Saturday, February 19, 2011

nanhe-munhe bacche tere-san devu




ನನ್ಹೆ ಮುನ್ಹೆ ಬಚ್ಹೆ ತೇರೆ ಮುಟ್ಟೀ ಮೆ ಕ್ಯಾ ಹೆಮುಟ್ಟಿ ಮೆ ಕ್ಯಾ ಹೆ- ದೇವಣ್ಣ ನಾಯಕರ (ನಮ್ಮ ತಂದೆಯವರ) ಸವಾರಿ ಊಟಕ್ಕೆ ಹೊರಟಿತು. "ಸಾನ್ ದೇವು ಜಾವ್ಣಾ ಭಾಯ್ರ್ ಸರ್ಲೊ ಘಂಟೆ ಬಾರ ಜಾಲ್ಲೆ" ಭವಾನಿ ಮಾಯಿಯವರು ಘೋಷಣೆ ಮಾಡಿದರು. ಬೆಳಗಿನ ಕೆಲಸ ಬಾಕಿ ಇದ್ದವರೂ ಸಹಾ ಚುರುಕಾದರು. ಇದು ಒಂದು ಲೆಜೆಂಡ್ ಅನ್ನುವ ರೀತಿಯಲ್ಲಿ ನಮ್ಮ ತಂದೆಯವರ ದಿನಚರಿ ಆಗಿತ್ತು. ಊಟ ತಿಂಡಿ ವಿಚಾರದಲ್ಲಿ ನಮ್ಮ ತಂದೆಯವರು ತುಂಬಾ ಪರ್ಟಿಕುಲರ್. ಎಲ್ಲಾ ಟೈಮ್ ಪ್ರಕಾರ ಆಗಬೇಕು. ಬೆಳಗ್ಗೆ ಪ್ರಕಾಶ ಹೋಟ್ಲಿನಲ್ಲಿ ಚಾ, ಮಧ್ಯೆ ಸುಮರು ಹತ್ತೂವರೆಗೆ ಚಾ ತಿಂಡಿ, ಮತ್ತೆ ಹನ್ನೆರಡು ಘಂಟೆಗೆ ಊಟ, ಅಂಗಡಿ ಮಾಳಿಗೆಯಲ್ಲಿ ಸಣ್ಣ ನಿದ್ದೆ, ರಾತ್ರಿ ಎಂಟು ಘಂಟೆಗೆ ಊಟ. ವೈಭವದ ಊಟ ಅಲ್ಲದಿದ್ದರೂ ರುಚಿಕರ ಆಗಬೇಕು. ಅನ್ನದ ಮೇಲೆ ಸಾರು ಯಾ ಸಾಂಬಾರು ಬಡಿಸಿದ ತಕ್ಷಣ ನೆಕ್ಕಿನೋಡಿ ಒಂಚೂರು ಉಪ್ಪು ಅಥವಾ ಹುಳಿ ಕಮ್ಮಿ, ಎರಡು ಮೆಣಸು ಬಿದ್ದರೆ ಹೈಕ್ಲಾಸ್ ಎಂದು ಜಡ್ಜ್ ಮೆಂಟ್ ಕೊಡಲೆ ಬೇಕು, ಹಾಗೇನಾದರೂ ಹೇಳದಿದ್ದರೆ ಇವತ್ತೇನೋ ಮಂಡೆಬಿಸಿ ಉಂಟು ಅಂತಾ ಲೆಕ್ಕ. ಜೀವನದಲ್ಲಿ ತುಂಬ ಕಷ್ಟಸುಖ-ಕಷ್ಟವೇ ಜಾಸ್ತಿ-ಅನುಭವಿಸಿದ ಜೀವ. ನಾವು ಹೋಗಲಿ ಎಲ್ಲರೂ ಬಡವರೇ, ಕಾಲ ದೇಶ ಪರಿಸ್ಥಿತಿ ಬಡತನದ್ದೆ ಆಗಿತ್ತು. ತಾನು ಬಡವ, ಒಂದೆರಡು ರೂಪಾಯಿಗೆ ತತ್ವಾರ, ಹಾಗೆಂದು ಯಾರೂ ನಾಚಿಗೆ ಪಟ್ಟುಕೊಂಡು ತಿರುಗುವುದು ನಾನು ನೋಡಿಲ್ಲ. ಅದೊಂದು ಕಾಮನ್ ವಿಷಯ ಆಗಿತ್ತು. ಆದರೆ ಗಮನಿಸ ಬೇಕಾದ ಮಾತೆಂದರೆ ಎಲ್ಲರಲ್ಲಿ ಜೀವನೋತ್ಸಾಹ ಇತ್ತು. ರಾತ್ರಿ ಊಟಕ್ಕೆ ಕಷ್ಟವಿದ್ದರೂ ಖುಷಿ ಗಮ್ಮತ್ತುಗಳಿಗೆ ಕೊರತೆಯಿರಲಿಲ್ಲ.ಇತರರಲ್ಲಿ ಸಮಸ್ಯೆಯಿದೆ ಎಂದು ಉಳಿದವರಿಗೆ ತಿಳಿದಿರುವುದರಿಂದ ಪರಸ್ಪರ ಮೌನ ಸಹಾನುಭೂತಿ ಇರುತ್ತಿತ್ತು. 
 
೧೯೭೦ರ ಸಮಯ-ಮೇ ತಿಂಗಳ ಜೋರು ಶೆಖೆ ದಿನಗಳಲ್ಲಿ ಒಂದು ದಿನ ಹುತ್ತುರ್ಕೆಯಲ್ಲಿನ ನಮ್ಮ ಮುಳಿಮನೆ ಬೆಂಕಿ ಬಿದ್ದು ಭಸ್ಮ ಆಯ್ತು. ಹಾಕಿಕೊಂಡ ಚಡ್ಡಿ ಕೋಮಣ ಉಳಿಯಿತಷ್ಟೆ, ಉಳಿದದ್ದೆಲ್ಲ ಅಗ್ನಿಗೆ ಆಹುತಿ ಆಯ್ತು. ಮೊದಲೇ ಬಡತನ, ಮೇಲೆ ಈ ದುರಂತ. ಸದಾ ಹಸನ್ಮುಖಿಯಾಗಿರುತ್ತಿದ್ದ ತಾನು ಎಷ್ಟೇ ಕಷ್ಟದಲ್ಲಿದ್ದರೂ ಅವುಗಳನ್ನು ತನ್ನಲ್ಲೆ ಇಟ್ಟುಕೊಂಡು ಮಕ್ಕಳ ಯಾ ಇತರರ ಎದುರು ಖುಷಿಯಾಗಿ ಇರುತ್ತಿದ್ದ ತಂದೆಯವರು ಆ ರಾತ್ರಿ ನನ್ನ ಮುಂದೆ ಗೋಳೋ ಎಂದು ಗೋಳಾಡಿದ್ದು ಇಂದಿಗೂ ಮರೆತಿಲ್ಲ. ನಾಲ್ಕು ದಿನಗಳ ಬಳಿಕ ವಿವೇಕ ಹೇಳಿದ-'ಚಿಕ್ಕಪ್ಪ ಮತ್ತೆ ಸಂಜೀವಮಾಮ್ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳುತ್ತಿದ್ದರು. ಚಿಕ್ಕಪ್ಪನವರಿಗೆ ಎಷ್ಟು ಕಷ್ಟ ಆಗಿದೆ ಎಂದು ಇವರು ಕೇಳಲಿಲ್ಲಕೈಯ್ಯಲ್ಲಿ ಸ್ವಲ್ಪ ರೂಪಾಯಿ ನೋಟು ಹಿಡಕೊಂಡು ತಂದೆಯವರ ಅಂಗಿಕಿಸೆಯಲ್ಲಿ ತುರುಕಿದರು. ಅವನ್ನು ತೆಗೆದು ವಾಪಸು ಇವರ ಕಿಸೆಗೆ ಹಾಕಿದರು. ಹೀಗೆ ೨-೩ ಬಾರಿ ನಡೆಯಿತುಮಾತಿಲ್ಲ ಕತೆಯಿಲ್ಲಇಬ್ಬರೂ ಮನಸ್ಸು ತುಂಬಿಬಂದು ಪರಸ್ಪರ ಅಪ್ಪಿಕೊಂಡು ಅಳುತಿದ್ದರು. ಪ್ರೀತಿ ದೋಸ್ತಿ ಅಂದರೆ ಹೇಗೆ ನೋಡು, ಇಲ್ಲಿ ಹಣಕಾಸಿನ ವಿಷಯ ಬರುವುದಿಲ್ಲ.' ಎಷ್ಟು ಸರಿಯಾದ ಮಾತುಸಣ್ಣಸಣ್ಣ ಮಾತುಗಳು ವಿಚಾರಗಳು ಈಗ ನೆನಸಿಕೊಂಡಾಗ ಖುಶಿಉದ್ವೇಗಕೆಲವೊಮ್ಮೆ ಅಳು ಬರುತ್ತವೆ.
 
ಸಂಜೀವ ಪೈಗಳು ಒಮ್ಮೆ ತಮ್ಮ ಸುಖ ಕಷ್ಟ-ಹೆಚ್ಚಾಗಿ ಕಷ್ಟದ ಮಾತೇ ಜಾಸ್ತಿ- ಹೇಳಿಕೊಳ್ಳುತ್ತಿದ್ದರು, ''ನೋಡು ಕೇಶವಾ ಪ್ರಾಯ ಆಯ್ತು ಕೂತ್ರೆ ಏಳಲಿಕ್ಕೆ ಆಗುವುದಿಲ್ಲಎದ್ರೆ ಕೂತ್ಕೊಳ್ಲಿಕ್ಕೆ ಆಗುವುದಿಲ್ಲ'' ಎಂದು ತಾಪತ್ರಯ ಸುರು ಮಾಡಿದರು.
 
"ಅಲ್ಲ ಸಂಜೀವ ಮಾಮು ನೀವಿಲ್ಲದೆ ಹೆಬ್ರಿಯಲ್ಲಿ ಯಾವುದೇ ಕಾರ್ಯಕ್ರಮ ಆಗುದಿಲ್ಲ,  ಭಜನೆಮದುವೆಮುಂಜಿ ಅಥವಾ ಇತರೇ ಪ್ರೋಗ್ರಾಮ್ ಇರಲಿ ಸಂಜೀವ್ ಪೈಮಾಮ್ ಬಂದ್ರಾ? ಇಲ್ವಾ ಹಾಗಾದ್ರೆ ಅವ್ರು ಬರ್ಲಿ ಅಂತಾ ನೀವು ಬರುವ ವರೆಗೆ ಕಾದು ನಂತರ ಮುಂದುವರೆಯುವ ಕಾಲ ಇತ್ತು, ಒಳ್ಳೆಯ ಭಜನೆ ಹಾಡಬೇಕು ಸಂಜೀವ ಮಾಮ್, ಫಸ್ಟ್ ಕ್ಲಾಸ್ ಅಲಂಕಾರ ಆಗ್ಬೇಕು ಸಂಜೀವ ಮಾಮ್, ಪ್ರೋಗ್ರಾಮ್ ನಲ್ಲಿ ಲೈಟಿಂಗ್ ಆಗ್ಬೇಕು ಸಂಜೀವ ಪೈ, ಹೀಗೆ ನೀವು ಅನಿವಾರ್ಯ ಆಗಿದ್ದೀರಿ ಈಗ ಹೀಗೆ ಹೇಳಿದರೆ ಹೇಗೆ" ಎಂದೆ
 
ಒಮ್ಮೆ ತಮ್ಮಲ್ಲೆ ತನ್ಮಯರಾದರು-ಹಿಂದಿನ ದಿನಗಳ ನೆನಪಾಯ್ತು,ನಿಟ್ಟುಸಿರು ಬಿಟ್ಟರು ''ಹೌದು ಮಾರಾಯ ಪ್ರಾಯದ ದಿನಗಳು ಹಾಗೆಯೇ, ಇಷ್ಟೆಲ್ಲ ಮಾಡಿದ್ದೇನೆ ನೋಡು ಏನು ಹುರುಪಿತ್ತು ಆಗ!  ನಮ್ಮದೇ ದಾಯಾದಿಗಳು ನನಗೆ ತೊಂದರೆ ಮಾಡಲು ಬಹಳ ಕಷ್ಟ ಪಟ್ಟರು, ಆದರೂ ನಾನು ಜಗ್ಗಲಿಲ್ಲಈಗ ನೋಡು ಊಟಕ್ಕೆ ಕೂತರೆ ಎಬ್ಬಿಸಲು ಯಾರಾದರೂ ಬರಬೇಕುಕೈ ಎತ್ತಲು ಕಷ್ಟ ಆಗ್ತದೆ" ತುಂಬ ವ್ಯಥೆ ಪಟ್ಟರು.
 
ಹ ಹ್ಹಾ ಹ್ಹಾ ಎಂದು ನಗಾಡಿದೆ.ಬೇಜಾರು ಮಾಡಬೇಡಿ ನೆಗಾಡಿದ್ದಕ್ಕೆ ಎಂದೆ.ಈಗ ನನಗೆ ೬೧ ನಡೆಯುತ್ತಿದೆ ಕೂತರೆ ಏಳಲಿಕ್ಕಾಗುವುದಿಲ್ಲ, ಕೈ ಎತ್ತುವಾಗ ಕಳಕ್ ಆಗ್ತದೆಮೊನ್ನೆ ಸುಚ್ಚನತ್ರ (ಸುರೇಶ) ಹೇಳಿದೆ-ಹ ಹ್ಹಾ ಹ್ಹಾ ಎಂದ. ಸಾಕಲ್ವಾ ನನಗೆ!
 
ನಮ್ಮ ತಂದೆಯವರದು ಸಹ ಒಂದು ರೀತಿಯ ಸ್ವಭಾವ. ತಾನು ಬಹಳ ಘಟ್ಟಿ ಮನುಷ್ಯಕಲ್ಲು ತಿಂದು ಕರಗಿಸಿಕೊಂಡವಹಾಗೆ ಹೀಗೆ ಎಂದೆಲ್ಲ ತಲೆ ತುಂಬ ತುಂಬಿಕೊಂಡವರುಪ್ರಾಯದ ದಿನಗಳಲ್ಲಿ ಕಲ್ಲು ತಿಂದು ಕರಗಿಸಿಕೊಂಡಿರಬಹುದುಆದರೆ ಪ್ರಾಯ ಸಂದಂತೆ ಮನಸ್ಸು ಯುವಕರಂತೆ ಚುರುಕಿದ್ದರೂ ದೇಹ ಕೇಳಬೇಕಲ್ಲ. ಆರೋಗ್ಯ ವ್ಯತ್ಯಾಸವಾಗಿ ಹಾಸಿಗೆ ಹಿಡಿಯುವ ವರೆಗೆ ಅವರು ಮಾನಸಿಕವಾಗಿ ತರುಣರೇ ಆಗಿದ್ದರು. ಪೆರ್ಡೂರಿನಿಂದ ವಾಪಸು ಬಂದಾಗ ಮನೆಯ ಎದುರು ಜನ ಒಟ್ಟಾಗಿದ್ದರು. ಗಡಿಬಿಡಿಯಾಯ್ತು. ಜಗಲಿಯಲ್ಲಿ ಮಲಗಿದ್ದಾರೆ, ಡಾಕ್ಟ್ರು ಚೆಕ್ ಮಾಡ್ತಾ ಇದ್ದಾರೆ. "ಏನಿಲ್ಲ,ಸ್ವಲ್ಪ ಸುಸ್ತಾಗಿದೆ, ರೆಸ್ಟ್ ತೆಗೊಳ್ಳಿ" ಎಂದು ಮದ್ದು ಬರೆದು ಕೊಟ್ಟರು. ನನ್ನನ್ನು ಕರೆದು ಇವರನ್ನು ಕೂಡಲೇ ಮಣಿಪಾಲಕ್ಕೆ ತೋರಿಸಿ ಎಂದು ತಾಕೀತು ಮಾಡಿದರು. ಇವರು ಬರಬೇಕಲ್ಲಾ, ತನಗೆ ಎಂತದೂ ಧಾಡಿಯೂ ಆಗ್ಲಿಲ್ಲ, ಡಾಕ್ಟ್ರು ಎಲ್ಲ ಹಾಗೇ ಹೇಳುವುದು, ಸ್ವಲ್ಪ ಗ್ಯಾಸ್ ಅಷ್ಟೆ, ಎರಡು ವಾಯು ಮಾತ್ರೆ ತೆಕ್ಕೊಂಡರೆ ಎಲ್ಲ ಸರಿಯಾಗ್ತದೆ ಫುಸ್ ಎಂದು ಪುಕುಳಿಗೆ ಕೈ ಒರೆಸಿಕೊಂಡರು, ಡಾಕ್ಟ್ರು ಬರೆದುಕೊಟ್ಟ ಮಾತ್ರೆ ತೆಕೊಂಡ ಬಗ್ಗೆ ನನಗೆ ಇವತ್ತಿಗೂ ಡೌಟುಂಟು. ಮಕ್ಕಳ ಎದುರಿಗೆ ತನ್ನ (ವೀಕ್ ನೆಸ್) ಅಥವಾ ಅನಾರೋಗ್ಯದ ವಿಷಯ ಹೇಳಿದರೆ ತನ್ನ ದೊಡ್ಡಸ್ತಿಕೆ ಡೌನ್ ಆಗುತ್ತದೋ ಎಂಬ ಹೀನೈಸಿಕೆ. ಇದೊಂದು ಮಾನಸಿಕತೆ. ಇದೇ ಮೈಂಡ್ ಸೆಟ್ ಇದ್ದುದರಿಂದ ನನಗೂ ಅವರಿಗೂ ತುಂಬ ಸಲ ಚರ್ಚೆ ಜಗಳ ಆದದ್ದೂ ಉಂಟು. ನನ್ನ ಲೆಕ್ಕದಲ್ಲಿ ನನ್ನ ತಪ್ಪಿಲ್ಲದಿದ್ದರೂ ನೆಕ್ಸ್ಟ್ ದಿನ ನಾನೇ ಹೋಗಿ ತಪ್ಪು ಮಾಫಿ ಕೇಳಿಕೊಂಡಿದ್ದೇನೆ. ತನ್ನ ಆರೋಗ್ಯದ ಬಗ್ಗೆ ಡೋಂಟ್ ಕೇರ್ ಇದ್ದವರು ಊರಿನ ಇತರರ ಅಸೌಖ್ಯದ ಮಾತು ಬಂದಾಗ ಖುದ್ದು ಹೋಗಿ ಯಾ ನಮ್ಮನ್ನು ಕಳಿಸಿ ವಿಚಾರಿಸುತ್ತಿದ್ದರು. ಊರಲ್ಲಿ ಯಾರದ್ದೇ ಸಾವು ಆಗಲಿ ನಂತರದ ಕಾರ್ಯಗಳಿಗೆ ತುರ್ತು ಪ್ರಾರಂಭಮಾಡುತ್ತಿದ್ದರು, 

ನನ್ನ ನೆನಪಿನಂತೆ ಶಿವರಾಯ ಶೆಣೈಯವರ ಕಿರಿಮಗಳು ಮರದಿಂದ ಬಿದ್ದು ಕೈ ಮುರುಕೊಂಡು ಗುಣ ಆಗದೆ ಸುಮಾರು ೧ ವರ್ಷಕ್ಕಿಂತಲೂ ಮಿಕ್ಕಿ ನರಳಿ ಮುಕ್ತಳಾದಳು. ಮನೆಯಲ್ಲಿ ಗೋಳಾಟವೋ ಗೋಳಾಟ. ಸಹಜವೇ. ಊರಿನವರೆಲ್ಲರು ಬಂದು ಸಮಾಧಾನ ಹೇಳುತ್ತ ಇರುವಲ್ಲಿ ಇವರು ಬಂದು ಹೆಣ ಸಾಗಿಸುವ ವ್ಯವಸ್ಥೆ ಮಾಡ ತೊಡಗಿದರು. ನನಗೆ ಸ್ವಲ್ಪ ಅಸಮಾಧಾನ ಆಯ್ತು. ಕಡೆಗೆ ಈ ವಿಷಯ ಎತ್ತಿದಾಗ "ಮನೆಯವರ ದುಃಖಕ್ಕೆ ಕೊನೆ ಇರುವುದಿಲ್ಲ ಅದೂ ಮಕ್ಕಳು ತೀರಿಕೊಂಡರೆ ಇನ್ನೂ ಕಷ್ಟ, ಹಾಗಂತ ಅವರ ರೋದನ ಮುಗಿಯುವ ವರೆಗೆ ಕಾಯುತ್ತ ಕೂತರೆ ಹೆಣದ ವಿಲೇವಾರಿ ಕಡೆಗೆ ಅವರೇ ಮಾಡಬೇಕಾಗ್ತದೆ ಗೊತ್ತಾಯ್ತಾ, ಭಾವನೆ, ಅನುಕಂಪ ನಿನ್ನಷ್ಟೇ ನನಗೂ ಉಂಟು, ಸ್ವಲ್ಪ ವಾಸ್ತವಿಕತೆಯತ್ತ ಮನಸ್ಸು ಕೊಡು" ಹೌದೆಂದು ನನಗೂ ಅಂದಾಜಾಯ್ತು. ಘಟ್ಟಿ ಮನಸ್ಸಿನ ತಂದೆಯವರು ಕೊನೆ ಸಮಯದಲ್ಲಿ ಡಿಪ್ರೆಶ್ಯನ್ ಆಗಿ ವರ್ಷಾವದಿ ಅನುಭವಿಸಬೇಕಾಯ್ತಲ್ಲ! ವಿಚಿತ್ರ!

No comments:

Post a Comment