹಾಂಕಾರ ಅವರಲ್ಲಿ ಆ ದಿನಗಳಲ್ಲಿತ್ತು. ಅಂತಿರುವಾಗ ಒಬ್ಬ ಕೆನರಾ ಬ್ಯಾಂಕಿನ ಮೆನೆಜರು ಸಿಂಡಿಕೇಟಿನ ಅಸಿಸ್ಟೆಂಟ್ ಮೆನೆಜರ್ ಬಳಿ ಗೆಳೆತನ ಮಾಡೂದೇ? ಎಲ್ಲಾದರೂ ಉಂಟೇ? ನಮ್ಮೊಡನೆ ಎದುರು ಮನೆಯವರ ಸಖ್ಯ ಬೆಳೆಯಲಿಲ್ಲ. ನಾನೂ ನನ್ನ ಪಾಡಿಗೆ ನಾನಿದ್ದೆ.
ಎಂಭತ್ತೊಂಭತ್ತರ ಮಹಾಚುನಾವಣೆಯ ಸಮಯದಲ್ಲಿ ರಾಜೀವಗಾಂಧಿ ತನ್ನ ಕರ್ಮಾಧೀನದ ಫಲವಾಗಿ ಸೋತರು. ನಮ್ಮ ಜನಕಪುರಿಯಲ್ಲಿ ಬಿ ಜೆ ಪಿಯ ಮದನಲಾಲ್ ಖುರಾನಾ ಗೆದ್ದು ಬಂದರು. ವೀ ಪೀ ಸಿಂಗ ಪ್ರಧಾನಿಯಾದ. ಅದೊಂದು ನಮ್ಮ ದೌರ್ಭಾಗ್ಯ. ಇರಲಿ ಬಿಡಿ, ಆಗ ಅದು ಗೊತ್ತಾಗಲಿಲ್ಲ. ರಾ.ಗಾಂಧಿಯನ್ನು ತೊಲಗಿಸುವ ಗಡಿಬಿಡಿಯಲ್ಲಿ ವೀ ಪೀ ಸಿಂಗನನ್ನು ಭಾಜಪದವರು ಬೆಂಬಲಿಸಿದರು. ಚುನಾವಣೆಯ ಸಮಯದಲ್ಲೇ ಆ ಮನುಷ್ಯ ಭಾಜಪದವರನ್ನು ದ್ವೇಷಿಸುತ್ತಿದ್ದ. ಅವರೊಡನೆ ಚುನಾವಣಾ ಸ್ಟೇಜು ಶೇರ್ ಮಾಡಿಕೊಳ್ಳಲಿಲ್ಲ, ಸಖ್ಯವನ್ನು ಬೆಳೆಸಲಿಲ್ಲ. ಆದಾಗ್ಯೂ ಭಾಜಪದವರ ಬೆಂಬಲ ಬೇಕಾಯಿತವನಿಗೆ. ಇವರದ್ದೂ ಹಣೆಬರಹ ಸರಿಯಿರಲಿಲ್ಲ. ಪ್ರಧಾನಿಯ ಅನೇಕ ನೀತಿ-ನಿರ್ಧಾರಗಳಿಗೆ ಇವರ ಒಪ್ಪಿಗೆ ಇರದಿದ್ದರೂ ಬಾಯಿಮುಚ್ಚಿ ಕೂಡಬೇಕಾದ ಹೊಟ್ಟೆನೋವು ಇವರದು.
ಕಾಶ್ಮೀರದಿಂದ ಲಕ್ಷಾಂತರ ಹಿಂದುಗಳು-ಪಂಡಿತರನ್ನು ಮನೆ ಮಠ, ಸಂಪತ್ತು, ನೌಕರಿ ಎಲ್ಲವನ್ನೂ ಕಸಿದುಕೊಂಡು ಉಟ್ಟಬಟ್ಟೆಯಲ್ಲೇ ಎಂಬಂತೆ ಓಡಿಸಲಾಯಿತು. ದುರದೃಷ್ಟ ಜನರಲ್ಲಿ ಹೆಚ್ಚಿನವರು ಜಮ್ಮು , ಶಿಮ್ಲಾ ದೆಹಲಿ ನಗರಗಳಿಗೆ ಓಡಿಬಂದರು. ಸ್ವತಂತ್ರ ಭಾರತದಲ್ಲಿ ಹಿಂದೂಗಳು-ಜಾತಿವಾಚಕ ಬೇಡದಿದ್ದರೆ ಪ್ರಜೆಗಳು-ನಿರಾಶ್ರಿತರಾಗಬೇಕಾಯಿತು! ದುರ್ಗತಿಯೆಂದರೆ ಅವರಿಗೆ ಸರಕಾರದಿಂದ ಯಾವುದೇ ಸವಲತ್ತು ಹೋಗಲಿ ಒಂದು ಒಳ್ಳೆಯ ಮಾತು ಸಹ ಸಿಗಲಿಲ್ಲ. ಅವರನ್ನು ಸರಕಾರ ತೀರಾ ನಿರ್ಲಕ್ಷಿಸಿತು. ಅವರ ಪಾಡು ಪಾಪ ವಿವರಿಸಲು ಕಷ್ಟವಾಗುತ್ತದೆ.
ಕೆನರಾ ಬೇಂಕಿನವರ ಮನೆಯಲ್ಲಿ ಒಂದು ದಿನ ತುಂಬಾ ಜನರು ಮಾತನಾಡುವುದು ಕೇಳಿಸಿತು.ಮುಂಚೆ ಯಾವಾಗಲೂ ಮುಚ್ಚಿರುತ್ತಿದ್ದ ಅವರ ಮನೆಬಾಗಿಲು ಆ ದಿನ ತೆರೆದಿತ್ತು. ನಮ್ಮದು ಹೆಚ್ಚಾಗಿ ಬಾಗಿಲು ತೆರೆದೇ ಇರುತ್ತಿತ್ತು. ಹಿರಿಯರೊಬ್ಬರು ಹೊರಬಂದು ನನ್ನ ಬಳಿ ಬಹಳ ಆತ್ಮೀಯತೆಯಿಂದ ಸಂಭಾಷಣೆಗಿಳಿದರು. ಆತ ಮೆನೆಜರನ ತಂದೆ. ಶ್ರೀನಗರದಲ್ಲಿ ಉನ್ನತ ಹುದ್ದೆ-ಅಸಿಸ್ಟೆಂಟ್ ಸೆಕ್ರೆಟರಿ- ಆಗಿದ್ದವರು. ಅವರ ಮಗಳೂ ಸಹ ಉದ್ಯೋಗದಲ್ಲಿದ್ದ ಮಹಿಳೆ. ಗೌರವಾನ್ವಿತ ಮನೆತನದವರು. ವೀ ಪೀ ಸಿಂಗ ಪ್ರಧಾನಿಯಾದದ್ದೇ ತಡ, ಕಶ್ಮೀರಿ ಉಗ್ರಗಾಮಿಗಳ ಉಪಟಳ ತಡೆಯಲಾರದೇ ಓಡಿ ಮಗನ ಮನೆಗೆ ಬಂದಿದ್ದರು. ಸಂಬಳ ಸಹ ಡ್ರಾ ಮಾಡಿಲ್ಲ. ಕೈಯ್ಯಲ್ಲಿ ಕಾಸಿಲ್ಲ, ಅನಧಿಕೃತ ರಜೆಯಲ್ಲಿ ಬಂದಿದ್ದಾರೆ, ವಾಪಸು ತಾಯ್ನಾಡಿಗೆ ಮರಳುವ ಆಸೆ ಇಲ್ಲ, ಇಲ್ಲಿ ನೌಕರಿ ಮಾಡುವ ಹಾಗಿಲ್ಲ. ಬಹಳವಾಗಿ ದುಃಖಿಸಿದರು. ನನಗೂ ತೀರಾ ಬೇಸರವಾಯಿತು. ವೀಪೀ ಸಿಂಗನನ್ನು ನಾನೂ ಒಂದಷ್ಟು ಬೈದೆ. ಆದಷ್ಟು ಸಹಾನುಭೂತಿ ತೋರಿಸಿದೆ. ಒಳ್ಳೇ ವಿದ್ವಾಂಸ, ಯೋಗ್ಯ ತಿಳುವಳಿಕಸ್ಥ ಮನುಷ್ಯ. ನನಗೂ ಅವರಿಗೂ ಚೆನ್ನಾದ ಗೆಳೆತನವಾಯಿತು. ಅನೇಕ ಉತ್ತಮ ವಿಚಾರಗಳನ್ನು ಅವರಿಂದ ಆಲಿಸುವ ಭಾಗ್ಯ ನನ್ನದಾಯಿತು. ..
ದೆಹಲಿಯಿಂದ ನನಗೆ ಊರಿಗೆ ವರ್ಗವಾದ್ದರಿಂದ ದೆಹಲಿ ಬಿಟ್ಟು ಬಂದೆ. ಒಂದೆರಡು ವರ್ಷ ಕಳೆದು ಒಮ್ಮೆ ಬೇಸಿಗೆ ರಜೆಯಲ್ಲಿ ಊರಿಗೆ ಬಂದ ನನ್ನ ಬಂಧುಗಳೊಬ್ಬರು ಒಂದು ದುಃಖದ ವಾರ್ತೆಯನ್ನು ಹೇಳಿದರು. ಕಾಶ್ಮೀರದ ಆ ವೃದ್ಧಮಹಾಶಯರು ಸ್ವಲ್ಪ ದಿನಗಳ ಹಿಂದೆ ಡೀ ಟಿ ಸಿ ಬಸ್ಸು-ಸಿಟಿಬಸ್ಸು- ಹತ್ತುವ ಗಡಿಬಿಡಿಯಲ್ಲಿ ಕಾಲು ಜಾರಿ ಬಿದ್ದು ಸ್ವರ್ಗಸ್ಥರಾದರು. ಕೇಳಿ ಬಹಳ ಬೇಸರವಾಯಿತು. ಶ್ರೀನಗರದಲ್ಲಿ ಡ್ರೈವರಿರುವ ಗೂಟದ ಕಾರಲ್ಲಿ ಓಡಾಡುತ್ತಿದ್ದ ಅಸಿಸ್ಟೆಂಟ್ ಸೆಕ್ರೆಟರಿ ಎಲ್ಲಿ! ದೆಹಲಿಯ ಸಿಟಿ ಬಸ್ಸುಗಳಲ್ಲಿ ಓಡಾಡಬೇಕಾದ ವೃದ್ಧನೆಲ್ಲಿ! ವಿಧಿ ಮಾನವನನ್ನು ಎಲ್ಲಿಂದ ಎಲ್ಲಿಗೆ ಕರಕೊಂಡು ಬಂತು!!!
No comments:
Post a Comment