ಸ್ವಲ್ಪ ಸಮಯದ ಹಿಂದೆ ಊರಲ್ಲಿ-ಮನೆಯಲ್ಲಿ-ಚರ್ಚಾಕೂಟ ನಡೆದಿತ್ತು. ಯಥಾಪ್ರಕಾರ ದೇಶಭಕ್ತಿ, ಸಂಸ್ಕೃತಿ, ರಾಷ್ಟ್ರ ಇವೆಲ್ಲ ಬಂತು."ನಮ್ಮ ದೇಶದ ಪೂರ್ವ ಇತಿಹಾಸ , ಕತೆ, ಪುರಾಣ ಎಲ್ಲ ಬಹಳ ಶ್ರೇಷ್ಠ. ಆದರೆ ಜನರು ಮಾತ್ರ ಬುರ್ನಾಸು, ಜನರಿಗೆ ಈ ಹಿಂದಿನಿಂದಲೂ ಭೌಗೋಳಿಕವಾಗಿ ನಮ್ಮ ರಾಷ್ಟ್ರ ಒಂದು ನಾವೆಲ್ಲ ಒಂದು ಎಂಬ ಭಾವನೆಯೇ ಇರಲಿಲ್ಲ. ನಾವು ಹಿಂದಿನ ಚರಿತ್ರೆಯನ್ನು ತೆಗೆದುಕೊಳ್ಳೋಣ. ನಮ್ಮದು ಅತ್ಯಂತ ಶ್ರೇಷ್ಠ ದೇಶ, ಇಲ್ಲಿ ಅನೇಕ ಪ್ರತಿಭಾವಂತರು ಹುಟ್ಟಿದ್ದಾರೆ, ದೊಡ್ಡ ದೊಡ್ಡ ನಾಮಾಂಕಿತ ಚಕ್ರವರ್ತಿಗಳು ಆಳಿ ಬಾಳಿದ ನಾಡು, ವೀರ ಶೂರರ ಬೀಡು ,ರಾಮ ಕೃಷ್ಣರ, ಅಶೋಕ ಚಕ್ರವರ್ತಿಯ ನೆಲ. ಎಲ್ಲ ಸರಿ. ಆದರೆ ಮೇಲೆ ಹೇಳಿದ ಹಾಗೆ ಎಲ್ಲರೂ ಅಂದರೆ ರಾಜನಿಂದ ಹಿಡಿದು ಪ್ರಜೆಗಳು ಸಹಿತ ತಮ್ಮ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಕಾಪಾಡಿದರಷ್ಟೇ ವಿನಃ ಸಮಗ್ರ ರಾಷ್ಟ್ರದ ಬಗ್ಗೆ ಆಲೋಚಿಸಲಿಲ್ಲ. ಪುರುರವನ ಮೇಲಿನ ಯಾವುದೋ ಸಿಟ್ಟನ್ನು ಸಿಕಂದರನಿಗೆ ಸಹಾಯ ಮಾಡುವ ಮೂಲಕ ಜಯಚಂದನು ತೀರಿಸಿಕೊಂಡ. ಆದರೆ ಆಗ ಭಾರತದ ಮೇಲೆ ಯವನನೊಬ್ಬನ ಆಕ್ರಮಣವನ್ನು ತಾನು ಪ್ರಚೋದಿಸಿದ ಹಾಗೆ ಆದೀತು ಎಂಬ ಎಳ್ಳಷ್ಟು ಚಿಂತೆ ಅವನಿಗಾಗಲಿಲ್ಲ. ಅಥವಾ ಅವನ ರಾಷ್ಟ್ರದ ಕಲ್ಪನೆಯಲ್ಲೇ ತಪ್ಪು ಇತ್ತೋ? ಅದೇ ರೀತಿ ನಮ್ಮ ದೇಶದ ಮೇಲೆ ನಡೆದ ಮುಸಲ್ಮಾನರ ದಾಳಿಗಳು. ನಮ್ಮಲ್ಲಿ ಒಗ್ಗಟ್ಟಿರಲಿಲ್ಲ. ಅಲ್ಲದೆ ರಾಷ್ಟ್ರ ಎಂಬ ಸರಿಯಾದ ಕಲ್ಪನೆ ಸಹಾ ಇರಲಿಲ್ಲ.ಆಸೇತು ಹಿಮಾಚಲ ಗಾಂಧಾರದಿಂದ ಬರ್ಮಾದ ವರೆಗೆ ಹಬ್ಬಿದ ನಮ್ಮ ನಾಡು ಎಂದು ಪದ ಹಾಡುತ್ತೇವೆ. ಇಂಥ ನಾಡಿನಲ್ಲಿ ಎಷ್ಟೆಷ್ಟು ಸಣ್ಣ ದೊಡ್ಡ ರಾಜ್ಯಗಳು (ದೇಶಗಳು) ಪ್ರತಿಯೊಬ್ಬರೂ ಪರಸ್ಪರ ಕಚ್ಚಾಡಿಕೊಂಡು ದುರ್ಬಲಗೊಂಡು ಕೊನೆಗೆ ಬ್ರಿಟಿಷರ ಅಧೀನರಾದೆವು. ಹೇಗೆ ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ ಒಂದು ರಾಷ್ಟ್ರವಾಗಿದ್ದೆವೋ ಅದೇ ರೀತಿ ಭೌಗೋಲಿಕವಾಗಿಯೂ ನಮ್ಮಲ್ಲಿ ರಾಷ್ಟ್ರದ ಭಾವನೆ, ಭಕ್ತಿ, ಪ್ರೀತಿ ಮುಂಚಿನಿಂದಲೇ ಇದ್ದಿದ್ದರೆ ನಾವು ಯಾರ ಗುಲಾಮರು ಆಗಬೇಕಾಗಿರಲಿಲ್ಲ ಎಂದು ನನ್ನ ವಿಚಾರ. ಆ ಬಗ್ಗೆ ಹೇಳಬೇಕೆಂದರೆ ಬ್ರಿಟಿಷರು ಬಂದ ಮೇಲೆಯೇ ಪ್ರಜೆಗಳಲ್ಲಿ ರಾಷ್ಟ್ರದ ಬಗ್ಗೆ ಸ್ಪಷ್ಟ ಕಲ್ಪನೆ ಮೂಡಿತು ಎನ್ನಬಹುದು. ಬ್ರಿಟಿಷರ ದಬ್ಬಾಳಿಕೆ ತಮ್ಮ ಗುಲಾಮೀ ಜೀವನದ ಕಷ್ಟ ಹಾಗು ಹೇಯಭಾವನೆ ಮತ್ತು ಮುಖ್ಯವಾಗಿ ತಿಲಕರು, ಹೆಡಗೆವಾರರು, ವಿವೇಕಾನಂದರು, ಮತ್ತು ಇಂತಹ ಅನೇಕ ನಾಯಕರ ನಾಯಕತ್ವವು ನಮಗೆ ಅಖಂಡ ಭಾರತದ ಕಲ್ಪನೆ ನೀಡಿತು. ಇಪ್ಪತ್ತನೇ ಶತಮಾನದ ಆದಿಯಲ್ಲಿ ಇಡೀ ರಾಷ್ಟ್ರವು ಬ್ರಿಟಿಷರ ವಿರುದ್ಧ ಎದ್ದು ನಿಂತಿತು. ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಮಾತ್ರ ಪುನಃ ಸಂಕುಚಿತ ಭಾವನೆಗಳು, ತಾನು ನಾಯಕನಾಗಬೇಕು, ದೇಶ ಇಬ್ಭಾಗವಾದರೂ ಪರವಾಗಿಲ್ಲ ಎಂಬಂತಹ ದುರಾಸೆ ಅತಿಯಾಸೆ ನಾಯಕರಲ್ಲಿ ಹುಟ್ಟಿ ಯಾವ ವಿಶಾಲ ಭಾರತಕ್ಕಾಗಿ ಯುವಕರು, ಮಕ್ಕಳು, ಸ್ತ್ರೀಯರು ಎನ್ನದೆ ಬಲಿದಾನ ನೀಡಿದರೋ ಆ ಭಾರತವು ಮತ್ತೊಮ್ಮೆ ಹೋಳಾಯ್ತು. ಅಲ್ಲಿಗೆ ಮುಗಿಯಿತೇ? ಇಲ್ಲ.ತನ್ನು ದೊಡ್ಡ ಮನುಷ್ಯನಾಗಬೇಕು, ದೇಶ ಏನು ಬೇಕಾದ್ರೂ ಆಗಲಿ ಎಂಬಂತಹ ಮನೋಭಾವವುಳ್ಳ ಮುಖ್ಯಸ್ಥನಿಂದ ವಿಶಾಲ ಭೂಭಾಗವು ಚೈನಾದ ಪಾಲಾಯ್ತು.ಇವತ್ತಿಗೂ ಅದನ್ನು ವಾಪಾಸು ಪಡೆಯಲು ನಮ್ಮಿಂದ ಆಗಲಿಲ್ಲ. ಇನ್ನು ಮುಂದೆಯೂ ಆಗುವುದು ಡೌಟು. ನಮಗೆ ಪವಿತ್ರವಾದ ಮಾನಸಸರೋವರ ಯಾತ್ರೆ ಮಾಡಲು ನಾವು ಚೀನಾದವರ ಕಾಲು ಹಿಡಿಯಬೇಕು. ನಮ್ಮ ಅರುನಾಚಲಪ್ರದೇಶದಲ್ಲಿ ಆಗಾಗ ಚೀನಾದವರು ಕ್ಯಾತೆ ತೆಗೆಯುತ್ತ ಇದ್ದಾರೆ. ಅವರಿಗೆ ಸಮರ್ಥವಾಗಿ ಜವಾಬು ನೀಡಲು ನಮ್ಮ ನಾಯಕರೆನಿಸಿದವರಿಗೆ ಆಗುತ್ತಿಲ್ಲ. ಆಗುತ್ತಿಲ್ಲವೋ ಮನಸ್ಸಿಲ್ಲವೋ ಯಾ ರಿಗೆ ಗೊತ್ತು? ಈ ಮನೋಭಾವವು ರಾಷ್ಟ್ರದ ಕಲ್ಪನೆಯ ಅಭಾವದ ಸಂಕೇತ. ಎಲ್ಲರೂ-ಆ ಪಾರ್ಟಿ ಈ ಪಾರ್ಟಿ ಎಂಬ ಭೇದವಿಲ್ಲದೆ ಸುಲಿಗೆಯಲ್ಲಿ ತನ್ಮಯರಾಗಿದ್ದಾರೆ. ಹೀಗೆಯೇ ಆದರೆ ಮುಂದೆ ಒಂದು ದಿನ ಪುನಃ ನಮ್ಮ ಮುಂದಿನ ಪೀಳಿಗೆಯು ಪರರ ಜೀತ ಮಾಡುವ ಸಮಸ್ಯೆ ಬರಬಹುದೇ? ಇದಕ್ಕೆ ಪರಿಹಾರವಿಲ್ಲವೇ?