Thursday, September 21, 2023

ವಿಕ್ರಮ ನಾಯಕ್

1966ರಲ್ಲಿ ಮಂಗಳೂರು ಕೇ ಪೀ ಟೀ ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಗೆ ಸೇರಿದೆ. ಹದಿನಾರರ ಹುಡುಗು ಪ್ರಾಯ, ಹೆಚ್ಚಿನ ಲೋಕಾನುಭವ ಇಲ್ಲ. ಕನಸು ಕಾಣುವ ಮನಸು ಹಾಗೂ ವಯಸ್ಸು. ಕಲಿಯುತ್ತಿರುವುದು ಡಿಪ್ಲೊಮಾ, ಆದರೆ ದೇಶದ ದೋಡ್ಡ ಇಂಜಿನಿಯರ್ ಆಗಬೇಕು, ದೇಶಸೇವೆ ಮಾಡಬೇಕು, ಸರ್ ಎಮ್. ವಿಶ್ವೇಶ್ವರಯ್ಯ ಆಗಬೇಕು... ಹೀಗೆ ಬೇಕುಗಳ ಪಟ್ಟಿ ಉದ್ದವಿತ್ತು. ಅದಕ್ಕೆ ಸರಿಯಾಗಿ ನಮ್ಮ ವಿದ್ಯಾಭ್ಯಾಸದ ಕ್ರಮವಿದ್ದಿತು. ಹಾಸ್ಟೆಲ್ ನಲ್ಲಿ ವಾಸ, ಅರುವತ್ತರ ದಶಕ, ಓದು+ಬರೆಹ ಬಿಟ್ಟು ಬೇರೆ ಹವ್ಯಾಸವೇ ಇರಲಿಲ್ಲ. 
ನಮ್ಮ ಆಶೋತ್ತರಗಳು ಏನೇ ಇರಲಿ, ನಮ್ಮ ಭವಿಷ್ಯ ನಮ್ಮ ಹಿಡಿತದಲ್ಲಿರಲಿಲ್ಲ. ನಾನು ಬೇಂಕು ಸೇರಿದೆ. ಇಂಜಿನಿಯರ್ ಆಗಿ ದೇಶಸೇವೆ ಮಾಡುವ ಖಯಾಲು ತುಂಬ ಸಮಯ ಕಾಡುತ್ತಿತ್ತು.

ನಮ್ಮ ವಿಕ್ರಮನ M I T ಮಣಿಪಾಲದಲ್ಲಿ ಇಂಜಿನಿಯರಿಂಗ್ ಎಡ್ಮಿಷನ್ ಗಾಗಿ ಅವನಿಗಿಂತ ನನ್ನ ಆತುರ, ತರಾತುರಿ ಅಥವಾ ಉದ್ವೇಗಗಳೇ ಅಧಿಕವಾಗಿದ್ದು. ಕಾಲೇಜಿಗೆ ನಾನೇ ದಾಖಲಾಗುತ್ತಿದ್ದೇನೋ ಎಂಬ ಸಂಭ್ರಮ.! ನಮ್ಮ ಎಲ್ಲಾ ಆಶೆ, ಆಕಾಂಕ್ಷೆಗಳನ್ನು ಪೂರ್ಣಗೊಳಿಸಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಫಲಪ್ರದ ಜೀವನ ನಡೆಸುತ್ತಿರುವ ಕುರಿತು ಬಹಳ ಗರ್ವವಾಗುತ್ತಿದೆ. ವಿದ್ಯಾರ್ಜನೆ ವಿಚಾರದಲ್ಲಿ ಹೆಬ್ರಿ ದೇವಣ್ಣ ನಾಯಕರ ಮಕ್ಕಳು ಮೊಮ್ಮಕ್ಕಳು ಒಬ್ಬರಿಗಿಂತ ಒಬ್ಬರು ಮೇಲು. ವಿದ್ಯೆ ಎಂಬ ಶಾಶ್ವತ ಸಂಪತ್ತನ್ನು ನಾವು ನಾವೇ ಕಷ್ಟಪಟ್ಟು ಗಳಿಸಬೇಕು ಎಂಬ ಹಿತೋಪದೇಶವನ್ನು ನಮ್ಮಮ್ಮ ಆಗಾಗ ನೀಡುತ್ತಿದ್ದರು.ಅವರ ಆಶಯದಂತೆ ಎಲ್ಲರೂ ಇಂದು ವಿದ್ಯಾ ವಿನಯಸಂಪನ್ನರಾಗಿ ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳು ನಡೆಸುತ್ತಿದ್ದಾರೆ..

ಇಂದು ವಿಕ್ರಮನ ಹುಟ್ಟುಹಬ್ಬ, ಅವನಿಗೆ ಶುಭ ಆಶೀರ್ವಾದಗಳು.

ಸೆಪ್ಟೆಂಬರ್ 19, 2023

Monday, September 18, 2023

ದರ್ಶನ...

ಮಹಾಭಾರತ ಯುದ್ಧದ ಸಮಯದಲ್ಲಿ ಪರಮಾತ್ಮನು ಅರ್ಜುನನಿಗೆ ಗೀತಾಬೋಧನೆ ಮಾಡುತ್ತಾನೆ. 'ನಿನಗೆ ನನ್ನ ಪೂರ್ಣ ಪ್ರಮಾಣದ ಭವ್ಯವಾದ ರೂಪವನ್ನು ನೋಡಲು ಕಷ್ಟವಾಗುತ್ತದೆ, ಆದ್ದರಿಂದ ನಿನಗೆ ದಿವ್ಯ ದೃಷ್ಟಿಯನ್ನು ಕೊಡುತ್ತೇನೆ...' ಅರ್ಜುನನೇನೋ ದಿವ್ಯದೃಷ್ಟಿಯ ಮೂಲಕ ಪರಮಾತ್ಮನ ವಿಶ್ವರೂಪವನ್ನು ನೋಡಿದ. ಆದರೆ ಪರಮಾತ್ಮನ ಗೆಳೆಯನಾದರೂ, ನಾರಾಯಣನ ಸಖ ನರನೆಂದು ಕರೆಯಲ್ಪಟ್ಟವನಾದರೂ ಆತನಿಂದ ಭಗವಂತನ ರೂಪ, ವೈಭವ, ಭವ್ಯತೆ, ತೇಜಸ್ಸು, ತೀಕ್ಣತೆ ಮತ್ತು ಅಗಾಧತೆಗಳನ್ನು ತಡಕೊಳ್ಳಲಾಗಲಿಲ್ಲ.! ಆತ ಬಹಳವೋ ಕೊಂಚವೋ ಆ ವೈಭವ ಅಗಾಧತೆಯನ್ನು ಅನುಭವಿಸಿರಬಹುದು....

ಈ ಭವ್ಯ-ಸೂಕ್ಷ್ಮಗಳ ವ್ಯಾಪ್ತಿಗಳನ್ನು ಅಳೆಯುವ ಅಥವಾ ಅನುಭವಿಸುವ ಮಾನದಂಡಗಳು ಯಾವುವು.? ಆಧುನಿಕ ವಿಜ್ಞಾನಿಗಳ ಪ್ರಕಾರ ನಮ್ಮ ಅನುಭವಕ್ಕೆ ಬರುವ ವಿಶ್ವದ ಗಾತ್ರವೇ 92 ಬಿಲಿಯ ಜ್ಯೋತಿರ್ ವರ್ಷಗಳು.! ಅದರ ಆಚೆ ನಮಗೆ ಅಗೋಚರವಾದ ನಮ್ಮ ವಿಶ್ವ ಎಷ್ಟು ದೊಡ್ಡದಿದೆ!!! ಯಾರಿಗೂ ಗೊತ್ತಿಲ್ಲ. 

ಕೆಲವು ವರ್ಷಗಳ ಹಿಂದೆ ಮುಳ್ಳಯ್ಯನಗಿರಿ ಪ್ರವಾಸ ಹೋಗಿದ್ದೆವು. ಕರ್ನಾಟಕ ರಾಜ್ಯದಲ್ಲಿನ ಆತ್ಯುನ್ನತ ಶಿಖರವದು. ನಮಗೆ ವಾಹನ ವ್ಯವಸ್ಥೆ ಇತ್ತು. ಅಲ್ಲಿನ ಶಿವದೇವಾಲಯವಿರುವ ಶಿಖರವನ್ನು ಮಾತ್ರ ಕಾಲ್ನಡಿಗೆಯಲ್ಲೇ ಹತ್ತಿ ಹೋಗಬೇಕು. ಕೆಳಗಿಂದ ದೇವಾಲಯದ ದಾರಿ, ಗುಡ್ಡದ ತುದಿ ಮತ್ತದರ ಮೇಲಿನ ನೀಲಿ ಬಣ್ಣದ ಶುಭ್ರ ಆಕಾಶ ಆಹಾ! ನೋಡಿಯೇ ಮನಸೋತೆ. ಒಮ್ಮೆ ಮನಸ್ಸು ಕಾವ್ಯಮಯ ಭಾವಮಯ ಆಯಿತು.! ಆ ಸಂಭ್ರಮದಿಂದ ಹೊರಬಂದು, ಮೇಲೆ ಯಾವುದೇ ಆಧಾರದ ಅನುಕೂಲತೆಗಳಿಲ್ಲದ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು ಎಂದಾಗ ಆ ಶಿಖರವನ್ನು ನನ್ನನ್ನು ಆವರಿಸಿಕೊಂಡ ಅಗಾಧ ಆಕಾಶ! - ಸ್ಪೇಸ್! - ಕಲ್ಪಿಸಿ ಹೆದರಿ ಹೋದೆ. ನಾನು ಬರೂದಿಲ್ಲ ನೀವು ಹೋಗಿ ಎಂದರೂ ಉಳಿದವರ ಒತ್ತಾಯದಂತೆ ಹೋದೆ, ದರ್ಶನ ಪಡೆದೆ, ಧನ್ಯನಾದೆ. 

ಇದೇ ಫೆಬ್ರವರಿ ತಿಂಗಳಲ್ಲಿ ಮಾನ್ಯ ಪ್ರಧಾನಿಯವರಿಂದ ಉದ್ಘಾಟಿಸಲ್ಪಟ್ಟ ಶ್ರೀ ರಾಮಾನುಜಾಚಾರ್ಯರ ಭವ್ಯಮೂರ್ತಿಯಿರುವ 'ಸಮಾನತೆಯ ಶಿಲ್ಪ' - Statue of Equality - ವೀಕ್ಷಿಸುವ ಸೌಭಾಗ್ಯ ಪ್ರಾಪ್ತವಾಯಿತು. ಹೈದರಾಬಾದ್ ನಗರದಲ್ಲಿ ಇದು ಸ್ಥಾಪಿತವಾಗಿದೆ. ದೇಶದಲ್ಲೇ ಅತ್ಯಂತ ಎತ್ತರದ ಕುಳಿತಿರುವ ಮೂರ್ತಿ ಇದಾಗಿದೆ. ಇನ್ನೂರ ಹದಿನಾರು ಅಡಿಗಳಷ್ಟು ಎತ್ತರ! ಕೆಳಗೆ ಮುಖ್ಯ ದೇವಳದಲ್ಲಿ ಶ್ರೀ ರಾಮಾನುಜಾಚಾರ್ಯರ ಚಿನ್ನದ ಮೂರುತಿಯೂ ಇದೆ. ಸುತ್ತಲೂ ಒಂದು ನೂರಾ ಎಂಟು ದೇವರ ಸುಂದರ ಗುಡಿಗಳಿವೆ. ಅತ್ಯಂತ ನಯನ ಮನೋಹರವಾದ ಶಿಲ್ಪಗಳು, ಮುಖ್ಯ ಮಂದಿರ ಹಾಗೂ ಇಡೀ ದೇವಾಲಯ ಸಮುಚ್ಚಯ! 

ಒಳಗೆ ಪ್ರವೇಶಿಸಲು ಸಿಕ್ಕಾಪಟ್ಟೆ ಇರುವ ಭದ್ರತಾನಿಯಮಗಳಿಂದ ಕೊಂಚ ಕಿರಿಕಿರಿ ಆದರೂ ಒಳಗೆ ಕಾಲಿಟ್ಟ ಕ್ಷಣಕ್ಕೆ ಎಲ್ಲಾ ಮಂಗಮಾಯವಾಗುತ್ತವೆ. ಎದುರಿಗೆ ಸೂರ್ಯನ ಕಿರಣಗಳಿಂದ ಫಳಫಳಿಸುವ ಬಂಗಾರದ ಬಣ್ಣದ ಭವ್ಯ ಮೂರ್ತಿ ನಮ್ಮ ಕಣ್ಣು, ಮನಸ್ಸು, ಬುದ್ಧಿ, ವ್ಯಕ್ತಿತ್ವ ಮತ್ತು ಆತ್ಮ ಇವೆಲ್ಲವನ್ನು ಪೂರ್ತಿಯಾಗಿ ಆವರಿಸುತ್ತದೆ. ಅದರ ಮಂದಹಾಸ ನಮ್ಮಲ್ಲಿ ಉತ್ಸಾಹ, ಧೈರ್ಯ, ಭಕ್ತಿ ಹಾಗೂ ಆನಂದವನ್ನು ಉಂಟುಮಾಡುತ್ತದೆ. ಕೆಳಗಿನ ಒಂದೊಂದೇ ಮೆಟ್ಟಿಲು ಹತ್ತಿ ಹೋದಂತೆ ಮೂರುತಿಯ ವೈಶಾಲ್ಯ ದ್ವಿಗುಣವಾದ ಅನುಭವದಿಂದ ಪೂರ್ತಿ ಹತ್ತಿದಾಗ ಆಗುವ ಅನುಭವ ಬಣ್ಣಿಸಲು ನನ್ನ ಜ್ಞಾನ ಸಾಲದು. ಮನಸ್ಸು, ಆ ಭವ್ಯ ಮೂರುತಿ ಹಾಗೂ ಅದನ್ನು ಮೇಲಿನಿಂದ ನಮ್ಮನ್ನೂ ಒಳಗೊಂಡು ಆವರಿಸಿದ ಆಕಾಶದ ಅಗಾಧತೆಯಿಂದ ಅದೇ ಆಕಾಶದಲ್ಲಿ ಕಳೆದುಹೋಗುತ್ತದೆ.! 'ಅಣೋರಣಿಯಾ ತೋ ಖಡಾ' ಎಂಬಂತೆ.! ಆ ಭವ್ಯ ಮೂರುತಿಯ ಮಂದಹಾಸವು ಭರವಸೆ, ಶಾಂತಿ, ಸಮಾಧಾನ ಹಾಗೂ ಆನಂದವನ್ನು ನೀಡುತ್ತದೆ.! 

ಅರ್ಜುನನ ವಿಶ್ವರೂಪ ದರ್ಶನಕ್ಕೆ ಮತ್ತವನ ಭಾವಗಳಿಗೆ ನನ್ನ ಪ್ರವಾಸಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು. ಪರಮಾತ್ಮನ ವೈಭವ ನನ್ನಂಥ ಹುಲುಮನುಜನ ಕಲ್ಪನೆಗಳನ್ನು ಮೀರಿದ್ದು. "ಏನೆಂದು ಕೊಂಡಾಡಿ‌ ಸ್ತುತಿಸಲೋ ದೇವಾ I ನಾನೇನು ಬಲ್ಲೆ ನಿನ್ನಯ ಮಹಿಮೆ ಘನವಾ I" ಎಂಬ ಭಜನೆಯೇ ಇದೆ. ದೇವರ ಮಹಿಮೆ ಹೊಗಳಲು ನಮ್ಮ ಬುದ್ಧಿ‌ ಸಾಲದು.!

ಹೈದರಾಬಾದಿಗೆ ಬಂದರೆ ಈ 'ಸಮಾನತೆಯ ಮೂರ್ತಿ' ಯನ್ನು ಅವಶ್ಯ ಸಂದರ್ಶಿಸಿ, ಧನ್ಯರಾಗಿ.!👌👌☺️☺️

Wednesday, September 13, 2023

ರಸಾನುಭವ (ಗ್ಯಾಸಾನುಭವ)

‘’ಕಸ್ಸನೇ ಮ್ಹಣಾತಿ, ರಾನ್ನಿ ಉಜ್ಜೇರಿ ಸಿಜ್ಲೇರೀ ತಾಕ್ಕ ಏಕ ರೂಚಿ.!”

(ಏನೇ ಹೇಳಿ, ಒಲೆಯ ಬೆಂಕಿಯಲ್ಲಿ ಬೆಂದರೇ ಅದಕ್ಕೊಂದು ರುಚಿ.!)  ಅಮ್ಮನ ಖಚಿತ ತೀರ್ಮಾನ. ತಂದೆಯವರೂ ಅದಕ್ಕೆ ತಲೆ ಆಡಿಸಿ ಸಮ್ಮತಿ ಸೂಚಿಸಿದರು. ಹಿರಿಯರ ಮಾತಿಗೆ ನಾವ್ಯಾರೂ ಅಡ್ಡ ಮಾತಾಡಲಿಲ್ಲ, ನಮ್ಮ ಒಪ್ಪಿಗೆ ಇತ್ತು ಎಂದಲ್ಲ. ವರ್ಷಾನು ಗಟ್ಟಲೆ ಒಂದು ವ್ಯವಸ್ಥೆಯಲ್ಲಿ ಇದ್ದವರಿಗೆ ಹೊಸ ಸಿಸ್ಟಂ - ಅನುಕೂಲತೆ ಹೆಚ್ಚಿರುವಂತಾದರೂ- ಒಪ್ಪಲು ಸಮಯ ತಗಲುತ್ತದೆ. ಹಾಗಾಗಿ ಮನೆಗೆ ಅಡುಗೆ ಅನಿಲದ ವ್ಯವಸ್ಥೆ ಆದಾಗ ನಮ್ಮ ಅಮ್ಮನ ಮೇಲಿನ ಒಬ್ಸರ್ವೇಷನ್ ಗೆ ಯಾರೂ ಟೀಕೆ ಟಿಪ್ಪಣಿ ಮಾಡಲಿಲ್ಲ.

ಸಾವಿರದಾ ಒಂಭೈನೂರ ಎಂಭತ್ತರ ದಶಕದಲ್ಲಿ ಬೇಂಕಿನ ಕ್ಲಾರ್ಕುಗಳಿಗೆ ಪ್ರಮೋಷನ್ನಿನ ಪೃಕ್ರಿಯೆ ಶುರುವಾಯಿತು. ಹತ್ತು ವರ್ಷಗಳಿಗಿಂತ ಹೆಚ್ಚು ಸರ್ವೀಸ್ ಆದವರಿಗೆ ಕೇವಲ ಇಂಟರ್ವ್ಯೂ, ಅದರಲ್ಲಿ ಪಾಸಾದರೆ ಆಫೀಸರ್ಆಗಿ ಪದೋನ್ನತಿ. ನಾನು ಪ್ರಮೋಷನ್ ವಿಚಾರದಲ್ಲಿ ಕೊಂಚ ನತದೃಷ್ಠ, ಸುಮಾರು ಹನ್ನೆರಡು ವರ್ಷಗಳು ಕಳೆದರೂ ಗುಮಾಸ್ತನಾಗಿಯೇ ಇದ್ದೆ. ಒಮ್ಮೆಯಂತೂ ಪ್ರಾಯ ಹಾಗೂ ಸರ್ವೀಸಿನಲ್ಲಿ ನನಗಿಂತ ಕಿರಿಯನಾದ ನನ್ನ ಸಹೋದ್ಯೋಗಿಯೊಬ್ಬರು ಪದೋನ್ನತಿ ಪಡೆದಾಗ ಐದಾರು ದಿನಗಳ ತನಕ ಮನದಲ್ಲಿ ಕಿರಿಕಿರಿ ಇತ್ತು. ಇರಲಿ ಸಲ ಬಿಡಬಾರದು ಎಂದು ಚನ್ನಾಗಿಯೇ ತಯಾರಿ ನಡೆಸಿದ್ದೆ. ತಯಾರಿ ಮಾಡುವುದೇನು, ಬ್ರಾಂಚಿನ ಎಲ್ಲ ಕೆಲಸಗಳನ್ನು ನಾನೇ ನಿರ್ವಹಿಸುತ್ತಿದ್ದೆ, ಹೆಚ್ಚೇನೂ ಓದುವ ಅಗತ್ಯ ಇರಲಿಲ್ಲ, ಆದರೂ ನನ್ನ ಮಟ್ಟಿಗೆ ಭರ್ಜರಿ ತಯಾರಿ ಮಾಡಿದ್ದೆ.

ಇಂಟರ್ವ್ಯೂ ಮಣಿಪಾಲ ಕೇಂದ್ರ ಕಛೇರಿಯಲ್ಲಿ, ಮಧ್ಯಾಹ್ನ ಎರಡರ ನಂತರ. ಗೆಳೆಯ ನಾಯಕರ ಮನೆಯಲ್ಲಿ ಊಟ. ನಿಗದಿತ ಸಮಯಕ್ಕಿಂತ ಅರ್ಧ ಘಂಟೆ ಮುಂಚಿತವಾಗಿಯೇ ಹೆಡ್ ಆಫೀಸಿನ ಮೂರನೇ ಮಾಳಿಗೆಯಲ್ಲಿ ಉಪಸ್ಥಿತರಾದೆವು. ಹೆಚ್ಚಿನವರು ಪರಿಚಿತರೇ. ಒಬ್ಬರು ಸ್ವಲ್ಪ ಹೆಚ್ಚೇ ಎನ್ನುವಷ್ಟು ನರ್ವಸ್ ಆಗಿದ್ದರು. ”ಮೊದಲು ಲೇಡೀಸ್ ಅವರ ಇಂಟರ್ವ್ಯೂ ಮುಗಿಸಿದರೆ ಯಾರದಾದರೂ ಆಕ್ಷೇಪಣೆ ಇದೆಯೇ?” ಅಲ್ಲಿನ ಅಧಿಕಾರಿ ವಿಚಾರಿಸಿದರು. ಯಾರಿಗೂ ಒಬ್ಜೆಕ್ಷನ್ ಇಲ್ಲ, ’ಸರಿ ಮೇಡಮ್ ನೀವು ಹೋಗಿಯಮ್ಮ.’ ಇಂಟರ್ವ್ಯೂ ಒಳಗೆ ಬೋರ್ಡ್ ರೂಮಲ್ಲಿ. ಸ್ಟಾಫ್ ಡಿಪಾರ್ಟಮೆಂಟಿನ ಗುಮಾಸ್ತೆ ಎದ್ದು ಹೋದರು.

ಸುಮಾರು ಐದು ನಿಮಿಷಗಳಾದವು. ”ಹೌದಾ ಮಾರಾಯರೇ, ಅವರಿನ್ನೂ ಬರಲಿಲ್ಲ!!” ನರ್ವಸ್ ಗೆಳೆಯರಿಗೆ ಆತಂಕ!

‘’ಅವರು ಅಲ್ಲಿ ಧಾತು ತಪ್ಪಿ ಬಿದ್ದಿದಾರೆ, ಟ್ರೀಟ್ ಮೆಂಟ್ ಆಗ್ತಾ ಉಂಟು.” ನಾಯಕರು ಒಂದು ಡೈಲಾಗು ಬಿಟ್ಟರು.

‘’ಹೌದಾ ಹಾಗಂತೀಯಾ!” ಈತ ಘಾಬರಿ ಬಿದ್ದು ಬಾತರೂಮಿಗೆ ಹೋಗಿ ಮುಖ ತೊಳೆದು ಬಂದರು.

‘’ಇದು ನೀನು ಮೂರನೇ ಸಲ ಬಾತ್ರೂಮಿಗೆ ಹೋಗೂದು! ನೀನು ಬಿಡು, ನಮ್ಮನ್ನೂ ನರ್ವಸ್ ಮಾಡುತ್ತಾ ಇದ್ದಿ. ಇನ್ನು ಮೇಲೆ ಎದ್ದರೆ ಕೈಕಾಲು ಕಟ್ಟಿ ಕೂರಿಸುತ್ತೇನೆ ಹುಶ್ಶಾರ್‍!” ನಾಯಕರು ಗದರಿಸಿದರು.

‘’ಅಲ್ಲ ಮಾರಾಯ! ಅವಳು ಇನ್ನೂ ಬರಲಿಲ್ಲ!?” ಅಷ್ಟರಲ್ಲಿ ಆಕೆ ಹೊರಬಂದರು. ಸೋಫಾದಲ್ಲಿ ಕೂತು ಮುಖ ಒರೆಸಿ ಕೊಂಡರು. ನಮಗೆ ತವಕ..

‘’ಏನು ಕೇಳಿದರು ಮೇಡಮ್?” ನಾಯಕರು ಮೌನ ಮುರಿದರು.

‘’ಎಂತದೂ ಗಾಬರಿ ಇಲ್ಲ ಮಾರ್ರೆ, ಎಲ್ಲ ನಮ್ಮ ಗುರುತದವರೇ. ಒಬ್ಬರು ಮಾತ್ರ ಬೇರೆ. ಒಳಗೆ ಹೋದ ಕೂಡಲೇ ಭಾರೀ ಆತ್ಮಿಯವಾಗಿ ವೆಲ್ ಕಮ್ ಮಾಡಿದರು. ರಿಲ್ಯಾಕ್ಸ್ ಮೇಡಮ್, ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದರೆ ಆನ್ಸರ್ಮಾಡಿ, ಗೊತ್ತಿಲ್ಲವಾದರೆ ಚಾಲಾಕಿತನ ಮಾಡಹೋಗಬೇಡಿ, ವಿ ಆರ್ಆಲ್ ಫ್ಯಾಮಿಲಿ ಹಿಯರ್‍, ಬೀ ಹೇಪ್ಪಿ ಕೇ? ಶಲ್ ವಿ ಸ್ಟಾರ್ಟ್? ಅಂತ ಹೇಳಿ ಸುರುಮಾಡಿದರು. ತುಂಬ ಫ್ರೆಂಡ್ಲಿ ವಾತಾವರಣವಿದೆ. ಘಾಭರಿ ಅಗತ್ಯವಿಲ್ಲ..."

ಎಲ್ಲರಿಗೂ ಸಮಾಧಾನವಾಯಿತು, ನರ್ವಸ್ ಮಾಮನನ್ನು ಬಿಟ್ಟು. ”ಇರಲಿ ಏನೇನು ಕೇಳಿದರು?’

‘’ನಾನು ಸ್ಟಾಫ್ ಸೆಕ್ಷನ್ನಿನವಳು. ನನ್ನ ಡಿಪಾರ್ಟ್ ಮೆಂಟಿಗೆ ಸಂಬಂಧಿಸಿದಂತೆ ಎರಡ್ಮೂರು ಪ್ರಶ್ನೆ, ಭಾಳ ಈಝಿ, ಒಂದೆರಡು ಇತರ ಬೇಂಕಿಂಗ್ ಪ್ರಶ್ನೆ, ಮತ್ತೆ ಜನರಲ್ ನೋಲೆಡ್ಜ್ ಕೊಶ್ಚನ್.”

‘’ಏನು?”

‘’ಪಿ ಎಲ್ ಅಂದರೇನು?”

ತಕ್ಷಣ ಈತ ಜನರಲ್ ನಾಲೆಡ್ಜ್ ಬುಕ್ಕನ್ನು ತಡಕಾಡತೊಡಗಿದ. ”ಅದನ್ನು ಯಾಕೆ ನೋಡ್ತೀ ಮಹರಾಯ! ಅವರಿಗೆ ಕೇಳಿ ಯಾಗಿದೆ. ಇನ್ನು ನಿನಗೆ ಕೇಳೂದಿಲ್ಲ, ಸುಮ್ಮನಿರು.” ಅಂದೆ. ರಿಜಿಸ್ಟರ್ನಲ್ಲಿ ಸಹಿಮಾಡಿ ಆಕೆ ನಿರ್ಗಮಿಸಿದರು.

‘’ಮಿ. .......... ನೀವು ಹೋಗಿನಮ್ಮ ನರ್ವಸ್ ಕೇಂಡಿಡೇಟು ಒಳಗೆ ಹೋದರು. ತನ್ನ ಹಿಂದಿನವರಿಗಿಂತ ಇವರ ಇಂಟರ್ವ್ಯೂ ಕೊಂಚ ದೀರ್ಘವಾಯಿತೆಂಬಂತೆ ನಮಗೆಲ್ಲ ಭಾಸವಾಯಿತು.

 ಅಲ್ಲ, ಜನ ಒಳಗೆ ನಿಜಕ್ಕೂ ಧಾತು ತಪ್ಪಿ ಬಿದ್ದಿದಾರಾ ಇವರೇ!” ಒಬ್ಬರು ಉದ್ಘರಿಸಿದರು. ಹೊರ ಬಂದ ಆಸಾಮಿ ಪೂರ್ಣ ದಿಗ್ಭ್ರಾಂತ ಸ್ಥಿತಿಯಲ್ಲಿದ್ದರು. ನೋಡಿ ಹೆಚ್ಚಿನವರು ಆಶ್ಚರ್ಯಚಕಿತರಾದೆವು. ’ಅವರು ಮನೆಗೆ ಹೋಗಲಿ ಬಿಡಿ, ಯಾರೂ ತೊಂದರೆ ಕೊಡಬೇಡಿ.’ ಎಂದು ಅಧಿಕಾರಿ ಹೇಳಿದಂತೆ ಯಾರೂ ಏನೂ ಟಿಪ್ಪಣಿ ಮಾಡಲಿಲ್ಲ. ಅಷ್ಟರಲ್ಲಿ ನನ್ನ ಹೆಸರು ಕರೆದರು.

ಇಂಟರ್ವ್ಯೂ ರೂಮಿನ ಡೋರ್ನೋಬ್ ತಿರುಗಿಸುತ್ತಿದ್ದಂತೆ ಮನಸ್ಸೊಮ್ಮೆ ಪೂರ್ತಿ ಬ್ಲ್ಯಾಂಕ್ ಆಯಿತು. ಪ್ರತೀ ಇಂಟರ್ವ್ಯೂ, ಪರೀಕ್ಷೆಗಳಲ್ಲಿ ಇದು ನನ್ನ ಅನುಭವ.

‘’ಕಮಾನ್ ಮಿಸ್ಟರ್ನಾಯಕ್,  ಹೇವ್ ಸೀಟ್, ಬೀ ರಿಲ್ಯಾಕ್ಸ್ಡ್ ಏಂಡ್ ಕಂಫರ್ಟೇಬಲ್..........” ಪ್ರಶ್ನೆಗಳು ಸುರುವಾದವು.

‘’ಹೆಡ್ ಆಫೀಸು ಮತ್ತು ಬ್ರಾಂಚುಗಳಲ್ಲಿ ಕೆಲಸ ಮಾಡಿ ಅನುಭವವಿದ್ದುದರಿಂದ ಯಾವುದೇ ರಗಳೆ ಆಗಲಿಲ್ಲ. ಒಂದು ವಿದೇಶೀ ವಿನಿಮಯದ ಕುರಿತಾದ ಪ್ರಶ್ನೆಗೆ ಯಾಮ್ ಸಾರಿ ಸರ್ಎಂದೆ.

ಕೊನೆಯಲ್ಲಿ ‘’ಡಿಗ್ರಿಯಲ್ಲಿ ಯಾವ ಸಬ್ಜೆಕ್ಟು?”

‘’ಹಿಸ್ಟರಿ, ಸೋಷಿಯಲ್ ಸಾಯನ್ಸ್ ಎಂಡ್ ಇಕೊನಾಮಿಕ್ಸ್ ಸರ್‍.”

‘’Who built Qutub Minar?’’

‘’I am sorry Sir, it is Qutb somebody, I am not so sure of his Dynasty name.’’

‘’What Mr. Nayak! I studied my History some 30 years ago, I still remember, his name is Qutub Ud Din Aibak….’’

ನಾನು ಮಾತಾಡಲಿಲ್ಲ. ಒಟ್ಟಾರೆ ಮೇಲೆ ಇಂಟರ್ವ್ಯೂ ತೃಪ್ತಿದಾಯಕವಾಗಿತ್ತು. ಎಲ್ಲರಿಗೂ ಧನ್ಯವಾದ ಹೇಳಿ ನಮಸ್ಕರಿಸಿ ವಾಪಸಾದೆ

ಯಾವುದಕ್ಕೂ ಇರಲಿ ಎಂದು ಉಡುಪಿಗೆ ಹೋಗಿ ಹೆಚ್ ಪಿ ಅವರ ಗ್ಯಾಸ್ ಕನೆಕ್ಷನ್ ಪಡಕೊಂಡು ಸಿಲಿಂಡರ್ಮನೆಗೆ ತಂದಿಳಿಸಿದೆ. ಹೆಚ್ ಪಿ ಕಂಪನಿಯವರದ್ದು ಆಗತಾನೆ ಸುರುವಾದ ಗ್ಯಾಸ್ ಮಳಿಗೆ. ಬಂದ ಬಂದ ಗ್ರಾಹಕರಿಗೆ ಕನೆಕ್ಷನ್ ಕೊಡುತ್ತಿದ್ದರು. ಸಿಂಡಿಕೇಟ್ ಬೇಂಕ್ ಮಣಿಪಾಲ ಬ್ರಾಂಚಿನ ನನ್ನ ಉಳಿತಾಯ ಖಾತೆಯ ಪಾಸ್ ಬುಕ್ ತೋರಿಸಿ ಪಡಕೊಂಡ ಕನೆಕ್ಷನ್. ಸಂಜೆಯ ಸಿ ಎಮ್ ಟಿ ಬಸ್ಸಿನಲ್ಲಿ ಅವರಿವರಿಗೆ ಕಿರಿಕಿರಿ ಕೊಟ್ಟು ಅನಿಲದ ಅಂಡೆ ಮನೆಗೆ ಇಳಿಸುವಾಗ ಸಾಕು ಸಾಕಾಯಿತು. ಅದರಲ್ಲಿ ಮಾಡಿದ ಪ್ರಥಮ ಅಡುಗೆಯ ಕುರಿತು ಮೇಲಿನಂತೆ ಅಮ್ಮನ ಜಜ್ಜಮೆಂಟು!

---00000---

1980 ರಲ್ಲಿ ಪ್ರಮೋಷನ್ ಟೆಸ್ಟ್ ನಡೆದಿತ್ತು. ಹಿಂದಿನ ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಿದವರೆಲ್ಲರನ್ನು ಪದೋನ್ನತಿ ಕೊಟ್ಟು ಆಫೀಸರ್ಮಾಡಿ ಕಳಿಸಲಾಗಿತ್ತು. ಆದರೆ ಮೊದಲ ಬಾರಿ ಸುಮಾರು 1200ರಷ್ಟು ಮಂದಿ ಪಾಸಾಗಿದ್ದು ಎಲ್ಲರಿಗೂ ಇಂಟರ್ವ್ಯೂ ಮಾಡಿ : ನಿಷ್ಪತ್ತಿಯಲ್ಲಿ ಸೆಲೆಕ್ಷನ್ ಮಾಡುವ ಪೃಕ್ರಿಯೆ ಸುರುವಾಯಿತು. ಇಂಟರ್ವ್ಯೂನಲ್ಲಿ ನನ್ನ ಕೈ ಕೆಳಗಾಗಿ ನನ್ನ ಸಹೋದ್ಯೋಗಿ ಉತ್ತೀರ್ಣರಾದರು.

‘’ನಾಯಕ್ ಮಾಮು ಏಮ್ ಸೊರಿ ಫೊರ್ಯೂಮರುದಿನ ಬೆಳಗ್ಗೆ ಸಹಾನುಭೂತಿ ಹೇಳಿದರು.

‘’ಹಾಗೇಕೆ ಹೇಳುತ್ತೀ, ನಿನ್ನ ಪ್ರಮೋಷನ್ ಕುರಿತು ನನಗೆ ಬಹಳ ಖುಷಿಯಿದೆ, ಕಂಗ್ರಾಂಟ್ಸ್. ನನಗೂ ಪಾಸಾಗುವ ಭರವಸೆ ಇತ್ತು, ದೇವರ ಇಚ್ಛೆ ಬೇರೆ ಇತ್ತೇನೋ. ಇರಲಿ, ಮುಂದೆ ಸಿಗಬಹುದು.” ಅವರ ಮನಸ್ಸು ಪ್ರಫುಲ್ಲವಾಯಿತು.

ಮನಸ್ಸಿನ ಮೂಲೆಯಲ್ಲಿ ಮಾತ್ರ ನಪಾಸಾದ ಬಗ್ಗೆ ಕಿರಿಕಿರಿ ಇದ್ದೇ ಇತ್ತು. ನನ್ನ ಚಿಂತೆಯನ್ನು ನರ್ಸಿಮ್ಮ ಮಾಮನ ಬಳಿ ತೋಡಿ ಕೊಂಡೆ.

‘’ನಿನಗೆ ನಾನು ಮೊದಲೇ ಹೇಳಿದ್ದೇನೆ, ನಮ್ಮಿಂದ ಇತರರಿಗೆ, ಸಮಾಜಕ್ಕೆ ಆದಷ್ಟು ಸೇವೆ ಮಾಡಬೇಕು, ಆಗಲಿಲ್ಲವೋ ಬೇರೆಯವರ ಒಳ್ಳೆಯದನ್ನೇ ಯೋಚಿಸಬೇಕು. ಎಲ್ಲರ ಬಳಿ ಶ್ರೀಮಂತಿಕೆ ಇರೂದಿಲ್ಲ, ಆದರೆ ಹೃದಯ ಶ್ರೀಮಂತಿಕೆಯನ್ನು ನಾವೇ ಬೆಳೆಸಿಕೊಳ್ಳಬಹುದಲ್ಲ! ನಮ್ಮ ಹಿರಿಯರು ಮುಂಚಿನಿಂದಲೂ ದೇವರು, ಧರ್ಮ, ಗುರುಹಿರಿಯರಲ್ಲಿ ಭಕ್ತಿ ಇಟ್ಟುಕೊಂಡೇ ಬಂದವರು. ನೋಡು, ಮೇಲೆ ಒಬ್ಬ ಕೂತುಕೊಂಡು ನೋಡ್ತಾ ಇರ್ತಾನೆ, ಅವನ ಬಳಿ ನಮ್ಮೆಲ್ಲರ ಲೆಕ್ಕಾಚಾರ ಬೂಕು ಇದೆ. ನಮಗೇನೋ ಅರ್ಜಂಟಿದೆ. ಆದ್ರೆ ಅವನಿಗಿಲ್ಲ, ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಮಾಡುತ್ತಾನೆ, ನೀನು ನಿಶ್ಚಿಂತೆಯಾಗಿರು, ಎಲ್ಲಾ ಆಗೂದು ಒಳ್ಳೇದಕ್ಕೇ.” ಸಮಾಧಾನ ಮಾಡಿದರು

ಬಹಳ ಕಾಲದಿಂದ ಹೆಬ್ರಿಯಲ್ಲಿ ಒಂದು ಗೂಡು ಕಟ್ಟಿಕೊಳ್ಳಲಾಗಲಿಲ್ಲವಲ್ಲ ಎಂಬ ಚಿಂತೆ ತಂದೆಯವರನ್ನು ಕಾಡುತ್ತಿತ್ತು. ಪ್ರಯತ್ನ ನಡೆಸಿ ನಡೆಸಿ ಕೊನೆಗೆ 1980ರಲ್ಲಿ ಹೌಸಿಂಗ್ ಲೋನು ಮಾಡಿ ಈಗಿನ ಮನೆಅಡಿ ಖರೀದಿಸಿದೆವು. ತಂದೆಯವರ ಖುಷಿಗೆ ಪಾರವೇ ಇರಲಿಲ್ಲ. ’ತಾಂತ್ರಿಕ ಕಾರಣಗಳಿಂದ ಮಾತ್ರ ಜಾಗ ನನ್ನ ಹೆಸರಲ್ಲಿರೋದು. ಮನೆಯ ಯಜಮಾನ ಮಾತ್ರ ನೀವೇಅವರಿಗೆ ಸಂತಸವಾಯಿತು. ನಿಶ್ಚಿಂತೆಯಾದರು.

ಎಮ್ ಎಸ್ ಸಿ ಮುಗಿಸಿ ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬೇಸರದಿಂದ ಇದ್ದ ಪ್ರಕಾಶನಿಗೆ ೧೯೮೨ ರಲ್ಲಿ ಪುತ್ತೂರು ವಿವೇಕಾನಂದ ಕಾಲೇಜಲ್ಲಿ ಪೂರ್ಣ ಪ್ರಮಾಣದ ಲೆಕ್ಚರರ್ನೌಕರಿ ದೊರೆಯಿತು, ನಮ್ಮ ಫ್ಯಾಮಿಲಿಯಲ್ಲಿ ಇದೊಂದು ಪ್ರಮುಖ ಘಟ್ಟ. ಎಲ್ಲರಿಗೂ ಖುಷಿ, ಉತ್ಸಾಹ. ಕಾಲೇಜು ಹಾಸ್ಟೆಲ್ ವಾರ್ಡನ್ ಆಗಿ ನಿಯುಕ್ತಿಯಾಗಿ ಕಾಲೇಜು ಹಾಗೂ ಹಾಸ್ಟೆಲು ಎರಡೂ ಕಡೆ ಒಳ್ಳೇ ಹೆಸರು ಇತ್ತು. ಯುವಪ್ರಾಯದ ಲೆಕ್ಷರರ್‍, ಮಕ್ಕಳನ್ನು ಕಟ್ಟಿಕೊಂಡು ಟ್ರೆಕಿಂಗ್, ಸೈಕಲ್ ಪಯಣ, ಕಾಡು ಗುಡ್ಡಗಳನ್ನು ಹತ್ತುವುದು ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡ ತಾನೂ ತನ್ನೊಟ್ಟಿಗೆ ಉತ್ಸಾಹೀ ಹುಡುಗರ ತಂಡವನ್ನು ತಯಾರು ಮಾಡಿದ. ಕುಲದೀಪ ಅದೇ ಕಾಲೇಜಲ್ಲಿ ಬಿ ಬಿ ಎಮ್ ಪದವಿ ಕಲಿಯಲು ಪುತ್ತೂರು ಸೇರಿದ. ೧೯೮೩ರಲ್ಲಿ ಶ್ರೀಮತಿ ಮದುವೆಯಾಗಿ ಪುತ್ತೂರು ಸೇರಿದಳು. ಮೋಹನದಾಸ ಪುತ್ತೂರು ನೆಹರೂನಗರದಲ್ಲಿ ರೇಷನ್ ಅಂಗಡಿ ತೆರೆದ. ನಾಗೇಶ ಸಿ ಮಾಡಲು ಪುತ್ತೂರು ನಗರ ತಲಪಿದ. ಮೇಲೆ ಕೂತು ನಮ್ಮೆಲ್ಲರ ಲೆಕ್ಕ ಬರೆಯುತ್ತಿದ್ದವ ಸರಿಯಾಗೇ ಬರೆದಿದ್ದ ಎಂದು ಈಗ ಮನದಟ್ಟಾಗುತ್ತಿದೆ! ಅವನಿಗೆ ಗಡಿಬಿಡಿ ಇಲ್ಲ. ಸರಿಯಾದ ಸಮಯಕ್ಕೆ ಸರಿಯಾದುದನ್ನೇ ಮಾಡುತ್ತಾನೆ. ಇಷ್ಟೆಲ್ಲ ವಿದ್ಯಮಾನ ಗಳಾಗಿ ನನ್ನ ಇಂಟರ್ವ್ಯೂ ಮುಗಿದು ಫಲಿತಾಂಶದ ನಿರೀಕ್ಷೆಯಲ್ಲಿದ್ದೆ. ಕೊನೆಗೂ ಅಧಿಕಾರಿಯಾಗಿ ರಾಣೀ ಝಾನ್ಸಿ ರೋಡ್ ಬ್ರಾಂಚು ನವದೆಹಲಿಗೆ ಪೋಸ್ಟಿಂಗ್ ಆಯಿತು.

---00000---

1984 ಮೇ ತಿಂಗಳಲ್ಲಿ ದೆಹಲಿ ತಲಪಿದೆ. ಮೊದಲು ಹೋಗಿ ಕೆಲಸಕ್ಕೆ ಹಾಜರಾಗಲು, ಮತ್ತೆ ನಮಗೆ ಅನುಕೂಲವಾದಾಗ ರಜೆ ಪಡೆದು ಕುಟುಂಬವನ್ನು ಕರಕೊಂಡು ಹೋಗುವ ಮೂರೂ ಪ್ರಯಾಣಕ್ಕೆ ಅನುಮತಿ ಇತ್ತು. ಹಾಗಾಗಿ ನಾನೊಬ್ಬನೇ ಹೊರಟೆ. ದಿಲ್ಲಿಯಲ್ಲಿ ನನ್ನ ಗುರು, ಗೆಳೆಯ, ಮತ್ತು ಹಿತೈಷಿ ಎಲ್ಲವೂ ಆಗಿದ್ದ ಮಲ್ಯರಲ್ಲಿ ಪೂರಾ ಎರಡು ತಿಂಗಳಿದ್ದೆ. ಅಗೋಸ್ತು ತಿಂಗಳಲ್ಲಿ ನನಗೆ ನೆನಪಿದ್ದಂತೆ 79 B, ಪ್ರಸಾದನಗರ ಮನೆಗೆ ಶಿಫ್ಟ್ ಆದೆವು, ಎಲ್ ಜಿ ಶ್ರೇಣಿಯ ಮನೆ, ನಮ್ಮ ಬ್ರಾಂಚಿಗೆ ಹತ್ತಿರ. ಮನೆಗೆ ಶಿಫ್ಟ್ ಆದ ಮರುದಿನ ಹತ್ತಿರದ ಪಟೇಲನಗರದಲ್ಲಿದ್ದ ಗ್ಯಾಸ್ ಏಜನ್ಸಿ ಆಫೀಸಿಗೆ ಹೋದೆ.

‘’ಹಾಂಜಿ ಕಹಿಯೆ?”

‘’ಮೆ ಕರ್ನಾಟಕಾ ಸೆ ರಹಾ ಹೂಂ, ಯಹಾಂ ಬೇಂಕ್ ಮೆ ಕಾಮ್ ಕರತಾ ಹೂಂ. ಗ್ಯಾಸ್ ಕನೆಕ್ಷನ್ ಲೇನಾ ಥಾ.” ಸಂಬಂಧ ಪಟ್ಟ ಎಲ್ಲಾ ಕಾಗದಪತ್ರಗಳನ್ನು ಲಗತ್ತಿಸಿ ಅರ್ಜಿ ಕೊಟ್ಟೆ.

‘’ಆಪ್ ಕರ್ನಾಟಕ್ ಸೆ ಆತೇ ಹೋ, ಔರ್ಇತನೀ ಅಚ್ಛೀ ಹಿಂದೀ ಬೋಲ್ ಲೇತೆ ಹೋ, ವ್ಹಾ ಭೈ ವ್ಹಾ, ಬಹುತ್ ಬಡಿಯಾ!” ಅಲ್ಲಿನ ಸಿಬಂದಿಗಳಿಗೆ ಬಹಳ ಖುಷಿ. ನನ್ನ ಕೆಲಸ ಮುತುವರ್ಜಿ ವಹಿಸಿ ಮಾಡಿ ಕೊಟ್ಟರು.

‘’ನನಗೆ ಹಿಂದೀ ಭಾಷೆಯ ಮೇಲೆ ವಿಶೇಷ ಪ್ರೀತಿ, ಹಾಗಾಗಿ ಹಿಂದಿಯಲ್ಲೇ ಸಾಮಾನ್ಯವಾಗಿ ವ್ಯವಹರಿಸುತ್ತಿದ್ದೇನೆ, ಮಾತುಕತೆಯಲ್ಲಿ ಏನಾದರೂ ಗಲತಿ ಇದ್ದರೆ ಕ್ಷಮಾ ಮಾಡಬೇಕು.” ನನ್ನ ಅನುನಯದ ಮಾತುಗಳಿಗೆ ಅವರು ಪೂರಾ ಸೋತರು.

‘’ಒಂದು ವಿನಂತಿ ಇದೆ. ನಮ್ಮಲ್ಲಿ ಫೋನು ಇಲ್ಲ, ನನ್ನ ಮನೆಯವರ ಹಿಂದಿ ಭಾಷಾ ಜ್ಞಾನ ತುಂಬಾ ಸೀಮಿತವಾದುದು. ಅಲ್ಲದೆ ಮಕ್ಕಳನ್ನು ಬಿಟ್ಟು ಮನೆಯ ಹೊರಗೆ ಹೋಗುವ ಹಾಗಿಲ್ಲ. ಆದ್ದರಿಂದ ಗ್ಯಾಸ್ ಸಿಲಿಂಡರ್ಸಪ್ಲೈಗಾಗಿ ಬೇಂಕಿಗೆ ಹೋಗಿಯೇ ಫೋನ್ ಮಾಡಬೇಕಾಗುತ್ತದೆ. ದಯವಿಟ್ಟು ನನ್ನ ಫೋನು ಬಂದ ತಕ್ಷಣ ಗ್ಯಾಸ್ ಸಪ್ಲೈ ಮಾಡಬೇಕು.”

‘’ಭಾಯಿಸಾಬ್ ಆಪ್ ಚಿಂತಾ ಕರೋ, ದಸ್ ಬಜೇ ಕಾಲ್ ಕರೋ, 11 ಯಾ 12 ಕೆ ಅಂದರ್ಅಂದರ್ಸಿಲಿಂಡರ್ಆಪಕಾ ಘರ್ಪಹುಂಚೇಗಾ. ನಿಶ್ಚಿಂತ್ ರಹೋ.”

ಆಪಕಾ ಮೆ ಬಹೂತ್ ಆಭಾರೀ ಹೂಂನಾನು ವಾಪಸಾದೆ.

79 B ಮನೆಯಲ್ಲಿ ಸುಮಾರು ಐದು ವರ್ಷವಿದ್ದೆವು. ನನ್ನ ದೆಹಲಿ ಸರ್ವೀಸು ಮತ್ತು ಜೀವನ ಬಹಳ ಸುಖಮಯವೆಂದೇ ಹೇಳ ಬಹುದು. ಗುಪ್ತರ ಕಾಲವು ಭಾರತದ ಸುವರ್ಣಯುಗ ಎಂದು ಚರಿತ್ರೆ ಪಾಠಗಳಲ್ಲಿ ನಮಗೆ ಓದಿದ ನೆನಪು. ದೆಹಲಿ ಸರ್ವೀಸು ನನ್ನ ಜೀವನದ ಸುವರ್ಣಯುಗ ಎನ್ನಬಹುದು. ಬ್ರಾಂಚಿನಲ್ಲಿ ದೋಸ್ತಿ, ಜಗಳ, ಒಳ್ಳೆಯ ಮತ್ತು ಸಿಟ್ಟಿನ ಮಾತುಗಳು ಇದ್ದಿರ ಬಹುದು. ಅವೆಲ್ಲ ಪಾರ್ಟ್ ಆಫ್ ಪಾರ್ಸೆಲ್. ನನ್ನದು ಸಹೋದ್ಯೋಗಿ ಮತ್ತು ಗ್ರಾಹಕರೊಡನೆ ಅತ್ಯುತ್ತಮ ಹೊಂದಾಣಿಕೆ, ಗೆಳೆತನ ಮತ್ತು ಪ್ರೀತಿ ವಿಶ್ವಾಸಗಳಿದ್ದವು.

ಪ್ರಸಾದನಗರದಲ್ಲಿದ್ದ ಐದೂ ವರ್ಷಗಳಷ್ಟು ಕಾಲ ಗ್ಯಾಸ್ ಏಜನ್ಸಿಯವರ ಸರ್ವಿಸ್ ಅಷ್ಟೂ ಚೆನ್ನಾಗಿತ್ತು. ಅವರಿತ್ತ ಮಾತಿನಂತೆ ಹತ್ತು ಘಂಟೆಗೆ ಫೋನ್ ಮಾಡಿದರೆ ಕರಾರುವಾಕ್ಕಾಗಿ ಹನ್ನೊಂದೂವರೆಯ ಒಳಗೆ ಸಿಲಿಂಡರ್ಮನೆ ಬಾಗಿಲಲ್ಲಿ ರೆಡಿ.! ಅಡುಗೆ ಅನಿಲದ ಸಪ್ಲೈ ವಿಚಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅವರೇ ಮುಂಚಿತವಾಗಿ ಮಾಹಿತಿ ಕೊಡುತ್ತಿದ್ದರು. ನಾವು ಬೇಸಿಗೆ ರಜೆಗೆಂದು ಬರುವಾಗ ಅವರಲ್ಲಿ, ಹಾಲಿನ ಭೈಯ್ಯಾ ಮತ್ತು ನೆರೆಮನೆಯವರೊಡನೆ ಮಾತ್ರ ಹೇಳಿ ಬರುತ್ತಿದ್ದೆವು.

ಸಮಸ್ಯೆಗಳು ಇರಲೇ ಇಲ್ಲ ಎಂದೇನೂ ಅಲ್ಲ. ಒಮ್ಮೆ ಶುಕ್ರವಾರದ ಬೆಳಗ್ಗಿನ ತಿಂಡಿ ಕಾರ್ಯಕ್ರಮ ನಡೆಯುತ್ತಿರುವಾಗ ಗ್ಯಾಸ್ ಮುಗಿಯಿತು, ’ನೋಡಿ ನೀವು ಇರುವಾಗಲೇ ಸಿಲಿಂಡರ್ಖಾಲಿಯಾದದ್ದು ಒಳ್ಳೇದಾಯ್ತು, ಗೇಸ್ ಕಂಪೆನಿಗೆ ಫೋನ್ ಮಾಡಿ.’ ಅದರಂತೆ ಬ್ರಾಂಚಿನಿಂದ ಫೋನ್ ಮಾಡಿದೆ.

‘’ಆಯ್ತು ಕಳಿಸುತ್ತೇವೆ ಸರ್‍.” ನಾನು ನಿರಾಳವಾದೆ. ಸಂಜೆ ಮನೆಗೆ ಹೋದಾಗ ಗ್ಯಾಸ್ ಬಂದಿರಲಿಲ್ಲ. ಮರುದಿನವೂ ಬರಲಿಲ್ಲ, ಆದಿತ್ಯವಾರ ರಜೆ. ಸೋಮವಾರ ಪುನಃ ಫೋನ್ ಕರೆ ಹಚ್ಚಿದೆ. ರಿಂಗ್ ಟೋನ್ ಕೇಳುತ್ತಿತ್ತೇ ವಿನಃ ಜವಾಬಿಲ್ಲ.ಸಂಜೆ ಅನುಮತಿ ಪಡೆದು ಕೊಂಚ ಬೇಗನೆ ಮನೆಗೆ ಬಂದು ಸಿಲಿಂಡರ್ಸಪ್ಲೈ ಆಗಿಲ್ಲದ್ದನ್ನು ಗಮನಿಸಿ ಸ್ವಲ್ಪ ಸಿಟ್ಟಿನಲ್ಲೇ ಹೊರಟೆ. ಏಜೆನ್ಸಿಯ ಕಛೇರಿ ಬಾಗಿಲು ಅರ್ಧ ತೆರೆದಿತ್ತುದೇಖಿಯೆ ಮೇಡಮ್.......”

‘’ಸರ್‍, ಹಮಾರಿ ಮಾಲಕಿನ್ ಕೆ ಘರ್ಮೇ ಕುಛ್ ದುರ್ಘಟನಾ ಘಟೀ ಹೈ.. ಆದ್ದರಿಂದ - ದಿನಗಳಿಂದ ಸಪ್ಲೈಯಲ್ಲಿ ಕೊಂಚ ತೊಡಕಾಗಿದೆ, ಕ್ಷಮಿಸಿ, ನಿಮ್ಮ ಸಿಲಿಂಡರನ್ನು ಈಗಲೇ ನಿಮ್ಮ ಹಿಂದೇನೇ ಕಳಿಸುತ್ತಿದ್ದೇವೆ.”

ನಾನು ನಿರುತ್ತರನಾದೆ. ಎರಡು ಸಮಾಧಾನದ ಮಾತುಗಳನ್ನು ಹೇಳಿ ಮರಳಿದೆ. ನಾನು ಮನೆಗೆ ಬರುವಷ್ಟರಲ್ಲಿ ಗ್ಯಾಸ್ ಅಂಡೆ ಮನೆ ತಲಪಿತ್ತು.

ಇತರೇ ಆಫೀಸುಗಳಲ್ಲಿ, ಸಪ್ಲೈ ಕೇಂದ್ರಗಳಲ್ಲಿ ನಾಲಕ್ಕು ಸವಿನಯದ ಮಾತು ನಡವಳಿಕೆಗಳಿದ್ದರೆ ಯಾವಾಗಲೂ ಸುಲಲಿತ ಸೇವೆ-ಸರ್ವೀಸು ದೊರೆಯುತ್ತದೆ. ಇದು ನನ್ನ ಅನುಭವ

---00000---

ನಿವೃತ್ತಿ ಆದ ನಂತರ ನಮ್ಮದು ಬೆಂಗಳೂರಲ್ಲಿ ವಾಸ. ಯಥಾ ಪ್ರಕಾರ ಮನೆಯ ಹತ್ತಿರದ ಒಂದು ಗ್ಯಾಸ್ ಏಜನ್ಸಿಯಿಂದ ಸಿಲಿಂಡರ್ಡೆಲಿವರಿ. ಅವರೂ ಸಹ ಕ್ಲಪ್ತ ಸಮಯಕ್ಕೆ ಸಪ್ಲೈ ಮಾಡುತ್ತಿದ್ದರು. ಈಗ ದೇಶದಲ್ಲಿ ಅನಿಲ ಪೂರೈಕೆ ತತ್ವಾರವಿಲ್ಲ. ಸಮಸ್ಯೆ ಕೇವಲ ಬಟವಾಡೆಯ ಕ್ರಮಗಳಲ್ಲಿರುತ್ತಿತ್ತು. ಆದರೆ ಇವರದ್ದು ಹಾಗಲ್ಲ. ಒಳ್ಳೆಯ ಪ್ರಾಂಪ್ಟ್ ಸೇವೆ. ಕೋವಿಡ್ ಯುಗ ಕಳೆದ ನಂತರ ನಮ್ಮದು ಹೆಬ್ರಿ ವಾಸ ಖಾಯಂ ಆಯಿತು. ನಮ್ಮ ಹೆಸರಿನ ಇಂಡೇನ್ ಅನಿಲ ಸಂಪರ್ಕವನ್ನು ಹೆಬ್ರಿಗೆ ವರ್ಗಾಯಿಸಲು ಏಜನ್ಸಿಯ ಕಛೇರಿಗೆ ಹೋದೆ.

‘’ಆಧಾರ್‍ ‌ಕಾರ್ಡ್ ಜೆರಾಕ್ಸು, ಮತ್ತು ವೋಚರ್ತನ್ನಿ.”

‘’ವೋಚರ್ಇಲ್ಲವಲ್ಲ, ತುಂಬ ಹುಡುಕಾಡಿದೆ, ಸಿಗಲಿಲ್ಲ. ಊರಲ್ಲಿ ಕಾಲ್ ಮಾಡಿ ಹುಡುಕಲು ಹೇಳಿದ್ದೇನೆ, ಸಿಕ್ಕರೆ ತಂದು ಕೊಡುತ್ತೇನೆ. ಸಿಗದಿದ್ದರೆ ಏನು ಮಾಡುವುದು?”

‘’ಈ ಕಾಗದಕ್ಕೆ ಸಹಿ ಮಾಡಿ ಕೊಡಿ.”

‘’ಎರಡು ದಿನಗಳ ಬಳಿಕ ಎರಡೂ ಖಾಲಿ ಸಿಲಿಂಡರ್ಮತ್ತು ಅವರು ಹೇಳಿದ ಕಾಗದಪತ್ರಗಳನ್ನೊಯ್ದು ನೀಡಿದೆ.

‘’ಅರ್ಧ ಘಂಟೆ ಆಗುತ್ತದೆ, ಕಾಯಬೇಕು.”

ಕಛೇರಿಯಲ್ಲಿ ಯಾರೂ ಇರಲಿಲ್ಲ. ಎರಡು ನಿಮಿಷಗಳು ಕಳೆದವು. ”ನಿಮ್ಮ ವಿಸಿಟರ್ಸ್ ಬುಕ್ಕೊಡಿ.”

‘’ಏಕೆ.?”

‘’ನಾವು ಸುಮಾರು ಎಂಟು ವರ್ಷಗಳಿಂದ ನಿಮ್ಮ ಮೂಲಕ ಗ್ಯಾಸು ಪಡೆಯುತ್ತಿದ್ದೇವೆ, ನಿಮ್ಮ ಡೆಲಿವರಿ ಸಿಸ್ಟಮ್ಮು ಅಷ್ಟು ಚೆನ್ನಾಗಿದೆ. ಯಾವುದೇ ನ್ಯೂನತೆಗಳಿಲ್ಲ. ಅಷ್ಟು ಪ್ರಾಂಪ್ಟ್ ಸರ್ವೀಸು ಇಂದಿನ ದಿನಗಳಲ್ಲಿ ಅಪರೂಪ. ವಾಂಟ್ ಟು ಕನ್ವೇ ಮೈ ಅಪ್ರಿಸಿಯೇಷನ್. ಬುಕ್ಕು ಕೊಡಿ.”

‘’ಯಾರು ಬರುತ್ತಿದ್ದ, ವೆಂಕಟೇಶನಾ?”

‘’ಅವರ ಹೆಸರು ನಮಗೆ ಗೊತ್ತಿಲ್ಲ. ಬಟ್ ಅವರ ಸರ್ವೀಸ್ ಮಾತ್ರ ಸೂಪರ್‍, ಅದು ತಾನೇ ಮುಖ್ಯ..!”

‘’ವಿಸಿಟರ್ಸ್ ಬುಕ್ಕಲ್ಲಿ ನಾಲಕ್ಕು ವಾಕ್ಯ ಒಳ್ಳೆಯ ಮಾತುಗಳನ್ನು ಬರೆದು ಸಹಿ ಮಾಡಿ ಕೊಟ್ಟೆ.

ಪೆನ್ನಿನ ಕ್ಯಾಪ್ ಮುಚ್ಚಿ ಕಿಸೆಯಲ್ಲಿಡುವುದರೊಳಗೆ ಟ್ರಾನ್ಸ್ ಫರ್ವೋಚರ್ ರೆಡಿಮಾಡಿ ಕೈಯಲ್ಲಿ ಕೊಟ್ಟರು. ಒಂದು ಮುಗುಳು ನಗೆಯ ಥ್ಯಾಂಕ್ಸ್ ಬೇರೆ.....

---00000---