Monday, January 9, 2023

ಉಡ್ಪಾಕ ಹೊರಣ ವಚ್ಚೆ

 

 

ಕಳೆದ ಶತಮಾನದ ಐವತ್ತರ ಉತ್ತರಾರ್ಧದ ಸಮಯ. ಹೆಬ್ರಿಯು ಒಂದು ಸಾಧಾರಣವಾದ ಹಳ್ಳಿಯಾಗಿತ್ತು. ಅತ್ತ ಕುಗ್ರಾಮವೂ ಅಲ್ಲ, ಇತ್ತ ಅಭಿವೃದ್ಧಿ ಹೊಂದಿದ ಊರೂ ಅಲ್ಲ. ಊರಿನ ಕೆಲವು ಪ್ರಭಾವೀ ಮಹನೀಯರ ಹಾಗೂ ಸದಭಿಪ್ರಾಯದ ದೊಡ್ಡ ಮನುಷ್ಯರ ಪ್ರಯತ್ನಗಳಿಂದ ಹಾಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ ಒಂದು ಸಮಾಜಮಂದಿರ, ಮಕ್ಕಳಿಗೆ ಆಡಲು ಅನುಕೂಲವಾಗುವಂತೆ ಆಟದ ಜಾಗ, ಅದರಲ್ಲೊಂದು ಜಾರುಬಂಡಿ, ಒಂದು ರೇಡಿಯೋ ಸ್ಟೇಷನ್ನು, ಲೈಬ್ರೇರಿ, ಒಂದು ಪ್ರಾಥಮಿಕ ಆರೋಗ್ಯಕೇಂದ್ರ ಮತ್ತದರಲ್ಲೊಬ್ಬ ಡಾಕ್ಟರು ಮುಂತಾದವುಗಳ ಸೌಕರ್ಯಗಳು ಲಭ್ಯವಿದ್ದವು. ಉತ್ತಮ ಮಟ್ಟದ ಶಿಕ್ಷಣ ನೀಡುವ ಒಂದು ಹೈಸ್ಕೂಲೂ ಆರಂಭವಾಯಿತು. ಈಗ ಅದು ಪದವಿಪೂರ್ವ ಕಾಲೇಜಾಗಿ ಪರಿವರ್ತಿತವಾಗಿದೆ. ಈಗಲೂ ಸಹ ವಿದ್ಯಾಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತದೆ ಎಂಬ ವಿಚಾರ ಕೇಳಿ ಮನ ಮುದಗೊಳ್ಳುತ್ತಿದೆ, ಎದೆ ಉಬ್ಬುತ್ತದೆ. ಹೈಸ್ಕೂಲಿನ-ಪದವಿಪೂರ್ವ ಕಾಲೇಜಾದರೂ ನಾವು ಕರೆಯೂದು ಹೈಸ್ಕೂಲು-ಮೇಲೆ ನನಗೆ ಬಹಳವೇ ಪ್ರೀತಿ ಅಭಿಮಾನ ಮತ್ತು ವಿಶ್ವಾಸ ಇದೆ. ನಿನ್ನೆ ಮೊನ್ನೆ ಭೆಟ್ಟಿಯಾದವರ ನೆನಪು ಮರೆತುಹೋಗುತ್ತದೆ, ಆದರೆ ಹೆಬ್ರಿ ಹೈಸ್ಕೂಲಿನಲ್ಲಿ ಕಲಿತ, ಕಲಿಯುವಾಗ ಅನುಭವಿಸಿದ ಸುಖ, ಆನಂದ ಮತ್ತು ಆಟಪಾಟಗಳ ನೆನಪಿನ ತುಣುಕುಗಳು ಆಗಾಗ ಮನಸ್ಸಿಗೆ ಖುಷಿ ಕೊಡುತ್ತವೆ, ಕಚಗುಳಿಯಾಗುತ್ತದೆ...

ಊರು ಚಿಕ್ಕದಿದ್ದಷ್ಟೂ ಊರವರ ಮನಸ್ಸು ದೊಡ್ಡದಿರುತ್ತದೆ. ಇದೊಂದು ವಿಲೋಮ ನಿಷ್ಪತ್ತಿಯಿದ್ದಂತೆ. ಊರು ಸಣ್ಣದು-ಜನರ ಮನಸ್ಸು ಪರಸ್ಪರ ಪ್ರೀತಿ ದೊಡ್ಡದು. ಅದೇ ಊರು ಬೆಳೆದಂತೆಲ್ಲ ಪ್ರೀತಿ ವಿಶ್ವಾಸ ಆದರ ಸಮ್ಮಾನಗಳ ಪ್ರಮಾಣ ಕುಂಠಿತವಾಗುತ್ತ ಹೋಗುತ್ತದೆ. ಇದು ಅಷ್ಟೇನೂ ವಿಕೃತಿಯೆಂದೇನಲ್ಲ. ಸರ್ವೇಸಾಮಾನ್ಯ ಸಹಜವೇ ಆದ ವಿಚಾರ. ಆದರೆ ನಮ್ಮ ಹೆಬ್ರಿಯು ಪ್ರಮೇಯಕ್ಕೆ ಒಂದು ಅಪವಾದ. ಊರು ಬೆಳೆದಂತೆಲ್ಲ ಎಲ್ಲರ ಸಂಬಂಧಗಳು ಹೆಚ್ಚು ಹೆಚ್ಚು ಗಾಢವಾಗಿವೆಯೇ ಹೊರತು ಕ್ಷೀಣಿಸಿಲ್ಲ. ತತ್ಪರಿಣಾಮವಾಗಿ ಊರು ಬೆಳೆದು ಪೇಟೆಯಾಗಿ ಇಂದು ನಗರವಾಗಿ ಭಡ್ತಿ ಹೊಂದಿದ್ದು ತುಂಬಾ ಪ್ರಗತಿ ಆಗಿದೆ. ಈಗ ಹೆಬ್ರಿಯು ತಾಲೂಕು ಆಗಿ ಹೊಸ ತಾಲೂಕಾಫೀಸು ಇತ್ತೀಚಿಗೆ ಮಾನ್ಯ ಮುಖ್ಯಮಂತ್ರಿಯವರಿಂದ ಉದ್ಘಾಟನೆ ಹೊಂದಿತು. ಹೈಸ್ಕೂಲಿನ ಎದುರು ಕಾಲೇಜಾಗಿದೆ, ಇತರೇ ಪ್ರೈವೇಟ್ ವಿದ್ಯಾಸಂಸ್ಥೆಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರವು ಬದಲಾಗಿ ಮೇಲ್ದರ್ಜೆಯಸಾಮೂಹಿಕ ಆರೋಗ್ಯ ಕೇಂದ್ರವಾಗಿದೆ. ಉದ್ಯಮ ಬೆಳೆದಿದೆ. ಹಿಂದೆ ಪ್ರೈಮರಿಯಲ್ಲಿ ಕಲಿಯುತ್ತಿದ್ದಾಗ ಗೇರುಬೀಜ ಕಾರ್ಖಾನೆ ನೋಡಲು ನಾವು ಮಂಗಳೂರಿಗೆ ಟ್ರಿಪ್ ಹೋಗಿದ್ದೆವು. ಇಂದು ಹೆಬ್ರಿ ಮತ್ತು ಆಸುಪಾಸು ಊರುಗಳಲ್ಲಿ ಸುಮಾರು ಎಪ್ಪತ್ತಕ್ಕೂ ಮೀರಿ ಗೇರುಬೀಜ ಕಾರ್ಖಾನೆಗಳಿವೆ. ಕೇವಲ ಸಿಂಡಿಕೇಟ್ ಬ್ಯಾಂಕ್ ಮಾತ್ರ ಮೆರೆಯುತ್ತಿದ್ದ ಕಾಲ ಹೋಗಿ ಇಂದು ಒಟ್ಟು ಹದಿನಾರು ಪ್ರಮುಖ ಬೇಂಕಿಂಗ್ ಸಂಸ್ಥೆಗಳು ಪೈಪೋಟಿಯಿಂದ ವ್ಯವಹಾರ ನಡೆಸುತ್ತಿವೆ. ನನ್ನ ಊರಿನ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸುತ್ತದೆ.

ನೆನಪಿನ ಬಲೆಯಲ್ಲಿ ಕೆಲವು ತುಣುಕುಗಳು ಬಿದ್ದಿವೆ.ಇಂದಿನ ನಮ್ಮ ಫಾಸ್ಟ್ ಹಾಗೂ ಮಾಡರ್ನ್ ಯುಗದಲ್ಲಿ ಇವು ಗೌಣವೆಂದು ಎನಿಸಿದರೂ ಅವುಗಳು ಘಟಿಸಿದ ಕಾಲಘಟ್ಟ, ವಹಿಸಿದ ಪಾತ್ರಗಳು ಇವನ್ನೆಲ್ಲಒಟ್ಟಾರೆಯಾಗಿ ಗಮನಿಸಿದಾಗ ಖುಷಿಯಾಗುತ್ತದೆ.

ಹಳ್ಳಿ, ಸಣ್ಣ ಗ್ರಾಮಗಳಲ್ಲಿ ಅನೇಕ ವಿಚಾರಗಳು ವ್ಯಕ್ತಿತ್ವಗಳು ತಮ್ಮವೇ ಆದ ಮಹತ್ವ ಪಡಕೊಂಡಿರುತ್ತವೆ. ಎಲಿಮೆಂಟರಿ ಶಾಲೆ ಅಥವಾ ಹೈಸ್ಕೂಲಿನ ಅಧ್ಯಾಪಕರು-ಮುಖ್ಯವಾಗಿ ಹೆಡ್ ಮಾಸ್ತರರು, ಪೋಸ್ಟುಮಾಸ್ಟರು, ಬೇಂಕ್ ಮೆನೇಜರ್, ಆಸ್ಪತ್ರೆಯ ವೈದ್ಯಾಧಿಕಾರಿ, ಕಂಬೈಂಡ್ ಬುಕಿಂಗ್ ಏಜನ್ಸಿ ಇತ್ಯಾದಿ ಇತ್ಯಾದಿ.. ಪಟ್ಟಿ ಉದ್ದವಿದೆ. ಇವತ್ತು ಉಡುಪಿ ಮಂಗಳೂರು ಕುಂದಾಪುರಕ್ಕೆ ಹೋಗಬೇಕಿದ್ದರೆ ಬೇರೆ ಬೇರೆ ಬಸ್ಸುಗಳಿವೆ. ಅಂದು ಹಾಗಲ್ಲ., ಕಾರ್ಕಳಕ್ಕೆ ಹೋಗಲು ಶೀನಶೆಟ್ಟಿ ಬಸ್ಸು, ಉಡುಪಿಗೆ ನಾಗಪ್ಪನ ಸೀ ಎಮ್ ಟೀ, ಕುಂದಾಪುರ ಹಾಲಾಡಿಯಾಗಿ ಕಾರ್ಕಳಕ್ಕೆ 'ನಂದು' ಬಸ್ಸು, ಕುಂದಾಪುರ ಹಾಲಾಡಿ ಶೇಡಿಮನೆ ಸೋಮೇಶ್ವರ ದಾರಿಯಾಗಿ ಕಾರ್ಕಳಕ್ಕೆ ಸೀ ಪೀ ಸೀ ಬಸ್ಸು ಇತ್ಯಾದಿ ಇತ್ಯಾದಿ... ಮೇಲ್ ಬಸ್ ಬರುವ ಸಮಯಕ್ಕೆ ಸರಿಯಾಗಿ ಪೋಸ್ಟಾಫೀಸಿನ ಮರ್ತಪ್ಪ ರಸ್ತೆ ಬದಿಯಲ್ಲಿ ಕಾಯುತ್ತ ಇರಬೇಕು. ತಪ್ಪಿದರೆ ಡ್ರೈವರ್ ಮೂಡು ಸರಿಯಿದ್ದರೆ-ಸರ್ವೇಸಾಮಾನ್ಯ ಅದು ಶಾರ್ಟ್ ಫ್ಯೂಸಿನಲ್ಲೇ ಇರುತ್ತಿತ್ತು-ಮರ್ತಪ್ಪ ಬಚಾವು. ಒಂದು ಮಿನೀಟು ತಡವಾದರೂ ಆದಿನ ಹೆಬ್ರಿಗೆ ಪೋಸ್ಟು ಇಲ್ಲ.

'ಪೋಸ್ಟು ಬೇಗು ಏಕೆ ಕೊಡಲಿಲ್ಲ?' ಎಂದು ಮರ್ತಪ್ಪ ಡ್ರೈವರ್ ಬಳಿ ಕೇಳುವ ಹಾಗಿಲ್ಲ..

'ಎಂಕಲ್ನ ಕಂಪನಿ ಬಸ್ಸ್, ಟೈಮುಗ್ ಸಮಾ ಆದ್ ಪೋವೋಡು, ಹಾಗೆಲ್ಲ ನಿಮಗಾಗಿ ಘಂಟೆಕಟ್ಲೆ ರೋಡ್ ಸೈಡಲ್ಲಿ ಕಾಯಲಿಕ್ಕಾಗೂದಿಲ್ಲ.' ಅವನ ಧಿಮಾಕು. ಇಲ್ಲಿ ತಪ್ಪು ಮರ್ತಪ್ಪನದ್ದೇ ಆಗುತ್ತಿತ್ತೇ ವಿನಃ ಅರೆಕ್ಷಣವೂ ಕಾಯಲಾಗದ ಕಂಪನಿ ಬಸ್ ಡ್ರೈವರಿನದಲ್ಲ.

'ವ್ಹೈರೇ ತುಕ್ಕ ದೋನಿ ಮಿನಿಟ ಸುರ್ವೇಕ ವಚ್ಚೆ ಧಾಡಿವೇ!? ಪೋಸ್ಟ್ ಮುಖ್ಯಕೀ ತುಗ್ಗೆಲೆ ಬೀಡಿ ತಾಂಡ್ಚೆ? ಓಡು, ಬಸ್ ಸ್ಟಾಂಡಲ್ಲಿ ಅವನು ಇದ್ದಲ್ಲಿ ಬೇಗ ಬೇಗು ಹಿಡಕೊಂಡು ಬಾ.' ಪೋಸ್ಟುಮಾಸ್ಟರು ಸಂಜೀವಮಾಮನವರ ಕೈಯಲ್ಲಿ ಬೈಸಿ ಕೊಂಡು ಮರ್ತಪ್ಪ ಓಡುತ್ತಾ ಹೋಗಿ ಬಸ್ಟೇಂಡಲ್ಲಿ ಅವನಿಗಾಗಿಯೇ ಕಾಯುತ್ತಿದ್ದ ಕಂಪನಿ ಬಸ್ಸಿನ ಸಿಬಂದಿಯವರ ಬಳಿ ಕೈಮುಗಿದು ದಮ್ಮಯ ದಕ್ಕಯ ಹಾಕಿ ಪೋಸ್ಟ್ ಬೇಗು ತರುತ್ತಿದ್ದ. ಅಸಲಿಗೆ ಬೇಗು ಕೊಡದೇ ಹೋದರೆ ಅವರಿಗೇ ತೊಂದರೆ. ವಿಷಯ ಮರ್ತಪ್ಪನಿಗೆ ಗೊತ್ತಿಲ್ಲ, ಅವನಿಗೆ ಗೊತ್ತಿಲ್ಲ ಎಂದು ಇವರಿಗೆ ಗೊತ್ತು. ಹಾಗಾಗಿ ಆಗೊಮ್ಮೆ ಈಗೊಮ್ಮೆ ಅವನನ್ನುಸತಾಯಿಸಿ ಖುಷಿ ಪಡುತ್ತಿದ್ದರು. ಅವರ ಮಜ ಅವರಿಗೆ ಇರಲಿ ಎಂದು ಸಂಜೀವಮಾಮನವರೂ ಸುಮ್ಮನಿರುತ್ತಿದ್ದರು.

ಉಡುಪಿಯಲ್ಲಿ ನಡೆಯುವ ಒಂದು ಮದುವೆಗೆ ದಿಬ್ಬಣ ತಕೊಂಡು ಹೋಗುವ ಪ್ರೋಗ್ರಾಮು ಒಮ್ಮೆ ನಮ್ಮ ಹರಿಮಾಮನವರಿಗೆ ಒದಗಿ ಬಂತು. ಅವರ ಪೈಕಿ ಮದುವೆ, ಅಂದರೆ ಮನೆಯವರದೇ ಅನ್ನುವಂತೆ-ಅಷ್ಟು ಹತ್ತಿರದವರು. ಹಾಗಾಗಿ ಸಾಕಷ್ಟು ದೊಡ್ಡದೇ ದಿಬ್ಬಣ ತಯಾರಾಯ್ತು. ಹರಿಮಾಮನವರು ಊರಿನ ಗೌರವಾನ್ವಿತ ಹಾಗೂ ಆಢ್ಯ ವ್ಯಕ್ತಿ. ನಮ್ಮ ಸಮಾಜದ ಲೀಡರುಗಳಲ್ಲಿ ಪ್ರಮುಖರು. ಊರು ಪರವೂರುಗಳಲ್ಲಿ ಅವರಿಗೆ ತುಂಬ ಗೌರವ ಮರ್ಯಾದೆಗಳಿದ್ದವು. ಈಗ ದಿಬ್ಬಣ ಉಡುಪಿಗೆ ಕೊಂಡು ಹೋಗಲು ಬಸ್ಸು ಬುಕ್ ಮಾಡುವರೆ ಪಿ ಬಿ ವಿ ಕಾಮತರ ಬಳಿ ಬಂದರು. ಕಾಮತರು ಕಂಬೈಂಡ್ ಬುಕ್ಕಿಂಗ್ ಏಜನ್ಸಿಯ ಹೆಬ್ರಿ ಛೀಫು.

'ಈಗ ನಿಮ್ಮ ಹೊರಣ ಜನ ಬಸ್ ಫುಲ್ ಇದ್ದಾರಲ್ವಾ. ಹಾಗಾದ್ರೆ ಒಂದು ಕೆಲಸ ಮಾಡುವ, ಸೋಮೇಶ್ವರದಿಂದ ಬರುವ ಫಸ್ಟ್ ಬಸ್ಸಿಗೇ ನೀವೆಲ್ಲ ಹೊರಟುಬಿಡಿ. ಅಲ್ಲಿಂದ ಬೆಳಗಾಂಮುಂಚೆ ಹೆಚ್ಚು ಪೆಸೆಂಜರು ಇರೂದಿಲ್ಲ, ಇದ್ದರೂ ಹೆಚ್ಚಿನವರು ಹೆಬ್ರಿ ಡೌನು. ಇಲ್ಲಿಂದ ಇಡೀ ಬಸ್ಸಿನ ಜನ ಅಂತ ನೀವೇ ಇದ್ದೀರಿ. ತಿಕೀಟು ತಗೊಂಡು ಹತ್ತಿ ಹೋಗಿ ಬಿಡಿ, ರಗಳೆಯಿಲ್ಲ. ದಿಬ್ಬಣಕ್ಕೆ ಅಂತ ಸ್ಪೆಷಲ್ ಬಸ್ಸು ಹಾಕಬೇಕಂದ್ರೆ ಸುಮ್ಮನೇ ಪರ್ಮೀಟು ಅದು ಇದು ಅಂತ ಖರ್ಚು ಬರುತ್ತದೆ, ಅಷ್ಟೆಲ್ಲ ಪ್ರೋಬ್ಲೆಮ್ ಯಾಕೆ ಮಾಡಿಕೊಳ್ಳೂದು! ನಾನು ಹೆಡ್ ಆಫೀಸಿಗೆ ಹೇಳಿ ಇಟ್ಟಿರುತ್ತೇನೆ. ನೀವು ಬಸ್ಸಿನ ಡ್ರೈವರ್ ಕಂಡಕ್ಟರುಗಳ ಕುಷಾಮತ್ ಸ್ವಲ್ಪ ನೋಡಿಕೊಳ್ಳಿ.' ಕಾಮತರ ಸಲಹೆ.

ಹರಿಮಾಮನವರಿಗೆ ಹೌದೆನಿಸಿತು. 'ಅದು ಬೆಸ್ಟು ಐಡಿಯಾ ಮಹರಾಯ! ಹಾಗೇ ಮಾಡುವಾ,' ಎಂದವರೇ ಫಸ್ಟ್ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರಿಗೂ ಸಂಗತಿ ತಿಳಿಸಿ ಚಾ ತಿಂಡಿ ಕೊಡಿಸಿ ಸಾಕಷ್ಟು ಸತ್ಕಾರ ಮಾಡಿದರು.

'ನಿಮ್ಮ ಮನೆಯ ಮದುವೆ ಅಂದರೆ ನಮ್ಮ ಮನೆಯ ಕಾರ್ಯಕ್ರಮ ಇದ್ದಂತೆ, ನೀವೆಂತದೂ ಚಿಂತೆ ಮಾಡಬೇಡಿ ಧನಿಗಳೇ, ನಮ್ಮ ಪೂರಾ ಸಹಕಾರ ಉಂಟು...'  ಇಬ್ಬರ ಮಾತು ಕೇಳಿ ಹರಿಮಾಮ ನಿರಾಳವಾದರು. ತನ್ನ ಇತರ ವ್ಯವಸ್ಥೆಗಳತ್ತ ಮನವಿಟ್ಟರು. ಊರು ತುಂಬಾ ಆಮಂತ್ರಣವಿತ್ತು. ಮೊದಲೇ ತಿಳಿಸಿದಂತೆ ಸಣ್ಣ ಊರು. ಪ್ರತಿಯೊಬ್ಬರೂ ಪರಸ್ಪರ ಬಂಧುಗಳು ಮತ್ತು ಮಿತ್ರರೂ ಕೂಡ. ಈಗಿನ ಕಾಲದಂತೆ ಬೇಕುಬೇಕಾದಾಗಲೆಲ್ಲ ಊರು ತಿರುಗುವ ಛಾನ್ಸ್ ಅಥವಾ ಸೌಲಭ್ಯಗಳಿರಲಿಲ್ಲ. ಕಾರ್ಯಕ್ರಮಗಳಿದ್ದರೂ ಕೂಡ ಹೆಚ್ಚಿನವರ ಆರ್ಥಿಕ ಪರಿಸ್ಥಿತಿ ದೂರದ ಊರುಗಳಿಗೆ ಪಯಣ ಬೆಳೆಸಲು ಅನುಕೂಲವಾಗಿದ್ದಿಲ್ಲ. ಇದೊಂದು ಸುವರ್ಣಾವಕಾಶ ಅಯಾಚಿತವೆಂಬಂತೆ ಒದಗಿ ಬಂದುದು ಎಲ್ಲರಿಗೂ ಸಂತಸ, ಸಂಭ್ರಮ. ವಿಶೇಷ ಎಂದರೆ ಮದುವೆ ಉಡುಪಿ ಶ್ರೀ ಕೃಷ್ಣನ ಊರಲ್ಲಿ! ದೇವರನ್ನು ನೋಡುವ ಭಾಗ್ಯ ಒಂದೆಡೆ, ಭರ್ಜರಿ ಮದುವೆಯಲ್ಲಿ ಪಾಲುಗೊಳ್ಳುವ ಸಂಭ್ರಮ ಇನ್ನೊಂದೆಡೆ. ಎಲ್ಲರಿಗೂ ಖುಷಿಯೋ ಖುಷಿ. ಹೆಣ್ಣುಮಕ್ಕಳ ಸಂಭ್ರಮ ಉಲ್ಲಾಸಗಳನ್ನು ಇಲ್ಲಿ ವಿವರಿಸಲು ಕಷ್ಟ. ಉಡುಪಿ ಪೇಟೆಯಲ್ಲಿ ತಮ್ಮ ಪೈಕಿಯವರು ಯಾರು ಯಾರು ಇದ್ದಾರೆ, ಯಾರ್ಯಾರನ್ನು ಕಂಡು ಬರಬಹುದು ಎಂಬುದರ ಕುರಿತು ಪುನಃ ಒಮ್ಮೆ ಖಾನೇಶುಮಾರಿ ನಡೆಯಿತು. ಇಲ್ಲಿಂದ ಮದುವೆಯಾಗಿ ಹೋದ ಮನೆಮಗಳು ಹೇಗಿದ್ದಾಳೋ, ಅವಳ ಯಜಮಾನನ ವ್ಯಾಪಾರ ವೈವಾಟು ಹ್ಯಾಗೆಲ್ಲ ಉಂಟೋ....!? ಅವಳ ಮನೆಗೆ ಇವಳು ಹೋಗೂದು, ಇವಳಲ್ಲಿಗೆ ಅವಳು ಬರೂದು, ಮಾತುಕತೆ ವಿಮರ್ಶೆ ಮಾಡೂದು..... ಆದಷ್ಟು ಮಟ್ಟಿಗೆ ಹೆಚ್ಚಿನವರು ಸೂಕ್ಷ್ಮದಲ್ಲಾದರೂ 'ಓಡಿ ಹಾಪ್ಪೊಳು' ಅದು ಇದು ಮಗಳಿಗೆ ಅಳಿಯನಿಗೆ ಪ್ರೀತಿ ಎಂದು ತಯಾರು ಮಾಡಿಟ್ಟುಕೊಂಡರು.

'ಇದೆಲ್ಲ ಎಂತದು ನಿಮ್ಮ ಸಂಭ್ರಮ? ಅಲ್ಲಿ ಹೊರಣ ಅಂದ್ರೆ ಬರೀ ಹೊರಣ ಮಾತ್ರ ಹೊರಟು ಬರಬೇಕು. ಹೀಗೆಲ್ಲ ಊರು ತುಂಬಾ ಬಿಡ್ಕಿಬಜಾರ ಕಟ್ಟಿಕೊಂಡು ಬರುವ ಹಾಗಿಲ್ಲ. ಅಲ್ಲೆಂತ ಬಾಳಂತಿರ ಮಾಡಲಿಕ್ಕುಂಟ?' ಹರಿಮಾಮ ಕೆಲವರನ್ನು ಸಣ್ಣಗೆ ಗದರಿಸಿದರು. ಅವರೂ ಸಹ ಸಂಭ್ರಮಗಳಲ್ಲಿ ಭಾಗಿಗಳೇ, ಸುಳ್ಳುಸುಳ್ಳೇ ತಮ್ಮ ಗತ್ತುಗಾರಿಕೆ ಮೆರೆಸಿದರೇ ವಿನಹ ಯಾರಿಗೂ ಅಡ್ಡಿಪಡಿಸಲಿಲ್ಲ... ನಿರೀಕ್ಷೆಯಂತೆ ದಿಬ್ಬಣ ಹೊರಡುವ ದಿನ ಬಂತು.

ಮದುವೆ ದಿಬ್ಬಣ ಹೊರಡುವ ಸಂಭ್ರಮವೇ ಸಂಭ್ರಮ! ಅದನ್ನು ವಿವರಿಸಲು ನನ್ನ ಜ್ಞಾನ ಸಾಲದು. ಈಗಿನ .ಟಿ. ಹುಡುಗರಿಗೆ ಅದು ಅರ್ಥವೇ ಆಗಲಾರದು ನನ್ನ ಮಗನ ಇಂಡೋನೇಷ್ಯಾ ಜಕಾರ್ತಾ ಫ್ಲೈಟು ರಾತ್ರಿ ಎಂದಾದರೆ ಮಧ್ಯಾಹ್ನ ನಾಲ್ಕರ ನಂತರವೇ ಆರಾಮವಾಗಿ ತಯಾರಿ ಮಾಡಿಕೊಳ್ತಾನೆ. ಅಷ್ಟು ಈಸಿ, ಯಾವುದೇ ಟೆನ್ ಷನ್ ಇಲ್ಲ. ಅವನ ಲ್ಯಾಪ್ ಟಾಪಿನಲ್ಲಿ ಇಂತಿಷ್ಟು ದಿನಗಳ ಟ್ರಿಪ್ಪಿಗೆ ಏನೆಲ್ಲಾ ಬೇಕು ಎಂಬ ಲಿಸ್ಟು ಇದೆ. ಅದರಂತೆ ಆರಾಮಾಗಿ ಪ್ಯಾಕಿಂಗ್ ಸುರು ಮಾಡಿದರೆ ಇಪ್ಪತ್ತು ನಿಮಿಷಗಳಲ್ಲಿ ಖತಮ್.! ರಾತ್ರಿ ಎಂಟಕ್ಕೆ ಊಟ, ಒಂಭತ್ತಕ್ಕೆ ಕಾರು ಬರುತ್ತದೆ, ಅದರಲ್ಲಿ ಹೊರಟ... ಹೆಬ್ರಿಯಿಂದ ನಮ್ಮ ಹರಿಖಂಡಿಗೆಗೆ ಹೋಗೂದಕ್ಕಿಂತಲೂ ಈಸಿ. ನೀವು ನಂಬೂದಾದರೆ ನಂಬಿ, ಇಲ್ಲ ಅಂದ್ರೆ ಒಮ್ಮೆ ನಮ್ಮಲ್ಲಿ ಬನ್ನಿ.

ಹೊರಣ ಹೊರಡುವ ತಯ್ಯಾರಿ ಕುರಿತು ಹೆಚ್ಚು ಬರಿಯೂದಿಲ್ಲ. ಕೆಲವು ಮನೆಗಳಲ್ಲಿ ಹೆಂಗಸರು ನಿದ್ದೆಯೇ ಮಾಡಲಿಲ್ಲ. ಬೆಳಿಗ್ಗೆ ಬೇಗನೇ ಫಸ್ಟು ಬಸ್ಸಿನ ಪ್ರಯಾಣ ತಾನೇ! ಮನೆಯವರೆಲ್ಲಾ ಎದ್ದು ಸ್ನಾನ ಸಂಧ್ಯಾವಂದನೆ ಮಾಡಿ ಹೊರಡೂದೆಂದರೆ ಕುಶಾಲಾಯಿತೇ! ಕೆಲವರು ಪ್ರಾಜ್ಞರಿದ್ದರು, ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ-ಮೂರುವರೆ ನಾಲ್ಕಕ್ಕೆ- ಎದ್ದಿದ್ದರು. ಅಂತೂ ಮುಂಜಾನೆ ಆರೂವರೆಯ ಬಸ್ಸಿಗೆಂದು ಹೆಚ್ಚುಕಡಿಮೆ ಐದೂಮುಕ್ಕಾಲು ಆರರ ಒಳಗೆ ಎಲ್ಲರೂ ಬಸ್ಟೇಂಡಲ್ಲಿ ಜಮಾಯಿಸಿದ್ದರು. ಗದ್ದಲವೋ ಗದ್ದಲ! ದಿಬ್ಬಣದ ಗದ್ದಲವು ಚಿರನೂತನ! ಅದು ಬದಲಾಗುವುದಿಲ್ಲ. ನೂರು ವರ್ಷಗಳ ಹಿಂದಿನ ಹಾಗೂ ಇಂದಿನ ಕಾಲದ ಸಂಭ್ರಮಗಳು ಒಂದೇ ತೆರ. ಯಾವುದೇ ಬದಲಾವಣೆ ಇಲ್ಲ. ಯಾವ ಗುರ್ಕಾರನೇ ಇರಲಿ ಅವರನ್ನು-ಗೌಜಿಯನ್ನು- ನಿಯಂತ್ರಿಸಲು ಸಾಧ್ಯವೇ ಇಲ್ಲ. ಎಲ್ಲರನ್ನೂ ಒಂದೆಡೆ ಶಿಸ್ತಿನಿಂದ ನಿಲ್ಲಿಸಿ, ಬಸ್ಸು ಹತ್ತುವಾಗ ಯಾವುದೇ ಗೌಜಿ ಗಲಾಟೆ ಮಾಡಬಾರದು, ಕ್ರಮ ಪ್ರಕಾರ ಬಸ್ ಹತ್ತಿ ಕೂಡಬೇಕು ಹಾಗೆ ಹೀಗೆ ಎಂಬ ಸೂಕ್ತ ಸಲಹೆಗಳನ್ನು ನೀಡಲಾಯಿತು.

ಫಸ್ಟ್ ಬಸ್ಸು ಬಂತು. ಅದರಲ್ಲಿದ್ದ ಏಳೆಂಟು ಪ್ರಯಾಣಿಕರಲ್ಲಿ ನಾಲ್ವರು ಇಳಿದು ಮುಂದಿನ ಊರಿಗೆ ಹೋಗುವ ನಾಲ್ವರು ಬಸ್ಸಿನಲ್ಲಿ ಬಾಕಿಯಾದರು. ಹರಿಮಾಮನವರ ಆದೇಶದಂತೆ ಒಂದು ಲೈನಿನಲ್ಲಿ ಕಾಯುತ್ತಿದ್ದವರೆಲ್ಲ ಮೊದಲು ಮಕ್ಕಳು, ಹೆಂಗಸರು, ಹಿರಿಯರು ಕೊನೆಯಲ್ಲಿ ತರುಣ ಪ್ರಾಯದವರು ಹೀಗೆ ಬಸ್ ಹತ್ತಿ ಕೂತರು. ಬಸ್ಸು ಖಚಾಕಚ್ ಭರ್ತಿಯಾಯಿತು. ತರುಣರಿಗೆ ಫುಟ್ ಬೋರ್ಡಿನ ಮೇಲೆ ತೂಗಾಡುತ್ತಾ ಲಲನಾಮಣಿಯರ ಎದುರು ತಮ್ಮ ಸಾಹಸ ಮೆರೆಯಲು ಅವಕಾಶ ಸಿಕ್ಕಿ ಭಾರೀ ಉಮೇದಿನಲ್ಲಿದ್ದರು. ಅಂತೂ ಎಲ್ಲರೂ ಹತ್ತಿ ಕೂತಾಯಿತು, ಕಾಮತರು ಎಲ್ಲರನ್ನೂ ಸೇರಿಸಿ ಒಂದೇ ಟಿಕೀಟು ಹರಿದು ಕೊಟ್ಟರು. ಸ್ಟೇಟ್ ಮೆಂಟ್ ಬರೆದು ಲೆಕ್ಕ ಟ್ಯಾಲಿ ನೋಡಿ ರೈಟ್ ಅಂದರು.

'ಈರ್ ರೈಟ್ ಫಂಡೀ ಘಸೀಗ್ ಬಸ್ ಪೋಪುಂಡಾ? ಸ್ಟೇಟ್ ಮೆಂಟ್ ಮತ್ತು ಪೆಸೆಂಜರ್ ಲೆಕ್ಕ ಟೇಲಿ ಆಗಬೇಕಾ ಬೇಡವಾ? ರೈಟ್ ಹೇಳುವಂವ ನಾನು! ರೈಟ್ ಅಂತೆ ರೈಟ್!' ಕಂಡಕ್ಟರ್ ಯಾಕೋ ಆದಿನ ಗರಮ್ಮಾಗಿದ್ದ.

'ಎಲ್ಲ ಲೆಕ್ಕ ಕರೆಕ್ಟ್ ನೋಡಿಯೇ ಟಿಕೆಟು ಇಶ್ಯೂ ಮಾಡಿದ್ದೇನೆ. ನೀನು ಪುನಃ ಲೆಕ್ಕ ನೋಡುವ ಅಗತ್ಯವಿಲ್ಲ, ರೈಟ್ ಹೇಳು.' ಕಾಮತರು ಆದೇಶಿಸಿದರು.

'ಅದೆಲ್ಲ ಆಗೂದಿಲ್ಲ ಕಾಮತರೆ, ಪೆಸೆಂಜರ್ ಲೆಕ್ಕ ಕರೆಕ್ಟ್ ಆಗಬೇಕು. ಹೆಚ್ಚು ಕಡಿಮೆ ಆದರೆ ತಲೆ ಹೋಗೂದು ನಂದು.'

'ಆಯ್ತು ಮಾರಾಯ, ನೀನು ಲೆಕ್ಕ ನೋಡಿಯೇ ಬಸ್ಸು ಬಿಡು. ಎಲ್ಲರೂ ಸ್ವಲ್ಪ ಹೊತ್ತು ಗಲಾಟೆ ಮಾಡದೇ ಸರಿಯಾಗಿ ಕೂತ್ಕೊಳ್ಳಿ ನೋಡುವ.' ಹರಿಮಾಮ ಒಪ್ಪಿ ತಮ್ಮವರಿಗೆ ಸುಮ್ಮನಿರಲು ಹೇಳಿದರು. ಕಂಡಕ್ಟರು ಒಂದು ರೀತಿಯ ಗತ್ತುಗಾರಿಕೆಯಿಂದ ಪೆಸೆಂಜರ್ ಲೆಕ್ಕ ಸುರುಹಚ್ಚಿದ. ಬಸ್ಸಿನಲ್ಲಿ ಜನ ಗಿಡ್ಚಿ ತುಂಬಿಕೊಂಡಿದ್ದರು, ಇವನಿಗೆ ಹೇಗೆ ಲೆಕ್ಕ ಮಾಡಿದರೂ ಟೇಲಿ ಆಗ್ತಿರಲಿಲ್ಲ. ಹರಿಮಾಮ ಏನು ಆರ್ಡರ್ ಕೊಟ್ಟರೂ ಮಾನವ ಸಹಜಧರ್ಮದಂತೆ ಮೊದಲು ಗುಜುಗುಜು ನಂತರ ಜೋರಾದ ಹರಟೆ ಮಾತುಕತೆ ಶುರುವಾಯಿತು. ಬಸ್ಸಲ್ಲಿ ಎರಡು ಮೂರು ಸಲ ಹಿಂದೆಮುಂದೆ ತಿರುಗಿ ಅವರಿವರ ಕಾಲು, ಸೀರೆ ಸೆರಗು ಮೆಟ್ಟಿ ಬೈಸಿಕೊಂಡರೂ ಇವನ ಲೆಕ್ಕ ಮುಗಿಯಲಿಲ್ಲ.

'ಉಂದು ಆಪುನತ್ತ್, ಮಾಂತೆರ್ಲಾ ವೊರ ಜಪ್ಪುಲೆ ತುಕಾ.'

'ಇಳಿಯೂದೆಂತಕ್ಕೆ? ಎಲ್ಲ ಕರೆಕ್ಟ್ ಟಿಕೆಟ್ ತಕೊಂಡಿದ್ದೇವೆ. ಶುಭಕಾರ್ಯಕ್ಕೆ ಹೊರಟಿದ್ದೇವೆ, ರೈಟ್ ಹೇಳು, ತಡಮಾಡಬೇಡ.' ಹರಿಮಾಮನವರು ಕಂಡಕ್ಟರನ ಬೆನ್ನು ತಟ್ಟಿ ಪುಸಲಾಯಿಸಿ ಕೇಳಿಕೊಂಡರು.

'ಹರಿಯಪ್ಪ ನಾಯಕರೇ ಮೈ ಮುಟ್ಟಬೇಡಿ, ಸ್ಟೇಟುಮೆಂಟು ಸರಿ ಆಗದೇ ಬಸ್ಸು ಬಿಲ್ ಕುಲ್ ಹೋಗೂದಿಲ್ಲ.' ಹರಿಮಾಮ ನವರಿಗೆ ನಖಶಿಖಾಂತ ಉರಿದುಹೋಯಿತು. ಅವರು ಸ್ವಭಾವತಃ ಗರಮ್ ಕಿಸಮ್ಮಿನ ಆಸಾಮಿ. ಯಾರಿಗೂ, ಯಾರ ದೊಡ್ಡಸ್ತಿಕೆಗೂ ಮಣೆ ಹಾಕದ 'ಡೋಂಟ್ ಕೇರ್' ಜನ. ಆದರೆ ಅಂದು ಮದುವೆ ದಿಬ್ಬಣ ಉಡುಪಿಗೆ ಶೀಘ್ರವಾಗಿ ಹೋಗಿ ಸಾಬೀತು ವಾಪಸು ಬರಬೇಕು, ಜಬಾದಾರಿ ತನ್ನ ಮೇಲಿದೆ. ಜಗಳಕ್ಕೆ ನಿಂತರೆ ತೊಂದರೆ ತಮಗೇ ತಾನೇ ಎಂದು ಸಹಿಸಿ ಕೊಂಡರು. 'ಅವನಿಗೆ ಒಂಚೂರು ಹೇಳು ಮಾರಾಯ' ಎಂದು ಡ್ರೈವರ್ ಬಳಿ ವಿನಂತಿಸಿಕೊಂಡರು.

'ಆಯೆ ಇನಿ ಒಂತೆ ಬೆಚ್ಚಡುಲ್ಲೆ, ಎನ್ನ ಪಾತೆರ ಕೇಣುಜೆ.' ಡ್ರೈವರ್ ನುಣುಚಿಕೊಂಡ. ಸಂಬಂಧಪಟ್ಟ ಇತರ ಅನೇಕರು ಪರಪರಿಯಾಗಿ ಕೇಳಿದರೂ ಕಂಡಕ್ಟರ್ ಜಗ್ಗಲಿಲ್ಲ. ಜನರ ಓಲೈಕೆ ಹೆಚ್ಚಿದಂತೆ ಈತನ ಸೆಡೆತ ಜಾಸ್ತಿಯೇ ಆಗತೊಡಗಿತು. ಹರಿಯಪ್ಪ ನಾಯಕರಿಗೆ ಒಂದೆಡೆ ಕೋಪ, ಇನ್ನೊಂದೆಡೆ ಯಕಃಶ್ಚಿತ್ ಒಬ್ಬ ಕಂಡಕ್ಟರ್ ಎದುರು ತನ್ನ ಮಾತು ನಡೆಯದೆ ಊರವರ ಮುಂದೆ ತಾನು ಕುಬ್ಜನಾಗುತ್ತಿದೇನೋ ಎಂಬ ಬೇಸರ. ಅದನ್ನು ಇತ್ಯರ್ಥ ಮಾಡಹೋದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಭಯ... ಹೀಗೆಲ್ಲ ಯೋಚಿಸಿ ಸಂದಿಗ್ಧಕ್ಕೊಳಗಾದರು. ಮದುವೆ ದಿಬ್ಬಣ ಶೀಘ್ರ ಹೊರಡುವುದು ಬಹುಮುಖ್ಯ ವಾದುದರಿಂದ 'ಆಯ್ತು, ಎಲ್ರೂ ಬೇಗ ಬೇಗ ಇಳೀರಿ ನೋಡುವ' ಆಡ್ರು ಮಾಡಿದರು. ಪ್ರತಿಯೊಬ್ಬರೂ ಗಟ್ಟಿಯಾಗಿ ಬೈಯ್ಯಲು ಆಗದೇ ಸುಮ್ಮನಿರಲೂ ಆಗದೇ ಮಣ ಮಣ ಎನ್ನುತ್ತ ಕೆಳಗಿಳಿದರು. ಹುಡುಗರು ಕಿರಿಕಿರಿ ಮಾಡತೊಡಗಿದರು.

'ಯಾರೂ ಪಿರಿಪಿರಿ ಮಾಡಲಿಕ್ಕಿಲ್ಲ, ನಾನೆಲ್ಲ ನೋಡಿಕೊಳ್ತೇನೆ.'

ತನ್ನ ಮಾತು ನಾಲ್ಕು ಜನರ ಮುಂದೆ ಚಲಾವಣೆ ಆದ್ದರಿಂದ ಕಂಡಕ್ಟರ್ ಬೀಗತೊಡಗಿದ. ಕೊಂಕಣಿಯವರಿಗೆ ಬುದ್ಧಿ ಕಲಿಸಿದೆ ಎಂಬ ಅಹಮ್ಮಿನ ಸಣ್ಣ ಕೋಡೊಂದು ಮಂಡೆಯಲ್ಲಿ ಮೂಡಲಾರಂಭಿಸಿತು.

'ಈಗ ಎಲ್ಲರೂ ಒಬ್ಬೊಬ್ಬರಾಗಿ ಹತ್ತಿ.'

'ಬಸ್ಸು ಹತ್ತಲಿಕ್ಕಾಗೂದಿಲ್ಲ.' ನಾಯಕರು ನಿರಾಕರಿಸಿದರು.

'ಏಕೆ?'

'ನೀನು ಹೇಳಿದ್ದು ಎಂತದ್ದು? ಎಲ್ರೂ ಇಳಿದು ಒಬ್ಬೊಬ್ಬರಾಗಿ ಹತ್ತಿ ಲೆಕ್ಕ ಟೇಲಿಯಾಗಿ ನಂತರ ಬಸ್ಸು ಹೊರಡುತ್ತದೆ ಅಂತ, ಹೌದು ತಾನೇ!'

'ಹೌದು, ಎಲ್ಲರೂ ಇಳಿದಾಯ್ತಲ್ಲ, ಇನ್ನು ಹತ್ತಿ.'

'ಎಲ್ಲರೂ ಎಲ್ಲಿ ಇಳಿದಿದ್ದಾರೆ? ಬಸ್ಸಿನಲ್ಲಿ ಇನ್ನೂ ನಾಲ್ಕು ಮಂದಿ ಕೂತಿದ್ದಾರಲ್ಲಾ, ಅವರನ್ನು ಇಳಿಸು.'

'ಅವರು ಮೊದಲೇ ಸೀತಾನದಿಯಿಂದ ಬಂದಿದಾರೆ, ಅವರದ್ದು ಟಿಕೀಟು ಆಗಿದೆ.'

'ಅವರದ್ದು ಟಿಕೇಟು ಆಗಿದೋ ಇಲ್ಲವೋ ಅಂತ ನಿನ್ನ ಹತ್ರ ತನಿಖೆ ಕೇಳಿಲ್ಲ, ಅವರನ್ನು ಇಳಿಸು ಅಂದದ್ದು, ಟಿಕೇಟು ನಾವು ಸಹಾ ಮಾಡಿದ್ದೇವೆ. ಮೊದಲು ಅವರನ್ನು ಇಳಿಸು ಮತ್ತೆ ನಮ್ಮ ಹಿಂದೆ ನಿಲ್ಲಿಸು, ಮೊದಲು ಇಳಿದು ಬಂದ ನಮಗೆ ಮೊದಲು ಸೀಟು, ನಂತರ ಉಳಿದವರಿಗೆ.' ಹರಿಮಾಮ ಜಜ್ ಮೆಂಟು ಕೊಟ್ಟರು.

'ಅದು ಹೇಗೆ ಆಗ್ತದೆ? ತಿಕೀಟು ತೆಕ್ಕೊಂಡು ಬಂದವರನ್ನು ಹೇಗೆ ಇಳಿಸೋದು?'

'ಹೇಗೆ ಇಳಿಸೋದು ಅಂದ್ರೆ? ನಮ್ಮನ್ನು ಇಳಿಸಲಿಲ್ಲವೇ? ಹಾಗೆ ಇಳಿಸು. ಜಲ್ದಿ ಮಾಡು, ನಮಗೆ ತಡವಾಗ್ತದೆ.' ಇವರು ಗದರಿಸಿದರು.

ಕಂಡಕ್ಟರ್ ಸಿಕ್ಕಿಬಿದ್ದ. ನಾಲ್ಕು ಜನರ ಮುಂದೆ ಭರಾಮು ಮೆರೆಸಲು ಹೋಗಿ ಫಜೀತಿಗೆ ಬಿದ್ದ.

'ಕಾಮತೆರೆ ಈರ್ ಒಂತೆ ಫಣ್ಲೆ ಸರ್, ಮೊದಲಿಂದ ಬಂದವರನ್ನು ಇಳಿಸಲು ಆಗ್ತದಾ.? ಕಾಮತರ ಮೊರೆ ಹೊಕ್ಕ.

'ನಿನ್ನ ರಗಳೆ ನೀನೇ ಸರಿಮಾಡು, ನನ್ನನ್ನು ಕರೀಬೇಡ.' ಕಾಮತರು ತಲೆ ಅಡ್ಡ ಹಾಕಿದರು.

'ವೆಂಕಪ್ಪಣ್ಣ, ಒಂತೆ ತಿರ್ತ್ ಜಪ್ಪೊಲಿಯಾ?' ಸೀತಾನದಿಯಿಂದ ಬಂದ ಲೋರಿ ಓನರ್ ವೆಂಕಪ್ಪಸೆಟ್ಟರ ಬಳಿ ಮೆಲ್ಲನೆ ಬೇಡಿಕೊಂಡ.

ಈತ ಮೊದಲಿಂದ ಮಾಡಿದ ಅಥರ್ವಣವನ್ನು ವೆಂಕಪ್ಪ ಸೆಟ್ಟರು ಅಸಮಾಧಾನದಿಂದಲೇ ಗಮನಿಸುತ್ತಿದ್ದರು. ಬೆಳಬೆಳಗ್ಗೆ ಊರ ಮಹನೀಯರನ್ನು ಗೇಲಿ ಮಾಡಹೊರಟಿದ್ದು ಅವರಿಗೆ ಸಹನೆ ಆಗಿರಲಿಲ್ಲ. ವೃಥಾ ಜಗಳ ದೊಡ್ಡದು ಮಾಡುವುದು ಏಕೆಂದು ಸುಮ್ಮನಿದ್ದರು. ಇವನ ಹಾರಾಟ ಇವನಿಗೇ ಉಲ್ಟಾ ಹೊಡೆದದ್ದು ಕಂಡು ಅವರಿಗೆ ಮಜಾ ಏನಿಸಿತು. ಸ್ವಲ್ಪ ಸತಾಯಿಸೋಣ ಎನಿಸಿತು.

'ಅಲ್ಲ ಮಾರಾಯಾ! ನೀನು ಹೇಳಿದ ಹಾಗೆ ಬಸ್ಸು ಹತ್ತಲು ಇಳಿಯಲು ಇದೇನು ಯಕ್ಷಗಾನವಾ? ಟಿಕೇಟು ತೆಕ್ಕೊಂಡು ಬಸ್ಸಿನಲ್ಲಿ ಕೂತಿದ್ದೇನೆ. ನಾನು ಇನ್ನು ಇಳಿಯೂದು ಉಡುಪಿಯಲ್ಲೇ. ಜಾಸ್ತಿ ಇಂಗ್ಲೀಷು ಬೇಡ ನಿಂದು.' ಝಾಡಿಸಿ ಬಿಟ್ಟರು. ಬಾಕಿ ಉಳಿದವರೂ ಇವರನ್ನು ಅನುಮೋದಿಸಿದರು. ಕಂಡಕ್ಟರ್ ತೆಪ್ಪಗಾದ. ಒಂದೊಂದು ಸೀಟಿನಲ್ಲಿ ಒಬ್ಬೊಬ್ಬರಂತೆ ನಾಲ್ವರು ಬಸ್ಸಿನಲ್ಲಿದ್ದರು. ಅವರಲ್ಲಿಬ್ಬರು ಆಢ್ಯರು ಉಳಿದವರು ಸಾಗುವಳಿ ಕೆಲಸದವರು. ಈತ ಮೆಲ್ಲಗೆ ಅವರ ಬಳಿ ಕೆಳಗೆ ಇಳಿಯುವರೆ ವಿನಂತಿಸಿದ. ಅವನ ಪ್ರೆಡಿಕಾಮೆಂಟ್-ಫಜೀತಿ-ಅದೂ ತಾನಾಗಿಯೇ ಮೈಮೇಲೆ ಎಳಕೊಂಡದ್ದು ಕಂಡು ಅವರೂ ತಿರುಗಿ ಬಿದ್ದರು.

'ಎಂತದು ಮ್ಹಾರಾಯರೇ ನಿಮ್ಮದು! ಇಳಿ ಅಂದ ಕೂಡ್ಲೆ ಇಳಿಯೂದಾ? ಆಗಿನಿಂದ ನೋಡ್ತಾ ಇದ್ದೇವೆ. ಪಾಪ! ಮದುವೆಗೆ ಹೋಗಬೇಕು ಅಂತ ಅವರೆಲ್ಲ ಅಷ್ಟು ಸಂಭ್ರಮ ಮಾಡಿ ಬಂದರೆ ನೀವು ಶಿಪಾಯಿಗಿರಿ ಮಾಡೂದಾ! ನಿಮ್ಮ ನಾಟಕ ಇವತ್ತು ನೋಡೂದಲ್ಲ ನಾವು! ಇಳಿಲಿಕ್ಕಾಗೂದಿಲ್ಲ.' ಅವರಲ್ಲೊಬ್ಬ ಹಿಂದೆ ಇದೇ ಕಂಡಕ್ಟರಿಂದ ಅವಮಾನಿಸಲ್ಪಟ್ಟವ ಜಬರಿಸಿಬಿಟ್ಟ.

'ನೀನೀಗ ಬಸ್ಸಿಗೆ ರೈಟ್ ಕೊಡ್ತೀಯೋ ಅಥವಾ ವಿನಾಕಾರಣ ಪ್ರಯಾಣಿಕರಿಗೆ ತೊಂದರೆ ಕೊಟ್ಟು ಟ್ರಿಪ್ಪನ್ನು ಸಮಯಕ್ಕೆ ಸರಿಯಾಗಿ ತೆಕ್ಕೊಂಡು ಹೋಗಿಲ್ಲ ಅಂತ ಹೆಡ್ಡಾಫೀಸಿಗೆ ಕಾರ್ಡು ಹಾಕಲೋ?' ಕಾಮತರು ಗದರಿಸಿದರು.

'ಅಲ್ಲ, ಅವರು ಬಸ್ಸು ಹತ್ತಲು ಒಪ್ತಾ ಇಲ್ಲ ಸರ್' ಕಾಮತೆರೆ ಆಗಿದ್ದವರು ಸರ್ ಆದರು. ಅಷ್ಟೊತ್ತಿಗೆ ಬೆಳಗಿನ ಫಸ್ಟ್ ಬಸ್ಸಿನಲ್ಲಿ ಏನೋ ಚೌಕಾಶಿ ಉಂಟಾಗಿದೆ ಎಂದು ಕುತೂಹಲಗೊಂಡು ಅವರು ಇವರು ಎಂದು ಊರಿನ ಸಾಕಷ್ಟು ಮಂದಿ ಅಲ್ಲಿ ಜಮಾ ಆಗಿದ್ದರು. ಹರಿಮಾಮನವರ ಗಡಸು ಮುಖ ನೋಡಿ ಗುಸುಗುಸು ಜಾಸ್ತಿಯಾಯಿತು. ಬಾಯಿಗೊಂದರಂತೆ ಜನರ ಟಿಪ್ಪಣಿ ಸುರುವಾದವು. ಪರಿಸ್ಥಿತಿ ತನ್ನ ವಿರುದ್ಧ ತಿರುಗಿದ್ದನ್ನು ಮನಗಂಡು ಇವನು ಬಹಳವೇ ಮೆದುವಾದ. 'ನೀವು ಸ್ವಲ್ಪ ಹರಿಯಪ್ಪ ನವರನ್ನು ಕೇಳಿ ನೋಡಿ ಸರ್.'

'ನಾನೆಂತ ಕೇಳುವುದು? ನೀನು ದೊಡ್ಡ ಮನುಷ್ಯ! ಭಾರೀ ಜವಾಬ್ದಾರಿ ಇದ್ದಂವ, ನೀನೇ ಏನಂತ ನೋಡು, ನನ್ನನ್ನು ಕೇಳಬೇಡ.' ಕಾಮತರು ಅಲ್ಲಿಂದ ಎದ್ದು ಆಫೀಸುರೂಮು ಸೇರಿಕೊಂಡರು. ಬೆಳಬೆಳಗ್ಗೆ ತನ್ನ ಆರ್ಡರು ಕೇಳದೇ  ಎದುರು    ಮಾತಾಡಿದವನ  ಮೇಲಿನ ಅವರ ಸಿಟ್ಟು ಇನ್ನೂ ಇಳಿದಿರಲಿಲ್ಲ.

ಇವನು ಗೊಂದಲದಲ್ಲಿ ಬಿದ್ದ. ಹರಿಮಾಮನವರತ್ತ ಕಣ್ಣು ಹಾಯಿಸಿದರೆ ಅವರು ಬೇರೆಡೆ ಮುಖಮಾಡಿದರು. ಹತ್ತು ದೀರ್ಘ ನಿಮಿಷಗಳು ಸತ್ತವು. ಯಾರೂ ಮಾತಾಡಲಿಲ್ಲ. ಎಲ್ಲರಲ್ಲೂ ಕಾತರ, ಹವಾಮಾನದಲ್ಲಿ ಒಂದು ರೀತಿಯ ಟೆನ್ಷನ್ ಹಬ್ಬಿತು. ಮುಖ ಉರಿಸಿಕೊಂಡ ಹರಿಮಾಮನವರು, ಮೂತಿ ಕಪ್ಪು ಮಾಡಿಕೊಂಡು ಅವನತನಾಗಿ ನಿಂತ ಕಂಡಕ್ಟರ್, ಎಲ್ಲೋ ನೋಡುತ್ತಾ ನಿಂತಿದ್ದ ಡ್ರೈವರ್, ಸಿಟ್ಟಿನಲ್ಲಿದ್ದ ಕಾಮತರು, ಮುಂದೇನಾಗುವುದೋ ಎಂಬ ಕಾತರದಲ್ಲಿದ್ದ ಊರಮಂದಿ... ಸಿಚ್ಯುವೇಷನ್ ಕಲ್ಪಿಸಿಕೊಳ್ಳಿ.

ಮತ್ತೆ ಹತ್ತು ನಿಮಿಷಗಳು ಕಳೆದವು. ಸಸ್ಪೆನ್ಸ್ ಟೆನ್ಷನ್ ಜೋರಾದವು. ಟೈಮಿಗೆ ಬೆಳಗ್ಗಿನ ಚಾ ಕುಡಿಯಲೆಂದು ಪ್ರಕಾಶ ಹೊಟೆಲಿಗೆ ಹೊರಟ ನಮ್ಮ ಚಿಕ್ಕಪ್ಪ ಅಲ್ಲಿ ಪ್ರತ್ಯಕ್ಷರಾದರು. ಒಂಥರಾ 'ಬ್ರೇಕಿಂಗ್ ಐಸ್ ಮೊಮೆಂಟ್.'

'ವಿಟ್ಲಯ್ಯ ವಿಟ್ಲಯ್ಯ ನನ್ನನ್ನು ಬಚಾವು ಮಾಡಿ ಅಯ್ಯ, ಬೆಳಗಾಮುಂಚೆ ಎಂತದೋ ಮಣ್ಣು ತಿನ್ನುವ ಕೆಲಸ ಮಾಡಿದೆ. ನನ್ನ ಬಿಡುಗಡೆ ಮಾಡಿ ಅಯ್ಯ...!' ಕಂಡಕ್ಟರ್ ವಸ್ತುಶಃ ಅಳತೊಡಗಿದ. ನಡೆದ ವಿಷಯ ಚಿಕ್ಕಪ್ಪನವರಿಗೆ ಮನವರಿಕೆ ಆಯಿತು. ಕಂಡಕ್ಟರ್ ಮೇಲೆ ಸಿಟ್ಟೂ ಬಂತು. ಆದರೆ ಇನ್ನೂ ಪ್ರಹಸನ ಮುಂದುವರೆದರೆ ಮದುವೆಗೆ ಹೋಗಲು ತಡವಾಗುತ್ತದೆ.

'ನೋಡು ಮಹರಾಯ, ಆತನ ಆಮ್ ಸಾಣಿ ಪೂರಾ ಇಳಿದಿದೆ.  ಪಾಪ ಅಳತಾ ಇದ್ದಾನೆ. ಇರಲಿ ಮಾಫ್ ಮಾಡು, ದೊಡ್ಡ ಮನಸ್ಮಾಡು. ಹೌದನಾ ಬಾ ಇಲ್ಲಿ, ಹರಿಮಾಮನವರ ಬಳಿ ಮಾಫಿ ಕೇಳು, ಕೂಡಲೇ.' ಚಿಕ್ಕಪ್ಪ ಆಡ್ರು ಮಾಡಿದ್ದೇ ತಡ ಇವನು ಬಂದು ಮೋರೆ ಕೆಳಗೆ ಮಾಡಿ ನಿಂತ. ವೇಳೆಗೆ ಹರಿಮಾಮನವರೂ ತಣ್ಣಗಾಗಿದ್ದರು. ಇನ್ನೂ ಇನ್ನೂ ಹಟ ಸೆಡೆತ ಸಾಧಿಸುತ್ತ ಹೋದರೆ ದಿಬ್ಬಣದ, ಮದುವೆಯ ಮತ್ತು ಇತರ ಶುಭ ಕಾರ್ಯಗಳಿಗೆ ಸಮಸ್ಯೆಯಾಗುತ್ತದೆ.

'ಸಾಹುಕಾರ್ರೇ ಬೆಳಗ್ಗೆ ಎಂತದೋ ಮಂಡೆ ಹಾಳಾಗಿ ಮಣ್ಣು ತಿನ್ನುವ ಕೆಲಸ ಮಾಡಿದೆ. ನೀವು ತಪ್ಪು ತಿಳಕೊಳ್ಳಬಾರದು. ನಾನು ಮಾಡಿದ್ದು ತೀರಾ ತಪ್ಪಾಯಿತು, ದಯವಿಟ್ಟು ಬಸ್ಸು ಹೋಗಲು ಪರ್ಮೀಷನ್ ಕೊಡಬೇಕು, ನನ್ನನ್ನು ಮಾಫ್ ಮಾಡಬೇಕು. ಇನ್ನು ಮುಂದೆ ಹೀಗೆಲ್ಲ ಆಗುದಿಲ್ಲ.' ಇಷ್ಟು ಹೇಳಬೇಕಾದರೆ ಅವನಿಗೆ ಅಳುವೇ ಬಂತು.

'ಸರಿ, ಹಾಗಾದ್ರೆ ರೈಟ್ ಅಂತ ಹೇಳು. ಹ್ಞೂ ಸಕ್ಕಡ ಬಸ್ಸಾರಿ ಚಡಾರೆ, ವ್ಹೇಳು ಜಾಲ್ಲೋ. ನೀನು ಬಾ ಮಾರಾಯ, ಎರಡು ಸ್ಪೆಷಲ್ ಟೀ ಕುಡಿದು ಖುಷಿಯಿಂದ ಹೊರಡುವ. ಶುಭಕಾರ್ಯಕ್ಕೆ ಹೊರಟಿದ್ದೇವೆ, ಮನಸ್ಸು ಸಂತೋಷವಾಗಿರಬೇಕು. ಯೋರೇ ವಿಟ್ಲಾ.' ಹರಿಮಾಮ ವಾತಾವರಣವನ್ನು ತಿಳಿಗೊಳಿಸಿದರು. ಎಲ್ಲರೂ - ಹರಿಯಪ್ಪಯ್ಯ, ವಿಟ್ಲಯ್ಯ, ಕಾಮತರು, ಡ್ರೈವರ್ ಮತ್ತು ಕಂಡಕ್ಟರ್ - ಬೆಚ್ಚ ಬೆಚ್ಚ ಚಾ ಕುಡಿದು ದಿಬ್ಬಣ ಬಸ್ಸಿಗೆ ರೈಟ್ ಅಂದರು.

ಎಪಿಸೋಡು ಸುಮಾರು ಐವತ್ತು-ಐವತ್ತೈದು ವರ್ಷಗಳ ಹಿಂದೆ ನಡೆದದ್ದು. ಈಗಿನ ಕಾಲಮಾನದ, ಮನಸ್ಥಿತಿಯ ಪ್ರಕಾರ ಇದರಲ್ಲಿ ಅಂತದ್ದೇನೂ ದೊಡ್ಡಸ್ತಿಕೆ ಅಥವಾ ವಿಶೇಷ ಇಲ್ಲ. ಇಂತದ್ದು ದಿನಕ್ಕೆ ಹತ್ತು ಹಲವು ನಡೀತವೆ. ಆದರೆ ಘಟನೆ ನಡೆದ ಸಮಯದಲ್ಲಿ ಊರಿನ ಪ್ರತಿಯೊಂದು ಸಂಸ್ಥೆ ಯಾ ವ್ಯಕ್ತಿತ್ವ ತನ್ನಲ್ಲಿ ತಾನು ವಿಶಿಷ್ಠ ಗೌರವ ಸ್ಥಾನಮಾನವನ್ನು ಹೊಂದಿತ್ತು. ಜನರು ಅವುಗಳ ಮನ್ನಣೆ ಮಾಡುತ್ತಿದ್ದರು. ಆತ ಬಸ್ ಕಂಡಕ್ಟರ್ ಇರಬಹುದು, ಆತನ ಕಂಪನಿಯ ದೆಸೆಯಿಂದ ಅವನಿಗೂ ಒಂದು ಸ್ಪೇಟಸ್ ಇರುತ್ತಿತ್ತು. ತಾನು ಸೇವೆ ಸಲ್ಲಿಸುವ ಕಂಪನಿಗೆ ಮತ್ತು ಸಮಾಜಕ್ಕೆ ನಿಷ್ಠೆಯಿಂದಿರುವ ಸಿಬಂದಿ ವರ್ಗವೂ ಇರುತ್ತಿದ್ದರು. ಅಂತವರ ಪೊಜಿಷನ್ ಯಾವುದೇ ಇರಲಿ, ಜನರು ಅವರಿಗೆ ಪ್ರೀತಿ ಅಭಿಮಾನ ತೋರುತ್ತಿದ್ದ ಕಾಲವಾಗಿತ್ತದು. ಕಾರಣ ಇಂತಹ ಘಟನೆಗಳು ನೆನಪಲ್ಲಿ ಅಚ್ಚೊತ್ತಿರುತ್ತವೆ.

ಎಪಿಸೋಡು: ಅರುವತ್ತರ ದಶಕದ ಒಂದು ದಿನ ಬೆಳಗ್ಗೆ.....

ಪ್ರತಿಕ್ರಿಯೆಗಳು:

Sujaya Nayak:-ಕೇಶವಣ್ಣ ಒಮ್ಮೆಲೆ ಬಾಲ್ಯಕ್ಕೆ ಹೋದೆ .ಅಪ್ಪನ ನೆನಪು ತುಂಬ ಆಯ್ತು .ನಿಮ್ಮ ಶೈಲಿ ಹಳೆಯ ದಿನಗಳನ್ನು nenapisu ವಂತಾಯ್ತು.ನೀವು ನಮ್ಮಲ್ಲಿಗೆ ಬಂದು ರಂಗು ರಂಗಾಗಿ ವಿಷಯ ಹೇಳುವಾಗ ಅಪ್ಪ LIC ಕೆಲಸ ಬಿಟ್ಟು ನಿಮ್ಮನ್ನು ನೋಡುತ್ತಿದ್ದರು. ವಿಷಯ ಇಂಟರೆಸ್ಟಿಂಗ್ ಘಟ್ಟಕ್ಕೆ ಬಂದಾಗ ನೀವು ತಾಂಬೂಲ ಉಗಿಯುವ ನೆಪ ಮಾಡಿ ಹೊರಗೆ ಹೋಗುತ್ತಿದ್ದೀರಿ ..ಅಪ್ಪನಿಗೋ ಉಭಯ ಸಂಕಟ..ಕೆಲಸ ಮುಗಿಸೋಣ ಎಂದರೆ ನಿಮ್ಮ ಕಥೆಯ ಕುತೂಹಲ .. ನೀವೋ ಮುಗಿಸಲು ತಯಾರಿಲ್ಲ...ನಾವೆಲ್ಲ ಒಳಗೊಳಗೇ ನಗುತ್ತಿದ್ದೆವು

ಉತ್ತರ:- ಪ್ರಬಂಧದ ಸೂಪರ್ ಪ್ರತಿಕ್ರಿಯೆ, ನಿಮ್ಮ ತಂದೆಯವರೊಡನೆ ಸಲ್ಲಾಪ ನಡೆಸೂದೇ ಒಂದು ಖುಷಿಯಾಗಿತ್ತು, ಅವರ ಮಾತುಗಳನ್ನು ಆಲಿಸುವುದೇ ಒಂದು ಸುಖ! … ಅವರ ಆಫ್ಟರ್ ಸೇಲ್ಸ್ ಸರ್ವಿಸ್' ಅನೇಕ ಜೀವ ವಿಮಾ ಏಜಂಟರಿಗೆ ಮಾದರಿಯಾಗಿತ್ತು. ಅವರೊಟ್ಟಿಗೆ ಕಳೆದ ಅನೇಕ ರಸಮಯ ಕ್ಷಣಗಳ ರಸಮಯ ನೆನಪುಗಳಿವೆ....

Bk Bhat:-ಬಾಲ್ಯದ, ಹಳ್ಳಿಯ ಮತ್ತು ಪರಿಸರದ ಉತ್ತಮ ವಿಶ್ಲೇಷಣೆ. ಅಭಿನಂದನೆಗಳು.

Anita Kamath:-Takes us to our childhood very beautifully. Narration is superb 👌

ಉತ್ತರ:--Love you. In fact your father-though indirectly-taught me how to interact with people. He used to touch one's heart though it was an insurance sale. I respect him.

Ramesh Bhat Belagodu:-ಎಷ್ಟು ಚೆಂದದ ಬರವಣಿಗೆ! ಇದು ಹೆಬ್ರಿಯ ಕತೆ ಮಾತ್ರವಲ್ಲ. ಅರುತ್ತರ ದಶಕದಲ್ಲಿ ಎಸ್.ಜಿ.ಎಂ.ಟಿ, ಸಿಪಿಸಿ, ಹನುಮಾನ್, ಶಂಕರವಿಠಲ್ ಬಸ್ಸುಗಳು ನಿಲ್ಲುತ್ತಿದ್ದ ಕನ್ನಡ ಜಿಲ್ಲೆಯ ಅದೆಷ್ಟೋ ಹಳ್ಳಿಗಳ ಕತೆ ಆಗಬಲ್ಲದು. ಹರಿಮಾಮನ ಜಾಗದಲ್ಲಿ ಮಧ್ಯಮವರ್ಗದ ಇನ್ನೊಬ್ಬ ಗೌರವಸ್ಥರೂ ಕುಳಿತುಕೊಳ್ಳಬಹುದು. ಕಾಲ ಹಾಗಿತ್ತು. ತೇಹಿನೋ ದಿವಸಾ ಗತಾಃ।।

ಉತ್ತರ:- ಆರ್ಥಿಕವಾಗಿ ಬಹು ಕಷ್ಟದ ಕಾಲವಾಗಿದ್ದರೂ ಪರಸ್ಪರ ಪ್ರೀತಿ, ಪ್ರೇಮ ಸೌಹಾರ್ದಗಳಿಗೆ ಯಾವುದೇ ಕೊರತೆಯಿದ್ದಿರಲಿಲ್ಲ, ಕಪಟ ಕುಟಿಲ ಬುದ್ಧಿಯವರ ನಿಷ್ಪತ್ತಿ ಕಮ್ಮಿಯಿದ್ದಿತ್ತು. ಇಂದು ಸಮಾಜ ಪೂರ್ತಿ ಕೆಟ್ಟು ಹೋಗಿದೆ ಎಂಬ ವ್ಯಾಖ್ಯಾನ ಅಲ್ಲ, ಪರ್ಸಂಟೇಜು ಸ್ವಲ್ಪ ಕಮ್ಮಿ ಆಗಿದೋ ಎಂಬ ಶಂಕೆ ಬರುತ್ತದೆ.

ಐವತ್ತು ಅರುವತ್ತರ ದಶಕಗಳಲ್ಲಿ ಹುಟ್ಟಿದ ನಾವು ಭಾಗ್ಯವಂತರೆನ್ನಬಹುದು. ಸ್ವತಂತ್ರ ದೇಶದಲ್ಲಿ ಜನ್ಮ, ಇಂದಿನವರು ಪ್ರಿಮಿಟಿವ್ ಎನ್ನುವಂತಹ ವಿಷಯಗಳಲ್ಲಿ ಸುಖ ಸಂತಸ ಕಂಡವರು, ಕೆರೆ ಹೊಳೆ ನದಿಗಳಲ್ಲಿ ಮನಸೋ ಡುಬ್ಕಿ ಹೊಡೆದವರು, ಅನೇಕ ಅಭಾವಗಳಿದ್ದರೂ ಮಾನಸಿಕವಾಗಿ ಶ್ರೀಮಂತರಾಗಿದ್ದೆವು. 'ದುಡ್ಡು ಒಂದು ಬಗೆ ಇರಲಿಲ್ಲ ಎಂಬ ವಿಚಾರ ಬಿಟ್ರೆ ಬೇರೆ ಎಲ್ಲ ಗಮ್ಮತ್ತು ಇತ್ತು ನೋಡು' ಎಂದು ನಮ್ಮಮ್ಮ ಆಗಾಗ ಹೇಳುತ್ತಿದ್ದರು.....

ನನ್ನ ಇನ್ನೊಂದು ಪ್ರಬಂಧ 'ಇಂದಿನ ದಿನ ಸುದಿನ' ಸಣ್ಣ ಭಾಗ...

ಎಪ್ಪತ್ತೊಂದನೇ ಇಸವಿಯ ಫೆಬ್ರವರಿಯ ಒಂದು ದಿನ ಪೋಸ್ಟು ತರಲು ಪೋಸ್ಟಾಫೀಸಿಗೆ ಹೋಗಿದ್ದೆ. ದಿನಕ್ಕೆ ಕಮ್ಮಿಯೆಂದರೆ ಎಂಟು-ಹತ್ತು ಪತ್ರಗಳಾದರೂ ನಮ್ಮ ಅಂಗಡಿಯ ಹೆಸರಲ್ಲಿ ಇರುತ್ತಿದ್ದವು-ಕೊಂಚಾಡಿ ಅಪ್ಪಯ್ಯ ಶಾನುಭಾಗ್, ಪಂಚಮಾಲ್ ವಾಸು ಮಾಮ, ರೇಟು ಲಿಸ್ಟು ಇತ್ಯಾದಿ ಇತ್ಯಾದಿ... ಹಾಗಾಗಿ "ವಸರೇ ಪೋಸ್ಟ್ ಹಾಡಿ" ಎಂದು ಚಿಕ್ಕಪ್ಪ ಓಡಿಸುತ್ತಿದ್ದರು. ನಮಗೂ ಸಂಜೀವ ಮಾಮರ ಮನೆಯಲ್ಲಿನ ಅಂಚೆಕಛೇರಿಗೆ ಹೋಗೂದೆಂದರೆ ಭಾರೀ ಖುಷಿ. ಯಾವುದಾದರೂ ಅಪರೂಪದ ಸ್ಟಾಂಪು ಇದ್ದರೆ ಅವುಗಳನ್ನು ತೆಗೆದಿಟ್ಟು ನಮಗೆ ಕೊಡುತ್ತಿದ್ದರು. ಸ್ಟಾಂಪುಗಳ ಆಸೆಯಿಂದಾಗಿ ಹೆಚ್ಚಾಗಿ ಪೋಸ್ಟು ತರಲು ಕೇಶವ ನಾಯಕನೇ ಓಡುತ್ತಿದ್ದ...

ಸಂಜೀವ ಮಾಮರ ಪೋಸ್ಟು ಆಫೀಸಿನ ಕಾರ್ಯವೈಖರಿಯು ನೋಡಲು ಬಲು ಚಂದ. ಸಂಜೀವ ಮಾಮ ಪೋಸ್ಟುಮಾಸ್ಟರು, ಹಸನ್ ಸಾಹೇಬ ಪೋಸ್ಟ್ ಮೇನ್-ಸೆಂಟ್ರಲ್ ಗೋರ್ಮೆಂಟ್ ಎಂಪ್ಲೋಯೀ!- ಮತ್ತು ಡಿ ಡಿ ಮರ್ತಪ್ಪ ಇವರೆಲ್ಲ ಸ್ಟಾಫು.. ಮೇಲ್ ಬಸ್ಸಿನಲ್ಲಿ ಬರುವ ಪೋಸ್ಟ್ ಬೇಗನ್ನು ತಂದು ಸಂಜೀವ ಮಾಮರ ಸಮಕ್ಷಮ ಸೀಲು ಒಡೆದು ವಿಂಗಡಿಸಬೇಕು. ವಿಂಗಡಿಸುವುದು ಹಸನ್ ಸಾಹೇಬನ ಕೆಲಸ. ವಿಂಗಡಿಸಿದ ಪೋಸ್ಟಿನ ಮೇಲೆ ದಿನದ ಸೀಲು ಗುದ್ದುವ ಸ್ಟೈಲೇ ಬೇರೆ, ಅದೇ ಒಂದು ಚಂದ!! ತಾನು ಸೆಂಟ್ರಲ್ ಗೋರ್ಮೆಂಟು ಎಂಪ್ಲೋಯೀ ಎಂಬ ಧಿಮಾಕು ಹಸನ್ ಸಾಹೇಬನದ್ದು. ಸೆಂಟ್ರಲ್ ಗವರ್ನಮೆಂಟ್ ಜಾಬ್ ಒಂದು ದೊಡ್ಡ ಕುಂಬಳಕಾಯಿ ಅಂತ ನಾವು ಮಕ್ಕಳು ನಂಬಿ ಅವನಿಗೆ ಸಣ್ಣಗೆ ಹೆದರಿ ಮರ್ಯಾದೆ ಕೊಡುತ್ತಿದ್ದೆವು. ಅವನು ಸೀಲು ಗುದ್ದುವ ತನ್ಮಯತೆ, ಗತ್ತು ಆಹಾ ಅದರ ಚಂದವೇ ಚಂದ! ಅದರ ಸೌಂಡು ನಮಗೆ ಸಂಗೀತದಂತೆ ಕೇಳುತ್ತಿತ್ತು. ಅದರ ಮುಂದೆ ಆರ್ ಡಿ ಬರ್ಮನ್ನರ ಡ್ರಮ್ ಬೀಟ್ಸ್ ಸಹ ಏನೂ ಅಲ್ಲ, ಅವನು ಸೀಲು ಗುದ್ದುವಾಗ ಪೋಸ್ಟಾಫೀಸಿನಲ್ಲಿ ಲೈಬ್ರೇರಿಯ ಮೌನವಿರುತ್ತಿತ್ತು. ಮಧ್ಯೆ ಮಧ್ಯೆ ಯಾರಾದರೂ ಪೋಕರಿಹುಡುಗರು ಕೀಟಲೆ ಮಾಡಿದರೆ ಅವರನ್ನು ಹೊರಕಳಿಸಲಾಗುತ್ತಿತ್ತು. ಆದ್ದರಿಂದ ನಾವು ಹುಡುಗರು ಆದಷ್ಟು ಶಿಸ್ತನ್ನು ಮೇಂಟೈನ್ ಮಾಡುತ್ತಿದ್ದೆವು. ಸೀಲು ಗುದ್ದಿ ತಯಾರಾದ ಪತ್ರಗಳು ಶಿಸ್ತಾಗಿ ಜೋಡಿಸಲ್ಪಟ್ಟು ಪೋಸ್ಟುಮಾಸ್ಟರ ಟೇಬಲ್ ಮೇಲೆ ಭಕ್ತಿಯಿಂದ ಇಡಲ್ಪಡುತ್ತಿದ್ದವು. ನಾವು ಮೊದಲೇ ನಿರ್ಧರಿಸಿದ, ನಿಗದಿತಗೊಂಡ ಸರತಿ ಕ್ರಮದಲ್ಲಿ ನಿಲ್ಲುತ್ತಿದ್ದೆವು. ಮೊದಲು ಸಿಂಡಿಕೇಟು ಬೇಂಕು, ಸೀ ಬೇಂಕು, ಹೈಸ್ಕೂಲುಗಳಿಗೆ ಪ್ರಾಶಸ್ತ್ಯ. ನಂತರ ಶ್ರೀನಿವಾಸ ಮುಕುಂದ ನಾಯಕ್ ಎಂಡ್ ಬ್ರದರ್, ಪಾಂಡರಂಗ ರಮಣ ನಾಯಕ್, ನರಸಿಂಹ ನಾಗಪ್ಪ ಶೆಣೈ, ಭಟ್ ಬ್ರದರ್ಸ್, ಹರಿದಾಸ ಪೈ....ಹೀಗೆ ರೇಂಕಿಂಗ್ ಇರುತ್ತಿದ್ದವು. ಬಂದ ಪೋಸ್ಟುಗಳ ಬಟವಾಡೆಯೂ ತನ್ನದೇ ಆದ ಗಾಂಭೀರ್ಯದಿಂದ ಆಗುತ್ತಿತ್ತು.

H Narayana Shenoy:-ಓದಿ ತುಂಬಾ ಖುಷಿ ಆಯಿತು.

ದಿವಾಕರ ಎಸ್ ಹೆಬ್ರಿ:-ತುಂಬಾ ಚಂದದ ಬರೆವಣಿಗೆ ಸರ್. ಪ್ರತ್ಯಕ್ಷ ದರ್ಶನದಂತೆ ವಿವರಣೆ. ಸೂಪರ್ ಸರ್

ಕೇಶವ ನಾಯಕ್ ಹೆಬ್ರಿ:- ಧನ್ಯವಾದಗಳು, ಹೆಬ್ರಿಯಲ್ಲಿ ನನ್ನ ಹೃದಯಕ್ಕೆ ಬಹಳ ಹತ್ತಿರವಾದುದು ನಮ್ಮ ಹೈಸ್ಕೂಲು-ಈಗ ಅದು ಪೀ ಯು. ಕಾಲೇಜು. ಖುಷಿ ಏಕೆಂದರೆ ನನ್ನ ಅನುಭವಕ್ಕೆ ಬಂದಂತೆ ಇಲ್ಲಿ ಈಗಲೂ ಗುಣಮಟ್ಟದ ಶಿಕ್ಷಣ ಲಭ್ಯವಿದೆ. ಉತ್ತಮ ಪ್ರಜೆಗಳನ್ನು ದೇಶಕ್ಕೆ ನೀಡುವುದರಲ್ಲಿ ನಿಮ್ಮದು ತುಂಬ ಜವಾಬ್ದಾರಿಯುತ ಕರ್ತವ್ಯ ಆಗಿರುತ್ಯದೆ.

ದಿವಾಕರ ಎಸ್ ಹೆಬ್ರಿ:- ಮತ್ತೊಮ್ಮೆ ಬನ್ನಿ ಸರ್ ಶಾಲೆಗೆ. ತಾವು 4 ವರ್ಷದ ಹಿಂದೆ ನೆಟ್ಟ ಸಸಿಗಳು ಹೆಚ್ಚಿನವು ಎತ್ತರಕ್ಕೆ ಬೆಳೆದಿವೆ

Surendra Shenoy:-ಎಂತಹ ಸೊಗಸಾದ ಬರವಣಿಗೆ! ನಾನಂತೂ ಓದುತ್ತಾಓದುತ್ತಾ ಡ್ರೈವರ್, ಕಂಡಕ್ಟರ್‍ PBV Kamath, ಹರಿ ಮಾಮ್,ವಿಠ್ಠಲ್ ಮಾಮ್, ಹೆಬ್ರಿಯ ಆದಿನದ ಶ್ರoಗಾರಗೊಂಡು ಹೊರಟಿರುವ ಹೆಂಗಸರು, ಗಂಡಸರು, ಹೊರಣ ಬಸ್ಸು ಇತ್ಯಾದಿ ಊಹಿಸುತ್ತಾ 50 ವರ್ಷಗಳ ಹಿಂದೆ ಹೋದೆ..ನಾಯಕ್ ಮಾಮ್, ಹೀಗೆ ಬರೆಯುತ್ತ ಇರಿ.....

Damodar Pai:-ಹರಿಮಾಮಾನ ಜೋರು, ವಿಠ್ಠಲ್ ಮಾಮನ ಪಂಚಾಯಿತಿ, ಇದನ್ನೆಲ್ಲಾ ಕಣ್ಣಿಗೆ ಕಟ್ಟಿದಂತೆ ವರ್ಣಿಸಿದ, ಲೇಖನ ಪುನಃ ಪುನಃ ಓದಿದೆ, ಇದನ್ನೆಲ್ಲಾ ನೋಡಿ ಬೆಳೆದವನು ನಾನು, ಅತ್ಯದ್ಭುತ!

ಕೇಶವ ನಾಯಕ್ ಹೆಬ್ರಿ:-ದಾಮ್ಮು ಖೈಂ ಆಸ್ಸ ತೂಂವ...! ಥ್ಯಾಂಕ್ಸ್ ಫಾರ್ ಕಾಂಪ್ಲಿಮೆಂಟ್ಸ್....

 ಫೇಸ್ ಬುಕ್ ನಲ್ಲಿ ಪ್ರಕಟಿಸಲಾಗಿದ್ದು, ಎಪಿಸೋಡು ನೆನಪಿರಲಿ ಎಂದು ಬ್ಲಾಗ್ ನಲ್ಲಿ ಛಾಪಿಸಲಾಗಿದೆ.