"ಪಡಿಯಾರ್‍ರೇ, ಅಯೋಧ್ಯೆಗೆ ಎಂತಕೇ ಮಣ್ಣು ಹೊರಲಿಕ್ಕೆ ಹೋದದ್ದಾ? ಅಂತ ಊರಲ್ಲಿ ಕೇಳಿದ್ರೆ ಎಂತ ಹೇಳೂದೇ?" ನನ್ನ ಎದುರಲ್ಲಿ ಕೂತಿದ್ದ ಗೆಳೆಯ ಪಡಿಯಾರರಲ್ಲಿ ಪ್ರಶ್ನಿಸಿದೆ, ಕೊಂಚ ಕುಹಕದ ಛಾಯೆಯಿದ್ದರೂ ಏನೋ ಗಹನವಾದ ಘಟನೆ ಆಗಬಹುದು ಎಂಬ ಆತಂಕವಿತ್ತು....
"ಹೌದು ಮಹರಾಯರೇ, ನೋಡುವ ಏನೇನೆಲ್ಲ ಆಗ್ತದೆ ಅಂತ." ಪಡಿಯಾರರ ಸಂಯಮದ ಸಮಾಧಾನ.
ದಶಂಬರ 06, 1992....
"ರಾಮಮಂದಿರವನ್ನು ಇಲ್ಲೇ ಜನ್ಮಸ್ಥಾನದಲ್ಲೇ ಕಟ್ಟುತ್ತೇವೆ ಅದು ಧೃಡಸಂಕಲ್ಪ ಹೊತ್ತು ಕರಸೇವೆಗೆಂದು ತಾವೆಲ್ಲ ರಾಮ ಭಕ್ತರು ಬಂದಿರುತ್ತೀರಿ. ಭವ್ಯ ರಾಮಮಂದಿರ ಕಟ್ಟುವ ಆಶೆ ಇದೆ. ನಮ್ಮ ಕಲ್ಪನೆಯ ದೇವಸ್ಥಾನವನ್ನು ಕಟ್ಟಲು ವರ್ಷಗಳೇ ತಗಲುತ್ತವೆ, ಮತ್ತದನ್ನು ನುರಿತ ಕಾರೀಗರರೇ ಕಟ್ಟಬೇಕು. ಆದರೆ ಶತಮಾನಗಳಿಂದ ರಾಮ ಮಂದಿರ ಪುನರ್ ನಿರ್ಮಾಣಕ್ಕಾಗಿ ಹೋರಾಟ ನಡೆಯುತ್ತಿದೆ. ಇದು ಭಾರತದ ಅಸ್ಮಿತೆಯ ಪ್ರಶ್ನೆ. ಅಯೋಧ್ಯೆಯಲ್ಲಿ ಜನ್ಮಸ್ಥಾನದಲ್ಲೇ ಕಟ್ಟಬೇಕೆಂಬ ಹೋರಾಟಕ್ಕೆ ಇಡೀ ದೇಶವೇ ಕಟಿಬದ್ಧವಾಗಿದೆ ಎಂದು ತಿಳಿಸಲು ಪ್ರಾಂತ ಪ್ರಾಂತಗಳಿಂದ ಸಾಂಕೇತಿಕವಾಗಿ ಬಂದು ಸೇರಿದ ಕರಸೇವಕರೆಲ್ಲರೂ ಸರಯೂ ನದೀ ತೀರದಿಂದ ಒಂದೊಂದು ಮುಷ್ಟಿ ಪವಿತ್ರ ಮೃತ್ತಿಕೆಯನ್ನು ತಂದು ಹಾಕಬೇಕು." ಎಂದು ಆದೇಶಿಸಲಾಗಿತ್ತು. ಅದರಂತೆ ನಾವೆಲ್ಲ ಕರಸೇವಕರು ಒಂದೊಂದು ಮುಷ್ಟಿ ಮಣ್ಣು ಹಿಡಕೊಂಡು ಸಾಲಾಗಿ ಕೂತಿದ್ದೆವು, ಮೇಲೆ ಚಳಿಗಾಲದ ಸೂರ್ಯ ಹಿತವಾದ ಬಿಸಿಯನ್ನು ಬೀರುತ್ತಿದ್ದ, ಅಷ್ಟರಲ್ಲಿ ಒಮ್ಮೆಲೇ ದೂರದಲ್ಲಿ ಗುಂಬಜಗಳ ಮೇಲೆ ರಾಮಭಕ್ತರು ಹತ್ತಿದ್ದೂ, ಆವೇಶಭರಿತರಾದದ್ದೂ ಕಂಡು ಬಂತು.......
1990 ರಲ್ಲಿ ರಾಮರಥ ಯಾತ್ರೆ ಶುರುವಾಗಿ ದೇಶಾದ್ಯಂತ ಸಂಚರಿಸಿತು. ದೇಶವಿಡೀ ಅಯೋಧ್ಯೆಯಲ್ಲೆ ಮಂದಿರ ಕಟ್ಟುವ ಘೋಷಣೆಗಳು ಮೊಳಗಿದವು. ಸಮಸ್ತ ರಾಮಭಕ್ತರಲ್ಲಿ, ಹಿಂದೂ ಬಾಂಧವರಲ್ಲಿ ಸಂಚಲನೆ ಮೂಡಿತ್ತು. ಊರೂರುಗಳಿಂದ ಕರಸೇವಕರು ಹೊರಟರು. ಹೆಬ್ರಿಯಿಂದಲೂ ಪಂಗಡ ಹೊರಟಿತ್ತು. ಆದರೆ ಮಧ್ಯಪ್ರದೇಶ ದಾಟಿ ಒಂದು ನುಸಿಯೂ ಉತ್ತರ ಪ್ರದೇಶದೊಳಗೆ ನುಗ್ಗದಂತೆ ಮುಲ್ಲಾ ಮುಲಾಂಸಿಂಗ ಭಾರೀ ಬಂದೋಬಸ್ತು ಮಾಡಿದ್ದರಿಂದ ಯಾತ್ರೆ ಮೊಟಕಾಗಿತ್ತು. ಆಂದೋಳನದ ಚರಿತ್ರೆಯ ಕರಾಳ ಪುಟಗಳಲ್ಲಿ ಮುಲ್ಲಾ ಮುಲಾಂ ಸಿಂಗ ನಡೆಸಿದ ದೌರ್ಜನ್ಯಗಳು ಲಿಖಿತವಾಗಿವೆ. ನೂರಾರು ಕರಸೇವಕರನ್ನು ನಿರ್ದಯವಾಗಿ ಗುಂಡಿಕ್ಕಿ ಕೊಲ್ಲಲಾಯಿತು.... ಸ್ವತಂತ್ರ ಭಾರತದಲ್ಲಿ ಜನರಿಂದಲೇ ಚುನಾಯಿಸಲ್ಪಟ್ಟ ಸರಕಾರದಿಂದ ಅದೇ ಜನತೆಯ ನಿರ್ಮಮ ಹತ್ಯೆಗಳಾದವು....!!
1992 ರ ಕರಸೇವೆಗೆಂದು ಕುಂದಾಪುರದಿಂದ ಹೊರಟ ಬ್ಯಾಚಿನಲ್ಲಿ ನನ್ನದೂ ಸಹಭಾಗಿತ್ವವಿತ್ತು. ರೈಲಿನಲ್ಲಿ ಪಯಣ. ಎಲ್ಲರೂ ಬಹಳ ಉತ್ಸಾಹದಲ್ಲಿದ್ದರು. ನವಂಬರ ತಿಂಗಳ ಕೊನೆಯ ವಾರದಲ್ಲಿ ಪಯಣ. ಎಲ್ಲ ಜೋಷ್ ಮಧ್ಯ ಪ್ರದೇಶದ ಯಾವುದೋ ನಗರಕ್ಕೆ ನಡುರಾತ್ರಿ ಬಳಿಕ ಬಂದಿಳಿದಾಗ ಬಹುಮಟ್ಟಿಗೆ ಶಾಂತವಾಗಿತ್ತು. ಛಳಿಯೂ ಬೇರೆ, ಊಟವಾಗಿರಲಿಲ್ಲ. ರೈಲಿಳಿದು ಹೊರಟೆವು. "ಕಲ್ಯಾಣ್ ಸಿಂಗ್ ಆಗೇ ಬಢೋ, ಹಮ್ ತೇರೇ ಸಾಥ್ ಹೈಂ" ಒಬ್ಬರು ಜೋರಾಗಿ ಘೋಷಣೆ ಹಾಕಿದರು. ಹೆಚ್ಚಿನ ಪ್ರತಿಕ್ರಿಯೆ ಬರಲಿಲ್ಲ, "ಮಂದಿರ್ ವಹೀಂ ಬನಾಯೇಂಗೇ ಮ್ಹಣಾರೇ" ಎಂದು ಯಾರೋ ಮಣಮಣಿಸಿದರು. "ಇಲ್ಲಿ ಹೊಟ್ಟೆ ಯೊಳಗೆ ಇಲಿಗಳು ಓಡಾಡ್ತಾ ಇದ್ದಾವೆ, ಇವರು ಕಲ್ಯಾಣ್ ಸಿಂಗರನ್ನು ಕರೀತಿದ್ದಾರೆ!!" ನಾನೆಂದೆ. ಯಾರೂ ನಗಲಿಲ್ಲ, ನಾನೂ ಸುಮ್ಮನಾದೆ.
ಸಾಕಷ್ಟು ವಿಶಾಲವಾದ ಹಾಲ್ ನಲ್ಲಿ ನಮಗೆ ಊಟದ ವ್ಯವಸ್ಥೆಯಾಗಿತ್ತು. ಅಲ್ಲಿನ ಪ್ರಬಂಧಕರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಬಿಸಿಬಿಸಿಯಾದ ಊಟ ನೀಡಿದರು. ಹೊಟ್ಟೆ ತುಂಬಿದಾಗ ಎಲ್ಲರೂ ಗೆಲುವಾದರು. ಊಟ ನೀಡಿದ ಮಹಾನುಭಾವರ ಧನ್ಯವಾದ ಹೇಳಿದೆವು. ಯಾವುದೋ ಊರು, ಎಲ್ಲೆಲ್ಲಿಂದಲೋ ಬರುವ ಅಪರಿಚಿತರು ಎಲ್ಲರೂ "ಜೈ ಶ್ರೀರಾಮ್" ಎಂಬ ಮಂತ್ರದಿಂದ ಬಂಧಿತರಾಗಿದ್ದೆವು, ಹಳೆಯ ಗೆಳೆಯರಂತೆ ಸಂಭಾಷಿಸತೊಡಗಿದೆವು.
ರೈಲಿನಲ್ಲಿ ಕಂಡಾಪಟ್ಟೆ ರಶ್ಶು, ಒಬ್ಬ ಸಜ್ಜನರು ಪ್ರೀತಿಯಿಂದ ಕರೆದು ಕೂಡಲು ಜಾಗ ಕೊಟ್ಟರು. ಎಲ್ಲರ ಬಾಯಲ್ಲೂ ಕರಸೇವೆ ಯದ್ದೇ ಸುದ್ದಿ. "ತುಮ್ ಲೋಗೋಂ ಕಾ ಖರ್ಚಾ ಕೌನ್ ಉಠಾತಾ ಹೈ?" ಅವರ ಜಿಜ್ಞಾಸೆ.
"ನಮ್ಮ ನಮ್ಮ ಖರ್ಚುಗಳನ್ನು ನಾವು ನಾವೇ ನೋಡಿಕೊಳ್ಳಬೇಕು, ಯಾವುದೇ ಟೀ ಏ ಡೀ ಏ ಇಲ್ಲ."
ಆತನಿಗೆ ನಂಬಲು ಕಷ್ಟವಾಯಿತು. "ದಕ್ಷಿಣದ ಕರ್ನಾಟಕದಿಂದ ಬರುತ್ತಾ ಇದ್ದೀರಿ. ನಿಮ್ಮ ಶೃದ್ಧೆಗೆ ಮೆಚ್ಚುತ್ತೇನೆ."
ಭಗವಾನ್ ರಾಮನು ಇಡೀ ರಾಷ್ಟ್ರದ ಆತ್ಮ. ಇಷ್ಟು ಕಾಲ ಪ್ರತೀಕ್ಷೆ ಮಾಡಿದ್ದಾಯಿತು, ಇನ್ನು ನಮ್ಮ ಆಂದೋಲನ ತೀವ್ರ ವಾಗುತ್ತದೆ, ಮಂದಿರ್ ವಂಹೀ ಬನಾಯೇಂಗೆ." ಆತನಿಗೂ ಖುಷಿಯಾಯಿತು. ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಆಕೆ ಆರ್ತನಾದ ಮಾಡುವ ಸಮಯದಲ್ಲಿ ಹರಿದ ಕಣ್ಣೀರಿನ ಒಂದೆರಡು ಹನಿಗಳು ನಮ್ಮೂರ ಬಳಿ ಬಿದ್ದು ಮುಂದೆ ನದಿಯಾಗಿ ಹರಿದು ಅರಬೀ ಸಮುದ್ರವನ್ನು ಸೇರುತ್ತದೆ. ಅದರ ಹೆಸರು ಸೀತಾನದಿ. ಬಳಿಯಲ್ಲೇ ಇರುವ ಊರ ಹೆಸರೂ ಸೀತಾನದಿ. ಕೆಹನೆ ಕ ಮತಲಬ್ ಕೀ... ರಾಮನು ಇಡೀ ದೇಶಕ್ಕೆ ಸೇರಿದವನು ಎಂಬುದಕ್ಕೊಂದು ಇಂತಹ ಹಲವಾರು ಉದಾಹರಣೆಗಳು ಊರೂರುಗಳಲ್ಲಿ ದೊರಕುತ್ತವೆ." ನನ್ನ ಮಾತುಗಳಿಂದ ಆ ಸಜ್ಜನರೂ ಪ್ರಭಾವಿತರಾದರು. ಆತ ಕೂಡ ಸಾಕಷ್ಟು ವಿದ್ವಾನರೇ. ಉದ್ದಾನುದ್ದಕ್ಕೆ ಭಕ್ತ ಕಬೀರನ ದೋಹೆಗಳನ್ನು ಉದ್ಧರಿಸುತ್ತ ರಾಮಕಥೆಯನ್ನೇ ನಡೆಸಿದರು. ನನಗೂ ಆನಂದವಾಯಿತು. ಐದಾರು ದೋಹೆಗಳನ್ನು ಡೈರಿಯಲ್ಲಿ ಬರಕೊಂಡೆ.
ದಶಂಬರ ಆರರ ಘಟನೆಯ ಬಗ್ಗೆ ಹಚ್ಚೇನೂ ಬರೆಯಬೇಕಿಲ್ಲ, ಎಲ್ಲರಿಗೂ ತಿಳಿದೇ ಇದೆ... ರಾತ್ರಿ ಹನ್ನೆರಡು ಘಂಟೆಯ ವೇಳೆ ಗುಂಬಜ ಬಿದ್ದ ಜಾಗಕ್ಕೆ ಹೋದೆ. ಗುಂಬಜಗಳೆಲ್ಲ ಕ್ಲಿಯರ್ ಆಗಿ ಭಾರಿ ಉಮೇದಿನಲ್ಲಿ ಕೆಲಸ ನಡೀತಿತ್ತು, "ಭಾಯಿ ಸಾಬ್, ಹಾರೆ ಕೊಂಚ ನನಗೂ ಕೊಡು, ನನ್ನ ಪಾಲಿನ ಕರಸೇವೆ ಮಾಡ್ತೇನೆ." ಕರಸೇವಕನೊಬ್ಬನ ಬಳಿ ಕೇಳಿದೆ. ಆತನೋ ಬಹಳ ಆವೇಶ ದಲ್ಲಿದ್ದ. "ಕಾಮ್ ಕರನೇ ದೇ, ಕಾಮ್ ಕರನೇ ದೇ, ಬಾಜೂ ಹಟೋ, ಹವಾ ಆನೇ ದೇ,...." ಆ ಚಳಿಯಲ್ಲೂ ಆತ ಬೆವರಿದ್ದ...
ಇಪ್ಪತ್ತೆಂಟು ದೀರ್ಘ ವರ್ಷಗಳು ಕಳೆದವು. ಆಂದೋಲನಗಳ, ನ್ಯಾಯ ಪ್ರಕ್ರಿಯೆಗಳ ಸರಣಿ ನಡೆದೂ ನಡೆದೂ ಕೊನೆಗೆ ಸರ್ವೋಚ್ಛ ನ್ಯಾಯಾಲಯದಿಂದ ಬಹುಮಾನ್ಯದ ತೀರ್ಪು ಹೊರಬಿದ್ದಿದೆ. ಬಹಳ ಸಂತಸದ ವಿಚಾರ.
ಆಗಾಗ ಖಯಾಲು ಬರುತ್ತಿರುತ್ತದೆ... ಐವತ್ತರ ದಶಕದಲ್ಲಿ ಹುಟ್ಟಿದ ನಾವು ಭಾಗ್ಯವಂತರು. ಸ್ವತಂತ್ರ ಭಾರತದಲ್ಲಿ ಜನ್ಮ ತಳೆದ ಪುಣ್ಯವಂತರು. ಗುಲಾಮೀ ಜೀವನದ ಬವಣೆ ಅನುಭವಿಸಿದವರಿಗೇ ಗೊತ್ತು. ಬಹುತೇಕ ಜನತೆ ಬಡತನದಲ್ಲೇ ಇದ್ದರು, ವಿದ್ಯೆ, ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಪರಿಸ್ಥಿತಿ ಎಲ್ಲವೂ ನಿಕೃಷ್ಠವಾಗಿದ್ದವು. ಮೇಲಾಗಿ ಎರಡನೇ ಜಾಗತಿಕ ಯುದ್ಧದ ದುಷ್ಪರಿಣಾಮ..! 'ಅದನ್ನೆಲ್ಲ ವಿವರಿಸಲಾಗೂದಿಲ್ಲ, ವಿವರಿಸಿದರೂ ನಿಮಗರ್ಥವಾಗೂದಿಲ್ಲ ಎಂದು ನಮ್ಮ ತಂದೆಯವರು ಆಗಾಗ ಹೇಳಿ ಮೌನಕ್ಕೆ ಜಾರುತ್ತಿದ್ದರು..
ಸರ್ವಾಧಿಕಾರದ ನೋವು ಯಾವ ತೆರದಲ್ಲಿರುತ್ತದೆ ಎಂಬುದರ ಕಿರು ಪರಿಚಯವನ್ನು ಇಂದಿರಾಗಾಂಧಿಯವರು ದೇಶದ ಜನತೆಗೆ ತೋರಿಸಿದರು.
ಭಾರತವು ಒಂದು ಕಾಲದಲ್ಲಿ ವಿಶ್ವಗುರುವಾಗಿತ್ತು. ಕ್ರಮೇಣ ಪರಕೀಯರ ದುರಾಕ್ರಮಣಗಳಿಗೆ ತುತ್ತಾಗಿ ಪರತಂತ್ರವಾಗಿತ್ತು. ಆದರೆ ಸ್ವಾತಂತ್ರ್ಯದ ದಿನಗಳ ನಂತರ ಚೇತರಿಸಿಕೊಂಡು ಅಭಿವೃದ್ಧಿ ಹೊಂದಿದೆ. ದೇಶಕ್ಕೆ ಮಾನನೀಯರಾದ ಹೆಡಗೇವಾರರ, ಗುರೂಜಿ ಗೋಲವಲ್ ಕರ್ ಅವರ, ದೀನದಯಾಳ ಉಪಾಧ್ಯಾಯರ, ಅಟಲ ಬಿಹಾರೀ ವಾಜಪೇಯಿಯವರ ಸಮರ್ಥ ನಾಯಕತ್ವ ಸಿಕ್ಕಿದೆ. ಅಂಧಕಾರ ಕಳೆದು ಸಮೃದ್ಧಿಯ ಬೆಳಕು ಮೂಡಿದೆ. ಇಂದು ಪುನಃ ಒಬ್ಬ ಸಮರ್ಥ ಮುತ್ಸದ್ದಿ ನಾಯಕನ ನೇತೃತ್ವವೂ ದೊರಕಿದೆ. ಭಾರತಮಾತೆ ಪುನಃ ವಿಶ್ವ ವಂದನೀಯಳಾಗಿದ್ದಾಳೆ.
ಒಂದು ತಾತ್ಕಾಲಿಕ ರಾಮ ಮಂದಿರ ಅಂದು ನಿರ್ಮಿಸಿ ವಾಪಸಾಗಿದ್ದೆವು. ಕಾಯುತ್ತಾ ಕಾಯುತ್ತಾ ವರ್ಷಗಳು ಉರುಳುತ್ತಿದ್ದರೂ ಕನಸು ಕನಸಾಗಿಯೇ ಉಳಿಯುತ್ತದೋ ಎಂಬ ಶಂಕೆ ಬಲವಾಗಹತ್ತಿತು.
ಪ್ರತಿಯೊಂದಕ್ಕೂ ಅದರದ್ದೇ ಸಮಯವೆಂದಿದೆ, ಆ ಸುಸಮಯವೊದಗುವ ತನಕ ಕಾಯಲೇ ಬೇಕು. ಇಂದು ಒಬ್ಬ ಧೀರ ನೇತಾರ 'ಸಬಕೇ ಸಾಥ್ ಸಬಕಾ ವಿಕಾಸ್' ಎಂಬ ತತ್ವದೊಂದಿಗೆ ನೂರಾ ಮುವತ್ತು ಕೋಟಿ ಪ್ರಜೆಗಳ ನಾಯಕರಾಗಿ ಸಿಕ್ಕಿದ್ದಾರೆ!!
ಭವ್ಯ ರಾಮ ಮಂದಿರ ನಿರ್ಮಾಣದ ಶುಭಾರಂಭವಾಗಿ ಇಂದು ನಮ್ಮ ಪ್ರಧಾನಿಯವರ ದಿವ್ಯ ಹಸ್ತಗಳಿಂದ ಭೂಮಿ ಪೂಜನಾ ಕಾರ್ಯಕ್ರಮ ನಡೆಯುತ್ತಿದೆ..!👌👌👌
ನಾವು ಭಾಗ್ಯವಂತರೆಂಬುದು ಸಾಬೀತಾಯಿತು.
ಭಾರತ್ ಮಾತಾಕೀ ಜೈ.
ಜೈ ಶ್ರೀ ರಾಮ್.👌👌💐💐