ಭಾಗವತದಲ್ಲಿ ಒಂದು ಎಪಿಸೋಡು ಬರುತ್ತದೆ...
ಬಾಲ್ಯದಲ್ಲಿ ಶ್ರೀಕೃಷ್ಣನ ಬಾಲಲೀಲೆಗಳು-ಮುಖ್ಯವಾಗಿ ಉಪಟಳಗಳು-ಊರ ಗೋಪಿಕಾ ಸ್ತ್ರೀಯರ ಮೇಲೆ ಬಹಳವಿತ್ತು. ನಮ್ಮ ಮನೆಯ ಬೆಣ್ಣೆ ಕದ್ದ, ನಮ್ಮ ಮೊಸರಿನ ಗಡಿಗೆ ಒಡೆದು ಹಾಕಿದ, ನಮ್ಮ ಅಡಿಗೆ ಮನೆಯೆಲ್ಲಾ ಹಾಲು ಬೀಳಿಸಿ ರಂಭಾಲೂಟಿ ನಡೆಸಿದ ಹಾಗೆ ಹೀಗೆ ಎಂದು ಹತ್ತು ಹಲವಾರು ತಗಾದೆಗಳನ್ನು ತಗಲಿ ಹಾಕಿಕೊಂಡು ತಾಯಿ ಯಶೋಧೆಯ ಬಳಿ ದೂರು ತರುತ್ತಿದ್ದರು. ಕೃಷ್ಣನನ್ನು ನೋಡಿ ಮುದ್ದಾಡಲೆಂಬ ಮೂಲ ಉದ್ದೇಶದಿಂದಲೇ ಇವರು ಬರುತ್ತಿದ್ದರು. ಒಮ್ಮೆಯಂತೂ ಸೀರಿಯಸ್ ಕಂಪ್ಲೇಂಟು ಹೋಯಿತು-'ಮಥುರೆಯ ಸಂತೆಗೆ ಹೋಗುವಾಗ ನಮ್ಮನ್ನು ಓಡಿಸಿಕೊಂಡು ಬಂದ, ಒಬ್ಬಳ ಸೆರಗು ಹಿಡಿದೆಳೆದ ತುಂಬಾ ತುಂಟನಾಗಿದ್ದಾನೆ ನೀನು ಇವನನ್ನು ಕಂಟ್ರೋಲು ಮಾಡಬೇಕು.'
ಈ ಸಲ ಯಶೋಧೆಗೆ ತಡಕೊಳ್ಳಲಾಗಲಿಲ್ಲ. 'ನಿನ್ನ ತಂಟೆ ತುಂಬಾ ಮಿತಿ ಮೀರಿತು, ತಡೀ, ತಕ್ಕ ಶಾಸ್ತಿ ಮಾಡುತ್ತೇನೆ.' ಎಂದು ಒಂದು ಒರಳು ಕಲ್ಲನ್ನು ಕೃಷ್ಣನ ಸೊಂಟಕ್ಕೆ ಕಟ್ಟಿ ಎಲ್ಲೂ ಹೋಗದಂತೆ ಮಾಡಿ ತಾನು ತನ್ನ ಕೆಲಸಗಳಲ್ಲಿ ಮಗ್ನಳಾದಳು. ಅಮ್ಮ ಕಟ್ಟಿದ್ದು ಅಮ್ಮನೇ ಬಿಚ್ಚಬೇಕು ಎಂದು ಕೃಷ್ಣನ ಬಯಕೆ, ಎಷ್ಟೇ ನಾಟಕ ಮಾಡಿದರೂ ಅಮ್ಮನ ಕೋಪ ಇಳಿಯಲಿಲ್ಲ, ಕೊನೆಗೆ ಅಮ್ಮ ಮರೆತೇ ಬಿಟ್ಟಳು. ಆದ್ದರಿಂದ ಬಾಲಕೃಷ್ಣನು ಮೆಲ್ಲನೇ ಆ ಒರಳು ಕಲ್ಲನ್ನು ಎಳಕೊಂಡು ಮನೆಯ ಹಿಂದಿನ ತೋಟಕ್ಕೆ ಬಂದ. ಅಲ್ಲಿ ಎರಡು ಬೃಹತ್ ಮರಗಳು ಒಂದರ ಹತ್ತಿರ ಒಂದು ಒತ್ತಿ ಕೊಂಡಂತೆ ಬೆಳೆದು ನಿಂತಿದ್ದವು. ಹುಡುಗ ಈ ವೃಕ್ಷಗಳ ನಡುವೆ ತೂರಿ ಹೋದರೂ ಒರಳು ಕಲ್ಲು ದಾಟಿ ಬರಲಿಲ್ಲ. ಇವನು ಎಳೆದಾಡಿದ ರಭಸಕ್ಕೆ ಆ ಎರಡೂ ಮರಗಳು ಭಯಂಕರ ಶಬ್ಧದೊಡನೆ ಧಡಾರನೇ ಬೇರು ಸಹಿತ ಮುರಿದು ಬಿದ್ದವು.
ಹಿಂದೆ ಯಾವುದೋ ಕಾಲದಲ್ಲಿ ಅಪ್ಸರೆ ರಂಭೆಯು ತನ್ನ ಪ್ರಿಯಕರನಲ್ಲಿಗೆ ಸಾಗುತ್ತಿದ್ದಳು, ತನ್ನದೇ ಭಾವಾವೇಶದಲ್ಲಿದ್ದಾಕೆಗೆ ತನ್ನನ್ನು ಕಾಮಿಸಿ ಹಿಂಬಾಲಿಸಿಕೊಂಡು ಬರುತ್ತಿರುವ ನಳ-ಕೂಬರರೆಂಬ ದೇವತೆಗಳಿಬ್ಬರ ಖಬರು ಇರಲಿಲ್ಲ. ಅವರು ಅಡ್ಡ ಹಾಕಿ ಎಷ್ಟೇ ಬೇಡಿಕೊಂಡರೂ ಅವಳನ್ನು ಅಪಹರಿಸಿಕೊಂಡು ಹೋದರು. ಭಯಂಕರ ಸಿಟ್ಟಿನಿಂದ ಭೂಲೋಕದಲ್ಲಿ ಬಿದ್ದುಕೊಂಡಿರಿ ಎಂದು ಶಪಿಸಿದಳಾಕೆ. ಭೂಲೋಕಕ್ಕೆ ಬಂದು ಬೀಳುವುದೆಂದರೆ ಅದೊಂದು ದೊಡ್ಡ ಅವಮಾನಭರಿತ ಶಿಕ್ಷೆ. ಫ್ರಾಡ್ ಮಾಡಿ ಸಿಕ್ಕಿ ಬಿದ್ದು ಡಿಸ್ ಮಿಸ್ ಆದ ನೌಕರನ ತರಹ!! ನೀನು ಕೊಟ್ಟ ಶಾಪಕ್ಕೆ ಏನಾದರೂ ಉಪಶಮನ ಹೇಳು ಎಂದು ಪರಿಪರಿಯಾಗಿ ಬೇಡಿಕೊಂಡಾಗ ಮುಂದೆ ದ್ವಾಪರಯುಗದಲ್ಲಿ ಪರಮಾತ್ಮನೇ ನಿಮ್ಮನ್ನು ಉದ್ಧರಿಸುತ್ತಾನೆಂದು ಶಾಪ ಪರಿಹಾರ ತಿಳಿಸಿದಳಾಕೆ. ಬುಡಸಹಿತ ಬಿದ್ದ ಆ ಎರಡು ಮರಗಳೇ ನಳ-ಕೂಬರರು. ಅವರು ಶಾಪವಿಮೋಚಿತರಾಗಿ ಪರಮಾತ್ಮನಿಗೆ ನಮಿಸಿ ಅಂತರ್ಧಾನರಾದರು, ತಮ್ಮ ಲೋಕಕ್ಕೆ ಮರಳಿದರು...
ನಮ್ಮ ಮನೆಯ ವಠಾರದಲ್ಲಿ ಇಬ್ಬರು ನಳ ಕೂಬರರು ಇದ್ದರು, ಇವರು ಯಾವ ಅಪ್ಸರೆಯ ಹಿಂದೆ ಬಿದ್ದಿದ್ದರೆಂಬ ಇತಿಹಾಸ ಗೊತ್ತಿಲ್ಲ , ಆದರೆ ಪರಸ್ಪರ ಪ್ರೀತಿಯಿಂದೆಂಬಂತೆ ಒಬ್ಬರನ್ನೊಬ್ಬರು ತಗಲಿ ಹಾಕಿಕೊಂಡು ನೇರಾನೇರ ಬೆಳೆದು ಮನೆಯ ಶೋಭೆಯನ್ನು ಹೆಚ್ಚಿಸಿದ್ದರು. ಪ್ರತೀ ಮೇ ತಿಂಗಳ ಉತ್ತರಾರ್ಧದಲ್ಲಿ ಕರಾರುವಾಕ್ಕಾಗಿ ಇಬ್ಬರೂ ಮೈ ಪೂರ್ತಿ ಕೆಂಪು ಕೆಂಪು ಹೂಗಳಿಂದಾವೃತರಾಗಿ ಹಿಂದಿನ ಯುಗದಲ್ಲಿ ಯಾವ ಅಪ್ಸರೆಯ ಹಿಂದೆ ಬಿದ್ದಿದ್ದರೋ ಅವಳಿಗಿಂತ ದುಪ್ಪಟ್ಟು ಸೌಂದರ್ಯ ದಿಂದ ತಾವು ಕಂಗೊಳಿಸುವುದೂ ಅಲ್ಲದೇ ಇಡೀ ಪ್ರದೇಶದ ಹೆಮ್ಮೆಯಾಗಿದ್ದರು. ನಿಸರ್ಗದ ಈ ಸೌಂದರ್ಯದ ವೈಭವವನ್ನು ನೋಡುತ್ತಾ ವಿಸ್ಮಯ ಆನಂದಗಳನ್ನು ಹೊಂದುತ್ತಿದ್ದ ಕ್ಷಣಗಳೆಷ್ಟೋ!! 'ನಿಮ್ಮನಿ ಎದ್ರ್ ಇದ್ದ ಮರ ಭಾರೀ ಚಂದ ಮಾರ್‍ರೇ' ಎಂಬುದಾಗಿ ಅನೇಕರ ಪ್ರಶಂಸೆಗಳಿಗೂ ಇವುಗಳು ಪಾತ್ರವಾಗಿದ್ದವು. ಹೂಗಳು ದಿನ ಕಳೆದಂತೆ ಕೆಳಗೆ ನೆಲದ ಮೇಲೆ ಬಣ್ಣ ಬಣ್ಣದ ರಂಗೋಲಿಯ ತೆರ ಚಿತ್ತಾರಗಳನ್ನು ಚಿತ್ರಿಸುವುದೂ, ಮೇಲೆ ಮರಗಳಲ್ಲಿ ಹೊಸ ಹೊಸ ಹೂಗಳ ಆಗಮನವೂ ಚಿತ್ತಾಕರ್ಷಕ...!!
ಎರಡು ವರ್ಷಗಳ ಹಿಂದೆ ಭಾರೀ ಗಾಳಿ ಮಳೆಯ ಅವಾಂತರದ ಒಂದು ದಿನ ಒಬ್ಬನ ಶಾಪ ವಿಮೋಚನೆ ಆಯಿತೋ ಏನೋ, ಒಂದು ಮರವು ಧರಾಶಾಯಿಯಾಯಿತು. ಮನಸ್ಸಿಗೆ ಬಹಳ ಬೇಸರವಾಯಿತು. ಒಂದೆರಡು ದಿನಗಳ ತನಕ ಸಣ್ಣ ಮಟ್ಟಿನ ಖಿನ್ನತೆಯೂ ಇತ್ತು.
ಈಗ ಮೇ ತಿಂಗಳ ಉತ್ತರಾರ್ಧ, ತನ್ನ ಸ್ವಭಾವಕ್ಕೆ ಅನುಗುಣವಾಗಿ ಮರವು ಖುಷಿಯಿಂದ ಕೆಂಪು ತೋರಣವನ್ನು ಹರಡಿದೆ. ಹಿಂದಿನಷ್ಟು ವೈಭವವಿಲ್ಲ, ಆದರೂ ತನ್ನ ನಿಯಮದಂತೆ ಸೌಂದರ್ಯವನ್ನು ಪ್ರಕಟಿಸುತ್ತಿದೆ. ಗೆಳೆಯನ ಅಗಲಿಕೆಯ ಕ್ಷಣಗಳು ಮುಗಿದವು. ಇನ್ನು ಮುಂದಿನ ಯೋಚನೆ ಎಂಬಂತೆ ತನ್ನ ಕಂಪನ್ನು ಬೀರುತ್ತದೆ...👌👌👌👌
ಹೆಚ್ಚಿನ ವ್ಯಾಖ್ಯಾನ ಅಥವಾ ವೇದಾಂತ ಬರೀಲಿಕ್ಕೆ ಹೋಗುವುದಿಲ್ಲ, ಆದರೂ ಯಾರೊಬ್ಬರ ಅಗಲಿಕೆಯಾಗಲೀ, ಅತ್ಯಂತ ದುಃಖದ ಗಳಿಗೆಗಳಾಗಲೀ ಕ್ರಮೇಣ ಅವುಗಳನ್ನು ಮರೆತು ನಮ್ಮ ನಮ್ಮ ಸಹಜ ಗುಣಗಳತ್ತ ಮರಳಬೇಕು, ಜೀವನವು ನಿಂತ ನೀರಾಗಬಾರದು, ಈಗ ಇರುವ ಮರವನ್ನು ನೋಡಿ, ಗೆಳೆಯನ ಅಗಲಿಕೆಯ ನಡುವೆಯೂ ನಳನಳಿಸುತ್ತಿದೆ..🙏🙏🙏






No comments:
Post a Comment