Tuesday, July 11, 2023

ಒಂದು ಆಪ್ತಸಮ್ಮಿತ

ಆತ್ಮೀಯರಾದ ಬೊಳುವಾರರಿಗೆ ಸಪ್ರೇಮ ನಮಸ್ಕಾರಗಳು,
ತಮ್ಮ ’ಸ್ವಾತಂತ್ರದ ಓಟ’ ಕಾದಂಬರಿಯನ್ನು ಓದಿ ತುಂಬಾ ಪ್ರಭಾವಿತನಾಗಿದ್ದೇನೆ. ಒಂದು ಬಹಳವೇ ಚನ್ನಾದ ಕೃತಿಯೊಂದನ್ನು ಕನ್ನಡಕ್ಕೆ ನೀವು ನೀಡಿದ್ದೀರಿ. ಮನಸ್ಸು ಉಲ್ಲಸಿತವಾದಾಗ, ಬೇಸರವಾದಾಗ ಅದನ್ನು ಎತ್ತಿಕೊಂಡು ಓದುವ ಅಭ್ಯಾಸ. 2014 ರ ಸಮಯ ತಮಗೊಂದು ಪತ್ರ ಬರೆದಿದ್ದೆ. ಅದರ ಪ್ರತಿಯೊಂದನ್ನು ಇಲ್ಲಿ ತಮಗೆ ಫೇಸ್ ಬುಕ್ ನಲ್ಲಿ - ಕೇವಲ ತಮಗೆ ಮಾತ್ರ - ಕಳಿಸಿದ್ದೇನೆ. ತಮ್ಮ ಅನುಮತಿಯಿದ್ದರೆ, ಸೂಕ್ತವೆಂದು ತಮಗೆ ಅನಿಸಿದರೆ ಪ್ರಕಟಿಸಬಹುದೇ? ತಮ್ಮ ಸಮ್ಮತಿ ಬೇಕು.

-ಒಂದು ಆಪ್ತ ಸಮ್ಮಿತ-

ಆತ್ಮೀಯ ಬೊಳುವಾರರೇ                                                                                                                         ಬೆಂಗಳೂರು

ಅಳಬಾರದು....ಇದು ಮೂರನೇ ಸಲ ನಾನು ಓದುತ್ತಿರೂದು. ಖಂಡಿತಾ ಅಳೂದಿಲ್ಲ ಅಂತಲೇ ಕೂತು ಓದುತ್ತಿದ್ದೆ...

''ದಿಗ್ಭ್ರಮೆಗೊಂಡಿದ್ದ ಚಾಂದಜ್ಜ, ನಿಖಾದ ಮಂಚದಲ್ಲಿ ಕುಳಿತಿರುವ ಉಸ್ಮಾನ್ ಸಾಹೇಬರತ್ತ ಕಣ್ಣು ಹಾಯಿಸಿದಾಗ. ಅವರು ಮುಂಡಾಸು ಬಿಚ್ಚಿ ಮುಖ ಮುಚ್ಚಿಕೊಂಡದ್ದು ಕಾಣಿಸಿತು:  ಅಳುತ್ತಿದ್ದಾರೆಯೇ?” (ಪುಟ 849)

ಪಕ್ಕಾ ವ್ಯವಹಾರಸ್ಥ ಜನ್ನತ್ ಹಾಜಿಯವರು ಬರ್ಕಲೀ ಉಸ್ಮಾನ್ ಸಾಹೇಬರಿಗೆ ಮಾಡಿದ ಮೋಸದ ಪರಿಮಾರ್ಜನೆಗಾಗಿ ಅವರ ಮಗ ಅಸ್ಲಮ್ ಇವರ ಮಗಳನ್ನು ಮದುವೆಯಾಗುವ ಸೀನು... ನನ್ನನ್ನು ಮೂರನೇ ಸಲವೂ ಸೋಲಿಸಿಬಿಟ್ಟಿತು. ಓದುಗರ ಹೃದಯವನ್ನು ತಟ್ಟಿ ನಿಮ್ಮ ಕತೆ ಸಾಗುತ್ತದೆ. ಅಥವಾ ನಾನು ಅತಿ ಭಾವುಕನೇ ಎಂಬ ಶಂಕೆ ಹುಟ್ಟುತ್ತದೆ. ಇನ್ನೊಬ್ಬನ ಹಣವನ್ನು ಆತ ಯಾವ ನಂಬಿಕೆಯಿಂದ ಮತ್ತು ಎಷ್ಟು ಕಷ್ಟದಿಂದ ಕೊಟ್ಟಿದ್ದಾನೆ ಎಂಬ ಅರಿವಿದ್ದರೂ ಕೇರು ಮಾಡದೇ ತನ್ನ ಲಾಭ, ವ್ಯವಹಾರ, ದೊಡ್ಡಸ್ಥಿಕೆ ಮುಂತಾದವುಗಳಲ್ಲೇ ಮುಳುಗಿರುವ ಒಣ ಹಾಗೂ ಕಟು ಹೃದಯದ ಜನ್ನತ್ ಹಾಜಿ! ತಂದೆ ಎಂತಹ ಘೋರ ಪಾತಕ ಮಾಡಿದ್ದಾರೆ! ಎಂಬ ಅರಿವಾದಾಗ ಅದರ ಪ್ರಾಯಶ್ಚಿತ್ತ ಮಾಡಬಯಸಿದ ಅಸ್ಲಮ್ಮಿನ ಹೃದಯವೈಶಾಲ್ಯ... ಕತೆಯನ್ನು ಕೊಂಡುಹೋದ ಪರಿ ತುಂಬ ಪರಿಣಾಮಕಾರಿಯಾಗಿದೆ. ಏಕೆಂದರೆ ಒಬ್ಬನನ್ನು ಮಹಾತ್ಮನಂತೆ ಚಿತ್ರಿಸುವುದೇ ಬೇರೆ, ಸಹಜವಾದ ವ್ಯಕ್ತಿಯೊಬ್ಬ ಅಸಾಧಾರಣ ನಿರ್ಧಾರವನ್ನು ಸಹಜವಾಗಿಯೇ ತೆಗೆದುಕೊಂಡಂತೆ ಬಣ್ಣಿಸುವುದೇ ಬೇರೆ. ಉಸ್ಮಾನ್ ಸಾಹೇಬರು ಕೃತಜ್ಞತೆ, ದೈನ್ಯತೆ, ಆನಂದ, ಸುಖ ಮುಂತಾದ ಭಾವಗಳನ್ನು ವ್ಯಕ್ತಪಡಿಸಲಾಗದೇ ಮುಂಡಾಸಿನಿಂದ ಮುಖ ಮುಚ್ಚಿಕೊಂಡಾಗ ನನ್ನ ಎದುರು ಗೆಳೆಯರೊಬ್ಬರಿದ್ದರು. ಎಪಿಸೋಡು ಓದುತ್ತಿರುವಾಗ ನನ್ನ ಮುಖಭಾವ ಬದಲಾದುದು ಅವರಿಗೆ ಭಾಸವಾಯಿತೋ ಎಂದು ನಾನು ತಲೆತಗ್ಗಿಸಿ  ಓದು ಮುಂದುವರೆಸಿದೆ.

”ಇನ್ನೇನೆಲ್ಲ ಆಗಲಿಕ್ಕಿದೆಯೋ ಎಂದು ಗಲಿಬಿಲಿಗೊಂಡ ಕೆದ್ಲಾಯರು ತಟ್ಟನೆ ತಿರುಗಿ ನೋಡಿದರು. ಹತ್ತಿರ ಬಂದ ನಾಸಿರ್, ಕೆದ್ಲಾಯರ ಬಲಗೈಯನ್ನು ತನ್ನೆರಡೂ ಕೈಗಳಿಂದ ಹಿಡಿದು ಎತ್ತಿ ಮೊದಲು ಕಣ್ಣಿಗೊತ್ತಿಕೊಂಡು ಬಳಿಕ ಬಲವಾಗಿ ಮುತ್ತಿಟ್ಟು, ನಂತರ ತಲೆಯೆತ್ತಿ ಹೇಳಿದ್ದ ”ನಿಮ್ಮ ಮುತ್ತುಪ್ಪಾಡಿಯಲ್ಲಿ ಇರುವವರೆಲ್ಲ ಎಷ್ಟು ಒಳ್ಳೆಯವರು!” (ಪುಟ 557)

ಇದೂ ಸಹ ಒಂದು ತೀರಾ ಭಾವುಕ ಸನ್ನಿವೇಶ. ಒಂದು ಊರಿನ ಸಾಮಾಜಿಕ ಪರಿಸರ ಎಷ್ಟು ಶುದ್ಧ ಹಾಗೂ ಸರಳವಾಗಿರುತ್ತದೆ, ಊರ ಜನರು ಎಷ್ಟು ಪ್ರೀತಿಯಿಂದ, ಸ್ನೇಹದಿಂದ ಪರಸ್ಪರ ಹೊಂದಿಕೊಂಡು ಇರ್ತಾರೆ ಎಂಬುದನ್ನು ಬಹು ಚನ್ನಾಗಿ ವರ್ಣಿಸಿದ್ದೀರಿ. ನನ್ನ ಹಿಂದಿನ ದಿನಗಳ ಚಿಕ್ಕ ಪ್ರಕರಣ ನೆನಪಿಗೆ ಬರುತ್ತದೆ...

70ರ ಇಸವಿಯಲ್ಲಿ ನಾವು ತೀರ ಬಡತನದಲ್ಲಿ ಇದ್ದೆವು. ನಾವು ಏಳು ಮಂದಿ ಮಕ್ಕಳು. ನಾನೇ ಹಿರಿಯಂವ. ನನಗೆ ಇಪ್ಪತ್ತು ವರ್ಷ ಪ್ರಾಯ. ಯಾವುದೇ ನೌಕರಿ ಇಲ್ಲ. ಊರ ಹೊರಗೆ ಮುಳಿಮಾಡಿನ ಹಳ್ಳಿಮನೆ ಒಂದರಲ್ಲಿ ವಾಸ. ಶಿವಮೊಗ್ಗದಿಂದ ಬಸ್ಸಿನ ಟಾಪಿನ ಮೇಲೆ ತರಕಾರಿ ತಂದು ಊರಲ್ಲಿ ಮಾರಿ ಬರುವ ನಾಲ್ಕು ಪಾವಾಣೆ ಲಾಭದಲ್ಲಿ ನಮ್ಮ ಜೀವನ ಕುಂಟುತ್ತ ನಡೆಯುತ್ತಿತ್ತು. ಮೆಕಾನಿಕಲ್ ಇಂಜಿನಿಯರಿಂಗ್ - ಡಿಪ್ಲೋಮಾ ಹೊಂದಿದ ನಾನು ಆಗ ಅನ್ ಎಂಪ್ಲೋಯ್ಡ್ ಆಗಿ ದೊಡ್ಡಪ್ಪನ ಅಂಗಡಿಯಲ್ಲಿ ವ್ಯಾಪಾರಕ್ಕೆ ಹೆಲ್ಪ್ ಮಾಡಿ ದಿನ ಕಳೆಯುತ್ತಿದ್ದೆ. ಸರಿಕಟ್ಟು ಜಾಬ್ ಆಗಿರಲಿಲ್ಲ. ಉಳಿದ ತಮ್ಮಂದಿರು ಚಿಕ್ಕವರು. ಮನೆಯಲ್ಲಿ ಹಪ್ಪಳ ಸಂಡಿಗೆ ಸಂಬಾರುಹುಡಿಗಳನ್ನು ಮಾಡಿ ಮಾರುತ್ತಿದ್ದೆವು. ಒಟ್ಟಾರೆಯಾಗಿ ಕುರುಕುಟ್ಟು ಜೀವನ ಸಾಗುತ್ತಿತ್ತು. ನಮ್ಮ ತಾಯಿಗೆ ಏನೋ ನನ್ನ ಮೇಲೆ ತುಂಬ ಭರವಸೆ ಇತ್ತು. ಆದರೆ ನನಗೇ ನನ್ನ ಮೇಲೆ ವಿಶ್ವಾಸ ಕಮ್ಮಿ ಆಗುತ್ತ ಬಂದ ಸಮಯವಾಗಿತ್ತು. ಯಾವುದೇ ಆಫರ್ ಅಥವಾ ಇಂಟರ್ವ್ಯೂ ಕಾಲ್ ಬರುತ್ತಾ ಇರಲಿಲ್ಲ. ಏನಾದರೂ ಸ್ವಂತ ಮಾಡುವಾ ಅಂದರೆ ನಾಳಿನ ಊಟಕ್ಕೆ ಊಟಕ್ಕೆ ತತ್ವಾರ ಎನ್ನುವ ನಾವು ಸ್ವಂತ ಇಂಡಸ್ಟ್ರಿ ಏನಂತ ಮಾಡುವುದು? ಈ ಕಷ್ಟ, ಬಡತನ ನಮಗೇ ಏಕೆ ಬರ್ತದೆ? ಎಷ್ಟು ಕಾಲ ನಾವು ಹೀಗೆ ಒದ್ದಾಡಬೇಕು? ಉತ್ತರ ಸಿಗದ ಅನೇಕ ಪ್ರಶ್ನೆಗಳ ತುಂಬಾ ರಾತ್ರಿಗಳನ್ನು ಕಳೆದಿದ್ದೆ. ಮೇ ತಿಂಗಳ ಅಂತಹದೊಂದು ರಾತ್ರಿ ಸುಮಾರು ಎರಡು ಘಂಟೆಯ ಹೊತ್ತಿಗೆ ಮನೆಯ ಹಿಂದಿನ ಕೊಟ್ಟಿಗೆಗೆ ಭಗ್ಗನೆ ಬೆಂಕಿ ತಾಗಿ ನೋಡನೋಡುತ್ತಿದ್ದಂತೆ ಎಲ್ಲವೂ ಸುಟ್ಟು ಬೂದಿಯಾಯಿತು. ದೇವರು ದೊಡ್ಡವನು, ಯಾರೋ ಒಬ್ಬ ಲಾರಿಡ್ರೈವರ್ ನ ರೂಪದಲ್ಲಿ ಬಂದು ನಮ್ಮೆಲ್ಲರನ್ನು ರಕ್ಷಿಸಿದ. ರಾತ್ರಿಯ ಸಮಯದಲ್ಲಿ ಬ್ರಹ್ಮಾವರದಿಂದ ಯಾರದ್ದೋ ಸರಕು ಅನ್ ಲೋಡು ಮಾಡಿ ಆ ಡ್ರೈವರು ವಾಪಸು ಬರುತ್ತಿದ್ದ. ದೂರದಲ್ಲಿ ಬೆಂಕಿಯ ರುದ್ರನರ್ತನ ಕಂಡದ್ದೇ ಆತ ಜೀವದ ಹಂಗು ತೊರೆದು ಲಾರಿ ಓಡಿಸಿಕೊಂಡು ಬಂದು ಬರಲಿರುವ ದುರಂತದ ಯಾವುದೇ ಪರಿವೆ ಇಲ್ಲದೆ ನಿದ್ರಿಸುತ್ತಿದ್ದ ನಮ್ಮನ್ನು ಎಬ್ಬಿಸಿದ. ಹಟ್ಟಿಯಲ್ಲಿ ಆನೆಮರಿಯಂತ ಒಂದು ಎಮ್ಮೆಯಿತ್ತು.ಇಂಗ್ಲಿಷ್ ಪಿಕ್ಚರುಗಳಲ್ಲಿ ತೋರಿಸುತ್ತಾರಲ್ಲ - ಬಾಂಬು ಡೆಟೋನೇಟರಿನ ರಿಮೋಟು ಕೊನೆಯ ಎರಡು ಸೆಕೆಂಡು ಇರುವಾಗ ಡಿಫ್ಯೂಸ್ ಮಾಡುತ್ತಾರಲ್ಲ - ಆ ರೀತಿಯಲ್ಲಿ ಆ ಎಮ್ಮೆಯ ಕೊರಳ ಹಗ್ಗವನ್ನು ಬಿಚ್ಚಿ ಹಟ್ಟಿಯಿಂದ ಅದು ಹೊರಗೆ ಬರಲಿಕ್ಕೂ ಹಟ್ಟಿಯ ಕೊಗಳು ಸುಟ್ಟು ಬೀಳಲಿಕ್ಕೂ ಸರಿಯಾಯ್ತು! ದೇವರು ದೊಡ್ಡವನು ಎಂದದ್ದು ಅದಕ್ಕೇ. ಬೆಂಕಿಯನ್ನು ನಂದಿಸಲೂ ಆಗದಷ್ಟು ಝಳವಿದ್ದುದರಿಂದ ಎಲ್ಲಾ ಭಸ್ಮವಾಗಿ ಹೋಯಿತು. ನಂತರದ ಕತ್ತಲು ಮುಂದಿನ ದಿನಗಳ ಕತ್ತಲಾದ ಭವಿಷ್ಯವನ್ನು ನೆನೆದು ತಂದೆಯವರು ಗೋಳೋ ಎಂದು ಅತ್ತದ್ದನ್ನು ನಾನು ಇಂದಿಗೂ ಮರೆಯಲಾರೆ.

ನಾವು ಪೂರಾ ರಸ್ಸೆಗೇ ಬಂದು ಬಿದ್ದೆವು. ಬೆಂಕಿ ಬಿದ್ದ ದಿನ ಸಂಜೆಯ ಸಮಯ ಮನೆಯಲ್ಲಿದ್ದ ಸ್ವಲ್ಪ ವಾಂಟೆಹುಳಿ ಮಾರಾಟ ಮಾಡಿದ್ದ ಹಣದ ಪಾವತಿಯಿಂದ ಪುನಃ ಹೊಸ ಬದುಕಿಗೆ ತಂದೆಯವರು ಸುರುವಿಟ್ಟರು. ಒಂದು ವಾರದ ಬಳಿಕ ದೊಡ್ಡಪ್ಪನವರ ಅಂಗಡಿಗೆ ನಮ್ಮ ತಂದೆಯವರ ಗೆಳೆಯರೊಬ್ಬರು ಬಂದರು. ”ದೇವು ನೀನು ಏನೂ ಮಾತಾಡಬಾರದು...” ಎಡಕೈಯನ್ನು ತಂದೆಯವರ ಹೆಗಲ ಮೇಲಿಟ್ಟು ಬಲಕೈಯಲ್ಲಿದ್ದ ಸಣ್ಣ ಕಾಗದದ ಕಟ್ಟೊಂದನ್ನು ಕಿಸೆಗೆ ಹಾಕಿದರು. ನಮ್ಮ ತಂದೆ - ದೇವು - ಗಳಗಳನೆ ಅಳಲಾರಂಭಿಸಿದರು. ಗೆಳೆಯ ಸಂಜೀವ ನಾಯಕರು ಕಿಸೆಗೆ ಹಾಕಿದ್ದ ನೂರೋ ನೂರೈವತ್ತೋ ರುಪಾಯಿಗಳನ್ನು ವಾಪಸು ಅವರ ಕಿಸೆಗೇ ಹಾಕಿದರು. ಐವತ್ತು ವರ್ಷ ಪ್ರಾಯದ ಇಬ್ಬರು ಗೆಳೆಯರು ಪರಸ್ಪರ ಹೆಗಲ ಮೇಲೆ ಕೈಯಿಟ್ಟುಕೊಂಡು ಕಣ್ಣೀರು ಸುರಿಸುತ್ತ ಮೌನವಾಗಿ ಒಂದೈದು ನಿಮಿಷ ದುಃಖ ಶಮನ ಮಾಡಿಕೊಂಡರು.

”ನಿಮ್ಮ ಕಿಸೆಗೆ ಆ ದಿನ ಸಂಜೀವಮಾಮ ಎಷ್ಟು ರುಪಾಯಿ ಹಾಕಿದ್ದರು?” ಅನೇಕ ವರುಷಗಳ ಬಳಿಕ ಆ ಎಪಿಸೋಡು ನೆನಪಾದಾಗ ತಂದೆಯವರ ಬಳಿ ಕೇಳಿದೆ.

''ಎಷ್ಟು ರುಪಾಯಿ! ಆ ದಿನ ಅಂವ ಕೊಟ್ಟ ಪ್ರೀತಿ ನಾನು ಎಂದಿಗೂ ಮರಿಯೂದಿಲ್ಲ! ಆ ಐದು ನಿಮಿಷಗಳ ಪ್ರೀತಿ ಮತ್ತು ಸಾಂತ್ವನಗಳ ಬೆಲೆ ಕಟ್ಟಲು ಆಗ್ತದಾ! ಕೋಟಿ ರುಪಾಯಿ ಕೊಟ್ಟರೂ ಅದಕ್ಕೆ ಹೊಂದಾಣಿಕೆ ಆಗುದಿಲ್ಲ.” ಇವರು ಪುನಹ ಭಾವುಕರಾದರು.

ನಿಮ್ಮ ಅಸ್ಲಮ್ ನ ಎಪಿಸೋಡಿನಷ್ಟು ತೀವ್ರತೆ ಹೊಂದಿರದ ಸಂದರ್ಭವಿದು. ಆದರೂ ಮನುಷ್ಯ ಮನುಷ್ಯರ ನಡುವಿನ ಸ್ನೇಹ ಸಂಬಂಧಗಳ ಅಳತೆಯನ್ನು ಕೆಲವು ಸಂದರ್ಭಗಳಲ್ಲಿ ಮಾಡಲು ಬರುವುದಿಲ್ಲ. ನಾನು ಸುಮ್ಮಸುಮ್ಮನೆ ಭಾವುಕನಾಗುತ್ತೇನೋ ಎಂದು ಅನೇಕ ಬಾರಿ ಅನಿಸಿಕೊಂಡಿದೆ. ಅಮರ್ ಪ್ರೇಮ್ ಎಂಬ ರಾಜೇಶ್ ಖನ್ನಾ ಶರ್ಮಿಳಾ ಟಾಗೋರ್ ಅಭಿನಯಿಸಿದ ಸಿನಿಮಾ ಇದೆ. ಚಿಕ್ಕಂದಿನಲ್ಲಿ ತನ್ನನ್ನು ಆಡಿಸಿದವಳನ್ನು ಹುಡುಕಿಕೊಂಡು ಬಂದ ಯುವಕನಿಗೆ ನಾಯಕ ರಾಜೇಶ್ ಖನ್ನಾ ’ನಿನ್ನ ತಾಯಿ ನೋಡು’ ಎಂದು ಕಸಮುಸುರೆ ಮಾಡುತ್ತ ಅವರಿವರಿಂದ ಹೀನೈಸಿಕೊಂಡು ಜೀವಿಸುತ್ತಿದ್ದ ನಾಯಕಿಯನ್ನು ತೋರಿಸಿದಾಗಿನ ಸೀನನ್ನು ನೋಡಿದ ಐದು ಬಾರಿಯೂ ನನಗೆ ಕಣ್ಣಲ್ಲಿ ನೀರು ಬಂದಿತ್ತು. ಒಮ್ಮೆಯಂತೂ ನನ್ನ ದೋಸ್ತಿಯೊಬ್ಬರು ನನಗೆ ತಮಾಷೆ ಮಾಡಿದ್ದರು. ಸಿನೆಮಾ ನೋಡಿ ಹುಡುಗಿಯರ ಹಾಗೆ ಅಳ್ತಾನೆ ನೋಡಿ ಮಾರಾಯರೆ ಎಂದು ಇತರರ ಬಳಿ ಹೇಳಿ ನಗಾಡಿದ್ದರು.

ಮನಸ್ಸಿಗೆ ಮುಟ್ಟುವಂತೆ ಹೃದಯಕ್ಕೆ ತಾಗುವಂತೆ ನಿಮ್ಮ ಕಾದಂಬರಿ ಮತ್ತು ಕತೆಗಳಿವೆ. ನೀವು ದಯವಿಟ್ಟು ಬರವಣಿಗೆಯನ್ನು ಮುಂದುವರೆಸಬೇಕೆಂದು ನನ್ನ ಅರಿಕೆ ಇದೆ.

ಪ್ರೀತಿಯಿಂದ

ನಿಮ್ಮವನೇ ಆದ

ಕೇಶವ ನಾಯಕ್

No comments:

Post a Comment