Thursday, November 14, 2024

ಕೆಮರಾ ಆಸೆ

1972--ಒಂದೊಂದೇ ಮೆಟ್ಟಿಲು ಹತ್ತಿ ಐಡಿಯಲ್ ಸ್ಟೂಡಿಯೋ ಒಳಗೆ ಹೋಗಿ ನಿಂತೆ. ಮನಸ್ಸಿನಲ್ಲಿ ಮುಜುಗರ ಫೀಲ್ ಆಗುತ್ತಿತ್ತು. ಸ್ಟೂಡಿಯೋ ಯಜಮಾನರಾದ ನಾಯಕ್ ಮಾಮ ನನ್ನ ಆತ್ಮೀಯರು, ಹಾಗೂ ಸಜ್ಜನ ಮಿತ್ರರು. 

"ಕಿತ್ತೆ ಆಯಿಲೋ?"   (ಏನು ಬಂದದ್ದು?)

"ಒಂದು ಕೆಮರ ಬೇಕಿತ್ತು."

"ಏಕೆ? ಹಾರುತ್ತಿರುವ ಕೊಕ್ಕರೆ- ಕಾಗೆ, ಓಡುತ್ತಿರುವ ಮೋಡಗಳ ಫೋಟೋ ಹೊಡೀಲಿಕ್ಕಾ?"

"ಹೌದು, ನಿಮಗೆ ಹೇಗೆ ಗೊತ್ತು?"

ನಿನ್ನ ಅಣ್ಣ ಸುಬ್ರಾಯ ನಾಯಕರು ಬಂದು ಕಾಗೆ-ಕೋಳಿಗಳ ಫಿಲ್ಮ್ ಕ್ಲೀನ್ ಮಾಡಿಸಿ ಡೆವಲಪ್ ಮಾಡಿ ಹೋಗಿದ್ದಾರೆ. ಈಗ ನಿನಗೆ ಉಮೇದು ಹುಟ್ಟಿದೆ, ಅಲ್ಲದೇ G S ಶೆಣೈಯವರ ಆರ್ಟ್ ಗ್ಯಾಲರಿ ಮತ್ತು ಇಲಸ್ಟ್ರೇಟೆಡ್ ವೀಕ್ಲಿಯಲ್ಲಿನ ಫೋಟೋ ಎಲ್ಲ ನೋಡಿ  ಭಾರೀ ಹುರುಪಿನಿಂದ ಬಂದಿದ್ದೀ. ಕೆಮರಾ ಸುಮ್ಮನೆ ಬರೂದಿಲ್ಲ. ಕೆಮರಾ ಆದ ಮೇಲೆ ರೀಲು ಹಾಕಬೇಕು, ಫಿಲ್ಮ್ ಕ್ಲೀನ್ ಮಾಡಿ ಡೆವಲಪ್ ಮಾಡಬೇಕು. ಮೇಲಾಗಿ ನೀನು ಹೊಡೆಯುವ ಕಾಗೆ ಕೋಳಿಗಳು ನೀನು ಹೇಳುವ ಹಾಗೆ ಕೇಳುವ ಗ್ಯಾರಂಟಿ ಇಲ್ಲ.

"ಮೇಲಾಗಿ ನಿನಗೆ ಸಂಬಳ ಇನ್ನೂರೈವತ್ತರ ಒಳಗೆ. ನಿನ್ನ ಖರ್ಚು ತಾಪತ್ರಯ ಕಳೆದು ನಿನ್ನ ಶೋಕಿಗೆಂದು ಕೆಮರ ತೆಕೊಂಡ್ರೆ ಭಾರಿ ಕಷ್ಟ ಉಂಟು. ನಿನಗೆ ಯಾವ ರೀತಿಯ ಫೋಟೋ ಬೇಕು ಹೇಳು. ನೀನು ಆಶೆ ಪಟ್ಟ ಹಾಗೆ, ಇಲ್ಲವೇ ಅದಕ್ಕಿಂತ ಬೆಟರ್, ಪಟ ತೆಗೆದು ಡೆವಲಪ್ ಮಾಡಿ ಕೊಡ್ತೇನೆ. ಆಗ್ತದಾ ನೋಡು."

ನಾಯಕ್ ಮಾಮರು ಲೋಕವನ್ನು ಕಂಡವರು. ಮತ್ತು ಮೊದಲೇ ಹೇಳಿದಂತೆ ನನ್ನ ಹಿತೈಷಿಗಳು. ಆದರೆ ನನ್ನ ಮನಸ್ಸಿನ ಲೆಕ್ಕ ಬೇರೆಯದನ್ನೇ ಹೇಳುತ್ತಿತ್ತು. "ಹಾಗೆ ಮಾಡಿದ್ರೆ ಅದು ನಾನು ತೆಗೆದ ಹಾಗೆ ಆಗೂದಿಲ್ಲ. ಮತ್ತು ಆ ಪಟಗಳಲ್ಲಿ ನನಗೆ ಮೋಕೆ ಹುಟ್ಟೂದಿಲ್ಲ."

"ನಿನ್ನ ಮಾತು ಸಮ. ಆದರೆ ಆಲೋಚನೆ ಮಾಡಿ ನೋಡು. ನೀನು ನನಗೆ ತಮ್ಮನ ಹಾಗೆ ಮತ್ತು ದೋಸ್ತಿ. ಅದಕ್ಕಾಗಿ ನಾನು ಹೇಳಿದ್ದು. ಕೆಮರಾ ಮಾರಿದ್ರೆ ನನಗೆ ಲಾಭವೇ. ಆದ್ರೆ ನಿನಗೆ ಗೊತ್ತಿರಲಿ ಅಂತ ನನ್ನ ಅಭಿಪ್ರಾಯ."

"ಸ್ವಲ್ಪ ದಿನ ಬಿಟ್ಟು ಬರುತ್ತೇನೆ." ಮೆಲ್ಲನೆ ಅಲ್ಲಿಂದ ಕಾಲುಕಿತ್ತೆ. ನಂತರ ಅಲ್ಲಿ ಹೋಗಲಿಲ್ಲ. ಆದರೆ ಆಶೆ ಮಾತ್ರ ಮನಸ್ಸಿಂದ ಹೋಗಲಿಲ್ಲ. ಒಂದು ಒಳ್ಳೆಯ ಕೆಮರಾ ತೆಕೊಳ್ಳಬೇಕು ಒಂದಲ್ಲ ಒಂದು ದಿನ ಎಂಬ ಖಯಾಲು ಮನದ ಚಿಕ್ಕ ಕೋಣೆಯಲ್ಲಿ ಉಳಕೊಂಡಿತು.

ಎಪ್ಪತ್ತನೇ ದಶಕದ ವರೆಗಿನ ದಿನಗಳಲ್ಲಿ ಹೆಚ್ಚಿನವರು ಬಡಕುಟುಂಬಕ್ಕೆ ಸೇರಿದವರು. ತಕ್ಕಮಟ್ಟಿನ ಜೀವನಯಾಪನೆ ಮಾಡುವುದೇ ಒಂದು ದೊಡ್ಡ ಸರ್ಕಸ್ ಆಗಿರುವ ಸಮಯ. ಎರಡು ಹೊತ್ತು ಮಕ್ಕಳ ಹೊಟ್ಟೆ ತುಂಬ  ಊಟ ಉಣಿಸಲು ಪರದಾಡುವ ಕುಟುಂಬಗಳ ರೇಷಿಯೋ ಅಧಿಕ. ಅಂತಿರುವ ಸಮಯದಲ್ಲಿ ನಾನು ಕೆಮರಾ ಖರೀದಿಗೆ ಹೊರಟಿರುವುದು ನನ್ನ ದೃಷ್ಟಿಯಲ್ಲೇ ಅಹಂಕಾರದ ಪರಮಾವಧಿ. ಆದರೂ ಮನುಷ್ಯ ಆಶೆಯ ಏಣಿ ಹುಟ್ಟಿಸಿಕೊಂಡು ಅದರ ಮೆಟ್ಟಿಲುಗಳನ್ನು ಏರುವ ಹವಣಿಕೆಯಲ್ಲಿರುವುದು ಸಹಜವೇ. ನನ್ನ ಏಣಿಯ ಮೊದಲ ಮೆಟ್ಟಿಲು ಹೈಸ್ಕೂಲು ಕಲಿಯುವಾಗ ಬಣ್ಣ  ಬಣ್ಣದ ಚಪ್ಪಲಿಯದ್ದಾಗಿದ್ದರೆ ಎರಡನೇದ್ದು ಈ ಕೆಮರಾ ಖರೀದಿ. 'ಅದೆಲ್ಲ ನಮ್ಮಂತವರಿಗೆ ಹೇಳಿಸಿದ್ದಲ್ಲ, ಊರಲ್ಲಿ ಮರ್ಯಾದೆಯಿಂದ ದಿನ ದೂಡುವುದೇ ಕಷ್ಟವಾಗಿರುವಾಗ ಇಂಥದ್ದೆಲ್ಲ ನಿಮ್ಮ ಮಂಡೆಯಲ್ಲಿ ಹೊಕ್ಕಿದ್ದಾದರೂ ಹೇಗೆ?' ನಮ್ಮ ಹಿರಿಯ ಹಿತೈಷಿಗಳೊಬ್ಬರ ಆಶೀರ್ವಚನವೂ ಆಯಿತು. 

1984ರ ಸಮಯದಲ್ಲಿ ನಮ್ಮ ಪ್ರಕಾಶ ಮನೆಯವರೆಲ್ಲರ ಫೋಟೋ ತೆಗೆದ. ಅವುಗಳಲ್ಲಿ ಇನ್ನೂ ಕೆಲವೊಂದು ಚಿತ್ರಗಳು ಮನಸ್ಸಿಗೆ ತಂಪನ್ನೆರೆಯುತ್ತಿವೆ. ಆಗ ಮತ್ತೊಮ್ಮೆ ಆಸೆಯ ಕಿಡಿ ಸಣ್ಣಗೆ ಹೊತ್ತಿ ನಂದಿತು.

1985- ಡಿಸೆಂಬರ್ ಮಂಥ್ ದಿಲ್ಲಿಯಲ್ಲಿ ಅತಿಶಯವಾದ ಚಳಿ. ಸೂರ್ಯನಿಗೆ ಬೆಳಗಾಗುವುದು ತಡ, ನಾವು ಏಳುವುದೂ ತಡ. ಒಂದು ಮುಂಜಾನೆ ಬಹುಶಃ ಐದೂವರೆ ಇರಬಹುದು, ಬಾಗಿಲು ತಟ್ಟಿದ ಶಬ್ದವಾಯಿತು. 'ಕೌನ್ ಹೈ ಭಾಯ್' ಎಂದು ಎದ್ದು ಬಾಗಿಲು ತೆರೆದರೆ ಕತ್ತಲೆಯಲ್ಲಿ ಫಕ್ಕನೆ ಏನೂ ತಿಳಿಯಲಿಲ್ಲ, ಎದುರು ನಿಂತ ಜನ ಸಹ ಮಾತಾಡುತ್ತಿಲ್ಲ!

"ಅರೆ! ಪಾಂಡುರಂಗ! ನೀನೆಲ್ಲಿಂದ ಪ್ರತ್ಯಕ್ಷನಾದೆ ಮಹರಾಯ! ಬಾ ಬಾ" ಒಳಗೆ ಕರೆದೆ.

ಕೋರ್ಪೋರೇಷನ್ ಬೇಂಕಿನ ಚಂಡೀಗಡ ಬ್ರಾಂಚಿನಲ್ಲಿ ಅಸಿಸ್ಟೆಂಟ್ ಮೆನೆಜರ್-ಮುಂದಿನ ದಿನಗಳಲ್ಲಿ ಅದೇ ಶಹರದಲ್ಲಿ ಅಸಿಸ್ಟೆಂಟ್ ಜನರಲ್ ಮೆನೆಜರ್ ಆಗಿದ್ದವನು- ದಿಲ್ಲಿಗೆ ಕರ್ತವ್ಯ ನಿಮಿತ್ತ ಬಂದವನು ಸಿನಿಮಾಗಳಲ್ಲಿ ದೇವರು ಪ್ರತ್ಯಕ್ಷನಾದಂತೆ ಪ್ರತ್ಯಕ್ಷನಾದ. ಎಲ್ಲರಿಗೂ ಬಹಳ ಖುಷಿಯಾಯಿತು. ಆತ ಒಳ್ಳೆಯ ಮಾತುಗಾರ, ಆಕರ್ಷಕ ವ್ಯಕ್ತಿತ್ವ, ಹಸನ್ಮುಖಿ-ಒಬ್ಬ ಒಳ್ಳೆಯ ವ್ಯಕ್ತಿಯಲ್ಲಿರಬೇಕಾದ ಎಲ್ಲ ಗುಣಗಳೂ ಆತನಲ್ಲಿದ್ದವು. ಬೇಂಕು-ಮನೆ, ಮನೆ-ಬೇಂಕು ಎಂದು ದಿಲ್ಲಿ ಶಹರದಲ್ಲಿದ್ದರೂ ನಾನು ಕಾಡಿನಲ್ಲಿದ್ದ ಹಾಗಿದ್ದೆ. ಪಾಂಡುರಂಗ ಬಂದ ನಂತರ ಬಹಳ ಸುಧಾರಣೆಯಾಯಿತು. ಚಂಡೀಗಡ ತಿರುಗಾಡಲು ಬನ್ನಿ ಎಂದು ಆಮಂತ್ರಿಸಿದ.

ಒಂದು ಸಂಜೆ ಹಾಗೆಯೇ ತಿರುಗಾಡುತ್ತ ಗೆಳೆಯ ಯಾಜಿಯವರಲ್ಲಿ ಹೋದೆ. ಯಥಾಪ್ರಕಾರ ಕಾಫೀ ತಿಂಡಿ ಆಯಿತು. ಬೇಂಕಿನ ಆಗುಹೋಗುಗಳ, ರಾಜಕೀಯದ, ಮಕ್ಕಳ ತುಂಟಾಟಗಳ ಕುರಿತು ಮಾತು ನಡೆಯಿತು. ಸಂಜೆ ಕಳೆದು ರಾತ್ರಿ ಆಗುತ್ತ ಬಂತು.

"ನಾಯಕರೇ, ವಿಶೇಷ ವಿಚಾರವೇನಾದರೂ ಉಂಟಾ? ರಾತ್ರಿಯಾಗುತ್ತ ಬಂತು."

"ವಿಶೇಷ ಅಂತ ಏನೂ ಅಲ್ಲ, ನಿಮ್ಮದು ಎಲ್ಲಾದರೂ ಹೊರಗೆ ಪ್ರಯಾಣ ಹೋಗುವ ಪ್ರೋಗ್ರಾಮು ಉಂಟಾ?"

"ಇಲ್ಲ, ಏಕೆ?"

"ನಮ್ಮದೊಂದು ಚಂಡೀಗಡ ಟ್ರಿಪ್ಪು ಇದೆ. ನಿಮ್ಮ ಕೆಮರ ಕೊಟ್ಟರೆ ಸ್ವಲ್ಪ ಫೋಟೋ ತೆಗೆದುಕೊಳ್ಳುವ ಎನ್ನುವ ವಿಚಾರ ಇದೆ." ಕೇಳುವಾಗ ಮನಸ್ಸು ಬಹಳವೇ ಮುದುಡಿತು.

"ಏನು ನಾಯಕರೆ, ಒಂದು ಕೆಮರಾ ಕೇಳಲಿಕ್ಕೆ ಸಂಜೆ ಐದೂವರೆಯಿಂದ ಇಷ್ಟು ಹೊತ್ತು ಕಾದದ್ದಾ? ದೋಸ್ತಿ ಬಳಿ ನೀವು ಇಷ್ಟು ದಾಕ್ಷಿಣ್ಯ ಮಾಡಿದ್ರೆ ಹೇಗೆ! ಮೊನ್ನೆ  ಮೊನ್ನೆ ನಾವೆಲ್ಲಾ ಫ್ಯಾಮಿಲಿ ಸಹಿತ ಕಾಶಿ ಹರಿದ್ವಾರ ಎಲ್ಲಾ ತಿರುಗಿ ಬಂದಾಗಿದೆ. ನಿಮ್ಮ ಎಲ್ಲಾ ಟ್ರಿಪ್ ಆದ ಮೇಲೆ ವಾಪಸ್ ಕೊಡಿ." ಒಳಗಿನಿಂದ ಕೆಮರಾ ತಂದು ಕೊಟ್ಟರು.

"ನಮ್ಮದಲ್ಲದ ಐಟಮ್ ತಕ್ಕೊಳ್ಳಲು ತುಂಬ ಕಷ್ಟ ಆಗುತ್ತದೆ ಯಾಜಿಯವರೇ" ಎಂದು ಮನೆಗೆ ಬಂದೆ.

"ನಿಮ್ಮ ಪ್ರಾಣಸ್ನೇಹಿತ ನಾಯಕರ ಹತ್ರ ಕೆಮರ ಉಂಟಲ್ಲ, ಹಾಗಿರುವಾಗ ಯಾಜಿಯವರ ಬಳಿ ಯಾಕೆ ಹೋದದ್ದು?" ಮನೆಯಲ್ಲಿ ಪ್ರಶ್ನೆ ಬಂತು.

ಅಮೆರಿಕದಿಂದ ಅವರ ಭಾವ ಹೊಸತ್ತು ಕೆಮರ ಕಳಿಸಿದ್ದರು. ಅದನ್ನು ಅವರೇ ಸರಿಯಾಗಿ ಉಪಯೋಗಿಸಿರಲಿಕ್ಕಿಲ್ಲ. ನಾನು ಕೇಳಿದರೆ ಹಿಂದೆ ಮುಂದೆ ನೋಡದೇ ತಗೆದುಕೊಟ್ಟಾರು. ಆದರೆ ಅದು ಅವರಿಗೆ ಸ್ಪೆಶಲ್ ಗಿಫ್ಟ್ ಆಗಿರುವಾಗ ನಾನು ಕೇಳುವುದು ಎಷ್ಟು ಸಮಂಜಸವಾದೀತು ಎಂದು ಅವರಲ್ಲಿ ಹೋಗಲಿಲ್ಲ.

ಸ್ವಂತದ ಕೆಮರಾ ಆಗಲಿಲ್ಲ. ಮನಸ್ಸು ಕೊರೆಯತೊಡಗಿತು. 

"ನಾಯಕ್ ಸಾಬ್, ಹರ ಬಾತ್ ಪರ್ ಪೈಸೋಂ ಕಾ ಹಿಸಾಬ್ ನ ಲಗಾವೋ. ಏನಾದರೂ ಖರೀದಿ ಮಾಡಬೇಕಿದ್ದರೆ, ಆಚೆ ಈಚೆ, ಅವರ ಇವರ ಬಳಿ ಅದು ಇದು ಸಲಹೆಗಳನ್ನು ಕೇಳಹೋಗಬೇಡಿ. ಸೀದಾ ಹೋಗಿ ಪರ್ಚೇಸ್ ಮಾಡಿಬಿಡಿ." ಪಿಗ್ಮಿ ಕಲೆಕ್ಟರ್ ದೋಸ್ತಿಯೊಬ್ಬ ಸಲಹೆ ಕೊಟ್ಟ.

"ಅದೂ ಸಹ ಸರೀನೇ. ನನಗೊಂದು ಒಳ್ಳೇ ಕ್ವಾಲಿಟಿಯ ಕೆಮರಾ ತಂದುಕೊಡು ಮಹರಾಯ.!!" 

ಕೊನೆಗೂ ಉತ್ತಮವಾದ ಕೆಮರವೊಂದು ಮನೆಗೆ ಬಂತು. 

ಕಾಗೆ, ಕೋಳಿ ಮತ್ತು ಕೊಕ್ಕರೆಗಳ ಫೋಟೋ ಸೆಷನ್ನಿಗೆ ಇನ್ನೂ ಸಮಯ ಒದಗಿ ಬಂದಿಲ್ಲ. ಗುಬ್ಬಿಗಳದ್ದಂತೂ ಸಂತಾನವೇ ಸಂಕಷ್ಟದಲ್ಲಿದೆ.

ಅತ್ಯಂತ ದುಃಖದ ಸಂಗತಿಯೆಂದರೆ, ಸಮಸ್ತರ ಪ್ರಿಯನಾದ, ಸಮಾಜದಲ್ಲಿ ಇನ್ನೂ ಅನೇಕ ಕೆಲಸಕಾರ್ಯಗಳನ್ನು ಮಾಡಲಿಕ್ಕಿದ್ದ ಬಂಧು ಪಾಂಡುರಂಗ ನಮ್ಮನ್ನು ಅರ್ಧ ದಾರಿಯಲ್ಲೇ ಬಿಟ್ಟು ವಾಪಸು ಬಾರದಂತಹ ಜಾಗಕ್ಕೆ ಪಯಣಿಸಿದ. ಈ ಪ್ರಬಂಧ ಅವನಿಗೆ ಸಮರ್ಪಿತ.

No comments:

Post a Comment