Saturday, December 2, 2023

ಪ್ರಿಯರೇ,

‘ಪ್ರಿಯರೇ,

ಕೃಷಿ ಅಭಿವೃದ್ಧಿಗಾಗಿ ನೀವು ಬೇಂಕಿನ ನಮ್ಮ ಶಾಖೆಯನ್ನು ಸಂಪರ್ಕಿಸಿದಾಗ ನಿಮ್ಮ ಆರ್ಥಿಕ ಅವಶ್ಯಕತೆಗಳನ್ನು ಗಮನಿಸಿ ಸಕಾಲದಲ್ಲಿ ನಿಮಗೆ ಸಾಲಸೌಲಭ್ಯಗಳನ್ನು ನೀಡಿರುತ್ತೇವೆ. ನೀಡಿದ ಸಾಲದ ಸದುಪಯೋಗವನ್ನು ಮಾಡಿ ಕೃಷಿಯಲ್ಲಿ ಪ್ರಗತಿಯನ್ನು ಹೊಂದುವರೆ ಬೇಂಕು ಸಹಯೋಗವನ್ನು ನೀಡಿದೆ. ಸಾಲದ ಅರ್ಜಿಯನ್ನು ನೀಡುವಾಗ ಮತ್ತು ಸಾಲವನ್ನು ಪಡೆಯುವಾಗ, ಪಡಕೊಂಡ ಮೊತ್ತವನ್ನು ಸದುಪಯೋಗ ಪಡಿಸಿ ಸಾಲವನ್ನು ಕ್ಲಪ್ತ ಸಮಯದಲ್ಲಿ ಕಂತುಗಳ ಪ್ರಕಾರ ಮರುಪಾವತಿ ಮಾಡುತ್ತೇನೆ ಎಂದು ಹೇಳಿರುತ್ತೀರಿ. ಇದಕ್ಕೆ ಒಪ್ಪಿ ಬೇಂಕಿನ ಪರವಾಗಿ ಸೂಕ್ತ ಕರಾರುಪತ್ರಗಳನ್ನು ಸಹಿಮಾಡಿ ಕೊಟ್ಟಿರುತ್ತೀರಿ.

ಪಡಕೊಂಡ ಸಾಲದ ಮರುಪಾವತಿಯನ್ನು ಕರಾರಿನಲ್ಲಿ ಒಪ್ಪಿಕೊಂಡಂತೆ ಸರಿಯಾಗಿ ಕಂತುಗಳ ವಾಯಿದೆ ತಾರೀಕಿನ ಒಳಗೆ ಮರುಪಾವತಿ ಮಾಡಿ ಸಾಲಖಾತೆಯನ್ನು ರೆಗ್ಯುಲರ್ಆಗಿ ಇಡುವ ಅವಶ್ಯಕತೆಯನ್ನು ನಿಮಗೆ ಮನದಟ್ಟು ಮಾಡಿರುತ್ತೇವೆ.

ನಿಮಗೆ ದಿನಾಂಕ XX-XX-XXXX ರಂದು ರೂ.XXXXXಗಳನ್ನು ವಾರ್ಷಿಕ 12.50 ಪ್ರತಿಶತ ಬಡ್ಡಿದರದಲ್ಲಿ ಸಾಲವಾಗಿ ನೀಡಿರುತ್ತೇವೆ. ಸದರಿ ಸಾಲವನ್ನು ರೂ.XXXX ಗಳ ವಾರ್ಷಿಕ ಕಂತುಗಳಲ್ಲಿ ಬಡ್ಡಿ ಸಹಿತ ಕಟ್ಟಿ ಮರುಪಾವತಿಸುವ ಶರ್ತವನ್ನು ನೀವು ಒಪ್ಪಿಕೊಂಡು ಹಣವನ್ನು ಪಡೆದಿರುತ್ತೀರಿ.

ನಿಮ್ಮ ಸಾಲ ಖಾತೆಯನ್ನು ಗಮನಿಸಿದಾಗ ಪಡಕೊಡ ಸಾಲವನ್ನು ಕರಾರಿನ ಪ್ರಕಾರ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡದಿರುವುದು ನಮ್ಮ ಗಮನಕ್ಕೆ ಬಂದಿದೆ. ಕುರಿತು ನಿಮಗೆ ಮೌಖಿಕವಾಗಿಯೂ ನೋಟೀಸು ಮೂಲಕವಾಗಿಯೂ ತಿಳಿಸಿರುತ್ತೇವೆ. ಸಾಲಖಾತೆಯನ್ನು ರೆಗ್ಯುಲರ್ಆಗಿ ಇಡುವ ಅವಶ್ಯಕತೆ ನಿಮಗೆ ತಿಳಿದೇ ಇದೆ, ಇದರಿಂದ ನಿಮಗೆ ಹೆಚ್ಚಿನ ಸಾಲ ಸವಲತ್ತುಗಳನ್ನು ನೀಡಲು ಬೇಂಕಿಗೆ ಅನುಕೂಲವಾಗುತ್ತದೆ. ಆದರೆ ನಮ್ಮ ಕಾಲ ಕಾಲದ ವಿನಂತಿಗಳ ಬಳಿಕವೂ ನೀವು ಕಂತುಗಳ ಮರುಪಾವತಿಯನ್ನು ಮಾಡುವರೆ ವಿಫಲರಾಗಿರುತ್ತೀರಿ. ತತ್ಕಾರಣ ನಿಮ್ಮ ಸಾಲದ ಕಟ್ಟುಬಾಕಿ ಅಧಿಕವಾಗಿದ್ದು ಸಾಲ ಸುಸ್ತಿಯಾಗಿದೆ. ಇದು ಎಷ್ಟುಮಾತ್ರಕ್ಕೂ ಬೇಂಕಿಗೆ ಸಮ್ಮತವಿಲ್ಲ. ನಿಮ್ಮ ಸಾಲದಲ್ಲಿ ಹೆಚ್ಚುತ್ತಿರುವ ಸುಸ್ತಿಬಾಕಿಯ ಕುರಿತು ನಮ್ಮ ಮೇಲಧಿಕಾರಿಗಳಿಂದ ತೀವ್ರ ಆಕ್ಷೇಪಗಳು ಬಂದಿರುತ್ತವೆ.

ಪ್ರಯುಕ್ತ ನೋಟೀಸು ತಲುಪಿದ ಏಳು ದಿನಗಳ ಒಳಗೆ ಮೇಲೆ ತಿಳಿಸಿರುವಂತೆ ನಿಮ್ಮ ಸಾಲದಲ್ಲಿ ಬಾಕಿಯಾಗಿರುವ ಕಂತಿನ ಬಾಬ್ತು ರೂ.XXXXX ಗಳನ್ನು ಪಾವತಿ ಮಾಡಿ ರಶೀದಿ ಪಡೆಯಿರಿ. ಸಾಲಖಾತೆಯನ್ನು ಸುಸ್ಥಿತಿಗೆ ತರಬೇಕೆಂದು ವಿನಂತಿಸಿ ಕೊಳ್ಳಲಾಗಿದೆ. ಸೂಕ್ತ ವಸೂಲಿ ಕಾರ್ಯಕ್ರಮಗಳನ್ನು ಜರಗಿಸುವರೆ ನಮಗೆ ಆದೇಶ ಬಂದಿರುತ್ತದೆ. ಕಠಿ ವಸೂಲಿ ಪೃಕ್ರಿಯೆಗಳಿಗೆ ನೀವು ಎಡೆಕೊಡದೆ ಬಾಕಿಯಿರುವ ಮೊತ್ತವನ್ನು ಪಾವತಿಸಿರಿ.

ಸಾಲ ಮರುಪಾವತಿಯ ಕುರಿತು ಬೇಂಕಿಗೆ ಬಂದು ಮೆನೆಜರರೊಡನೆ ಖುದ್ದು ವ್ಯವಹರಿಸುವರೆ ಮೂಲಕ ಕೇಳಿಕೊಳ್ಳುತ್ತೇವೆ.

ಧನ್ಯವಾದಗಳು,

ಇಂತಿ ನಿಮ್ಮ ವಿಶ್ವಾಸಿ

 

ಶಾಖಾ ಪ್ರಬಂಧಕರು.

ಮೇಲಿನ ಒಕ್ಕಣೆಯಿರುವ ನೋಟೀಸನ್ನು ಒಂದು ಇಡೀ ದಿನ ಒದ್ದಾಡಿ ತಲೆ ಕೆರೆದು ತುರಿಸಿಕೊಂಡು ಒಂದ್ಹತ್ತು ಪತ್ರಗಳನ್ನು ಹರಿದು ತಯಾರಿಸಿದೆ. ಏನು ಕಾರಣ!!? ಕೃಷಿಕರು ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ ಕಳಿಸಿದ ಸಾಲ ನೋಟೀಸುಗಳನ್ನು ಕೇರ್ಮಾಡುತ್ತಾನೇ ಇರಲಿಲ್ಲ. ಹಾಗಾಗಿ ಕನ್ನಡದ ಪ್ರಿ ಪ್ರಿಂಟೆಡ್ ನೋಟೀಸಿನಲ್ಲಿ ವಿವರಗಳನ್ನು ಬರೆದು ಹೆಚ್ಚುವರಿಯಾಗಿ  ಒಕ್ಕಣೆ ಬರೆದು ಸಹಿಗಾಗಿ ಮೆನೆಜರಿಗೆ ಕಳಿಸಿದೆ. ''ಇದು ಎಂಥ ಗೀತೋಪದೇಶ ಬರೆದಿದ್ದಿ ಮಹರಾಯ! ನಿನ್ನ ಸಂಸ್ಕೃತ ನನಗೇ ಅರ್ಥ ಆಗಲು ಹತ್ತು ನಿಮಿಷ ತಗಲಿತು, ಇನ್ನು ಹಳ್ಳಿಯವರು ಓದಲಿಕ್ಕುಂಟಾ? ” ಮೆನೆಜರು ಚಿಕ್ಕದಾಗಿ ಪರಿಹಾಸ್ಯ ಮಾಡಿದರು.

''ನನಗೆ ಇಷ್ಟು ಬರೆಯಲು ಒಂದು ದಿನ ಇಡೀ ಆಗಿದೆ, ನೀವು ಕುಷಾಲು ಮಾಡ್ತೀರಲ್ಲ!” ನಾನೂ ಸಣ್ಣದಾಗಿ ಆಕ್ಷೇಪಿಸಿದೆ.

''ನಿನ್ನ ಡೈಲಾಗು ಮಾತ್ರ ಭಾರೀ ಚಂದ ಉಂಟು, ನೆಕ್ಷ್ಟ್ ನೋಟೀಸು ಮಾತ್ರ ಸ್ವಲ್ಪ ಗರಮ್ ಇರಬೇಕು ನೋಡು. ಓದಿದ ಕೂಡಲೇ ಚುರುಕ್ ಆಗಬೇಕು, ಬೇಂಕು ಸಾಲ ಅಂದ್ರೆ ಕಾಲಕಸ ಆಗಿದೆ ಜನರಿಗೆ! ಸರಕಾರೀ ಬೇಂಕು ತಾನೇ! ಏನು ಮಾಡಿದರೂ ನಡೀತದೆ ಅಂತ ತಿಳ್ಕೊಂಡಿದ್ದಾರೆ! ಪಡಕೊಂಡ ಲೋನು ಪ್ರಾಂಪ್ಟ್ ಆಗಿ ಕಟ್ಟಲಿಕ್ಕೇನು ಧಾಡಿ?.......” ಮೆನೆಜರರ ಮಾತು ಮುಂದುವರೆಯಿತು, ನಾನು ನನ್ನ ಕೆಲಸದಲ್ಲಿ ಮಗ್ನನಾದೆ.

ಮುಂದಿನ ದಿನಗಳಲ್ಲಿ ಲೋನಿನ ನೋಟೀಸುಗಳಲ್ಲಿ ತೆರನ ಸಂದರ್ಭಾನುಸಾರ ಒಕ್ಕಣೆಗಳನ್ನು ಹಾಕಿ ಪತ್ರ ರವಾನೆ ಮಾಡುವುದು ಒಂದು ಅಭ್ಯಾಸವೇ ಆಯಿತು. ತೀರಾ ಕಟ್ಟುಬಾಕಿಯಾದ ಪಾರ್ಟಿಗಳಿಗೆ ಸಭ್ಯತೆಯ ಪರಿಮಿತಿಯಲ್ಲೇ ಖಾರವಾದ ಡೈಲಾಗುಗಳನ್ನು ಸೇರಿಸಿ ನೋಟೀಸುಗಳನ್ನು ಕಳಿಸುತ್ತಿದ್ದೆ.

ಅಂತಹ ಒಂದು ವಸೂಲಿ ಪತ್ರ ಒಬ್ಬರಿಗೆ ಹೋಯಿತು. ಪತ್ರ ಹಿಡಿದುಕೊಂಡು ಜನ ಬೇಂಕಿಗೆ ಸ್ವಲ್ಪ ಜಾಸ್ತಿಯೇ ಗರಮ್ಮಾಗಿ ಬಂದರು. ನೋಡಿದರೆ ನನ್ನ ಕ್ಲಾಸುಮೇಟು! ಮತ್ತು ಖಾಸಾ ದೋಸ್ತು! ಮೆನೆಜರು ಸೀದಾ ನನ್ನ ಬಳಿ ಕಳಿಸಿದರು.

''ಇದು ಏನಂತ ಬರೆದಿದ್ದೀ ಮಹರಾಯ! ’ಬಹಳ ಉದ್ದ ಎಳೆದರೆ ಹೇಗೆ ವಸೂಲು ಮಾಡಬೇಕೆಂದು ನಮಗೂ ಗೊತ್ತಿದೆ......’ ಇದರ ಅರ್ಥ ಸ್ವಲ್ಪ ಬಿಡಿಸಿ ಹೇಳು ನೋಡುವಾ!?” ಆಸಾಮಿ ರಾಂಗ್ ಆದರು.

ಅವರನ್ನು ಸಮಾಧಾನ ಪಡಿಸಿ ವಾಪಸು ಕಳುಹಿಸಬೇಕಾದರೆ ಇದ್ದ ಬುದ್ಧಿಯೆಲ್ಲ ಖರ್ಚಾಯಿತು..!

ಒಂದು ಲಾಭವೆಂದರೆ ಸಾಲದ ಕಂತುಗಳೆಲ್ಲ ಪಾವತಿ ಮಾಡಿ ರೆಗ್ಯುಲರ್ಮಾಡಿ ಮುಂದಿನ ಪೇಮೆಂಟುಗಳನ್ನೂ ಕ್ಲಪ್ತ ಸಮಯದಲ್ಲಿ ಕಟ್ತೇನೆ ಎಂದು ವಾಗ್ದಾನ ಬರೆದು ಕೊಟ್ಟು ಹೋದರು.

000O000

ಒಂದು ಹಳ್ಳಿ ಊರಲ್ಲಿ ಅಡ್ವಾನ್ಸಸ್ ಸೆಕ್ಷನ್ ನೋಡಿಕೊಳ್ಳುತ್ತಿದ್ದೆ. ಸಾಲದ ನೋಟೀಸುಗಳನ್ನೆಲ್ಲ ಇಂಗ್ಲೀಷು ಫೊರ್ಮೆಟಿನಲ್ಲೇ ಕಳಿಸುತ್ತಿದ್ದುದನ್ನು ಗಮನಿಸಿದೆ. ”ನೋಡಿ ಇವರೇ, ಕನ್ನಡ ಭಾಷೆಯ ನೋಟೀಸುಗಳು ರಾಶಿ ರಾಶಿ ಬಿದ್ದಿವೆಯಲ್ಲ, ಅವುಗಳಲ್ಲೇ ಕಳಿದರಾಗದೇ?” ಒಂದು ಸಜೆಷನ್ ಕೊಟ್ಟೆ.

''ಅದೊಂದು ಮಾತು ಕೇಳಬೇಡಿ ಮಾರ್ರೇ! ಅದರದು ದೊಡ್ಡ ಕತೆ ಉಂಟು!"

''ಹಾಂ! ಏನದು ಕತೆ?”

''ನಾನು ಸಹ ನಿಮ್ಮ ಹಾಗೆ ಕನ್ನಡಪ್ರಿಯ, ಕನ್ನಡ ನೋಟೀಸುಗಳನ್ನು ಹೆಡ್ಡಾಫೀಸು ಸ್ಟೇಷನರಿಯಿಂದ ಸ್ಪೆಷಲ್ಲಾಗಿ ತರಿಸಿಕೊಂಡು ಕಟ್ಟುಬಾಕಿಯಿದ್ದವರಿಗೆ ಕಳುಹಿಸಲು ಸುರು ಮಾಡಿದೆ ಸರ್‍, ಪ್ರಿಂಟೆಡ್ ನೋಟೀಸಿನಲ್ಲಿ ಬೇಕಾದ ಡೈಲಾಗುಗಳಿವೆ, ಆದರೂ ನನ್ನದೂ ಸ್ವಲ್ಪ ಇರಲಿ ಅಂತ ಕೆಲವು ಕೈಬರಹ ಒಕ್ಕಣೆಗಳನ್ನು ಸೇರಿಸುತ್ತಿದ್ದೆ. ನಿಮ್ಮಷ್ಟು ಸೊಫಿಸ್ಟಿಕೇಟೆಡ್ ಡೈಲಾಗುಗಳಿಲ್ಲ, ಆದ್ರೂ ನನ್ನ ಮಟ್ಟಿಗೆ ಬರೀತಿದ್ದೆ. ಒಬ್ಬರಿಗೆ ಒಮ್ಮೆ ಕಾಗದ ಹೋಯ್ತು, ನೀವು ಬರೆದಂತೆಕಠಿಣ ವಸೂಲಿ ಕಾರ್ಯಕ್ರಮ ನಡೆಸುವರೆ ನಮಗೆ ಅನಿವಾರ್ಯವಾಗುತ್ತದೆ, ನಂತರ ಪರಿತಪಿಸಬೇಡಿ.’ ಅಂತೆಲ್ಲ ಬರೆದು ಅಡ್ರೆಸ್ಸು ಬರೆದು ಪೋಸ್ಟಲ್ಲಿ ಕಳಿಸಿದೆ:-

xxxxxx ಭಂಡಾರಿ 

ಹಜಾಮ

ಭಾರತ್ ಸಲೂನ್

ಮುಖ್ಯ ರಸ್ತೆ

xxx ಅಂಚೆ,

xxxಜಿಲ್ಲೆ

''ಕ್ಷೌರಿಕರು ಅಂತ ಬರೀಬೇಕಿತ್ತಲ್ಲಾ ಇವರೇ...” ಮಧ್ಯೆ ಬಾಯಿ ಹಾಕಿದೆ.

''ಹೌದು ಮಾರಾಯರೇ, ಅದು ಕಡೇಗೆ ಗೊತ್ತಾಯ್ತು, ಮಿಸ್ಟೇಕು ಬರೆದಿದೇನೆ ಅಂತ. ಪೋಸ್ಟಾಫೀಸಿಗೆ ಓಡಿ ಕೇಳಿದರೆನಮ್ಮ ಸೀಲು ಬಿದ್ದಾಯ್ತು ವಾಪಸುಕೊಡಲಾಗೂದಿಲ್ಲಅಂತ ರಿಫ್ಯೂಸ್ ಮಾಡಿದರು.”

''ಬಹಳ ಇಂಟರೆಸ್ಟಿಂಗ್ ಉಂಟು, ಮುಂದರಿಸಿ.”

''ನನಗೆ ಗೊತ್ತಿತ್ತು, ಅಂವ ನನ್ನನ್ನು ಕೊಂದೇ ಬಿಡ್ತಾನೆ ಅಂತ. ಆದದ್ದೂ ಹಾಗೆಯೇ, ನಮ್ಮ ನೋಟೀಸು ಹಿಡಕೊಂಡು ಅಂವ ಬೇಂಕಿಗೆ ಬಂದ ರಾಫು ನೋಡಬೇಕಿತ್ತು, ನಾನು ಹೆದರಿ ಮಹರಾಯರೇ, ಬಾತ್ರೂಮಿಗೆ ಹೋದಂವ ಅಲ್ಲೇ ಗಡಗಡ ನಡುಗುತ್ತಾ ನಿಂತುಬಿಟ್ಟೆ!”

''ಅದು ಸರಿ, ಅವನ ವಿಷಯ ಹೇಳಿ.”

'' ಜನ ಹೋಗಲಿಕ್ಕೆ ತಯಾರಿಲ್ಲ, ಸಿಟ್ಟಿನಿಂದ ಕುಣೀತಾ ಉಂಟು ಪ್ರಾಣಿ! ’ಎಲ್ಲಿ ಹೋದ ಭಟ್ಟ! ಅವನದ್ದು ಪೂರಾ ಚೌರ ಮಾಡಿಯೇ ಹೋಗೂದು ನಾನು ಇವತ್ತು! ಹಜಾಮ ಅಂತೆ ಹಜಾಮ! ನನಗೆ ಫಾಶಿ ಆದರೂ ಚಿಂತೆಯಿಲ್ಲ, ಇವತ್ತು ಒಂದು ಮರ್ಡರ್ಆಗಲಿಕ್ಕುಂಟು ಬೇಂಕಿನಲ್ಲಿ..!’ ಅವನದ್ದು ಬೊಬ್ಬೆಯೇ ಬೊಬ್ಬೆ. ನನಗೆ ಬಾತ್ರೂಮಲ್ಲಿ ಕಣ್ಣುಕತ್ತಲೆ ಬಂತು ಸರ್‍. ಮೆನೆಜರು ಮಾತ್ರ ದಿವಸ ನನ್ನನ್ನು ಬಚಾವು ಮಾಡಿದ್ರು ಸರ್‍. ಅವನ ರೋಷಾವೇಶ ಮುಗಿಯುವ ವರೆಗೆ ಶಾಂತವಾಗಿದ್ದು ನಂತರ ಅವನಿಗೆ ಸಮಾಧಾನ ಮಾಡಿಸಿ ಕಳಿಸಿದರು.”

''ನೀವು ಬಾತ್ರೂಮಲ್ಲೇ..!”

''ಹೌದು ಸರ್‍, ಸುಮಾರು ಒಂದು ಘಂಟೆಗೂ ಮೇಲೆ ಹೊರಗೆ ಬ್ರಾಂಚಿನಲ್ಲಿ ಅವನ ನಾಟಕ ಮತ್ತು ಬೊಬ್ಬೆ, ಇಲ್ಲಿ ಅಷ್ಟೂ ಹೊತ್ತು ಕೂತ ನನಗೆ ಕಾಲು ಜೋಮು ಹಿಡಿದು ಬಾತ್ರೂಮಿಂದ ಏಳಲೂ ಆಗದೆ ಅದೊದು ಅವಸ್ಥೆ ಸರ್‍! ಆದರೆ ಒಂದು ಉಪಯೋಗ ಆಯ್ತು ನೋಡಿ!  ನನ್ನ ಬಾಕಿ ಎಷ್ಟು ಉಂಟಯ್ಯಾ ಬೊಗಳಿ’ ಅಂತ ಪೂರ್ತಿ ಸಾಲ ಬಡ್ಡಿ ಸಹಿತ ಬಿಸಾಕಿ ಕ್ಲೋಸ್ ಮಾಡಿ ಹೋದ!”

''ಮತ್ತೆ ನಿಮ್ಮ ಕ್ಷೌರ!? ಊರಲ್ಲಿ ಅವನೊಬ್ಬನೇ ಹಜಾಮ ಅಲ್ಲಲ್ಲ ಕ್ಷೌರಿಕ ಅಲ್ವೇ?”

''ನಾನು ಮೂರು ದಿನ ರಜೆ ಹಾಕಿ ಮನೇಲೇ ಗುಮ್ಮನಂತೆ ಕೂತಿದ್ದೆ, ನಾಲ್ಕನೇ ದಿನ ಅವನ ಸಲೂನಿಗೆ ಹೋಗಿ ಹಾಗೂ ಹೀಗೂ ಮಾತಾಡಿ ಸಮಾಧಾನ ಮಾಡಿದೆ ಅನ್ನಿ.”

''ಕನ್ನಡ ನೋಟೀಸು ಕಳಿಸುವ ಪದ್ಧತಿ ಅಂದಿಗೆ ಕೊನೆಯಾಯಿತು.’’

 

 

 

 

 

 

 

Wednesday, October 25, 2023

ಯಕ್ಷ ಪ್ರಶ್ನೆ ಸಂವಾದ

 

ಯಕ್ಷಪ್ರಶ್ನೆ ಇದು ಒಂದು ಸಂವಾದ. ಜೀವನದ ಹೆಚ್ಚಿನ ತತ್ವಗಳು ಇದರಲ್ಲಿ ಸಮಾಹಿತವಾಗಿವೆ. ಆದರೂ ನಾವು ಅನೇಕ ವಿಚಾರಗಳನ್ನು ಆಯಾ ಕಾಲಮಾನ ಪರಿಪೇಕ್ಷಗಳಲ್ಲಿ ಗ್ರಹಿಸಬೇಕು. ಈ ಪ್ರಶ್ನೋತ್ತರದ ಕಾಲವು ಸುಮಾರು ಐದು ಸಾವಿರ ವರ್ಷಗಳ ಹಿಂದಿನದು. ಆಗಿನ ಭಾರತೀಯ ಜ್ಞಾನದ ಗಹನತೆ ಎಷ್ಟಿತ್ತು ಎಂದು ನಾವು ಈಗಿನ ದಿನಗಳಲ್ಲಿ ನಮ್ಮ ಪರಿಮಿತ! ತಿಳುವಳಿಕೆಯ ಆಧಾರದಲ್ಲಿ ವಿಶ್ಲೇಷಿಸಲು ಹೋದರೆ ಅದು ಅನುಚಿತವಾಗುತ್ತದೆಯೋ ಏನೋ! ಈಗಿನ ಜ್ಞಾನ, ವಿಜ್ಞಾನ, ನಂಬಿಕೆಗಳು, ಜೀವನಕ್ರಮ ಇತ್ಯಾದಿ ಅಂದಿನ ಕಾಲದ ಜ್ಞಾನ ವಿಜ್ಞಾನ ನಂಬಿಕೆಗಳಿಗಿಂತ ಶ್ರೇಷ್ಠವೋ ಕನಿಷ್ಠವೋ ಎಂದು ಹೇಗೆ ತುಲನೆ ಮಾಡುವುದು!?

ಗೀತೆಯಲ್ಲಿ ಭಗವಂತನು ಅರ್ಜುನನಿಗೆ ಬೋಧಿಸಿದಂತೆ ನರ ನಾರಾಯಣರಿಗೆ ಲೆಕ್ಕವಿಲ್ಲದಷ್ಟು ಜನ್ಮ, ಜೀವನ ಹಾಗೂ ಅವಸಾನಗಳಾಗಿವೆ, ಇನ್ನೂ ಅಸಂಖ್ಯಾತ ಜನನ ಮರಣಗಳ ಚಕ್ರಗಳು ಆಗಲಿವೆ. ನರನಾದ ಅರ್ಜುನನಿಗೆ (ಜೀವ ಮಾತ್ರನಿಗೆ) ಈ ಹಿಂದೆ ಆಗಿರುವ ಮತ್ತು ಮುಂದೆ ಆಗಲಿರುವ ಜೀವನಚಕ್ರಗಳ ಅನುಭವಗಳ ನೆನಪು ಇಲ್ಲ. ಗೀತೆಯ ಸಾರ ಬಲು ಶ್ರೇಷ್ಠವಾದುದು, ವೇದಗಳು ಬ್ರಹ್ಮನ ಮುಖದಿಂದ ಆದೇಶಿಸಲ್ಪಟ್ಟವು ಎಂಬ ವಿಚಾರವಿದೆ. ಯುಗಯುಗಾದಿಗಳಿಂದ ಈ ಜ್ಞಾನ ಪ್ರಸರಿಸಲ್ಪಡುತ್ತಿದೆ, ಇದಕ್ಕೆ ಕಾಲಕಾಲಕ್ಕೆ ಋಷಿ, ಮುನಿ ಮತ್ತು ವಿದ್ವತ್ ಜನರಿಂದ ಉಕ್ತಿಗಳು, ವೈದ್ಯಕೀಯ, ಜ್ಞಾನ ವಿಜ್ಞಾನಗಳ ಭಂಡಾರ ಸೇರುತ್ತಲೇ ಇದೆ. ವೇದಗಳ ಉಗಮ ಯಾವಾಗ ಸುರುವಾಯಿತು ಎಂಬುದರ ಕುರಿತು ಖಚಿತತೆ ಇಲ್ಲದ ಕಾರಣ ಈ ನಂಬಿಕೆ. ಒಬ್ಬ ಮಹಾತ್ಮರ ಪ್ರಕಾರ ಭರತಖಂಡದಲ್ಲಿ ಸುಮಾರು ಹದಿನೈದು ಸಾವಿರ ವರ್ಷಗಳ ಹಿಂದಿನಿಂದ  ಕಾಲಕಾಲಕ್ಕೆ ಇಂತಹ ಮಹತ್ತರವಾದ ಅನೇಕ ಸದ್ವಿಚಾರಗಳು ನಮ್ಮ ಸನಾತನ, ಪೌರಾಣಿಕ, ಮಧ್ಯಯುಗದ ಸಮಯದಲ್ಲಿ ಹೇಳಲ್ಪಟ್ಟಿವೆ. ಬಹುಮಟ್ಟಿನ ವಿಚಾರಗಳು ಸಾರ್ವಕಾಲಿಕವಾದವು.

ಈ ವಿಚಾರಗಳ ಉಲ್ಲೇಖ ಏಕಿವೆ? ಮಾನವನು ಸಾಮಾಜಿಕ ಜೀವಿ. ಸಮಾಜದಲ್ಲಿ ಹೇಗೆ ಯಾವ ರೀತಿಯಲ್ಲಿ ಜೀವಿಸಬೇಕು, ಬದುಕಬೇಕು. ಜಗತ್ತಿನಲ್ಲಿ ಹುಟ್ಟಿರುವ ಸಕಲ ಪಶುಪಕ್ಷಿಗಳು ನಿಸರ್ಗವು ವಿಧಿಸಿದ ನಿಯಮಗಳಿಗನುಗುಣವಾಗಿಯೇ ಬದುಕ ಬೇಕು. ಪ್ರಕೃತಿಯು ಹಾಕಿದ ಗೆರೆಯನ್ನು ಕೊಂಚವೂ ಮೀರಲಾಗದು. ಆದರೆ ಮಾನವನಿಗೆ ಈ ನಿಯಮದ ಕಟ್ಟುಪಾಡು ಇಲ್ಲ. ಮನುಷ್ಯನು ಮಾತನಾಡಬಲ್ಲ, ಯೋಚಿಸಬಲ್ಲ ಮತ್ತು ತಲೆಯೆತ್ತಿ ನೇರವಾಗಿ ನಡೆಯಬಲ್ಲ. ಪ್ರಕೃತಿಯು ಮಾನವನ ಬಗ್ಗೆ ಬಹಳವೇ ಉದಾರವಾಗಿದೆ. ಆದ್ದರಿಂದ ನಮಗೆ ಸಮಾಜಮುಖಿಯಾಗಿ ಉನ್ನತ ವಿಚಾರಪೂರ್ವಕವಾಗಿ ಜೀವಿಸುವ ಬಾಧ್ಯತೆಯಿದೆ. ಪ್ರಕೃತಿ, ಪರಿಸರ, ಇತರೇ ಪ್ರಾಣಿವರ್ಗಗಳ ಏಳಿಗೆಗೆ ಪೂರಕವಾಗಿ ಬಾಳುವ ಜವಾಬುದಾರಿ ನಮ್ಮದಾಗಿದೆ. ಈ ವ್ಯವಸ್ಥೆ ಥಟ್ಟೆಂದು ಬರುವುದಿಲ್ಲ, ಅದೊಂದು ಜೀವನ ಕ್ರಮವಾಗಿ ಬರಬೇಕು. ನಮ್ಮ ಧರ್ಮವು ಒಂದು ಉನ್ನತ ಮಟ್ಟದ ಡೆಮೊಕ್ರೆಟಿಕ್ ವ್ಯವಸ್ಥೆಯನ್ನು ಹೊಂದಿದೆ. ನಮ್ಮ ಸನಾತನ ಧರ್ಮದಲ್ಲಿ ಏನೇ ನಿಯಮಗಳಿದ್ದರೂ ಇದರಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ, ತಿದ್ದುಪಡಿಗಳಿಗೆ ಅವಕಾಶಗಳಿವೆ.

ಮಹಾಭಾರತದ ಯಕ್ಷಪ್ರಶ್ನೆಯಲ್ಲಿ ಧರ್ಮರಾಯನು ಅಂದಿನ ಕಾಲದಲ್ಲಿ ಮಾನ್ಯತೆ ಹೊಂದಿದ, ಅನೇಕ ಪ್ರಶ್ನೆಗಳಿಗೆ ಸಮರ್ಥ ವಾಗಿ ಸಮಾಧಾನದಿಂದ ಉತ್ತರ ನೀಡಿದ್ದಾನೆ. ಇದರಲ್ಲಿ ಬಹುಪಾಲು ವಿಚಾರಗಳು ಸಾರ್ವಕಾಲಿಕವಾಗಿವೆ. ಧರ್ಮರಾಯನು ಒಬ್ಬ ಸಮರ್ಥ ರಾಜನಾಗಿದ್ದು ಭೀಷ್ಮನ ಬಳಿ ರಾಜಧರ್ಮ, ಆಡಳಿತ, ಪ್ರಜಾಪಾಲನೆ, ಕ್ಷತ್ರಿಯ ಧರ್ಮ ಮುಂತಾದವುಗಳ ಬಗ್ಗೆ ಪರಿಪೂರ್ಣ ಶಿಕ್ಷಣವನ್ನು ಪಡೆದಿದ್ದ. ಒಂದು ತೆರದಲ್ಲಿ ಈ ಸಂವಾದವು ಸಮಾಜಕ್ಕೆ ಪಾಠವೆಂದೂ ಹೇಳಬಹುದು. ನಮ್ಮ ಪೌರಾಣಿಕ ಕಥಾನಕಗಳಲ್ಲಿ, ಭಾಗವತದಲ್ಲಿ, ಗೀತೆಯಲ್ಲಿ ಮತ್ತಿತರೇ ಸೂಕ್ತಿ ಸುಭಾಷಿತಗಳಲ್ಲಿ ಇಂತಹ ಬಹಳ ಉದಾಹರಣೆ ಗಳನ್ನು ನಾವು ಕಾಣಬಹುದು. ಆದರೂ ಈ ಪ್ರಸಂಗಗಳಿಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಪ್ರಕೃತಿಯು ಚಲನಶೀಲ, ಹಾಗಾಗಿ ಜೀವನಶೈಲಿ, ವಿಚಾರಧಾರೆ, ಮನೋವ್ಯಾಪಾರ ಮುಂತಾದವುಗಳೂ ಬದಲಾವಣೆಗೆ, ನವ್ಯತನಕ್ಕೆ ಒಳಪಡುವುದು ಸ್ವಾಭಾವಿಕ. ಅನೇಕ ಮಾನ್ಯತೆಗಳು ಕಾಲಧರ್ಮಕ್ಕನುಗುಣವಾಗಿ ಬದಲಾಗುವುದು ಸಹಜ. ಹಿಂದಿನ ಧಾರಣೆಗಳು ಕಾನೂನುಗಳು ಇಂದು ಅಪ್ರಸ್ತುತ ಎನಿಸಬಹುದು. ನಮ್ಮ ಧರ್ಮದಲ್ಲಿ ಪರಿಷ್ಕರಣೆಗಳಿಗೆ ಅವಕಾಶವಿದೆ. ಐದು ಸಾವಿರ ವರ್ಷಗಳ ಹಿಂದಿನ ಆಲೋಚನಾಕ್ರಮ, ಆದೇಶಗಳು ಇಂದಿನ ದಿನಗಳ ವ್ಯವಹಾರಗಳಿಗೆ ಸೂಕ್ತವೆನಿಸುವುದೇ!?

ಯೋಚಿಸಬೇಕಾದ ವಿಚಾರ.

ಉಳಿದಂತೆ ಧರ್ಮರಾಯನು ಯಕ್ಷನ ಎಲ್ಲಾ ಪ್ರಶ್ನೆಗಳಿಗೆ ಸಮರ್ಥವಾಗಿಯೇ ಸಮಾಧಾನ ನೀಡಿರುತ್ತಾನೆ.