Monday, September 24, 2012

The Issue of Corruption-An Observation

-----೫-----
                       
            "ಯಾಜಿಯವರೆ ಇಲ್ಲಿ ರೇಷನ್ ಕಾರ್ಡ್ ಮಾಡಿಸುನ ಆಫೀಸು ಎಲ್ಲುಂಟು?" ಕೇಳಿದೆ.ದಿಲ್ಲಿಗೆ ವರ್ಗವಾಗಿ ಸ್ವಲ್ಪ ದಿನಗಳಾಗಿದ್ದವು.s
            "ನೀವೇಕೆ ಕಷ್ಟ ಪಡ್ತೀರಿ,ನಮ್ಮ ಭಗವಾನ್ ಬರ್ತಾನೆ ಅವನ ಹತ್ತಿರ ಹೇಳುವ,ಮಾಡಿಸ್ಕೊಡ್ತಾನೆ.ಒಂದೈವತ್ತು ರುಪಾಯಿ ಬಿಸಾಡಿದ್ರೆ ಸೈ." ಯಾಜಿ ನಿರ್ಲಕ್ಷ್ಯದಿಂದ ಹೇಳಿದರು.ನನಗೆ ಸ್ವಲ್ಪ ಬೇಸರವಾಯ್ತು.
            ನೋಡೋಣ ಎಂದು ಮರುದಿನ ರೇಷನ್ ಆಫೀಸು ಹುಡುಕಿಕೊಂಡು ಹೋದೆ.ಅವರಿವರನ್ನು ಕೇಳಿಕೊಂಡು ತಲುಪಿದಾಗ ಸುಮಾರು ಹತ್ತೂವರೆ ಆಗಿತ್ತು..
            "ಜಯ್ ರಾಮ್ ಜೀ ಕಿ,ನಾನು ಕರ್ನಾಟಕದಿಂದ ಬರುತ್ತಿದ್ದೇನೆ.ಸಿಂಡಿಕೇಟ್ ಬೇಂಕಿನಲ್ಲಿ ವರ್ಗಾವಣೆ ಹೊಂದಿ ಇದೇ ಪ್ರಸಾದ್ ನಗರದಲ್ಲಿ ವಾಸ್ತವ್ಯ ಮಾಡಿದ್ದೇನೆ.ನನ್ನ ರೇಷನ್ ಕಾರ್ಡ್ ಆಗಬೇಕಿತ್ತು."ಎಂದೆ.ಸಂಭಾಷಣೆ ಹಿಂದಿಯಲ್ಲೇ ನಡೆಸಿದೆ.    
            "ಉಧರ್ ಖಿಡಿಕಿ ಸೆ ಅರ್ಜೀ ಲೇಕೆ ಭರ್ಕೆ ದೀಜಿಯೆ" ಎಂದು ಅಲ್ಲಿನ ಅಧಿಕಾರಿ ತಿಳಿಸಿದರು.
            ಐವತ್ತು ಪೈಸೆ ಅರ್ಜಿ ಪಡಕೊಂಡು ಭರ್ತಿ ಮಾಡಿ ಅಗತ್ಯವಿರುವ ಎಲ್ಲ ಕಾಗದ,ಕಡತಗಳನ್ನು ಲಗತ್ತಿಸಿ ಅವರಿಗೆ ಕೊಟ್ಟೆ,                  
            "ಏಕ್ ಹಫ್ತೆ ಕೆ ಬಾದ್ ಆಯಿಯೇಗಾ"
            "ಏಕ್ ಹಫ್ತಾ ಕ್ಯೊಂ?" ಕೇಳಿದೆ.  
            "ಐಸಾ ಹೈ,ಆಜ್ ಕಲ್ ಗಲತ್ ತರೀಕೆ ಸೆ ಕಾರ್ಡ್ ಬನಾನೆವಾಲೆ ಜ್ಯಾದಾ ಹೋಗಯೇ ಹೈ,ಇಸ್ ಲಿಯೆ ಜಾಂಚ್ ಪಡ್ತಾಳ್ ಕರ್ ನಾ ಪಡತಾ ಹೈ"
            "ನಮ್ಮ ಮನೆಯವರಿಗೆ ಹಿಂದಿಯ ತಿಳುವಳಿಕೆ ಕಮ್ಮಿ.ಕೊಂಚ ಸುಧಾರಣೆ ಮಾಡಬೇಕು" ಎಂದೆ.
            "ದೇಖತೇ ಹೈ,ಅಬ್ ಆಪ್ ಚಲೋ,ಹಫ್ತೆ ಬಾದ್ ಆವೋ" ಉತ್ತರ ಬಂತು,ನಾನು ಮರಳಿದೆ.ಮನೆಯಲ್ಲಿ ಈ ಬಗ್ಗೆ ಸೂಚನೆನೀಡಿದೆ.ವಾರ ಕಳೆಯಿತು. ಪುನಃ ಕಚೇರಿಗೆ ಹೋದೆ.ರೇಷನ್ ಕಾರ್ಡ್ ತೆಗೆದು ಕೈಯ್ಯಲ್ಲಿ ಕೊಟ್ಟರು.
            "ಮತ್ತೆ ಮನೆಗೆ ಯಾರೂ ಬರಲಿಲ್ಲ?"ವಿಚಾರಿಸಿದೆ.
            "ದೇಖೋ ಭಾಯ್ ಸಾಬ್ ನೀವು ಬೇಂಕಿನಲ್ಲಿ ಆಫೀಸರ್ ಆಗಿದ್ದೀರಿ.ಸಂಬಂಧಪಟ್ಟ ಎಲ್ಲಾ ಕಾಗದಪತ್ರಗಳನ್ನು ನೀಡಿದ್ದೀರಿ,ವಿಳಾಸದ ಮಾಹಿತಿಯನ್ನು ಕೊಟ್ಟಿದ್ದೀರಿ,ಹಾಗಿರುವಾಗ ತಪಾಸಣೆಯ ಜರೂರಿ ಏನಿದೆ? ಮೇಲಾಗಿ ನೀವು ಕರ್ನಾಟಕದಿಂದ ಬಂದವರು ಇಷ್ಟು ಚೆನ್ನಾಗಿ ಹಿಂದಿ ಮಾತಾಡುತ್ತೀರಿ!ಬಹಳ ಆಶ್ಚರ್ಯ!ನಿಮಗೆ ರೇಷನ್ ಕಾರ್ಡ್ ಕೊಡದೇ ಮತ್ತೆ ಯಾರಿಗೆ ಕೊಡಲಿ?" ಎಂದರು ಆಫೀಸರ್.
            ಯಾಜಿಯವರಿಗೆ ಬಹಳ ಆಶ್ಚರ್ಯ ಆಯಿತು."ಎಷ್ಟು ಕೊಟ್ಟಿರಿ?" ಕೇಳಿದರು.
            "ಐವತ್ತು ಪೈಸೆ ಕೊಟ್ಟೆ,ಅದೂ ಅರ್ಜೀ ಫಾರ್ಮಿನ ಬೆಲೆ" ಎಂದೆ.ಅವರಿಗೆ ನಂಬಲು ತುಂಬ ಕಷ್ಟವಾಯಿತು.
            ಸುಮಾರು ನಾಲ್ಕು ವರ್ಷಗಳ ಬಳಿಕ ಜನಕ್‌ಪುರಿ ಎಂಬಲ್ಲಿ ಮನೆ ಬದಲಾಯಿಸಿದಾಗ ಕೂಡಾ ರೇಷನ್ ಕಾರ್ಡ್ ಬದಲಾಯಿಸಲು ಯಾವುದೇ ಕಷ್ಟ ಆಗಲಿಲ್ಲ. ಆದಷ್ಟು ಮಟ್ಟಿಗೆ ಕಾಗದಪತ್ರಗಳನ್ನು ಸರಿಯಾಗಿ ಜೋಡಿಸಿಕೊಂಡು ಸರಿಯದ ರೀತಿಯಲ್ಲಿ ವಿನಯಪೂರ್ವಕವಾಗಿ ಸಂಪರ್ಕಿಸಿದರೆ ಯಾವುದೇ ಕಚೇರಿಯಲ್ಲಿ ಸಾಮಾನ್ಯವಾಗಿ ನಮ್ಮ ಕೆಲಸ ಆಗಿಯೆ ಆಗುತ್ತದೆ.ಇದಕ್ಕೆ ದಿಲ್ಲಿ,ಬೆಂಗಳೂರು,ಹುಬ್ಬಳ್ಳಿ ನಗರಗಳಲ್ಲಿ ನನಗಾದ ಒಳ್ಳೆಯ ಅನುಭವಗಳೇ ಸಾಕ್ಷಿ. ನಾವೂ ಸಹಾ ನಮ್ಮ ಸಂಪರ್ಕಕ್ಕೆ ಬಂದ,ಬರುವ ಗ್ರಾಹಕ,ವ್ಯಕ್ತಿಗಳೊಂದಿಗೆ ಸಹಾ ಅನುನಯದಿಂದ ವ್ಯವಹರಿಸಿದರೆ ನಮಗೆ ಹೊಸ ಗೆಳೆಯರು ಲಭ್ಯರಾಗುವು ದಷ್ಟೇ ಅಲ್ಲ ಮುಂದೊಂದು ದಿನ ಅನುಕೂಲವೇ ಆಗಬಹುದು.ಇದು ನನ್ನ ಅನುಭವ.
            ದೇಶದಲ್ಲೇ ಅತಿ ಬುದ್ಧಿವಂತರಿರುವ ನಾಡಿನವರು ಎಂಬ ದೊಡ್ಡಸ್ತಿಕೆ ಉಡುಪಿ ಜಿಲ್ಲೆಯವರಿಗೆ ಉಂಟು.ನಾವು ಬುದ್ದಿವಂತರೆಂದು ಇತರರು ಹೇಳುವುದು ಒಂದು ಮಾತು.ನಾವು ಬುದ್ಧಿವಂತರೆಂದು ನಾವೇ ಹೇಳಿಕೊಂಡು ತಿರುಗುವುದು ಇನ್ನೊಂದು ಸಂಗತಿ.ಉಡುಪಿ ಜಿಲ್ಲೆಯವರು ಸಾಮಾನ್ಯವಾಗಿ ಎರಡನೇ ಜಾತಿ.ನನಗೆ ನಮ್ಮ ಜಿಲ್ಲೆಯಲ್ಲೆ ಒಂದೆರಡು ಬಾರಿ ಅನನುಕೂಲ,ಮುಜುಗರದ ಅನುಭವ ಆಯಿತು....
            ದಿಲ್ಲಿಯಿಂದ ಕುಂದಾಪುರಕ್ಕೆ (ಕೊಲ್ಲೂರಿಗೆ) ವರ್ಗವಾಗಿ ಬಂದೆ.ಯಥಾಪ್ರಕಾರ ರೇಷನ್ ಕಾರ್ಡಿಗೆ ಅರ್ಜಿ ಕೊಟ್ಟೆ.ಮನುಷ್ಯ ಮಾತ್ರದವನಿಗೆ ಅರ್ಥ ಆಗದ ಒಂದು ಕಾನೂನಿನ ಕಡ್ಡಿ ಅಡ್ಡ ಇಟ್ಟು ರೇಷನ್ ಕಾರ್ಡ್ ವಿತರಿಸಲು ಪಿರಿಪಿರಿ ಸುರುವಾಯ್ತು.ಕಡೆಗೆ ತಹಸೀಲ್ದಾರರ ಬಳಿ ಹೋದೆ.
            "ಇದೇನು ನಾಲ್ಕು  ತಿಂಗಳ ಹಿಂದಿನ ತಾರೀಕಿದೆಯಲ್ಲಾ!" ತಹಸೀಲ್ದಾರರು ವಿಚಾರಿಸಿದರು.
            "ಹೌದು ಸ್ವಾಮಿ ನಾಲ್ಕು ತಿಂಗಳ ಹಿಂದೆ ಅರ್ಜಿ ಕೊಟ್ಟಿದ್ದೆ" ಚುಟುಕಾಗಿ ಉತ್ತರಿಸಿದೆ.
            ಒಂದು ಕ್ಷಣ ನನ್ನನ್ನೇ ನೋಡಿದರು.ಆತ ತುಂಬ ಒಳ್ಳೆಯ ಹಾಗೂ ನೇರ ಸ್ವಭಾವದ ಅಧಿಕಾರಿಯೆಂದು ಕೇಳಿದ್ದೆ."ನೋಡಿ ಇವರೆ,ಈಗ ನೀವು ತಾರೀಕು ಚೇಂಜ್ ಮಾಡಿ ಕೊಡಿ.ನಿಮಗೆಒಂದು ವಾರ ಅಥವಾ ಹತ್ತು ದಿನಗಳಲ್ಲಿ ಕಾರ್ಡ್ ಕೊಡಿಸುತ್ತೇನೆ,ಅಲ್ಲ ನೀವು ಮೊದಲೇ ನೇರವಾಗಿ ನನ್ನ ಬಳಿ ಬಂದಿದ್ದರೆ ಇಷ್ಟರೊಳಗೆ ನಿಮ್ಮ ಕೆಲಸ ಆಗುತ್ತಿತ್ತು"ಎಂದರು.
            "ನೋಡಿ ಸರ್ ನಮ್ಮ ಬೇಂಕಿನಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಅಂದರೆ ಎಕೌಂಟ್ ತೆರೆಯಲು,ಹಣ ಡ್ರಾ ಮಾಡಲು ಇಂತದೆಕ್ಕೆಲ್ಲಾ ಯಾರೂ ಸೀದಾ ಮೆನೆಜರರ ಬಳಿ ಹೋಗುವುದಿಲ್ಲ,ಅದಕ್ಕೆ ಸಂಬಂಧ ಪಟ್ಟ ಡಿಪಾರ್ಟ್‌ಮೆಂಟುಗಳಿಗೆ ಹೋಗ್ತಾರೆ.ಇಲ್ಲಿಯೂ ಹಾಗೇ ಇರಬಹುದು ಎಂದು ನಿಮ್ಮ ಗುಮಾಸ್ತರ ಬಳಿ ಹೋದೆ.ಅದೇ ಸಮಸ್ಯೆ ಆಯ್ತು" ತಹಸೀಲ್ದಾರರು ನಕ್ಕರು.ನನ್ನ ಕಾರ್ಡ್ ಅವರ ಮಾತಿನಂತೆ ಕೂಡಲೇ ಸಿಕ್ಕಿತು.ಆದರೆ ಗೊತ್ತು ಗುರುತಿಲ್ಲದ ಇತರ ನಗರಗಳಲ್ಲಿ ಆರಾಮವಾಗಿ ಆದ ಕೆಲಸಕ್ಕೆ ಇಲ್ಲಿ ಪರದಾಡಬೇಕಾಯ್ತಲ್ಲ ಎಂಬ ಕೊರಗು ಉಳಿಯಿತು.
            ಸರಕಾರೀ ಅಧಿಕಾರಿಗಳೆಂದರೆ ಒಂದು ರೀತಿಯ ತಿರಸ್ಕಾರ ಭಾವನೆ ನಮ್ಮಲ್ಲಿದೆ.ಸರಕಾರೀ ಕೆಲಸಕಾರ್ಯಗಳೆಂದರೆ ಹಣ ಇಲ್ಲದೆ ಆಗುವುದೇ ಇಲ್ಲ ಎಂಬ ಪರಿಸ್ಥಿತಿಯನ್ನು ನಾವು ಜನರೇ ಹುಟ್ಟಿಸಿ ಬೆಳೆಸಿಕೊಂಡು ಬಂದದ್ದು, ಈಗ ಪ್ರಸಕ್ತ ಅಧಿಕಾರಿಗಳನ್ನು ಬೈಯ್ಯುವುದೇ ಒಂದು ಚಾಳಿಯಾಗಿ ಬಿಟ್ಟಿದೆ.ಎಲ್ಲೇ ಹೋಗಲಿ,ಯಾವುದೇ ಮದುವೆ,ಮುಂಜಿ ಸಭೆಗಳಿಗೆ ಹಾಜರಾಗಿ ಒಂದೇ ರಾಜಕೀಯ ಇಲ್ಲವೇ ಅಧಿಕಾರಿ ವರ್ಗದವರನ್ನು ಹೀಯಾಳಿಸುವುದು ಫ್ಯಾಷನ್ ಆಗಿ ಹೋಗಿದೆ.ತಮ್ಮದೆಂದು ಒಂದು ಹಕ್ಕಿದೆ,ಅದೇ ರೀತಿಯಲ್ಲಿ ಬಾಧ್ಯತೆ ಸಹಾ ಇದೆ ಎಂಬುದನ್ನು ಜನರು ಮರೆಯುತ್ತಾರೆ.ಸಮಸ್ಯೆ ಏನಾದರೂ ಬಂದರೆ ಮಂತ್ರಿ, ಮುಖ್ಯಮಂತ್ರಿಗಳನ್ನು ಹಿಗ್ಗಾಮುಗ್ಗಾ ಜರೆದು ನಿವಾಳಿಸುವುದು ಮತ್ತು ನಾಲ್ಕು ಜನರೆದುರು ತಾನೊಬ್ಬ ಬುದ್ಧಿವಂತ ಎಂದೆನಿಸಿಕೊಳ್ಳುವುದು ವಾಡಿಕೆ ಆಗಿದೆ. ಟ್ಯಾಕ್ಸ್ ಆಫೀಸರ್ ಲಂಚಕೋರ,ವಿಲೇಜ್ ಅಕೌಂಟೆಂಟ್ ಕಳ್ಳ ಸೂಳೇಮಗ,ದುಡ್ಡಿನ ಎದುರಿಗೆ ಇವರಿಗೆ ದೋಸ್ತಿ,ಸಂಬಂಧ ಇದು ಯಾವುದೂ ತೋರುವುದಿಲ್ಲ ಹಾಗೆ ಹೀಗೆ ಎಂದು ಹಳಿಯುತ್ತಾರೆ.ಲಂಚ ಡಿಮಾಂಡ್ ಮಾಡುವ ಸೇಲ್ಸ್ ಟ್ಯಾಕ್ಸ್ ಅಧಿಕಾರಿ ಕಳ್ಳ ಬೋಳಿಮಗ ಆದರೆ ಲಂಚ ಕೊಟ್ಟ ವ್ಯಾಪಾರಿ ಯಾರ ಮಗ? ಎಂದು ಒಬ್ಬರ ಬಳಿ ಕೇಳಿದಾಗ ಬಹಳ ಸಿಟ್ಟು ಬಂತವರಿಗೆ.ತಾನು ವ್ಯಾಪಾರದ ಲೆಕ್ಕ ಬರಿಯೂದಿಲ್ಲ,ಟ್ಯಾಕ್ಸ್ ಕಟ್ಟುವುದಿಲ್ಲ,ಟ್ಯಾಕ್ಸ್ ಆಫೀಸರ್ ಮಾತ್ರ ಬೋಳೀ ಮಗ! ನನ್ನ ಹತ್ರ ಒಂದು ವಾರ ಮಾತಾಡಲಿಲ್ಲ.
            ಭ್ರಷ್ಟತೆ ರಾಜ್ಯದಲ್ಲಿ,ದೇಶದಲ್ಲಿ ಇಲ್ಲವೇನೆಂದಲ್ಲ.ಉದಯವಾಣಿಯ ಒಂದು ಸಂಚಿಕೆಯಲ್ಲಿ ಉಲ್ಲೇಖವಾದಂತೆ ಲಂಚಗುಳಿತನ ಈಗಲ್ಲ ಸುಮಾರು ಎಂಟುನೂರು ವರ್ಷಗಳ ಹಿಂದೆ ಇತ್ತೆಂದು ಶಿವಶರಣ ಬಸವೇಶ್ವರರೇ ತಮ್ಮ ವಚನ ಒಂದರಲ್ಲಿ ಹೇಳಿದ್ದಾರೆ-ನೇರಳೆ ಹಣ್ಣಿಗೆ ಕಪ್ಪು ಬಣ್ಣವನ್ನು ಬಳಿದು ಮಾರುವ ಜನರನ್ನು ಏನೆಂದು ಕರೆಯಬೇಕು?- ಎಂದು.ಹಾಗೆಂದು ಈಗ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ಸಮರ್ಥಿಸಲಾಗುವುದಿಲ್ಲ.
            ನನ್ನ ವೃತ್ತಿಜೀವನದಲ್ಲಿ ನನ್ನ ಸ್ವಂತ ಕೆಲಸಗಳಿಗೆ ಸರಕಾರೀ ಅಧಿಕಾರಿಗಳ ಬಳಿ ಹೋಗುವ ಪರಿಸ್ಥಿತಿಗಳು ಕೆಲವೇ ಕೆಲವು ಎನ್ನಬಹುದು.ಆದರೂ ಇವುಗಳಲ್ಲಿ ದುಡ್ಡುಕೊಟ್ಟು ಕೆಲಸ ಮಾಡಿಸಿಕೊಂಡ ಸಂಧರ್ಭಗಳು ಇಲ್ಲವೇ ಇಲ್ಲ ಎನ್ನಬಹುದು.ಆದ್ದರಿಂದ ಸಾಮಾನ್ಯವಾಗಿ ಲಂಚದ ಬಗ್ಗೆ ಮಾತಾಡುವಾಗ ಕೆಳಗಿನ ಮಟ್ಟದ ಅಧಿಕಾರಿ ಇಲ್ಲವೇ ನೌಕರರನ್ನು ತೆಗಳುವಾಗ ಮನಸ್ಸಿಗೆ ಕಷ್ಟವಾಗುತ್ತದೆ.
            ಕೃಷಿಸಾಲ ನೀಡುವ ಮೊದಲು ಆಯಾ ರೈತರ ತೋಟ,ಕೃಷಿಯ ಪೂರ್ವಸಮೀಕ್ಷೆ ನಡೆಸಬೇಕು.ಅಂತೆಯೇ ಒಬ್ಬ ಆಢ್ಯರೆನಿಸಿಕೊಂಡವರ ಜಾಗ ನೋಡಲು ಹೋಗಿದ್ದೆ.ತನಗೆ ಬೇಕಾದ ಸಾಲ-ಹತ್ತಿರದವರೊಬ್ಬರ ತೋಟ ಖರೀದಿ.ಸಾಮಾನ್ಯವಾಗಿ ಅವರ ಸಾಲದ ಉದ್ದೇಶ ಸಮಂಜಸ ಎನಿಸದಿದ್ದರೂ ಅವರ ಹಿಂದಿನ ಬೇಂಕ್ ವ್ಯವಹಾರಗಳು ರೆಗುಲರ್ ಇದ್ದುದರಿಂದ ಒಪ್ಪಿಕೊಂಡಿದ್ದೆ.ಅವರ ತೋಟ,ಕೃಷಿ,ಬೆಳೆ ಮತ್ತು ಹಿಡುವಳಿಗಳ ಬಗ್ಗೆ ವಿವರಣೆ ಬರಕೊಂಡೆ.     "ನೋಡಿ ಸರ್,ನಮಗೆ ಒಟ್ಟು ಕುಟುಂಬದ ಜಾಗ ತುಂಬ ಉಂಟು.ಆದರೆ ಸ್ವಲ್ಪ ಜಾಗಕ್ಕೆ ಇನ್ನೂ ಆರ್ ಟಿ ಸಿ ಸಿಗಬೇಕಷ್ಟೆ.ಸಿಕ್ಕಿದ ಕೂಡಲೆ ತಿಳಿಸುತ್ತೇನೆ."
            "ಒಟ್ಟು ಎಷ್ಟು ಜಾಗ?"
            "ನೋಡಿ ಸ್ವಾಮಿ,ಒಟ್ಟು ಒಂಭತ್ತು ಎಕರೆಯಷ್ಟು ಜಾಗ ಅಕ್ರಮ ಸಕ್ರಮ ಪ್ರಕಾರ ನಮಗೆ ರಿಕಾರ್ಡ್ ಆಗಬೇಕು.ಆದರೆ ಕಳ್ಳನಿಗೆ ಇಪ್ಪತ್ತು ಸಾವಿರ ಪೀಕ ಬೇಕು ನೋಡಿ.ಜನರ ಆಶೆಗೆ ಒಂದು ಎಂಡ್ ಇಲ್ಲ.ಎಷ್ಟು ಎಳೆದರೂ ಇನ್ನೂ ಕಮ್ಮಿಯೇ!"
            ಕಳ್ಳ ಎಂದು ಯಾರನ್ನು ಉದ್ದೇಶಿಸಿದ್ದು ಎಂದು ತಿಳಿಯಿತು.ನನ್ನ ಅನುಭವದಂತೆ ಆ ತಹಸೀಲ್ದಾರರು ಒಳ್ಳೆಯವರೇ.ಮನಸ್ಸಿಗೆ ಒಂಚೂರು ಬೇಸರ ಸಹ ಆಯ್ತು.
            "ನೋಡಿ ಇವರೇ,ನಿಮ್ಮ ಬಳಿ ನಿಮ್ಮದು,ತಮ್ಮನ ಪಾಲಿದ್ದು,ಹೆಂಡತಿಯ ಪಾಲಿದ್ದು ಅಂತ ಸುಮಾರು ಎಂಟೊಂಭತ್ತು ಎಕರೆ ತೋಟ ಆಸ್ತಿ ಇದೆ. ಹಿಂದೆ ಈ ಜಾಗವೆಲ್ಲ ನಿಮ್ಮ ತಂದೆಯರೊಬ್ಬರ ಹೆಸರಲ್ಲಿ ಮಾತ್ರ ಇತ್ತು.ಒಬ್ಬ ರೈತನಿಗೆ ತನ್ನ ಆಸ್ತಿಯ ಹತ್ತಿರದ ಸುಮಾರು ಐದು ಎಕರೆಗಳಷ್ಟು ಜಾಗ ಬೇಲಿ ಹಾಕಿದರೆ ಮುಂದೆ ಅದು ಸಕ್ರಮ ಆಗುತ್ತದೆ ಎಂದು ಇದ್ದ ಒಂದು ಆಸ್ತಿಯನ್ನು ವಿಭಾಗ ಮಾಡಿ ನೀವು ತಮ್ಮ,ಹೆಂಡತಿ ಎಂದು ಹಂಚಿಕೊಂಡಿದ್ದೀರಿ ಮತ್ತು ಹತ್ತಿರ ಹತ್ತಿರ ಎಂಟು ಒಂಭತ್ತು ಎಕರೆಗಳಷ್ಟು ಜಾಗಕ್ಕೆ ಬೇಲಿ ಹಾಕಿದ್ದೀರಿ.ಈ ಕ್ರಮ ನ್ಯಾಯಯುತವೇ ಆಗಿದೆ ಒಪ್ಪಿಕೊಳ್ಳುತ್ತೇನೆ.ಆದರೂ ನೀವೊಮ್ಮೆ ಸರಕಾರೀ ನೌಕರರ ಲೆಕ್ಕಾಚಾರದಂತೆ ಯೋಚಿಸಿ."ಕೂತಲ್ಲೆ ಎಂಟು ಎಕರೆ ಜಾಗ ಹೊಡೀತಾರಲ್ಲ ಇವರ ಆಶೆಗೆ ಒಂದು ಎಂಡ್ ಇಲ್ವಾ! ಪೀಕಲಿ ದುಡ್ಡು! ಎಕರೆಗೆ ಎರಡೂವರೆ ಲಕ್ಷ ಎಂದರೂ ಹತ್ತು ಹನ್ನೆರಡು ಲಕ್ಷ ರುಪಾಯಿ ಆಯ್ತು!" ಎಂದು ಲೆಕ್ಕಾಚಾರ ಮಾಡಿ ಹೊಟ್ಟೆಕಿಚ್ಚು ಪಡುತ್ತಾರೆ.ಹೌದೋ ಅಲ್ವೋ?" ಎಂದೆ.
            "ಹೌದು ಸರ್" ಎಂದರು.ದಾಕ್ಷಿಣ್ಯಕ್ಕೆ ಹೇಳಿದರೋ ಏನೋ ನನಗೆ ತಿಳಿಯಲಿಲ್ಲ. ನಾನೂ ಮುಂದಕ್ಕೆ ಆ ವಿಷಯವನ್ನು ಬೆಳೆಸಲಿಲ್ಲ.ಸುಮ್ಮನೆ ಸಂಬಂಧ ಇಲ್ಲದ ವಿಚಾರಗಳಲ್ಲಿ ಬಿದ್ದು ನಾವೇಕೆ ಮನಸ್ಸು ಕೆಡಿಸಿಕೊಳ್ಳಬೇಕು,ಪಾರ್ಟಿ ಒಳ್ಳೆಯವರಿದ್ದಾರೆ ಕೃಷಿಗೆ ಸಂಬಂಧಿಸಿದಂತೆ ನಮ್ಮ ಬಳಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ,ಉಪಯುಕ್ತತೆಯನ್ನು ನೋಡಿ ಸಾಲ ಕೊಡುವುದು ನಮ್ಮ ಕೆಲಸ ಎಂದು ನಾನೂ ಸುಮ್ಮನಾದೆ.ಆವರ ಸಾಲ ಮಂಜೂರು ಮಾಡಿದೆ.ಕೆಲ ಕಾಲದ ಬಳಿಕ ಒಮ್ಮೆ ಸಿಕ್ಕಿದರು."ಮೆನೇಜರರಿಗೆ ಬೇಸರವಾಗಿರಬೇಕು-ನಾನು ತಹಸೀಲ್ದಾರರಿಗೆ ಬೈದದ್ದಕ್ಕೆ.ಏನೋ ಬೇಜಾರಾಗಿತ್ತು ನೋಡಿ ಆ ದಿನ,ಹಾಗಾಗಿ ಆ ಮಾತು ಬಂತು.ಹಾಗೆ ನೋಡಿದರೆ ನಮ್ಮ ತಹಸೀಲ್ದಾರರೂ ಒಳ್ಳೆಯವರೆ.ನಮಗೆ ಹೆಚ್ಚು ಕಷ್ಟ ಕೊಡಲಿಲ್ಲ.ಆದರೂ ಆ ಡಿಪಾರ್ಟ್‌ರ್ಮೆಂಟ್‌‍ನಲ್ಲಿ ಎಲ್ಲ ನಡೀತದೆ. ಅವರಾದರೂ ಏನು ಮಾಡಿಯಾರು? ಅವರದ್ದೂ ಕೈಕಟ್ಟಿರುತ್ತದೆ" ಎಂದರು.
            "ಸರಿ ಮಾರಾಯರೆ" ಎಂದೆ.     

Sunday, September 9, 2012

Bhashabhimaana


ನಮ್ಮ ಕರ್ನಾಟಕದ ಜನತೆ ಬಹಳವೇ ಸಜ್ಜನರು,ಶಾಂತಿಪ್ರಿಯರು.ತುಂಬಾ ಮೃದುಹೃದಯವಂತರು.ನಮ್ಮ ಸಜ್ಜನಿಕೆಯ ಲಾಭವನ್ನು ಇಡೀ ದೇಶವೇ ಪಡೆಯುತ್ತ ಇದೆ.ಇಲ್ಲಿ ದೇಶದ ಎಲ್ಲ ದಿಕ್ಕುಗಳಿಂದಲೂ ಜನರು ಅನೇಕ ಕಾರಣಗಳಿಗೆಂದು ಬಂದು ನೆಲೆಸಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. .ಆತಿಥೇಯರಾದ ನಾವು ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಿಗೇನೇ ಸಜ್ಜನರಾಗಿದ್ದೇವೆಯೋ ಎಂಬ ಶಂಕೆ ಬರುತ್ತಿದೆ.ಯಾರಾದರೂ ಉದ್ಯೋಗ ಅಥವಾ ವ್ಯಾಪಾರಕ್ಕೆಂದು ತಮಿಳುನಾಡಿಗೆ ಹೋದರೆ ಅವರು ಅಲ್ಲಿ ತಮಿಳು ಕಲಿಯಲೇಬೇಕು.ಕೇರಳಕ್ಕೆ ಹೋದರೆ ಮಲೆಯಾಳಿ,ಆಂಧ್ರದಲ್ಲಿ ತೆಲುಗು ಅಥವ ಮಹಾರಾಷ್ಟ್ರದಲ್ಲಿ ಹಿಂದಿ ಯಾ ಮರಾಠಿ ಭಾಷೆ ಕಲಿಯಲೇ ಬೇಕು-ಕಲಿಯುತ್ತಾರೆ-ಏಕೆಂದರೆ ಆಯಾ ಪ್ರದೇಶದಲ್ಲಿ ಅಲ್ಲಿನ ಭಾಷೆಯು ನಡೆಯುತ್ತದೆ.ಆದರೆ ನಮ್ಮ ರಾಜ್ಯದ ಜನರು ಮೇಲೆ ಹೇಳಿದಂತೆ ತುಂಬಾನೇ ಸಜ್ಜನರು,ಉದಾರಮನಸ್ಸಿನವರು.ಇಲ್ಲಿಗೆ ಬಂದ ಅತಿಥಿಗಳ ಮನನೋಯಿಸಲು ತಯಾರಿಲ್ಲ.ಇಲ್ಲಿ ಜೀವಿಸಲು ಬಂದವರಿಗೆ ನಮ್ಮ ಭಾಷೆ ಕನ್ನಡ ಕಲಿಯುವಂತೆ ನಾವು ಪ್ರೇರೇಪಿಸುವುದಿಲ್ಲ.ಬದಲಾಗಿ ನಾವೇ ಅವರ ಭಾಷೆ ಕಲಿತು ಕೃತಾರ್ಥರಾಗುತ್ತೇವೆ.

ಗ್ರಾಮೀಣ ಪ್ರದೇಶಗಳ ಜನರು ಅಷ್ಟು ತಿಳಿದವರಲ್ಲ.ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ.ಹಾಗಾಗಿ ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಕನ್ನಡ ಉಳಿದಿದೆ ಎನ್ನಬಹುದು.ಆದರೂ ಕೆಲವೆಡೆ ಭಾಷಾಭಿಮಾನದ ಕೊರತೆ ಕಂಡುಬರುತ್ತದೆ.ಕೊಲ್ಲೂರು ಪ್ರಸಿದ್ಧಯಾತ್ರಾಸ್ಥಳ.ಇಲ್ಲಿಗೆ ಭಕ್ತಾದಿಗಳು ದೇವಿಯ ದರ್ಶನಪಡೆದು ಕೃತಾರ್ಥರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ಅದರಲ್ಲೂ ಕೇರಳದ ಭಕ್ತರು ಹೆಚ್ಚಾಗಿ ಬರುತ್ತಾರೆ.ಅನೇಕ ಭಕ್ತರು ದೇವಿಯ ಪದತಲದಲ್ಲಿ ಶಾಶ್ವತವಾಗಿ ಇರಲು ಬಯಸಿ ಇಲ್ಲೇ ನೆಲಸಿದ್ದಾರೆ.ಅಂತವರಲ್ಲಿ ಒಬ್ಬರು ಒಮ್ಮೆ ಹಣ ಪಡೆಯಲು ಬೇಂಕಿಗೆ ಹೋದರು.ಎಷ್ಟು ಬೇಕು? ಎಂದು ಅಧಿಕಾರಿ ಕೇಳಿದಾಗ "ಆಯಿರಮ್ ರೂಬಾಯ್" ಎಂದರು.ಅಧಿಕಾರಿಗೆ ಅರ್ಥವಾಗಲಿಲ್ಲ.ಎಷ್ಟು ಹಣ ಬೇಕು ಮಾರಾಯರೇ ಎಂದಾಗ ಪುನಃ ಆಯಿರಮ್ ರುವಾಯ್ ಎಂದೇ ಉತ್ತರ ಬಂತು ಬೇಂಕು ಅಧಿಕಾರಿಗೂ ಕಿರಿಕಿರಿ ಆಯಿತು.ಪುನಃಪುನಃ ಆ ಗ್ರಾಹಕ ಮಲೆಯಾಳದಲ್ಲೇ ಮಾತಾಡತೊಡಗಿದರು.ಕೊಲ್ಲೂರಿಗೆ ಬಂದು ಸುಮಾರು ಇಪ್ಪತ್ತು ವರ್ಷಗಳ ಮೇಲಾಯ್ತು ಆದರೂ ಆ ಮನುಷ್ಯ ಎನಕೆ ಕನ್ನಡ ಅರಿವಿಲ್ಲ ಎಂದು ಜಂಬದಲ್ಲೇ ಇದ್ದರು.ಹಾಗೂ ಅವರನ್ನು ಸಹಿಸಿಕೊಂಡು ಊರವರಿದ್ದರು.ಆಯಾ ರಾಜ್ಯದ ಭಾಷೆ ಕಲಿಯದೇ ವರ್ಷಾನುಗಟ್ಟಳೆ ಒಂದೆಡೆ ಇರಬೇಕೆಂದರೆ ಅದು ಕರ್ನಾಟಕವೇ ಆಗಿರಬೇಕು ವಿನಾ ಬೇರೆ ಯಾವ ರಾಜ್ಯದಲ್ಲೂ ಈ ರೀತಿಯ ಸವಲತ್ತು ಸಿಗಲಾರದು.

ಬೆಂಗಳೂರು ನಗರದಲ್ಲಿ ಕನ್ನಡಪರ ಸಂಘಟನೆಗಳು ಅನೇಕವಿವೆ.ಕನ್ನಡಕ್ಕಾಗಿ ಹೋರಾಡುವ ಮಂದಿಗಳು ಸಂಸ್ಥೆಗಳು,ರಾಜಕಾರಣಿಗಳು,ಕೂಟಗಳು ಇತ್ಯಾದಿ ಇತ್ಯಾದಿ ತುಂಬ ಇವೆ ಎಂಬ ಭಾವನೆ ಇಟ್ಟುಕೊಂಡು ಬಂದರೆ ಇಲ್ಲಿನ ಪರಿಸ್ಥಿತಿ ಬೇರೆಯೇ ಆಗಿದೆ.ನೂರು ಮಂದಿಯ ಬಳಿ ನೀವು ವ್ಯವಹರಿಸಿದರೆ ನಿಮಗೆ ಕನ್ನಡದ ಕಂಪು ಕೇವಲ ಹದಿನೈದು ಯಾ ಇಪ್ಪತ್ತು ಜನರಲ್ಲಿ ಸಿಕ್ಕೀತು ಬಹು ಕಷ್ಟದಲ್ಲಿ! ಉಳಿದವರೆಲ್ಲ ಅನ್ಯಭಾಷಿಗರು.ಲಾಲ್‌ಬಾಗಿನ ಬಳಿ ನಿಂತಿದ್ದೆ.ಇಬ್ಬರು ಯುವಕರು ಹತ್ತಿರ ಬಂದರು-
"ಅಂಕಲ್‌ಜಿ ಯಹಾಂ ಸೆ ಮೆಜೆಸ್ಟಿಕ್‌ ಕೋ ಬಸ್ ಮಿಲೇಗಿ ಕ್ಯಾ?" ಎಂದು ಕೇಳಿದರು.
ನೋಡೋಣ ಎಂದು ನೀವು ಯಾವ ಊರಿನವರು ಎಂದು ಕೇಳಿದೆ.
"ರಾಯಚೂರ್ರೀ ಸರ" ಅಂದರು!
"ರಾಯಚೂರಿನ ಮಂದಿಗೆ ಕನ್ನಡ ಬರಾಂಗಿಲ್ಲೇನು?" ನಾನು ರಾಯಚೂರಿನವನಲ್ಲದಿದ್ದರೂ ಆದಷ್ಟು ಅವರ ಧಾಟಿಯಲ್ಲಿ ಕೇಳಿದೆ.
"ಬರತ್ರೀ ಸರ,ಆದರ ಇಲ್ಲಿ ಬೆಂಗ್ಳೂರ್ನಾಗೆ ನಡೀಬೇಕಲ್ರೀ! ಅದಕ್ಕ ಹಿಂದೀವಳಗ ಕೇಳಾಕಹತ್ತೀನ್ರೀ" ಅವನ ಸಮಜಾಯಿಷಿಕೆ....
ಅಂದರೆ ಬೆಂಗಳೂರಿನಲ್ಲಿ ಬೇರೆ ಊರಿಂದ-ಕರ್ನಾಟಕದವರೇ-ಬಂದವರೂ ಸಹ ಮೊದಲಿಗೆ ಹಿಂದಿಯಲ್ಲೇ ಮಾತಾಡಿ ಕಡೆಗೆ ಕನ್ನಡಕ್ಕೆ ಬರುತ್ತಾರೆ.ಇದು ಇತರ ರಾಜ್ಯದವರ ಅಹಂಕಾರವೋ ನಮ್ಮ ದೌರ್ಬಲ್ಯವೋ ತಿಳಿಯದು.
ತರಕಾರಿ ಅಂಗಡಿಗೆ ಹೋದೆ-"ಎನ್ನ ವೇಣು?" ಅಂಗಡಿ ಯಜಮಾನಿ ಕೇಳಿದಳು.
"ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತ ಇದ್ದಿ.ಕನ್ನಡ ಭಾಷೆ ಬರುವುದಿಲ್ಲವೇ?" ಕೇಳಿದೆ.
"ನನಕ ರೊಂಬ ಬಾಶೆ ವರುತ್ತೆ,ನಿನಕೆ ಎತ್ತರ ವೇಣು?" ಅವಳದ್ದು ಧಿಮಾಕಿನ ಜವಾಬು.ಇಷ್ಟು ಜಂಬ ಇರುವವಳ ಬಳಿ ವ್ಯಾಪಾರ ಮಾಡಲು ಮನಸ್ಸಾಗದೇ ವಾಪಸು ಬಂದೆ.....
ಬಸ್ಸುಗಳಲ್ಲಿ,ಪಾರ್ಕುಗಳಲ್ಲಿ,ಫುಟ್‌ಪಾತ್‌ಗಳಲ್ಲಿ,ಅಂಗಡಿ-ಹೋಟಲುಗಳಲ್ಲಿ ಎಲ್ಲೇ ನೋಡಿರಿ ಹೆಚ್ಚಿನಂಶ ಯುವಕಯುವತಿಯರು ಇಂಗ್ಲಿಷ್,....ಬಾಕಿ ಹಿಂದಿ ಮತ್ತು ಇತರೇ ಭಾಷೆಗಳಾದ ತೆಲುಗು ತಮಿಳುಗಳೆ ರಾರಾಜಿಸುತ್ತಿವೆ.ಅನೇಕ ಕಡೆಗಳಲ್ಲಿ ಅವರೇ ಬಹುಸಂಖ್ಯಾತರು ಮತ್ತು ಅವರದೇ ರಾಜ್ಯಭಾರ.ಕನ್ನಡದಲ್ಲಿ ಮಾತಾಡುವುದು ಅಂದರೆ ಬಹುತೇಕ ಜನರಿಗೆ ಹೀನೈಸಿಕೆ ಎಂದೆನಿಸುತ್ತದೆಯೋ ಏನೋ! ಬಹಳ ಕಷ್ಟಪಟ್ಟು ಇಂಗ್ಲಿಷ್ ಮಾತಾಡುತ್ತಾರೆ! ಎದುರಿಗಿದ್ದ ಆಂಗ್ಲ ಭಾಷೆ ಬಾರದವರಿಗೆ ಒಂದು ರೀತಿಯ ಮುಜುಗರ ಬೇರೆ.

ಕ.ರಾ.ರ.ಸಾ.ನಿಗಮವು ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ.ನಿಗಮದ ನಿರ್ವಹಣೆ ಅತ್ಯುತ್ತಮವಾಗಿದ್ದು ಇದು ನನಗೆ ತಿಳಿದಂತೆ ಸತತ ನಾಲ್ಕು ವರ್ಷಗಳಿಂದ ಲಾಭದಲ್ಲಿದೆ.ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆಯು ನಿತ್ಯಸಂಚಾರಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತದೆ.ಉತ್ತಮ ಕಂಡೀಷನ್ ಇರುವ ಬಸ್ಸುಗಳು,ದಿನದ ಹಾಗೂ ತಿಂಗಳ ಪಾಸುಗಳು,ವೋಲ್ವೋ ಬಸ್ಸುಗಳು,ನಗುಮುಖದ ಚಾಲಕ-ನಿರ್ವಾಹಕರು,ಪ್ರಯಾಣಿಕರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಸಹನೆಯಿಂದ ತೃಪ್ತಿಕರ ಉತ್ತರ ನೀಡಿ ಮಾರ್ಗದರ್ಶನ ಮಾಡುವ ನಿಲ್ದಾಣ ಸಿಬಂದಿಗಳು ಇನ್ನೇನು ಬೇಕು.ನಾನು ಬೆಂಗಳೂರಿನಲ್ಲಿ ಪ್ರಯಾಣಕ್ಕಾಗಿ ಬಸ್ಸುಸಾರಿಗೆಯನ್ನೇ ಇಚ್ಚಿಸುತ್ತೇನೆ.ಆಟೋಗಳಲ್ಲಿ ಪಯಣಿಸುವುದಿಲ್ಲ.ನನ್ನ ಸುಮಾರು ಎರಡೂವರೆ ವರ್ಷಗಳ ಅನುಭವದಂತೆ ಇದುವರೆಗೆ ಒಂದೇ ಒಂದು ಅಹಿತಕರ ಘಟನೆ,ಚಾಲಕ ನಿರ್ವಾಹಕರಿಂದ ಅಸಭ್ಯ ವರ್ತನೆ ಮುಂತಾದುವುಗಳನ್ನು ನಾನು ನೋಡಿಲ್ಲ.ಬೆಂಗಳೂರು ಒಂದು ಮಹಾನಗರ, ಮತ್ತು ಇನ್ನೂ ಬೆಳೆಯುತ್ತಿರುವ ನಗರ.ಇಲ್ಲಿನ ಸಾರಿಗೆ ನಿಗಮವೂ ದೊಡ್ಡದೇ.ಸಾವಿರಾರು ಬಸ್ಸುಗಳು ಅವುಗಳ ಸಿಬಂದಿ ವರ್ಗವೂ ದೊಡ್ಡದೇ.ಅವರು ನೀಡುವ ಸೇವಾ ಸೌಲಭ್ಯಗಳು ಅತ್ಯಂತ ಪ್ರಶಂಸನೀಯ.ಉತ್ತಮ ನಿರ್ವಹಣೆ ಬಗ್ಗೆ ಅದಕ್ಕೆ ಕೇಂದ್ರ ಸರಕಾರದ ಶಹಭಾಶ್‌ಗಿರಿ ಮತ್ತು ಪ್ರಶಸ್ತಿ ಸಹಾ ಬಂದಿದೆ.

ದೊಡ್ಡ ಸಂಸ್ಥೆ ಎಂದ ಮೇಲೆ ಸಣ್ಣಪುಟ್ಟ ಕುಂದುಕೊರತೆಗಳು ಇದ್ದೇ ಇರುತ್ತವೆ.ಆದರೆ ನಾವು ಸಮಗ್ರ ದೃಷ್ಟಿಕೋಣವಿಟ್ಟು ಸಂಸ್ಥೆಯ ಕಾರ್ಯವಿಧಾನವನ್ನು ವಿಶ್ಲೇಷಿಸಬೇಕೆ ವಿನಹ ಒಂದೆರಡು ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿ ಇಡೀ ವ್ಯವಸ್ಥೆಯನ್ನು ಹೀಗಳೆಯುವುದು ತಪ್ಪು.ಇತ್ತೀಚಿನ ಟೈಂಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಬ್ಬಾಕೆಯ ದೂಷಣಾಲೇಖನ ಬಂದಿತ್ತು-"ಬಸ್ ಕರೋ ಇಟ್ಸ್ ಅವರ್ ಹೋಮ್ ಟೂ"-ಬಸ್ಸಿನಲ್ಲಿ ಸಿಬಂದಿವರ್ಗದವರು ಒಬ್ಬ ಪಾಪದ ಹುಡುಗಿಯನ್ನು ಕಳ್ಳತನದ ಆರೋಪದ ಮೇಲೆ ವಿನಾಕಾರಣ ಥಳಿಸುತ್ತಿದ್ದರು.ಅದನ್ನು ಆಕೆ ತಪ್ಪಿಸಿದರು.ಈ ನಡುವೆ ಸದರಿ ಸಿಬಂದಿಗಳು ತಮ್ಮ ವಿರುದ್ಧ ಮಾತಾಡಿದ ಈ ಹಿಂದಿ ಭಾಷಿಕ ಮಹಿಳೆ ಮೇಲೇರಿ ಬಂದರು-ಹಿಂದಿ ಮಾತನಾಡುವ ಮಂದಿಗೆ ಕನ್ನಡದವರ ವಿರುದ್ಧ ಮಾತಾಡಲು ಯಾವ ಹಕ್ಕಿದೆ? ಇಳಿ ಕೆಳಗೆ ಎಂದು ತನ್ನನ್ನು ಬಸ್ಸಿನಿಂದ ಇಳಿಸಿದರು ಎಂದು ಆಕೆಯ ಆರೋಪ....

ನಾನು ಬಸ್ಸಿನ ಸಿಬಂದಿಯವರು ಮಾಡಿದ ದೌರ್ಜನ್ಯದ ಪರವಾಗಿ ಯಾವುದೇ ವಕಾಲತ್ತು ಮಾಡುವುದಿಲ್ಲ.ಅವರು ಮಾಡಿದ್ದು ತಪ್ಪು ಮತ್ತು ಅವರನ್ನು ಎದುರಿಸಿ ಆ ಪಾಪದ ಹುಡುಗಿಗೆ ಸಹಾಯ ಮಾಡಿದುದು ಪ್ರಶಂಸೆಗೆ ಅರ್ಹ....ತಾನು ಬೇರೆ ರಾಜ್ಯದಿಂದ ಬಂದವಳು,ಇಲ್ಲಿ ಜೀವಿಸುವವಳು ಆದ್ದರಿಂದ ಇಲ್ಲಿನ ಭಾಷೆ ಕಲಿಯುವುದು ತನ್ನ ಕರ್ತವ್ಯವಾಗಿರಬೇಕಿತ್ತು.ಅದನ್ನು ಅವರೂ ಒಪ್ಪುತ್ತಾರೆ.ಭಾಷೆ ಕಲಿಯುವುದು ಎಂದರೆ ಅ ಆ ಇ ಈ ಕಲಿಯುವುದಲ್ಲ.ಜನರೊಡನೆ ವ್ಯವಹರಿಸಲು ಆಗುವಷ್ಟನ್ನಾದರೂ ಕಲಿಯಬಹುದಿತ್ತು..ಇಲ್ಲ ಅದನ್ನು ಆಕೆ ಕಲಿಯಲಿಲ್ಲ ಮಾತ್ರವಲ್ಲ ತಾನು ಮನಸ್ಸಾದರೆ ಮಾತ್ರ ಕಲೀತೇನೆ,ಕನ್ನಡ ಕಲಿಯುವಂತೆ ಯಾರೂ ತನ್ನನ್ನು ಬಲವಂತ ಪಡಿಸಲಾಗದು.ತಾನು ಯಾವ ಭಾಷೆ ಉಪಯೋಗಿಸುತ್ತೇನೆ ಎಂಬುದು ತನ್ನ ಪ್ರಜಾಸತ್ತಾತ್ಮಕ ಹಕ್ಕು.ಕನ್ನಡ ಮಾತನಾಡುವುದಿಲ್ಲ ಎಂದು ಯಾರೂ ತನಗೆ ಸಾರ್ವಜನಿಕ ಸೇವೆ ನಿರಾಕರಿಸಲಾಗದು ಎಂದು ಸಮರ್ಥಿಸಿಕೊಂಡಿದ್ದಾರೆ...ಇದು ಮಾತ್ರ ಧಾರ್ಷ್ಟ್ಯದ ಮಾತು.ನಮ್ಮ ಬೆಂಗಳೂರಿಗೆ ಬಂದಿದ್ದೀರಿ.ಇಲ್ಲಿನವರ ಪ್ರೀತಿಗೆ ಪಾತ್ರರಾಗಬೇಕೇ ವಿನಃ ಇಲ್ಲಿನ ವ್ಯವಸ್ಥೆಗಳನ್ನು ದೂಷಿಸುವುದು ಸ್ವಲ್ಪ ಅತಿರೇಕದ ಮಾತು.ಇದು ಸಲ್ಲದು.ನಾವಿದನ್ನು ಒಪ್ಪಲಾಗದು.ಯಾವುದೇ ಭಾಷೆ ಕಲಿಯಲು ಬಹಳ ಕಷ್ಟವೇನಿಲ್ಲ....ನಮ್ಮ ಲ್ಲಿ ತಮಿಳುನಾಡಿನಿಂದ ಒಬ್ಬ ಕೃಷಿ ಆಧಿಕಾರಿ ವರ್ಗವಾಗಿ ಬಂದರು.ತಮಗೆ ನೂರು ದಿನ ಸಮಯ ಕೊಡುತ್ತೇನೆ ಅಷ್ಟರ  ಒಳಗೆ ನಮ್ಮ  ಮಾತು ಕಲಿಯಬೇಕು ಎಂದಾಗ ತನಗೆ ಕೇವಲ ಒಂದು ತಿಂಗಳು ಸಮಯ ಕೊಡಿ ಸಾಕು ಅಷ್ಟರೊಳಗೆ ಕಲೀತೇನೆಂದರಲ್ಲದೇ ಕಲಿತೂ ಬಿಟ್ಟರು ಮತ್ತು ತುಂಬ ಜನಪ್ರಿಯ ಅಧಿಕಾರಿ ಎಂಬ ಹೆಗ್ಗಳಿಕೆಯನ್ನೂ ಅಲ್ಪಕಾಲದಲ್ಲಿ ಗಳಿಸಿದರು.ಈ ರೀತಿಯ ಸಕಾರಾತ್ಮಕ ನಡವಳಿಕೆ ಇರಬೇಕೇ ವಿನಃ ತನಗೆ ಖುಷಿ ಇದ್ದರೆ ಮಾತ್ರ ಕಲೀತೇನೆ ಎಂಬ ಮನೋಭಾವನೆ ಒಳ್ಳೆಯದಲ್ಲ.




Saturday, September 8, 2012

karnatakadalli kannada mataadiri


ಕ.ರಾ.ರ.ಸಾ.ನಿಗಮವು ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ.ನಿಗಮದ ನಿರ್ವಹಣೆ ಅತ್ಯುತ್ತಮವಾಗಿದ್ದು ಇದು ನನಗೆ ತಿಳಿದಂತೆ ಸತತ ನಾಲ್ಕು ವರ್ಷಗಳಿಂದ ಲಾಭದಲ್ಲಿದೆ.ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆಯು ನಿತ್ಯಸಂಚಾರಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತದೆ.ಉತ್ತಮ ಕಂಡೀಷನ್ ಇರುವ ಬಸ್ಸುಗಳು,ದಿನದ ಹಾಗೂ ತಿಂಗಳ ಪಾಸುಗಳು,ವೋಲ್ವೋ ಬಸ್ಸುಗಳು,ನಗುಮುಖದ ಚಾಲಕ-ನಿರ್ವಾಹಕರು,ಪ್ರಯಾಣಿಕರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಸಹನೆಯಿಂದ ತೃಪ್ತಿಕರ ಉತ್ತರ ನೀಡಿ ಮಾರ್ಗದರ್ಶನ ಮಾಡುವ ನಿಲ್ದಾಣ ಸಿಬಂದಿಗಳು ಇನ್ನೇನು ಬೇಕು.ನಾನು ಬೆಂಗಳೂರಿನಲ್ಲಿ ಪ್ರಯಾಣಕ್ಕಾಗಿ ಬಸ್ಸುಸಾರಿಗೆಯನ್ನೇ ಇಚ್ಚಿಸುತ್ತೇನೆ.ಆಟೋಗಳಲ್ಲಿ ಪಯಣಿಸುವುದಿಲ್ಲ.ನನ್ನ ಸುಮಾರು ಎರಡೂವರೆ ವರ್ಷಗಳ ಅನುಭವದಂತೆ ಇದುವರೆಗೆ ಒಂದೇ ಒಂದು ಅಹಿತಕರ ಘಟನೆ,ಚಾಲಕ ನಿರ್ವಾಹಕರಿಂದ ಅಸಭ್ಯ ವರ್ತನೆ ಮುಂತಾದುವುಗಳನ್ನು ನಾನು ನೋಡಿಲ್ಲ.ಬೆಂಗಳೂರು ಒಂದು ಮಹಾನಗರ, ಮತ್ತು ಇನ್ನೂ ಬೆಳೆಯುತ್ತಿರುವ ನಗರ.ಇಲ್ಲಿನ ಸಾರಿಗೆ ನಿಗಮವೂ ದೊಡ್ಡದೇ.ಸಾವಿರಾರು ಬಸ್ಸುಗಳು ಅವುಗಳ ಸಿಬಂದಿ ವರ್ಗವೂ ದೊಡ್ಡದೇ.ಅವರು ನೀಡುವ ಸೇವಾ ಸೌಲಭ್ಯಗಳು ಅತ್ಯಂತ ಪ್ರಶಂಸನೀಯ.ಉತ್ತಮ ನಿರ್ವಹಣೆ ಬಗ್ಗೆ ಅದಕ್ಕೆ ಕೇಂದ್ರ ಸರಕಾರದ ಶಹಭಾಶ್‌ಗಿರಿ ಮತ್ತು ಪ್ರಶಸ್ತಿ ಸಹಾ ಬಂದಿದೆ.

ದೊಡ್ಡ ಸಂಸ್ಥೆ ಎಂದ ಮೇಲೆ ಸಣ್ಣಪುಟ್ಟ ಕುಂದುಕೊರತೆಗಳು ಇದ್ದೇ ಇರುತ್ತವೆ.ಆದರೆ ನಾವು ಸಮಗ್ರ ದೃಷ್ಟಿಕೋಣವಿಟ್ಟು ಸಂಸ್ಥೆಯ ಕಾರ್ಯವಿಧಾನವನ್ನು ವಿಶ್ಲೇಷಿಸಬೇಕೆ ವಿನಹ ಒಂದೆರಡು ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿ ಇಡೀ ವ್ಯವಸ್ಥೆಯನ್ನು ಹೀಗಳೆಯುವುದು ತಪ್ಪು.ಇತ್ತೀಚಿನ ಟೈಂಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಂದು ದೂಷಣೆಯ ಲೇಖನ ಬಂದಿತ್ತು-"ಬಸ್ ಕರೋ ಇಟ್ಸ್ ಅವರ್ ಹೋಮ್ ಟೂ"-ಬಸ್ಸಿನಲ್ಲಿ ಸಿಬಂದಿವರ್ಗದವರು ಒಬ್ಬ ಪಾಪದ ಹುಡುಗಿಯನ್ನು ಕಳ್ಳತನದ ಆರೋಪದ ಮೇಲೆ ವಿನಾಕಾರಣ ಥಳಿಸುತ್ತಿದ್ದರು.ಅದನ್ನು ಆಕೆ ತಪ್ಪಿಸಿದರು.ಈ ನಡುವೆ ಸದರಿ ಸಿಬಂದಿಗಳು ತಮ್ಮ ವಿರುದ್ಧ ಮಾತಾಡಿದ ಈ ಹಿಂದಿ ಭಾಷಿಕ ಮಹಿಳೆ ಮೇಲೇರಿ ಬಂದರು-ಹಿಂದಿ ಮಾತನಾಡುವ ಮಂದಿಗೆ ಕನ್ನಡದವರ ವಿರುದ್ಧ ಮಾತಾಡಲು ಯಾವ ಹಕ್ಕಿದೆ? ಇಳಿ ಕೆಳಗೆ ಎಂದು ತನ್ನನ್ನು ಬಸ್ಸಿನಿಂದ ಇಳಿಸಿದರು ಎಂದು ಆಕೆಯ ಆರೋಪ....

ನಾನು ಬಸ್ಸಿನ ಸಿಬಂದಿಯವರು ಮಾಡಿದ ದೌರ್ಜನ್ಯದ ಪರವಾಗಿ ಯಾವುದೇ ವಕಾಲತ್ತು ಮಾಡುವುದಿಲ್ಲ.ಅವರು ಮಾಡಿದ್ದು ತಪ್ಪು ಮತ್ತು ಅವರನ್ನು ಎದುರಿಸಿ ಆ ಪಾಪದ ಹುಡುಗಿಗೆ ಸಹಾಯ ಮಾಡಿದುದು ಪ್ರಶಂಸೆಗೆ ಅರ್ಹ....ತಾನು ಬೇರೆ ರಾಜ್ಯದಿಂದ ಬಂದವಳು,ಇಲ್ಲಿ ಜೀವಿಸುವವಳು ಆದ್ದರಿಂದ ಇಲ್ಲಿನ ಭಾಷೆ ಕಲಿಯುವುದು ಆಕೆಯ ಕರ್ತವ್ಯವಾಗಿರಬೇಕಿತ್ತು.ಅದನ್ನು ಅವರೂ ಒಪ್ಪುತ್ತಾರೆ.ಭಾಷೆ ಕಲಿಯುವುದು ಎಂದರೆ ಅ ಆ ಇ ಈ ಕಲಿಯುವುದಲ್ಲ.ಜನರೊಡನೆ ವ್ಯವಹರಿಸಲು ಆಗುವಷ್ಟನ್ನಾದರೂ ಕಲಿಯಬಹುದಿತ್ತು..ಇಲ್ಲ ಅದನ್ನು ಆಕೆ ಕಲಿಯಲಿಲ್ಲ ಮಾತ್ರವಲ್ಲ ತಾನು ಮನಸ್ಸಾದರೆ ಮಾತ್ರ ಕಲೀತೇನೆ,ಕನ್ನಡ ಕಲಿಯುವಂತೆ ಯಾರೂ ತನ್ನನ್ನು ಬಲವಂತ ಪಡಿಸಲಾಗದು.ತಾನು ಯಾವ ಭಾಷೆ ಉಪಯೋಗಿಸುತ್ತೇನೆ ಎಂಬುದು ತನ್ನ ಪ್ರಜಾಸತ್ತಾತ್ಮಕ ಹಕ್ಕು.ಕನ್ನಡ ಮಾತನಾಡಲಿಲ್ಲ ಎಂದು ಯಾರೂ ತನಗೆ ಸಾರ್ವಜನಿಕ ಸೇವೆ ನಿರಾಕರಿಸಲಾಗದು ಎಂದು ಸಮರ್ಥಿಸಿಕೊಂಡಿದ್ದಾರೆ...ಇದು ಮಾತ್ರ ಧಾರ್ಷ್ಟ್ಯದ ಮಾತು. ನಮ್ಮ ಬೆಂಗಳೂರಿಗೆ ಬಂದಿದ್ದೀರಿ.ಬಹಳ ಸಂತೋಷ.ಇಲ್ಲಿನವರ ಪ್ರೀತಿಗೆ ಪಾತ್ರರಾಗಬೇಕೇ ವಿನಃ ಇಲ್ಲಿನ ವ್ಯವಸ್ಥೆಗಳನ್ನು ದೂಷಿಸುವುದು ಸ್ವಲ್ಪ ಅತಿರೇಕದ ಮಾತು.ಇದು ಸಲ್ಲದು. ನಾವಿದನ್ನು ಒಪ್ಪಲಾಗದು.ಯಾವುದೇ ಭಾಷೆ ಕಲಿಯಲು ಬಹಳ ಕಷ್ಟವೇನಿಲ್ಲ....ನಮ್ಮ ಲ್ಲಿ ತಮಿಳುನಾಡಿನಿಂದ ಒಬ್ಬ ಕೃಷಿ ಆಧಿಕಾರಿ ವರ್ಗವಾಗಿ ಬಂದರು.ನಿಮಗೆ ನೂರು ದಿನ ಸಮಯ ಕೊಡುತ್ತೇನೆ ಅಷ್ಟರ ಒಳಗೆ ನಮ್ಮ ಮಾತು ಕಲಿಯಬೇಕು ಎಂದಾಗ ತನಗೆ ಕೇವಲ ಒಂದು ತಿಂಗಳು ಸಮಯ ಕೊಡಿ ಸಾಕು ಅಷ್ಟರೊಳಗೆ ಕಲಿಯುತ್ತೇನೆಂದರಲ್ಲದೇ ಕಲಿತೂ ಬಿಟ್ಟರು ಮತ್ತು ತುಂಬ ಜನಪ್ರಿಯ ಅಧಿಕಾರಿ ಎಂಬ ಹೆಗ್ಗಳಿಕೆಯನ್ನೂ ಅಲ್ಪಕಾಲದಲ್ಲಿ ಗಳಿಸಿದರು.ಈ ರೀತಿಯ ಸಕಾರಾತ್ಮಕ ನಡವಳಿಕೆ ಇರಬೇಕೇ ವಿನಃ ತನಗೆ ಖುಷಿ ಇದ್ದರೆ ಮಾತ್ರ ಕಲೀತೇನೆ ಎಂಬ ಮನೋಭಾವನೆ ಒಳ್ಳೆಯದಲ್ಲ.