ಮಹಾಭಾರತ ಯುದ್ಧದ ಸಮಯದಲ್ಲಿ ಪರಮಾತ್ಮನು ಅರ್ಜುನನಿಗೆ ಗೀತಾಬೋಧನೆ ಮಾಡುತ್ತಾನೆ. 'ನಿನಗೆ ನನ್ನ ಪೂರ್ಣ ಪ್ರಮಾಣದ ಭವ್ಯವಾದ ರೂಪವನ್ನು ನೋಡಲು ಕಷ್ಟವಾಗುತ್ತದೆ, ಆದ್ದರಿಂದ ನಿನಗೆ ದಿವ್ಯ ದೃಷ್ಟಿಯನ್ನು ಕೊಡುತ್ತೇನೆ...' ಅರ್ಜುನನೇನೋ ದಿವ್ಯದೃಷ್ಟಿಯ ಮೂಲಕ ಪರಮಾತ್ಮನ ವಿಶ್ವರೂಪವನ್ನು ನೋಡಿದ. ಆದರೆ ಪರಮಾತ್ಮನ ಗೆಳೆಯನಾದರೂ, ನಾರಾಯಣನ ಸಖ ನರನೆಂದು ಕರೆಯಲ್ಪಟ್ಟವನಾದರೂ ಆತನಿಂದ ಭಗವಂತನ ರೂಪ, ವೈಭವ, ಭವ್ಯತೆ, ತೇಜಸ್ಸು, ತೀಕ್ಣತೆ ಮತ್ತು ಅಗಾಧತೆಗಳನ್ನು ತಡಕೊಳ್ಳಲಾಗಲಿಲ್ಲ.! ಆತ ಬಹಳವೋ ಕೊಂಚವೋ ಆ ವೈಭವ ಅಗಾಧತೆಯನ್ನು ಅನುಭವಿಸಿರಬಹುದು....
ಈ ಭವ್ಯ-ಸೂಕ್ಷ್ಮಗಳ ವ್ಯಾಪ್ತಿಗಳನ್ನು ಅಳೆಯುವ ಅಥವಾ ಅನುಭವಿಸುವ ಮಾನದಂಡಗಳು ಯಾವುವು.? ಆಧುನಿಕ ವಿಜ್ಞಾನಿಗಳ ಪ್ರಕಾರ ನಮ್ಮ ಅನುಭವಕ್ಕೆ ಬರುವ ವಿಶ್ವದ ಗಾತ್ರವೇ 92 ಬಿಲಿಯ ಜ್ಯೋತಿರ್ ವರ್ಷಗಳು.! ಅದರ ಆಚೆ ನಮಗೆ ಅಗೋಚರವಾದ ನಮ್ಮ ವಿಶ್ವ ಎಷ್ಟು ದೊಡ್ಡದಿದೆ!!! ಯಾರಿಗೂ ಗೊತ್ತಿಲ್ಲ.
ಕೆಲವು ವರ್ಷಗಳ ಹಿಂದೆ ಮುಳ್ಳಯ್ಯನಗಿರಿ ಪ್ರವಾಸ ಹೋಗಿದ್ದೆವು. ಕರ್ನಾಟಕ ರಾಜ್ಯದಲ್ಲಿನ ಆತ್ಯುನ್ನತ ಶಿಖರವದು. ನಮಗೆ ವಾಹನ ವ್ಯವಸ್ಥೆ ಇತ್ತು. ಅಲ್ಲಿನ ಶಿವದೇವಾಲಯವಿರುವ ಶಿಖರವನ್ನು ಮಾತ್ರ ಕಾಲ್ನಡಿಗೆಯಲ್ಲೇ ಹತ್ತಿ ಹೋಗಬೇಕು. ಕೆಳಗಿಂದ ದೇವಾಲಯದ ದಾರಿ, ಗುಡ್ಡದ ತುದಿ ಮತ್ತದರ ಮೇಲಿನ ನೀಲಿ ಬಣ್ಣದ ಶುಭ್ರ ಆಕಾಶ ಆಹಾ! ನೋಡಿಯೇ ಮನಸೋತೆ. ಒಮ್ಮೆ ಮನಸ್ಸು ಕಾವ್ಯಮಯ ಭಾವಮಯ ಆಯಿತು.! ಆ ಸಂಭ್ರಮದಿಂದ ಹೊರಬಂದು, ಮೇಲೆ ಯಾವುದೇ ಆಧಾರದ ಅನುಕೂಲತೆಗಳಿಲ್ಲದ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು ಎಂದಾಗ ಆ ಶಿಖರವನ್ನು ನನ್ನನ್ನು ಆವರಿಸಿಕೊಂಡ ಅಗಾಧ ಆಕಾಶ! - ಸ್ಪೇಸ್! - ಕಲ್ಪಿಸಿ ಹೆದರಿ ಹೋದೆ. ನಾನು ಬರೂದಿಲ್ಲ ನೀವು ಹೋಗಿ ಎಂದರೂ ಉಳಿದವರ ಒತ್ತಾಯದಂತೆ ಹೋದೆ, ದರ್ಶನ ಪಡೆದೆ, ಧನ್ಯನಾದೆ.
ಇದೇ ಫೆಬ್ರವರಿ ತಿಂಗಳಲ್ಲಿ ಮಾನ್ಯ ಪ್ರಧಾನಿಯವರಿಂದ ಉದ್ಘಾಟಿಸಲ್ಪಟ್ಟ ಶ್ರೀ ರಾಮಾನುಜಾಚಾರ್ಯರ ಭವ್ಯಮೂರ್ತಿಯಿರುವ 'ಸಮಾನತೆಯ ಶಿಲ್ಪ' - Statue of Equality - ವೀಕ್ಷಿಸುವ ಸೌಭಾಗ್ಯ ಪ್ರಾಪ್ತವಾಯಿತು. ಹೈದರಾಬಾದ್ ನಗರದಲ್ಲಿ ಇದು ಸ್ಥಾಪಿತವಾಗಿದೆ. ದೇಶದಲ್ಲೇ ಅತ್ಯಂತ ಎತ್ತರದ ಕುಳಿತಿರುವ ಮೂರ್ತಿ ಇದಾಗಿದೆ. ಇನ್ನೂರ ಹದಿನಾರು ಅಡಿಗಳಷ್ಟು ಎತ್ತರ! ಕೆಳಗೆ ಮುಖ್ಯ ದೇವಳದಲ್ಲಿ ಶ್ರೀ ರಾಮಾನುಜಾಚಾರ್ಯರ ಚಿನ್ನದ ಮೂರುತಿಯೂ ಇದೆ. ಸುತ್ತಲೂ ಒಂದು ನೂರಾ ಎಂಟು ದೇವರ ಸುಂದರ ಗುಡಿಗಳಿವೆ. ಅತ್ಯಂತ ನಯನ ಮನೋಹರವಾದ ಶಿಲ್ಪಗಳು, ಮುಖ್ಯ ಮಂದಿರ ಹಾಗೂ ಇಡೀ ದೇವಾಲಯ ಸಮುಚ್ಚಯ!
ಒಳಗೆ ಪ್ರವೇಶಿಸಲು ಸಿಕ್ಕಾಪಟ್ಟೆ ಇರುವ ಭದ್ರತಾನಿಯಮಗಳಿಂದ ಕೊಂಚ ಕಿರಿಕಿರಿ ಆದರೂ ಒಳಗೆ ಕಾಲಿಟ್ಟ ಕ್ಷಣಕ್ಕೆ ಎಲ್ಲಾ ಮಂಗಮಾಯವಾಗುತ್ತವೆ. ಎದುರಿಗೆ ಸೂರ್ಯನ ಕಿರಣಗಳಿಂದ ಫಳಫಳಿಸುವ ಬಂಗಾರದ ಬಣ್ಣದ ಭವ್ಯ ಮೂರ್ತಿ ನಮ್ಮ ಕಣ್ಣು, ಮನಸ್ಸು, ಬುದ್ಧಿ, ವ್ಯಕ್ತಿತ್ವ ಮತ್ತು ಆತ್ಮ ಇವೆಲ್ಲವನ್ನು ಪೂರ್ತಿಯಾಗಿ ಆವರಿಸುತ್ತದೆ. ಅದರ ಮಂದಹಾಸ ನಮ್ಮಲ್ಲಿ ಉತ್ಸಾಹ, ಧೈರ್ಯ, ಭಕ್ತಿ ಹಾಗೂ ಆನಂದವನ್ನು ಉಂಟುಮಾಡುತ್ತದೆ. ಕೆಳಗಿನ ಒಂದೊಂದೇ ಮೆಟ್ಟಿಲು ಹತ್ತಿ ಹೋದಂತೆ ಮೂರುತಿಯ ವೈಶಾಲ್ಯ ದ್ವಿಗುಣವಾದ ಅನುಭವದಿಂದ ಪೂರ್ತಿ ಹತ್ತಿದಾಗ ಆಗುವ ಅನುಭವ ಬಣ್ಣಿಸಲು ನನ್ನ ಜ್ಞಾನ ಸಾಲದು. ಮನಸ್ಸು, ಆ ಭವ್ಯ ಮೂರುತಿ ಹಾಗೂ ಅದನ್ನು ಮೇಲಿನಿಂದ ನಮ್ಮನ್ನೂ ಒಳಗೊಂಡು ಆವರಿಸಿದ ಆಕಾಶದ ಅಗಾಧತೆಯಿಂದ ಅದೇ ಆಕಾಶದಲ್ಲಿ ಕಳೆದುಹೋಗುತ್ತದೆ.! 'ಅಣೋರಣಿಯಾ ತೋ ಖಡಾ' ಎಂಬಂತೆ.! ಆ ಭವ್ಯ ಮೂರುತಿಯ ಮಂದಹಾಸವು ಭರವಸೆ, ಶಾಂತಿ, ಸಮಾಧಾನ ಹಾಗೂ ಆನಂದವನ್ನು ನೀಡುತ್ತದೆ.!
ಅರ್ಜುನನ ವಿಶ್ವರೂಪ ದರ್ಶನಕ್ಕೆ ಮತ್ತವನ ಭಾವಗಳಿಗೆ ನನ್ನ ಪ್ರವಾಸಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು. ಪರಮಾತ್ಮನ ವೈಭವ ನನ್ನಂಥ ಹುಲುಮನುಜನ ಕಲ್ಪನೆಗಳನ್ನು ಮೀರಿದ್ದು. "ಏನೆಂದು ಕೊಂಡಾಡಿ ಸ್ತುತಿಸಲೋ ದೇವಾ I ನಾನೇನು ಬಲ್ಲೆ ನಿನ್ನಯ ಮಹಿಮೆ ಘನವಾ I" ಎಂಬ ಭಜನೆಯೇ ಇದೆ. ದೇವರ ಮಹಿಮೆ ಹೊಗಳಲು ನಮ್ಮ ಬುದ್ಧಿ ಸಾಲದು.!
ಹೈದರಾಬಾದಿಗೆ ಬಂದರೆ ಈ 'ಸಮಾನತೆಯ ಮೂರ್ತಿ' ಯನ್ನು ಅವಶ್ಯ ಸಂದರ್ಶಿಸಿ, ಧನ್ಯರಾಗಿ.!👌👌☺️☺️
No comments:
Post a Comment