Sunday, January 1, 2023

ಶೇಣ್ ಶೀತ ರುಚಿ ಬಲ್ಲವನೇ ಬಲ್ಲ..


“ಆಜಿ ಥೊಡೇಂ ಶೀತ ವರ್ಲೆಂ" ರಾತ್ರಿಹೊತ್ತು ಅಡಿಗೆಮನೆ ಕ್ಲೀನ್ ಮಾಡುವಾಗ ಇವಳು ಹೇಳಿದಳು.

"ಅದನ್ನು ತಂಗಳನ್ನ ಮಾಡು" ಸಲಹೆ ಕೊಟ್ಟೆ.

"ನಿಮಗೊಂದು ತಂಗಳನ್ನದ ಹುಚ್ಚು, ಆಯ್ತು ಅದೊಂದು ದೊಡ್ಡ ವಿಷಯ ಅಲ್ಲ, ಫ್ರಿಜ್ಜಿನೊಳಗೆ ಇಡದಿದ್ದರೆ ಸೈ. ನಾಳೆಗೆ ಶೆಣ್ ಶೀತ ರೆಡೀ."

"ನಿನಗೇನು ಗೊತ್ತು ಅದರ ರುಚಿ! ನಾವು ಸಣ್ಣವರಿರುವಾಗ ವಾರದಲ್ಲಿ ನಾಲ್ಕು ದಿನ ಅದೇ! ಬಟ್ಟಲು ತುಂಬಾ ತಂಗಳನ್ನ ಮೇಲೆ ತೆಂಗಿನೆಣ್ಣೆ+ಉಪ್ಪು+ಹಸಿಮೆಣಸು ಹಾಕಿ ಊಟ ಮಾಡುವ ಆಗಿನ ಸ್ಟೈಲೇ ಬೇರೆ! ಜತೆಗೆ ಉಪ್ಪಿನಕಾಯಿ ರಸ ಇದ್ದರೆ ಇನ್ನೂ ಟೇಸ್ಟ್, ತಂದೆಯವರಿಗೆ ದಿನಾ ಬೇಕಿತ್ತು. ಆದರೆ ಅಮ್ಮ ಮಾತ್ರ ದಿನಾ ತಂಗಳನ್ನ ಏಕೆ ಉಣ್ಣಬೇಕು ಅಂತ ಏನಾದರೂ ಕಾರಣ ಹೇಳಿ ಬಿಸಿಬಿಸಿ ಬಡಿಸುತ್ತಿದ್ದರು. ಒಮ್ಮೆಯಂತೂ ಮುಂಚಿನ ದಿನದ ಮೀನು-ಕೈಪು ಇದ್ದಾಗ ಅದಕ್ಕೆ ಸಾಥಿಯಾಗಿ ಶೇಣ್-ಶೀತ ಬಡಿಸು ಎಂದಾಗ ಇಲ್ಲ ಎಂಬ ಜವಾಬು ಬಂತು. ದಿನ ಸಣ್ಣ ಜಗಳ ಸಹ ಆದ ನೆನಪು ನನಗೆ. ಮಕ್ಕಳು ತಂಗಳನ್ನ ತಿನ್ನಬಾರದು ಎಂದು ತಾಯಿಯ ಮನಸ್ಸು. ನಮಗೋ ಅದರ ಮೇಲೆ ಒಂದು ತೆರನಾದ ಪ್ರೀತಿ. ಶಾಲೆಗೆ ಹೋಗುವ ಹುಡುಗರು ಬಿಸಿಬಿಸಿ ಊಟ ಮಾಡಿ ಶಕ್ತಿವಂತರಾಗಿ ಆರೋಗ್ಯವಂತರಾಗಿರಬೇಕು ಎಂದು ಅಮ್ಮನ ಆಸೆ."

ತಂಗಳೂಟ ಕಾಲದ (ಅರುವತ್ತರ ದಶಕ) ಅನಿವಾರ್ಯತೆಯಾಗಿತ್ತು. ಆಗ ಬಡತನ ಸಾರ್ವತ್ರಿಕವಾಗಿತ್ತು. ಅಧಿಕತಮ ಮನೆಗಳಲ್ಲಿ ಬೆಳಗ್ಗೆ ಗಂಜಿ, ತಂಗಳನ್ನ ಅಥವಾ ಫೋವ್-ರುಲಾಂವ್. ದೋಸೆ, ಇಡ್ಲಿಗಳ ಸಂಭ್ರಮ ತಿಂಗಳಿಗೆ ಒಮ್ಮೆ. ಗಂಜಿಯೂಟ ನನಗೆ ಪ್ರಿಯವೂ ಆಗಿತ್ತು. ಈಗಲೂ ಸಹ ಬಹುಪ್ರಿಯ.😋😋😋

ನಮ್ಮ ನಂಬಿಕೆಗಳಲ್ಲಿ ಸರಳ ಜೀವನಕ್ಕೆ ಬಹಳ ಮಹತ್ವ. ಬಡತನದ ಇನ್ನೊಂದು ಪರಿಭಾಷೆ ಸರಳ ಜೀವನ. ಸುಮಾರು ಸಾವಿರ ವರುಷಗಳ ಪರಕೀಯರ ದಬ್ಬಾಳಿಕೆ, ದುರಾಡಳಿತಗಳಿಂದಾಗಿ ಸಾಮಾನ್ಯ ಜನರು ಬಡತನದಲ್ಲೇ ಬದುಕು ನಡೆಸಬೇಕಾಯಿತು. ಕ್ರಮೇಣ ಅದೊಂದು ಜೀವನ ಪದ್ಧತಿಯೇ ಆಯಿತು. ಅನಿವಾರ್ಯ ಜೀವನಕ್ಕೆ ಸಮರ್ಥನೆಗಳನ್ನೂ ನೀಡುತ್ತಿದ್ದರು! ಅನೇಕ ತರಹದ ಕತೆ, ಉಪಮೆ ಅಥವಾ ವ್ಯಾಖ್ಯಾನಗಳ ಸೃಷ್ಟಿಯಾಯಿತು. 'ಬಟ್ಟಲು ತುಂಬ ಗಂಜಿ, ಮೇಲೆ ಉಪ್ಪು, ತೆಂಗಿನೆಣ್ಣೆ, ಮೆಣಸು ಹಿಂಜಿಕೊಂಡು ಉಂಡ ಅಂದರೆ ಎಷ್ಟು ಬೇಕಾದರೂ ಕೆಲಸ ಮಾಡಬಹುದು,' ಹಾಗೆ ಹೀಗೆ ಎಂಬ ರೈತರ, ಕೂಲಿಗಾರರ ಉದ್ಘಾರಗಳು ಸರ್ವೇಸಾಮಾನ್ಯ. ಏಕೆ ಹೀಗೆ? ಒಳ್ಳೆಯ ತರಕಾರಿ ಹಾಕಿ ಮಾಡಿದ ಬಿಸಿಬಿಸಿ ಅಡಿಗೆ ಅವರಿಗೆ ಜೀರ್ಣವಾಗೂದಿಲ್ಲವೇ? ಒಂದು ವಸ್ತು ಲಭ್ಯವಿಲ್ಲದಿದ್ದಾಗ ಕ್ರಮೇಣ ಅದರ ಮೇಲೆ ಆಸೆ ಹುಟ್ಟೂದಿಲ್ಲ ., ಮಾತ್ರವಲ್ಲ ತಾನು ಪಳಗಿದ ಸ್ಟೈಲಿಗೇ ಮನುಷ್ಯ ಹೊಂದಿಕೊಂಡು ಮನುಷ್ಯ ಅದರಲ್ಲೇ ಸುಖ ಕಾಣುತ್ತಾನೆ!

"ನಾನು ಆಗ ಸಣ್ಣ ಹುಡುಗ. ಹೊಯಿಂಗೇಜಡ್ಡಿನಿಂದ ನಾನು, ಶೀನ್ವಾಸ ಮತ್ತು ನಿನ್ನ ಅಜ್ಜ ಒಟ್ಟು ಮೂರು ಜನ ಕಾರ್ಕಳ ವೆಂಕಟರಮಣ ದೇವಳಕ್ಕೆಂದು ಹೊರಟೆವು. ಬಹುಷಃ ತೇರುಹಬ್ಬವಿರಬೇಕು. ಈಗಿನ ಹಾಗೆ ಆಗ ಮೋಟಾರು ಎಲ್ಲುಂಟು? ಎಲ್ಲರೂ ಹೆಚ್ಚಾಗಿ ನಡಕೊಂಡೇ ಹೋಗೂದು. ನಮಗೆ ಅದೆಲ್ಲ ಅಭ್ಯಾಸ. ಹತ್ತಿರದ ದಾರಿ ಎಂದು ಕಾಡುಮೂಲಕ ನಡಕೊಂಡೇ ಪ್ರಯಾಣ ಸಾಗಿತು. ನಾನು ಸಣ್ಣಂವ, ಬರೀ ಐದೋ ಆರೋ ಪ್ರಾಯ! ನನ್ನ ಹಟ ತಡೀಲಾರದೇ ಕರಕೊಂಡು ಹೋಗಿದ್ದರು. ಮೊದಮೊದಲು ಕಾಡುದಾರಿ ಭಾರೀ ಉಲ್ಲಾಸಕರವಾಗಿತ್ತು. ಆದರೆ ನಂತರದ ಪಯಣ ಪ್ರಯಾಸಕರವಾದರೂ ಕಾಡಿನ ಅನುಭವವೇ ಬೇರೆ. ಮಧ್ಯಾಹ್ನದ ಹೊತ್ತಿಗೆ ಒಂದು ದೋsಡ್ಡ ಮರದ ಕೆಳಗೆ ಒಂದೆಡೆ ಸ್ವಲ್ಪ ಜಾಗ ಕ್ಲೀನು ಮಾಡಿ, ಮೂರು ಕಲ್ಲು ಒಟ್ಟಿಗಿಟ್ಟು ಒಲೆ ರೆಡಿ ಮಾಡಿ ಹೊತ್ತುಕೊಂಡು ಬಂದ ಮಡಕೆಯಲ್ಲಿ ಗಂಜಿ ಬೇಯಿಸಿ ಅಲ್ಲೇ ನೆಲದಲ್ಲಿ ಸ್ವಲ್ಪ ಗುಂಡಿ ಮಾಡಿ ತಂದ ಬಾಳೆಲೆ ಸಹ ಕಾಯಿಸಿ ಬಡಿಸಿಕೊಂಡು ಉಂಡ ಗಂಜಿ ಊಟ ನೋಡು ಇವತ್ತಿಗೂ ನೆನಪಿದೆ, ಗಂಜಿ ಮತ್ತು ಒಂಚೂರು ಉಪ್ಪು ಅಷ್ಟೇ! ಆದರೆ ಅದರ ರುಚಿ ಈವತ್ತಿಗೂ ನಾಲಗೆ ತುದೀ ಮೇಲುಂಟು!" ತಂದೆಯವರು ಸುಮಾರು ಅರವತ್ತೈದು ವರ್ಷಗಳ ನಂತರ ಕತೆಯನ್ನು ಬಹಳ ತನ್ಮಯತೆಯಿಂದ ಹೇಳಿದ್ದು ನೆನಪಾಗುತ್ತದೆ.

ಏನೆಂದು ವಿಶ್ಲೇಷಿಸಲಿ! ಬಡತನವನ್ನು ವೈಭವೀಕರಿಸುವ ಅನುಭವಗಳನ್ನು ವಿಮರ್ಶಿಸುವುದು ಸೂಕ್ತವಲ್ಲ. ತಾವು ಹಳಬರು ಕಲ್ಲು ತಿಂದು ಕರಗಿಸಿಕೊಳ್ಳುತ್ತಿದ್ದೆವು ಗೊತ್ತಾ, ಈಗಿನ ಮಕ್ಕಳಿಗೆ ಸುಖ ಜಾಸ್ತಿಯಾಗಿದೆ! ದಿನಾ ತುಪ್ಪ ಬೇಕವನಿಗೆ! ಅವನ ಮುಸುಂಡು ನೋಡು! ನೀರುಳ್ಳಿ ಬೆಳ್ಳುಳ್ಳಿ ಹಾಕಿದ ಊಟವಾಗಬೇಕು, ಮದ ಏರದೇ ಇರ್ತದಾ! ಮನುಷ್ಯ ಅಂದ ಮೇಲೆ ಕಷ್ಟ-ಸುಖ, ದಯೆ-ದಾಕ್ಷಿಣ್ಯ ಗೊತ್ತಿರಬೇಕು! ನಯವಿನಯ ಇರಬೇಕು, ತಗ್ಗಿ ಬಗ್ಗಿ ನಡೆಯಬೇಕು! ಎಂಬ ಡೈಲಾಗುಗಳು ಹಿತವಚನಗಳು ಧಾರಾಳವಾಗಿ ಮಕ್ಕಳಾದ ನಮಗೆ ಲಭ್ಯವಾಗುತ್ತಿದ್ದವು. ದಟ್ಟ ದಾರಿದ್ರ್ಯ ಇದ್ದಂತಹ ಸಮಯದಲ್ಲಿ ಪರಕೀಯರ ದುರಾಡಳಿತವನ್ನು ಸಹಿಸಿಕೊಂಡು, ಬರ, ಸಾಂಕ್ರಾಮಿಕ ರೋಗ ರುಜಿನಗಳನ್ನೂ ಅನುಭವಿಸಿಕೊಂಡು ಮಾನಸಿಕವಾಗಿಯೂ ದುರ್ಬಲರಾಗಿದ್ದ ಸಮಯ. ಆಗ ಇಂತಹ ಡೈಲಾಗುಗಳು, ಬಡತನದ ವೈಭವೀಕರಣಗಳು ಸಾಮಾನ್ಯವಾಗಿದ್ದವು.

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕ್ರಮೇಣ ಪ್ರಗತಿ ಕಂಡು ಬಂದಿತು. ಶಾರೀರಿಕವಾಗಿಯಲ್ಲದಿದ್ದರೂ ಬಡತನ ಹೇಗಿದ್ದಿರ ಬಹುದೆಂಬ ಕಲ್ಪನೆ ನಮ್ಮಲ್ಲಿತ್ತು. ಹಾಗಾಗಿ ನಮ್ಮ ಹಿರಿಯರ ಮಾತುಗಳನ್ನು ಅಲ್ಲಗಳೆಯುತ್ತಿರಲಿಲ್ಲ. ಈಗ ಇಪ್ಪತ್ತೊಂದನೆಯ ಶತಮಾನದ ಮಕ್ಕಳಿಗೆ ಇಂತಹ ಅನುಭವಗಳಲ್ಲಿ ವಿಶ್ವಾಸವೇ ಇಲ್ಲ!

ಏನೇ ಇರಲಿ, ಶೇಣ್ ಶೀತ ಜೆವಣ ಮಾತ್ರ ಬಹಳ ಖುಷಿಕೊಟ್ಟಿತು.

ಪ್ರತಿಕ್ರಿಯೆಗಳು:-

ದಿವ್ಯಾ: ಇಂದಿಗೂ ನಾನು ನಿನ್ನೆಯ ಅನ್ನ ಬಿಸಾಡುವುದಿಲ್ಲ, ನಗರ ಜೀವನದಲ್ಲಿ ದನಗಳೂ ಇಲ್ಲ, ಆದ್ದರಿಂದ ಮೊಸರನ್ನ ಅಥವಾ ಹೀಗೆಯೇ ಪದಾರ್ಥದ ಜೊತೆ ತಿನ್ನುತ್ತೇನೆ. ಬೆಳ್ತಿಗೆ ಅನ್ನ ಆದರೆ ಚಿತ್ರಾನ್ನ. ಮಿಕ್ಕಿದ ಅನ್ನದ ರುಚಿಯೇ ಬೇರೆ,  ಮುಂಚೆ ತಿಂದು ಗೊತ್ತಿರಲಿಲ್ಲ ಈಗ ಅದರ ರುಚಿ ಹತ್ತಿದೆ.

ಉತ್ತರ: ಶೀತ ಮ್ಹಳೇರಿ ದೇವು ಚೆರ್ಡಾ, ಅನ್ನ ಬ್ರಹ್ಮ' ಮ್ಹೊಣು ಮ್ಹಾಲ್ಗಡೇನಿ ಸಾಂಗ್ಚೆ ನುಸ್ತೀ ನ್ಹಂಯೀಂ..... ಎಂದು ನಮ್ಮ ಮಾಮಾಮಾ ಭವಾನಿ ಎಂದು ಹೇಳುತ್ತಿದ್ದರು. ಕೈತಪ್ಪಿ ನೆಲಕ್ಕೆ ಬಿದ್ದ ಒಂದೊಂದು ಅನ್ನದ ಅಗುಳನ್ನು ಜಾಗ್ರತೆಯಿಂದ ಹೆಕ್ಕಿ ಉಣ್ಣುವಾಗ ತಮಾಷೆ ಮಾಡಿದ ಮೊಮ್ಮಕ್ಕಳಾದ ನಮಗೆ ಮೆಲುವಾಗಿ ಪ್ರೀತಿಯಿಂದ ಸಮಜಾಯಿಸುತ್ತಿದ್ದರು. ಅಂದು ಕಾಲ ಕಷ್ಟದ ದಿನಗಳು, ಇಂದು ಸಮೃದ್ಧಿಯ ದಿನಗಳಾದರೂ ಅವರ ವಿಚಾರ ಎಂದೆಂದಿಗೂ ಲಗಾವಾಗುತ್ತದೆ.

               

ಅಪರೂಪದ ವ್ಯಕ್ತಿತ್ವಗಳು-

 

 ಹರಿಖಂಡಿಗೆ ಕೇಶವ ನಾಯಕ ಮಾಮು...

ಎರಡು ಮೂರು ದಿನಗಳಿಂದ ಚಳಿಯ ಬಾಧೆ ಜಾಸ್ತಿಯಾಗಿದ್ದು, ಮಾಡುವುದಕ್ಕೂ ಯಾವುದೇ ಜಂಬರ ಇಲ್ಲದುದರಿಂದ ಮನೆಯ ಎದುರು ಕೂತು ಬಕಧ್ಯಾನ ಮಾಡುತ್ತಿದ್ದೆ. ತಲೆಯೊಳಗೆ ಏನೂ ಆಲೋಚನೆಗಳಿಲ್ಲದಿದ್ದರೂ ಮನವು ಎಲ್ಲೋ ಕಳೆದು ಹೋಗಿತ್ತು. ಬೆಳಗ್ಗಿನ 11.30 ಸಮಯ. ಪರಿಚಿತರೊಬ್ಬರು ತಮ್ಮ ವಾಹನ ನಿಲ್ಲಿಸಿ ಬರತೊಡಗಿದರು. ಫಕ್ಕನೆ ಗುರುತಾಗಲಿಲ್ಲ, ಹತ್ತಿರ ಬಂದು ನಮಸ್ಕರಿಸಿ "ಗುರುತ ಆಯ್ತೋ?"...

"ಹರಿಖಂಡಿಗೆ ಕೇಶವ ಮಾಮನ ಮಗ ಅಲ್ಲವೇ? ಗುರುತ ಆಗದೇ!!...."

ಮನಸ್ಸು ಹಿಂದಕ್ಕೆ ಓಡತೊಡಗಿತು. ಹರಿಖಂಡಿಗೆ ಕೇಶವ ನಾಯಕರು ನಮ್ಮ ತಂದೆಯವರ ಆತ್ಮೀಯರು. ನಿಷ್ಕಲ್ಮಷವಾದ ಪ್ರೀತಿ ಯನ್ನು ಇವರಿಂದ ಕಲಿಯಬೇಕು. ದೊಡ್ಡ ರಾಜಕಾರಣಿಯಾಗಲೀ, ಶ್ರೀಮಂತರಾಗಲೀ ಅಲ್ಲ, ಆದರೆ ಹೃದಯ ವಂತಿಕೆಯಲ್ಲಿ ಶ್ರೀಮಂತರು. ಪರೋಪಕಾರ, ಸಮಾಜಮುಖೀ ಜೀವನ ನಡೆಸಿದವರು. ಜೀವನೋಪಾಯಕ್ಕಾಗಿ ನಿರಂತರ ಹೋರಾಟ ಮಾಡಬೇಕಾದ ಹಾಗೂ ತಮ್ಮದೇ ಸ್ವಂತದ ಜಂಜಟಗಳನ್ನು ತೀರ್ಮಾನಿಸಲಾಗದ ಕಾಲಘಟ್ಟದಲ್ಲಿದ್ದವರು. 'ನಮ್ಮದೇ ನಮಗೆ ಹಾಸಿ ಹೊದ್ದುಕೊಳ್ಳುವಷ್ಟು ಉಂಟು, ಊರ ಉಸಾಬರಿ ಯಾಕೆ? ನಮಗೆ ಅದೆಲ್ಲ ಹೇಳಿಸಿದ್ದಲ್ಲ' ಎಂಬ ಥಿಂಕಿಂಗ್ ಇದ್ದ ವೇಳೆ ಯಲ್ಲಿ ಊರಿನ ಸಾರ್ವಜನಿಕ ಸಮಸ್ಯೆ ಅವ್ಯವಸ್ಥೆಗಳ ವಿರುದ್ಧ ಸೆಣಸಿದವರು...

ಉಡುಪಿಯ ಎಮ್ ಜಿ ಎಮ್ ಮತ್ತಿತರ ಕಾಲೇಜುಗಳಲ್ಲಿ ಕಲಿಯಲು ದೊಂಡೇರಂಗಡಿ, ಹರಿಖಂಡಿಗೆ ಮತ್ತಿತರ ಗ್ರಾಮಹಳ್ಳಿ ಗಳಿಂದ ವಿದ್ಯಾರ್ಥಿಗಳು ದಿನನಿತ್ಯ ಉಡುಪಿಗೆ ಪಯಣಿಸಬೇಕಿತ್ತು. ಹಳ್ಳಿಗಳಲ್ಲಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿನಂಶ ಮಕ್ಕಳು ಬಡ ರೈತ ಕುಟುಂಬಗಳಿಂದ ಬಂದವರು. ಸಮಯದಲ್ಲಿ ಬರುತ್ತಿದ್ದ ಒಂದೇ ಬಸ್ಸನ್ನು ಅವಲಂಬಿಸಿರಬೇಕಾದ ಸಂದಿಗ್ಧತೆ. ತಮ್ಮದು ಮೊನೋಪಲಿ ಇದ್ದ ಕಾರಣ ಬಸ್ಸು ಮಾಲೀಕರದ್ದು ಕೊಂಚ ಉದ್ಧಟ ವರ್ತನೆ. 'ಊರ ಮಕ್ಕಳು ಬಡವರು, ಹೋಗುವಾಗ ಬರುವಾಗ ಟಿಕೇಟು, ಮಧ್ಯಾಹ್ನ ಊಟಕ್ಕೆ ಖರ್ಚು, ಊರಲ್ಲಿ ಉನ್ನತ ವ್ಯಾಸಂಗದ ವ್ಯವಸ್ಥೆಯಿಲ್ಲ, ಹಾಗಾಗಿ ವಿದ್ಯಾರ್ಥಿಗಳಿಗೆ 'C' ಅಂದರೆ ಅರ್ಧ ಚಾರ್ಜು ಮಾತ್ರ ಹಾಕಬೇಕು' ಎಂಬ ವಿನಂತಿಯನ್ನು ಮಾಡಿದರು. ಬಸ್ಸಿನವರು ಕೇಳಲಿಲ್ಲ, 'ಬೇಕಿದ್ದರೆ ಬರಲಿ, ಇಲ್ಲದಿದ್ದರೆ ಬೇಡ, ಛಾರ್ಜು ಫುಲ್ ಕೊಡಬೇಕು..' ಎಂಬ ತಿರಸ್ಕಾರ. ಅನೇಕ ಬಾರಿ ವಿನಯಪೂರ್ವಕ ವಿನಂತಿಸಿದರೂ ಫಲಕಾರಿ ಆಗಲಿಲ್ಲ.

ಸಮಸ್ಯೆ ಗಂಭೀರವೆಂದು ಪರಿಗಣಿಸಿ ಕೇಶವ ಮಾಮನವರು ಮಾತುಕತೆಗೆ ಬಂದು ಚರ್ಚೆ ನಡೆಸಿದರೂ ಹೆಚ್ಚಿನ ಪ್ರಗತಿ ಆಗಲಿಲ್ಲ. "ತುಕ್ಕಾ ಕಸ್ಸಲೆಕ ಮಾರಾಯ ಗಾಂವ್ಚೆ ತಲೆಬಿಸಿ! ನುತss ವ್ಯಾರು ಕೋರ್ನು ಆಸ್ಸೇತ ನ್ಹಂವೇ!!" ಎಂದು ಊರವರು, ಹಿತೈಷಿಗಳು ಬುದ್ಧಿ ಹೇಳಿದರೂ ಇವರು ತಮ್ಮ ವೈಯಕ್ತಿಕ ಕಿರಿಕಿರಿಗಳ ನಡುವೆಯೂ ವಿದ್ಯಾರ್ಥಿಗಳಿಗೋಸ್ಕರ ಒಂದು ಹೋರಾಟ, ಅಭಿಯಾನವನ್ನೇ ನಡೆಸಿದರು. ತತ್ಕಾಲೀನ ಸಮಯದಲ್ಲಿ ಇದು ನಿಜವಾಗಿಯೂ ಪ್ರಾಮುಖ್ಯತೆ ಪಡೆದ ಆಂದೋಳನವಾಗಿತ್ತು. ಹಳ್ಳಿಯ ಮಂದಿ ಯಾವ ಲೆಕ್ಕ! ಎಂಬ ಧೋರಣೆಯಲ್ಲಿದ್ದ ಬಸ್ಸು ಮೆನೇಜುಮೆಂಟು, ಸಂಬಂಧ ಪಟ್ಟ ಕೆಲವು ಅಧಿಕಾರಿಗಳು ಕೊನೆಗೂ ಇವರ ದೃಢ ನಿಲುವಿಗೆ ಒಪ್ಪಲೇ ಬೇಕಾಯ್ತು. ಇಂದು ಅನೇಕ ವಿದ್ಯಾರ್ಥಿಗಳು ಅವರನ್ನು ಸ್ಮರಿಸುತ್ತಾರೆ. ಹಾಗೆಂದು ಬಸ್ಸು ಕಂಪನಿಯವರ, ಅಧಿಕಾರಿಗಳ ಮೇಲೆ ಯಾವುದೇ ಕೋಪ, ಕಹಿಯ ಲೇಶವನ್ನೂ ಇರಿಸಿಕೊಳ್ಳದೇ ಒಳ್ಳೆಯ ಸ್ನೇಹ ಸಂಬಂಧಗಳನ್ನು ಮುಂದುವರೆಸಿದ್ದರು. ಇದೂ ಒಂದು ಅವರ ಉತ್ತಮ ಗುಣ.

ಕೇಶವ ಮಾಮನವರನ್ನು ಆಗಾಗ ಸ್ಮರಿಸುತ್ತಿರುತ್ತೇನೆ. ಅವರ ಮಕ್ಕಳೂ ಸಹ ನಮ್ಮೊಡನೆ ಉತ್ತಮ ಸ್ನೇಹ ಬಾಂಧವ್ಯಗಳನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ. ಪ್ರೀತಿ, ಸ್ನೇಹಭಾವ, ವಿಶ್ವಾಸಗಳ ಅಭಾವದ ಕಾಲವಾದ ಇಂದಿನ ದಿನಗಳಲ್ಲೂ ಇಪ್ಪತ್ತು ಮುವ್ವತ್ತು ವರ್ಷಗಳ ಹಿಂದೆ ಪಬ್ಲಿಕ್ ಪರೀಕ್ಷೆಗಳಲ್ಲಿ ಬರೆಯಲು ನಮ್ಮಲ್ಲಿ ಕಳೆದ ನಾಲ್ಕೈದು ದಿನಗಳನ್ನು ಭಾವ ಪೂರ್ಣರಾಗಿ ನೆನೆಯುತ್ತಾರೆ! "ಕೇಶವ್ ಮಾಮ್, ಪರೀಕ್ಷೆ ಟೈಮಾರೀ ತುಮ್ಮೆಥೈಂ ರಾಬ್ಬಿಲೇ, ಜಾವಣ ಕೆಲ್ಲೆಲೇ ಉಡ್ಗಾಸು ವಿಸೋರು ನಾ!!" ಎಂದು ಹೇಳಿ ನಮ್ಮನ್ನು ಪ್ರೇಮದ ಸರಪಳಿಯಲ್ಲಿ ಬಿಗಿಯಾಗಿ ಕಟ್ಟಿ ಬಿಡುತ್ತಾರೆ!! ಯಾವಾಗಲೋ ಮಾಡಿದ ಒಂದೆರಡು ಗಂಜಿಯೂಟವನ್ನು ಇಂದಿಗೂ ಚಪ್ಪರಿಸುವ ಇವರ ಪ್ರೀತಿಯನ್ನು ಹೇಗೆ ವರ್ಣಿಸಲಿ?