ಹುಬ್ಬಳ್ಳಿಯಲ್ಲಿ ನಮ್ಮ ಬೇಂಕಿನ ಜನತಾ ಬಜಾರ್ ಶಾಖೆಯಲ್ಲಿ ನನ್ನ ಡ್ಯೂಟಿ. ಮೆನೆಜರರು ಕರೆದರು "ನಾಯಕರೆ, ಈ ದಿನಗಳಲ್ಲಿ ನಮ್ಮ ಪೇಜಾವರ ಗುರುಗಳ ಚಾತುರ್ಮಾಸ್ಯ ಹುಬ್ಬಳ್ಯಾಗ ನಡದೈತಿ. ದಿನಾ ಸಂಜೀ ಮುಂದ ಭಗವದ್ಗೀತೆ ಬಗ್ಗೆ ಪ್ರವಚನಾ ನಡಸ್ಯಾರ, ನೀವು ಹೋಗಿಲ್ಲೇನು?"
"ಇಲ್ಲ ಸರ್, ಪೇಪರಿನಲ್ಲಿ ಓದಿದ್ದೆ, ಆದರೆ ಎಲ್ಲಿ ಅಂತ ಮರೆತು ಹೋಯಿತು. ಹಾಗಾಗಿ ಪ್ರವಚನ ಕೇಳಲಿಕ್ಕಾಗಲಿಲ್ಲ."
"ಅಲ್ಲೇ ನೀವು ಮನೀಗ್ ಹೋಗ್ತೀರಲ್ರೀ, ದಾರ್‍ಯಾಗ ಅಶೋಕನಗರ ರೇಲ್ವೇ ಕ್ರಾಸ್ ಅದಲ್ಲಾ, ಅದರ ಪಕ್ಕದಲ್ಲೇ ಐತೆ. ಒಮ್ಮೆ ಹೋಗಬರ್‍ರೀ. ಚಲೋ ಪ್ರವಚನಾ ಐತಿ. ತಪ್ಪಿಸ್ಕೋ ಬ್ಯಾಡ್ರೀ."
ಮನೆಜರ್ ಅಣ್ಣಿಗೇರಿಯವರು ನಾನು ಕಂಡ ಬೇಂಕು ಮನೆಜರರ ಪೈಕಿ ತುಂಬಾ ಒಳ್ಳೆಯ, ಸಭ್ಯ, ಸರಳ ಹಾಗೂ ಆತ್ಮೀಯರು. ನನ್ನ ಮೇಲೆ ಅವರಿಗೆ ವಿಶೇಷ ಪ್ರೀತಿ. ಅವರ ಸಲಹೆ ಮೇರೆಗೆ ಪೇಜಾವರ ಶ್ರೀಯವರು ಚಾತುರ್ಮಾಸ್ಯ ನಡೆಸುತ್ತಿರುವ 'ಕೃಷ್ಣಸದನ' ಯಾ 'ಕೃಷ್ಣ ಮಂದಿರ' ಸರಿಯಾಗಿ ನೆನಪಿಲ್ಲ, ತಲಪಿದೆ. ಅಲ್ಲಿ ಸುಮಾರು ಇಪ್ಪತ್ತು ಮಂದಿ ಭಕ್ತಾದಿಗಳು, ಅನುಯಾಯಿಗಳು ಇದ್ದರು. "ಗುರುಗಳ ಪ್ರವಚನ ಮುಗಿಯಿತೇ?" ಕೇಳಿದೆ.
"ಇಲ್ರೀ ಸರ, ಗುರುಗಳನ್ನು ಒಬ್ಬರು ಪಾದಪೂಜೆಗೆಂದು ಕರದಾರ, ಇನ್ನೇನ ಬರಲಿಕ್ಕಾತು, ತೊಗೋರಿ ಬಂದೇ ಬಿಟ್ರಲಾ." ಅಲ್ಲಿದ್ದವರೊಬ್ಬರು ಉತ್ತರಿಸಿದರು.
ಅಲ್ಲಿದ್ದವರು ನಿರೀಕ್ಷಿಸುತ್ತಿದ್ದಂತೆ ಎರಡು ಮಾರುತಿ ಓಮ್ನಿಗಳು ಬಂದು ಹಾಲ್ ನ ಎದುರು ನಿಂತವು. ಮೊದಲ ವಾಹನದಲ್ಲಿ ಪಾದಪೂಜೆ ಮಾಡಿದ ಗೃಹಸ್ಥರ ಮನೆಯವರು, ಎರಡನೆ ವಾಹನದಿಂದ ಗುರುಗಳು ಇಳಿದರು. ಗುರುಗಳ ವ್ಯಕ್ತಿತ್ವ ಮತ್ತು ಕೀರ್ತಿ ಬಹುದೊಡ್ಡದು, ಆದರೆ ಆಕಾರ ಸಣ್ಣದು. ಅವರ ಆಗಮನದ ಸಮಯದಲ್ಲಿ ಆಗ ಅಲ್ಲಿ ಯಾವುದೇ ಡೌಲು ಡವಾಲಾಗಲೀ, ಬಾಜಾ ಬಜಂತ್ರಿಯಾಗಲೀ, ಶಂಖ ಜಾಗಟೆ ವಾದ್ಯಗಳಾಗಲೀ, ಭಕ್ತಜನರ ಹಿಂಬಾಲಕರ ಜಯಜಯಕಾರವಾಗಲೀ ನಡೆಯಲಿಲ್ಲ. ಓಮ್ನಿಯಿಂದ ಪುಟುಪುಟು ಇಳಿದವರೇ ಸಟಸಟನೆ ಹೆಜ್ಜೆ ಹಾಕಿ ಬಾಗಿಲಲ್ಲಿ ಕೈ ಮುಗಿದು ನಿಂತಿದ್ದ ಭಕ್ತಾದಿಗಳಿಗೆ ಅಭಿವಂದಿಸಿ ತನಗಾಗಿ ಇರಿಸಿದ ಮರದ ಮಣೆಯ ಮೇಲೆ ಕುಳಿತವರೇ ಹಿಂದಿನ ದಿನದ ಪ್ರವಚನವನ್ನು ಮುಂದುವರೆಸಿದರು "ಕೃಷ್ಣಪರಮಾತ್ಮನು ಏನು ಹೇಳಿದ್ದನೆಂದರೆ.............."
ಪೇಜಾವರ ಶ್ರೀಗಳು ಭಾರತದ ಅತ್ಯಂತ ಪ್ರಭಾವೀ ಗುರುಗಳಲ್ಲಿ ಪ್ರಮುಖರು. ವಿಶ್ವಹಿಂದೂ ಪರಿಷತ್ತಿನ ಉಪಾಧ್ಯಕ್ಷರು, ಕೃಷ್ಣಮಠದ ಯತಿವರ್ಯರು, ಸಮಾಜಮುಖೀ ವ್ಯಕ್ತಿತ್ವವುಳ್ಳವರು. ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಆರಂಭಿಸಿ ಕಾರ್ಯಗತ ಮಾಡಿದವರು. ತಮ್ಮ ಜೀವನವನ್ನು ಕೇವಲ ಶ್ರೀಕೃಷ್ಣನ ಪೂಜೆಗೆ ಮಾತ್ರ ಸೀಮಿತಗೊಳಿಸದೇ ಅನೇಕ ಕ್ರಾಂತಿಕಾರೀ ಸುಧಾರಣೆಗಳನ್ನು ತಂದವರು. ಇದು ಎಲ್ಲರಿಗೂ ತಿಳಿದ ವಿಚಾರ.
ದೇಶದ ಪ್ರತಿಷ್ಠಿತ ದೇವಳದ ಯತಿಗಳಾದ ಇವರ ಆಗಮನದ ಸಮಯದಲ್ಲಿ ಭಾರೀ ಗೌಜಿ ಗದ್ದಲ, ಭಕ್ತರ ಮತ್ತು ಹಿಂಬಾಲಕರ ಡೌಲು ಡಂಬಾಚಾರ, ಆನೆ ಕುದುರೆಗಳ ಹೇಷಾರವ ಇವುಗಳನ್ನೆಲ್ಲ ಎಕ್ಸ್ ಪೆಕ್ಟ್ ಮಾಡುತ್ತಿದ್ದ ನನಗೆ ಇವರ ಸರಳ, ಸಿಂಪಲ್ ನಡೆವಳಿಕೆ ಮೊದಲ ಐದು ನಿಮಿಷ ನಂಬಲಾಗಲಿಲ್ಲ.
ಒಂದೆರಡು ವರ್ಷಗಳ ಹಿಂದೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಗೆಳೆಯರೊಡನೆ ಹೋಗಿದ್ದೆ. ಸಿದ್ಧಗಂಗಾ ಮಠಾಧೀಶರಿಗೆ ಆಗ ಪ್ರಾಯಶಃ 108 ವರ್ಷ ಪ್ರಾಯ. ಗುರುಗಳ ಭೇಟಿ ಮಾಡಬೇಕಿತ್ತಲ್ಲಾ ಎಂದು ಕೇಳಿಕೊಂಡಾಗ "ಸ್ವಲ್ಪ ತಡೀರಿ ಸ್ವಾಮೀ, ಈಗ ಗುರುಗಳು ಎಸೆಂಬ್ಲಿ ಉದ್ದೇಶಿಸಿ ಮಾತಾಡ್ತಾ ಇದ್ದಾರೆ. ಹುಡುಗರ ಎಸೆಂಬ್ಲಿ ಮುಗಿದ ಕೂಡಲೇ ಅಲ್ಲೇ ಎದುರು ಇರುವ ಆಫೀಸು ರೂಮಲ್ಲಿ ಸಿಗುತ್ತಾರೆ. ಏನಾದರೂ ಕೇಳಲಿಕ್ಕಿತ್ತೇನು?"
"ಇಲ್ಲ, ಕೇವಲ ಅವರ ದರ್ಶನ ಭಾಗ್ಯ ಸಿಕ್ಕರೆ ಸಾಕು. ಪ್ರಣಾಮ ಮಾಡಿ ಆಶೀರ್ವಾದ ಪಡೆಯೂದು ಮಾತ್ರ". ಅಂದೆ.
"ಅಗೋ ನೋಡಿ, ಎಸೆಂಬ್ಲಿ ಮುಗೀತು, ಹೋಗಿ ಸರ್." ಎಂದರು ಅಲ್ಲಿನ ಅಧಿಕಾರಿಗಳು. ಆಫೀಸು ಕೋಣೆಯಲ್ಲಿ ಸಿದ್ಧಗಂಗಾ ಮಠಾಧೀಶರು ಕುಳಿತು ಒಬ್ಬರೊಡನೆ ಏನೋ ಡಿಸ್ಕಷನ್ ನಡೆಸುತ್ತಿದ್ದರು. ನಾವು ಹೋಗಿ ಪ್ರಣಾಮ ಮಾಡಿ ಹೊರಬಂದೆವು. ಏನೂ ಮಾತನಾಡುವ ಅವಶ್ಯಕತೆ ನಮಗಿರಲಿಲ್ಲ. ಅಲ್ಲಿನ ಆಫೀಸು ತೀರಾ ಸರಳ, ಯಾವುದೇ ಅನಗತ್ಯ ಆಡಂಬರದ ಫರ್ನಿಚರು ನನಗೆ ನೋಡಲು ಸಿಗಲಿಲ್ಲ, ಜವಾನ, ಬಾಡಿಗಾರ್ಡು, ಸೆಕ್ಯೂರಿಟಿ ಮೇನ್ ಯಾರೂ ಇಲ್ಲ. ದೇಶದ ಪ್ರಧಾನಿಗಳು ಬಂದು ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಹೋಗುತ್ತಿರುವ ಸಿದ್ಧಗಂಗಾ ಸಂಸ್ಥಾನದ ಮಠಾಧೀಶರವರು. ದಿನಕ್ಕೆ ನನಗೆ ನೆನಪಿರುವಂತೆ 3500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನ್ನದಾನ ಮತ್ತು ವಿದ್ಯಾದಾನ ಮಾಡುತ್ತಿರುವ ಮಠ ಅದು. ಅದರ 108 ವರ್ಷ ಪ್ರಾಯದ ಮಠಾಧೀಶರು ಯಾವುದೇ ಆಡಂಬರ ಅಹಂಕಾರವಿಲ್ಲದೇ ಮಕ್ಕಳ ಎಸೆಂಬ್ಲಿ ಉದ್ದೇಶಿಸಿ ಮಾತಾಡುವುದನ್ನು ಕಂಡು ಮನ ತುಂಬಿ ಬಂತು.
ನನ್ನ ಅನುಭವದಂತೆ ಹೆಚ್ಚಿನ ಮಠ ಮಾನ್ಯಗಳ ಗುರುಗಳ ಆಗಮನ, ನಿರ್ಗಮನ ಹಾಗೂ ವಾಸ್ತವ್ಯಗಳ ವೈಭವವೇ ಬೇರೆ. ಗುರುಗಳ ವಾಸ್ತವ್ಯ ಎಂದರೆ ಅದೊಂದು ಹಬ್ಬ. ಪೂಜೆಗೆ ಬರುವ ಹೂಗಳೇನು! ಆರತಿ ಮಾಡುವ ಸ್ಟೈಲ್ ಏನು! ಊರೂರು ಗಳಿಂದ ಬರುವ ಭಜನಾ ಮಂಡಲಿಗಳೇನು! ಪ್ರತೀದಿನ ಭೂರಿ ಭೋಜನಗಳ ವ್ಯವಸ್ಥೆ ಏನು!
ಅಂತಿರುವಾಗ ಒಂದು ಸಾದಾ ಓಮ್ನಿಯಿಂದ ಬಂದಿಳಿದು ಪ್ರವಚನ ನೀಡುವ ಯತಿ, 108 ರ ಪ್ರಾಯದಲ್ಲೂ ತನ್ನ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಚಿಂತಿಸುವ ಮಠಾಧೀಶರನ್ನು ನೋಡಿದಾಗ ಅಚ್ಚರಿಯಾಗುತ್ತದೆ.......





