Monday, July 29, 2024

ಸ್ನೇಹದ ಮಾಧುರ್ಯ

ಹುಬ್ಬಳ್ಳಿ - ಹೂಬಳ್ಳಿ....


"ನಾಯಕ್ ಸರ್ ಮೆನೇಜರ್ ಕರೀತಾರ."

ಕೇಬಿನ್ನಲ್ಲಿ ಬೆಳಗಾಮ್ ನಿಂದ I T ಅಧಿಕಾರಿ ಬಂದಿದ್ದರು. ಬ್ರಾಂಚುಗಳಲ್ಲಿ A L P M ಬಳಕೆ ಲಾಗೂ ಮಾಡಿಸುವರೆ ಆದೇಶ ಹಿಡಕೊಂಡು ಬಂದಿದ್ದರು. ಸೂಕ್ತ ಮಾಹಿತಿ, ಟ್ರೇನಿಂಗ್ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಪ್ರಾತ್ಯಕ್ಷಿಕೆ ಸಮಯದಲ್ಲಿ ಉತ್ಸುಕ ಸಹೋದ್ಯೋಗಿಗಳೂ ಭಾಗವಹಿಸಿದರು. "ನಾಯಕರೆ ಆದಷ್ಟು ಬೇಗನೆ ನೀವು ಕಂಪ್ಯೂಟರ್ ಫೀಡ್ ಮಾಡಿಸಿ ಲೈವ್ ಮಾಡಬೇಕು." ವಿನಂತಿಸಿದರು.

"ಗೆಳೆಯರೇ, ನಿಮಗೆಲ್ಲ ತಿಳಿದಿರುವಂತೆ ಬ್ರಾಂಚಿನಲ್ಲಿ ಕಂಪ್ಯೂಟರ್ ಗಳು ಬಂದಿದಾವೆ. ಸೇವಿಂಗ್ಸ್ ಬ್ಯಾಂಕ್ ಹಾಗೂ ಕರಂಟ್ ಅಕೌಂಟ್ ಗಳನ್ನು ಫೀಡ್ ಮಾಡಿ ಲೈವ್ ಮಾಡಬೇಕು ಎಂಬ ಹುಕುಮು ಇದೆ, ಕಂಪ್ಯೂಟರ್ ನಲ್ಲಿ ಖಾತೆಗಳ ವಿವರಗಳನ್ನು ಫೀಡ್ ಮಾಡಲು, ಕಂಪ್ಯೂಟರ್ ನ ಕೆಲಸ ಕಲಿಯಲು ಲೀಜರ್ ಟೈಮಲ್ಲಿ ಬಂದು ಕಲಿಯಬಹುದು, ನನ್ನ ಅಸಿಸ್ಟೆನ್ಸ್ ಯಾವಾಗಲೂ ಇದೆ. ಪ್ರತಿಯೋರ್ವನಿಗೂ ಅವಕಾಶ ಹಾಗೂ ಸ್ವಾಗತವಿದೆ. 

ನಾನು ಊಹಿಸಿಕೊಂಡಂತೆ ಮಹಿಳಾಮಣಿಗಳಿಂದ ಹೆಚ್ಚಿನ ಸಹಕಾರವಿತ್ತು. 'ಸರ್, ನನಗೆ ಒಂದೆರಡು ದಿನ ಎಕೌಂಟ್ ಮಾಹಿತಿ ಫೀಡ್ ಮಾಡೂದನ್ನು ಹೇಳಿಕೊಡಬೇಕು ಪ್ಲೀಸ್.' 

"ನಿಮಗೆ ಎಷ್ಟು ಗೊತ್ತಿದೋ ನನಗೂ ಅಷ್ಟೇ ಗೊತ್ತಿರೋದು, ಬನ್ನಿ ಕಂಪ್ಯೂಟರ್ ಎದುರು ಕೂತು 'ಓಂ ಶ್ರೀ ಗಣೇಶ' ಮಾಡಿಬಿಡಿ." 

ಹೆಚ್ಚಿನವರು ತುಂಬ ಉಮೇದಿನಿಂದ ಮುಂದೆ ಬಂದರು. 

"ನಾಯಕರೇ ಕೆಲಸದ ಚುರುಕು ಸಾಲದು ಅಂತ ಅನಿಸುತ್ತದೆ." ಮೆನೆಜರರ ಆತಂಕ.....

"ವಿದ್ಯಾ ಮೇಡಮ್ ಹೇಗಿದ್ದೀರಿ? ಯಜಮಾನರು ಮಕ್ಕಳು ಸೌಖ್ಯವೇ?"

"ಏನು! ರಾಯರಿಗೆ ಇವತ್ತು ನನ್ನ ಮೇಲೆ ಭಾರಿ ಕಕ್ಕುಲಾತಿ ಹುಟ್ಟಿದೆ!"

"ನಮ್ಮ ಸ್ಟಾಫ್ ನವರ ಯೋಗಕ್ಷೇಮ ನೋಡ್ಕೋ ಬೇಕು ತಾನೇ!  ನೀವೆಲ್ಲ ಬೇಕಾದವರು, ನಿಮ್ಮ ಖುಷಿ ನನ್ನ ಪ್ರಯೋರಿಟಿ. ಅದಕ್ಕೇ ಆಗಾಗ ಬಂದು ಸುಖ ಕಷ್ಟ ವಿಚಾರಿಸುತ್ತ ಇರೂದು."

"ಸಾಹೇಬರು ಬಲೆ ಬೀಸಿದ್ದಾರೆ, ಖದೀಮರಿದ್ದಾರೆ,  ಜಾಗ್ರತೆಯಾಗಿರು." ಗೆಳತಿಯ ಸಲಹೆ.....

                                   00೦00

ಬೇಂಕಿನಿಂದ ನಿವೃತ್ತನಾದ ಬಳಿಕ ನಮ್ಮದು ಬೆಂಗಳೂರು ವಾಸ. ಮಕ್ಕಳ ದೇಖಬಾಲ್ ನೋಡಲು ಅಪ್ಪ ಅಮ್ಮ ತಮ್ಮೊಟ್ಟಿಗೆ ಇದ್ದಾರೆ ಎಂದು ಮಗ ಸೊಸೆ ಎಂದುಕೊಂಡಿದ್ದಾರೆ. ಆದರೆ ಮುಖ್ಯವಾಗಿ ನಮಗೆ ಮೊಮ್ಮಕ್ಕಳ ಸಹವಾಸದ ಸೆಳೆತ - ಮೋಹ ವೆಂದರೂ ಸೈ- ಎಳೆಯುತ್ತಿತ್ತು. ಆ ಕಾರಣ ಬೆಂಗಳೂರು ವಾಸ. ಒಂದು ದಿನ ಮೊಬೈಲ್ ಗುಣುಗುಣಿಸಿತು. 

"ಹರಿ ಓಂ"

"ನಮಸ್ಕಾರ, ನಾನು ವಿದ್ಯಾ." ಮಧುರವಾದ ಕರೆ.....

"ನಮಸ್ಕಾರ ನಮಸ್ಕಾರ, ಬಹಳ ದಿನಗಳ ನಂತರ ನೆನಪಾಯಿತು,! ಏನು ಸಮಾಚಾರ?"

ಮಗನ ಮದುವೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲು ವಿದ್ಯಾಧರಿಯ ಕರೆಯಿತ್ತು......

ಮದುವೆ ಅಟೆಂಡ್ ಮಾಡಲು ಆಗಲಿಲ್ಲ, ನಮ್ಮಲ್ಲೂ ಅದೇ ದಿನ ಮದುವೆ ಫಂಕ್ಷನ್ ಇತ್ತು. ಆದರೆ ಅದೆಷ್ಟು ಮಧುರ ನೆನಪುಗಳು ಸಮುದ್ರದ ಅಲೆಗಳು ಒಂದರ ಹಿಂದೆ ಒಂದರಂತೆ ದಡಕ್ಕಪ್ಪಳಿಸಿದ ತೆರದಲ್ಲಿ ಅಲೆಯಲೆಯಾಗಿ ಮರುಕಳಿಸಿದವು.....!

ಹುಬ್ಬಳ್ಳಿ ಶಹರದ ಸುಪರ್ ಮಾರ್ಕೆಟ್ ಬ್ರಾಂಚಿಗೆ ಕೊಲ್ಲೂರಿನಿಂದ ವರ್ಗಾವಣೆಯಾಗಿ ಸೇರಿದೆನೋ, ಅಂದಿನಿಂದ ನಮ್ಮ ಒಳ್ಳೆಯ ದಿನಗಳು ಪುನಃ ಶುರುವಾದವೆಂದು ನನ್ನ ಖಚಿತ ನಂಬಿಗೆ. ಮಕ್ಕಳಿಬ್ಬರ ಶಿಕ್ಷಣದ ಮುಖ್ಯ ಘಟ್ಟ, ಅದಕ್ಕೆ ಸರಿಯಾಗಿ ಉತ್ತಮ ಶಿಕ್ಷಣ ವ್ಯವಸ್ಥೆ, ಒಳ್ಳೆಯ ಓನರ್ ಹಾಗೂ ಮನೆ, ಮುಖ್ಯವಾಗಿ ಸಹೃದಯಿ ಮೆನೇಜರ್ ಮತ್ತು ಸಹೋದ್ಯೋಗಿಗಳು, ಗ್ರಾಹಕರೂ ಸಹ ಸ್ನೇಹಜೀವಿಗಳು. ಇನ್ನೇನು ಬೇಕು!!

'ಪೆನ್ ಶನ್ ಸೆಕ್ಷನ್ ನೋಡ್ಕೊಳ್ಳಿ ಸರ' ಎಂದರು ಮೆನೇಜರ್ ಸಾಹೇಬರು. ಆಫೀಸರಿಗೆ ಮೆನೇಜರರು ಸರ್ ಎಂದುದು ಕೇಳಿ ನನಗೆ ಆಶ್ಚರ್ಯವೂ ಮುಜುಗರವೂ ಆದವು. ಅದೊಂದು ಮಾತನಾಡುವ ಧಾಟಿ, ಆ ಮೇಲೆ ತಿಳಿಯಿತು.

ಹೆಸರು ಮಾತ್ರ ಪೆನ್ಶನ್ ಡಿಪಾರ್ಟ್ಮೆಂಟ್., ಸೇವಿಂಗ್ಸ್, ಕರೆಂಟ್, ಲೋನ್ಸ್ , ನಗದು ಮತ್ತು ಬಿಲ್ಸ್ ಬಿಟ್ಟು ಬ್ರಾಂಚಿನ ಉಳಿದ ಸಕಲ - (everything under the blue sky) -  ಕೆಲಸಗಳಿಗೆ ನಾನು ಸಾಹೇಬ!! 

ಬ್ರಾಂಚಿನ ಸಕಲ ಸಹೋದ್ಯೋಗಿಗಳೊಡನೆ ಘನವಾದ ಇಂಟರಾಕ್ಷನ್ ಇರಿಸಿಕೊಳ್ಳಲು ಇದು ಅನುಕೂಲವಾಯಿತು.

ಲಂಚ್ ಅವರ್ ನಲ್ಲಿ ನನ್ನ ಟೇಬಲ್ ನ ಹಿಂದುಗಡೆ ಮೂವರು ಗೆಳತಿಯರ ಊಟ -ವಿದ್ಯಾಧರಿ, ಸಬಿತಾ ಮತ್ತು ವಿಜಯಲಕ್ಷ್ಮಿ. ಮೂರನೇಯವರು ಈ ಕೂಟದ ಛೀಫು. ಅದೂ ಇದೂ ಮಾತಾಡುತ್ತಾ ತಾವು ತಂದ ಸಣ್ಣ ಸಣ್ಣ ಕರಡಿಗೆಯಂತಹ ಊಟದ ಡಬ್ಬಿಯಿಂದ ಏನು ತಿನ್ನುತ್ತಿದ್ದರೋ!! ಇಡೀ ಬ್ರಾಂಚಿನವರ ಲಂಚು ಮುಗಿದು ಶೇಟು ಸಿಗರೇಟು ಮುಗಿಸಿ ಬಂದರೂ ಇವರ ಊಟ-ಮಾತು ಮುಗಿಯುತ್ತಿರಲಿಲ್ಲ. ಅವರೆದುರು ನನ್ನ ಮೂರಂಕಣದ ಊಟದ ಬುತ್ತಿಯನ್ನು ತೆರೆಯಲು ಕೆಲಕಾಲ ನನಗೆ ಮುಜುಗರವಾಗುತ್ತಿತ್ತು....

ಇಡೀ ಬ್ರಾಂಚಿನಲ್ಲಿ ನನಗೆ ವಿದ್ಯಾಧರಿಯಷ್ಟು ಸ್ನೇಹಮಯಿ, ಶಾಲೀನ ಮಾತುಗಳ ಹಾಗೂ ಹಸನ್ಮುಖಿ ಭಾವದ ದೋಸ್ತ್ ಕಂಡು ಬರಲಿಲ್ಲ. ಹಾಗಾಗಿ ನನಗೆ ಅವರಲ್ಲಿ ಒಂದು ಮುಷ್ಟಿ ಜಾಸ್ತಿ ವಿಶ್ವಾಸ. ಅವರೊಡನೆ ನನ್ನ ಇಂಡಲ್ಜನ್ಸ್ ಕೊಂಚ ಹೆಚ್ಚೇ ಇತ್ತೇನೋ ಎಂಬ ಭಾವ ಬರುತ್ತಿದೆ. 

ಬೆಳಿಗ್ಗೆ ಆಫೀಸಿಗೆ ಬರುವಾಗ ಸಾಮಾನ್ಯವಾಗಿ ಕರೆನ್ಸಿ ಚೆಸ್ಟಿನ ಟೀ ಆರ್ ಕಿಣಿಯರು ಜತೆಯಾಗುತ್ತಿದ್ದರು. ಆದರೆ ಸಂಜೆಯ ಟೈಮಲ್ಲಿ ಸ್ಕೂಟರಿನ ಹಿಂದಿನ ಸೀಟು ವಿದ್ಯಾಧರಿಯ ಹೆಸರಿಗೆ ರಿಜಿಸ್ತ್ರಿ ಆಗಿತ್ತು. ನನ್ನ ಮನೆಯ ದಾರಿಯಲ್ಲಿ ಅವರ ಮನೆ ಇತ್ತು.

'ಬನ್ನಿ ಸರ್, ಕಾಫಿ ಮಾಡ್ತೇನೆ..' 

ಸ್ಕೂಟರ್ ಪಾರ್ಕ್ ಮಾಡಿದೆ. ಮನೆಗೆ ಸ್ವಾಗತ ಹಾಗೂ ಕಾಫಿ ಪರಿಮಳ ಚನ್ನಾಗಿತ್ತು.ಮೇಡಮ್ ಗೆ ಇಬ್ಬರು ಮಕ್ಕಳು, ಅಕ್ಕ ಮತ್ತು ತಮ್ಮ. ಮರುದಿನ ಪುನಃ ಕಾಫಿಯ ಆಮಂತ್ರಣ.. 

''ನೋಡಿ ವಿದ್ಯಾ ನಿಮ್ಮ ಯಜಮಾನರು ಡ್ಯೂಟಿಯಿಂದ ಬಂದಿಲ್ಲ ತಾನೇ, ನಾನು ಹೊರಡುತ್ತೇನೆ."

"ಸರಿ, ಹಾಗಾದರೆ ನಾನು ಇಲ್ಲೇ ಇಳೀತೇನೆ." ಮನೆಯಿಂದ ಅರ್ಧ ಫರ್ಲಾಂಗ್ ಹಿಂದೆ ಇಳಿದರು. ನಾನು ಮುಂದೆ ಸಾಗಿದೆ...

ಒಂದು ಶನಿವಾರ ಮಧ್ಯಾಹ್ನ ಸ್ಕೂಟರು ನಿಗದಿತ ಸ್ಥಳದಲ್ಲಿ ನಿಲ್ಲದೇ ಸೀದಾ ಮುಂದೆ ಓಡಿತು, 'ನಿಲ್ಲಿಸಿ ಮಹರಾಯರೇ' ಎಂದರೂ ಕೇಳದೇ ಸ್ಕೂಟರು ನಮ್ಮ ಮನೆಯ ಮುಂದೆ ನಿಂತಿತು.

ಮನೆಯಲ್ಲಿ ಯಜಮಾನಿ ಒಡನೆ ತುಂಬ ಸಮಯ ಸಲ್ಲಾಪ ನಡೆದ ನಂತರ ವಾಪಸು ಬಿಟ್ಟು ಬಂದೆ...

"ನಮ್ಮಲ್ಲಿ ಭೀಮನ ಅಮವಾಸ್ಯೆ ವೃತಕಥೆ ಉಂಟು, ನೀವು ಅತ್ತಿಗೆಯವರನ್ನು ಕರಕೊಂಡು ಬರಬೇಕು." ವಿದ್ಯಾಧರಿಯ ಆಮಂತ್ರಣ ಬಂತು. 

"ಅದೇನು ವೃತ?"

"ಗಂಡನಿಗೆ ದೀರ್ಘಾಯುಷ್ಯ ಸಿಗಲಿ ಎಂದು ಪತಿವ್ರತಾ ಸ್ತ್ರೀಯರು ಈ ವೃತಾಚರಣೆ ಮಾಡುತ್ತಾರೆ. ನಾನೂ ಈ ವೃತ ಆಚರಿಸುತ್ತೇನೆ. ನೀವು ಬನ್ನಿ ಸರ್." ಅದರಂತೆ ಸಂಜೆಯ ಹೊತ್ತು ಅವರಲ್ಲಿ ಹೋದೆವು. ಪೂಜಾವಿಧಿ ನಗೆ ಹೊಸದು.......

ನಾಲ್ಕು ವರ್ಷಗಳ ಸುಪರ್ ಮಾರ್ಕೆಟ್ ಬ್ರಾಂಚ್ ಸರ್ವೀಸಲ್ಲಿ ವಿದ್ಯಾ ನನ್ನ ಸೆಕ್ಷನ್ ನಲ್ಲಿ ಡ್ಯೂಟಿ ಮಾಡಿಲ್ಲ. ಆದರೆ ಅನಿವಾರ್ಯ, ಅಗತ್ಯ ಸಂದರ್ಭಗಳಲ್ಲಿ ನನ್ನ ವಿನಂತಿಯನ್ನು ತಿರಸ್ಕರಿಸದೇ ಖುಷಿಯಿಂದ ಮಾಡಿ ಕೊಟ್ಟಿದ್ದಾರೆ, ಬೇಂಕಿನ ನನ್ನ ಅನುಭವದಲ್ಲಿ ಇದು ತುಂಬ ಅಪರೂಪ. ತನ್ನ ಸೆಕ್ಷನ್ ಅಲ್ಲ, ತಾನೇಕೆ ಮಾಡಬೇಕು ಎಂಬ ಧೋರಣೆ ಜಾಸ್ತಿ ಇದ್ದ ಕಾಲವದು....

                                 ೦೦೦೦೦

"ವಿದ್ಯಾ, ಒಂದು ರಿಕ್ವೆಸ್ಟ್ ಉಂಟು, ದಯವಿಟ್ಟು ಒಪ್ಪಿಕೊಳ್ಳಬೇಕು, ನೀವು ಹಾಂ ಎನ್ನುತ್ತೀರಾ ಎಂಬ ಭರವಸೆಯಿಂದಲೇ ಕೇಳುತ್ತಿದ್ದೇನೆ..."

"ಏನು ಹೇಳಿ ಮಹರಾಯರೇ, ಬರೀ ಪೀಠಿಕೆಯಲ್ಲೇ ಇದೀರಾ."

"ಆಯಿತು, ನೇರ ವಿಷಯಕ್ಕೆ ಬರುತ್ತೇನೆ, ಗೋಲು ಗೋಲು ತಿರುಗಿಸುವುದಿಲ್ಲ. ನಾಡಿದು ಆದಿತ್ಯವಾರ ಮಧ್ಯಾಹ್ನ A L P M ನಲ್ಲಿ ಎಕೌಂಟ್ ಫೀಡಿಂಗ್ ಮಾಡಲು ಬರುತ್ತೀರಾ? ಏನಾದರೂ ಪ್ರಯರ್ ಫಂಕ್ಷನ್ ಇದ್ದರೆ ಬೇಡ."

"ಆಯಿತು ಮಹರಾಯರೇ ಅಷ್ಟೇ ತಾನೇ.."

"ಮತ್ತೆ ನಾಳೆ ಶನಿವಾರ ಮಧ್ಯಾಹ್ನ ಸ್ವಲ್ಪ ಹೊತ್ತು ವರ್ಕ್ ಮಾಡೋಣವೇ."

"ಬೆರಳು ತೋರಿಸಿದರೆ ಹಸ್ತ ನುಂಗುವ ಗಾದೆ ಆಯ್ತಲ್ಲ.!"

"ಬೇಸರ ಮಾಡಬಾರದು ನೀವು."

"ಆಗಲಿ ನಾಯಕರೇ, ನಿಮ್ಮ ಮಾತು ತಳ್ಳಿ ಹಾಕಲಾಗುತ್ತದೆಯೇ."

ಅಂತೆಯೇ ಶನಿವಾರ ಹಾಗೂ ನೆಕ್ಸ್ಟ್ ಆದಿತ್ಯವಾರ ಮಧ್ಯಾಹ್ನ ವಿದ್ಯಾಧರಿ ಎಕೌಂಟ್ ಫೀಡಿಂಗ್ ಕೆಲಸ ಮಾಡಲು ಬಂದರು. ನಾನು ಡೀಟೇಲ್ಸ್ ಓದಿ ಹೇಳೂದು, ಆಕೆ ಸರಸರನೇ ಟಂಕಿಸುವುದು... ಕೆಲಸ ಸಾಗಿತು...

"ವಿದ್ಯಾ, ನಮ್ಮ ಗುರುಗಳ ಬಳಿ ಕೇಳಿಕೊಂಡು ನಿಮ್ಮನ್ನು ನಮ್ಮ ಜಾತಿಗೆ ಸೇರಿಸಿಕೊಳ್ಳುವಾ ಎಂಬ ಖಯಾಲು ಬರುತಾ ಇದೆ ನನಗೆ."

"ಏಕೋ!"

"ನಿಮ್ಮನ್ನು ತಂಗಿ ಎಂದು ಒಪ್ಪಿಕೊಂಡಾಗಿದೆ ತಾನೆ, ಹಾಗಾಗಿ ನಮ್ಮ ಜಾತಿ ಸೇರಿಬಿಡಿ."

"........"

"ಇರಲಿ ಬಿಡಿ, ನಮಗೆ ಒಡಹುಟ್ಟಿದ ತಂಗಿ ಒಬ್ಬಳೇ, ನೀವು ಇನ್ನು ನನ್ನ ಹೊಸಾ ತಂಗಿ, ಹೇಗೆ?''

"ಅದಾದರೆ ಮಾತು.!"

"ನಾಯಕರೇ, ಮೆನೆಜರು ಬಂದಿದಾರೆ.!" ಅದುವರೆಗೆ ಆಕೆಗೆ ಮೆನೆಜರು ಒಳಗೆ ಕೇಬಿನ್ ನಲ್ಲಿ ಕೂತಿರುವುದು ಗಮನಕ್ಕೆ ಬಂದಿರಲಿಲ್ಲ.

"ಹೌದು, ನಾನೇ ಬರಬೇಕೆಂದು ರಿಕ್ವೆಸ್ಟ್ ಮಾಡಿದ್ದೆ."

"ಸುಮ್ಮನೆ ಅವರಿಗೆ ತೊಂದರೆ ಕೊಟ್ಟಿರಿ."

"ಇರಲಿ ಬಿಡಿ, ಬೇಂಕಿನಲ್ಲಿ ನಿಷ್ಠೆಯಿಂದ ಡ್ಯೂಟಿ ಮಾಡುವವರಲ್ಲಿ ನೀವು ಮೊದಲಿಗರು ಎಂದು ಅವರಿಗೂ ತಿಳೀಲಿ."

"ಓಹೋಹೋ, ಬೆಣ್ಣೆ ಚೆನ್ನಾಗಿಯೇ ಹಚ್ಚತೀರಿ, ಶಾಣ್ಯಾ ಇದೀರಿ. ಮುಂದಿನ ಡೀಟೇಲ್ಸ್ ಹೇಳಿ ಮತ್ತೆ..." ಕೆಲಸ ಮುಂದುವರೆಯಿತು....

                                 oooOooo

"ನಾಯಕ್ ಮಾಮ್, ನಿಮ್ಮ ಬ್ರಾಂಚಲ್ಲಿ ಎಕೌಂಟ್ ಫೀಡಿಂಗ್, ಟ್ಯಾಲಿ, ಡೋರ್ಮೆಂಟ್-ನಾನ್ ಆಪರೇಟಿವ್ ಎಕೌಂಟ್ ಶಿಫ್ಟಿಂಗ್ ಎಲ್ಲ ಮುಗಿಯಿತಾ?" ದುರ್ಗದ ಬೈಲ್ ಬ್ರಾಂಚಿನ ನನ್ನ ಗೆಳೆಯ ವಿಚಾರಿಸಿದರು.

"ಮುಗಿಯಿತಾ ಅಂದರೆ ಎಂತದು ಮಹರಾಯ, ನಮ್ಮಲ್ಲಿ A L P M ಲೈವ್ ಮಾಡಿಯಾಯಿತು. ಈಗ ಸ್ವಲ್ಪ ದಿನ ಪ್ಯಾರಲಲ್ ಎಂಟ್ರಿ ಮಾಡುತ್ತಿದ್ದೇವೆ. ನಾಡಿದ್ದು ಸೋಮವಾರದಿಂದ A L P M only."

"ಹೌದಾ? ಇದೆಲ್ಲ ಹೇಗೆ ಮಾಡಿಸಿದಿರಿ? ಓವರ್ ಟೈಮ್ ಏನಾದರೂ ಕೊಟ್ಟಿದೀರಾ ಹೇಗೆ?"

"ಓವರ್ ಟೈಮ್ ಗೀವರ್ ಟೈಮ್ ಏನೂ ಇಲ್ಲ, ಎಲ್ಲ ರೆಗ್ಯುಲರ್ ಟೈಮ್."

"ಹೌದಾ, ನಮ್ಮಲ್ಲಿ ಮಾರ್ರೇ ದೊಡ್ಡ ಗಲಾಟೆ ಆಗಿದೆ, ಯೂನಿಯನ್ ಇಶ್ಶೂ ಆಗಿ ರಣ ರಂಪಾಟ ಆಗಿದೆ. ನೀವು ಹೇಗೆ ಮಾಡಿಸಿದಿರಿ..!" ಅವರಿಗೆ ಅಚ್ಚರಿ.

"ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡಿಸ್ತೇವೆ ಎಂಬ ಅಹಂ ತೋರಿಸಿ ನಡೆದರೆ ಕಷ್ಟ ಮಾರಾಯ್ರೆ. ದೋ ಪ್ಯಾರ್ ಭರೀ ಬಾತೇಂ ಬೋಲೋ ಭಾಯೀ......."

ಅವರು ಒಪ್ಪಿ ಮೆಚ್ಚುಗೆ ಸೂಚಿಸಿದರು...

ಹುಬ್ಬಳ್ಳಿಯ ಸ್ನೇಹಿತರಲ್ಲಿ ವಿದ್ಯಾ ನನ್ನ ಅಚ್ಚುಮೆಚ್ಚಿನವರು. ತೊಂಭತ್ತರ ದಶಕದ ಸ್ನೇಹ. ಅದನ್ನು ನೆನಪಿನಲ್ಲಿಟ್ಟುಕೊಂಡು ಮಗನ ಮದುವೆಗೆ ಆಮಂತ್ರಣ ಕಳಿಸಿದರು. ಇತ್ತೀಚೆಗೆ ಮುವ್ವತ್ತು ವರ್ಷಗಳ ನಂತರ ನಾವು ದಂಪತಿಗಳು ಮೈಸೂರಿನ ಅವರ ಮನೆಗೆ ಭೇಟಿ ಕೊಟ್ಟಾಗ ಅವರು ಮಾಡಿದ ಸಂಭ್ರಮದ, ಪ್ರೀತಿ ಭರಿತ ಸತ್ಕಾರ ಮರೆಯಲುಂಟೇ..... 🙏🙏🙏🙏🙏