Sunday, April 14, 2024

ಸ್ಮರಣೆ-ನರಸಿಂಹ ಮಲ್ಯರು..

 

ಮೊದಲ ಕಂತು.

ಹದಿಹರೆಯದವರ ಮನಸ್ಸು ಒದ್ದೆ ಮಣ್ಣಿನ ಗೋಡೆಯಂತೆ ಇರುತ್ತದೆ. ಯಾವುದೇ ವಿಚಾರವನ್ನು ಇವರಿಗೆ ತಿಳಿಹೇಳಿದರೆ ಅದನ್ನು ಟಪಕ್ಕೆಂದು ಒತ್ತಿಕೊಳ್ಳುತ್ತದೆ. ಒಳ್ಳೆಯ ಸದ್ವಿಚಾರಗಳನ್ನು, ಉತ್ತಮ ಸಂಗತಿಗಳನ್ನು ಹದಿಹರೆಯದಲ್ಲೇ ಬೆಳೆಸಿ ಕೊಳ್ಳುವಂತೆ ಪ್ರೇರೇಪಿಸಿದರೆ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆ ಸಿಗುತ್ತಾನೆ. ಅಂತೆಯೇ ಇದಕ್ಕೆ ವಿರುದ್ಧವಾದ, ವಿಪರೀತವಾದ ಸಂಗತಿ ನಡೆದರೆ ಒಬ್ಬಾತ ಸತ್ಪ್ರಜೆಯಾಗಿ ಬೆಳೆಯುವುದು ಡೌಟು. ನನ್ನ ಮಟ್ಟಿಗೆ ಹೇಳೂದಾದರೆ ನಾನು ಸಾಕಷ್ಟು ಭಾಗ್ಯಶಾಲಿ ಯೆಂದೇ ಹೇಳಬಹುದು.

ಹದಿಹರೆಯದ ನಿಜವಾದ ಅರ್ಥದಲ್ಲಿ ಅಂದರೆ ನನ್ನ ಹದಿಮೂರನೇ ವಯಸ್ಸಿನಲ್ಲೇ ನನಗೆ ಸಂಘದ ಸಂಪರ್ಕವಾಯಿತು. ಹಸೀಗೋಡೆ - ಹಸಿ ಗೋಡೆಯ ಮೇಲೆ ಸಂಘಮುಖೇನ ಅನೇಕ ಸಮಾಜಮುಖಿ ವಿಚಾರಗಳು, ದೇಶಕ್ಕಾಗಿ ಬದುಕು ನಡೆಸುವ ಇಚ್ಛಾಶಕ್ತಿ, ಉತ್ತಮ ನಡವಳಿಕೆ ಇತ್ಯಾದಿ ಇತ್ಯಾದಿ.. ಪ್ರಾಪ್ತವಾದವು. ನನ್ನಂತೆಯೇ ಇನ್ನೂ ಅನೇಕ ಹಸೀಗೋಡೆಗಳು ಅಂದಿನ ಕಾಲದಲ್ಲಿ ಸಂಘಸಂಪರ್ಕಕ್ಕೆ ಬಂದು ಇಂದು ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ಬದುಕು ಬಾಳುತ್ತಿದ್ದಾರೆ.

ನರಸಿಂಹ ಮಲ್ಯ:- ನಮ್ಮ ಮಾಮ (ಅಂಕಲ್) ನರಸಿಂಹ ಮಲ್ಯರನ್ನು ತಂಪು ಹೊತ್ತಿನಲ್ಲಿ ನೆನೆಯಬೇಕು. ನಮಗೆ ಮಾಮ ನಾದರೂ ನಮ್ಮ ಗೆಳೆಯನಂತೆ ಇದ್ದರು. ಯಾರೊಡನೆಯೂ ಜಗಳವಿಲ್ಲದೇ, ಎಲ್ಲರೊಡನೆ ಸ್ನೇಹದಿಂದ ಇರುವ ಕಲೆ ಅವರಿಂದ ಕಲಿಯಬೇಕು. ಸದಾ ಹಸನ್ಮುಖಿ. ಧಾರಾಳ ಮಾತು. ಒಮ್ಮೆ 'ಬಾ ಮಹರಾಯ, ವರಂಗಕ್ಕೆ ಹೋಗಿ ಬರೋಣ,' ಎಂದು ಕರಕೊಂಡು ಹೋದರು. ಅಲ್ಲಿ ನಮ್ಮ ಸಂಬಂಧಿಗಳ ಮನೆಯಲ್ಲಿ ಒಳಗೆ ಅಡಿಗೆ ಮನೆಯಲ್ಲಿ ಕೂತು ಮನೆಯ   ಹೆಂಗಸರೊಡನೆ ಇವರ ಮಾತುಕತೆ ಮುಂದುವರೆಯಿತು. ನನಗೆ ಅವರಲ್ಲಿ ಹೆಚ್ಚಿನ ಹೊಕ್ಕುಬಳಕೆ ಇಲ್ಲದ ಕಾರಣ ಬೇಸರ ಹತ್ತಿತು. ಕೂತಲ್ಲೇ ತೂಕಡಿಕೆ ಬರಲಾರಂಭಿಸಿತು. ನನ್ನ ಸಮವಯಸ್ಕರಾರೂ ಇದ್ದ ನೆನಪಿಲ್ಲ. ಕೊನೆಗೂ ಅವರ ಮಾತುಕತೆ ಎಲ್ಲ ಮುಗಿದು 'ಇನ್ನು ಬರುತ್ತೇನೆ, ತುssoಬಾ ಮಾತಾಡ್ಲಿಕ್ಕೆ ಉಂಟು, ಇನ್ನೊಮ್ಮೆ ಸಿಗುತ್ತೇನೆ.. ಯೋರೆ ಉಟ್ರೆ' ಎಂದು ನನ್ನನ್ನೆಬ್ಬಿಸಿದರು. 'ಅದೆಲ್ಲ ಆಗೂದಿಲ್ಲ ನೀವಿಬ್ರೂ ಇವತ್ತು ಇಲ್ಲಿ ಊಟ ಮಾಡಿಯೇ ಹೋಗಬೇಕು. ಹೋ ಮುಕ್ತಾಲೋ ಮ್ಹಾಲ್ಗಡೊ ನ್ಹಂವೇ ಹ್ಞಾಂಣೆ ಎವಚೇ ಊಣೆ.' ಎಂದವರು ಪ್ರೀತಿಯಿಂದ ಒತ್ತಾಯ ಮಾಡಿ ಊಟದ ನಂತರವೇ ನಮ್ಮನ್ನು ಬೀಳ್ಕೊಟ್ಟರು. ಹೊರಬರುವಾಗ ಅವರ ಕಣ್ಣಲ್ಲಿ ಪ್ರೀತಿಯ ಹನಿಯೊಂದು ತುಳುಕಿದುದು ಕಂಡೆನೇ.... ಈಗ ನೆನಪಿಗೆ ಬರೂದಿಲ್ಲ.

'ಅಲ್ಲ ನರ್ಶಿಮ್ಮ ಮಾಮ, ನಿನಗೆ ಹೆಬ್ರಿಯಲ್ಲಿ ಕಂಡಾಪಟ್ಟೆ ಕೆಲಸ ಉಂಟು, ತುರಿಸಿಕೊಳ್ಳಲು ಪುರಸೋತಿಲ್ಲ ಎಂದು ಪಿರಿಪಿರಿ ಮಾಡಿದಂವ ಇಲ್ಲಿ ವರಂಗದವರಲ್ಲಿ ಅದು ಇದು ಚೈಂ ಚೈಂ ಎಂತದು ಪರಂಗಾವಣೆ ಮಾಡುತ್ತಿದ್ದೆ?' ಸಣ್ಣಗೆ ಆಕ್ಷೇಪಿಸಿದೆ.

'ನೋಡು ಇವನೇ, ನಿನಗೆ ಕೆಲವು ಸೂಕ್ಷ್ಮ ತಿಳಿಸುತ್ತೇನೆ. ಅವರು ನಮ್ಮ ತೀರಾ ಹತ್ತಿರದ ಬಳಗ. ನಾವು ಹೆಬ್ರಿ - ಶೀಮೋಗಾ ಅಂತ ದೊಡ್ಡ ಊರುಗಳಲ್ಲಿರುವವರು. ನಮ್ಮನಮ್ಮ ತಲೆಬಿಸಿ ನಮಗೆ, ಅವರಿಗೆ ಅದೆಲ್ಲ ತಿಳಿಯೂದಿಲ್ಲ. ನಾವು ಸಮಯ ಮಾಡಿ ಕೊಂಡು ಅವರಲ್ಲಿ ಹೋದ್ರಿಂದ ಅವರಿಗೆ ಎಷ್ಟು ಖುಷಿಯಾಯ್ತು ನೀನೇ ನೋಡಿದಿಯಲ್ಲ! ಮನೆಯ ಎಲ್ಲ ಮಂದಿ ಬಂದು ಕಷ್ಟ ಸುಖ ಹಳೇ ನೆನಪುಗಳನ್ನೆಲ್ಲ ಕೆದಕಿ ಕೆದಕಿ ಸಂತೋಷಪಟ್ಟರು ಹೌದೋ ಅಲ್ವೋ ... 'ಅಂವ ಶಿಮೋಗ ಅಂತ ದೊಡ್ಡ ಪೇಟೆಯಲ್ಲಿ ದೊಡ್ಡ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದಾನೆ! ಅಷ್ಟೆಲ್ಲ ಗಡಿಬಿಡಿ ಇದ್ದರೂ ನೆನssಪಿನಲ್ಲಿ ನಮ್ಮಲ್ಲಿ ಬಂದು ಎಷ್ಟೆಲ್ಲ ಮಾತನಾಡಿ ಹೋದ ನೋಡಿ, ಒಂಚೂರೂ ಜಂಬ ಇಲ್ಲ , ಹಾಂಕಾರ ಇಲ್ಲ. ಮುಕ್ತಾಳ ಹಿರಿಯಂವ ಸಹ ಕಲಿಯಲು ಭಾರೀ ಬುದ್ಧಿವಂತ ಎಂದು ಕೇಳಿದ್ದೇವೆ.' ಎಂದು ಇನ್ನವರು ಆರು ತಿಂಗಳ ವರೆಗೆ ಮೆಲಕು ಹಾಕಿಕೊಂಡು ಖುಷಿಪಡುತ್ತಾರೆ. ನಮ್ಮಿಂದ ಪಾವಾಣೆ ಖರ್ಚಿಲ್ಲದೆ ಒಬ್ಬರಿಗೆ ಕಿಂಚಿತ್ ಆದರೂ ಸಂತೋಷ ಆದರೆ ನಮಗೇ ಒಳ್ಳೇದು, ಏನಂತೀ?' ಸಣ್ಣ ಲೆಕ್ಚರ್ ಆದರೂ ತುಂಬ ಮೌಲ್ಯಯುತ ಮಾತು ಹೇಳಿದರು. ಆದಿನ ಅವರ ಮಾತಿನ ಮಹತ್ವ ತಿಳಿದಿರಲಿಲ್ಲ, ಮುಂದಿನ ದಿನಗಳಲ್ಲಿ ಅರ್ಥವಾಗಲಾರಂಭಿಸಿತು. ಆದಷ್ಟು ಮಟ್ಟಿಗೆ ನಯವಿನಯದ ನುಡಿಗಳು, ಸಕಾರಾತ್ಮಕ ಮಾತುಗಳು, ಬೇಂಕಿನಲ್ಲಿ ನಗುಮುಖದ ಸೇವೆ, ಇತರರನ್ನು ಗೌರವಿಸುವ ಪರಿ ಇವೆಲ್ಲವನ್ನು ನಾನು ನಮ್ಮ ನರ್ಶಿಮ್ಮಮಾಮನ ಸಂಗದಿಂದಲೇ ಕಲಿತದ್ದು. ಗೆಳೆಯ ಪರಿಚಿತರೊಡನೆ ಹಾಸ್ಯ ಕುಷಾಲು ಮಾಡುವುದಿದ್ದರೂ ಆದಷ್ಟು ಮಟ್ಟಿಗೆ ಮನ ನೋಯಿಸದ ಹಿತಕರ ಆರೋಗ್ಯಕರ ತಮಾಷೆಗಳನ್ನೆಲ್ಲ ನಾನು ಅವರಿಂದಲೇ ಕಲಿತದ್ದು...

ಒಂದು ಎಪಿಸೋಡು:-ಊರಿಗೆ-ಹೆಬ್ರಿಗೆ-ಬಂದರೆ ಅವರ ಊಟ ತಿಂಡಿ ದಿನಚರಿ ಎಲ್ಲ ನಮ್ಮ ಮನೆಯಲ್ಲೇ, ಇದು ನಡಕೊಂಡು ಬಂದ ವ್ಯವಸ್ಥೆ. ಒಮ್ಮೆ ರಾತ್ರಿ ಎಲ್ಲರೂ ಊಟಕ್ಕೆ ಲೈನಾಗಿ ಕೂತಿದ್ದು, ಅಮ್ಮ ಬಡಿಸುತ್ತಿದ್ದರು. ನರಸಿಂಮ ಬಂದಿದ್ದಾನೆ, ಅವನಿಗೆ ಪ್ರೀತಿ  ಅಂತ ಖಾರ ಉದ್ದಿನ ಹಪ್ಪಳ ಕರಿದು ಇಟ್ಟಿದ್ದರು. ಕಿರಿಯ ತಮ್ಮನ ಮೇಲೆ ಒಂದು ಮುಷ್ಟಿ ಮೋಕೆ ಜಾಸ್ತಿ...

'ಅಕ್ಕಾ , ಇವತ್ತು ಒಂದು ಕತೆ ಆಯ್ತಲ್ಲಾ..?' ಮಾಮ ಮಾತಿಗೆ ಸುರುವಿಟ್ಟರು.

'ಎಂಥದು?'

'ಬೆಳಗ್ಗೆ ಹೆಬ್ರಿಗೇ ಅಂತಾ ಮಿನಿಬಸ್ಸಲ್ಲಿ ಬರ್ತಿದ್ನಾ! ಎದೂರಿನ ಸೀಟು. ಆಗುಂಬೆ ಘಾಟಿಯ ಏಳನೇದ್ದೋ ಆರನೇದ್ದೋ ಕರ್ವಲ್ಲಿ ... ಎಂಥಾ ಹೇಳೂದು? ಈಷ್ಟುದ್ದ ಹೆಬ್ಬಾವು!  ಅಬಬಬಬ!'

'ಈಷ್ಟುದ್ದ ಅಂದ್ರೆ ಎಷ್ಟುದ್ದ?'

'ಎಷ್ಟು ಉದ್ದವಾ!! ನೋಡು ಇಲ್ಲಿ ನಾನು ಕೂತಿದ್ದೇನಲ್ವಾ, ಇಲ್ಲಿಂದ ಅಲ್ಲಿ ನೀನು ಹಪ್ಪಳ ಸುಟ್ಟು ಇಟ್ಟಿದ್ದೀಯಲ್ಲಾ ಅಲ್ಲೀ ವರೆಗೆ ... ssಷ್ಟೂದ್ದ!!'

'ಅಯ್ಯೋ ದೇವರೇ! ನಿಮಗೆ ಹಪ್ಪಳ ಬಡಿಸಲೇ ಇಲ್ಲವಲ್ಲಾ! ನನ್ನ ನೆನಪಿಗಿಷ್ಟು ಬೆಂಕಿ ಹಾಕ! ಛೇ ಎಂತಾ ಕೆಲಸ ಆಯಿತು, ನಿಮ್ಮ ಊಟ ಮುಗೀಲಿಕ್ಕಾಯಿತು!!' ಅಮ್ಮ ತರಾತುರಿಯಿಂದ ಹಪ್ಪಳ ಬಡಿಸಿದರು.

'ಅಲ್ಲ ಮಹರಾಯ! ಹಪ್ಪಳ ಬಡಿಸು ಅಕ್ಕಾ , ಎಂದು ನೇರ ಹೇಳೂದು ಬಿಟ್ಟು ನಿಂದು ಇದೆಲ್ಲ ನಾಟಕ ಎಂಥದು?'

'ಅಲ್ಲ, ಹಪ್ಪಳ ಸುಟ್ಟು ಚಂದಕ್ಕೆ ಇಟ್ಟದ್ದಾ? ಬಡಿಸಬೇಕಂತ ಪುನಃ ಹೇಳ್ಬೇಕಾ? ಅದಕ್ಕೇ ಕತೆ ಕಟ್ಟಿದ್ದು.' ಇವರು ಕಣ್ಣು ಮಿಟುಕಿಸಿದರು. ಘೊಳ್ಳನೆಯ ನಗು ಅಡುಗೆ ಮನೆಯಲ್ಲಿ ಮೊಳಗಿತು.

               

Wednesday, April 10, 2024

ಸೂರಿಮಾಣಿ - ’ಹನುಮದ್ವಿಕಾಸಕ್ಕೆ ಎಲ್ಲೆ ಇಲ್ಲ’

#ಸೂರಿಮಾಣಿ - ’ಹನುಮದ್ವಿಕಾಸಕ್ಕೆ ಎಲ್ಲೆ ಇಲ್ಲ’ ಎಂದು ಸಾಬೀತುಪಡಿಸಿದ ನೀಲಾವರ ಸುರೇಂದ್ರ ಅಡಿಗರ ಆತ್ಮಕತೆ.

ಸೂರಿಮಾಣಿ ನೀಲಾವರ ಸುರೇಂದ್ರ ಅಡಿಗರ ಹಲವು ಕಂತುಗಳಲ್ಲಿ ಬರೆಯಲಾದ ಆತ್ಮಕತೆಯ ಒಂದು ಮುಖ್ಯಭಾಗ. ಅದು ಅವರು ಮೈಬಗ್ಗಿಸಿ ದುಡಿದು, ಅಭಿನಂದನೀಯ ವ್ಯಕ್ತಿತ್ವವನ್ನು ಕಟ್ಟಿಕೊಂಡ ಸ್ವಯಂಕೃಷಿಯ ಕತೆ. ಅಥವಾ ಅದು ಸುರೇಂದ್ರ ಅಡಿಗರಿಗೆ ಆಗಾಗ ನೆನಪಾಗಿ ಕಾಡುವ ಹಲವು ಘಟನೆಗಳ ಗುಚ್ಛ - ಮೆಮೊಯರ್ - ಸ್ಮೃತಿಚಿತ್ರದ ಒಂದು ಭಾಗ. ಅದರಲ್ಲಿ ಅವರು ಕಟ್ಟಿಕೊಡುವ ವ್ಯಕ್ತಿತ್ವ ನಿರ್ಮಾಣದ ಕಥೆಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಿದ್ದರೆ, ಸೂರಿಮಾಣಿಯನ್ನು ನಾವು  ೨೦೨೧ರಲ್ಲಿ ಪ್ರಕಟವಾಗಿದ್ದ ನೆನಪಿನಾಳದಿಂದ (೫೩೬ ಪುಟಗಳು),  ೨೦೦೯ರಲ್ಲಿ ಪ್ರಕಟವಾದ ನೆನಪುಗಳು ಗರಿಗೆದರಿದಾಗ ಮತ್ತು ೨೦೨೧ ರಲ್ಲಿ ಪ್ರಕಟವಾದ ನೆನಪಿನ ಬುತ್ತಿ, ಎಂಬ ಮೂರು ಪುಸ್ತಕಗಳೊಂದಿಗೆ ಓದಬೇಕಾಗುತ್ತದೆ. ಏಕೆಂದರೆ, ಈ ಮೂರು ಪುಸ್ತಕಗಳು (ಇದೇ ಆರ್ಡರಿನಲ್ಲಿ ಬರೆಯಲ್ಪಟ್ಟಿಲ್ಲವಾದರೂ)   ಅವರ ಬದುಕಿನ ಮಹತ್ವದ ಘಟನೆಗಳು ಘಟಿಸಿದ ಕಾಲಘಟ್ಟಗಳನ್ನುಒಂದು  ವ್ಯವಸ್ಥಿತವಾದ ಕ್ರಮದಲ್ಲಿ ಮಂಡಿಸುತ್ತವೆ. 

 (೧) ಸೂರಿಮಾಣಿಯಲ್ಲಿ ಅಡಿಗರು ೧೯೭೮ರಿಂದ ೧೯೯೩ರ ವರೆಗೆ  (೧೯೮೫-೮೭ ಎರಡುವರ್ಷ ಹೊರತುಪಡಿಸಿ) ತಾವು ಹೋಟೆಲ್ ಮಾಣಿಯಾಗಿ, ಮತ್ತು ಸ್ವಂತ ಹೋಟೆಲ್ಲಿನಲ್ಲಿ ಅಪ್ಪಯ್ಯ, ಅಣ್ಣಂದಿರ ಜೊತೆ ಕೆಲಸಮಾಡಿ, ಹೋಟೆಲ್ ವ್ಯವಹಾರಗಳ ಬಗ್ಗೆ ಅರಿವನ್ನು ಕರಗತಮಾಡಿಕೊಂಡ ವಿಷಯವಿದೆ.
(೨) ನೆನಪಿನ ಬುತ್ತಿಯಲ್ಲಿ ೨೦.೦೧.೧೯೯೩ರಿಂದ ೦೫.೦೭.೨೦೦೫ರ ತನಕದ ಶೈಕ್ಷಣಿಕ ಅನುಭವಗಳು ದಾಖಲಾಗಿವೆ.
(೩) ನೆನಪಿನಾಳದಿಂದ ಕೃತಿಯಲ್ಲಿ ೦೬.೦೭.೨೦೦೫ರಿಂದ ೩೧.೦೭.೨೦೨೧ರವರೆಗಿನ ಅವರ ಎಲ್ಲಾ ಶೈಕ್ಷಣಿಕ ಅನುಭವಗಳು ದಾಖಲಾಗಿವೆ.
ನೆನಪುಗಳು ಗರಿಗೆದರಿದಾಗ ಅಡಿಗರ ಶೈಕ್ಷಣಿಕ ಅನುಭವಗಳ ಕಥನ. ಅದನ್ನು ನಿರ್ಧಿಷ್ಟ ಕಾಲ ಘಟ್ಟಕ್ಕೆ ಸೀಮಿತಗೊಳಿಸಲಾಗದ ಶೈಕ್ಷಣಿಕ ಆತ್ಮಕಥನ ಎಂದೂ ಕರೆಯಬಹುದು.ಈ ಹೊತ್ತಗೆಯಲ್ಲಿ  ಅಡಿಗರು ಹೇಳಿದ್ದಿದೆ. "ನನಗಿಂತ ಉತ್ತಮ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಬಹಳಷ್ಟು ಮಂದಿ ಇದ್ದಾರೆ. ಆದರೆ ಅವರೆಲ್ಲರಲ್ಲಿರುವ ಕೊರತೆ ಒಂದೇ. ಸಾಧನೆಯ ದಾಖಲೀಕರಣ ಮಾಡಿಕೊಳ್ಳದೇ ಇರುವುದು." ಈ ನಾಲ್ಕೂ ಪುಸ್ತಕಗಳಲ್ಲಿ ನಾವು ಗಮನಿಸಲೇಬೇಕಾದ ಅಡಿಗರ ಬರವಣಿಗೆಯ ಪ್ರಶಂಸನೀಯ ಗುಣವೆಂದರೆ, ಅವರ ಬರವಣಿಗೆಯೆಲ್ಲವೂ ದಿನಚರಿಯ ದಾಖಲೆಯಂತಹವು. ಶಿಕ್ಷಕರ ದಿನಚರಿಯ ಕುರಿತು ಅವರು ನೀಡುವ ಮಾರ್ಗದರ್ಶನದಲ್ಲಿ  ಪ್ರಾಯಶಃ ನಾವೆಲ್ಲರೂ ಕಲಿಯಬೇಕಾದಂತಹ ಪಾಠಗಳಿವೆ. 

ಇವುಗಳೊಂದಿಗೆ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಾದ ಇನ್ನೊಂದು ಕೃತಿ ಅಡಿಗರ ಬೃಹತ್ ಕಾದಂಬರಿ ’ಹುಲಿಯಪ್ಪ ಮೇಷ್ಟ್ರು’. ಅಡಿಗರು ಶೈಕ್ಷಣಿಕ ರಂಗದಲ್ಲಿ ತಮ್ಮ ಎದುರಿದ್ದ ಆದರ್ಶವನ್ನು ಹುಲಿಯಪ್ಪಮೇಷ್ಟರ ಆದರ್ಶವಾಗಿ ಬೆಳೆಸುತ್ತಾ ಹೋಗುವುದರಿಂದ ಆ ಕಾದಂಬರಿಯು ಅಡಿಗರ ಆತ್ಮಚರಿತ್ರೆಯ ಹೇಳಲಾಗದ ಮತ್ತು ಹೇಳದೇಹೋದ ಸಂಗತಿಗಳ ಚಿತ್ರಣವೆಂದೇ ನಾವು ಪರಿಗಣಿಸಬಹುದು ಎಂದು ಆ ಕಾದಂಬರಿಯ ಮುನ್ನುಡಿಯಲ್ಲಿ ನಾನು ಬರೆದಿದ್ದೆ. ಅಲ್ಲೇ ಎಂ ಆರ್ ಶ್ರೀನಿವಾಸಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ಎಂಬ ಕೃತಿಯನ್ನು ಸಕಾರಣವಾಗಿಯೇ ನೆನಪಿಸಿಕೊಂಡಿದ್ದೆ. ರಂಗಣ್ಣನ ಕನಸಿನ ದಿನಗಳು ಪ್ರಕಟವಾಗಿ ಈ ಹೊತ್ತಿಗೆ ೭೫ ವರ್ಷಗಳಾದವು ಎನ್ನುವುದನ್ನೂ ನೆನಪಿಸಿಕೊಂಡಾಗ ಅಡಿಗರ ಆತ್ಮಚರಿತ್ರೆಗಳು ಅಧ್ಯಾಪನ ವೃತ್ತಿಯನ್ನು ಆಧರಿಸಿದ ಸ್ಮೃತಿಚಿತ್ರಗಳ ಪಂಕ್ತಿಯಲ್ಲೊಂದು ಐತಿಹಾಸಿಕ ಮೈಲಿಗಲ್ಲೆಂದು ಹೇಳಬಹುದು.

ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದ್ದ ಅಡಿಗರಿಗೆ ಶಿಕ್ಷಕನಾಗಬೇಕೆಂಬ ಆಸೆಯಿದ್ದಿತ್ತಂತೆ. ಅಮ್ಮನ ಒತ್ತಾಯಕ್ಕೆ ಪಿಯೂಸಿ ಸೇರಿ, ಫೈಲಾಗಿ ಶಿಕ್ಷಣ ಕೈಬಿಟ್ಟು ೧೯೭೮ರ ಎಪ್ರಿಲ್ಲಿನಲ್ಲಿ ಬೆಂಗಳೂರಿಗೆ ಬಂದಲ್ಲಿಂದ  ಸೂರಿಮಾಣಿಯೆಂಬ ಆದಿಪರ್ವದ ಕತೆ ಮುಂದುವರಿಯುತ್ತದೆ.೧೯೭೮ರಲ್ಲಿ ಅವರ ಅಪ್ಪಯ್ಯ ಅನಂತ ಅಡಿಗರು ಚಿಕ್ಕಪೇಟೆ ರಾಘವೇಂದ್ರಸ್ವಾಮಿ ಪ್ರಸನ್ನ ಹೋಟೆಲಿನಲ್ಲಿ ಉದ್ಯೋಗದಲ್ಲಿದ್ದು ಇತರ ಹಲವು ಹೋಟೆಲ್ಲುಗಳ ಲೆಕ್ಕಪತ್ರ ಬರೆಯುತ್ತಿದ್ದರಂತೆ. ಅಡಿಗರು ಅಪ್ಪಯ್ಯನಿಗೆ ಸಹಾಯ ಮಾಡುತ್ತಾ, ಲೆಕ್ಕಪತ್ರ ನಿರ್ವಹಣೆಯ ಕಲೆ ಕಲಿತು, ತಂದೆಯ ಕಾಲಾನಂತರ ಸುಮಾರು ೩೦ ಹೋಟೆಲ್ಲುಗಳ ಲೆಕ್ಕ ಬರೆದು ಕೈಯಲ್ಲಿಷ್ಟು ಹಣ ಓಡುವಂತಾದ ಮೇಲೂ ಶಿಕ್ಷಕವೃತ್ತಿಯನ್ನು ಹಂಬಲಿಸತೊಡಗಿದರಂತೆ. ಅಡಿಗರ ಜೀವನ ಚರಿತ್ರೆಯ ಈ ಭಾಗದಿಂದ ನಾವು ಕಲಿಯಬಹುದಾದ ಮಹತ್ವದ ಪಾಠಗಳೆಂದರೆ (೧) ಒಂದು ವೃತ್ತಿಗಿಳಿದಮೇಲೆ ಅದಕ್ಕೆ ಸಂಬಂಧಿಸಿದ ಎಂತಹ ಪುಟ್ಟ ಕೆಲಸವನ್ನಾದರೂ ಮಾಡಲು ಹಿಂಜರಿಯಬಾರದು (೨) ಯಾವ ಸಂದರ್ಭದಲ್ಲಿಯೂ ಬದುಕಿನ ಗುರಿಯನ್ನು ಮರೆಯಬಾರದು (೩) ಹರೆಯದಲ್ಲಿ ಸಿಕ್ಕಿದ ಎಲ್ಲಾ ಅವಕಾಶಗಳನ್ನು, ವಿರಾಮದ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. (೪) ಕನ್ನಡದ ಕೆಲಸಕ್ಕಿಷ್ಟು ಸಮಯ ಮೀಸಲಿಡಬೇಕು. 

ಸೂರಿಮಾಣಿ ಮೊದಲೇ ಹೇಳಿದಂತೆ, ಅಡಿಗರ ಹೋಟೆಲ್ ಜೀವನ ಕಥನ. ಇಲ್ಲಿರುವುದು ಅಡಿಗರ ಆತ್ಮಕಥನ ಮಾತ್ರವಲ್ಲ, ಆ ಕಾಲದ ಹೋಟೆಲ್ ಕಾರ್ಮಿಕರ ಕಥೆ ವ್ಯಥೆ- ನೋವು ನಲಿವು, ಹೋಟೆಲ್ ಯಜಮಾನರ ಹೃದಯವಂತಿಕೆ, ಅಡಿಗರು ತಮ್ಮ ತಂದೆಯಿಂದ ಮತ್ತು ಇತರ ಯಜಮಾನರಿಂದ ಕಲಿತ ಸನ್ನಡತೆ, ಪರ್ಯಾಯ ಉದ್ದಿಮೆಗಿಳಿದು ಉದ್ಧಾರವಾದ ಕಾರ್ಮಿಕರು, ಕಷ್ಟಪಟ್ಟು ಜೀವನ ಸಾಗಿಸಿ ಕಲ್ಲರಳಿ ಹೂವಾದವರು, ಊರಿಗೆ ಬೆಳಕಾದವರು, ಮುಂದಿನ ಪೀಳಿಗೆಗ್ ಅನುಕರಣೀಯರಾದವರು - ಎಲ್ಲರ ಕಥೆಯೂ ಆಗಿರುತ್ತದೆ.

ಸೂರಿಮಾಣಿಯ ಇನ್ನೊಂದು ಮಹತ್ವದ ಅಧ್ಯಾಯ ಅಡಿಗರ ಸಾಹಿತ್ಯ ಮತ್ತು ಸಂಘಟನೆಯ ಆಸಕ್ತಿಗೆ ಹೋಟೆಲ್ ಕೆಲಸದ ನಡುವೆಯೂ ಅವಕಾಶ ಸಿಗುವುದು. ಹೋಟೆಲ್ ಕೆಲಸ ಮಾಡುತ್ತಾ ಅವರು ಬೆಳಸಿಕೊಂಡ ಆಸಕ್ತಿ, ಅವರು ಅಣ್ಣಂದಿರ ಪ್ರೋತ್ಸಾಹದಿಂದ ಹೋಟೆಲ್ಲಿನಲ್ಲಿ ಏರ್ಪಡಿಸುತ್ತಿದ್ದ ನೂರಾರು ಕಾರ್ಯಕ್ರಮಗಳು ಅವರ ಮುಂದಿನ ದಿನಗಳ ಬೆಳವಣಿಗೆಗೆ ಭದ್ರ ತಳಹದಿ ಹಾಕಿಕೊಟ್ಟವು.

ಗೋಪಾಲಕೃಷ್ಣ ಅಡಿಗರ ವರ್ಧಮಾನ ಕವಿತೆಯ ಕೊನೆಯಲ್ಲಿ ಹನುಮದ್ವಿಕಾಸಕ್ಕೆ ಎಲ್ಲೆ ಇಲ್ಲ  ಎಂಬ ರೂಪಕವೊಂದು ಬರುತ್ತದೆ. ಹನುಮಂತ ಲಂಕೆಗೆ ಜಿಗಿವ ಮೊದಲು ಆಕಾಶದೆತ್ತರಕ್ಕೆ ಬೆಳೆದುನಿಲ್ಲುವ ಪುರಾಣಪ್ರತಿಮೆ ಒಂದೆಡೆಯಾದರೆ ಇನ್ನೊಂದೆಡೆ ಡಾರ್ವಿನ್ನನ ವಿಕಾಸವಾದಕ್ಕೂ ಈ ರೂಪಕ ಸಲ್ಲುತ್ತದೆ. ೧೯೭೮ನೆಯ ಇಸವಿ ಎಪ್ರಿಲ್ ೨೨ನೆಯ ತಾರೀಕು ಹೋಟೆಲ್ ಮಾಣಿಯಾಗಿ ಬದುಕಿನ ನೊಗಕ್ಕೆ ಹೆಗಲು ಕೊಟ್ಟ ಅಡಿಗರು ಯಶಸ್ವಿ ಅಧ್ಯಾಪಕರಾಗಿ, ಶಿಕ್ಷಣ ತಜ್ಞರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತಿಯಾಗಿ ಏರಿದ ಎತ್ತರ ಇದೆಯಲ್ಲ, ಅದು ಹನುಮದ್ವಿಕಾಸ. ಎಲ್ಲಕ್ಕಿಂತ ಹೆಚ್ಚಾಗಿ ಕಸಾಪ ಜಿಲ್ಲಾ ಧ್ಯಕ್ಷರಾಗಿ ಮೂರನೆಯ ಟರ್ಮ್. ಎಲ್ಲವೂ ಯೋಜನೆಯಂತೆ ನಡೆದರೆ ೧೦೦ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಡುವ ಏಕೈಕ ಜಿಲ್ಲಾಧ್ಯಕ್ಷ. ಈ ಎರಡು ದಾಖಲೆಗಳನ್ನು ಮಾತ್ರ ಯಾರೂ ಮುರಿಯುವಂತಿಲ್ಲ. ಹನುಮದ್ವಿಕಾಸಕ್ಕೆ ಎಲ್ಲೆ ಇಲ್ಲ ಎಂದರೆ ಇದು.

*** (ಇವತ್ತು ಕೋಟದಲ್ಲಿ ಸನ್ಮಾನಗೊಳ್ಳುತ್ತಿರುವ ಅಡಿಗರಿಗೆ ಶುಭ ಹಾರೈಕೆಗಳೊಂದಿಗೆ) ೧೧.೦೪.೨೦೨೪