'ವ್ಹೈರೇ ನರ್ಸಿಮಾ, ಹೇ ಮಾಮ್ಮಾಕ ಸ್ಪೆಷಲ ಕೂಡ ದೀ, ಇವರ ಬಳಿ ಬಾಡಿಗೆ ತೆಗೋಳೋದು ಬೇಡಾ, ಇವರು ಯಾರು ಗೊತ್ತುಂಟಾ? ಪಳ್ಳಿ ಬೈಲೂರಿನ ನಮ್ಮ ತವರು ಮನೆಯ......ಳ ತಮ್ಮನ ಹೆಂಡತಿಯ ತಂಗಿ ಗಂಡನ ಬಾವ. ಇವರಿಗೆ ರಾತ್ರಿ ಊಟಕ್ಕೆ ಇಲ್ಲೇ ಬರಲು ಹೇಳಿದ್ದೇನೆ. ಏನಾದರೂ ತರಕಾರಿ ತಾ.' ನಮ್ಮ ಮಾಮಾಮಾ ಮಗ ನರ್ಸಿಮ್ಮಮಾಮನಿಗೆ ಆದೇಶಿಸಿದರು.
ನರಸಿಂಹ ಮಾಮನಿಗೆ-ನರ್ಸಿಮ್ಮಮಾಮ-ಮೈಯೆಲ್ಲಾ ಉರಿಯಿತು.! ಆದರೆ ಬಂದ ಗಿರಾಕಿ ಎದುರಲ್ಲೇ ಇದ್ದಾರೆ. ಏನು ಹೇಳಬೇಕೆಂದು ತಿಳಿಯದೆ 'ಹ್ಞಾಂ ಹ್ಞಾಂ' ಎಂದರು.
'ನೀನು ಬಂದ ಗಿರಾಕಿಗಳನ್ನೆಲ್ಲ ಕರೆದು ಕೂರಿಸಿ ಚರಪೆರೆ ಹರಟೂದೂ ಬೇಡ, ಅವರ ಸುಖಕಷ್ಟ ಮಾತಾಡೂದೂ ಬೇಡ! ನಿನ್ನ ನಾಲಿಗೆ ಅಗತ್ಯಕ್ಕಿಂತ ಜಾಸ್ತಿ ಉದ್ದವುಂಟು, ಬಂದವರೆಲ್ಲರ ಹತ್ರ ಅಧಿಕಪ್ರಸಂಗ ಮಾತಾಡುವ ಜಂಬರ ಏನುಂಟೀಗ? ಇಲ್ಲಿ ಬಾಡಿಗೆ ಜನ ಸಿಗೂದೇ ಕಷ್ಟ, ಇಡೀ ಪೇಟೆ ತಿರುಗಿ ಹುಡುಕಾಡಿ ಗಿರಾಕಿಗಳನ್ನು ಕರಕೊಂಡು ಬಂದರೆ ನೀನವರನ್ನು ಎದುರು ಕೂಡಿಸಿ ಚಂಗಾಯಿ ಮಾತಾಡೂದು, ಅವರ ಜನ್ಮ ಜಾತಕ ಹುಡುಕೋದು! ಇದೆಲ್ಲಾ ಯಾಕೆ ಮಾಡ್ತೀ? ಮೊದಲೇ ಈಗ ಭಾಳ ಮಂದಿಕಾಲ ನಡೀತಾ ಉಂಟು, ಅದರ ಮೇಲೆ ಬಾಡಿಗೆ ಬೇಡ ಅಂತ ಶಿಪಾರಸು! ಊಟಕ್ಕೆ ಬೇರೆ ಹೇಳಿದಾಳೆ!' ಸಂಜೆ ಹೊತ್ತು ನರ್ಸಿಮ್ಮ ಮಾಮ ತಾಯಿಯ ಮೇಲೆ ಗರಮ್ಮಾದರು!!
'ಹೌದನಾ ನರ್ಸಿಮಾ! ನನಗೆ ಇದೆಲ್ಲ ತಲೆಗೇ ಹೋಗಲಿಲ್ಲ ಮಹರಾಯ, ಈಗ ಎಂತ ಮಾಡೂದು? ಆ ಜನಕ್ಕೆ ರಾತ್ರಿ ಊಟಕ್ಕೆ ಬೇರೆ ಹೇಳಿದ್ದೇನೆ!' ನಮ್ಮ ಅಜ್ಜಿ ಪರಿತಪಿಸಿದರು.
'ಈಗ ಹೇಳಿದ್ದು ಆಯಿತಲ್ಲ, ಇನ್ನು ಮೇಲೆ ಒಂಚೂರು ಜಾಗ್ರತೆಯಿಂದ ಇರು. ಇದು ನಮ್ಮ ಹೆಬ್ರಿಯಲ್ಲ, ಶಿಮೋಗ ಪೇಟೆ. ಕೈಯಲ್ಲಿ ಕಾಸಿದ್ದರೆ ಮಾತ್ರ ನಡೀತದೆ...' ಮಾಮ ತಾಯಿಯನ್ನು ಸಂತೈಸಿದರು.
ಅರುವತ್ತರ ದಶಕದಲ್ಲಿ ಶಿವಮೊಗ್ಗದ ಬೀ ಎಚ್ ರಸ್ತೆಯ ಜ್ಯೋತಿರ್ಭವನ ವಸತಿಗೃಹದ ನಿರ್ವಹಣೆಯನ್ನು ನಮ್ಮ ನರ್ಸಿಮ್ಮ ಮಾಮ ನೋಡಿಕೊಳ್ಳುತ್ತಿದ್ದರು. ಎಸ್ಸೆಲ್ಸಿ ಮುಗಿಸಿದ ನಂತರ ಏನು ಮಾಡುವುದು..? ಕಾಪಾಡಿ, ಸಾಣೆಕಲ್ಲು, ಹರಿಖಂಡಿಗೆ ಇತ್ಯಾದಿ ಗ್ರಾಮದ ಯುವಕರು ವೆಂಕಟರಮಣ ದೇವರಿಗೆ ಅಡ್ಡಬಿದ್ದು ಪರದೇಶಗಳಿಗೆ-ಹೈದರಾಬಾದು, ಮುಂಬಯಿ, ಗದಗ ಇತ್ಯಾದಿ - ಮನೆಯಲ್ಲಿ ತಿಳಿಸಿಯೋ ತಿಳಿಸದೆಯೋ ಗುಳೇ ಹೋಗುತ್ತಿದ್ದರು. ನನ್ನ ತಿಳಿವಳಿಕೆ ಪ್ರಕಾರ ಅನೇಕರನ್ನು ಪರಮಾತ್ಮ ಬಿಟ್ಟು ಹಾಕಿಲ್ಲ. ಕಷ್ಟವೋ ಸುಖವೋ ಹೆಚ್ಚಿನವರು ತಮ್ಮ ಬದುಕನ್ನು ಕಟ್ಟಿಕೊಂಡು ಸುಖವಾಗಿದ್ದಾರೆ...
ನಮ್ಮ ನರ್ಸಿಮ ಮಾಮ ಸಹ ಎಸ್ಸೆಲ್ಸಿ ನಂತರ ಮುಂಬಯಿ ಪಯಣದ ಸ್ಕೆಚ್ಚು ಹಾಕುತ್ತಿದ್ದರು. ಹೆಬ್ರಿ ಅನಂತಪದ್ಮನಾಭ ದೇವರ ಶರಣು ಹೋಗಿ ಮುಂದಿನ ದಾರಿ ತೋರು ದೇವಾ ಎಂದು ಬೇಡಿಕೊಳ್ಳುತ್ತಿರುವ ಕಾಲದಲ್ಲಿ ಶಿವಮೊಗ್ಗದ ಜ್ಯೋತಿರ್ಭವನದ ವ್ಯವಸ್ಥೆ ನೋಡಿಕೊಳ್ಳುವ ಜಬಾದಾರಿ ಸಿಕ್ಕಿತು. ವಸತಿಗೃಹದಲ್ಲಿ ಸುಮಾರು ಎಂಟು-ಹತ್ತು ಕೋಣೆಗಳಿದ್ದು ನಗರಕ್ಕೆ ಇತರೇ ಊರುಗಳಿಂದ ಬರುವ ವ್ಯಾಪಾರಸ್ಥರು, ಯಾತ್ರಿಗಳು ಮತ್ತಿತರರಿಗೆ ರೂಮುಗಳನ್ನು ಬಾಡಿಗೆಗೆ ನೀಡುವುದು, ಬಂದ ಬಾಡಿಗೆಯಲ್ಲಿ ತಿಂಗಳಾ ರೂ.200/- ಧನಿಗಳಿಗೆ ನೀಡುವುದು - ಇದು ಕಂತ್ರಾಟು. ಅದು ಮಂದಿಯ ಕಾಲ. ಶಿವಮೊಗ್ಗ ಜಿಲ್ಲಾಕೇಂದ್ರವಾದರೂ ಇವರ ವಸತಿಗೃಹಕ್ಕೆ ಬರುವ ಬಾಡಿಗೆದಾರರು ವಿರಳ. ಧನಿಗಳಿಗೆ ನೀಡಿ ಇತರ ಖರ್ಚು ವೆಚ್ಚಗಳನ್ನು ಹೊಂದಿಸುವಾಗ ಹರಹರ! ಆಗುತ್ತಿತ್ತು, ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲ ಎಂಬಂತೆ. ಇಂಥಾ ಸಮಯದಲ್ಲಿ ಬಂದ ಗ್ರಾಹಕನ ಬಳಿ ಹರಟೆಗೆ ಕೂತು ಆತನ ಜಾತಕ ಜಾಲಾಡಿ ಸಂಬಂಧ ಸ್ಥಾಪಿಸಿದ್ದು ನರಸಿಮ್ಮ ಮಾಮನನ್ನು ಕೆರಳಿಸಿತ್ತು.....
ಇದು ನರ್ಸಿಮ್ಮಮಾಮನವರ ವ್ಯವಹಾರ ತಾಪತ್ರಯಗಳ ಕಥನವಲ್ಲ. ನಮ್ಮ ಗೌಡ ಸಾರಸ್ವತ ಸಮಾಜವು ಯಾವ ತೆರದಲ್ಲಿ ಒಂದೇ ಸೂತ್ರದಲ್ಲಿ ಬಂಧಿತವಾಗಿದೆ ಎಂಬುದಾಗಿದೆ. ಇಂದಿನ ಗಡಿಬಿಡಿಯ ತರಾತುರಿಯ ಹಪಾಹಪಿಯ ದಿನಗಳಲ್ಲಿ ಸಂಬಂಧಗಳು ಸಂಕೀರ್ಣವಾಗುತ್ತಿದ್ದು ಕುಟುಂಬ ವ್ಯವಸ್ಥೆಯು ಕೊಂಚಮಟ್ಟಿಗೆ ಶಿಥಿಲವಾಗಿದೆಯೆನ್ನಬಹುದು. ತಾನು - ತನ್ನ ಮಕ್ಕಳು - ತನ್ನ ಮನೆ ಇಲ್ಲಿಗೆ ಮುಗಿಯಿತು ಎಂಬಂತಾ ಕಾಲವಿದು. ಆದರೂ ನಾವು ಜಿ ಎಸ್ ಬಿ ಯವರು ನಿಜಾರ್ಥದಲ್ಲಿ ವಿವರಿಸುವುದಾದರೆ ಇಂದಿನ ದಿನಗಳಲ್ಲೂ ಒಂದೇ ಸೂತ್ರದಿಂದ ಬಂಧಿತರಾಗಿದ್ದೇವೆ....
ದಿಲ್ಲಿಯ ಓಲ್ಡ್ ರಾಜಿಂದರ್ ನಗರದ ವಾಟರ್ ಟ್ಯಾಂಕ್ ನ ಕೆಳಗೆ ನಿಂತು 'ಹಲೋ, ಆಮ್ಮಿ ಗಾಂವಾ ತುಕೂನು ದಿಲ್ಲಿ ಭೊಂವಚೇ ಆಯ್ಯಿಲೀಂ, ಹೇ ರಾತ್ತೀ ಖೈಂ ವಚ್ಚೆ ಮ್ಹೊಣು ಕsಳನಾ' (ಹಲೋ, ನಾವು ಊರಿನಿಂದ ದಿಲ್ಲಿ ಟ್ರಿಪ್ ಎಂದು ಬಂದಿದ್ದೇವೆ, ಈ ರಾತ್ರಿ ಎಲ್ಲಿ ಹೇಗೆ ಕಳೆಯೂದೆಂದು ಗೊತ್ತಾಗುತ್ತಿಲ್ಲ) ಎಂದು ಆವಾಜು ಹಾಕಿದರೆ ಹತ್ತು ಮನೆಗಳ ಬಾಗಿಲುಗಳು ತೆರೆಯುತ್ತವೆ, 'ಆಮ್ಮೆಥೈಂ ಯೆಯ್ಯಾ - ಆಮ್ಮೆಥೈಂ ಯೆಯ್ಯಾ' (ನಮ್ಮಲ್ಲಿ ಬನ್ನಿ ನಮ್ಮಲ್ಲಿ ಬನ್ನಿ ) ಎಂದು ಎಂಟು ಹತ್ತು ಬಾಗಿಲುಗಳು ತೆರೆಯುತ್ತವೆ, ಆಹ್ವಾನ ನೀಡುತ್ತವೆ. ಹೊಸ ಗುರುತು, ಮುಂದೆ ಮಾತುಕತೆ ಪಂಚಾತಿಕೆ ಎಲ್ಲವೂ ನಡೀತಾ ನಡೀತಾ ಕೊನೆಯಲ್ಲಿ ಯಾವುದೋ ಒಂದು ಕೊಂಡಿಯು ಸಿಕ್ಕಿ ಹಾಕಿಕೊಳ್ಳುತ್ತದೆ. 'ಅರೆ ಮಾರಾಯತೀ ಆಮ್ಗೆಲೇ ರಾಮ್ ಬಾಪ್ಪಾಲೇ ಜಾಂವ್ಯಾಂ ತರಪೇನ ಹಾನ್ನಿ ಆಮ್ ಕಾ ಲಾಗ್ಗೀ ಲೆಕ್ತಾತೀ..'(ಅರೇ ಮಹರಾಯಿತೀ, ನಮ್ಮ ರಾಮ ಚಿಕ್ಕಪ್ಪನ ಅಳಿಯನ ಕಡೆಯಿಂದ ಇವರು ಭಾಳಾ ಹತ್ತಿರದವರು....') ಎಂಬಲ್ಲಿ ಕೊನೆಗೊಳ್ಳುತ್ತದೆ...!
1985ರಲ್ಲಿ ಡೀ ಟೀ ಸೀ ಬಸ್ಸಲ್ಲಿ ಆಫೀಸಿಗೆ ಹೋಗುತ್ತಿದ್ದೆ. ಹತ್ತಿರ ಕೂತ ಹಿರಿಯ ಪಯಣಿಗರೊಡನೆ ಸಲ್ಲಾಪ ಸುರುವಾಯಿತು...
'ಯೂ ಆರ್ ಫ್ರಂ ಸದರನ್ ಇಂಡಿಯಾ?'
'ಯಸ್ ಸರ್'
'ಕರ್ನಾಟಕಾ?'
'ಯಸ್ ಸರ್'
'ಮಂಗಳೂರು?'
'ಯಸ್ ಸರ್'
'ದೊರಕೊ ಕೀ?'. (ಕೊಂಕಣಿ!?)
'ಯಸ್ ಸರ್'
'ಆನಿಕೈ ಕಸಲರೇ ಯಸ್ ಸರ್ ಯಸ್ಸರ್ ಕರತ ಆಸ್ಸ! ಖಂಚ ಗಾಂವು?' (ಇನ್ನೂ ಇನ್ನೂ ಯಸ್ ಸರ್ ಯಸ್ ಸರ್ ಎಂದೇಕೆ ಹರಟುತ್ತಿದ್ದೀ! ಯಾವೂರು?)
'ಹೆಬ್ರಿ'
'ಅರೇ ಹೆಬ್ರಿ! ಪಾಂಡ್ರಂಗ ನಾಯ್ಕು ಗೊತ್ತಾಸ್ ಕೀ?' (ಅರೇ ಹೆಬ್ರಿ! ಪಾಂಡುರಂಗ ನಾಯಕರು ಗೊತ್ತಾ?)
'ವ್ಹಯಿ'. (ಹೌದು)
'ಪಾಂಡುರಂಗ ಮಾಮ್ಮಾಲೇ ಬಾಯಲೇಲೇ...........(ಪಾಂಡುರಂಗ ಮಾಮನವರ ಹೆಂಡತಿಯ.......)
ನನ್ನ ಬ್ರಾಂಚಿನ ಸ್ಟಾಪ್ ಹತ್ತಿರ ಬಂತು. 'ಮೆಗೆಲೆ ಸ್ಟಾಪ ಆಯಿಲೆ ಮಾಮ್ಮಾ, ತೂಂವೆ ಮೆಳ್ಳಲೇ ಭಾರೀ ಖೂಷಿ ಜಾಲ್ಲಿ, ಆನೇಕ ಪಟಿ ಮೆಳಯಾಂ' (ನನ್ನ ಸ್ಟಾಪು ಬಂತು ಇವರೇ, ನೀವು ಸಿಕ್ಕಿದ್ದು ಬಹಳ ಖುಷಿಯಾಯಿತು, ಇನ್ನೊಮ್ಮೆ ಸಿಗುವ...) ಬಸ್ ಇಳಿದು ಆಫೀಸು ತಲಪಿದೆ. ಇನ್ನೈದು ನಿಮಿಷ ನನ್ನ ಪಯಣ ಮುಂದರೆದಿದ್ದರೆ ನನ್ನ - ಅವರ ಸಂಬಂಧ ತನ್ಮೂಲಕ ಬಾಂಧವ್ಯ ಖಂಡಿತವಾಗಿಯೂ ಸ್ಥಾಪಿತವಾಗುತ್ತಿತ್ತು, ನನಗೆ ಖಚಿತವಿದೆ.
ನನ್ನ ಮೆನೇಜರುಗಳಲ್ಲಿ ಎಲ್ಲರೂ ಆತ್ಮೀಯರೇ. ಅವರಲ್ಲಿ ಮಾನ್ಯ ವೈ ಕೇ ಪೈಯವರು ಒಂದು ಮುಷ್ಟಿ ಜಾಸ್ತಿ ಪ್ರಿಯರು. ನೌಕರಿಯ ಸಂಬಂಧಗಳ ನಂತರ ಗೆಳೆತನ ಆತ್ಮೀಯವಾಗಿ ಧೃಡಗೊಂಡಿತು. ನನ್ನ ಮನೆ ಅವರ ಮನೆಗೆ ಹೋಗುವ ದಾರಿಯಲ್ಲೇ ಇತ್ತು. ವಾರಕ್ಕೆ ಮೂರು ನಾಲ್ಕು ಬಾರಿ ಅವರೊಡನೆ ಪಯಣವಿತ್ತು. ಬಹಳ ಮಧುರವಾದ, ಪ್ರಿಯವಾದ ಮಾತುಗಳು. ತುಂಬ ಸಂಯಮದ ವ್ಯವಹಾರ. ಗೆಳೆಯರೊಡನೆ, ಗ್ರಾಹಕರೊಡನೆ ಯಾವ ತೆರದಲ್ಲಿ ನಡಕೊಳ್ಳಬೇಕು ಎಂಬುದನ್ನು ಅವರ ಬಳಿ ಕಲಿಯಬೇಕು. ವೃತ್ತಿಯ ಓಟದಲ್ಲಿ ಅವರ - ನನ್ನ ಟ್ರಾಕುಗಳು ಬೇರೆ ಬೇರೆಯಾದರೂ ನಡುನಡುವೆ ಸಂಧಿಸುತ್ತಿದ್ದವು.
ನಿವೃತ್ತಿಯ ಬಳಿಕ ಅವರು ಬೆಂಗಳೂರು ಶಹರದಲ್ಲಿ ನೆಲಸಿದ್ದು ಪುನಃ ದೋಸ್ತಿ ಬೇಂಕು ಭಾಷೆಯಲ್ಲಿ ಹೇಳುವಂತೆ 'ರಿನ್ಯೂವಲ್' ಆಯಿತು. ಕೊರೋನಾ ಬಳಿಕ ಹೆಬ್ರಿಯಲ್ಲಿ ನಮ್ಮ ವಾಸ. ಹದಿನೈದು ದಿನಗಳಿಗೊಮ್ಮೆ ಒಂದೋ ನಾನು ಫೋನು ಮಾಡೂದು ಇಲ್ಲವೇ ಅವರಿಂದ ಕಾಲ್ ಬರೂದು ನಡಕೊಂಡು ಬಂದಿದೆ. ಮೊದಲು ಮೆನೆಜರ್ - ಆಫೀಸರ್ ಆಗಿದ್ದೆವು. ಬೆಂಗಳೂರಿನ ಅವರ ಮನೆಗೆ ಹೋದಾಗ ಅವರ ಪತ್ನಿ ಶಾರದಮಾಯಿ ತರ್ಪೆಯಿಂದ ಅವರು ನಮ್ಮ ಬಹು ಹತ್ತಿರದ ಸಂಬಂಧಿಗಳೆಂಬುದು ತಿಳಿದು ಸಂತಸವಾಯಿತು. 'ನೀನು ಆಗಾಗ ಬರುತ್ತ ಇರಬೇಕು ಮಹರಾಯ! ನಿನ್ನ ಬಳಿ ಮಾತಾಡಲು ತುಂಬ ಖುಷಿ ಆಗುತ್ತದೆ' ಪ್ರೀತಿಯ ನೂಲಲ್ಲಿ ಬಿಗಿಯಾಗಿ ಬಂಧಿಸಿ ಇಟ್ಟಿದ್ದಾರೆ. ಬೆಂಗಳೂರಿಗೆ ಬಂದಾಗ ಯಾವಾಗ ಅವರಲ್ಲಿ ಹೋದೇನು ಎಂಬ ತಹತಹ ನನ್ನಲ್ಲಿ ಉಂಟಾಗುತ್ತದೆ, ಅದು ಅವರಿಗೆ ಗೊತ್ತಿಲ್ಲ! ಗೆಳೆತನವೆಂದರೆ ಹಾಗೇನೇ.....
ನನ್ನ ಹಳೆಯ ಫೈಲುಗಳನ್ನು ಮಗುಚಿ ಗುಡ್ಡೆ ಹಾಕಿ ಓದುತ್ತಿರುವಾಗ ಮಂಗಳೂರು ಕೇ ಪೀ ಟೀ ಯ ಸೆಂಡ್ ಆಫ್ ಫೋಟೋ ಸಿಕ್ಕಿತು. ಅನೇಕ ನಾಸ್ಟಾಲ್ಜಿಕ್ ನೆನಪುಗಳು ಸಿನಿಮಾ ರೀಲುಗಳಂತೆ ಹರಿದು ಬಂದವು. ಅಂತೆಯೇ ಒಂದು ಪ್ರಬಂಧವನ್ನು ಶೇರ್ ಮಾಡಿದ್ದೆ. ಈ ಪ್ರಬಂಧದ ಸವಿಯಾದ ಫಲಶ್ರುತಿಯಾಗಿ ಕಾರ್ಕಳದ ವಿದ್ಯಾರ್ಥಿ ಗೆಳೆಯ ಸುರೇಶ ಕಾಮತರು ತಮ್ಮ ಐವತ್ತಾರು ವರ್ಷಗಳ ಗೆಳೆತನವನ್ನು ನವೀಕರಿಸಿಕೊಂಡರು! ಸುಮಾರು ಒಂದು ತಾಸಿನ ತನಕ ಫೋನ್ ಸಂಭಾಷಣೆ ನಡೆಯಿತು, ನನ್ನ ಸಂಭ್ರಮವನ್ನು ಅವರೂ, ಅವರ ತವಕ, ಉತ್ಸುಕತೆ ಹಾಗೂ ಸಂಭ್ರಮವನ್ನು ನಾನೂ ಅನುಭವಿಸಿದೆವು. ಮೊನ್ನೆ ಪುನಃ ಮಾತಾಡುವಾಗ ಪ್ರಿಯ ವೈ ಕೆ ಪೈ ಮಾಮನವರ ವಿಚಾರ ಬಂತು. ಕಾಮತರು ಪೈಯವರಿಗೆ ಸಂಬಂಧಿ. ಪೈಯವರು ನಮಗೆ ಸಂಬಂಧಿ. ಆಯ್ತಲ್ಲಾ ಈಗ ನಾನು - ಕಾಮತರು ಗೆಳೆಯರು ಮಾತ್ರವಲ್ಲ ಸಂಬಂಧಿಗಳು ಕೂಡಾ!...
ಹೇಳಿದೆನಲ್ಲ ಈ ದೊರಕೆಗಳು ಒಬ್ಬರಿಗೊಬ್ಬರು ಪೈಕಿಗಳೇ..! ಸ್ವಲ್ಪ ಕೆದಕಬೇಕು, ಹುಡುಕಬೇಕು, ಪರಸ್ಪರ ಮಾತನಾಡುತ್ತ ಇರಬೇಕು ಅಥವಾ ನನ್ನಂತೆ ಊದ್ದ ನಾಲಗೆಯವನಾಗಿರಬೇಕು....