Tuesday, April 12, 2011

Shilpa Soundaryada bennu hathhi...

"ಶಿಲ್ಪಕಲೆಯ ಬಗ್ಗೆ ಹೇಳಬೇಕೆಂದರೆ ನಮ್ಮ ಲಕ್ಕುಂಡಿ ಎಲಿಮೆಂಟರಿ ಸಾಲಿ,ಹಂಪಿ ಹೈಸ್ಕೂಲು ಮತ್ತ ಬೇಲೂರು ಯುನಿವರ್ಸಿಟಿ  ನೋಡ್ರಿ  ಸರ"  ಲಕ್ಕುಂಡಿಯ ಮ್ಯುಸಿಯಮ್ಮಿನ ಅಧಿಕಾರಿಯೊಬ್ಬರು ತುಂಬಾ ಅಭಿಮಾನದಿಂದ ಹೇಳಿದರು. ಅವರ ಅಭಿಮಾನ ಲಕ್ಕುಂಡಿಯ ವೈಭವದ ಮೇಲೋ, ಕರ್ನಾಟಕದ ಒಟ್ಟು ಶಿಲ್ಪಕಲೆಯ ಮೇಲೋ ತಿಳಿಯಲಿಲ್ಲ.ಆದರೂ
ಅವರ ವಿಚಾರಗಳನ್ನು  ಮೆಚ್ಚದಿರಲು ಆಗಲಿಲ್ಲ.ಇನ್ನು ಕಲೆಯ ಯುನಿವರ್ಸಿಟಿಯನ್ನು ಒಮ್ಮೆ  ನೋಡಲೇ ಬೇಕೆಂಬ ಆಶೆ ಹುಟ್ಟಿತು. ಆ ಪ್ರಕಾರವಾಗಿ ಮೊನ್ನೆ ಆದಿತ್ಯವಾರ ನಾವು ಅಂದರೆ ನಾಗೇಶನ ಗ್ರೂಪು ಅವನ ಕಾರಿನಲ್ಲಿ ನಮ್ಮ ಫ್ಯಾಮಿಲಿ ನಮ್ಮ ಕಾರಿನಲ್ಲಿ-ಪಾವನ ಸಹಿತ-ಬೆಳಗ್ಗೆ ಬೇಗ ಹೊರಟೆವು.ಹೋಗುವ ದಾರಿ ಉತ್ತಮ ಸ್ಥಿತಿಯಲ್ಲಿತ್ತು.ಹಾಗಾಗಿ ತುಂಬಾ ಅನುಕೂಲವಾಯಿತು.ಭಾಗ್ಯ ದೀಪಕ್ ಸಹ ಬಂದರು.ಬೇಲೂರನ್ನು ಸುಮಾರು ಹತ್ತುವರೆಗೆ ತಲುಪಿದೆವು. ಸುಮಾರು ಇಪ್ಪತ್ತು ವರುಷಗಳ ಹಿಂದೆ ನೋಡಿದ್ದ ನೆನಪು.ಆಗ ಇಷ್ಟು ವ್ಯವಸ್ಥೆಗಳಿರಲಿಲ್ಲ.ಶಿಲ್ಪಕಲೆಯ ಯುನಿವರ್ಸಿಟಿ ಅಂದರೆ ಅತಿಶಯೋಕ್ತಿ ಏನಲ್ಲ.ಅದಕ್ಕಿಂತ ಹೆಚ್ಚೇ ಎಂದು ಹೇಳಬಹುದು.ಆದರೆ ನನ್ನ ಸಾಹಿತ್ಯ ಸಾಮರ್ಥ್ಯ ತುಂಬಾ ಲಿಮಿಟೆಡ್ ಆಗಿ ಭಾವನೆಗಳನ್ನು ಬರೆಯಲು ವ್ಯಕ್ತಪಡಿಸಲು ತೊಂದರೆಯಾಗುತ್ತಿದೆ.ಬೇಲೂರು ಒಂದು ದೇವಸ್ಥಾನ ನಿಜವಾಗಿಯೂ ಶಿಲ್ಪಕಲೆಯ ಸಾಮ್ರಾಜ್ಯ ಎಂದೇ ಹೇಳಬೇಕು.ಕಲೆ,ಸಾಹಿತ್ಯ,ಸಂಗೀತ ಇವುಗಳ ಬಗ್ಗೆ ಬರೆಯುವಾಗ ಸಾಮಾನ್ಯವಾಗಿ ನಾವು ಮೈಕೆಲೆಂಜಲೋ,ಷೇಕ್ಸಪಿಯರ್,wordswoth ಮೊಜಾರ್ಟ ಹೀಗೆ ವ್ಯಾಖ್ಯಾನಿಸುತ್ತೇವೆ ವಿನಹ ನಮ್ಮ ಕವಿ ಸಾಹಿತ್ಯಕಾರರ ಬಗ್ಗೆ ಬರೆಯಲು ಹೋಗುವುದಿಲ್ಲ.ಇದೊಂದು ಬಗೆಯ ಗುಲಮಗಿರಿಯೆಂದೆ ಎಣಿಸಬಹುದು ಮೈಕೆಲೆಂಜಲೋ  ಕೃತಿಯನ್ನು ನಾನು ನೋಡಿಲ್ಲ,ಆದರೂ ಬೇಲೂರಿನ ಹಳೆಬೀಡಿನ ದೇವಸ್ಥಾನಗಳನ್ನು ನೋಡಿದ ಬಳಿಕ ನಾವು ಪಾಲುಂಡು ಮೇಲುಂಬರೇ ಎಂಬಂತೆ ಬೇರೆ ಯಾವುದೇ ಶಿಲ್ಪ ಕೃತಿಗಳನ್ನು ನೋಡುವ ಅಗತ್ಯವಿಲ್ಲ.ಒಂದು ಮಂದಿರದ ಒಳಗೆ ಹೊರಗೆ ಒಂದು ಇಂಚು ಜಾಗ ಬಾಕಿ ಇಡದೇ ಕೆತ್ತನೆಗಳನ್ನು ಕೆತ್ತಿ ರಚಿಸಿದ್ದಾರೆ.ಈ ಮಂದಿರಗಳನ್ನು ಕಟ್ಟಲು ಸುಮಾರು ನೂರು ವರುಷ ಸಮಯ ತಗಲಿರಬಹುದು ಎಂದು ಅಲ್ಲಿದ್ದ ಒಬ್ಬರ ಅಂಬೋಣ.ಇರಬಹುದು.ನನಗೆ ನೂರಲ್ಲ ಸಾವಿರ ವರ್ಷ ಆಯಸ್ಸು ಕೊಟ್ಟರೂ ಅಲ್ಲಿನ ಭವ್ಯತೆಯ ಶೇಕಡಾ ಒಂದರಷ್ಟನ್ನು ಕೆತ್ತಲು,ಮಾಡಲು ಆಗಲಾರದು.ಶಿಲ್ಪಿಯು ಅಷ್ಟರ ಮಟ್ಟಿಗೆ ತಪಸ್ಸು ಮಾಡಿರಬೇಕು.ಆಗ ಮಾತ್ರ ಇಂತಹ ಅದ್ಭುತಗಳನ್ನು ಸೃಷ್ಟಿ ಮಾಡಲು ಸಾಧ್ಯ.ಅನ್ಯಥಾ ಆಗಲಾರದು.ಶ್ರೀ ಎಸ್ ಎಲ್ ಭೈರಪ್ಪನವರ ಸಾರ್ಥ ಕಾದಂಬರಿಯಲ್ಲಿ ಈ ಬಗ್ಗೆ ಉಲ್ಲೇಖ ಬರುತ್ತದೆ.ಕಾರಿಗರರು ಧ್ಯಾನ,ತಪಸ್ಸು,ಬ್ರಹ್ಮಚರ್ಯ ಇವುಗಳನ್ನು ಆಚರಿಸಿದರೆ ಮಾತ್ರ ಅವರ ಕೃತಿಗಳಲ್ಲಿ ಪೂರ್ಣತೆ,ಸೌಂದರ್ಯ,ಜೀವಂತಿಕೆ,ಮುಂತಾದುವುಗಳನ್ನು ಮೂಡಿಸಬಹುದು.ಈ ವಿಚಾರವನ್ನು ಅವರು ಕಾದಂಬರಿಯಲ್ಲಿ ವಿಸ್ತಾರವಾಗಿ ಚಿತ್ರಿಸಿದ್ದಾರೆ.ಅದು ಬೇರೆ ಯಾವುದೋ ಸನ್ನಿವೇಶದಲ್ಲಿ ಅವರು ಬರೆದಿದ್ದರೂ ಬೇಲೂರಿನ ಹಳೆಬೀಡಿನ ದರ್ಶನ ಮಾಡಿದಾಗ ಆ ಮಾತುಗಳು ಸರಿಯೆಂದು ಭಾಸವಾಗುತ್ತದೆ.ದೇವಸ್ಥಾನಗಳ ಶಿಲ್ಪಗಳ ವರ್ಣನೆ ಮಾಡಿದಷ್ಟು ಸಾಲದು.ಅದನ್ನು ಇನ್ನೊಮ್ಮೆ ಎಂದಾದರೂ ಖಯಾಲಿ ಬಂದಾಗ ದಾಖಲಿಸುತ್ತೇನೆ. 

Thursday, April 7, 2011

bhrashtacharada virudha horata

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಶ್ರಿಯುತರಾದ ಅಣ್ಣಾ ಹಜಾರೆಯವರು ಆಮರಣಾಂತ ಉಪವಾಸ ಹೂಡಿದ್ದಾರೆ ಎಂಬ ಸುದ್ದಿ ಟೀ ವಿ ಹಾಗೂ ತಮ್ಮ ಪತ್ರಿಕೆಯಲ್ಲಿ ಓದಿದೆ.ತತ್ಸಂಬಂಧ ನ್ಯಾಯಾಧೀಶರಾದ ಸಂತೋಷ ಹೆಗ್ಡೆಯವರು ಕೊಟ್ಟ ಅಭಿಪ್ರಾಯವನ್ನೂ ಓದಿದ್ದೇನೆ.ಅವರ ಮಾತುಗಳನ್ನು ನಾನು ಅನುಮೋದಿಸುತ್ತೇನೆ.ಸಮಾಜದಲ್ಲಿ ಭ್ರಷ್ಟಾಚಾರ ಇರಬಾರದು ನಿಜ.ಆದರೆ ತಲತಲಾಂತರದಿಂದ ಬಂದಿರುವ ಈ ಪಿಡುಗನ್ನು ಹೋಗಲಾಡಿಸಲು ಅಷ್ಟು ಸುಲಭವಿಲ್ಲ.ನಮ್ಮಲ್ಲಿ ಭ್ರಷ್ಟಾಚಾರವೆಂದರೆ ಪ್ರಮುಖವಾಗಿ ಸರಕಾರಿ ಕಛೇರಿಗಳಲ್ಲಿ ಅಧಿಕಾರಿಗಳು ಹಿಂಡುವ ಲಂಚ ರುಷುವತ್ತುಗಳು ಎಂಬ ಭಾವನೆ ಇದೆ. ಸರಕಾರೀ ಅಧಿಕಾರಿಗಳು,ರಾಜಕಾರಣಿಗಳು ಇವರೆಲ್ಲ ಭ್ರಷ್ಟಾಚಾರಿಗಳು,ಉಳಿದಂತೆ ನಾವೆಲ್ಲ ಸುಭಗರು ಎಂಬ ಬಲವಾದ ತಪ್ಪುಕಲ್ಪನೆ ಎಲ್ಲರಲ್ಲಿ ಇದೆ. ಕಾನೂನು ಬದ್ಧವಾದ ಕೆಲಸಕಾರ್ಯಗಳಿಗೂ ಲಂಚ ನೀಡುವವರಿದ್ದಾರೆ.ಸ್ವಲ್ಪವೂ ಕಾಯುವ ತಾಳ್ಮೆ ಇಲ್ಲ.ನಮಗೆ ಕೂತಲ್ಲಿ ಕೆಲಸವಾಗಬೇಕು,ಏನೂ ಬಾಧೆ ಆಗಬಾರದು ಅಂದರೆ ಆಗುತ್ತದೆಯೇ? ತನ್ನ ಕೆಲಸ ಆಗಲು ಏನು ಅಡ್ಡಿ ಆತಂಕ ಇವೆ ಎಂಬ ಮಾಹಿತಿ ಪಡಕೊಳ್ಳಲು ಹೆಚ್ಚಿನವರು ತಯಾರಿಲ್ಲ,ಹೇಗಾದರೂ ಮಾಡಿ ತಮ್ಮ ಕೆಲಸ ಮಾಡಿ ಕೊಡಿ ಎನ್ನುವವರೆ ಹೆಚ್ಚು.ಆ ಬಗ್ಗೆ ಅಕಾರಣ ಹಣ ಖರ್ಚು ಮಾಡಲೂ ತಯಾರಿದ್ದಾರೆ.ಒಂದು ಕೆಲಸ ಆಗಬೇಕಾದರೆ ಅದಕ್ಕೆ ಸಂಬಂಧಪಟ್ಟ ಮಾಹಿತಿ,ಕಾಗದಪತ್ರ ಮುಂತಾದವುಗಳನ್ನು ಒದಗಿಸಿದರೆ ಅಧಿಕಾರಿಗಳಿಗೆ ಲಂಚ ನೀಡುವ ಪ್ರಶ್ನೆ ಇಲ್ಲ.ನಾವು ನೋಡಿರುವಂತೆ ವ್ಯಾಪಾರಿ ವರ್ಗದವರು ಸಾಮಾನ್ಯವಾಗಿ ಸರಿಯಾದ ಲೆಕ್ಕಪತ್ರ ಇಡುವುದಿಲ್ಲ.ಆದರೆ ಉಲ್ಟಾ ಸೇಲ್ಸ್‌ಟ್ಯಾಕ್ಸ್,ಕಮರ್ಶಿಯಲ್‌ಟ್ಯಾಕ್ಸ್ ಅಧಿಕಾರಿಗಳನ್ನು ಮಾತ್ರ ಲಂಚ ಕೋರರು,ಎಷ್ಟು ಕೊಟ್ಟರೂ ಅವರ ಬಾಯಾರಿಕೆ ಹಿಂಗುವುದಿಲ್ಲ ಎಂಬ ವ್ಯಂಗ್ಯ ಬೇರೆ.ಸರಿಯಾದ ಲೆಕ್ಕಪತ್ರವಿಟ್ಟು ಲಂಚಕೋರ ಅಧಿಕಾರಿಗಳನ್ನು ದಿಟ್ಟವಾಗಿ ಎದುರಿಸುವ ವ್ಯಾಪಾರೀ ವರ್ಗದ ಪ್ರಮಾಣ ಎಷ್ಟಿದೆ?ಯಾರಾದರೂ ಈ ಬಗ್ಗೆ ಸಮೀಕ್ಷೆ ನಡೆಸಿದ್ದಾರೆಯೆ?ಒಟ್ಟಾರೆಯಾಗಿ ಟ್ಯಾಕ್ಸ್ ಅಧಿಕಾರಿಗಳು ಭ್ರಷ್ಟರು ಎಂದು ಬಿರುದುಕೊಟ್ಟು ಕೈ ತೊಳಕೊಂಡರೆ ಸರಿಯೇ? ಲಂಚ ಕೇಳುವವನು ತಪ್ಪಿತಸ್ಥ,ಲಂಚಕೋರ,ಭ್ರಷ್ಟಾಚಾರಿ ಎಂದಾದರೆ ಲಂಚ ಕೊಡುವವನು ಲಂಚ ಪಡಕೊಳ್ಳುವಂತೆ ಪ್ರೇರೇಪಿಸುವವನನ್ನು ಏನೆಂದು ಕರೆಯಬೇಕು? ಅಂತವರಿಗೆ ಯಾವ ಬಿರುದನ್ನು ನೀಡಬೇಕು? ಕಸ್ಟಂಸ್‌ಅಧಿಕಾರಿಗಳು ಲಂಚಕೋರರು, ಏನನ್ನಾದರೂ ಕಿತ್ತುಕೊಳ್ಳದೇ ಅವರು ವಿಮಾನನಿಲ್ದಾಣದಿಂದ ಪ್ರಯಾಣಿಕರನ್ನು ಹೊರಬಿಡುವುದಿಲ್ಲ ಎಂಬ ವಿಚಾರ ಹೆಚ್ಚಿನವರಲ್ಲಿದೆ.ಸರಿಯಾದ ತೆರಿಗೆ,ಕಸ್ಟಮ್ ಡ್ಯೂಟಿ ಪಾವತಿಮಾಡಿದ್ದರೆ ಅಧಿಕಾರಿಗಳಿಗೆ ಏಕೆ ಹಣ ಕೊಡ ಬೇಕು? ಬೇಕಾಬಿಟ್ಟಿ ಇತರರನ್ನು ಹೀಯಾಳಿಸಲು ಬಹಳ ಸುಲಭ.ನಾನು ನಮ್ಮಲ್ಲಿ ಲಂಚಗುಳಿತನ ಭ್ರಷ್ಟಾಚಾರ ಇಲ್ಲವೇ ಇಲ್ಲ.ಎಲ್ಲ ಅಧಿಕಾರೀವರ್ಗದವರು ಬಹಳ ಸಾಚಾ ಎಂದು ಪ್ರತಿಪಾದಿಸಲು ಹೊರಟಿಲ್ಲ.ನಮಗೆ ಅಂದರೆ ಸಾರ್ವಜನಿಕರಿಗೂ ಬಾಧ್ಯತೆ ಇದೆ. ಅದನ್ನು ನಾವು ಚನ್ನಾಗಿ ನಿಭಾಯಿಸುತ್ತಿದ್ದೇವೆಯೋ ಎಂದು ವಿಮರ್ಶೆ ಮಾಡಿಕೊಳ್ಳಬೇಕು.
ಅಣ್ಣಾ ಹಜಾರೆಯವರು ಒಬ್ಬ ಉನ್ನತ ವ್ಯಕ್ತಿ.ಅವರ ಸಾಧನೆಗಳ ಬಗ್ಗೆ ನನಗೆ ತುಂಬಾ ಗೌರವವಿದೆ.ಇವತ್ತಿನ ದಿನದ ಅಸಾಮಾನ್ಯ ಪರಿಸ್ಥಿತಿಯಲ್ಲೂ ಅವರು ಅಸಾಧ್ಯವನ್ನು ಸಾಧ್ಯವೆಂದು ಸಾಧಿಸಿ ತೋರಿಸಿದ ಮಹಾನ್ ಪುರುಷ.ಅವರ ಸಾಧನೆಗಳನ್ನು ನಮ್ಮ ಜನ ಹಾಗೂ ಸರಕಾರಗಳು ಗುರುತಿಸುವ ಮೊದಲೇ ಅವರಿಗೆ ನೋಬೆಲ್ ಪಾರಿತೋಷಕಕ್ಕೆ ಸಮಾನವಾದ ಮ್ಯಾಗ್‌ಸೇಸೆ ಪುರಸ್ಕಾರ ದೊರಕಿತ್ತು.ಸಮಾಜದಲ್ಲಿನ ಕೆಡುಕುಗಳನ್ನು ಕಿತ್ತೊಗೆಯಬೇಕು. ಒಪ್ಪುತ್ತೇವೆ.ಆದರೆ ಅದಕ್ಕೆ ಪೂರಕವಾಗಿ ಮೊದಲು ರಂಗವನ್ನು ಸಿದ್ಧಪಡಿಸಿಕೊಳ್ಳಬೇಕು.ಏಕಾಏಕಿ ಅಣ್ಣಾಹಜಾರೆಯವರಂಥ ಪ್ರಸಿದ್ಧ ಹಾಗೂ ಅಪರೂಪ ವ್ಯಕ್ತಿಗಳು ಆಮರಣಾಂತ ಉಪವಾಸದಂತಹ ನಿರ್ಧಾರಗಳನ್ನು ಸರಕಾರಗಳ ಮೇಲೆ ಹೇರಿದರೆ ಸೂಕ್ತ ನಿವಾರಣೆ,ಭ್ರಷ್ಟಾಚಾರ ನಿರ್ಮೂಲನೆ ಆಗುವುದೇ? ಇದು ಒಂದು ರೀತಿಯಲ್ಲಿ ಒತ್ತಡ ತಂತ್ರವೆಂದೆನಿಸುವುದಿಲ್ಲವೇ? ಅಲ್ಲದೆ ಭ್ರಷ್ಟಾಚಾರ ನಿರ್ಮೂಲನೆಯು ಕೇವಲ ಸರಕಾರದ ಜವಾಬ್ದಾರಿಯೇ? ನಮ್ಮ ನಿಮ್ಮೆಲ್ಲರ ಕರ್ತವ್ಯವಲ್ಲವೇ? ಲೋಕಪಾಲ ಮಸೂದೆಯನ್ನು ಜಾರಿಗೊಳಿಸಿದ ಕೂಡಲೇ ಈ ಪಿಡುಗು ತೊಲಗಿಹೋಗುವುದೇ?ಈಗಾಗಲೇ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.ಎಷ್ಟರಮಟ್ಟಿಗೆ ಸುಧಾರಣೆಯಾಗಿದೆ! ಅಥವಾ ಏನಾದರೂ ಸುಧಾರಣೆ ಆಗಿದೆಯೆ?.ಎಷ್ಟು ಮಂದಿ ಸರಕಾರೀ ಅಧಿಕಾರಿಗಳು ಲೋಕಾಯುಕ್ತರ ಕಾರ್ಯಾಚರಣೆಗೆ ಹೆದರುತ್ತಾರೆ?ನಾನು ಎಲ್ಲೋ ಓದಿರುವಂತೆ ಒಬ್ಬ ಅಧಿಕಾರಿಯ ಮೇಲೆ ಎರಡು ಬಾರಿ ಲೋಕಾಯುಕ್ತರ ದಾಳಿ ನಡೆದಿದೆ! ನಮ್ಮ ರಾಜ್ಯದ ಲೋಕಾಯುಕ್ತರು ನೇರ ನುಡಿಯ ಕರ್ತವ್ಯನಿಷ್ಟ ನ್ಯಾಯಮೂರ್ತಿಗಳಾದುದರಿಂದ ತುಂಬಾ ಪರಿಣಾಮಕಾರಿಯಾಗಿ ಮನ್ನಣೆ ಪಡೆದಿದ್ದಾರೆ. ಈ ಸ್ಥಿತಿ ಎಲ್ಲಾ ರಾಜ್ಯಗಳಲ್ಲಿವೆಯೇ?ಕೇವಲ ಸರಕಾರೀ ಯಂತ್ರವು ಸರಿಯಾದರೆ ಸಾಕಾಗದು.ಜನಮಾನಸವೂ ಸಹ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಎದ್ದೇಳಬೇಕು.ಆಣ್ಣಾ ಹಜಾರೆಯವರ ಅಸ್ತ್ರ ಕೇವಲ ಸರಕಾರದ ವಿರುದ್ಧವಲ್ಲದೆ ಸಮಾಜದಲ್ಲಿರುವ,ಜನರ ಮನಸ್ಸಿನಲ್ಲಿರುವ ಭ್ರಷ್ಟ,ದಾಸ್ಯ ಮಾನಸಿಕತೆಯ ವಿರುದ್ಧವೂ ಇರಬೇಕು ಎಂದು ನನ್ನ ಅಭಿಮತ.ನಾನು ಅಣ್ಣಾ ಹಜಾರೆಯವರ ಪ್ರಯತ್ನಗಳಿಗೆ,ಉದ್ದೇಶಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಇಂತಿ