#ಸೂರಿಮಾಣಿ - ’ಹನುಮದ್ವಿಕಾಸಕ್ಕೆ ಎಲ್ಲೆ ಇಲ್ಲ’ ಎಂದು ಸಾಬೀತುಪಡಿಸಿದ ನೀಲಾವರ ಸುರೇಂದ್ರ ಅಡಿಗರ ಆತ್ಮಕತೆ.
ಸೂರಿಮಾಣಿ ನೀಲಾವರ ಸುರೇಂದ್ರ ಅಡಿಗರ ಹಲವು ಕಂತುಗಳಲ್ಲಿ ಬರೆಯಲಾದ ಆತ್ಮಕತೆಯ ಒಂದು ಮುಖ್ಯಭಾಗ. ಅದು ಅವರು ಮೈಬಗ್ಗಿಸಿ ದುಡಿದು, ಅಭಿನಂದನೀಯ ವ್ಯಕ್ತಿತ್ವವನ್ನು ಕಟ್ಟಿಕೊಂಡ ಸ್ವಯಂಕೃಷಿಯ ಕತೆ. ಅಥವಾ ಅದು ಸುರೇಂದ್ರ ಅಡಿಗರಿಗೆ ಆಗಾಗ ನೆನಪಾಗಿ ಕಾಡುವ ಹಲವು ಘಟನೆಗಳ ಗುಚ್ಛ - ಮೆಮೊಯರ್ - ಸ್ಮೃತಿಚಿತ್ರದ ಒಂದು ಭಾಗ. ಅದರಲ್ಲಿ ಅವರು ಕಟ್ಟಿಕೊಡುವ ವ್ಯಕ್ತಿತ್ವ ನಿರ್ಮಾಣದ ಕಥೆಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಿದ್ದರೆ, ಸೂರಿಮಾಣಿಯನ್ನು ನಾವು ೨೦೨೧ರಲ್ಲಿ ಪ್ರಕಟವಾಗಿದ್ದ ನೆನಪಿನಾಳದಿಂದ (೫೩೬ ಪುಟಗಳು), ೨೦೦೯ರಲ್ಲಿ ಪ್ರಕಟವಾದ ನೆನಪುಗಳು ಗರಿಗೆದರಿದಾಗ ಮತ್ತು ೨೦೨೧ ರಲ್ಲಿ ಪ್ರಕಟವಾದ ನೆನಪಿನ ಬುತ್ತಿ, ಎಂಬ ಮೂರು ಪುಸ್ತಕಗಳೊಂದಿಗೆ ಓದಬೇಕಾಗುತ್ತದೆ. ಏಕೆಂದರೆ, ಈ ಮೂರು ಪುಸ್ತಕಗಳು (ಇದೇ ಆರ್ಡರಿನಲ್ಲಿ ಬರೆಯಲ್ಪಟ್ಟಿಲ್ಲವಾದರೂ) ಅವರ ಬದುಕಿನ ಮಹತ್ವದ ಘಟನೆಗಳು ಘಟಿಸಿದ ಕಾಲಘಟ್ಟಗಳನ್ನುಒಂದು ವ್ಯವಸ್ಥಿತವಾದ ಕ್ರಮದಲ್ಲಿ ಮಂಡಿಸುತ್ತವೆ.
(೧) ಸೂರಿಮಾಣಿಯಲ್ಲಿ ಅಡಿಗರು ೧೯೭೮ರಿಂದ ೧೯೯೩ರ ವರೆಗೆ (೧೯೮೫-೮೭ ಎರಡುವರ್ಷ ಹೊರತುಪಡಿಸಿ) ತಾವು ಹೋಟೆಲ್ ಮಾಣಿಯಾಗಿ, ಮತ್ತು ಸ್ವಂತ ಹೋಟೆಲ್ಲಿನಲ್ಲಿ ಅಪ್ಪಯ್ಯ, ಅಣ್ಣಂದಿರ ಜೊತೆ ಕೆಲಸಮಾಡಿ, ಹೋಟೆಲ್ ವ್ಯವಹಾರಗಳ ಬಗ್ಗೆ ಅರಿವನ್ನು ಕರಗತಮಾಡಿಕೊಂಡ ವಿಷಯವಿದೆ.
(೨) ನೆನಪಿನ ಬುತ್ತಿಯಲ್ಲಿ ೨೦.೦೧.೧೯೯೩ರಿಂದ ೦೫.೦೭.೨೦೦೫ರ ತನಕದ ಶೈಕ್ಷಣಿಕ ಅನುಭವಗಳು ದಾಖಲಾಗಿವೆ.
(೩) ನೆನಪಿನಾಳದಿಂದ ಕೃತಿಯಲ್ಲಿ ೦೬.೦೭.೨೦೦೫ರಿಂದ ೩೧.೦೭.೨೦೨೧ರವರೆಗಿನ ಅವರ ಎಲ್ಲಾ ಶೈಕ್ಷಣಿಕ ಅನುಭವಗಳು ದಾಖಲಾಗಿವೆ.
ನೆನಪುಗಳು ಗರಿಗೆದರಿದಾಗ ಅಡಿಗರ ಶೈಕ್ಷಣಿಕ ಅನುಭವಗಳ ಕಥನ. ಅದನ್ನು ನಿರ್ಧಿಷ್ಟ ಕಾಲ ಘಟ್ಟಕ್ಕೆ ಸೀಮಿತಗೊಳಿಸಲಾಗದ ಶೈಕ್ಷಣಿಕ ಆತ್ಮಕಥನ ಎಂದೂ ಕರೆಯಬಹುದು.ಈ ಹೊತ್ತಗೆಯಲ್ಲಿ ಅಡಿಗರು ಹೇಳಿದ್ದಿದೆ. "ನನಗಿಂತ ಉತ್ತಮ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಬಹಳಷ್ಟು ಮಂದಿ ಇದ್ದಾರೆ. ಆದರೆ ಅವರೆಲ್ಲರಲ್ಲಿರುವ ಕೊರತೆ ಒಂದೇ. ಸಾಧನೆಯ ದಾಖಲೀಕರಣ ಮಾಡಿಕೊಳ್ಳದೇ ಇರುವುದು." ಈ ನಾಲ್ಕೂ ಪುಸ್ತಕಗಳಲ್ಲಿ ನಾವು ಗಮನಿಸಲೇಬೇಕಾದ ಅಡಿಗರ ಬರವಣಿಗೆಯ ಪ್ರಶಂಸನೀಯ ಗುಣವೆಂದರೆ, ಅವರ ಬರವಣಿಗೆಯೆಲ್ಲವೂ ದಿನಚರಿಯ ದಾಖಲೆಯಂತಹವು. ಶಿಕ್ಷಕರ ದಿನಚರಿಯ ಕುರಿತು ಅವರು ನೀಡುವ ಮಾರ್ಗದರ್ಶನದಲ್ಲಿ ಪ್ರಾಯಶಃ ನಾವೆಲ್ಲರೂ ಕಲಿಯಬೇಕಾದಂತಹ ಪಾಠಗಳಿವೆ.
ಇವುಗಳೊಂದಿಗೆ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಾದ ಇನ್ನೊಂದು ಕೃತಿ ಅಡಿಗರ ಬೃಹತ್ ಕಾದಂಬರಿ ’ಹುಲಿಯಪ್ಪ ಮೇಷ್ಟ್ರು’. ಅಡಿಗರು ಶೈಕ್ಷಣಿಕ ರಂಗದಲ್ಲಿ ತಮ್ಮ ಎದುರಿದ್ದ ಆದರ್ಶವನ್ನು ಹುಲಿಯಪ್ಪಮೇಷ್ಟರ ಆದರ್ಶವಾಗಿ ಬೆಳೆಸುತ್ತಾ ಹೋಗುವುದರಿಂದ ಆ ಕಾದಂಬರಿಯು ಅಡಿಗರ ಆತ್ಮಚರಿತ್ರೆಯ ಹೇಳಲಾಗದ ಮತ್ತು ಹೇಳದೇಹೋದ ಸಂಗತಿಗಳ ಚಿತ್ರಣ ವೆಂದೇ ನಾವು ಪರಿಗಣಿಸಬಹುದು ಎಂದು ಆ ಕಾದಂಬರಿಯ ಮುನ್ನುಡಿಯಲ್ಲಿ ನಾನು ಬರೆದಿದ್ದೆ. ಅಲ್ಲೇ ಎಂ ಆರ್ ಶ್ರೀನಿವಾಸಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ಎಂಬ ಕೃತಿಯನ್ನು ಸಕಾರಣವಾಗಿಯೇ ನೆನಪಿಸಿಕೊಂಡಿದ್ದೆ. ರಂಗಣ್ಣನ ಕನಸಿನ ದಿನಗಳು ಪ್ರಕಟವಾಗಿ ಈ ಹೊತ್ತಿಗೆ ೭೫ ವರ್ಷಗಳಾದವು ಎನ್ನುವುದನ್ನೂ ನೆನಪಿಸಿಕೊಂಡಾಗ ಅಡಿಗರ ಆತ್ಮಚರಿತ್ರೆಗಳು ಅಧ್ಯಾಪನ ವೃತ್ತಿಯನ್ನು ಆಧರಿಸಿದ ಸ್ಮೃತಿಚಿತ್ರಗಳ ಪಂಕ್ತಿಯಲ್ಲೊಂದು ಐತಿಹಾಸಿಕ ಮೈಲಿಗಲ್ಲೆಂದು ಹೇಳ ಬಹುದು.
ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದ್ದ ಅಡಿಗರಿಗೆ ಶಿಕ್ಷಕನಾಗಬೇಕೆಂಬ ಆಸೆಯಿದ್ದಿತ್ತಂತೆ. ಅಮ್ಮನ ಒತ್ತಾಯಕ್ಕೆ ಪಿಯೂಸಿ ಸೇರಿ, ಫೈಲಾಗಿ ಶಿಕ್ಷಣ ಕೈಬಿಟ್ಟು ೧೯೭೮ರ ಎಪ್ರಿಲ್ಲಿನಲ್ಲಿ ಬೆಂಗಳೂರಿಗೆ ಬಂದಲ್ಲಿಂದ ಸೂರಿಮಾಣಿಯೆಂಬ ಆದಿಪರ್ವದ ಕತೆ ಮುಂದುವರಿಯುತ್ತದೆ.೧೯೭೮ರಲ್ಲಿ ಅವರ ಅಪ್ಪಯ್ಯ ಅನಂತ ಅಡಿಗರು ಚಿಕ್ಕಪೇಟೆ ರಾಘವೇಂದ್ರಸ್ವಾಮಿ ಪ್ರಸನ್ನ ಹೋಟೆಲಿನಲ್ಲಿ ಉದ್ಯೋಗದಲ್ಲಿದ್ದು ಇತರ ಹಲವು ಹೋಟೆಲ್ಲುಗಳ ಲೆಕ್ಕಪತ್ರ ಬರೆಯುತ್ತಿದ್ದರಂತೆ. ಅಡಿಗರು ಅಪ್ಪಯ್ಯನಿಗೆ ಸಹಾಯ ಮಾಡುತ್ತಾ, ಲೆಕ್ಕಪತ್ರ ನಿರ್ವಹಣೆಯ ಕಲೆ ಕಲಿತು, ತಂದೆಯ ಕಾಲಾನಂತರ ಸುಮಾರು ೩೦ ಹೋಟೆಲ್ಲುಗಳ ಲೆಕ್ಕ ಬರೆದು ಕೈಯಲ್ಲಿಷ್ಟು ಹಣ ಓಡುವಂತಾದ ಮೇಲೂ ಶಿಕ್ಷಕವೃತ್ತಿಯನ್ನು ಹಂಬಲಿಸತೊಡಗಿದರಂತೆ. ಅಡಿಗರ ಜೀವನ ಚರಿತ್ರೆಯ ಈ ಭಾಗದಿಂದ ನಾವು ಕಲಿಯಬಹುದಾದ ಮಹತ್ವದ ಪಾಠಗಳೆಂದರೆ (೧) ಒಂದು ವೃತ್ತಿಗಿಳಿದಮೇಲೆ ಅದಕ್ಕೆ ಸಂಬಂಧಿಸಿದ ಎಂತಹ ಪುಟ್ಟ ಕೆಲಸವನ್ನಾದರೂ ಮಾಡಲು ಹಿಂಜರಿಯಬಾರದು (೨) ಯಾವ ಸಂದರ್ಭದಲ್ಲಿಯೂ ಬದುಕಿನ ಗುರಿಯನ್ನು ಮರೆಯಬಾರದು (೩) ಹರೆಯದಲ್ಲಿ ಸಿಕ್ಕಿದ ಎಲ್ಲಾ ಅವಕಾಶಗಳನ್ನು, ವಿರಾಮದ ಸಮಯವನ್ನು ಸದುಪಯೋಗಪಡಿಸಿಕೊಳ್ಳ ಬೇಕು. (೪) ಕನ್ನಡದ ಕೆಲಸಕ್ಕಿಷ್ಟು ಸಮಯ ಮೀಸಲಿಡಬೇಕು.
ಸೂರಿಮಾಣಿ ಮೊದಲೇ ಹೇಳಿದಂತೆ, ಅಡಿಗರ ಹೋಟೆಲ್ ಜೀವನ ಕಥನ. ಇಲ್ಲಿರುವುದು ಅಡಿಗರ ಆತ್ಮಕಥನ ಮಾತ್ರವಲ್ಲ, ಆ ಕಾಲದ ಹೋಟೆಲ್ ಕಾರ್ಮಿಕರ ಕಥೆ ವ್ಯಥೆ- ನೋವು ನಲಿವು, ಹೋಟೆಲ್ ಯಜಮಾನರ ಹೃದಯವಂತಿಕೆ, ಅಡಿಗರು ತಮ್ಮ ತಂದೆಯಿಂದ ಮತ್ತು ಇತರ ಯಜಮಾನರಿಂದ ಕಲಿತ ಸನ್ನಡತೆ, ಪರ್ಯಾಯ ಉದ್ದಿಮೆಗಿಳಿದು ಉದ್ಧಾರವಾದ ಕಾರ್ಮಿಕರು, ಕಷ್ಟಪಟ್ಟು ಜೀವನ ಸಾಗಿಸಿ ಕಲ್ಲರಳಿ ಹೂವಾದವರು, ಊರಿಗೆ ಬೆಳಕಾದವರು, ಮುಂದಿನ ಪೀಳಿಗೆಗ್ ಅನುಕರಣೀಯರಾದವರು - ಎಲ್ಲರ ಕಥೆಯೂ ಆಗಿರುತ್ತದೆ.
ಸೂರಿಮಾಣಿಯ ಇನ್ನೊಂದು ಮಹತ್ವದ ಅಧ್ಯಾಯ ಅಡಿಗರ ಸಾಹಿತ್ಯ ಮತ್ತು ಸಂಘಟನೆಯ ಆಸಕ್ತಿಗೆ ಹೋಟೆಲ್ ಕೆಲಸದ ನಡುವೆಯೂ ಅವಕಾಶ ಸಿಗುವುದು. ಹೋಟೆಲ್ ಕೆಲಸ ಮಾಡುತ್ತಾ ಅವರು ಬೆಳಸಿಕೊಂಡ ಆಸಕ್ತಿ, ಅವರು ಅಣ್ಣಂದಿರ ಪ್ರೋತ್ಸಾಹದಿಂದ ಹೋಟೆಲ್ಲಿನಲ್ಲಿ ಏರ್ಪಡಿಸುತ್ತಿದ್ದ ನೂರಾರು ಕಾರ್ಯಕ್ರಮಗಳು ಅವರ ಮುಂದಿನ ದಿನಗಳ ಬೆಳವಣಿಗೆಗೆ ಭದ್ರ ತಳಹದಿ ಹಾಕಿಕೊಟ್ಟವು.
ಗೋಪಾಲಕೃಷ್ಣ ಅಡಿಗರ ವರ್ಧಮಾನ ಕವಿತೆಯ ಕೊನೆಯಲ್ಲಿ ಹನುಮದ್ವಿಕಾಸಕ್ಕೆ ಎಲ್ಲೆ ಇಲ್ಲ ಎಂಬ ರೂಪಕವೊಂದು ಬರುತ್ತದೆ. ಹನುಮಂತ ಲಂಕೆಗೆ ಜಿಗಿವ ಮೊದಲು ಆಕಾಶದೆತ್ತರಕ್ಕೆ ಬೆಳೆದುನಿಲ್ಲುವ ಪುರಾಣಪ್ರತಿಮೆ ಒಂದೆಡೆಯಾದರೆ ಇನ್ನೊಂದೆಡೆ ಡಾರ್ವಿನ್ನನ ವಿಕಾಸವಾದಕ್ಕೂ ಈ ರೂಪಕ ಸಲ್ಲುತ್ತದೆ. ೧೯೭೮ನೆಯ ಇಸವಿ ಎಪ್ರಿಲ್ ೨೨ನೆಯ ತಾರೀಕು ಹೋಟೆಲ್ ಮಾಣಿಯಾಗಿ ಬದುಕಿನ ನೊಗಕ್ಕೆ ಹೆಗಲು ಕೊಟ್ಟ ಅಡಿಗರು ಯಶಸ್ವಿ ಅಧ್ಯಾಪಕರಾಗಿ, ಶಿಕ್ಷಣ ತಜ್ಞರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತಿಯಾಗಿ ಏರಿದ ಎತ್ತರ ಇದೆಯಲ್ಲ, ಅದು ಹನುಮದ್ವಿಕಾಸ. ಎಲ್ಲಕ್ಕಿಂತ ಹೆಚ್ಚಾಗಿ ಕಸಾಪ ಜಿಲ್ಲಾ ಧ್ಯಕ್ಷರಾಗಿ ಮೂರನೆಯ ಟರ್ಮ್. ಎಲ್ಲವೂ ಯೋಜನೆಯಂತೆ ನಡೆದರೆ ೧೦೦ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಡುವ ಏಕೈಕ ಜಿಲ್ಲಾಧ್ಯಕ್ಷ. ಈ ಎರಡು ದಾಖಲೆಗಳನ್ನು ಮಾತ್ರ ಯಾರೂ ಮುರಿಯುವಂತಿಲ್ಲ. ಹನುಮದ್ವಿಕಾಸಕ್ಕೆ ಎಲ್ಲೆ ಇಲ್ಲ ಎಂದರೆ ಇದು.
*** (ಇವತ್ತು ಕೋಟದಲ್ಲಿ ಸನ್ಮಾನಗೊಳ್ಳುತ್ತಿರುವ ಅಡಿಗರಿಗೆ ಶುಭ ಹಾರೈಕೆಗಳೊಂದಿಗೆ) ೧೧.೦೪.೨೦೨೪
No comments:
Post a Comment