Monday, September 9, 2024

ಎಂಭತ್ತನಾಲಕ್ಕರ ಬ್ಯಾಚು...

 

ಗುರುಗಳು ಕ್ಲಾಸುರೂಮನ್ನು ಪ್ರವೇಶಿಸಿದರು,

"ನಮಸ್ತೇ ಸರ್‍" ವಿದ್ಯಾರ್ಥಿಗಳು ಎದ್ದು ಒಕ್ಕೊರಳಲ್ಲಿ ವಂದಿಸಿದರು.

"ನಮಸ್ತೇ, ಎಲ್ಲರೂ ಕೂತುಕೊಳ್ಳಿ, ಎಲ್ಲ ಸ್ಟೂಡೆಂಟ್ಸ್ ಬಂದಿದ್ದೀರಾ? ಅದು ಯಾರಂವ ಓಡಿ ಬರತಾ ಇದ್ದಾನೆ! ಕರುಣಾಕರನಾ? ಛೇ! ಇವನ ಕೈಯ್ಯಲ್ಲಿ ಆಗೂದಿಲ್ಲಪ್ಪ! ಒಂದು ದಿನ ಆದರೂ ಸಮಯಕ್ಕೆ ಸರಿಯಾಗಿ ಬಂದದ್ದುಂಟಾ! ಆಯಿತು ಮಾರಾಯಾ, ಬಾ ಕೂತುಕೋ. ಎಲ್ಲರೂ ಬೆಳಗ್ಗೆ ಬೇಗನೇ ಎದ್ದು ಸರಿಯಾಗಿ ಹಲ್ಲುಜ್ಜಿ ಮುಖ ತೊಳೆದು ಸ್ನಾನ ಮಾಡಿ ಬಂದಿದ್ದೀರಾ?


ಅಥವಾ ಸಂಜೆ ನೋಡುವ ಅಂತ ಬಾಕಿ ಇಟ್ಟಿದ್ದೀರಾ, ಓಕೇ, ಓಕೇ. ಎಲ್ಲಿ ಕೈ ನೋಡುವಾ, ಯಾರೆಲ್ಲಾ ಉಗುರು ಕತ್ತರಿಸದೇ ಬಂದಿದಾರೆ?

"ಹ್ಞಾ ಯಾರವಳು ಕಿಸಿಪಿಸಿ ಮಾತಾಡೂದು? ರೇಖಾನಾ!, ಇವಳಿಗೆ ಯಾವಾಗ ಬುದ್ಧಿ ಬರೂದು!? ದೇವರೇ ಬಲ್ಲ!......"

ಹೆಬ್ರಿ ಹೈಸ್ಕೂಲಿಗೆ - ಈಗ ಪದವಿಪೂರ್ವ ಕಾಲೇಜಾದರೂ ನನಗದು ಪ್ರೀತಿಯ ಹೈಸ್ಕೂಲೇ – ‘ನಮ್ಮ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ರೂಮು ಶುರುವಾಗುತ್ತಿದೆ. ನಾಡಿದು ಅದರ ಓಪನಿಂಗ್ ಇದೆ. ನೀವು ದಯವಿಟ್ಟು ಬರಬೇಕು’ ಎಂದು ಉಪ ಪ್ರಾಂಶುಪಾಲ ಆತ್ಮೀಯರಾದ ದಿವಾಕರರು ಒತ್ತಾಯಿಸಿ ಆಮಂತ್ರಿಸಿದಂತೆ ಹೋದಾಗ ಸಂಭ್ರಮದ ವಾತಾವರಣವಿತ್ತು. ಅವರ ಕಛೇರಿಯಲ್ಲಿ ಜನವೋ ಜನ. ಶ್ರೀಯುತರಾದ ರಘುರಾಮ ಸೋಮಯಾಜಿಯವರು ಮತ್ತಿತರ ಗಣ್ಯ ವ್ಯಕ್ತಿಗಳು ಆಸೀನರಾಗಿದ್ದರು.”ಬನ್ನಿ ನಾಯಕರೆ, ನೀವು ಬಂದದ್ದು ಭಾಳ ಖುಷಿ ಆಯಿತು. ಕೂತುಕೊಳ್ಳಿಅವರ ಸ್ವಾಗತ....

ಹೊರಗೆ ಸುಮಾರು ಮುವ್ವತ್ತು ಮೀರಿ ಆಗಂತುಕರು ಭಾರೀ ಹುಮ್ಮಸ್ಸು ಹಾಗೂ ಸಂತಸದಿಂದ ಒಬ್ಬರನ್ನೊಬ್ಬರು ಕರೆಯುತ್ತ, ಹಸ್ತಲಾಘವ ನೀಡುತ್ತ ಹಬ್ಬದ ಮೂಡಿನಲ್ಲಿದ್ದರು. ಅನೇಕ ಮಹಿಳಾಮಣಿಗಳಂತೂ ಸೋಮಯಾಜಿಯವರ ಬಳಿ ಉತ್ಸಾಹ, ಭಕ್ತಿ, ಪ್ರೀತಿ ವಿಶ್ವಾಸಗಳಿಂದ ಬಂದು ಬಂದು ಮಾತನಾಡಿಸಿ ಹೋಗುತ್ತಿದ್ದರು. ಏನಿದು ಹರ್ಷೋಲ್ಲಾಸದ ಕಾರಣ? …….

ನಮ್ಮ ಹೈಸ್ಕೂಲು - ಈಗಿನ ಕಟ್ಟಡ - ಸಾವಿರದಾ ಓಂಭೈನೂರಾ ಅರುವತ್ತೊಂದರಲ್ಲಿ ಸ್ಥಾಪಿತವಾಯಿತು. ಸುಮಾರು ಅರುವತ್ತೆರಡು ಮಳೆಗಾಲ ಮುಗಿದವು. ಸಹಜವಾಗಿ ಬಿಲ್ಡಿಂಗು ಶಿಥಿಲವಾಗಿತ್ತು. ಇತ್ತೀಚೆ ಊರಿನ ಕೆಲವು ಸಹೃದಯೀ ಯುವ ಉದ್ಯಮಿಗಳಿಗೆತಾವು ಹೈಸ್ಕೂಲಿನಲ್ಲಿ ಕಲಿತು ಜೀವನದಲ್ಲಿ ಉತ್ಕರ್ಷ ಮತ್ತು ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆದು ಒಳ್ಳೆಯ ಬದುಕು ಬಾಳುತ್ತಿದ್ದೇವೆ. ಇದಕ್ಕಾಗಿ ಏನಾದರೂ ಮಾಡಬೇಕು, ನಮ್ಮ ಪಾಲಿನ ಕಿಂಚಿತ್ ಸೇವೆ ಸಲ್ಲಿಸಿ ಋಣ ಸಂದಾಯ ಮಾಡಬೇಕು.’ ಎಂಬ ಆಸಕ್ತಿ ಆಲೋಚನೆ ಹುಟ್ಟಿತು. ತಕ್ಷಣ ವಿಳಂಬ ಮಾಡದೇ ಕಾರ್ಯೋನ್ಮುಖರಾದರು. ಹಳೇ ವಿದ್ಯಾರ್ಥಿಗಳೆಲ್ಲ ಕೂಡಿ ಮೀಟಿಂಗ್ ಮಾಡಿ ಟ್ರಸ್ಟ್ ರಚನೆಯೂ ಆಯಿತು. ಊರು ಊರುಗಳಲ್ಲಿ, ದೇಶ ವಿದೇಶಗಳಲ್ಲಿ ನೆಲಸಿರುವ ಹೆಚ್ಚಿನ ಸಂಖ್ಯೆಯ ಹಳೇವಿದ್ಯಾರ್ಥಿಗಳು ಸಂತೋಷದಿಂದ ಸದಸ್ಯರಾದರು. ಟ್ರಸ್ಟಿನ ಸದಸ್ಯರಲ್ಲಿ ನಾನೂ ಒಬ್ಬ ಮೆಂಬರು. 

ಇದೇ ಬೇಸಿಗೆಯ ಒಂದು ದಿನ ಹಾಗೇ ಒಂದು ರೌಂಡು ಹೈಸ್ಕೂಲಿನತ್ತ ತಿರುಗಾಡಿ ಬರುವ ಎಂದು ಹೋದೆ. ಮಕ್ಕಳ ರಜಾ ದಿನಗಳು, ನೋಡಿದಾಗ ಆಶ್ಚರ್ಯವಾಯಿತು, ಅರ್ಧಾಂಶಕ್ಕಿಂತಲೂ ಹೆಚ್ಚಿನ ಕೊಠಡಿಗಳ ರಿಪೇರಿ ಕೆಲಸ ಪ್ರಗತಿಯಲ್ಲಿತ್ತು. ಆಫೀಸು ರೂಮಲ್ಲಿ ಒಬ್ಬಿಬ್ಬರು ಸ್ಟಾಫು ಇದ್ದರು. ಶಾಲೆಯ ಹೆಚ್ಚಿನ ದಾರಂದ, ಬಾಗಿಲು,ಕಿಟಿಕಿ, ಮಾಡು, ಹಂಚುಗಳು ಎಲ್ಲವೂ ಹೊಸ ರೂಪ ಪಡೆಯುತ್ತಿದ್ದವು, ಉದ್ಯಮಿ ರಾಜೇಶ ನಾಯಕರ ಉಮೇದಿನಿಂದ ಕಾಮಗಾರಿ ನಡೆಯುತ್ತಿದೆ, ಸ್ಕೂಲು ರೀಓಪನಿಂಗ್ ಮೊದಲೇ ಕೆಲಸ ಮುಗಿಸಬೇಕೆಂಬ ಇರಾದೆ ಇದೆ ಎಂಬ ಮಾಹಿತಿ ಸಿಕ್ಕಿತು. ಹುಡುಗನಿಗೆ ಉತ್ಸಾಹ ತುಂಬ ಇದೆ, ಪ್ರತೀ ನಿತ್ಯವೆಂಬಂತೆ ಬಂದು ಖುದ್ದು ನಿಂತು ಪ್ರಗತಿ ಪರಿಶೀಲನೆ ಮಾಡಿ ಹೋಗುತ್ತಾರೆ ಎಂದು ಅರಿತು ಭಾರೀ ಹೆಮ್ಮೆ ಎನಿಸಿತು. ನಾನೂ ಸಹ ಇದೆ ಸಂಸ್ಥೆಯಲ್ಲಿ ಕಲಿತವ, ಪ್ರೌಢಶಾಲೆಯ ಮೇಲೆ ನನಗೆ ಅತಿ ಎಂಬಂತೆ ಭಕ್ತಿಭಾವವಿದೆ, ನನಗೇಕೆ ಇಂತಹ ಯೋಚನೆ, ಯೋಜನೆ ಆಲೋಚನೆಗಳು ಹುಟ್ಟಲಿಲ್ಲ!! ನನ್ನಿಂದ ಆಗ್ತದೋ ಹೋಗ್ತದೋ ಅದು ಬೇರೆ ವಿಚಾರ, ಕನಿಷ್ಠ ಪಕ್ಷ ನಿಟ್ಟಿನಲ್ಲಿ ಯೋಚಿಸಲೂ ಇಲ್ಲವಲ್ಲ ಎಂಬ ಖತಿ ಹುಟ್ಟಿತು. ಇರಲಿ ಅದೀಗ ಪ್ರಸ್ತುತವಲ್ಲ....

ಇನ್ನೊಂದೆಡೆ ಇದೇ ತೆರನ ಉತ್ಸಾಹೀ ಹಳೇ ವಿದ್ಯಾರ್ಥಿಗಳು - 1984-85 ಬ್ಯಾಚಿನವರು - ತಮ್ಮದೇ ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡರು. ಕಲಿತ ಶಾಲೆಗಾಗಿ ಏನಾದರೂ ಮಾಡಬೇಕೆಂಬ ಹುರುಪು. ಹುರುಪಿನ ಫಲಶ್ರುತಿಯೇ ಇಂದು ಉದ್ಘಾಟನೆಗೊಂಡ ಡಿಜಿಟಲ್ ಕ್ಲಾಸ್ ರೂಮು. ಡಿಜಿಟಲ್ ಕ್ಲಾಸು, ಅಂತೆಯೇ ಹಳೇ ಲಡ್ಡಾದ ಬೆಂಚು ಡೆಸ್ಕುಗಳ ಬದಲಿಗೆ ಹೊಸಾ ಡೆಸ್ಕು ಬೆಂಚುಗಳು.! ವ್ಹಾ ರೆ ವ್ಹಾ! ನನಗೇ ಬಹಳ ಖುಷಿಯಾಯಿತು, ಇನ್ನು ಇದನ್ನು ಸಾಧಿಸಿದ 84 ರ ಬ್ಯಾಚಿನವರಿಗೆ ಎಷ್ಟು ಸಂತಸವಾಗಿರಬೇಕು.! ಎಲ್ಲರೂ ರೋಮಾಂಚಿತರಾಗಿದ್ದರು. ಒಂದೆಡೆ ಶಾಲೆಗಾಗಿ ಕೆಲಸ ಮಾಡಿದ ಸಂತೃಪ್ತಿ ಅದರೊಟ್ಟಿಗೆ ಪೂರಾ ನಲವತ್ತು ವರ್ಷಗಳ ಬಳಿಕ ಒಟ್ಟು ಮೇಳೈಸಿದ ಗೆಳೆಯ ಗೆಳತಿಯರ ಮಿಲನದ ಸಂಭ್ರಮ! ಒಬ್ಬರು ಮುಂಬಯಿಯಿಂದ ಬಂದರೆ, ಮತ್ತೊಬ್ಬ ದುಬೈಯಿಂದ, ಆದರೆ ಕಬ್ಬಿನಾಲೆಯಿಂದ ವೆಂಕಪ್ಪ ಹೆಬ್ಬಾರರ ಮಗಳು ನಯನ ಇನ್ನೂ ಬಂದಿಲ್ಲವಲ್ಲ!!  ಅಗೋ ಬಂದ್ರು ಬಂದೇ ಬಿಟ್ಟರು, ಇನ್ನು ಶುರು ಮಾಡಿ. ಏನು ಇಷ್ಟು ತಡ ಮಾರಾಯಿತಿ!!

ಬೆಳಗ್ಗೆ ಶಾಸ್ತ್ರೋಕ್ತವಾಗಿ ಗಣಹೋಮವನ್ನು ವರಂಗದ ಉದ್ಯಮಿ ಶ್ರೀ ಅನಂತ ಮಲ್ಯಾ ಅವರು ನಡೆಸಿಕೊಟ್ಟರು. ಅವರೂ ಸಹ  84 ರ ಬ್ಯಾಚ್ ಮೆಂಬರು. ಎಲ್ಲಾ ಸಹಪಾಠಿಗಳ ಆಗಮನಾ ನಂತರ ರಿಬ್ಬನ್ ಕಟಿಂಗ್ ಮೂಲಕ ಡಿಜಿಟಲ್ ಕ್ಲಾಸ್ ರೂಮ್ ಉದ್ಘಾಟನೆ ನಡೆಯಿತು. ನಂತರ ಕಾಲೇಜಿನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ.  84 ರ ಬ್ಯಾಚಿನಲ್ಲಿ ಹೆಚ್ಚಿನವರು ಅಧ್ಯಾಪಕ ವೃತ್ತಿಯವರೋ ಎಂಬ ಭಾಸವಾಯಿತು. ಸಭಾ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆಯಿತು, ಅದರ ಕುರಿತು ನನ್ನ ಯಾವುದೇ ಹೆಚ್ಚಿನ ವ್ಯಾಖ್ಯಾನವಿಲ್ಲ. ಆದರೆ ಸ್ವಾಗತ ಭಾಷಣ ಮಾಡಿದ ರೇಖಾ ಮೇಡಮ್ ಮಾತುಗಳೋ ಮನಸೂರೆಗೊಂಡವು. ಯಾವುದೇ ಗೇರು ಬ್ರೇಕುಗಳಿಲ್ಲದ ಸುಲಲಿತ ಸರಾಗ ಹಾಗೂ ಆಕರ್ಷಕ ಮಾತುಗಳು ಮುದ ನೀಡಿದವು. ಕ್ಲಾಸಿನಲ್ಲಿ ತನ್ನ ಮಾತುಗಾರಿಕೆಯಿಂದ ಬಹಳ ಫೇಮಸ್ ಆಗಿದ್ದ ರೇಖಾ ಮೇಡಮ್  ವ್ಯಕ್ತಿತ್ವವೂ ಅವರ ಮಾತುಗಳಂತೆ ಅತ್ಯಂತ ಆಕರ್ಷಕ. ಗಣಿತದ ಕ್ಲಾಸನ್ನು ತರಗತಿಯ ಹೊರಗೇ ಕಲಿತ ಆಕೆಗೆ ಮುಂದಿನ ದಿನಗಳಲ್ಲಿ ತಾನು ಗಣಿತದ ಟೀಚರ್ಆಗುವೆನು ಎಂಬ ಕಲ್ಪನೆ ಇರಲಿಲ್ಲ. ಈಗಂತೂ ಅವರು ತಾನು ಸರ್ವಿಸ್ ಮಾಡುತ್ತಿರುವ ಶಾಲೆಯ ಪ್ರಿನ್ಸಿಪಲ್. ಸೋಮಯಾಜಿ ಸರ್ಮೇಲೆ ತಿಳಿಸಿದ ಕಿಸಿಪಿಸಿ ಮಾತಾಡುತ್ತಿದ್ದ ರೇಖಾ ಟೀಚರ್ಇವರೇ....

ಶಾಲಾ ಜೀವನದ ನೆನಪುಗಳ ಮೆಲುಕಾಟ, ಅಪರೂಪದ ಫಾಸ್ಟ್ ಫ್ರೆಂಡ್ ಗಳ ಪುನಃ ಭೇಟಿ, ತಾವು ಕಲಿತ ಶಾಲೆ, ಕೂತು ಓದಿದ ಬೇಂಚು, ಲೆಕ್ಕದ ಕ್ಲಾಸಲ್ಲಿ ಕೈವಾರದ ಕಡ್ಡಿಯಿಂದ ತೂತು ಮಾಡಿದ ಡೆಸ್ಕ್‌ …  ಒಂದೇ ಎರಡೇ ಅನೇಕ ನೆನಪುಗಳಿವೆ. ಅದರ ರೋಮಾಂಚನವೇ ಬೇರೆ, ಅನುಭವಿಸಬೇಕು, ಧನ್ಯರಾಗಬೇಕು.......

08-09-2024