Thursday, November 17, 2022

ಗೆಳೆತನದ ಮಾಧುರ್ಯ

ನಮ್ಮ ಇಷ್ಟದೇವರು ಹರಿಖಂಡಿಗೆ ವೆಂಕಟರಮಣ ದೇವರು. ಪ್ರತಿವರುಷ ದೇವಸ್ಥಾನದಲ್ಲಿ ಕಟ್ಟುಕಟ್ಟಳೆಯಂತೆ ಅನೇಕ ಪೂಜಾ ವಿಧಿಗಳು ನಡೆಯುತ್ತವೆ. ಸರಿಸುಮಾರು ಸಾವಿರದಾ ಒಂಭೈನೂರಾ ಮೂವತ್ತರ ದಶಕದ ಸಮಯದಲ್ಲಿ ಹರಿಖಂಡಿಗೆಯ ಆಸುಪಾಸಿನ ರೈತಾಪಿ ಜನರು - ಕಾಪಾಡಿ ಹಾಗೂ ಸಾಣೇಕಲ್ಲು ಕುಟುಂಬದವರು - ಅನೇಕ ಕಾರಣಗಳಿಂದಾಗಿ ಮುಖ್ಯವಾಗಿ ನೀಗಲಾಗದ ಬಡತನದಿಂದಾಗಿ ಹೆಬ್ರಿ, ಹಿರಿಯಡಕ, ಉಡುಪಿ ಹಾಗೂ ಹೈದರಾಬಾದು ಮುಂತಾದ ಊರು ಶಹರುಗಳಿಗೆ ವಲಸೆ ಹೋದರು. ಹಾಗೆ ಹೋಗುವಾಗ ಹರಿಖಂಡಿಗೆ ವೆಂಕಟರಮಣನ ಪಾದಗಳಿಗೆ ಬಿದ್ದು "ದೇವಾ ಹೇಗಾದರೂ ಪಾರುಮಾಡು, ನಿನ್ನನ್ನೇ ನಂಬಿದ್ದೇವೆ, ನೀರಲ್ಲಾದರೂ ಹಾಕು ಹಾಲಲ್ಲಾದರೂ ಹಾಕು." ಎಂದು ಬೇಡಿಕೊಂಡು ಹೊರಡುತ್ತಿದ್ದರು. ಹರಿಖಂಡಿಗೆ ದೇವರು ಕರುಣಾಮಯಿ, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಪರಮಾತ್ಮ. ವಲಸೆ ಹೋದವರು ಧೃಢವಾದ ನಂಬಿಕೆಯಿಂದ ತಮ್ಮ ತಮ್ಮ ಉದ್ಯೋಗವನ್ನು ಹುಡುಕಿ ಊರೂರುಗಳನ್ನು ಸೇರಿಕೊಂಡು ಬಾಳು ನಡೆಸಿಕೊಂಡು ಬಂದಿದ್ದಾರೆ. ಎಲ್ಲಾ ಭಕುತರ ನಂಬಿಕೆಯನ್ನು ದೇವರು ಸಕಾರಾತ್ಮಕವಾಗಿಯೇ ಆಶೀರ್ವದಿಸಿದ್ದರಿಂದಲೇ ಇಂದು ಎಲ್ಲರೂ ಅನುಕೂಲವಂತರಾಗಿ ಸುಖೀ ಜೀವನವನ್ನು ಬದುಕುತ್ತಿದ್ದಾರೆ.

ಚಿಕ್ಕವರಿರುವಾಗ ಅಂದರೆ ಅರುವತ್ತರ ದಶಕದ ಸಮಯದಲ್ಲಿ ಆಗಾಗ ತಂದೆಯವರು ಹರಿಖಂಡಿಗೆಗೆಂದು ನಮ್ಮನ್ನು ಕರಕೊಂಡು ಹೋಗುತ್ತಿದ್ದರು. ಮೊದಲ ಹಂತ ಹೆಬ್ರಿಯಿಂದ ಪೆರ್ಡೂರು. ಬಸ್ಸು ಇಳಿದ ನಂತರ ಕಿಣಿಯರ ಹೊಟೆಲಿನಲ್ಲಿ ಚಹ. ಹಿರಿಯ ಕಿಣಿಯರು ಗಲ್ಲಾದಲ್ಲಿ ಇದ್ದರೆ ಮಗ ಚಾ ಕಾಫಿ ತಯಾರಿಯಲ್ಲಿರುತ್ತಿದ್ದರು. ತಮ್ಮ ರಂಗಪ್ಪ ಕಿಣಿಯರು ದೋಸೆ ಕಾವಲಿಯ ಬಳಿ ದೋಸೆ ಹುಯ್ಯುತ್ತಾ ಇರುತ್ತಿದ್ದರು. ಇದೊಂದು ಪರ್ಮನೆಂಟ್ ವ್ಯವಸ್ಥೆಯಾಗಿತ್ತು. "ಯೋ ದೇವೂ ಯೋ, ದೇವಳಾ ವತ್ತಾಲವೇ, ಹೋ ಮ್ಹಾಲ್ಗಡೊ ಚಲ್ಲೊ ಕೀ?" ಪ್ರೀತಿಯ ಸ್ವಾಗತ ಹಾಗೂ ಬಿಸಿ ಬಿಸಿ ಚಾ ಸರಬರಾಜು. ಪ್ರತೀ ವರ್ಷ ಇದೇ ತಪ್ಪದ ಕಾರ್ಯಕ್ರಮ. ನಾಲ್ಕು ಸುಖ ಕಷ್ಟ ಮಾತುಗಳನ್ನು ಆಡಿ ಕಾಲ್ನಡಿಗೆಯಲ್ಲಿ ಮುಂದಿನ ಪಯಣ. ಸುಮಾರು ಐದು ಕಿ.ಮೀ ಪಯಣವು ಯಾವಾಗಲೂ ಉಲ್ಲಾಸಮಯವಾಗಿರುತ್ತಿತ್ತು. ಹರಿಖಂಡಿಗೆಯಲ್ಲಿ ಎಲ್ಲರೂ ಪರಿಚಿತರೇ. ಅಲ್ಲದೇ ಹಬ್ಬದ ವಾತಾವರಣ. ಆತ್ಮೀಯರಾದ ಕೇಶವಮಾಮನವರು ತಂದೆಯವರ ಅಂತರಂಗದ ಗೆಳೆಯರು. ಅವರ ಮಕ್ಕಳೂ ಸಹ ಉಲ್ಲಸಿತ ಮನದವರು. ನಾನೋ ಕೊಂಚ ದಾಕ್ಷಿಣ್ಯ ಪ್ರಕೃತಿಯ ಹುಡುಗ. ಆದರೆ ಕ್ಷಣಮಾತ್ರದೊಳಗೆ ಸಂಕೋಚದ ಪರದೆ ಹರಿದು ಸಂಭ್ರಮದ ವಾತಾವರಣವೇರುತ್ತಿತ್ತು.

ಹತ್ತೂವರೆಗೆ ಒಂದು ಬಿಸೀ ಚಹದ ಸಮಯ. ಕೇಶವಮಾಮನವರ ಅಣ್ಣ ನಾಗಪ್ಪಮಾಮನವರ ಹೊಟೆಲು ಅಲ್ಲೇ ಎದುರು. "ದೇವುಗತೀ ಹುನಃ ಕಸಲಾಸ್ಸ....  " ಎಂದು ಹೊಟೆಲಿಗೆ ನುಗ್ಗಿ ಕೂತರೆ ಅವರಿಂದ ಆತ್ಮೀಯ ಸ್ವಾಗತ "ಓಹೋ ಹೆಬ್ರಿ ತುಕೂನು ಸಾನ್ ದೇವು ಆಯಲಾ, ದೇವೂ ಗತಿ, ಯೋ ಬೈಸ, ದೇವೂ ಗತಿ. ಹುನಿ ಹುನೀ ಫೋಡಿ, ಆಂಬಡೋ ಆಸ್ಸ, ದೇವೂ ಗತಿ, ಹೋ ತುಗೆಲೋ ಮ್ಹಾಲಗಡೊ ಚಲ್ಲೊ ಕೀ, ದೇವೂ ಗತಿ, ತುಕ್ಕ ಕಸನೆ ಜಾಯಿ ಬಾಬ್ಬಾ? ಘೇ ಆಂಬಡೋ ಖಾ ದೇವೂ ಗತಿ." ನಾಗಪ್ಪ ಮಾಮನ ಆದರದ ಮಾತುಗಳು.  "ಇವರು ಹೀಗೇಕೆ ಮಾತಾಡುತ್ತಾರೆ? ತಮಾಶೆ  ಏನಾದರೂ ಮಾಡುತ್ತಿಲ್ಲ ತಾನೆ?” ಮೊದಲ ಬಾರಿ ಸಣ್ಣ ಸಂಶಯ ಬಂತು.

ಅರುವತ್ತರ ದಶಕದಲ್ಲಿ ಆರ್ಥಿಕ ಸಂಕಷ್ಟದ ಬಾಧೆಯಿಂದ ಎಲ್ಲರೂ ಸಮಾನವಾಗಿ ಬಳಲುತ್ತಿದ್ದರು. ಬಡತನವೊಂದು ಸಾರ್ವತ್ರಿಕ ಸತ್ಯವಾಗಿತ್ತು. ಅವರ ಕಷ್ಟ ಇವರ ಬಳಿ ಹೇಳಿಕೊಂಡು ಸಮಾಧಾನ ಪಟ್ಟುಕೊಂಡರೆ ಇವರು ಮತ್ತೊಬ್ಬರ ಬಳಿ ತನ್ನ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳುತ್ತಿದ್ದರು. ನಾಗಪ್ಪಮಾಮನವರು ವೆಂಕಟರಮಣನ ಅನನ್ಯ ಭಕ್ತರು. ದೇವರ ಪಾದದ ಬಳಿಯೇ ಅವರ ವಾಸ ನಿವಾಸ. ಯಾವಾಗಲೂ " ದೇವಾ ತೂಂಚಿ ಗತಿ ’"  ಎಂದು ಆತನ ಧ್ಯಾನದಲ್ಲೇ ಇರುತ್ತಿದ್ದರು. ನಂತರದ ದಿನಗಳಲ್ಲಿ ದೇವಾ ನೀನೇ ಗತಿ ಎನ್ನುವ ಮಾತೊಂದು ಅವರ ಹವ್ಯಾಸವೇ ಆಗಿ ’"ದೇವೂ ಗತಿ "’ ಎಂಬುದು ಅವರ ಅಡ್ಡಹೆಸರೇ ಆಯಿತು. ಹುಡುಗುಬುದ್ದಿಯ ಕೆಲವರು ಇವರ ತಮಾಷೆ ಮಾಡುತ್ತಿದ್ದರೂ ಗಣನೆಗೆ ತಕ್ಕೊಳ್ಳುತ್ತಿರಲಿಲ್ಲ. ಹಿರಿಯರಾರೂ ಅವರ ಗೇಲಿ ಮಾಡುತ್ತಿರಲಿಲ್ಲ. ದೇವುಗತಿಮಾಮನವರು ಸೀದಾ ಸರಳ ಮನೋಭಾವದ ಸ್ನೇಹಪರ ಮನುಷ್ಯ. ಎಲ್ಲರ ಬಳಿ ದೋಸ್ತಿಯಿಂದಲೇ ಇರುತ್ತಿದ್ದು ತೃಪ್ತ ಜೀವನ ನಡೆಸುತ್ತಿದ್ದರು.

ಎಪ್ಪತ್ತರ ದಶಕದಲ್ಲಿ  ಮಣಿಪಾಲದಲ್ಲಿ ನನ್ನ ಉದ್ಯೋಗ, ಉಡುಪಿಯಲ್ಲಿ ವಾಸ. ನನ್ನ ಗೆಳೆಯ ರಾಮದಾಸ ಪೂರ್ಣಪ್ರಜ್ಙ ಕಾಲೇಜಲ್ಲಿ ಬಿ ಕಾಂ ಓದುವ ವಿದ್ಯಾರ್ಥಿ. ಸಂಜೆಯ ಹೊತ್ತು ವೆಂಕಟರಮಣ ದೇವಸ್ಥಾನಕ್ಕೆ ಹೋಗುತ್ತಿರಲು ಇವರ ಭೆಟ್ಟಿ  ಆಯಿತು. ಯಾವುದೋ ಕೆಲಸದ ನಿಮಿತ್ತ ಉಡುಪಿಗೆ ಬಂದಿದ್ದರು. "ವೈರೇ ತೂಂವ ಪನ್ನಿ ಪೂತು ನ್ಹಂವೇ?"

‘’ಹೌದು" ಇವನು ವಿನಯದಿಂದ ಉತ್ತರಿಸಿದ.

"ಹೌದಾ ಭಾಳ ಸಂತೋಷ, ದೇವೂಗತಿ, ಇಲ್ಲಿ ಏನು ಕಲೀತಾ ಇದ್ದೀ?”

‘’ಪೀ ಪೀ ಸಿ ಯಲ್ಲಿ ಬಿ ಕಾಮ್ ಡಿಗ್ರಿ ಓದುತ್ತ ಇದ್ದೇನೆ." ಅವರ ದೇವೂಗತಿ ಎಂಬ ವಿಶೇಷಣದಿಂದ ಇವನಿಗೆ ಕೊಂಚ ಇರಿಸುಮುರುಸಾಯಿತು.

‘’ಊಟ ತಿಂಡಿಗೇನು ಮಾಡಿಕೊಂಡಿದ್ದೀ.?"

‘’ಇಲ್ಲಿ ಒಬ್ಬರ ಮನೆಯಲ್ಲಿ ವ್ಯವಸ್ಥೆಯಾಗಿದೆ.”

‘’ಬಹಳ ಒಳ್ಳೇದಾಯಿತು, ದೇವೂಗತಿ, ಚೆನ್ನಾಗಿ ಓದಿ ತುಂಬಾ ಮಾರ್ಕು ತಕ್ಕೊಳ್ಳಬೇಕು, ಆಯಿತಾ, ನಿಮಗೆ ಒಳ್ಳೇದಾಗ್ಲಿ, ದೇವೂಗತಿ." ಅವರು ಮುಂದೆ ಹೊರಟರು.

‘’ಇದೆಂತ ಮಾರಾಯ! ಪ್ರತಿಯೊಂದಕ್ಕೂ ದೇವೂಗತಿ ದೇವೂಗತಿ ಅಂತಾರಲ್ಲಾ! ತಮಾಷೆ ಮಾಡೂದಕ್ಕೂ ಒಂದು ಸಮಯ ನಿಯಮ ಅಂತ ಇರಬೇಡವೇ? ದೇವೂಗತಿಯಂತೆ!” ರಾಮದಾಸನ ಅಸಮಾಧಾನ. ಮುಂದಿನ ದಿನಗಳಲ್ಲಿ ಸರಿಹೋಯಿತು.

------೦೦೦------

ಸಾವಿರದ ಒಂಭೈನೂರ ತೊಂಭತ್ತರ ಮೊದಲಾರ್ಧದಲ್ಲಿ ಹುಬ್ಬಳ್ಳಿಯಲ್ಲಿ ನಮ್ಮ ವಾಸ. ಸಿಲ್ವರ್ಪಾರ್ಕ್ ತೃಪ್ತಿ ಅಪಾರ್ಟ್ಮೆಂಟಲ್ಲಿ ಮನೆ. ಒಮ್ಮೆ ಅಕಸ್ಮಾತ್ತಾಗಿ ದೇವುಗತಿ ಮಾಮನ ಮಗ ಗುಣಾಕರ ಭೆಟ್ಟಿಯಾದರು. ಕೇಶವುಮಾಮು ಕೇಶವುಮಾಮು! ನೀವು ಸಿಕ್ಕಿದ್ದು ಬಹಳ ಖುಷಿಯಾಯ್ತು! ನಮ್ಮ ಮನೆ ಇಲ್ಲೇ ಇರೂದು ಬನ್ನಿ ಬನ್ನಿ ಎಂದು ಒತ್ತಾಯದಿಂದ ಕರಕೊಂಡು ಹೋದರು. ಮನೆಯಲ್ಲಿ ಬಹಳ ಸತ್ಕಾರವಾಯಿತು. ಹರಿಖಂಡಿಗೆಯ ಕೇಶವಮಾಮು ಹಾಗೂ ನಾಗಪ್ಪ ಮಾಮು ಮತ್ತವರ ಮಕ್ಕಳ ಆದರದ ತರವೇ ಬೇರೆ! ಅವರ ಪ್ರೀತಿಯ ಹೊಳೆಯಲ್ಲಿ ಕೊಚ್ಚಿ ಹೋಗುತ್ತೇವೆ! ಹೆಬ್ರಿ ಸಾನ್ ದೇವುಮಾಮನ ಮಕ್ಕಳಾದ ನಾವೆಂದರೆ ಇವರಿಗೆಲ್ಲ ವಿಶೇಷ ಪ್ರೇಮ, ಮೋಹವೆಂದರೂ ಸರೀನೆ! ಹುಬ್ಬಳ್ಳಿಯಲ್ಲಿರುವಾಗ ಆಗಾಗ ಅವರಲ್ಲಿ ಹೋಗಿಬರುವುದಿತ್ತು. ಗುಣಾಕರ ನಾಯಕರು ಸ್ವಭಾವತಃ ಮೆಲುಮಾತಿನ ಸಜ್ಜನ, ಸ್ನೇಹಮಯಿ, ದೈವ ದೇವರುಗಳಲ್ಲಿ ಅಪಾರ ಭಕ್ತಿಯುಳ್ಳ ಮನುಷ್ಯ. ಆಗಾಗ ಅವರ ಮನೆಯಲ್ಲಿ ಭಜನೆ, ದೇವಕಾರ್ಯ ಅದು ಇದು ಇದ್ದೇ ಇರುತ್ತಿತ್ತು. ಅಂದಿನ ದಿನಗಳಲ್ಲಿ ಮಹಾರಾಷ್ಟ್ರದ ಸಿದ್ಧಿ ಸಮಾಧಿ ಯೋಗದ ಸಂಪರ್ಕವಿತ್ತವರಿಗೆ. ಅದರ ಒಂದೆರಡು ಫಂಕ್ಷನ್ ಗಳಿಗೆ ನಾನೂ ಹೋದದ್ದಿದೆ. ಹುಬ್ಬಳ್ಳಿಯಲ್ಲೊಮ್ಮೆ ದೊಡ್ಡ ಸಾರ್ವಜನಿಕ ಸಭೆಯೂ ನಡೆದಿತ್ತು. ಒಟ್ಟಾರೆಯಾಗಿ ದೈವ ಧಾರ್ಮಿಕ ವಿಚಾರಗಳಲ್ಲಿ ತುಂಬಾ ಆಸ್ಥೆಯಿರುವವರು. ಇವರ ಹೆಸರಿಗೆ ತಕ್ಕಂತೆ ಗುಣೀ ವ್ಯಕ್ತಿ. ಮನೆಯವರಿಟ್ಟ ಗುಣಾಕರ ಇವರಿಗೆ ಅನ್ವರ್ಥನಾಮದಂತೆ ಇದೆ.

ಅನೇಕ ಬಾರಿ ಮನದಲ್ಲಿ ಖಯಾಲು ಬರುತ್ತಿರುತ್ತದೆ - ಗುಣಾಕರರಂಥ ಅನೇಕ ಗೆಳೆಯರಿದ್ದಾರೆ, ಜೀವನವನ್ನು ಒಂದು ನಿಯಮದಂತೆ ಬಾಳುತ್ತಿದ್ಧಾರೆ, ನನಗೇಕೆ ಆಗುತ್ತಿಲ್ಲ! ನಮ್ಮ ಕುಲದೀಪ ಪನ್ನಿ ಮತ್ತಿತರರು ಬೆಳಿಗ್ಗೆ ಸ್ನಾನ ಸಂಧ್ಯಾವಂದನೆ ಪೂರೈಸದೇ ಒಂದು ತಟಕು ನೀರು ಸಹ ಕುಡಿಯುವುದಿಲ್ಲ. ಗೆಳೆಯ ಮುಕುಂದ ನಿತ್ಯ ಬೆಳಗ್ಗೆ ಸಂಜೆ ದೇವರ ಪೂಜೆ ಅಲಂಕಾರ ಭಜನೆಗಳನ್ನು ಎಷ್ಟೇ ಒತ್ತಡಗಳಿರಲಿ ತಪ್ಪಿಸೂದಿಲ್ಲ. ಇನ್ನೊಬ್ಬರು ವಾರದ ನಿಗದಿತ ದಿನದಂದು ಶ್ರೀಕೃಷ್ಣ ಮಠಕ್ಕೆ ತಪ್ಪದೇ ಭೇಟಿಯಾಗಿ ಪರಮಾತ್ಮನ ದರ್ಶನಲಾಭ ಪಡೆಯತ್ತಾರೆ. ನನಗೇಕೆ ದೃಢಮನಸ್ಸಿಲ್ಲ..! ತುಂಬಾ ಸಲ ಪ್ರಯೋಗಗಳಾಗಿವೆ. ಯಾವುದೂ ನಿಯಮಿತವಾಗಿಲ್ಲ. ಗೆಳೆಯರನ್ನು ಕಂಡಾಗ ನನಗೆ ಆಗಾಗ ಲೋಪದ ಭಾವ ಹುಟ್ಟಿ ಕಳವಳವಾಗುತ್ತದೆ.

ಇತ್ತೀಚೆಗೆ ಶ್ರೀವೆಂಕಟರಮಣ ದೇವಸ್ಥಾನದಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದೆ. ಮಿತ್ರ ಗುಣಾಕರ ಸಹ ಬಂದಿದ್ದರು. ‘’ಕೇಶವಮಾಮು ಯೋ ಭೈಸ...”

‘’ಮಹರಾಯ! ನಿಮ್ಮನ್ನೊಮ್ಮೆ ಅಪ್ಪಿಕೊಳ್ಳುವಾ ಅಂತ ಆಸೆ ಆಗ್ತದೆ ನೋಡು. ದಿನ ನಿತ್ಯ ದೇವರ ನಾಮಸ್ಮರಣೆಯಲ್ಲೇ ತಲ್ಲೀನರಾಗಿರುತ್ತೀರಿ, ನಿಮಗೆ ದೇವರು ಒಲಿದಿದ್ದಾನೆ! ಸ್ವಲ್ಪ ಪುಣ್ಯ ನನಗೆ ವರ್ಗಾಯಿಸು ಮಹರಾಯ!”

‘’ಹಾಗೇನಿಲ್ಲ ಮಾಮು, ಏನೋ ಹಿಂದಿನಿಂದಲೂ ಬಂದ ಅಭ್ಯಾಸ, ನಾಲಕ್ಕು ದೇವರ ನಾಮ ಹೇಳೂದು. ಹರಿಖಂಡಿಗೆ ವೆಂಕಟರಮಣ ದೊಡ್ಡವನು, ನನ್ನ ಕೈಹಿಡಿದು ನಡೆಸಿದ್ದಾನೆ. ನಮ್ಮ ತಂದೆಯವರು ಸುಮ್ಮನೆ ದೇವೂಗತಿ ದೇವುಗತಿ ಎಂದು ಹೇಳಿದ್ದಲ್ಲ, ದೇವರಿಗೆ ಪೂರ್ತಿ ಶರಣಾಗಿದ್ದರವರು, ಅವರ ಭಕ್ತಿಯ ಪುಣ್ಯದ ಫಲವನ್ನು ಇಂದು ನಾವು ಪಡೆದು ಸುಖ ವಾಗಿದ್ದೇವೆ. ಎಲ್ಲಾ ಅವನ ಇಚ್ಛೆಯಂತೆ ನಡೆಯುವುದು ತಾನೇ?”...

ನನಗೆ ಅವರ ಮಾತು ಒಪ್ಪಿಗೆಯಾಯಿತು. ” ಮಾತನ್ನು ಪುನಃ ಹೇಳು, ನೂರಕ್ಕೆ ನೂರು ಸತ್ಯವಿಚಾರ.”

ಗುಣಾಕರ ನಾಯಕರೊಡನೆ ಮಾತನಾಡುವುದೇ ಒಂದು ಸುಖಾನುಭವ.!!